Body Shaming; ಸುಮ್ಮನಿರುವುದು ಹೇಗೆ? : ನೊಂದ ನೋವ ನೋಯದವರೆತ್ತ ಬಲ್ಲರು…

‘ತಮಿಳುನಾಡಿನ ಹೊಳೆಯುವ ಕಪ್ಪು ಮೈಬಣ್ಣದ ದೃಢಕಾಯದ ಮಹಿಳೆಯ ದಿಟ್ಟತನ, ಛಾತಿ, ತೇಜಸ್ಸುಒಂದು ಕಡೆಯಾದರೆ ಕಾಶ್ಮೀರದ ಕೆನೆಬಣ್ಣದ ಹೆಣ್ಣುಮಕ್ಕಳ ಬಗೆಯೇ ಬೇರೆ. ಹೊಳೆಯುವ ಆರೋಗ್ಯವಂತ ಮೈಬಣ್ಣವಿರುವ ಕೇರಳದ ಪುರುಷನ ಮೈಕಟ್ಟು, ರೂಪ ಒಂದೆಡೆಯಿದ್ದರೆ ಒರಿಸ್ಸಾದ ಗುಡ್ಡಗಾಡುಗಳಲ್ಲಿ ಬದುಕುವ ಶ್ರಮಜೀವಿ ಪುರುಷನ ದೃಢತೆ, ಸಹಿಷ್ಣುತೆಯ ಬಗೆಯೇ ಬೇರೆ. ಒಂದೇ ಪ್ರದೇಶ, ಸಮುದಾಯಗಳಲ್ಲೂ ಭಿನ್ನ ಆಕಾರಗಳ, ಮೈಬಣ್ಣಗಳ ಜನರಿದ್ದಾರೆ. ಇವರೆಲ್ಲರಿಂದ ನಮ್ಮ ದೇಶ ಕೂಡಿದೆ. ಇವೆಲ್ಲವನ್ನೂ ಮರೆಮಾಚಿ ಒಂದೇ ಬಣ್ಣ, ಒಂದೇ ಬಗೆಯ ಆಕಾರ ಶ್ರೇಷ್ಠ ಎಂಬ ಭ್ರಮೆ ನಮ್ಮಲ್ಲಿ ಬೇರೂರಿರುವುದಾದರೂ ಹೇಗೆ?‘ ಭಾರತೀದೇವಿ ಪಿ.

Body Shaming; ಸುಮ್ಮನಿರುವುದು ಹೇಗೆ? : ನೊಂದ ನೋವ ನೋಯದವರೆತ್ತ ಬಲ್ಲರು...
ಡಾ. ಭಾರತಿದೇವಿ ಪಿ.
Follow us
ಶ್ರೀದೇವಿ ಕಳಸದ
|

Updated on:Apr 06, 2021 | 1:43 PM

ಜನಪ್ರತಿನಿಧಿಗಳೇ, ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಅವಕಾಶವಿರಬೇಕು, ಗೌರವ ಸಲ್ಲಬೇಕು. ಇವ್ಯಾವುವೂ ಲೇವಡಿಯ ವಸ್ತುವಾಗಬಾರದು ಎಂಬುದನ್ನು ಅರಿಯುವ ನಿಟ್ಟಿನಲ್ಲಿ ನಾವು ಸಾಗಬೇಕಾದ ದಾರಿ ಬಹಳ ದೂರವಿದೆ ಎನ್ನುತ್ತಿದ್ದಾರೆ ಉಪನ್ಯಾಸಕಿ, ಲೇಖಕಿ ಡಾ.ಭಾರತೀದೇವಿ ಪಿ.

‘ಈ ಆನೆಮರಿಗೆ ಒಂದು ಕುರ್ಚಿ ಸಾಕಾಗಲ್ಲ’ ಶಿಕ್ಷಕರ ತರಬೇತಿಗೆ ಬಂದ ಸಹಪಾಠಿಯೊಬ್ಬಳನ್ನು ಆಕೆಯ ಸ್ನೇಹಿತ ಛೇಡಿಸುತ್ತಿದ್ದ. ಪದವಿ ತರಗತಿಗಳಲ್ಲಿ ಬಳುಕುವ ಬಳ್ಳಿಯಾಗಿದ್ದ ಆಕೆ, ನಂತರದಲ್ಲಿ ನಿರಂತರ ಹಾರ್ಮೋನ್‍ ಚಿಕಿತ್ಸೆ, ಎರಡುಗರ್ಭಧಾರಣೆ, ಸಿಸೇರಿಯನ್ ಶಸ್ತ್ರಚಿಕಿತ್ಸೆ, ಸಂತಾನ ನಿಯಂತ್ರಣ ಎಲ್ಲವಕ್ಕೂ ಒಳಗಾಗಿ ಸ್ಥೂಲದೇಹಿಯಾಗಿಬಿಟ್ಟಿದ್ದಳು. ಆಕೆಯ ಸ್ಥಿತಿಯನ್ನು ಅರಿಯುವ ಮನಸ್ಸುಇಬ್ಬರು ಮಕ್ಕಳ ತಂದೆಯಾದ ಅವನಿಗೆ ಇರಲಿಲ್ಲ. ಎಲ್ಲರೂ ಇದೊಂದು ದೊಡ್ಡ ಜೋಕ್‍ ಎಂಬಂತೆ ನಗುವಾಗ ಆಕೆಯೂ ವಿಷಾದದ ನಗೆಯೊಂದಿಗೆ ಸೇರಿಕೊಳ್ಳುತ್ತಿದ್ದಳು.

ಅದೊಂದು ದಿನ ಅರಳುಕಂಗಳ ಮೂಲಕ ಬದುಕನ್ನು ಸ್ವಾಗತಿಸಬೇಕಾಗಿದ್ದ ಪುಟ್ಟ ಹುಡುಗನೊಬ್ಬ ತನ್ನ ಬದುಕನ್ನೇ ಕೊನೆಗಾಣಿಸಿಕೊಂಡ. ಅಷ್ಟು ಸಣ್ಣ ವಯಸ್ಸಿನಲ್ಲಿ ಅವನಿಗೆ ಬದುಕೇ ಭಾರವೆನ್ನಿಸುವಂತೆ ಮಾಡಿದ ಸಂಗತಿಯಾದರೂ ಏನು? ತನ್ನ ಜಾತಿ, ಹುಟ್ಟಿದ ಪರಿಸರದೊಂದಿಗೆ ಮೈಬಣ್ಣವೂ ಸೇರಿ ಅವನು ಕೀಳರಿಮೆಯಲ್ಲಿ ಬೇಯುತ್ತಿದ್ದ. ಸಹಪಾಠಿಗಳು ನಿರಂತರ ಕರಿಯ ಕರಿಯ ಎಂದು ಛೇಡಿಸುತ್ತಾ ಆಟಕ್ಕಾಗಲೀ, ಇನ್ನಿತರ ಚಟುವಟಿಕೆಗಳಲ್ಲಾಗಲೀ ಜೊತೆಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಇಂತಹುದೇ ಒಂದು ಸಂದರ್ಭದಲ್ಲಿ ತೀವ್ರ ನೊಂದ ಆತ ನೇಣಿಗೆ ಶರಣಾಗಿ ಸುತ್ತಲಿನವರನ್ನೆಲ್ಲ ಗಾಢ ಪಾಪಪ್ರಜ್ಞೆಯಲ್ಲಿ ತೊಳಲಾಡುವಂತೆ ಮಾಡಿ ಹೋಗಿಬಿಟ್ಟ.

ನಾಡಿನ ಹಿರಿಯರೊಬ್ಬರು ಇಂದಿನ ನಮ್ಮ ಶೈಕ್ಷಣಿಕ ಸಂಸ್ಥೆಗಳು ಹೊಸದನ್ನೇನೂ ಸೃಷ್ಟಿಸುತ್ತಿಲ್ಲ ಎಂದು ಬರೆಯುವ ಭರದಲ್ಲಿ ‘ವಿಶ್ವವಿದ್ಯಾಲಯಗಳಿಗೆ ಮೆನೋಪಾಸ್‍ ಆಗಿದೆ’ ಎಂದು ಬರೆದುಬಿಟ್ಟಿದ್ದರು. ಮೆನೋಪಾಸ್‍ ಎನ್ನುವುದು ಸೃಷ್ಟಿಶೀಲತೆಯ ಅಂತ್ಯ ಎನ್ನುವ ಧೋರಣೆ ಮಹಿಳೆಯರನ್ನು ಗರ್ಭಕೋಶದ ಆಚೆಗೆ ನೋಡಲು ಸಾಧ್ಯವೇ ಆಗದ ಮನಸ್ಥಿತಿಯನ್ನು ಸೂಚಿಸುತ್ತದೆ. ಮೆನೋಪಾಸ್‍ ಆದ ಮಹಿಳೆಯ ಅಸ್ತಿತ್ವವೇ ಬರಡಾದುದು ಎಂಬ ಮನೋಭಾವ ಇದು. ಹಾಗೆಯೇ ಹೆಣ್ಣುಮಕ್ಕಳಿಗೆ ವಯಸ್ಸಾಗುತ್ತಲೇ ‘ಆಂಟಿ’ ಎಂದು ಕರೆಯುವ ಬಗೆಗೆ ಸಂಬಂಧಿಸಿ ‘ಆಂಟಿಫೈಯಿಂಗ್’ ಎಂಬ ಪದವೇ ಬಂದುಬಿಟ್ಟಿದೆ. ಸ್ಥೂಲಕಾಯದ, ಚೆಲುವು ಮಾಸಿರುವ, ಯೌವನಕುಂದುತ್ತಿರುವ ಮಹಿಳೆ ಎಂಬ ಬಗೆಯಲ್ಲಿಇದು ಲೇವಡಿಯ ಪದವಾಗಿ ಬಳಕೆಯಾಗುತ್ತಿದೆ. ಈ ಬಗೆಯ ಹಲವು ಗ್ರಹೀತಗಳು ನಮ್ಮ ಭಾಷೆಯೊಳಗೆ ಸಹಜವೆಂಬಂತೆ ಸೇರಿಕೊಂಡು, ನಾವು ಅದರ ಬಗ್ಗೆ ಯಾವುದೇ ಪರಿವೆಯೂ ಇರದಂತೆ ಬಳಸುತ್ತಲೇ ಇದ್ದೇವೆ.

ಮೇಲೆ ಹೇಳಿದಂತಹ ಇನ್ನೂ ಹತ್ತು ಹಲವು ಘಟನೆಗಳಿಗೆ ನಾವು ದಿನನಿತ್ಯ ಸಾಕ್ಷಿಯಾಗುತ್ತಲೇ ಇದ್ದೇವೆ ಮತ್ತು ಅವುಗಳಿಗೆ ಸಣ್ಣ ಪ್ರತಿರೋಧವನ್ನೂ ತೋರದೇ ಸಹಜವೆಂಬಂತೆ ನಿರ್ಲಜ್ಜ ನಗು ನಗುತ್ತಾ ಅವುಗಳಿಗೆ ಒಪ್ಪಿಗೆಯನ್ನು ಸೂಚಿಸುತ್ತಲೇ ಬರುತ್ತಿದ್ದೇವೆ. ಆದರೆ ಈ ಬಗೆಯ ಧೋರಣೆಗಳಿಂದ ಎಷ್ಟೊಂದು ಜನರ ಬದುಕು ನಲುಗುವಂತಾಗಿದೆ ಎಂಬುದನ್ನು ಕಂಡಾಗ ಎದೆ ನಡುಗುತ್ತದೆ. ಕನ್ನಡದ ಜನಪ್ರಿಯ ಚಲನಚಿತ್ರ ‘ರಾಮ ಶಾಮ ಭಾಮ’ದಲ್ಲಿ ಒಂದು ದೃಶ್ಯ  ಬರುತ್ತದೆ. ಅದರಲ್ಲಿ ದಂತವೈದ್ಯನಾಗಿದ್ದ ಪತಿ ಬಳುಕುವ ಬಳ್ಳಿಯಂತಿರುವ ಆಧುನಿಕಳಾದ (ಸೋ ಕಾಲ್ಡ್) ಹುಡುಗಿಯೊಬ್ಬಳ ಸಹವಾಸ ಮಾಡುತ್ತಾನೆ. ಅವನ ಪತ್ನಿ ಗೃಹವಾರ್ತೆ ನೋಡಿಕೊಳ್ಳುತ್ತಿರುವ ಸಾಂಪ್ರದಾಯಿಕವಾದ ಸಾದಾಸೀದಾ ಮಹಿಳೆ. ಪತಿಯ ಈ ನಡವಳಿಕೆಯಿಂದ ನೊಂದ ಹಾಗೂ ಕೀಳರಿಮೆಯಿಂದ ಬಳಲುವ ಆಕೆ ಒಂದು ದಿನ ಪತಿ ಮನೆಗೆ ಬರುವ ಸಮಯದಲ್ಲಿ ಆಧುನಿಕವಾದ ಉಡುಗೆತೊಟ್ಟು, ಮೇಕಪ್ ಮಾಡಿಕೊಂಡುಅವನನ್ನು ಬರಮಾಡಿಕೊಳ್ಳುತ್ತಾಳೆ. ಅವಳ ಈ ಪರಿ ಅವನಿಗೆ ವಿಚಿತ್ರ ಎನಿಸುತ್ತದೆ. ಈ ಸನ್ನಿವೇಶವನ್ನು ನಿರ್ದೇಶಕರು ಹಾಸ್ಯ ಸನ್ನಿವೇಶವೆಂಬಂತೆ ಚಿತ್ರಿಸಿದ್ದಾರೆ; ನೋಡುಗರೂ ಅದನ್ನು ನೋಡಿ ನಗುತ್ತಲೇ ಕಳೆದುಹೋಗುತ್ತಾರೆ. ಅವಳ ಈ ಯತ್ನವೂ ಗಂಡನಿಗೆ ಅವಳ ಬಗೆಗಿನ ತಿರಸ್ಕಾರವನ್ನು ಹೆಚ್ಚು ಮಾಡುತ್ತದೆ. ಒಂದಿಷ್ಟು ಸೂಕ್ಷ್ಮವಾಗಿ ಗಮನಿಸಿದರೆ ಇಡೀ ಸನ್ನಿವೇಶ ನಮ್ಮನ್ನು ವಿಚಿತ್ರ ಸಂಕಟಕ್ಕೆದೂಡುತ್ತದೆ. ನಿರಂತರ ತಿರಸ್ಕಾರಕ್ಕೆ ಒಳಗಾಗುತ್ತಿರುವ ಹೆಣ್ಣಿನ ಮನದ ಹತಾಶೆ ಎಂಥದ್ದು ಎಂಬುದನ್ನು ಕಂಡಾಗ ಹೆಣ್ಣಿನ ದೇಹ, ಅಸ್ತಿತ್ವದ ಬಗೆಗಿನ ಸಾಮಾಜಿಕ ನಿರೀಕ್ಷೆಗಳು ಅವಳ ಬದುಕನ್ನು ಹೇಗೆ ನಿಧಾನಕ್ಕೆ ಘಾಸಿಗೊಳಿಸುತ್ತಿವೆ ಎಂಬುದು ಅರ್ಥವಾಗುತ್ತಾ ಹೋಗುತ್ತದೆ.

body shaming

ಭಾರತೀದೇವಿ ಅವರ ಪುಸ್ತಕಗಳು

ಎಲ್ಲೆಡೆ ಕಾಣುತ್ತಿರುವ ಬ್ಯೂಟಿ ಪಾರ್ಲರ್​ಗಳು, ದೇಹಕ್ಕೆ ಸಂಬಂಧಿಸಿರುವ ತರಹೇವಾರಿ ಸೌಂದರ್ಯವರ್ಧಕ ಚಿಕಿತ್ಸೆಗಳು, ವಿಸ್ತರಿಸುತ್ತಿರುವ ಸೌಂದರ್ಯವರ್ಧಕಗಳು, ಬೆಳ್ಳಗೆ ತೆಳ್ಳಗಿನ ದೇಹವನ್ನು ಮಾದರಿ ಎಂಬಂತೆ ಬಿಂಬಿಸುತ್ತಿರುವ ಸಿನೆಮಾ, ಮಾಧ್ಯಮ, ಜಾಹೀರಾತುಗಳು ಇಂದು ನಮ್ಮನ್ನು ಆವರಿಸಿವೆ. 24ಗಂಟೆಯೂ ಇವುಗಳನ್ನೇ ತೋರಿಸುತ್ತಾ ನಮ್ಮ ಸುತ್ತ ಬೇರೆ ಬೇರೆ ಬಣ್ಣಗಳ, ಬೇರೆ ಬೇರೆ ಗಾತ್ರದ ಭಿನ್ನ ಶರೀರಗಳಿರುವುದು ಸಾಧ್ಯ ಮತ್ತು ಸಹಜ ಎಂಬ ಸತ್ಯವನ್ನು ಮರೆಮಾಚುತ್ತಿವೆ. ಜೊತೆಗೆ, ಎಲ್ಲರೂ ಇಂತಹುದೇ ಬಗೆಯ ಶರೀರವನ್ನು ಹೊಂದುವುದು ಗುರಿ ಎಂಬಂತೆ ಬಿಂಬಿಸಿ ಹಾಗಾಗುವಂತೆ ಒತ್ತಡ ಹೇರುತ್ತಿವೆ. ಸೌಂದರ್ಯವರ್ಧಕ ಚಿಕಿತ್ಸೆಗಳಿಗೆ ಒಳಗಾಗಿ ಅದರಿಂದಾದ ತೊಂದರೆಗಳಿಂದ ಅನೇಕ ಮಾಡೆಲ್‍ಗಳು, ನಟನಟಿಯರು ಆರೋಗ್ಯ ಕಳೆದುಕೊಂಡಿದ್ದಾರೆ, ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ತಲೆಯೆತ್ತಿರುವ ಜಿಮ್‍ಗಳು ಇದಕ್ಕಾಗಿ ಬಗೆಬಗೆಯ ಪುಡಿ, ಆಹಾರಗಳನ್ನು ಪರಿಚಯಿಸುತ್ತಾ ಸಹಜತೆಯಿಂದ ದೂರ ಒಯ್ಯುತ್ತಿವೆ. ತೆಳ್ಳಗಾಗುವ ಬಯಕೆಯಿಂದ ಕಡಿಮೆ ಆಹಾರ ಸೇವಿಸುತ್ತಾ ಆರೋಗ್ಯದಿಂದ ನಳನಳಿಸಬೇಕಾದ ಜೀವಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಬೆಳ್ಳಗೆ ಕಾಣಬೇಕೆನ್ನುವ ಭ್ರಮೆಯಿಂದ ಹೊಳೆಯುವ ಆರೋಗ್ಯವಂತ ಚರ್ಮ ಬ್ಲೀಚ್‍ಗೆ ಒಳಗಾಗುತ್ತಾ ಸುಟ್ಟುಹೋಗಿದೆ.

ಬಹುಬಗೆಯ ಜನರು, ಜೀವನಶೈಲಿ ಇರುವುದರ ಜೊತೆಜೊತೆಗೇ ನಮ್ಮ ನಡುವೆ ಬಹುಬಗೆಯ ಶರೀರಗಳಿರುವುದು ಸಾಧ್ಯ. ತಮಿಳುನಾಡಿನ ಹೊಳೆಯುವ ಕಪ್ಪು ಮೈಬಣ್ಣದ ದೃಢಕಾಯದ ಮಹಿಳೆಯ ದಿಟ್ಟತನ, ಛಾತಿ, ತೇಜಸ್ಸುಒಂದು ಕಡೆಯಾದರೆ ಕಾಶ್ಮೀರದ ಕೆನೆಬಣ್ಣದ ಹೆಣ್ಣುಮಕ್ಕಳ ಬಗೆಯೇ ಬೇರೆ. ಹೊಳೆಯುವ ಆರೋಗ್ಯವಂತ ಮೈಬಣ್ಣವಿರುವ ಕೇರಳದ ಪುರುಷನ ಮೈಕಟ್ಟು, ರೂಪ ಒಂದೆಡೆಯಿದ್ದರೆ ಒರಿಸ್ಸಾದ ಗುಡ್ಡಗಾಡುಗಳಲ್ಲಿ ಬದುಕುವ ಶ್ರಮಜೀವಿ ಪುರುಷನ ದೃಢತೆ, ಸಹಿಷ್ಣುತೆಯ ಬಗೆಯೇ ಬೇರೆ. ಒಂದೇ ಪ್ರದೇಶ, ಸಮುದಾಯಗಳಲ್ಲೂ ಭಿನ್ನ ಆಕಾರಗಳ, ಮೈಬಣ್ಣಗಳ ಜನರಿದ್ದಾರೆ. ಇವರೆಲ್ಲರಿಂದ ನಮ್ಮ ದೇಶ ಕೂಡಿದೆ. ಇವೆಲ್ಲವನ್ನೂ ಮರೆಮಾಚಿ ಒಂದೇ ಬಣ್ಣ, ಒಂದೇ ಬಗೆಯ ಆಕಾರ ಶ್ರೇಷ್ಠ ಎಂಬ ಭ್ರಮೆ ನಮ್ಮಲ್ಲಿ ಬೇರೂರಿರುವುದಾದರೂ ಹೇಗೆ?

ಭಾರತದ ಮಹತ್ವದ ಚಿಂತಕ ರಾಮಮನೋಹರ ಲೋಹಿಯಾ ಅವರು ತಮ್ಮ ‘ಸೌಂದರ್ಯ ಮತ್ತು ಮೈಬಣ್ಣ’ ಲೇಖನದಲ್ಲಿ ಈ ನಂಬಿಕೆಗೆ ಕಾರಣವಾದ ಸಂಗತಿಗಳನ್ನು ಶೋಧಿಸುತ್ತಾರೆ. ಕಪ್ಪು ಬಣ್ಣದವರಾಗಿದ್ದ, ದ್ರೌಪದಿ, ಕೃಷ್ಣ ಮುಂತಾದವರ ಉದಾಹರಣೆಗಳ ಮೂಲಕ ನಮ್ಮಲ್ಲಿ ಸೌಂದರ್ಯದ ಕಲ್ಪನೆಯೊಂದಿಗೆ ಬಣ್ಣ ಬೆಸೆದಿರಲಿಲ್ಲ ಎಂಬುದನ್ನು ಹೇಳುತ್ತಾರೆ. ಆದರೆ ಆರ್ಯರು ಹಾಗೂ ಬ್ರಿಟಿಷರು ನಮ್ಮನ್ನು ಬಹುಕಾಲ ಆಳಿದ ಕಾರಣದಿಂದ ಆಳುವವರ ನೆಲೆಯಿಂದ ಸೌಂದರ್ಯವನ್ನು ನೋಡುವ ಬಗೆ ಬೆಳೆಯಿತು. ಹೀಗಾಗಿ ಬಿಳಿಯೇ ಸೌಂದರ್ಯದ ಪ್ರತೀಕವಾಯಿತು. ಈಗ ಜಗತ್ತಿನಾದ್ಯಂತಇದೇ ಮನಸ್ಥಿತಿ ಆಕ್ರಮಿಸಿಕೊಂಡಿದೆ. ಇದರಿಂದಾಗಿ ಹಲವು ಕಂಪೆನಿಗಳು ಬಿಳಿಯಾಗುವ ಕ್ರೀಮುಗಳನ್ನು ವಿಕ್ರಯಿಸುತ್ತಾ ಕೋಟ್ಯಾಂತರ ರೂಪಾಯಿ ಲಾಭ ಗಳಿಸುತ್ತಿವೆ. ಸೌಂದರ್ಯ ಸ್ಪರ್ಧೆಗಳು ನಡೆಯುತ್ತಿವೆ. ಬಿಳಿ ಬಣ್ಣದ ಗಂಡುದೇಹವೇ ಮಾದರಿ ದೇಹ,ಇದಲ್ಲದ ದೇಹಗಳೆಲ್ಲ ಒಂದಲ್ಲಒಂದು ಬಗೆಯ ಕೀಳರಿಮೆಯಿಂದ ಬಳಲುತ್ತಾ ಅದರಿಂದ ಹೊರಬರುವ ದಾರಿಯಾಗಿ ಮಾರುಕಟ್ಟೆಯ ಗ್ರಾಹಕರಾಗುವಂತಾಗಿದೆ.

ದೇಹದ ಆಕಾರದ್ದೂಇದೇ ಕತೆ. ನಮ್ಮ ನಡುವಣ ಶಿಲ್ಪಗಳು, ಚಿತ್ರಗಳು ಹೆಣ್ಣುಗಂಡುಗಳ ದೇಹಗಳ ಮಾದರಿಯನ್ನು ಹೀಗೇ ಎಂಬಂತೆ ತೋರಿದರೆ ಪಾಶ್ವಾತ್ಯ ದೇಹಗಳ ಮಾದರಿಗಳು ನಮ್ಮ ಮುಂದಿನ ಆದರ್ಶಗಳಾಗಿವೆ. ಇವುಗಳ ಜೊತೆಗೆ ಸದಾ ಯುವಕರಾಗಿರಬೇಕೆಂಬ ಒಂದು ಹಂಬಲವನ್ನು ಇಂದಿನ ಮಾರುಕಟ್ಟೆ ಬಿತ್ತಿದೆ. ಅದಕ್ಕಾಗಿ ಹಲವು ಕ್ರೀಮ್‍ಗಳು, ಬಣ್ಣಗಳು, ಜಿಮ್‍ಗಳು ತಲೆಯೆತ್ತಿ, ವಯಸ್ಸಾಗುವ, ಮಾಗುವ ಪ್ರಕ್ರಿಯೆಯನ್ನು ಘನತೆಯಿಂದ ಒಪ್ಪಿಕೊಳ್ಳುವುದನ್ನು ಸಾಧ್ಯವಾಗಿಸುತ್ತಿಲ್ಲ. ಇದರ ಆಚೆಗಿರುವ ಹಲವರು ಇದರಿಂದ ಒಂದಲ್ಲ ಒಂದು ಬಗೆಯಲ್ಲಿ ಟೀಕೆಗಳಿಗೆ, ಲೇವಡಿಗೆ ತುತ್ತಾಗುತ್ತಿರುತ್ತಾರೆ. ಇದರಿಂದಾಗಿ ನಿರ್ದಿಷ್ಟ ಬಗೆಯಲ್ಲಿ ಇರುವುದೇ ಒಪ್ಪಿತ ಎಂಬ ಬಗೆಯಒತ್ತಡ ಸೃಷ್ಟಿಯಾಗಿ ಇದು ಹಲವರ ಬದುಕನ್ನು ಬಾಧಿಸುತ್ತಿದೆ.

body shaming

ಸೌಜನ್ಯ : ಅಂತರ್ಜಾಲ

ಇತ್ತೀಚೆಗಷ್ಟೆ ಪಾರಾಲಿಟಿಕ್‍ ಸ್ಟ್ರೋಕ್‍ ಆಗಿರುವುದರಿಂದ ಶಾಲೆಯಲ್ಲಿ ಲೇವಡಿ ಮಾಡುತ್ತಾರೆ ಎಂಬ ಕಾರಣಕ್ಕೆ ಹುಡುಗನೊಬ್ಬಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇದೆ. ಜಾತಿಕಾರಣಕ್ಕೆ ನಡೆಯುವ ದೌರ್ಜನ್ಯ, ಆತ್ಮಹತ್ಯೆಗಳು ದೇಹಗಳಾಗಿಯೂ ಒಂದು ಸಮುದಾಯವನ್ನು ಮಾನಸಿಕವಾಗಿ, ಭೌತಿಕವಾಗಿ ದೂರ ಇರಿಸುತ್ತಾ ಬಂದಿರುವುದನ್ನು ಎತ್ತಿ ತೋರಿಸುವಂಥವು. ಹೆಣ್ಣುಮಕ್ಕಳ ಮೇಲಣ ದೌರ್ಜನ್ಯಕ್ಕೆ ನೇರವಾಗಿ ದೇಹವೇ ಕಾರಣವಾಗಿರುತ್ತದೆ. ಇವುಗಳ ಜೊತೆಗೆ ಪ್ರತಿನಿತ್ಯ ತಮಾಶೆಯ ಹೆಸರಲ್ಲಿ ನಾವೆಲ್ಲ ತೊಡಗಿಕೊಳ್ಳುವ ಮಾತುಕತೆಗಳಲ್ಲಿ ಇವು ಸುಳಿದಾಡುತ್ತಲೇ ಇರುವುದನ್ನು ನಾವು ಗಮನಿಸಬಹುದು. ಸ್ಥೂಲ ದೇಹ, ರೋಗಗ್ರಸ್ತದೇಹ, ಕುಳ್ಳಗಿನ ದೇಹ, ಕಪ್ಪು ಬಣ್ಣದದೇಹ, ಯೌವನದಿಂದ ಕೂಡಿದ ದೇಹ, ವೃದ್ಧಾಪ್ಯಕ್ಕೆ ಒಳಗಾದ ದೇಹ, ಸಣಕಲುದೇಹ, ಎತ್ತರದದೇಹ, ಭಿನ್ನ ಬಣ್ಣಗಳ ಛಾಯೆಗಳುಳ್ಳ ದೇಹಗಳು ಎಲ್ಲವೂ ಸಹಜವೇ. ಜೊತೆಗೆ ಗಂಡು-ಹೆಣ್ಣು ಎಂಬ ಬೈನರಿಯಾಚೆಗೆ ಸಲಿಂಗಿ, ತೃತೀಯ ಲಿಂಗಿ, ಲಿಂಗಾಂತರಿ ಹೀಗೆ ಲೈಂಗಿಕವಾಗಿ ಭಿನ್ನವಾಗಿರುವ ಪ್ರತಿದೇಹವೂ ಒಪ್ಪಿತವೇ. ಪ್ರತಿಯೊಬ್ಬರಿಗೂ ವ್ಯಕ್ತಿಯಾಗಿರುವ ಕಾರಣಕ್ಕೆ ಘನತೆಯಿಂದ ಬದುಕುವ ಅವಕಾಶವಿರಬೇಕು, ಗೌರವ ಸಲ್ಲಬೇಕು. ಇವ್ಯಾವುವೂ ಲೇವಡಿಯ ವಸ್ತುವಾಗಬಾರದು ಎಂಬುದನ್ನು ಅರಿಯುವ ನಿಟ್ಟಿನಲ್ಲಿ ನಾವು ಸಾಗಬೇಕಾದ ದಾರಿ ಬಹಳ ದೂರವಿದೆ.

*

ಪರಿಚಯ : ಮೂಡುಬಿದರೆಯವರಾದ ಡಾ.ಪಿ. ಭಾರತೀದೇವಿ, ಪ್ರಸ್ತುತ ಹೊಳೆನರಸೀಪುರ ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ನಿಲ್ಲಿಸಬೇಡ ಕಾಯುವುದನ್ನು, ಪಿಯರ್ ಬೊರ್ದು ವಿಚಾರಗಳು, ಮಹಿಳೆ ಮತ್ತು ದೇಹರಾಜಕಾರಣ ಕೃತಿಗಳು ಪ್ರಕಟವಾಗಿವೆ.  “ಭಾಷೆ ಮತ್ತು ಸಂಸ್ಕೃತಿಯ ಅಂತಃಸಂಬಂಧಗಳು-ಕೋಟ ಉಪಭಾಷೆಯನ್ನು ಅನುಲಕ್ಷಿಸಿ” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದಿರುತ್ತಾರೆ. ಹಲವು ಲೇಖನಗಳು, ಅನುವಾದಿತ ಬರಹಗಳು ಪ್ರಕಟವಾಗಿವೆ.

ಇದನ್ನೂ ಓದಿ : Body Shaming; ಸುಮ್ಮನಿರುವುದು ಹೇಗೆ? : ಕಪ್ಪು ರೇಷಿಮೆ ಸೀರೆಯನ್ನೇ ಆರತಕ್ಷತೆಗೆ ಆಯ್ಕೆ ಮಾಡಿಕೊಂಡಿದ್ದೆ

Summaniruvudu Hege series on Body Shaming controversial statement by Dindigul Leoni and response from writer bharathidevi

Published On - 11:21 am, Tue, 6 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ