AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ ಎರಡೇ ಪಾತ್ರಗಳಿರುವ ಸಿನಿಮಾ ‘ಸಾರಂಗಿ’: ಏನು ಇದರ ವಿಶೇಷ?

ಜೆ. ಆಚಾರ್ ಅವರು ನಿರ್ದೇಶನ ಮಾಡಿರುವ ‘ಸಾರಂಗಿ’ ಕನ್ನಡ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಇರುವ ಎರಡು ಪಾತ್ರಗಳನ್ನು ಕಾರ್ತಿಕ್ ಚಂದರ್, ಶ್ವೇತಾ ಅರೆಹೊಳೆ ನಿಭಾಯಿಸಿದ್ದಾರೆ. ಕರ್ನಾಟಕಕ್ಕಿಂತಲೂ ಮೊದಲು ಅಮೆರಿಕದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇಲ್ಲಿದೆ ಇನ್ನಷ್ಟು ಮಾಹಿತಿ..

ಕೇವಲ ಎರಡೇ ಪಾತ್ರಗಳಿರುವ ಸಿನಿಮಾ ‘ಸಾರಂಗಿ’: ಏನು ಇದರ ವಿಶೇಷ?
Sarangi Movie Team
ಮದನ್​ ಕುಮಾರ್​
|

Updated on: Aug 11, 2025 | 10:48 PM

Share

ಡಿಫರೆಂಟ್ ಕಾನ್ಸೆಪ್ಟ್ ಇರುವ ಸಿನಿಮಾಗಳನ್ನು ಜನರು ಇಷ್ಟಪಡುತ್ತಾರೆ. ಹಾಗಾಗಿ ಹೊಸ ತಂಡಗಳು ಹೊಸ ಬಗೆಯ ಪ್ರಯತ್ನಗಳನ್ನು ಮಾಡುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ‘ಸಾರಂಗಿ’ ಸಿನಿಮಾ (Sarangi Movie) ಕೂಡ ಸೇರ್ಪಡೆ ಆಗುತ್ತಿದೆ. ಒಂದು ಸಿನಿಮಾದಲ್ಲಿ ಹತ್ತು ಹಲವು ಪಾತ್ರಗಳು ಇರುತ್ತವೆ. ಆದರೆ ಈ ವಿಚಾರದಲ್ಲಿ ‘ಸಾರಂಗಿ’ ಸಿನಿಮಾ ಸಂಪೂರ್ಣ ಭಿನ್ನವಾಗಿದೆ. ಈ ಚಿತ್ರದಲ್ಲಿ ಇರುವುದು ಕೇವಲ ಎರಡೇ ಪಾತ್ರಗಳು. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.

‘ಸಾರಂಗಿ’ ಸಿನಿಮಾದಲ್ಲಿ ಕಾರ್ತಿಕ್ ಚಂದರ್ ಮತ್ತು ಶ್ವೇತಾ ಅರೆಹೊಳೆ ಅವರು ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಾರ್ತಿಕ್ ಚಂದರ್ ಮಾತನಾಡಿದರು. ನಾಯಕನಾಗಿ ನಟಿಸುವುದರ ಜೊತೆಗೆ ಕಾರ್ಯಕಾರಿ ನಿರ್ಮಾಪಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ‘ದಿನ ಬೆಳಗ್ಗಾದರೆ ಮನುಷ್ಯ ಎಲ್ಲರ ಮುಂದೆ ಒಂದೊಂದು ರೀತಿಯ ಮುಖವಾಡ ಧರಿಸಿ ಜೀವನ ಮಾಡುತ್ತಾನೆ. ಆದರೆ ಒಂದು ಅನಿರೀಕ್ಷಿತ ಸನ್ನಿವೇಶ ಎದುರಾದಾಗ ನಾವು ನಮ್ಮ ಮೌಲ್ಯಗಳನ್ನು ಉಳಸಿಕೊಳ್ಳುತ್ತೇವ? ಅದರಿಂದ ಹೇಗೆ ಪಾರಾಗುತ್ತೇವೆ ಎಂಬುದೇ ಈ ಸಿನಿಮಾದ ಕಥಾಸಾರಾಂಶ’ ಎಂದು ಅವರು ಹೇಳಿದರು.

‘ನಾನು ಮೂಲತಃ ರಂಗಭೂಮಿ ಕಲಾವಿದ. ಅಮೆರಿಕದಲ್ಲಿ ಥಿಯೇಟರ್ ನಡೆಸುತ್ತಿದ್ದೆ. ಈಗ ಬೆಂಗಳೂರಿನಲ್ಲಿ ವಾಸವಿದ್ದೇನೆ. ಸಾರಂಗಿ ಅಂದರೆ ಒಂದು ಬೆಟ್ಟದ ಹೆಸರು. ಬೆಟ್ಟದ ಸುತ್ತ ಏನೆಲ್ಲ ನಡೆಯುತ್ತದೆ ಎಂಬುದನ್ನು ನಿರ್ದೇಶಕರು ಇದರಲ್ಲಿ ತೋರಿಸಿದ್ದಾರೆ’ ಎಂದು ಕಾರ್ತಿಕ್ ಚಂದರ್ ಹೇಳಿದ್ದಾರೆ. ಜೆ. ಆಚಾರ್ ಅವರು ‘ಸಾರಂಗಿ’ ಸಿನಿಮಾಗೆ ನಿರ್ದೇಶಕನ ಮಾಡಿದ್ದಾರೆ. ಅವರೇ ಕಥೆ ಕೂಡ ಬರೆದಿದ್ದಾರೆ.

ಸಾರಂಗಿ ಸಿನಿಮಾ ಟ್ರೇಲರ್:

ಈ ಸಿನಿಮಾದಲ್ಲಿ ಮಿಸ್ಟಿಕ್ ಥ್ರಿಲ್ಲರ್ ಕಥಾಹಂದರ ಇದೆ. ತೇಜೇಶ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾ ಈಗಾಗಲೇ ಬಿಡುಗಡೆಗೆ ಸಜ್ಜಾಗಿದೆ. ಮೊದಲು ಅಮೆರಿಕದಲ್ಲಿ ಬಿಡುಗಡೆ ಮಾಡಿ, ನಂತರ ಅಕ್ಟೋಬರ್ ವೇಳೆಗೆ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ನವಿ ನಂಜಪ್ಪ ಅವರು ಛಾಯಾಗ್ರಹಣ ಮಾಡಿದ್ದಾರೆ. ಸೌಂಡ್ ಡಿಸೈನರ್ ಆಗಿ ಸ್ಯಾಮ್ ಕಪ್ಪರ್ ಕೆಲಸ ಮಾಡಿದ್ದಾರೆ. ದುಶ್ಯಂತ್ ರೈ ಸಹ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ:

ನಟಿ ಶ್ವೇತಾ ಅರೆಹೊಳೆ ಅವರು ಮಾತನಾಡಿ, ‘ನಾನು ಮೂಲತಃ ಮಂಗಳೂರಿನವಳು. ರಂಗಭೂಮಿ ಕಲಾವಿದೆ‌‌. ಜೊತೆಗೆ ಭರತನಾಟ್ಯ ಕಲಾವಿದೆ ಕೂಡ ಹೌದು. ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರ ಎರಡು ಸಹ ಚೆನ್ನಾಗಿದೆ’ ಎಂದರು. ‘ನಾನು ಬೆಂಗಳೂರಿನ ಉದ್ಯಮಿ‌. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾದೆ’ ಎಂದಿದ್ದಾರೆ ನಿರ್ಮಾಪಕ ತೇಜೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.