‘ಸು ಫ್ರಮ್ ಸೋ’ಗೆ 3ನೇ ಸೋಮವಾರವೂ ತಗ್ಗದ ಕಲೆಕ್ಷನ್; 100 ಕೋಟಿ ಕ್ಲಬ್ ಸೇರೋದು ಪಕ್ಕಾ
Su From So Gross Collection: ‘ಸು ಫ್ರಮ್ ಸೋ’ ಚಿತ್ರವು ಅದ್ಭುತ ಯಶಸ್ಸನ್ನು ಕಂಡಿದೆ. ಕನ್ನಡದ ಜೊತೆಗೆ ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿಯೂ ಚಿತ್ರ ಉತ್ತಮ ಪ್ರದರ್ಶನ ನೀಡುತ್ತಿದೆ. 100 ಕೋಟಿ ಕ್ಲಬ್ ಸೇರಲು ಕೆಲವೇ ಕೋಟಿಗಳ ಅಂತರ ಉಳಿದಿದೆ. ಚಿತ್ರದಲ್ಲಿನ ಪ್ರತಿ ಪಾತ್ರವೂ ಪ್ರೇಕ್ಷಕರ ಮನಗೆದ್ದಿದೆ.

‘ಸು ಫ್ರಮ್ ಸೋ’ ಸಿನಿಮಾ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ರಾಜ್ ಬಿ. ಶೆಟ್ಟಿ (Raj B Shetty) ನಿರ್ಮಾಣದ, ಜೆಪಿ ತುಮಿನಾಡ್ ನಿರ್ದೇಶನದ ಈ ಸಿನಿಮಾ ಕನ್ನಡದ ಜನತೆಗೆ ಮಾತ್ರವಲ್ಲದೆ, ಪರಭಾಷೆಯವರಿಗೂ ಇಷ್ಟ ಆಗಿದೆ. ಈಗ ಸಿನಿಮಾ ಕಡೆಯಿಂದ ಹೊಸ ಅಪ್ಡೇಟ್ ಒಂದು ಬಂದಿದೆ. ಈ ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಲು ಬೇಕಿರೋದು ಇನ್ನು ಕೆಲವೇ ಕೋಟಿ ರೂಪಾಯಿಗಳು ಮಾತ್ರ. ಪರಭಾಷೆಯಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿರುವುದರಿಂದ ವಾರದ ದಿನವೂ ಕಲೆಕ್ಷನ್ ಹೆಚ್ಚುತ್ತಿದೆ.
‘ಸು ಫ್ರಮ್ ಸೋ’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅವರು ಗುರೂಜಿ ಪಾತ್ರ ಮಾಡಿದ್ದಾರೆ. ಈ ಪಾತ್ರವನ್ನು ಜನರು ಹೆಚ್ಚು ಇಷ್ಟಪಟ್ಟಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲಿ ಬರುವ ಬಾವ, ರವಿ ಅಣ್ಣ, ಅಶೋಕ, ಸತೀಶ ಹೀಗೆ ಪ್ರತಿ ಪಾತ್ರಗಳೂ ಜನರಿಗೆ ಇಷ್ಟ ಆಗಿವೆ. ಭಾವನೆಗಳ ಮಳೆ, ಹಾಸ್ಯದ ಹೊಳೆ ಚಿತ್ರದಲ್ಲಿ ಇದ್ದು, ಪ್ರೇಕ್ಷಕರನ್ನು ಸೆಳೆದುಕೊಂಡಿದೆ.
‘ಸು ಫ್ರಮ್ ಸೋ’ ಸಿನಿಮಾ ಆಗಸ್ಟ್ 11ರಂದು ಮೂರನೇ ಸೋಮವಾರಕ್ಕೆ ಕಾಲಿಟ್ಟಿದೆ. ಈ ದಿನ ಸುಮಾರು 1.70 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕನ್ನಡದಿಂದ ಒಂದೂವರೆ ಕೋಟಿ, ಮಲಯಾಳಂನಿಂದ 17 ಲಕ್ಷ ರೂಪಾಯಿ ಹಾಗೂ ತೆಲುಗಿನಿಂದ 7 ಲಕ್ಷ ರೂಪಾಯಿ ಹರಿದು ಬಂದಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ ವಿಶ್ವ ಮಟ್ಟದಲ್ಲಿ 86.4 ಕೋಟಿ ರೂಪಾಯಿ (ಗ್ರಾಸ್ ಕಲೆಕ್ಷನ್) ಆಗಿದೆ. ಇನ್ನು ಭಾರತದ ಗ್ರಾಸ್ ಕಲೆಕ್ಷನ್ 76.84 ಕೋಟಿ ರೂಪಾಯಿ ಇದ್ದು, ನೆಟ್ ಕಲೆಕ್ಷನ್ 65.94 ಕೋಟಿ ರೂಪಾಯಿ ಇದೆ. ವಿದೇಶದಿಂದ ಚಿತ್ರಕ್ಕೆ 9 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ.
ಇದನ್ನೂ ಓದಿ: ಜೆಪಿ ಬೇಕಿದ್ದರೆ ಸು ಫ್ರಮ್ ಸೋಗೆ ಸೀಕ್ವೆಲ್ ಮಾಡಲಿ, ನಾನು ಮಾಡಲ್ಲ; ರಾಜ್ ಬಿ. ಶೆಟ್ಟಿ ಗಟ್ಟಿ ನಿರ್ಧಾರ
ಆರಂಭದಲ್ಲಿ ಈ ಸಿನಿಮಾ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ದಿನ ಕಳೆದಂತೆ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರ ಹರಿದು ಬಂತು. ಈ ಕಾರಣದಿಂದ ಸಿನಿಮಾ ಜನರು ಮತ್ತೆ ಮತ್ತೆ ವೀಕ್ಷಿಸಿದರು. ಇದು ಸಿನಿಮಾದ ಗೆಲುವಿಗೆ ಕಾರಣ ಆಗಿದೆ. ಎಲ್ಲಾ ಭಾಷೆಯ ಜನರು ಚಿತ್ರವನ್ನು ಇಷ್ಟಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:26 am, Tue, 12 August 25








