ಸಚಿವ ರಾಜಣ್ಣ ರಾಜೀನಾಮೆ ರಹಸ್ಯ; ದಿಢೀರ್ ನಿರ್ಧಾರದ ಹಿಂದಿನ ಕೈವಾಡ ಯಾರದ್ದು?
ಕರ್ನಾಟಕದ ಸಹಕಾರ ಸಚಿವ ಕೆ.ಎನ್ ರಾಜಣ್ಣ ಇಂದು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರಿಗೂ ಅಚ್ಚರಿ ತಂದಿದೆ. ರಾಜಣ್ಣ ಅವರ ದಿಢೀರ್ ರಾಜೀನಾಮೆಗೆ ಕಾರಣವೇನು? ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ ಸಿಎಂ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೇಕೆ? ರಾಜಣ್ಣನವರ ರಾಜೀನಾಮೆಯ ಹಿಂದಿರುವ ಕೈವಾಡ ಯಾರದ್ದು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 11: ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna Resign) ಇಂದು ಇದ್ದಕ್ಕಿದ್ದಂತೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯದ ಜನರಿಗೆ ಶಾಕ್ ನೀಡಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅದನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ರಾಜ್ಯಪಾಲರು ಕೂಡ ಕೆ.ಎನ್ ರಾಜಣ್ಣ ಅವರ ಹೆಸರನ್ನು ತಕ್ಷಣದಿಂದಲೇ ಸಂಪುಟದಿಂದ ತೆಗೆದುಹಾಕುವಂತೆ ಆದೇಶಿಸಿದ್ದಾರೆ. ಹಾಗಾದರೆ, ದಿಢೀರನೆ ಇಷ್ಟೆಲ್ಲ ಬೆಳವಣಿಗೆಗಳು ನಡೆಯಲು ಕಾರಣವೇನು? ಕೆಎನ್ ರಾಜಣ್ಣ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದರೇ? ಅಥವಾ ಯಾರದ್ದಾದರೂ ಒತ್ತಡಕ್ಕೆ ಕಟ್ಟುಬಿದ್ದು ಅವರು ಈ ನಿರ್ಧಾರ ತೆಗೆದುಕೊಂಡರೇ? ಎಂಬ ಕುತೂಹಲಗಳಿಗೆ ಉತ್ತರ ಇಲ್ಲಿದೆ.
ಇಂದು ವಿಧಾನಸಭಾ ಕಲಾಪ ಸಲಹಾ ಸಮಿತಿ ಸಭೆ ನಡೆಯುತ್ತಿದ್ದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಕಾರ್ಯದರ್ಶಿಗೆ ಕೆಎನ್ ರಾಜಣ್ಣ ರಾಜೀನಾಮೆ ಪತ್ರ ನೀಡಿ ವಿಧಾನಸೌಧದಿಂದ ಹೊರಟಿದ್ದಾರೆ. ಬಳಿಕ ಸಿಎಂ ಆ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದರು. ಹೀಗೆ ದಿಢೀರೆಂದು ಸಚಿವ ಸ್ಥಾನಕ್ಕೆ ಕೆ.ಎನ್.ರಾಜಣ್ಣ ರಾಜೀನಾಮೆ ಹಿಂದೆ ಕಾಂಗ್ರೆಸ್ ಹೈಕಮಾಂಡ್ನ ನಿರ್ಧಾರವಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜಣ್ಣ ಅವರ ರಾಜೀನಾಮೆ ಪಡೆಯುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಸೂಚನೆ ನೀಡಿತ್ತು. ಇಂದು ಸಂಜೆ 6 ಗಂಟೆಯೊಳಗೆ ರಾಜೀನಾಮೆ ಪಡೆಯುವಂತೆ ಸೂಚನೆ ನೀಡಲಾಗಿತ್ತು. ಇಂದುವೇಳೆ ಅವರು ರಾಜೀನಾಮೆ ನೀಡದಿದ್ದರೆ ರಾಜಣ್ಣ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು.
ಇದನ್ನೂ ಓದಿ: KN Rajanna Resigns: ಸಚಿವ ಸ್ಥಾನಕ್ಕೆ ಕೆಎನ್ ರಾಜಣ್ಣ ರಾಜೀನಾಮೆ
ಇಂದು ಸಂಜೆ 6ರೊಳಗೆ ರಾಜೀನಾಮೆ ನೀಡದಿದ್ದರೆ ಕೆ.ಎನ್.ರಾಜಣ್ಣ ಅವರನ್ನು ಉಚ್ಚಾಟನೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿತ್ತು. ಹೀಗಾಗಿ, ತಕ್ಷಣ ರಾಜಣ್ಣ ಅವರ ಜೊತೆ ಮಾತುಕತೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಉಚ್ಛಾಟನೆಯಿಂದ ಪಾರಾಗಲು ರಾಜೀನಾಮೆ ಸಲ್ಲಿಸುವಂತೆ ಸಲಹೆ ನೀಡಿದ್ದರು. ಹೀಗಾಗಿ, ರಾಜಣ್ಣ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಕೆ.ಎನ್.ರಾಜಣ್ಣ ಅವರಿಂದ ರಾಜೀನಾಮೆ ಪಡೆದು ರಾಜ್ಯಪಾಲರಿಗೆ ಕಳುಹಿಸಿ, ರಾಜಭವನದಿಂದ ಬಂದ ಅಂಗೀಕಾರದ ಪ್ರತಿಯನ್ನು ರಾಹುಲ್ ಗಾಂಧಿಯ ಕಚೇರಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೈಕಮಾಂಡ್ ನಿರ್ಧಾರಕ್ಕೆ ಕಾರಣವೇನು?:
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಕೆಎನ್ ರಾಜಣ್ಣ ಅವರ ತಲೆದಂಡ ಕಾಂಗ್ರೆಸ್ ಪಕ್ಷದಲ್ಲಿಯೂ ಭಾರೀ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯನವರ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಕೆಎನ್ ರಾಜಣ್ಣ ಇತ್ತೀಚೆಗೆ ಕೆಲವು ಬಾರಿ ಕಾಂಗ್ರೆಸ್ ವಿರುದ್ಧವೇ ಹೇಳಿಕೆ ನೀಡಿ ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗಸ್ಟ್ 8ರಂದು ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ರಾಜಣ್ಣ, ನಾವೇ ಮೊದಲು ಮತಪಟ್ಟಿಯನ್ನು ನೋಡಿಕೊಳ್ಳಬೇಕಿತ್ತು. ಅದು ಬಿಟ್ಟು ಈಗ ಆ ವಿಷಯವನ್ನು ಹೇಳುತ್ತಿರುವುದು ಸರಿಯಲ್ಲ. ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಮತದಾರರ ಪಟ್ಟಿ ಸಿದ್ಧವಾಗಿತ್ತು. ಆಗ ನಮ್ಮ ನಾಯಕರು ಕಣ್ಣುಮುಚ್ಚಿ ಕುಳಿತಿದ್ದರಾ? ಎಂದು ತಮ್ಮದೇ ಪಕ್ಷದವರ ವಿರುದ್ಧ ತುಮಕೂರಿನಲ್ಲಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಸದನದಲ್ಲಿ ಅಶೋಕ್ ಪ್ರಶ್ನೆ
ಇದೇ ವಿಡಿಯೋವನ್ನು ಬಳಸಿಕೊಂಡು ಬಿಜೆಪಿ ಕಾಂಗ್ರೆಸ್ ಸರ್ಕಾರ ಹಾಗೂ ರಾಹುಲ್ ಗಾಂಧಿಯ ವಿರುದ್ಧ ಟೀಕಾಪ್ರಹಾರ ನಡೆಸಿತ್ತು. ನಿಮ್ಮದೇ ಪಕ್ಷದ ಸಚಿವರು ನಿಮ್ಮ ಬಂಡವಾಳ ಬಿಚ್ಚಿಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದರು. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿತ್ತು. ರಾಜಣ್ಣ ಮಾತನಾಡಿದ್ದ ಆ ವಿಡಿಯೋ ಕಾಂಗ್ರೆಸ್ ಹೈಕಮಾಂಡ್ ನಾಯಕರ ಕೈಸೇರಿತ್ತು. ಇದೇ ಕಾರಣಕ್ಕೆ ರಾಜಣ್ಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿತ್ತು ಎನ್ನಲಾಗಿದೆ. ಹೀಗಾಗಿ, ರಾಜೀನಾಮೆ ಅಥವಾ ಉಚ್ಛಾಟನೆ ಎಂಬ 2 ಆಯ್ಕೆಯನ್ನು ರಾಜಣ್ಣ ಅವರ ಮುಂದಿಡಲಾಗಿತ್ತು. ಅನಿವಾರ್ಯವಾಗಿ ರಾಜಣ್ಣ ರಾಜೀನಾಮೆಯ ಆಯ್ಕೆಯನ್ನು ಆರಿಸಿಕೊಳ್ಳಬೇಕಾಯಿತು ಎನ್ನಲಾಗಿದೆ. ಆದರೆ, ಅವರ ಉಚ್ಛಾಟನೆಯ ಬಗ್ಗೆಯೂ ಇನ್ನೂ ವದಂತಿಗಳು ಹರಿದಾಡುತ್ತಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




