Body Shaming ; ಸುಮ್ಮನಿರುವುದು ಹೇಗೆ?: ‘ಇದು ವಿಷ್ಯುವಲ್ ಮೀಡಿಯಾ, ಹಾಡಲು ಬಂದರೆ ಸಾಲದು ನೋಡಲೂ ಚೆನ್ನಾಗಿರಬೇಕು’

‘ನನ್ನ ಸಹೋದ್ಯೋಗಿಯೊಬ್ಬರು ಕೂಡಲೇ ‘ಇಲ್ಲಇಲ್ಲ. ಒಬ್ಬಳಾದರೂ ಹುಡುಗಿ ಇರ್ಲೇಬೇಕು, ಕಸ ಹೊಡೆದು ಒಪ್ಪ ಮಾಡಿ ಆರತಿ ಎತ್ತುವುದಕ್ಕಾದರೂ ಬೇಡವೆ?’ ಎಂದರು. ಪತ್ರಿಕೆಯೊಂದರ ಉನ್ನತ ಹುದ್ದೆಯಲ್ಲಿಇದ್ದಅವರ ಮಾತು ಕಲಿಕೆ ಮತ್ತು ಅನುಭವ ಮೆಚ್ಯೂರಿಟಿ ಕೊಡುವುದೇಇಲ್ಲವೆ? ಎಂಬ ಆತಂಕವನ್ನು ಮೂಡಿಸಿತ್ತು.’ ಎನ್​. ಎಸ್​. ಶ್ರೀಧರಮೂರ್ತಿ

Body Shaming ; ಸುಮ್ಮನಿರುವುದು ಹೇಗೆ?: ‘ಇದು ವಿಷ್ಯುವಲ್ ಮೀಡಿಯಾ, ಹಾಡಲು ಬಂದರೆ ಸಾಲದು ನೋಡಲೂ ಚೆನ್ನಾಗಿರಬೇಕು’
ಮಿನುಗುತಾರೆ ಕಲ್ಪನಾ ಮತ್ತು ಲೇಖಕ ಎನ್​.ಎಸ್​. ಶ್ರೀಧರಮೂರ್ತಿ
Follow us
ಶ್ರೀದೇವಿ ಕಳಸದ
|

Updated on:Apr 10, 2021 | 12:05 PM

ಜನಪ್ರತಿನಿಧಿಗಳೇ, ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

ಹಿರಿಯ ಪತ್ರಕರ್ತ, ಲೇಖಕ ಎನ್.ಎಸ್.ಶ್ರೀಧರಮೂರ್ತಿಯವರು ಇದು ಸುಲಭಕ್ಕೆ ರಿಪೇರಿಯಾಗುವ ಸಂಗತಿಯಲ್ಲ ಅಂತ ಹೇಳುತ್ತಿರುವುದು ಯಾಕೆ?  

ನಾನು ಬಹುಶಃ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ನಮ್ಮಊರಿನಲ್ಲಿ ಒಂದು ಹಾಡಿನ ಸ್ಪರ್ಧೆ ಏರ್ಪಟ್ಟಿತ್ತು. ಅದರಲ್ಲಿ ಒಬ್ಬಳು ಕಪ್ಪುಬಣ್ಣದ ಸ್ವಲ್ಪ ಉಬ್ಬಹಲ್ಲುಇರುವ ಹುಡುಗಿ ಹಾಡಲು ಬಂದಳು. ಅವಳನ್ನು ನೋಡಿದ ಕೂಡಲೇ ಜನರೆಲ್ಲರೂ ನಗಲು ಆರಂಭಿಸಿದರು. ಆದರೆ ಅವಳು ಹಿಂಜರೆಯದೆ ಮೈಕ್ ಮುಂದೆ ನಿಂತು ಸುಶ್ರಾವ್ಯವಾಗಿ ಹಾಡಿದಳು. ನನಗೆ ಆಗ ನಿಜಕ್ಕೂ ಶಾಕ್‍ ಆಯಿತು. ನೋಡಲು ಸುಂದರವಾಗಿಲ್ಲದವಳೊಬ್ಬಳು ಚೆನ್ನಾಗಿ ಹಾಡುತ್ತಾಳೆ ಎನ್ನುವುದೇ ಆ ಕಾಲಕ್ಕೆ ನನಗೆ ಅತಾರ್ಕಿಕ ಸಂಗತಿ ಎನ್ನಿಸಿತು. ಇದಕ್ಕೆ ಕಾರಣವಾಗಿದ್ದು ಸಿನಿಮಾಗಳಲ್ಲಿ ನೋಡಲು ಸುಂದರವಾಗಿದ್ದ ನಾಯಕಿಯರೇ ಹಾಡನ್ನೂ ಹೇಳುತ್ತಿದ್ದರು ಎನ್ನುವುದನ್ನು ನಾನು ನೋಡಿದ್ದೆ. ನಾನು ಮಾತ್ರವಲ್ಲ ನನ್ನ ಸ್ನೇಹಿತರೆಲ್ಲರೂ ಕೂಡ ಸೌಂದರ್ಯ ಮತ್ತು ಗಾಯನ ಎರಡೂ ಪ್ಯಾಕೇಜ್‍ ರೀತಿ ಎಂದುಕೊಂಡಿದ್ದವು. ಮನೆಗೆ ಬಂದು ನಮ್ಮ ತಂದೆಯ ಬಳಿ ಈ ವಿಷಯವನ್ನು ಹೇಳಿದಾಗ ಅವರು ನಕ್ಕು ‘ಸಿನಿಮಾದಲ್ಲಿ ನಾಯಕಿಯರು ಹಾಡುವುದಿಲ್ಲ. ಅದಕ್ಕೆ ಹಿನ್ನೆಲೆ ಗಾಯಕಿಯರು ಇರುತ್ತಾರೆ. ಅವರ್ಯಾರು ಸುಂದರಿಯರು ಅಲ್ಲ’ ಎಂದು ವಿವರಿಸಿ ಎಸ್.ಜಾನಕಿ, ಪಿ.ಸುಶೀಲಾ ಮೊದಲಾದವರ ಚಿತ್ರಗಳನ್ನು ತೋರಿಸಿದ್ದರು. ಆದರೆ ಬಾಲ್ಯದ ನನ್ನ ಮುಗ್ದ ನಂಬಿಕೆ ಇಂದಿನ ಸತ್ಯವಾಗಿ ಬಿಟ್ಟಿರುವುದು ಮಾತ್ರ ಕಠೋರದ ಸಂಗತಿ.

ಒಂದು ಚಾನಲ್‍ನ ರಿಯಾಲಿಟಿ ಷೋ ನ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾದಾಗ ಅಲ್ಲಿ ಹಾಡಲು ಬರುವುದರ ಜೊತೆಗೆ ಅವರು ನೋಡಲೂ ಕೂಡ ಚೆನ್ನಾಗಿರಬೇಕು ಎನ್ನುವ ಅಂಶಕ್ಕೆ ಒತ್ತುಕೊಡುವುದನ್ನು ನೋಡಿದೆ. ಇದು ತಪ್ಪು ಈ ಮೂಲಕ ಕಪ್ಪು ಬಣ್ಣದ ಅಥವಾ ಸುಂದರವಾಗಿಲ್ಲದ ಗಾಯಕಿಯರಿಗೆ ನೀವು ಅನ್ಯಾಯ ಮಾಡುತ್ತೀರಿ ಎಂದರೆ ‘ಇದು ವಿಷ್ಯುವಲ್ ಮೀಡಿಯಾ ಸರ್, ಹಾಡಲು ಬಂದರೆ ಸಾಲದು ನೋಡಲೂ ಕೂಡ ತಕ್ಕಮಟ್ಟಿಗಾದರೂ ಚೆನ್ನಾಗಿರಬೇಕು’ ಎಂಬ ಸಮರ್ಥನೆ ಬಂದಿತು. ಅಷ್ಟೇ ಅಲ್ಲ ಹಾಡುವವರಿಗೂ ಸಿನಿಮಾದಲ್ಲಿಅಭಿನಯಿಸುವವರಿಗೆ ಕಡಿಮೆ ಇಲ್ಲದಷ್ಟು ಮೇಕಪ್ ಮಾಡುವುದು ಕೂಡ ಸಹಜವಾಗಿದೆ. ಹಾಡುವುದಕ್ಕೂ ಮೇಕಪ್‍ಗೂ ಏನು ಸಂಬಂಧ ಎಂಬ ಪ್ರಶ್ನೆ ಕೇಳಿದರೆ ನಾವು ಮೂರ್ಖರಾಗುತ್ತೇವೆ. ಭಾರತದಲ್ಲಿಇದುವರೆಗೆ ನಡೆದ ರಿಯಾಲಿಟಿ ಷೋ ಗಳಲ್ಲಿ ಕಪ್ಪುಬಣ್ಣ, ಉಬ್ಬ ಹಲ್ಲಿನ, ಗೂನುಬೆನ್ನಿನ ಒಬ್ಬಳೇ ಒಬ್ಬ ಗಾಯಕಿ ಗೆದ್ದಿಲ್ಲದಿರುವುದು ಕೇವಲ ಆಕಸ್ಮಿಕವಲ್ಲ ಎಂದು ಇದರಿಂದ ಮನವರಿಕೆ ಕೂಡ ಆಯಿತು.

body shaming

ಹಿರಿಯ ಹಿನ್ನೆಲೆ ಗಾಯಕಿಯರಾದ ಎಸ್​. ಜಾನಕಿ ಮತ್ತು ಪಿ. ಸುಶೀಲಾ.

ಬಾಡಿ ಶೇಮಿಂಗ್‍ ಎನ್ನುವುದು ಒಂದು ರೀತಿಯಲ್ಲಿ ಇಡೀ ಸಮಾಜವನ್ನೇ ಆವರಿಸಿರುವ ಕುರುಡುತನ. ಅದಕ್ಕೆ ಹೆಚ್ಚಾಗಿ ಬಲಿಯಾಗುವುದು ಹೆಣ್ಣುಮಕ್ಕಳೇ, ಏಕೆಂದರೆ ಇಂದಿಗೂ ಭಾರತೀಯ ಸಮಾಜದಲ್ಲಿ ಹೆಣ್ಣು ಎಂದರೆ ದೇಹವೇ. ನನ್ನ ಬಣ್ಣವೂ ಕಪ್ಪು, ಜೊತೆಗೆ ತುಟಿ ಸ್ವಲ್ಪ ಸೊಟ್ಟ ಇರುವುದೂ ಸೇರಿದಂತೆ ಕೆಲವು ಹುಟ್ಟಿನಿಂದಲೇ ನ್ಯೂನತೆಗಳಿವೆ. ಇದಕ್ಕಾಗಿ ನಾನು ಬಾಲ್ಯದಲ್ಲಿ ಸಾಕಷ್ಟು ಅವಮಾನಗಳನ್ನು ಅನುಭವಿಸಿದ್ದೇನೆ. ಇದು ನನ್ನ ಆಯ್ಕೆಯಾಗಿತ್ತೇ ಎನ್ನುವ ಪ್ರಶ್ನೆಯನ್ನೂ ಕೂಡ ಕೇಳಿ ಕೊಂಡಿದ್ದೇನೆ. ಆದರೆ ಆಗೆಲ್ಲಾ ಕಾಡುತ್ತಾ ಇದ್ದಿದ್ದು ಇದರ ಜೊತೆಗೆ ಕೊಂಡಿಯಂತೆ ಬರುತ್ತಿದ್ದ ಮಾತು ‘ಪುಣ್ಯ ನೀನು ಹೆಣ್ಣಾಗಲಿಲ್ಲ. ಆಗಿದ್ದರೆ ಖರ್ಚು ಮಾಡಲು ನಿಮ್ಮ ಅಪ್ಪ-ಅಮ್ಮ ಬಹಳ ಕಷ್ಟಪಡಬೇಕಿತ್ತು’ ಈ ಮಾತನ್ನು ಹೇಳುತ್ತಿದ್ದವರು ಬಹಳ ದೂರದವರಲ್ಲ. ತೀರಾ ಹತ್ತಿರದ ಸಂಬಂಧಿಗಳೇ. ಅಂದಿನ ದಿನಗಳಲ್ಲಿ ಇಂತಹ ಮಾತುಗಳು ಹೆಣ್ಣಿನ ಮೇಲೆ ಮಾಡುವ ಪರಿಣಾಮವನ್ನು ಕೂಡ ನಾನು ಯೋಚಿಸುತ್ತಿದ್ದೆ. ಪುರುಷರು ಹೆಣ್ಣನ್ನು ನೋಡುವ ನೋಟದಲ್ಲಿ ಗ್ರಾಹಕ ಮನೋಭಾವವಿರುದು ಎಷ್ಟೋ ಅಪಾಯಕಾರಿಯೂ ಹೆಣ್ಣುಮಕ್ಕಳು ತಮ್ಮನ್ನು ಸರಕು ಎಂದು ತಿಳಿದುಕೊಳ್ಳುವುದು ಅದಕ್ಕಿಂತಲೂ ಹೆಚ್ಚು ಅಪಾಯಕಾರಿ.

ನಾನು ಪದವಿ ತರಗತಿಯಲ್ಲಿ ಓದುವಾಗ ನಮ್ಮ ಕನ್ನಡ ಉಪನ್ಯಾಸಕರೊಬ್ಬರು, ‘ಹೆಣ್ಣು ಮದುವೆಯ ನಂತರ ಕೂಡ ಅಲಂಕಾರ ಮಾಡಿಕೊಳ್ಳುವ ಕಾರಣವೆಂದರೆ ಅವಳ ಮನಸ್ಸಿನಲ್ಲಿರುವ ರಾಧೆ ಇನ್ನೂ ಕೃಷ್ಣನನ್ನು ಹುಡುಕುತ್ತಿದ್ದಾಳೆ’ ಎಂದು ಅರ್ಥ ಎಂದಿದ್ದರು. ಒಂದು ರೀತಿಯಲ್ಲಿ ಆ ವಯಸ್ಸಿನಲ್ಲಿಯೇ ನನಗೆ ಶಾಕ್ ನೀಡಿದಂತಹ ವಿಶ್ಲೇಷಣೆ ಇದು. ತಾನು ಹೇಗೆ ಕಾಣಬೇಕು ಎನ್ನುವ ಆಯ್ಕೆ ಕೂಡ ಹೆಣ್ಣಿಗೆ ಇಲ್ಲವೆ? ಎಂದು ಆ ವಯಸ್ಸಿನಲ್ಲಿಯೇ ನನಗೆ ಅನ್ನಿಸಿತ್ತು. ಮುಂದೆ ಅದಕ್ಕಿಂತಲೂ ವಿಕೃತ ಎನ್ನಿಸಬಲ್ಲ ವಿಶ್ಲೇಷಣೆಗಳನ್ನು ಕೇಳಿದ್ದೇನೆ. ಪತ್ರಿಕೆಯೊಂದರ ಮ್ಯಾನೇಜ್‍ಮೆಂಟ್ ಭಾಗವಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಒಂದು ಸೆಕ್ಷನ್‍ನಲ್ಲಿ ಯಾರೂ ಹುಡುಗಿಯರು ಇಲ್ಲ ಎನ್ನುವ ಪ್ರಶ್ನೆ ಬಂದಿತು. ಆಗ ನನ್ನ ಸಹೋದ್ಯೋಗಿಯೊಬ್ಬರು ಕೂಡಲೇ ‘ಇಲ್ಲಇಲ್ಲ. ಒಬ್ಬಳಾದರೂ ಹುಡುಗಿ ಇರ್ಲೇಬೇಕು, ಕಸ ಹೊಡೆದು ಒಪ್ಪ ಮಾಡಿ ಆರತಿ ಎತ್ತುವುದಕ್ಕಾದರೂ ಬೇಡವೆ?’ ಎಂದರು. ಪತ್ರಿಕೆಯೊಂದರ ಉನ್ನತ ಹುದ್ದೆಯಲ್ಲಿಇದ್ದಅವರ ಮಾತು ಕಲಿಕೆ ಮತ್ತು ಅನುಭವ ಮೆಚ್ಯೂರಿಟಿ ಕೊಡುವುದೇಇಲ್ಲವೆ? ಎಂಬ ಆತಂಕವನ್ನು ಮೂಡಿಸಿತ್ತು. ಇತ್ತೀಚೆಗೆ ಸಮೀಕ್ಷೆಯೊಂದರಲ್ಲಿ ಭಾರತೀಯರಲ್ಲಿ ಹೆಚ್ಚು ಜನ ಸರ್ಚ್ ಮಾಡುವದು ಸಾಫ್ಟ್ ಪೋರ್ನ್​ ಎಂದು ಓದಿದಾಗ ಇದರ ವಿರಾಟ್ ಸ್ವರೂಪ ಅರ್ಥವಾಯಿತು.

ಮಿನುಗು ತಾರೆ ಎಂದು ಖ್ಯಾತರಾದ ಕಲ್ಪನಾ ಅವರು ಚಿತ್ರರಂಗಕ್ಕೆ ಬರಲು ಸಾಕಷ್ಟು ಹೋರಾಟ ನಡೆಸಬೇಕಾಯಿತು. ಅವರ ಧ್ವನಿ ಸರಿ ಇಲ್ಲಎಂದು ಮೊದಲು ಹೀಯಾಳಿಸಲಾಯಿತು. ಅವರ ಬೆನ್ನು ಜಾರಬಂಡೆಯಂತೆ ಇದೆ ಎಂದು ನಿರಾಕರಿಸಿದ ನಿರ್ಮಾಪಕರೂ ಇದ್ದರು. ಇವೆಲ್ಲವನ್ನೂ  ಮೀರಿ ಕಲ್ಪನಾ ಚಿತ್ರರಂಗದಲ್ಲಿ ನಿಂತರು. ಆದರೆ ಅವರ ಕುರಿತು ಹುಟ್ಟಿಕೊಂಡ ಗಾಸಿಪ್‍ಗಳಿಗೆ ಕೊನೆ ಮೊದಲಿಲ್ಲ. ಅವುಗಳಲ್ಲಿ ಕಲ್ಪನಾ ಶೂಟಿಂಗ್‍ಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ ಎನ್ನುವುದೂ ಕೂಡ ಒಂದು. ಅವರ ಅಭಿನಯದ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಆರ್.ಎನ್.ಜಯಗೋಪಾಲ್‍ ಅವರು ಹೇಳುವುದೇ ಬೇರೆ ಬೆಳಗಿನ ಹೊತ್ತುಅವರ ಕಾಲು ಊದಿ ಕೊಳ್ಳುತ್ತಿತ್ತು. ಹೀಗಾಗಿ ಅದನ್ನು ಬಿಸಿನೀರಿನಲ್ಲಿಇಟ್ಟುಕೊಂಡು ಬರಬೇಕಿತ್ತು. ಬೆಳಿಗ್ಗೆ 9.30ಗೆ ಶಾಟ್‍ ಇಡಿ ಎಂದು ವಿನಂತಿಸುತ್ತಿದ್ದರು. ಈ ಸಮಯವನ್ನು ಅವರು ಎಂದಿಗೂ ತಪ್ಪಿಸಿದ್ದಿಲ್ಲ. ಸಂಜೆ ಕೂಡ ಆರುಗಂಟೆಯ ಮೇಲೆ ಶೂಟಿಂಗ್‍ ಎಂದರೆ ಅನ್ಯಮನಸ್ಕರಾಗಿ ಬಿಡುತ್ತಿದ್ದರು. ಸಾಮಾನ್ಯವಾಗಿ ಅವರು ನೈಟ್ ಶೂಟಿಂಗ್‍ ಎಂದರೆ ಒಪ್ಪುತ್ತಿರಲಿಲ್ಲ. ‘ನಾ ಮೆಚ್ಚಿದ ಹುಡುಗ’ ಚಿತ್ರದಲ್ಲಿ ‘ಬೆಳದಿಂಗಳಿನಾ ನೊರೆ ಹಾಲು’ ಗೀತೆಯನ್ನು ವಿಧಾನಸೌಧದ ಲೈಟಿಂಗ್‍ನಲ್ಲಿ ಶೂಟ್ ಮಾಡಲು ನಿರ್ಧರಿಸಿದರು. ಆಗ ಅದು ಹೊಸದು. ಕಲ್ಪನಾ ಅವರಿಗೆ ‘ಇವತ್ತು ಡೇ ಶೂಟಿಂಗ್‍ ಇರುವುದಿಲ್ಲ, ನೀವು ರೆಸ್ಟ್ ಮಾಡಿ, ನೈಟ್ ಶೂಟಿಂಗ್ ಮಾಡಬೇಕು’ ಎಂದಾಗ ಅವರು ಒಪ್ಪಿಕೊಂಡು ಸಹಕರಿಸಿ ಆ ಗೀತೆ ಅದ್ಭುತವಾಗಿ ಮೂಡಿ ಬರಲು ಕಾರಣರಾದರು. ಆದರೆ ಕಲ್ಪನಾ ಅವರು ಬದುಕಿರುವವರೆಗೂ ಅವರನ್ನುಇಂತಹ ಗಾಸಿಪ್‍ಗಳು ಕಾಡುತ್ತಲೇ ಹೋದವು. ಕೊನೆಗೆ ಅವರು ಸತ್ತ ನಂತರ ಕೂಡ ವಿಕೃತ ಮನಸ್ಸುಗಳ ಕಾಟ ಬಿಡಲಿಲ್ಲ ಎನ್ನುವುದು ನಿಜವಾದ ದುರಂತ. ಅವರ ಕುರಿತು ಬಂದ ವಿಕೃತ ಪುಸ್ತಕಗಳು, ಟಿ.ವಿ.ಸರಣಿ ಎಲ್ಲವನ್ನೂ ನೋಡಿ ಒಮ್ಮೆ ನನಗೆ ರೇವತಿ ಕಲ್ಯಾಣ್‍ಕುಮಾರ್ ಹೇಳಿದ್ದರು ‘ಸತ್ತರೂ ಅವಳನ್ನು ಬಿಡುತ್ತಿಲ್ಲವಲ್ಲಇವರು ನಿಜವಾದ ಪಿಶಾಚಿಗಳು’.

body shaming

‘ಬಿಳಿ ಹೆಂಡ್ತಿ’ ಸಿನೆಮಾದಲ್ಲಿ ಆರತಿ ಮತ್ತು ಮಾರ್ಗರೇಟ್ ಥಾಮ್ಸನ್

ಆರತಿಯವರನ್ನು ಬಣ್ಣ ಕಪ್ಪು ಎನ್ನುವ ಕಾರಣದಿಂದ ಚಿತ್ರರಂಗ ಒಪ್ಪಿಕೊಳ್ಳಲು ಹಿಂಜರೆದಿತ್ತು. ಅವರು ಎಕ್ಸ್​ಪೋಸ್​ಗೆ ಕೂಡ ಒಪ್ಪದೆ ತಮ್ಮ ಸ್ವಂತಿಕೆಯನ್ನು ಉಳಿಸಿ ಕೊಂಡೇ ಚಿತ್ರರಂಗದಲ್ಲಿ ಬೆಳೆದರು. ಒಮ್ಮೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ‘ರಾಜಾ ನನ್ನ ರಾಜಾ’ ಚಿತ್ರದ ಚಿತ್ರೀಕರಣ. ಜಲಪಾತದ ಬ್ಯಾಕ್ ಪ್ರೊಜೆಕ್ಷನ್‍ ತಂತ್ರದಲ್ಲಿ ನಡೆಯುತ್ತಿದ್ದ ಶೂಟಿಂಗ್. ಕೃತಕ ಮಳೆಯ ವ್ಯವಸ್ಥೆಯೂ ಆಗಿತ್ತು. ಆಗ ಚಳಿಗಾಲವಾದ್ದರಿಂದ ಸುರಿಯುವ ನೀರಿಗೆ ಮೈಯೊಡ್ಡಿದ ಕಲಾವಿದರು ನಡುಗುತ್ತಿದ್ದರು. ಆಮೇಲೆ ಟ್ಯಾಂಕಿನ ಕೆಳಗೆ ಸ್ಟೌವ್‍ಗಳನ್ನು ಇಟ್ಟು ನೀರು ಕಾಯಿಸಲಾಗುತ್ತಿತ್ತು. ಆಗ ನೀರು ಸುರಿದು ಸ್ಟೌವ್‍ ಆರಿ ಹೋಗುತ್ತಿತ್ತು. ಒಟ್ಟಿನಲ್ಲಿ ನಿರ್ಮಾಪಕರ ಪಾಡು ಹೇಳತೀರದು. ಅದೇ ಪ್ಲೋರಿನಲ್ಲಿ ‘ಬಿಳಿ ಹೆಂಡ್ತಿ’ ಚಿತ್ರದ ಸೆಟ್‍ ರೆಡಿಯಾಗುತ್ತಿತ್ತು. ಅದಕ್ಕಾಗಿ ಬಂದಿದ್ದ ಪುಟ್ಟಣ್ಣ ಈ ಸೆಟ್‍ಗೆ ಕೂಡ ಬಂದರು. ಆರತಿಯವರ ಸ್ಥಿತಿಯನ್ನು ನೋಡಿ ಕೆಂಡವಾದರು. ಆರತಿಯವರನ್ನು ಹೊರಗೆ ಕರೆದುಕೊಂಡು ಹೋಗಿ ಬಾಯಿಗೆ ಬಂದಂತೆ ಬೈದರು. ಅವರು ಬೈದ ಅಂಶಗಳಲ್ಲಿ ಒಂದು ‘ನೀನು ಕಪ್ಪಾಗಿದ್ದಿ ಎನ್ನುವ ಕಾರಣಕ್ಕೆ ಇವರು ಹೀಗೆ ಎಕ್ಸಪೋಸ್ ಮಾಡ್ತಾ ಇದ್ದಾರೆ.’ ಈ ಘಟನೆ ನಡೆದ ನಂತರವೇ ಆರತಿ ಮತ್ತು ಪುಟ್ಟಣ್ಣ ಮದುವೆ ಆಗಿದ್ದು ಎನ್ನುವುದು ಒಂದು ಚಾರಿತ್ರಿಕ ಸತ್ಯವಾದರೆ, ಆರತಿ ಮತ್ತು ರಾಜ್‍ಕುಮಾರ್ ಅವರ ಯಶಸ್ವಿ ಕಾಂಬಿನೇಷನ್ ಕೊನೆಗೊಳ್ಳಲು ಈ ಘಟನೆ ಕಾರಣವಾಯಿತು ಎನ್ನುವುದು ಇನ್ನೊಂದು ಚಾರಿತ್ರಿಕ ಸತ್ಯ. ಅಷ್ಟಕ್ಕೂ ಇಷ್ಟೆಲ್ಲಾ ವಿವಾದಕ್ಕೆ ಕಾರಣವಾದ ‘ತನುವು ಮನವು ಇಂದು ನಿಂದಾಗಿದೆ’ ಹಾಡನ್ನು ನಾನು ಮತ್ತೆ ಮತ್ತೆ ನೋಡಿದ್ದೇನೆ. ಅದರಲ್ಲಿಎಕ್ಸಪೋಸ್‍ ಎನ್ನುವುದು ನನಗಂತೂ ಕಂಡಿಲ್ಲ.

ನನ್ನ ಕಾಲೇಜ್ ಸಹಪಾಠಿಗಳೆಲ್ಲರೂ ಇತ್ತೀಚೆಗೆ ಒಂದು ವಾಟ್ಸಪ್‍ ಗ್ರೂಪ್ ಮಾಡಿಕೊಂಡಿದ್ದಾರೆ. ಅವರಲ್ಲಿ ಚರ್ಚೆಗಳಲ್ಲಿ ನನಗೆ ಆತಂಕ ಹುಟ್ಟಿಸಿರುವುದು ಇನ್ನೂ ಬಾಡಿ ಶೇಮಿಂಗ್‍ ಕಾಲೇಜ್ ಬಿಟ್ಟು ಮೂರು ದಶಕಗಳಾದರೂ ಅವರ ಭಾಷೆಯಲ್ಲಿ ಉಳಿದುಕೊಂಡಿದೆ ಎನ್ನುವುದು. ಅಷ್ಟೇ ಅಲ್ಲ ಈ ಗುಂಪಿನಲ್ಲಿನ ಹುಡುಗಿಯರೂ ಕೂಡ ಅದನ್ನು ಒಪ್ಪಿಕೊಂಡಿದ್ದಾರೆ ಎನ್ನುವುದು. ಇನ್ನೂಕಠೋರ ವಾಸ್ತವ ಎಂದರೆ ಈ ಗುಂಪಿನಲ್ಲಿನ ಹಲವರ ಮಕ್ಕಳ ಮದುವೆಯಾಗಿದೆ ಅಥವಾ ಮಕ್ಕಳು ಮದುವೆಗೆ ಬಂದಿದ್ದಾರೆ. ಏಕೋ ಇದು ಸುಲಭಕ್ಕೆರಿಪೇರಿಯಾಗುವ ಸಮಸ್ಯೆಯರೀತಿ ನನಗೆ ಅನ್ನಿಸುತ್ತಿಲ್ಲ.

ಇದನ್ನೂ ಓದಿ : Body Shaming; ಸುಮ್ಮನಿರುವುದು ಹೇಗೆ?: ಯಾವುದನ್ನು ಜವಾಬ್ದಾರಿಯುತ ಸ್ಥಾನ ಎನ್ನುತ್ತೀಯಾ, ಅದರ ಅಳತೆಗೋಲೇನು ಎಂದು ಕೇಳಿದರು ಮಕ್ಕಳು

Summaniruvudu Hege series on Body Shaming controversial statement by Dindigul Leoni and response from writer NS Sreedharmurthy

Published On - 12:05 pm, Sat, 10 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ