AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನನ್ನು ವಜಾ ಮಾಡಿರುವುದರ ಹಿಂದೆ ಷಡ್ಯಂತ್ರ, ಪಿತೂರಿ ಇದೆ: ಕೆಎನ್​ ರಾಜಣ್ಣ

ಮಾಜಿ ಸಚಿವ ಕೆಎನ್​ ರಾಜಣ್ಣ ಅವರನ್ನು ಸಂಪುಟದದಿಂದ ವಜಾಗೊಳಿಸಲಾಗಿದೆ. ಈ ವಿಚಾರವಾಗಿ ಕೆಎನ್​ ರಾಜಣ್ಣ ಪ್ರತಿಕ್ರಿಯಿಸಿದ್ದು, ಸಂಪುಟದಿಂದ ವಜಾ ಮಾಡಿರುವ ಹಿಂದೆ ಷಡ್ಯಂತ್ರ ಇದೆ ಎಂದು ಆರೋಪಿಸಿದ್ದಾರೆ. ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಆಗಿರುವ ತಪ್ಪು ಗ್ರಹಿಕೆ ಸರಿಪಡಿಸುತ್ತೇನೆ ಎಂದರು.

ನನ್ನನ್ನು ವಜಾ ಮಾಡಿರುವುದರ ಹಿಂದೆ ಷಡ್ಯಂತ್ರ, ಪಿತೂರಿ ಇದೆ: ಕೆಎನ್​ ರಾಜಣ್ಣ
ಕೆಎನ್​ ರಾಜಣ್ಣ
ವಿವೇಕ ಬಿರಾದಾರ
|

Updated on:Aug 11, 2025 | 10:36 PM

Share

ಬೆಂಗಳೂರು, ಆಗಸ್ಟ್​ 11: ನನ್ನನ್ನು ವಜಾ ಮಾಡಿರುವುದರ ಹಿಂದೆ ಷಡ್ಯಂತ್ರ ಇದೆ. ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರ, ಪಿತೂರಿ ಇದೆ. ಯಾರ‍್ಯಾರು ಏನೇನು ಮಾಡಿದ್ದಾರೆ ಎಂದು ಕಾಲ ಬಂದಾಗ ನಾನು ಎಲ್ಲವನ್ನೂ ಹೇಳುತ್ತೇನೆ ಎಂದು ಮಾಜಿ ಸಚಿವ ಕೆಎನ್​ ರಾಜಣ್ಣ (KN Rajanna) ಹೇಳಿದರು. ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನ ಭೇಟಿ ಮಾಡುತ್ತೇನೆ. ಇದು ಪಕ್ಷದ ತೀರ್ಮಾನ ಆಗಿದ್ದರಿಂದ ಪ್ರಶ್ನಿಸುವಂತಿಲ್ಲ. ಪಕ್ಷದ ವರಿಷ್ಠರಿಗೆ ತಪ್ಪು ಗ್ರಹಿಕೆ ಆಗಿದೆ ಎಂಬ ಮಾಹಿತಿ ಇದೆ. ಹಿರಿಯ ಸಚಿವರು, ಶಾಸಕರ ಜೊತೆ ದೆಹಲಿಗೆ ಹೋಗುತ್ತೇನೆ. ಪಕ್ಷದ ವರಿಷ್ಠರಿಗೆ ಆಗಿರುವ ತಪ್ಪು ಗ್ರಹಿಕೆ ಸರಿಪಡಿಸುತ್ತೇನೆ. ವರಿಷ್ಠರ ಮಾರ್ಗದರ್ಶನದಂತೆ ಮುಂದುವರಿಯುತ್ತೇನೆ ಎಂದರು.

ಮಾಜಿ ಸಚಿವ ಎಂದು ಕರೆಸಿಕೊಳ್ಳಲು ಸಂತಸವಾಗುತ್ತಿದೆ. ಅವಕಾಶ ನೀಡಿದ ಮುಖ್ಯಮಂತ್ರಿಗಳಿಗೆ ಎಲ್ಲ ಸಚಿವರ ಜೊತೆ ಸೇರಿ ಧನ್ಯವಾದ ಹೇಳಿ ಬಂದಿದ್ದೇನೆ. ಎಲ್ಲ ಸಚಿವರು, ಶಾಸಕರು ನನಗೆ ಸಹಾಯ ಮಾಡಿದ್ದಾರೆ. ಇಂದು ಮುಖ್ಯಮಂತ್ರಿಗಳು ಯಾವುದೇ ಹೇಳಿಕೆ ಕೊಟ್ಟಿಲ್ಲ. ಹಾಗಂತ ನಾನು ಏನನ್ನೂ ಹೇಳದೆ ಇರಲ್ಲ. ರಾಜ್ಯಪಾಲರ ಕಚೇರಿಯಿಂದ ಬಂದಿರುವ ಪತ್ರದ ಬಗ್ಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಸಂಪುಟದಿಂದ ಕೈಬಿಡುವುದು ಹೈಕಮಾಂಡ್ ನಿರ್ಧಾರವಾಗಿದೆ. ಪಕ್ಷದ ತೀರ್ಮಾನವಾಗಿರುವುದರಿಂದ ನಾನು ಪ್ರಶ್ನೆ ಮಾಡಲ್ಲ. ರಾಹುಲ್ ಗಾಂಧಿ, ವೇಣುಗೋಪಾಲ್​ಗೆ ತಪ್ಪು ಗ್ರಹಿಕೆಯಾಗಿದೆ. ಆ ತಪ್ಪು ಗ್ರಹಿಕೆಯನ್ನು ನಿವಾರಿಸುವ ಪ್ರಯತ್ನ ಮಾಡುತ್ತೇವೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಮ್ಮ ನಾಯಕರು. ನಾವು ಎಲ್ಲಿ ಏನೇ ಮಾತನಾಡಿದರೂ ಪಕ್ಷಕ್ಕೆ ನಿಷ್ಠರಾಗಿರುತ್ತೇವೆ ಎಂದರು.

ಕೆಎನ್​ ರಾಜಣ್ಣ ಹೇಳಿಕೆ

ರಾಜೀನಾಮೆ ನೀಡಿದ ರಾಜಣ್ಣ

ಹೈಕಮಾಂಡ್​ ಸೂಚನೆ ನೀಡಿದ ಬೆನ್ನಲ್ಲೇ ಶಾಸಕ ಕೆಎನ್​ ರಾಜಣ್ಣ ಅವರು ಸೋಮವಾರ (ಆ.11) ಮಧ್ಯಾಹ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೆ.ಎನ್.ರಾಜಣ್ಣ ನೀಡಿದ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಗೀಕರಿಸಿ, ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್​ ಅವರಿಗೆ ಕಳುಹಿಸಿದರು. ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್​ ಅವರು ಕೆಎನ್​ ರಾಜಣ್ಣ ರಾಜೀನಾಮೆಯನ್ನು ಅಂಗೀಕರಿಸಿದರು.

ಇದನ್ನೂ ಓದಿ: ಕೆಎನ್​ ರಾಜಣ್ಣ ರಾಜೀನಾಮೆ ನೀಡಿದ್ದಲ್ಲ ಸಂಪುಟದಿಂದ ತೆಗೆದಿದ್ದು!

ರಾಜಣ್ಣ ನೀಡಿದ್ದ ಪಕ್ಷ ವಿರೋಧಿ ಹೇಳಿಕೆ

ಲೋಕಸಭಾ ಚುನಾವಣೆಯಲ್ಲಿ ಸಮಯದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಕಳ್ಳತನವಾಗಿದೆ ಎಂದು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಆರೋಪಿಸಿದ್ದರು. ಆದರೆ, “ವೋಟರ್​ ಲಿಸ್ಟ್​ನ್ನು ನಮ್ಮದೇ ಸರ್ಕಾರ ಇರುವಾಗ ಮಾಡಿರುವುದು. ಆಗ ಕಣ್ಮುಚ್ಚಿ ಕುಳಿತಿದ್ದು ಈಗ ಹೇಳಿದರೆ ಏನು ಪ್ರಯೋಜನ” ಎಂದು ಸಚಿವ ಕೆ.ಎನ್ ರಾಜಣ್ಣ ಹೇಳುವ ಮೂಲಕ ತಮ್ಮದೇ ಪಕ್ಷದ ನಾಯಕರು ಮುಜುಗರಕ್ಕೀಡಾಗುವಂತೆ ಮಾಡಿದ್ದರು.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:44 pm, Mon, 11 August 25