AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Siblings Day 2021: ಒಡಹುಟ್ಟಿದವರಿಗೊಂದು ದಿನ.. ಇನ್ನೂ ವಿಶ್​ ಮಾಡಿಲ್ಲ ಅಂದ್ರೆ ಕೇಳಿ ಮಾಡಿಸ್ಕೊಳ್ಳಿ!

ನಿಮ್ಮ ಒಡಹುಟ್ಟಿದವರು ಇಂದು ನಿಮಗಿನ್ನೂ ಶುಭಾಶಯ ತಿಳಿಸಿಲ್ಲವೆಂದಾದಲ್ಲಿ ಒಂದು ಜಗಳ ತೆಗೆದು ಆಮೇಲೆ ವಿಶ್​ ಮಾಡಿಬಿಡಿ. ಹ್ಯಾಪಿ ಸಿಬ್ಲಿಂಗ್ಸ್​ ಡೇ..!

Siblings Day 2021: ಒಡಹುಟ್ಟಿದವರಿಗೊಂದು ದಿನ.. ಇನ್ನೂ ವಿಶ್​ ಮಾಡಿಲ್ಲ ಅಂದ್ರೆ ಕೇಳಿ ಮಾಡಿಸ್ಕೊಳ್ಳಿ!
Sibling's Day 2021
Follow us
Skanda
|

Updated on:Apr 10, 2021 | 12:10 PM

ವರ್ಷದ 365 ದಿನಗಳಿಗೂ ಒಂದಲ್ಲಾ ಒಂದು ವಿಶೇಷತೆ ಇರುತ್ತದೆ. ಅಪ್ಪನ ದಿನ, ಅಮ್ಮನ ದಿನ, ಶಿಕ್ಷಕರ ದಿನ, ಸ್ನೇಹಿತರ ದಿನ, ಪ್ರೇಮಿಗಳ ದಿನ, ಒಬ್ಬಂಟಿಗಳ ದಿನ.. ಹೀಗೆ ಬದುಕಿನಲ್ಲಿ ಬಂದು ಹೋಗಬಹುದಾದ ಪಾತ್ರಗಳೆಲ್ಲವಕ್ಕೂ ಒಂದೊಂದು ದಿನ ಇದ್ದೇ ಇರುತ್ತದೆ. ಅದೇ ರೀತಿ ನಮ್ಮ ಒಡಹುಟ್ಟಿದವರಿಗಾಗಿಯೂ ಒಂದು ದಿನ ಇದೆ. ಏಪ್ರಿಲ್ 10 ರಂದು ಒಡಹುಟ್ಟಿದವರ ದಿನವನ್ನು ಆಚರಿಸಲಾಗುತ್ತದೆ. ಒಡಹುಟ್ಟು ಎನ್ನುವುದು ಬದುಕಿನಲ್ಲಿ ಸಿಗಬಹುದಾದ ಒಂದು ಅತ್ಯಮೂಲ್ಯ ಉಡುಗೊರೆ. ರಕ್ತ ಹಂಚಿಕೊಂಡು ಹುಟ್ಟುವ ಸಹೋದರ, ಸಹೋದರಿ ಜೊತೆಗೆ ತನ್ನಿಂತಾನೇ ಒಂದು ಪರಮಾಪ್ತ ಬಾಂಧವ್ಯ ಹುಟ್ಟಿಕೊಂಡು ಬಿಡುತ್ತದೆ. ಅದನ್ನು ಎಲ್ಲಾ ಸಂದರ್ಭದಲ್ಲೂ ಬಾಯಿಬಿಟ್ಟು ಹೇಳಿಕೊಳ್ಳದೇ ಇದ್ದರೂ ಒಡಹುಟ್ಟಿದ ಜೀವ ವಿಶೇಷವಾಗಿಯೇ ಇರುತ್ತದೆ.

ಒಂದುವೇಳೆ ಮನೆಯಲ್ಲಿ ನೀವೇ ದೊಡ್ಡವರಾಗಿದ್ದು ನಿಮಗೆ ತಮ್ಮನೋ, ತಂಗಿಯೋ ಇದ್ದರೆ ನೀವೊಂದು ರೀತಿಯಲ್ಲಿ ಜವಾಬ್ದಾರಿಯುತ ಪ್ರಜೆಯಾಗಿಬಿಡುತ್ತೀರಿ. ಅವರು ನಿಮಗಿಂತ ಚಿಕ್ಕವರೆನ್ನುವ ಏಕೈಕ ಕಾರಣಕ್ಕೆ ಹೆಚ್ಚು ಪ್ರೀತಿಯನ್ನೂ, ಸವಲತ್ತನ್ನೂ ಪಡೆಯುತ್ತಾ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಅದು ಒಮ್ಮೊಮ್ಮೆ ನಿಮಗೆ ಸಿಟ್ಟು ತರಿಸಬಹುದಾದರೂ ನಿಮಗೆ ಗೊತ್ತಿಲ್ಲದಂತೆಯೇ ನೀವೂ ಅವರನ್ನು ಅತಿ ಹೆಚ್ಚು ಮುದ್ದುಗರೆಯುತ್ತಾ ಪ್ರೀತಿಸುತ್ತಲೇ ಇರುತ್ತೀರಿ. ಒಂದೇ ಶಾಲೆಯಲ್ಲಿ ಓದಿದ್ದರಂತೂ ಅಣ್ಣ ಅಥವಾ ಅಕ್ಕನಾಗಿರುವವರು ತಮ್ಮ ಒಡಹುಟ್ಟಿದವರನ್ನು ಪೋಷಿಸುವ ಜವಾಬ್ದಾರಿಯನ್ನೇ ಹೊತ್ತುಕೊಂಡಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಒಡಹುಟ್ಟಿದವರು ಪರಸ್ಪರ ಬೆರೆಯುವುದಕ್ಕೂ ಹಿಂದಿನ ಕಾಲದವರು ತಮ್ಮ ಅಣ್ಣ, ತಮ್ಮ, ಅಕ್ಕ, ತಂಗಿಯೊಂದಿಗೆ ಬೆರೆಯುತ್ತಾ ಇದ್ದಿದ್ದಕ್ಕೂ ಅಜಗಜಾಂತರವಿದೆ. ಹಿಂದೆ ಮನೆಯಲ್ಲಿ ಹತ್ತು ಹದಿನೈದು ಮಕ್ಕಳು ಇರುತ್ತಿದ್ದುದರಿಂದ ಹಿರಿಯರಿಗೂ ಕಿರಿಯರಿಗೂ ಹದಿನೈದು ಇಪ್ಪತ್ತು ವರ್ಷಗಳಷ್ಟು ಅಂತರವಿರುತ್ತಿತ್ತು. ಹೀಗಾಗಿ ಅಣ್ಣ ಅಥವಾ ಅಕ್ಕನೆಂದರೆ ಒಂದಷ್ಟು ಭಯವೂ, ಗೌರವವೂ, ಹಿಂಜರಿಕೆಯೂ ಕೂಡಿಕೊಂಡಂತಹ ಭಾವವೊಂದು ಆವರಿಸಿಕೊಂಡು ಅವರ ಒಡನಾಟಕ್ಕೆ ಸಹಜವಾಗಿಯೇ ಅಡ್ಡಿಯಾಗುತ್ತಿತ್ತು.

ಆದರೆ, ಈಗಿನ ಕಾಲದಲ್ಲಿ ಇದ್ದರೆ ಒಬ್ಬರೇ ಇಲ್ಲವೆಂದರೆ ಜೊತೆಯಲ್ಲೊಬ್ಬರು ಅಂತಾಗಿರುವ ಕಾರಣ ಒಡಹುಟ್ಟಿದವರ ಜೊತೆ ಅತಿ ಹೆಚ್ಚು ಬೆರೆಯಲು, ಆಪ್ತರಾಗಿ ಎಲ್ಲವನ್ನೂ ಹಂಚಿಕೊಳ್ಳಲು ಸಾಧ್ಯವಾಗುತ್ತಿದೆ. ಹಾಗಂತ ಒಡಹುಟ್ಟಿದವರೊಂದಿಗೆ ಜಗಳ, ಕಿತ್ತಾಟ, ಮುನಿಸು ಇರುವುದಿಲ್ಲ ಎಂದೇನಲ್ಲ. ಅದು ಉಸಿರಾಟ ಹೇಗೆ ಸಹಜವೋ ಅಷ್ಟೇ ಸಹಜವಾದ ಒಂದು ಪ್ರಕ್ರಿಯೆ. ಯಾವುದೋ ಒಂದು ಸಣ್ಣ ವಿಚಾರವನ್ನಾದರೂ ಹಿಡಿದು ಕಿತ್ತಾಡಲೇ ಬೇಕು. ಆಗ ಮಾತ್ರ ಒಡಹುಟ್ಟು ಸಾರ್ಥಕ. ಅಂದಹಾಗೆ, ನಿಮ್ಮ ಒಡಹುಟ್ಟಿದವರು ಇಂದು ನಿಮಗಿನ್ನೂ ಶುಭಾಶಯ ತಿಳಿಸಿಲ್ಲವೆಂದಾದಲ್ಲಿ ಒಂದು ಜಗಳ ತೆಗೆದು ಆಮೇಲೆ ವಿಶ್​ ಮಾಡಿಬಿಡಿ. ಹ್ಯಾಪಿ ಸಿಬ್ಲಿಂಗ್ಸ್​ ಡೇ..!

Published On - 12:09 pm, Sat, 10 April 21