Body Shaming; ಸುಮ್ಮನಿರುವುದು ಹೇಗೆ? : ಕಪ್ಪು ರೇಷಿಮೆ ಸೀರೆಯನ್ನೇ ಆರತಕ್ಷತೆಗೆ ಆಯ್ಕೆ ಮಾಡಿಕೊಂಡಿದ್ದೆ

‘ಸಂದರ್ಶನ ಮುಗಿಸಿದ ಮೇಲೆ ಸಂಪಾದಕಿ, ನನ್ನ ದೇಹದ ಮೇಲೆಲ್ಲಾ ಕಣ್ಣು ಹಾಯಿಸುತ್ತಾ ‘ನೀನು ಸುಂದರವಾಗಿದ್ದೀಯಾ ಆದರೆ... ನನ್ನ ಸ್ಟೈಲಿಸ್ಟ್ ಬಳಿಗೆ ಕಳುಹಿಸಿಕೊಡುತ್ತೇನೆ, ಅಲ್ಲಿ ಆಕೆ ನಿನ್ನನ್ನ ಗ್ರೂಮ್ ಮಾಡುತ್ತಾಳೆ. ನಾಲ್ಕು ಜೊತೆ ಟ್ರೆಂಡಿಯಾಗಿರುವ ಸೂಟ್ ಗಳನ್ನೂ ತೆಗೆದುಕೊ. ತಿಂಗಳಿಗೊಮ್ಮೆ ಫೇಷಿಯಲ್ ಮಾಡಿಸಿಕೊ, ವಾರಕೊಮ್ಮೆ ಐಬ್ರೋಸ್... ಕ್ಲೈಂಟ್ಸ್ ಇಂಟರ್ವ್ಯೂ ಮಾಡಲು ಹೋದಾಗ ಅವರು ಇಂಪ್ರೆಸ್ ಆಗಬೇಕು ಎಂದರು. ಪತ್ರಿಕೆಗಳಿಗೆ ಬೇಕಾಗಿರುವುದು ನನ್ನ ಬರವಣಿಗೆಯ ಕೌಶಲವೋ ಅಥವಾ ಮುಖದ ಅಂದ ಚೆಂದವೋ ಎಂದು ಮನಸ್ಸು ಮತ್ತಷ್ಟು ರೊಚ್ಚಿಗೆದ್ದಿತು.’ ಚೈತ್ರಾ ಅರ್ಜುನಪುರಿ

Body Shaming; ಸುಮ್ಮನಿರುವುದು ಹೇಗೆ? : ಕಪ್ಪು ರೇಷಿಮೆ ಸೀರೆಯನ್ನೇ ಆರತಕ್ಷತೆಗೆ ಆಯ್ಕೆ ಮಾಡಿಕೊಂಡಿದ್ದೆ
ಲೇಖಕಿ ಚೈತ್ರಾ ಅರ್ಜುನಪುರಿ
Follow us
ಶ್ರೀದೇವಿ ಕಳಸದ
|

Updated on:Apr 04, 2021 | 3:59 PM

ಜನಪ್ರತಿನಿಧಿಗಳೇ, ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ದಿಂಡಿಗಲ್ ಲಿಯೋನಿ ಅವರ ಹೇಳಿಕೆ ಲೇಖಕಿ, ಪತ್ರಕರ್ತೆ ಚೈತ್ರಾ ಅರ್ಜುನಪುರಿ ಅವರ ಮನಸ್ಸು ಮೆದುಳಿನೊಳಗೆ ಹೇಗೆಲ್ಲ ಹೊಕ್ಕಾಡಿ ಬಂದು ಎಷ್ಟೊಂದು ಅರ್ಥವತ್ತಾದ ಆಲೋಚನೆಗಳನ್ನು ಹೊಮ್ಮಿಸಿದೆ ಎಂಬುದನ್ನು ಇಲ್ಲಿ ಓದಿ.  

ಕಳೆದ ವಾರ ಗೆಳೆಯರು ನನ್ನನ್ನು ಒಂದು ಮಾಡೆಲ್ ಫೋಟೋ ಶೂಟಿಗೆ ಆಹ್ವಾನಿಸಿದರು. ನಾನು ಕ್ಯಾಮೆರಾದಲ್ಲಿ ಫ್ಲ್ಯಾಶ್ ಬಳಸುವುದಿಲ್ಲ, ನನ್ನ ಕಾಂಪೊಸಿಷನ್ ಮತ್ತು ಎಡಿಟಿಂಗ್ ಶೈಲಿ ಅವರಿಗೆ ಅಷ್ಟು ಹಿಡಿಸುವುದಿಲ್ಲವೆಂದು ಎಚ್ಚರಿಸಿದರೂ, ಔಟ್ಡೋರ್ ಶೂಟ್ ಆದ್ದರಿಂದ ಬರಲೇಬೇಕೆಂದು ಒತ್ತಾಯಿಸಿದರು. ಅವರ ಒತ್ತಡಕ್ಕೆ ಮಣಿದುಹೋಗಿ ಒಂದಷ್ಟು ಚೆಂದದ ಚಿತ್ರಗಳೊಂದಿಗೆ ವಾಪಸ್ಸು ಬಂದೆ.

ಕೆಲವು ಚಿತ್ರಗಳನ್ನು ಮೊದಲು ಎಡಿಟ್ ಮಾಡಿ ಕೊಟ್ಟಾಗ ಮಾಡೆಲ್​ಗಳಿಗೆ ಹಿಡಿಸಲಿಲ್ಲ. ಕಾರಣ, ಮ್ಯಾಗಝೀನುಗಳ ಮುಖಪುಟಗಳಲ್ಲಿ ಕಾಣುವ ಹಾಗೆ ಅವರ ಮುಖಗಳನ್ನು ನಾನು ಏರ್ ಬ್ರಷ್ ಮಾಡಿರಲಿಲ್ಲ, ಚಿತ್ರಗಳಲ್ಲಿ ಅವರು ಅವರ ಹಾಗೆಯೇ ಕಾಣುತ್ತಿದ್ದರು. ಕೊನೆಗೆ ಅವರ ಗೊಣಗಾಟ ಕೇಳಲಾಗದೆ ಮುಂದಿನ ಫೋಟೋಗಳನ್ನು ಮೊಡವೆ, ಕಲೆಗಳನ್ನೆಲ್ಲಾ ತೆಗೆದು ಮುಖವನ್ನು ನುಣುಪು ಮಾಡಿ, ಬೆಳ್ಳಗೆ ಏರ್ ಬ್ರಶ್ ಮಾಡಿ ಕೊಟ್ಟೆ. ಎಲ್ಲರಿಗೂ ಖುಷಿ. ಈಗ ಮುಂದಿನ ತಿಂಗಳು ನಡೆಯುವ ಮತ್ತೆರಡು ಶೂಟ್ಗಳಿಗೂ ಬಂದು ಫೋಟೋ ತೆಗೆದುಕೊಡಲೇಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಎಲ್ಲರಿಗೂ ತೆಳ್ಳಗೆ, ಬೆಳ್ಳಗೆ, ಎತ್ತರವಾಗಿ ಕಾಣಬೇಕು, ಮುಖದಲ್ಲಿ ಯಾವುದೇ ಕಲೆ, ಮೊಡವೆಗಳಿರಬಾರದು, ಮಾಗಝೀನ್​​ಗಳಲ್ಲಿ ಬರುವ ನಟ, ನಟಿಯರ ಹಾಗೆ ಸುಂದರವಾಗಿ ಗೊಂಬೆಗಳ ಹಾಗೆ ಕಾಣಬೇಕು. ಎನಿಥಿಂಗ್ ಲೆಸ್ ದ್ಯಾನ್ ದಟ್ ಈಸ್ ಎ ಕಂಪ್ಲೀಟ್ ನೋ, ನೋ!

ಬಾಡಿ ಶೇಮಿಂಗ್ ಮಹಿಳೆಯರಿಗೆ ಹೊಸ ವಿಷಯವೇನಲ್ಲ. ಅಮೆರಿಕನ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಿಳೆಯರ ಬಗ್ಗೆ ಮತ್ತು ಅವರ ನೋಟಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದದ್ದನ್ನು ಯಾರು ಮರೆತಿದ್ದಾರೆ? ಇದು ಕೇವಲ ಚುನಾವಣೆಯ ಸಮಯದಲ್ಲಿ ಮಾತ್ರವಲ್ಲದೆ, ಟ್ರಂಪ್ ತಮ್ಮ ಸಾರ್ವಜನಿಕ ಜೀವನದ ಬಹುಪಾಲು ಮಹಿಳೆಯರನ್ನು ಅವರ ದೈಹಿಕ ಸೌಂದರ್ಯವನ್ನು ಆಧರಿಸಿ ತಿರಸ್ಕಾರ ಭಾವನೆಯಲ್ಲಿ ಮಾತನಾಡುತ್ತಿದ್ದದ್ದು ಎಲ್ಲರಿಗೂ ತಿಳಿದೇ ಇದೆ. ಒಬ್ಬ ಹೆಣ್ಣು ಹೇಗೆ ಕಾಣಬೇಕು ಎನ್ನುವ ಅವಾಸ್ತವಿಕ ಚಿತ್ರಗಳನ್ನು ದಶಕಗಳಿಂದ ಮಾಧ್ಯಮಗಳು ಚಲನಚಿತ್ರಗಳು, ದೂರದರ್ಶನ ಮತ್ತು ಮುದ್ರಣ ತೋರಿಸುತ್ತಲೇ ಬರುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ಹೊಸ ಸೇರ್ಪಡೆ ಸಾಮಾಜಿಕ ಮಾಧ್ಯಮ. ಬಾಡಿ ಶೇಮಿಂಗ್ ಅನ್ನು ಹೊಸ ಮಟ್ಟಕ್ಕೆ ಕೊಂಡೊಯ್ದಿರುವಲ್ಲಿ ಸಾಮಾಜಿಕ ಮಾಧ್ಯಮದ ಪಾಲು ಬಹಳ ದೊಡ್ಡದು.

ಪಾಂಡ್ಸ್ ಪೌಡರೇ ಎಲ್ಲಾ

body shaming

ಸೌಜನ್ಯ : ಅಂತರ್ಜಾಲ

ಅಮ್ಮನ ಸಂಬಂಧಿಕರು ಚಿಕ್ಕಂದಿನಲ್ಲಿ ನನ್ನನ್ನು ಕರ್ಗಿ, ಕರಿಚಿಳ್ಳಿ ಎನ್ನುತ್ತಿದ್ದರು, ಈಗಲೂ ಕೆಲವೊಮ್ಮೆ ಹಾಗೆ ಕರೆಯುತ್ತಾರೆ. ಅದರ ಬಗ್ಗೆ ನನಗೆ ಬೇಸರವಿಲ್ಲ. ನಾನು ಐದಾರು ವರ್ಷದವಳಿದ್ದಾಗ ಯಾವುದೋ ಕಾರಣಕ್ಕೆ ಅಮ್ಮ ಬಯ್ಯುವಾಗ ನನ್ನನ್ನು ಕರ್ಗಿ ಎಂದಿದ್ದಕ್ಕೆ, ನಾನು ನಿನ್ನ ಗಂಡ ಏನು ಬೆಳ್ಳಗಿದ್ದಾನಾ ಎಂದು ಮರುಪ್ರಶ್ನೆ ಮಾಡಿದ್ದೆ ಎನ್ನುವುದನ್ನು ಅಮ್ಮ ಆಗಾಗ ಹೇಳುತ್ತಿದ್ದಳು. ಅಮ್ಮ ಯಾವತ್ತೂ ನನ್ನನ್ನು ಬೆಳ್ಳಗಾಗಲು ಕ್ರೀಮ್ ಅಥವಾ ಪೌಡರ್ ಹಚ್ಚಿಕೊಳ್ಳಲು ಹೇಳಲಿಲ್ಲ. ಬೇರೆಯವರ ಹಾಗೆ ನೀನೂ ಕ್ರೀಮ್, ಪೌಡರ್ ಹಚ್ಚಿದ್ದಿದ್ದರೆ ನಾನೂ ಅವನ್ನೆಲ್ಲಾ ರೂಢಿಸಿಕೊಳ್ಳುತ್ತಿದ್ದೆ ಎಂದು ತಮಾಷೆ ಮಾಡಿದಾಗಲೆಲ್ಲಾ, ‘ನಿಮ್ಮಪ್ಪನಿಗೆ ಬರುತ್ತಿದ್ದ ಸಂಬಳದಲ್ಲಿ ಅವೆಲ್ಲಾ ಶೋಕಿ ಮಾಡೋಕೆ ಆಗ್ತಾ ಇರ್ಲಿಲ್ಲ. ನೀವು ಹುಟ್ಟಿದ ಮೇಲೆ ನಾನು ಮುಖಕ್ಕೆ ಪೌಡರ್ ಹಚ್ಚಿಕೊಳ್ಳೋದನ್ನೂ ನಿಲ್ಲಿಸಿಬಿಟ್ಟೆ. ಈಗ ವಯಸ್ಸಾಯ್ತು ಅದ್ರ ಅವಶ್ಯಕತೆಯೇ ಇಲ್ಲ. ಹಣೆಗೆ ಶೃಂಗಾರ್ ಕುಂಕುಮ, ಹೊರಗೆ ಹೋಗುವಾಗ ಮುಖಕ್ಕೆ ಪಾಂಡ್ಸ್ ಪೌಡರ್ ಬಿಟ್ರೆ ನಿಮ್ಮಪ್ಪ ಬೇರೇನೂ ಕೊಡಿಸ್ತಿರ್ಲಿಲ್ಲ. ನೀವು ಮಕ್ಕಳಿದ್ದಾಗಲೂ ನಿಮಗೆ ಪಾಂಡ್ಸ್ ಪೌಡರೇ ಗತಿಯಾಗಿತ್ತು ನೋಡು, ಅವೇನೋ ಜಾನ್ಸನ್ ಮಕ್ಕಳ ಕ್ರೀಮು, ಪೌಡರ್, ಸೋಪು ಎಲ್ಲಾ ನಿಮ್ಮ ಮೈಕೈ ಕಾಣಲೇ ಇಲ್ಲ’ ಎಂದು ಬೇಸರದಿಂದಲೇ ನೆನೆಸಿಕೊಳ್ಳುತ್ತಿದ್ದಳು.

ಮದುವೆಗಳಲ್ಲಿ ವಧುವಿಗೆ ಮಾಡುವ ಮೇಕಪ್ ಕಂಡು ಅಮ್ಮ ಸದಾ ಸೋಜಿಗ ಪಡುತ್ತಿದ್ದಳು. ‘ಒಂದೆರಡು ಗಂಟೆಗಾಗಿ ಎಷ್ಟೆಲ್ಲಾ ಕಷ್ಟಪಡುತ್ತವೆ ಈ ಹೆಣ್ಮಕ್ಳು ನೋಡು. ನಮ್ಮ ಕಾಲದಲ್ಲಿ ಹೆಣ್ಣು, ಗಂಡು ಮದುವೆಗೆ ಮುನ್ನ ಒಬ್ಬರನ್ನೊಬ್ಬರು ಎಲ್ಲೇ ನೋಡಿರ್ತಿದ್ರು? ಮದುವೆ ದಿನ ಅಷ್ಟೇ ಧಾರೆಗೆ ಅಂತ ಹಸೆಮಣೆ ಮೇಲೆ ಕೂರಿಸಿದಾಗ ಒಬ್ಬರ ಮುಖವನ್ನೊಬ್ಬರು ನೋಡ್ತಿದ್ರು. ಧಾರೆಗೆ ಹೆಣ್ಮಕ್ಳು ಹೀಗಿನ ಹಾಗೆ ಮೇಕಪ್ ಮಾಡಿಕೊಂಡು ಬಂದು ತಾಳಿ ಕಟ್ಟಿಸಿಕೊಂಡ್ರು ಅಂದ್ಕೊ. ಮದುವೆ ಮುಗಿದ ಮೇಲೆ ಹುಡುಗನ ಮನೆಗೆ ಹೋಗಿ ಮುಖ ಕೈಕಾಲು ತೊಳೆದುಕೊಂಡು ದೇವ್ರಿಗೆ ದೀಪ ಹಚ್ಚೋಕೆ ಹೋದ್ರೆ, ಗಂಡು ಮತ್ತವನ ಮನೆಯವ್ರು ಹುಡುಗಿ ಬದಲಾಗಿ ಹೋಗಿದೆ ಅಂತ ರಂಪ ರಾಮಾಯಣ ಮಾಡಿಬಿಡೋವ್ರಲ್ಲೇ’ ಎಂದು ಅಮ್ಮ ನಗಾಡುತ್ತಿದ್ದದ್ದು ಮದುವೆ ಮೇಕಪ್ ಎಂದು ಫೇಸ್ಬುಕ್ಕಿನಲ್ಲಿ ಬರುವ ವಿಡಿಯೋಗಳನ್ನು ಕಂಡಾಗಲೆಲ್ಲಾ ನೆನಪಾಗುತ್ತದೆ.

ಕಪ್ಪು ಸೀರೆ ಯಾವ ನಟಿಗೂ ಕಡಿಮೆಯಿಲ್ಲದ ಹಾಗೆ ತೆಳ್ಳಗೆ, ಬೆಳ್ಳಗಿದ್ದ ಅಮ್ಮ ಸಾಯುವವರೆಗೂ ಕುಂಕುಮ ಬಿಟ್ಟು ಮುಖಕ್ಕೆ ಬೇರೇನೂ ಸೋಕಿಸಿದ್ದು ನಾನು ಕಂಡೇ ಇಲ್ಲ. ಬಹುಶಃ ಹಾಗಾಗೇ ನಾನು ಹುಟ್ಟಿನಿಂದಲೇ ಕಪ್ಪಗಿದ್ದರೂ ಕಪ್ಪು ಎನ್ನುವ ಬಣ್ಣಕ್ಕೆ ಹೆದರಲೇ ಇಲ್ಲ. ಆದರೆ ಕಪ್ಪು, ನೀಲಿ, ಕೆಂಪು ಬಣ್ಣದ ಬಟ್ಟೆಗಳು ಎಷ್ಟು ಇಷ್ಟವಿದ್ದರೂ ಅಮ್ಮ ತೆಗೆದು ಕೊಡಲು ಒಪ್ಪದೇ ಹೋಗುತ್ತಿದ್ದಾಗ ಚಿಕ್ಕಂದಿನಲ್ಲಿ ಮುನಿಸಿಕೊಳ್ಳುತ್ತಿದ್ದೆ. ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆಯೇ ನಾನು ಕೊಂಡುಕೊಳ್ಳುತ್ತಿದ್ದ ಬಟ್ಟೆಗಳಲ್ಲಿ ಕಪ್ಪು ಮತ್ತು ಕೆಂಪು ಬಣ್ಣದ ಬಟ್ಟೆಗಳೇ ಹೆಚ್ಚಾದಾಗ ಬಾಲ್ಯದ ಆಸೆಗಳನ್ನು ಒಟ್ಟಿಗೇ ಪೂರೈಸಿಕೊಳ್ಳುತ್ತಿರುವ ಅನುಭವವಾಗಿತ್ತು.

ನನ್ನ ಮದುವೆಯ ರಿಸೆಪ್ಷನ್ನಿಗೆಂದು ಮೈಸೂರ್ ಸಿಲ್ಕ್ ಕಾರ್ಖಾನೆಗೆ ಹೋಗಿ ಕಪ್ಪು ಬಣ್ಣದ ರೇಷ್ಮೆ ಸೀರೆಗೆ ಆರ್ಡರ್ ಕೊಟ್ಟಾಗ ಹೌಹಾರಿದ್ದು ಅಮ್ಮ ಮಾತ್ರವಲ್ಲ, ಅಲ್ಲಿ ಆರ್ಡರ್ ತೆಗೆದುಕೊಂಡ ಮಹಿಳೆಯೂ ಸೇರಿದ್ದರು. ‘ಯಾವುದಕ್ಕೂ ಎರಡು ದಿನ ಯೋಚಿಸಿ, ಮೇಡಂ. ಇಷ್ಟೊಂದು ದುಡ್ಡು ಕೊಟ್ಟು ಕಪ್ಪು ಬಣ್ಣದ ರೇಷ್ಮೆ ಸೀರೆ ತಗೋತೀರಾ?’

‘ಲೇ, ಚೇತಿ. ಚಿಕ್ಕಂದಿನಲ್ಲಿ ನೀನು ಕೇಳಿದ ಬಣ್ಣಗಳ ಬಟ್ಟೆ ತೆಗೆದುಕೊಡ್ತಿರ್ಲಿಲ್ಲ ಅಂತ ಈಗ ನನ್ನ ಮೇಲೆ ಸೇಡು ತೀರಿಸ್ಕೊತಿದ್ಯಾ? ಅದ್ಕೇ ಕಪ್ಪು ಸೀರೆ ತಗೋತಿದ್ಯಾ ತಾನೇ?’ ಅಮ್ಮ ನೋವಿನಿಂದಲೇ ಕೇಳಿದ್ದಳು.

ನನ್ನ ಎರಡು ತಿಂಗಳ ಸಂಬಳವನ್ನು ಒಂದು ಸೀರೆಯ ಮೇಲೆ, ಅದರಲ್ಲೂ ಕಪ್ಪು ಸೀರೆಯ, ಮೇಲೆ ಹಾಕುತ್ತಿದ್ದುದ್ದರ ಮೇಲೆ ಅಮ್ಮನಿಗೆ ಬೇಸರವಿತ್ತು. ಆದರೆ ಒಂದು ತಿಂಗಳಾದ ಮೇಲೆ ಕೈಗೆ ಬಂದ ಆ ಸುಂದರ ಸೀರೆಯನ್ನು ಕಂಡು ಅಮ್ಮ ಬಹಳ ಖುಷಿಪಟ್ಟಿದ್ದಳು. ‘ಇದನ್ನು ಉಟ್ಟುಕೊಂಡರೆ ಮತ್ತಷ್ಟು ಕಪ್ಪಗೆ ಕಾಣಿಸ್ತೀಯ ಅಂದ್ಕೊಂಡಿದ್ದೆ ಕಣೆ, ನಿನಗೆ ತುಂಬಾ ಚೆನ್ನಾಗಿ ಒಪ್ಪುತ್ತೆ’ ಎನ್ನುತ್ತಾ ಅಮ್ಮ ಸೀರೆಯಲ್ಲಿದ್ದ ನನ್ನನ್ನು ಬಾಚಿ ತಬ್ಬಿಕೊಂಡಿದ್ದು ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ.

ಕಪ್ಪು ಹುಡುಗಿಗೆ ಕಪ್ಪು ಮಗ

body shaming

ಸೌಜನ್ಯ : ಅಂತರ್ಜಾಲ

ಕಪ್ಪುಬಣ್ಣದ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ನಾನು ಅದರ ತೀವ್ರತೆಯನ್ನು ಅನುಭವಿಸಿದ್ದು ನನ್ನ ಮದುವೆಯ ದಿನ. ಧಾರೆಗೆ ಸಜ್ಜಾಗುತ್ತಿದ್ದ ನನ್ನನ್ನು ಕಂಡು ನನ್ನ ಗಂಡನ ದೊಡ್ಡಮ್ಮನ ಮಕ್ಕಳು ಹುಡುಗಿ ಕಪ್ಪು, ದಪ್ಪ ಎಂದು ಹಂಗಿಸಿದಾಗ ಅವರಿಗೆ ಉತ್ತರಿಸಲು ಬಾಯಿ ತೆಗೆದ ನನ್ನನ್ನು ಪತಿಯ ಗೆಳೆಯ ಬೇಡ, ಸುಮ್ಮನಿರು ಎಂದು ತಡೆದಿದ್ದ. ಮದುವೆಯಾದ ಮೇಲೆ ಹಿರಿಯ ಸೊಸೆಗಿಂತಲೂ ಮಧ್ಯದ ಸೊಸೆ ಕಪ್ಪು ಎಂದು ಸದಾ ನನ್ನನ್ನು ಸಂಬಂಧಿಕರ ಮುಂದೆಯೇ ಗೊಣಗಾಡುವ ಅತ್ತೆಗೆ ತನ್ನ ಮಧ್ಯದ ಮಗ, ನನ್ನ ಗಂಡ ನನಗಿಂತಲೂ ಕಪ್ಪು ಎನ್ನುವುದು ಕಾಣಿಸುವುದೇ ಇಲ್ಲ. ನನ್ನ ಮಗ ಹುಟ್ಟಿದಾಗ ತನ್ನ ಹಿರಿಯ ಮೊಮ್ಮಗನ ಹಾಗೆ ಬೆಳ್ಳಗಿಲ್ಲ ಎಂದು ಅತ್ತೆ ವರಾತ ತೆಗೆದಾಗ, ನಾವಿಬ್ಬರೂ ಕಪ್ಪು, ಮಗ ಹೇಗೆ ಬೆಳ್ಳಗೆ ಹುಟ್ಟುತ್ತಾನೆ ಎಂದು ನಕ್ಕಿದ್ದೆ.

ಅದು ಆ ರೀತಿಯಾದರೆ, ನನ್ನ ತಮ್ಮನ ಹೆಂಡತಿಯ ಸಂಬಂಧಿಯೊಬ್ಬಳ ಕೊಂಕು ಇನ್ನೂ ವಿಚಿತ್ರವಾಗಿತ್ತು. ‘ಗಂಡ ಹೆಂಡತಿ ಇಬ್ಬರೂ ಕಪ್ಪಗಿದ್ದಾರೆ, ಮಗು ಕಪ್ಪಗೆ ಹುಟ್ಟುತ್ತೆ ಅಂದೊಂಡಿದ್ವಿ ಹೇಗೆ ಬೆಳ್ಳಗೆ ಹುಟ್ತು?’

‘ನಾನು ಹೆತ್ತಾಗ ಮಗು ಕಪ್ಪಗೇ ಇತ್ತು, ನಿಮ್ಮಂಥ ಜನ ಕೇಳಲಿ ಅಂತ ದಿನಾ ಸೀಮೆಸುಣ್ಣದ ನೀರಲ್ಲಿ ಅದ್ದಿ ತೆಗಿತೀನಿ, ಅದ್ಕೆ ಬೆಳ್ಳಗೆ ಕಾಣ್ತಿದೆ!’

ನನ್ನ ಉತ್ತರದಿಂದ ಆಕೆಗೆ ಸಮಾಧಾನವಾಯಿತೋ ಇಲ್ಲವೋ ಬೇರೆ ವಿಷಯ, ಆದರೆ ಆನಂತರ ಮತ್ತೆಂದೂ ಆಕೆ ನನ್ನ ಅಥವಾ ನನ್ನ ಮಗನ ಬಣ್ಣದ ಬಗ್ಗೆ ನೇರವಾಗಿ ಮಾತನಾಡಲು ಬಂದಿಲ್ಲ. ಹಿಂದೆ ಆಡಿಕೊಂಡು ನಗುತ್ತಾರೆ, ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸದ್ಯಕ್ಕೆ ಬಣ್ಣದ ಜೊತೆಗೆ ನನ್ನ ತೂಕದ ಬಗ್ಗೆಯೂ ಜನರಿಂದ ಪುಕ್ಕಟೆ ಸಲಹೆಗಳು ಸಿಗಲಾರಂಭಿಸಿವೆ. ‘ಮುಂಚೆ ಎಷ್ಟೊಂದು ಸಣ್ಣಗಿದ್ದಿರಿ, ಈಗ ಯಾಕೆ ಹೀಗೆ ದಪ್ಪಗಾಗಿದ್ದೀರಿ? ಆ ಡಯಟ್ ಮಾಡಿದರೆ ಸಣ್ಣಗಾಗುತ್ತೀರಿ, ಈ ತರಕಾರಿ ಬಳಸಿದರೆ ಸಣ್ಣಗಾಗುತ್ತೀರಿ’ ಎನ್ನುವ ಮಾತುಗಳನ್ನು ಕೇಳಿಸಿಕೊಂಡೂ ಕೇಳಿಸಿಕೊಂಡಿಲ್ಲವೆನ್ನುವ ಹಾಗೆ ಇದ್ದು ಬಿಡುವುದನ್ನು ಮಗ ಹುಟ್ಟಿದ ಮೇಲೆ ಚೆನ್ನಾಗಿ ಕಲಿತಿದ್ದೇನೆ.

ಚಿಕ್ಕ ವಯಸ್ಸಿನಿಂದಲೂ ‘ಎಲ್ಲರೂ ವಿಭಿನ್ನರು’ ಎಂಬ ಮಾತನ್ನು ಕೇಳಿಕೊಂಡೇ ಬಂದಿದ್ದೇವೆ, ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ನಾವು ಇದನ್ನು ಸಾಕಷ್ಟು ಸಲ ಅನ್ವಯಿಸಿ ಒಪ್ಪಿಕೊಂಡಿದ್ದೇವೆ ಸಹ. ನಮ್ಮ ಗೆಳೆಯರಲ್ಲಿ ಕೆಲವರು ಸದಾ ಹಸನ್ಮುಖಿಗಳಾಗಿರುವವರು ಇದ್ದಾರೆ, ಕೆಲವರು ಗಂಭೀರವಾಗಿರುವವರು ಇದ್ದಾರೆ, ಕೆಲವರು ಜನರೊಡನೆ ಹೆಚ್ಚು ಬೆರೆಯುತ್ತಾರೆ, ಮತ್ತೆ ಕೆಲವರು ಮೌನವಾಗಿ, ಒಂಟಿಯಾಗಿರುತ್ತಾರೆ. ಈ ವ್ಯತ್ಯಾಸಗಳ ಬಗ್ಗೆ ನಾವು ಅಷ್ಟು ತಲೆಕೆಡಿಸಿಕೊಳ್ಳುವುದಿಲ್ಲ, ಅದು ಅವರ ವ್ಯಕ್ತಿತ್ವದ ಒಂದು ಭಾಗವೆಂದು ಒಪ್ಪಿಕೊಳ್ಳುತ್ತೇವೆ. ಆದರೆ ಇದೇ ಅಭಿಪ್ರಾಯ ಒಬ್ಬ ವ್ಯಕ್ತಿಯ ತೂಕ, ಬಣ್ಣ ಮತ್ತು ನೋಟಕ್ಕೆ ಏಕೆ ಅನ್ವಯಿಸುವುದಿಲ್ಲ? ವಿವಿಧ ಬಣ್ಣದ, ತೂಕದ, ನೋಟದ ಗೆಳೆಯರನ್ನು ಯಾಕೆ ನಾವು ಅವರಿರುವ ಹಾಗೆಯೇ ಒಪ್ಪಿಕೊಳ್ಳುವುದಿಲ್ಲ? ಈ ಕ್ರೀಮು ಹಚ್ಚಿದರೆ ಬೆಳ್ಳಗಾಗುತ್ತೇವೆ, ಆ ಡಯಟ್ ಮಾಡಿದರೆ ತೆಳ್ಳಗಾಗುತ್ತೇವೆ ಎನ್ನುವ ಪುಕ್ಕಟೆ ಸಲಹೆಗಳನ್ನು ಯಾಕೆ ನೀಡುತ್ತೇವೆ?

ಯಾರಿಗೆ ಬೇಕು ನಿನ್ನ ಕೌಶಲ

body shaming

ಸೌಜನ್ಯ : ಅಂತರ್ಜಾಲ

ಕತಾರಿಗೆ ಬಂದ ಮೇಲೆ ಅದು ನನ್ನ ಎರಡನೆಯ ಸಂದರ್ಶನ. ಮಾಸಪತ್ರಿಕೆಯೊಂದರಲ್ಲಿ ಹಿರಿಯ ಸಹಸಂಪಾದಕಿಯ ಹುದ್ದೆಗೆ ಅರ್ಜಿ ಹಾಕಿ ಸಂಪಾದಕಿಯ ಕ್ಯಾಬಿನ್ ಮುಂದೆ ಸಂದರ್ಶನಕ್ಕಾಗಿ ಕಾದು ಕೂತಿದ್ದೆ. ಮೊದಲ ಕೆಲಸದ ಸಂದರ್ಶನದಲ್ಲಿ ನಾನು ಉತ್ತರ ಭಾರತದವಳಲ್ಲ ಎನ್ನುವ ಕಾರಣಕ್ಕೆ ಕಡಿಮೆ ಸಂಬಳ ತಿಳಿಸಿದ ಘಟನೆ ಮನಸ್ಸಿನಲ್ಲಿದ್ದರೂ, ಇಲ್ಲಿ ಹಾಗಾಗಲಾರದು ಎನ್ನುವ ಭರವಸೆ. ಕಾರಣ, ಸಂಪಾದಕಿ ಪಾಶ್ಚಿಮಾತ್ಯ ದೇಶದಾಕೆ. ಕಳೆದ ಮೂರು ತಿಂಗಳಿನಲ್ಲಿ ಕಂಡಿದ್ದ ಪಾಶ್ಚಿಮಾತ್ಯ ಗೆಳೆಯರು ಲಿಂಗ, ದೇಶ, ಬಣ್ಣ, ಧರ್ಮ ಎಂದು ಯಾವ ತಾರತಮ್ಯವನ್ನೂ ಮಾಡಿರಲಿಲ್ಲ. ಹಾಗಾಗಿ ಮನಸ್ಸಿನಲ್ಲಿ ಕೆಲಸ ಗ್ಯಾರಂಟಿ ಎನ್ನುವ ನಂಬಿಕೆಯಿತ್ತು.

ಸಂದರ್ಶನ ಮುಗಿಸಿದ ಮೇಲೆ ಸಂಬಳವನ್ನು ನಿಗದಿ ಪಡಿಸಿದ ಸಂಪಾದಕಿ, ನನ್ನ ದೇಹದ ಮೇಲೆಲ್ಲಾ ಕಣ್ಣು ಹಾಯಿಸುತ್ತಾ, ಮೊದಲ ತಿಂಗಳ ಸಂಬಳದಲ್ಲಿ ಒಂದು ಸಾವಿರ ಹೆಚ್ಚೇ ತರುವುದಾಗಿ ತಿಳಿಸಿದರು. ನಾನು ಕಾರಣ ಕೇಳುವ ಮುನ್ನವೇ, ‘ನೀನು ಸುಂದರವಾಗಿದ್ದೀಯೆ, ಆದರೆ ನಿನ್ನ ಅಂದವನ್ನು ನೀನು ಸರಿಯಾಗಿ ತೋರಿಸುತ್ತಿಲ್ಲ. ನನ್ನ ಸ್ಟೈಲಿಸ್ಟ್ ಬಳಿಗೆ ಕಳುಹಿಸಿಕೊಡುತ್ತೇನೆ, ಅಲ್ಲಿ ಆಕೆ ನಿನ್ನನ್ನ ಗ್ರೂಮ್ ಮಾಡುತ್ತಾಳೆ. ನಾಲ್ಕು ಜೊತೆ ಚೆನ್ನಾಗಿ ಟ್ರೆಂಡಿಯಾಗಿರುವ ಸೂಟ್ ಗಳನ್ನೂ ತೆಗೆದುಕೊ. ತಿಂಗಳಿಗೊಮ್ಮೆ ಪಾರ್ಲರ್ ಗೆ ಹೋಗಿ ಫೇಷಿಯಲ್ ಮಾಡಿಸಿಕೊ, ವಾರಕೊಮ್ಮೆ ಐಬ್ರೋಸ್… ಕ್ಲೈಂಟ್ಸ್ ಇಂಟರ್ವ್ಯೂ ಮಾಡಲು ಹೋದಾಗ ಅವರು ಇಂಪ್ರೆಸ್ ಆಗಬೇಕು. ನಮ್ಮ ಮಾಗಝೀನ್​ಗೆ ಕ್ಲೈಂಟ್ಸ್ ಕಡೆಯಿಂದ ಆ್ಯಡ್ಸ್ ಕೂಡ ತರಬೇಕಾಗುತ್ತೆ.’

ಸಂಪಾದಕಿ ಹೇಳುತ್ತಿದ್ದ ಮಾತುಗಳನ್ನು ಕೇಳಿ ಅಲ್ಲಿಂದ ಎದ್ದು ಹೊರಟುಬಿಡಬೇಕೆಂದುಕೊಂಡರೂ, ಆಕೆಯ ಸ್ಥಾನಕ್ಕೆ ಅವಮಾನ ಮಾಡಬಾರದೆಂದುಕೊಂಡು ಸುಮ್ಮನೆ ಕೂತುಬಿಟ್ಟೆ. ಆಕೆ ಮಾತು ಮುಗಿಸಿದ ಮೇಲೆ, ಟೇಬಲ್ ಮೇಲಿರಿಸಿದ್ದ ಗ್ಲಾಸಿನ ನೀರನ್ನು ಗಂಟಲಿಗೆ ಸುರಿದುಕೊಂಡು ಜಾಗ ಖಾಲಿ ಮಾಡಿದೆ. ನಾನು ಸಂದರ್ಶನಕ್ಕೆ ಹಾಜರಾಗಿದ್ದು ಪತ್ರಿಕೆಯಲ್ಲಿ ಕೆಲಸ ಮಾಡಲೋ ಅಥವಾ ಮಾಡೆಲಿಂಗ್ ಅಥವಾ ಸಿನಿಮಾದಲ್ಲಿ ನಟಿಸಲೊ ಎನ್ನುವ ಅನುಮಾನ ಶುರುವಾಗಿ ತಲೆ ಕೆಟ್ಟು ಹೋಯಿತು. ಮೂರು ತಿಂಗಳಿನಲ್ಲಾದ ಎರಡು ಕೆಟ್ಟ ಸಂದರ್ಶನದ ಅನುಭವಗಳು ನನ್ನನ್ನೇ ನಾನು ಪ್ರಶ್ನೆ ಮಾಡಿಕೊಳ್ಳುವ ಹಾಗೆ ಮಾಡಿಬಿಟ್ಟವು. ಮುಖಕ್ಕೆ ಕ್ರೀಮ್ ಇರಲಿ, ಪೌಡರ್ ಅನ್ನೇ ಹಚ್ಚದ ನಾನು ಇನ್ನು ಪಾರ್ಲರಿಗೆ ಹೋಗಿ ಐಬ್ರೋಸ್, ಫೇಷಿಯಲ್ ಮಾಡಿಸಿಕೊಂಡು ಕೆಲಸಕ್ಕೆ ಹೋಗಬೇಕೆ? ಪತ್ರಿಕೆಗಳಿಗೆ ಬೇಕಾಗಿರುವುದು ನನ್ನ ಬರವಣಿಗೆಯ ಕೌಶಲವೋ ಅಥವಾ ಮುಖದ ಅಂದ ಚೆಂದವೋ ಎಂದು ಮನಸ್ಸು ಮತ್ತಷ್ಟು ರೊಚ್ಚಿಗೆದ್ದಿತು.

ಎರಡು ದಿನ ಬಿಟ್ಟು ಕೆಲಸಕ್ಕೆ ಯಾವಾಗ ಸೇರಿಕೊಳ್ಳುವೆ ಎಂದು ಕರೆ ಮಾಡಿದ ಸಂಪಾದಕಿಗೆ ಬೇರೆಡೆ ನೌಕರಿ ಸಿಕ್ಕಿತೆಂದು ಸುಳ್ಳು ಹೇಳಿ ನಿಟ್ಟುಸಿರು ಬಿಟ್ಟೆ.

ಸೌಂದರ್ಯ ಮತ್ತು ಬುದ್ಧಿವಂತಿಕೆ

ಮನೆಕೆಲಸದವರೂ, ಮಕ್ಕಳ ದಾದಿಯರೂ ಐಬ್ರೋಸ್ ಮಾಡಿಸಿಕೊಂಡು, ತುಟಿಗೆ ಲಿಪ್​ಸ್ಟಿಕ್​ ಹಚ್ಚಿಕೊಂಡು ಪಾರ್ಕುಗಳಲ್ಲಿ, ಮಾಲುಗಳಲ್ಲಿ ಪುಟ್ಟ ಮಕ್ಕಳನ್ನು ಪ್ರ್ಯಾಂ, ಸ್ಟ್ರಾಲರ್​ಗಳಲ್ಲಿ ತಳ್ಳುತ್ತಾ ಓಡಾಡುವುದನ್ನು ಕಂಡಾಗ ಮೇಕಪ್ಪು, ಬ್ಯೂಟಿ ಪಾರ್ಲರ್ಗಳ ಸಹವಾಸವಿಲ್ಲದವರಿಗೆ ಇಲ್ಲಿ ನೌಕರಿ ಸಿಗುವುದೇ ಇಲ್ಲವೆಂದು ಮತ್ತೆಲ್ಲೂ ಅರ್ಜಿ ಹಾಕದೆ ಸುಮ್ಮನಾಗಿಬಿಟ್ಟೆ.

ಕೆಲವು ವಾರಗಳ ಬಳಿಕ ಟಿವಿ ಚಾನೆಲ್​ನ ಹಿರಿಯ ಸಂಪಾದಕರೊಬ್ಬರು ಟೆಲಿಫೋನ್ ಸಂದರ್ಶನಕ್ಕೆಂದು ಕರೆ ಮಾಡಿದಾಗ ಅಳುಕುತ್ತಾ ಕೇಳಿದೆ, ‘ನಿಮ್ಮ ಆಫೀಸಿಗೆ ಹೀಗೇ ಮೇಕಪ್ ಮಾಡಿಕೊಂಡು ಬರಬೇಕು ಅಥವಾ ಹಾಗೇ ಡ್ರೆಸ್ ಮಾಡಿಕೊಂಡು ಬರಬೇಕು ಎನ್ನುವ ನಿಯಮಗಳೇನಾದರೂ ಇವೆಯೇ?’ ನನ್ನದೇ ವಾರಗೆಯ ಅಮೆರಿಕನ್ ಸಂಪಾದಕ, ‘ನೀನು ಹೇಗಿದ್ದೀಯೋ, ಹೇಗೆ ಕಾಣುತ್ತೀಯೋ ನಮಗೆ ಅದು ಮುಖ್ಯವಲ್ಲ. ನಿನ್ನ ಬರವಣಿಗೆ, ನಿನ್ನ ಎಡಿಟಿಂಗ್ ಅಷ್ಟೇ ಬೇಕಾಗಿರುವುದು. ನೀನು ನೈಟ್ ಡ್ರೆಸ್ ಧರಿಸಿ, ಮೇಲೊಂದು ಬುರ್ಖಾ ಹಾಕಿಕೊಂಡು ಬಂದು ನಿನ್ನ ಕೆಲಸ ಮಾಡಿ ಹೋದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಐ ಯಾಮ್ ನಾಟ್ ಬಾದರ್ಡ್ ಅಬೌಟ್ ಯುವರ್ ಬ್ಯೂಟಿ, ಜಸ್ಟ್ ಗಿವ್ ಅಸ್ ಯುವರ್ ಬ್ರೈನ್ಸ್’ ಎಂದಾಗ ಹಿರಿಹಿರಿ ಹಿಗ್ಗಿದೆ.

ಎರಡು ವರ್ಷ ಆ ಚಾನೆಲ್ಲಿನಲ್ಲಿ ನಾನು ನಾನಾಗಿದ್ದುಕೊಂಡು ಕೆಲಸ ಮಾಡಿದೆ. ಸುತ್ತಲೂ ಇದ್ದ ಸಹೋದ್ಯೋಗಿಗಳು ಪಾರ್ಲರ್, ಮೇಕಪ್ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದ ಸಮಯದಲ್ಲಿ ನಾನು ಸ್ಟೋರಿಗಳನ್ನು ಬರೆಯುತ್ತಾ, ಎಡಿಟ್ ಮಾಡುತ್ತಾ ಕೂರುತ್ತಿದ್ದೆ. ಚಾನೆಲ್ಲಿನ ಕಿರಿಯ ಸಹೋದ್ಯೋಗಿಗಳು ಆಗಾಗ ನನ್ನ ಮೇಕಪ್ರಹಿತ ಮುಖದ ಬಗ್ಗೆ, ನನ್ನ ಸರಳ ಕಾಟನ್ ಉಡುಪುಗಳ ಬಗ್ಗೆ ರೇಗಿಸಿದಾಗಲೆಲ್ಲಾ, ‘ಐ ಯಾಮ್ ಏಜಿಂಗ್ ಗ್ರೇಸ್ ಫುಲಿ| ಎಂದು ನಕ್ಕು ಸುಮ್ಮನಾಗುತ್ತಿದ್ದೆ.

‘ನಿನ್ನಿಂದ ಪಾರ್ಲರ್ ಗಳಿಗೆ, ಬ್ಯೂಟಿ ಪ್ರಾಡಕ್ಟ್ಸ್ ಕಂಪನಿಗಳಿಗೆ ದೊಡ್ಡ ನಷ್ಟ. ಪ್ರತಿ ತಿಂಗಳೂ ಮೇಕಪ್ ಸಾಮಾನುಗಳಿಗೆ, ಪಾರ್ಲರ್​ಗಳಿಗೆಂದೇ ಸಂಬಳದಲ್ಲಿ ಒಂದು ಪಾಲು ನಾವು ತೆಗೆದಿರಿಸುತ್ತೇವೆ, ನೀನು ಹೇಗೆ ಈ ಮೇಕಪ್ ಮಾಯೆಯಿಂದ ಬಚಾವಾದೆ ಅನ್ನೋದೇ ಯಕ್ಷ ಪ್ರಶ್ನೆ’ ಎಂದು ಚುಡಾಯಿಸುತ್ತಿದ್ದ ಸಹೋದ್ಯೋಗಿಗಳಿಗೆ ಮುಗುಳ್ನಗೆಯೊಂದೇ ನನ್ನ ಉತ್ತರವಾಗಿತ್ತು. ಅವರು ಮತ್ತಷ್ಟು ಪೀಡಿಸಿದಾಗ, ‘ಮೇಕಪ್ ಮಾಡಿಕೊಳ್ಳುವುದೊಂದು ಕಲೆ, ಅದು ನನಗೆ ಸಿದ್ಧಿಸಿಲ್ಲ’ ಎಂದು ಮಾತನ್ನು ಬೇರೆಡೆಗೆ ಹೊರಳಿಸುತ್ತಿದ್ದೆ.

ಮಕ್ಕಳೊಂದಿಗೆ ಹೀಗೆ ಪ್ರತಿಕ್ರಿಯಿಸೋಣವೆ?

body shaming

ಸೌಜನ್ಯ : ಅಂತರ್ಜಾಲ

ಬೇರೆಯವರ ಬಾಡಿ ಶೇಮಿಂಗ್ ಇರಲಿ, ಅದನ್ನು ನಮಗೆ ನಾವೇ ಹೆಚ್ಚು ಉಗ್ರವಾಗಿ ಮಾಡಿಕೊಳ್ಳುತ್ತೇವೆ. ಮುಂದಿನ ತಿಂಗಳು ಬರುವ ಪಾರ್ಟಿಗೆ ಡಯಟ್, ಸಂಬಂಧಿಕರ ಮದುವೆಗೆ ಹೋಗಲು ತಿಂಗಳಿದೆ ಎನ್ನುವಾಗಲೇ ಚರ್ಮವನ್ನು ತಿಳಿ ಮಾಡುವ ಕ್ರೀಮುಗಳನ್ನು ಮುಖಕ್ಕೆ ಮೂರು ಸಲ ಮೆತ್ತಿಕೊಳ್ಳುವ ಪರಿಪಾಠ, ಮಗು ಹೆತ್ತ ಮೇಲೆ ‘ಗೆಟ್ ಬ್ಯಾಕ್ ಆನ್ ಟ್ರ್ಯಾಕ್’ ಸಂಕಲ್ಪ, ಎಂದುಕೊಂಡು ನಮ್ಮ ದೇಹದ ವಿವಿಧ ಭಾಗಗಳನ್ನು ಟೀಕಿಸಿಕೊಳ್ಳುತ್ತಾ ವಿಭಿನ್ನವಾಗಿರಲು ಬಯಸುತ್ತೇವೆ. ಇದು ಬಹಳ ಸೂಕ್ಷ್ಮವಾದರೂ, ನಮಗೆ ನಾವೇ ಮಾಡಿಕೊಳ್ಳುವ ಹಾನಿ ಎನ್ನುವುದನ್ನು ಮನಗಾಣದಷ್ಟು ಬಾಡಿ ಶೇಮಿಂಗ್ ನ ಅಂಧಕಾರದಲ್ಲಿ ಮುಳುಗಿಹೋಗಿರುತ್ತೇವೆ.

ಮೊದಲು ನಾವು ನಮ್ಮನ್ನು, ನಮ್ಮ ದೇಹವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬಾರದೇಕೆ? ನಮ್ಮ ಗೆಳೆಯರ ವಿವಿಧ ಗುಣಗಳನ್ನು ಒಪ್ಪಿಕೊಂಡ ಹಾಗೆ ಅವರ ಬಣ್ಣ, ಗಾತ್ರವನ್ನೂ ಅದು ಅವರ ವೈಶಿಷ್ಟ್ಯವೆಂದು ಒಪ್ಪಿಕೊಳ್ಳಬಾರದೇಕೆ? ಇದನ್ನು ಪುಟ್ಟ ಮಕ್ಕಳು ಸ್ವಾಭಾವಿಕವಾಗಿ ಮಾಡುತ್ತಾರೆ, ಈ ವಿಷಯದಲ್ಲಿ ಬಹುಶಃ ನಾವು ಅವರಿಂದ ಒಂದಷ್ಟು ಪಾಠಗಳನ್ನು ಕಲಿಯಬಾರದೇಕೆ?

ನಿಮ್ಮ ಮಗಳು ಬೇರೊಂದು ಹುಡುಗಿಯನ್ನು ತೋರಿಸಿ ‘ಅಮ್ಮ, ಆ ಆಂಟಿಯ ಗುಂಗರು ಕೂದಲು ನೋಡು’ ಎಂದು ಉದ್ಗರಿಸಿದರೆ, ‘ಶ್, ಸುಮ್ಮನಿರು’ ಎನ್ನುತ್ತಾ ಆಕೆಯ ಬಾಯಿ ಮುಚ್ಚಿಸುವುದರ ಬದಲು, ‘ಹೌದಲ್ಲ, ತಲೆ ಬಾಚಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಅನಿಸುತ್ತದೆ’ ಎಂದರೆ ಮಗಳ ಕುತೂಹಲಕ್ಕೆ ಚರ್ಚಿಸಬಹುದಾದ, ಅವಲೋಕನ ಮಾಡಬಹುದಾದ ಉತ್ತರ ಸಿಗುತ್ತದೆ.

ನಿಮ್ಮ ಮಗ ಬೇರೊಬ್ಬ ಹುಡುಗಿಯನ್ನು ತೋರಿಸಿ, ‘ಅಪ್ಪ, ನೋಡು ಆ ಆಂಟಿ ಎಷ್ಟು ದಪ್ಪಗಿದ್ದಾರೆ!’ ಎಂದರೆ ನಮ್ಮಲ್ಲಿ ನಮ್ಮಲ್ಲಿ ಹೆಚ್ಚಿನವರು, ‘ಸುಮ್ಮನಿರು, ಹಾಗೆಲ್ಲ ಹೇಳಬಾರದು’ ಎನ್ನುತ್ತಾ ಬಾಯಿ ಮುಚ್ಚಿಸುತ್ತೇವೆ. ದಪ್ಪಗಿರುವುದು ಅವಮಾನ ಎನ್ನುವುದು ನಮ್ಮ ಮನಸ್ಸಿನಲ್ಲಿ ಬೇರೂರಿರುವುದರಿಂದ ಅದು ನಾಚಿಕೆಗೇಡು ಎನ್ನುವಂತೆ ನಡೆದುಕೊಳ್ಳುತ್ತೇವೆ. ದಪ್ಪಗಿರುವುದು ಅವಮಾನವಲ್ಲವೆಂದುಕೊಂಡು, ವ್ಯಕ್ತಿಯ ಗಾತ್ರವನ್ನು ಸ್ವೀಕರಿಸಿ, ಆ ವೈವಿಧ್ಯತೆಯನ್ನು ಪ್ರೋತ್ಸಾಹಿಸಿ ನೋಡಿ. ‘ಹೌದಲ್ಲ, ಆಂಟಿ ದಪ್ಪಗಿದ್ದಾರೆ. ಅವರು ತುಂಬಾ ಬಲಶಾಲಿ, ನೋಡು ಎಷ್ಟು ಭಾರವಾದ ಬ್ಯಾಗನ್ನು ಸಲೀಸಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ!’ ಎಂದರೆ, ಕೂದಲಿನ ಹಾಗೆ ದೇಹದ ಗಾತ್ರವೂ ಜನರಲ್ಲಿರುವ ವೈವಿಧ್ಯತೆಗಳಲ್ಲೊಂದು ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ.

ನಿಮ್ಮ ಮಗ ಅಥವಾ ಮಗಳ ಬೇರೆಯವರನ್ನು ತೋರಿಸಿ ಅವರು ಕಪ್ಪಗಿದ್ದಾರೆ ಎಂದರೆ, ‘ಹೌದು, ಎಷ್ಟು ಲಕ್ಷಣವಾಗಿದ್ದಾರೆ ನೋಡು. ಬ್ಲ್ಯಾಕ್ ಈಸ್ ಬ್ಯೂಟಿಫುಲ್’ ಎಂದು ಅವರಿಗೆ ಒಳ್ಳೆಯ ಉದಾಹರಣೆ ನೀಡಿ. ಯಾರನ್ನಾದರೂ ಭೇಟಿ ಮಾಡಿದಾಗ, ಅಥವಾ ಯಾರಾದರೂ ದಾರಿಯಲ್ಲಿ ಸಿಕ್ಕಾಗ ಅಭಿನಂದಿಸುವ ನೆಪದಲ್ಲಿ ‘ವಾವ್, ಸಣ್ಣಗಾಗಿದ್ದೀರ, ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ’ ಎನ್ನುವ ಮಾತನ್ನು ಸಂಭಾಷಣೆಯಲ್ಲಿ ತರದೇ ಅವರನ್ನು ಇರುವ ಹಾಗೆಯೇ, ಒಮ್ಮೆ ಸ್ವೀಕರಿಸಿ ಪ್ರೋತ್ಸಾಹ ಕೊಟ್ಟು ನೋಡಿ.

ಬಾಡಿ ಶೇಮಿಂಗ್ ಮಾಡಿ ದಪ್ಪಗಿರುವವರು ತೂಕ ಇಳಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದೇವೆ, ಇದರಿಂದ ಅವರ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತಿದ್ದೇವೆ ಎಂದು ತಿಳಿದುಕೊಂಡಿರುವ ಜನರಿಗೇನೂ ಕಡಿಮೆಯಿಲ್ಲ. ಆದರೆ ಅವರ ಈ ಅಭಿಪ್ರಾಯದಲ್ಲೇ ಪ್ರಮುಖ ಸಮಸ್ಯೆಗಳಿವೆ ಎನ್ನುವುದನ್ನು ಅವರು ಅರ್ಥ ಮಾಡಿಕೊಂಡಿರುವುದಿಲ್ಲ. ತೂಕ ಮತ್ತು ಆರೋಗ್ಯದ ನಡುವಿನ ಸಂಬಂಧ ಜನಪ್ರಿಯ ಮಾಧ್ಯಮಗಳಲ್ಲಿ ತೋರಿಸುವ ಹಾಗೇನೂ ಇರುವುದಿಲ್ಲ. ವಾಸ್ತವವಾಗಿ ಸಂಶೋಧನೆಗಳ ಪ್ರಕಾರ ತೂಕ ಹೆಚ್ಚಾಗುವುದರೊಂದಿಗೆ ಆರೋಗ್ಯ ಹದಗೆಡುವುದಿಲ್ಲ, ಅದು ಹದಗೆಡುವುದು ದೇಹದಲ್ಲಿ ವಿಪರೀತ ಬೊಜ್ಜು ಬಂದಾಗ. ಬಾಡಿ ಶೇಮಿಂಗ್ ಒಬ್ಬ ವ್ಯಕ್ತಿಯಲ್ಲಿ ಬದಲಾವಣೆಯನ್ನು ಪ್ರೇರೇಪಿಸುವುದಕ್ಕಿಂತ ಕೀಳರಿಮೆ, ಮಾನಸಿಕ ಖಿನ್ನತೆ, ನಿರುತ್ಸಾಹ, ಮುಜುಗರಗಳನ್ನೇ ಹೆಚ್ಚಿಸುತ್ತವೆ. ವ್ಯಕ್ತಿಯೊಬ್ಬ ತೂಕವನ್ನು ಇಳಿಸಿಕೊಳ್ಳುವುದರಿಂದ, ಬಣ್ಣ ತಿಳಿಗೊಳಿಸಿಕೊಳ್ಳುವುದರಿಂದ ಆತನ ಅಥವಾ ಆಕೆಯ ಜೀವನ ಸುಧಾರಿಸುತ್ತದೆ ಎನ್ನುವ ಕಲ್ಪನೆಯಲ್ಲಿಯೇ ದೊಡ್ಡ ದೋಷವಡಗಿದೆ. ಇದಕ್ಕೆ ಕಾರಣ ಮಾಧ್ಯಮಗಳು ಸೃಷ್ಟಿಸಿರುವ ಜೀರ್ಣಿಸಿಕೊಳ್ಳಲಾಗದ ಸೌಂದರ್ಯದ ಹುಸಿ ಸ್ಟೀರಿಯೊಟೈಪ್‌ಗಳು.

ನೋಟ-ಆಧಾರಿತ ಪದಗಳಾದ ದಪ್ಪ, ಸಣಕಲು, ಕಪ್ಪು, ಬಿಳಿ, ಸುಂದರ, ಕುರೂಪಿ ಪದಗಳನ್ನು ಬದಿಗಿಟ್ಟು ಸಾಮರ್ಥ್ಯ-ಆಧಾರಿತ ಪದಗಳನ್ನು ಬಳಸಿ ನಮ್ಮ ಸುತ್ತಮುತ್ತಲಿನವರನ್ನು ಅವರು ಇರುವ ಹಾಗೆಯೇ ಒಪ್ಪಿಕೊಳ್ಳುವ ಒಂದು ಮೌಲ್ಯಯುತ ಪೀಳಿಗೆಯನ್ನು ನಾವು ತಯಾರು ಮಾಡಬಹುದು. ನಮ್ಮ ಹಾಗೂ ಬೇರೆಯವರ ನೋಟವನ್ನು ವಿಶ್ಲೇಷಿಸಲು ಮತ್ತು ನಿರ್ಣಯಿಸಲು ನಾವು ಮೀಸಲಿರಿಸುವ ಸಮಯದಲ್ಲಿ ಕೇವಲ ಅರ್ಧದಷ್ಟು ಸಮಯವನ್ನು ಅವರ ಸಾಮರ್ಥ್ಯಗಳನ್ನು ಪ್ರಶಂಸಿಸಲು ಬಳಸಿದರೆ ಬಾಡಿ ಶೇಮಿಂಗ್ ತೊಡೆದುಹಾಕುವ ನಿಟ್ಟಿನಲ್ಲಿ ನಮ್ಮ ಅಳಿಲು ಸೇವೆ ಸೇರಿಕೊಳ್ಳುತ್ತದೆ.

*

ಪರಿಚಯ: ಮಂಡ್ಯ ಜಿಲ್ಲೆ ಮದ್ದೂರು ಮೂಲದ ಚೈತ್ರಾ ಅರ್ಜುನಪುರಿ ಸದ್ಯಕ್ಕೆ ದೋಹಾ-ಕತಾರ್ ನಿವಾಸಿ. ವಿಜಯ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್ ದಿನಪತ್ರಿಕೆಗಳು, ಮತ್ತು ಕತಾರಿನ ಅಲ್ ಜಜೀರಾ ಟಿವಿ ಚಾನೆಲ್​ನಲ್ಲಿ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸಿದ್ದು, ಈಗ ಛಾಯಾಗ್ರಹಣ, ಅದರಲ್ಲೂ ನೈಟ್ ಫೋಟೋಗ್ರಫಿಯ ಹುಚ್ಚು ಹಿಡಿಸಿಕೊಂಡಿದ್ದಾರೆ. ಇವರು ತೆಗೆದ ಕೆಲವು ಚಿತ್ರಗಳು ನ್ಯಾಷನಲ್ ಜಿಯೋಗ್ರಾಫಿಕ್ ಮತ್ತಿತರ ಜಾಲತಾಣಗಳಲ್ಲಿ ಪ್ರಕಟಿತವಾಗಿವೆ. ಪುಸ್ತಕ ವಿಮರ್ಶೆ, ಕಥೆ, ಲೇಖನ ಮತ್ತು ಪ್ರವಾಸ ಕಥನ ಬರೆಯುವ ಹವ್ಯಾಸವಿದೆ. ‘ಚೈತ್ರಗಾನ’ ಕವನ ಸಂಕಲನ, ‘ಪುಸ್ತಕ ಪ್ರದಕ್ಷಿಣೆ’ ಮತ್ತು ‘ಓದುವ ವೈಭವ’ ವಿಮರ್ಶಾ ಸಂಕಲನಗಳು ಪ್ರಕಟಿತ ಪುಸ್ತಕಗಳು.

ಇದನ್ನೂ ಓದಿ : Body Shaming; ಸುಮ್ಮನಿರುವುದು ಹೇಗೆ?: ಯಾವುದನ್ನು ಜವಾಬ್ದಾರಿಯುತ ಸ್ಥಾನ ಎನ್ನುತ್ತೀಯಾ, ಅದರ ಅಳತೆಗೋಲೇನು ಎಂದು ಕೇಳಿದರು ಮಕ್ಕಳು

Summaniruvudu Hege series on Body Shaming controversial statement by Dindigul Leoni and response from writer Chaithra Arjunpuri

Published On - 3:55 pm, Sun, 4 April 21

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್