Orange Signal : ‘ಅವರು ತುಂಬಾ ಕಪ್ಪಗಿದ್ದಾರೆ, ಚೆನ್ನಾಗಿ ಕೆಲಸ ಮಾಡುತ್ತಾರೋ ಇಲ್ಲವೋ’

Color Discrimination : ‘ವ್ಯಕ್ತಿಯೊಬ್ಬನನ್ನು ಕಂಡ ತಕ್ಷಣ ಆತನ ಬಣ್ಣದ ಆಧಾರದ ಮೇಲೆ ಆತ ಯಾವ ಜಾತಿ ಇರಬಹುದೆಂದು ಊಹಿಸಲು ಶುರುಮಾಡುತ್ತೇವೆ. ಬಣ್ಣದ ಮೇಲೆ ಆತನ ಸಾಮಾಜಿಕ ಸ್ತರ, “ಸಂಸ್ಕಾರ”, ಅಂತಸ್ತು, ಶ್ರೀಮಂತಿಕೆ ಇವುಗಳನ್ನೆಲ್ಲ ಮನಸ್ಸಲ್ಲೇ ಲೆಕ್ಕ ಹಾಕುತ್ತೇವೆ. ಅದಕ್ಕೆ ತಕ್ಕನಾದ ಗೌರವ, ಬೆಲೆಯನ್ನು ಆತನಿಗೆ ನೀಡುತ್ತೇವೆ. ಇದು ಎಂಥ ನಾಚಿಕೆಗೇಡಿನ ಪ್ರಕ್ರಿಯೆ ಎಂಬುದು ನಮಗೆ ಅರಿವಾಗುವುದೇ ಇಲ್ಲ.’ ಸೌರಭಾ ಕಾರಿಂಜೆ

Orange Signal : ‘ಅವರು ತುಂಬಾ ಕಪ್ಪಗಿದ್ದಾರೆ, ಚೆನ್ನಾಗಿ ಕೆಲಸ ಮಾಡುತ್ತಾರೋ ಇಲ್ಲವೋ’
Graphics : thinkquest.org
Follow us
ಶ್ರೀದೇವಿ ಕಳಸದ
|

Updated on:Oct 16, 2021 | 2:38 PM

Orange Signal : ಪ್ರಪಂಚದ ಒಂದು ಅಧ್ಯಯನದ ಪ್ರಕಾರ ‘ಬೆಳ್ಳಗಾಗಿಸುವ ಉದ್ಯಮ’ 2024ರ ಹೊತ್ತಿಗೆ 31.2 ಬಿಲಿಯನ್ ಡಾಲರ್​ಗಳು ಆಗುವ ನಿರೀಕ್ಷೆಯಿದೆ. ಇದರ ಸಿಂಹಪಾಲು, ಅರ್ಧಕ್ಕೂ ಹೆಚ್ಚು, ಭಾರತವನ್ನು ಒಳಗೊಂಡ ಏಷಿಯಾ ಪೆಸಿಫಿಕ್‍ ಪ್ರಾಂತ್ಯದ್ದು. ಈ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಉಂಟು ಮಾಡುವ ಅಡ್ಡಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಆದರೆ ‘ಸಮಾಜದ ಮಾನದಂಡ’ಗಳಿಗೆ ಅನುಗುಣವಾಗಿ ಒಳಗೊಳ್ಳುವ ಹಪಾಹಪಿಯಲ್ಲಿರುವ ಮಂದಿಗೆ ಅವೆಲ್ಲ ಗಣನೆಗೇ ಬರುತ್ತಿಲ್ಲ. ಜೊತೆಗೆ ಕಪ್ಪು ಬಣ್ಣ ಹೊಂದಿರುವ ಅನೇಕರಿಗೆ ತಾವು ಬೆಳ್ಳಗಾಗಿ ತಮ್ಮ ಬದುಕು ಒಳ್ಳೆಯದಾದರೆ ಸಾಕು ಎಂಬ ಭ್ರಮೆ ಇದ್ದಾಗ, ಈ ಅಧ್ಯಯನಗಳನ್ನು ತಿರುಗಿ ನೋಡುವವರಾರು? ಸೌರಭಾ ಕಾರಿಂಜೆ

* (ಕಂತು – 2)

ಮಗುವನ್ನು ನೋಡಿಕೊಳ್ಳಲು ಒಬ್ಬ ಸಹಾಯಕಿ ಬೇಕಿತ್ತು. ಒಬ್ಬಾಕೆಯ ನಂಬರ್ ಸಿಕ್ಕಿತು. ವಿಚಾರಿಸೋಣ ಅಂತ ಕರೆ ಮಾಡಿದೆ. ಕೆಲಸದ ವ್ಯಾಪ್ತಿ, ಸಮಯ, ಸಂಬಳ ಎಲ್ಲವನ್ನು ಮಾತನಾಡಿದ ಮೇಲೆ ಆಕೆ,

“ನಾನು ಸ್ವಲ್ಪ ಕಪ್ಪಗಿದ್ದೇನೆ, ನಿಮಗೆ ಆಗಬಹುದು ಅಂದರೆ ಮಾತ್ರ ಮುಖತಃ ಮಾತಾಡಲು ಬರುತ್ತೇನೆ” ನನಗೆ ಆಘಾತವಾಯಿತು.

“ನಿಮ್ಮ ಬಣ್ಣಕ್ಕೂ ಕೆಲಸಕ್ಕೂ ಏನಮ್ಮ ಸಂಬಂಧ?” ಕೇಳಿದೆ.

“ಹಾಗಲ್ಲ ಮೇಡಂ, ಕೆಲವರು ಕಪ್ಪಗಿರುವ ಕಾರಣ ಕೆಲಸ ನೀಡುವುದಿಲ್ಲ, ಅದಕ್ಕೆ ಮುಂಚೆಯೇ ತಿಳಿಸಿದೆ.”

ಆಗ ನನಗೆ ಇನ್ನೊಂದು ಪ್ರಕರಣ ನೆನಪಾಯಿತು. ನನ್ನದೇ ವಯಸ್ಸಿನ ನಮ್ಮ ನೆರೆಯಾಕೆ ಒಬ್ಬರು ಕೇಳಿದ್ದರು,

“ಮನೆಕೆಲಸಕ್ಕೆ ಯಾರಾದರೂ ಬೇಕಿತ್ತು, ಗೊತ್ತಿದ್ರೆ ಹೇಳಿ.”

“ನಮ್ಮ ಮನೆಗೆ ಬರುವವರನ್ನೇ ಕೇಳಿ ನೋಡಲೇ?” ಅಂದಿದ್ದೆ.

ಸ್ವಲ್ಪ ಹಿಂದೆ ಮುಂದೆ ನೋಡಿ ಅವರು ಉತ್ತರಿಸಿದರು, “ಅಲ್ಲ… ನಿಮಗೆ ಆಗಬಹುದು ಅಂದರೆ ನನಗೂ ಆಗಬಹುದು, ಆದರೂ ಅವರು ತುಂಬಾ ಕಪ್ಪಗಿದ್ದಾರೆ, ಕೆಲಸ ಚೆನ್ನಾಗಿ ಮಾಡುತ್ತಾರೋ ಇಲ್ಲವೋ?” ನಾನು ಅವಾಕ್ಕಾದೆ. ಮುಂದುವರೆಸಿದ ಅವರು,

“ಈ ದಕ್ಷಿಣದವರು ಕಪ್ಪಗಿದ್ದು ಗಲೀಜಾಗಿರ್ತಾರೆ, ನಮಗೆ ಸರಿಹೊಂದೋದೇ ಕಷ್ಟ”

“ನಾನೂ ದಕ್ಷಿಣದವಳು” ನಗುತ್ತಾ ನೆನಪಿಸಿದೆ.

“ಹೇ ಹೇ, ನೀವು ಬೇರೆ” ಅಂದರಾಕೆ.

ನಿಜ ಹೇಳಬೇಕೆಂದರೆ ಈ ನನ್ನ ನೆರೆಯಾಕೆ ನನ್ನ ಮನೆ ಕೆಲಸದಾಕೆಗಿಂತಲೂ ಕಪ್ಪಗಿದ್ದರು!

ನಮ್ಮ ಮನೆಗೆ ಬರುವ ಸಂಬಂಧಿಕರಲ್ಲಿ ಅನೇಕರಿಗೆ ನನ್ನ ಅಡುಗೆಯಾಕೆಯ ಬಣ್ಣ ನೋಡಿದ ನಂತರ ಅವರ ಜಾತಿಯ ಬಗ್ಗೆ ಅತಿಯಾದ ಕುತೂಹಲ ಮೂಡುತ್ತದೆ. ಕೇಳಿದವರೆಲ್ಲರ ಬಳಿ ನನ್ನದು ಒಂದೇ ಉತ್ತರ. “ನಾನು ಅವರ ಜಾತಿ ಕೇಳಿಲ್ಲ ಮತ್ತು ನನ್ನ ಜಾತಿಯನ್ನೂ ಹೇಳಿಲ್ಲ.”

ನನ್ನ ಬಾಯಿಯಿಂದ ಏನೂ ಬರುವುದಿಲ್ಲ ಅಂತ ಗೊತ್ತಾದಾಗ ಅವರನ್ನು ಅವರೇ ಸಮಾಧಾನ ಮಾಡಿಕೊಳ್ಳುತ್ತಾರೆ, “ಅಷ್ಟೇನೂ ಕಪ್ಪಗಿಲ್ಲ ಅವಳು, ತೀರಾ ಕೆಳ ಜಾತಿಯವಳಿರಲಿಕ್ಕಿಲ್ಲ” ನಾನು ಹೆಗಲು ಹಾರಿಸಿ ಜಾಗ ಖಾಲಿ ಮಾಡುತ್ತೇನೆ.

ಶ್ರೇಷ್ಠ ಎಂಬುದು ಬಣ್ಣದೊಡನೆ ಹೊಂದಿರುವ ಈ ಆರೋಪಿತ ಸಂಬಂಧ ನನಗೆ ರೇಜಿಗೆ ಹುಟ್ಟಿಸುತ್ತದೆ. ನಾನು ಚಿಕ್ಕವಳಿದ್ದಾಗ ಬಿಸಿಲಲ್ಲೇ ಆಡಿ ಆಡಿ ಕಪ್ಪಗಿದ್ದೆ. “ಎಷ್ಟು ಚೆನ್ನಾಗಿದ್ದಾಳೆ ಹುಡುಗಿ, ಬಣ್ಣ ಒಂದಿದ್ದಿದ್ದರೆ… ಛೇ!” ಅನ್ನುವುದು ಅನೇಕರ ಬೇಸರ. ಬೆಳೆದು ಬೆಂಗಳೂರಿಗೆ ಬಂದ ಮೇಲೆ ಕಂಡವರೆಲ್ಲ “ಆಹ್! ಈಗ ಸ್ವಲ್ಪ ಸರಿಹೋದೆ ನೀನು” ಅನ್ನುವವರು.

ನನ್ನ ಮಗುವನ್ನು ನೋಡಲು ಬಂದವರೊಬ್ಬರು “ಓಹ್‍, ಮಗುವಿಗೆ ತಂದೆಯ ಬಣ್ಣ ಬಂದಿದೆ, ಪುಣ್ಯಕ್ಕೆ” ಅಂದಿದ್ದರು!

ಇಂತಿಪ್ಪ ಕಂದು ಬಣ್ಣದ ನಾನು ಒಂದು ಸ್ನೇಹಿತರೊಬ್ಬರ ಮದುವೆಗೆ ತಮಿಳುನಾಡಿನ ಒಂದು ಹಳ್ಳಿಗೆ ಹೋದಾಗ ನನಗೆ ರಾಜೋಪಚಾರ. ಮದುಮಗಳನ್ನು ಪಕ್ಕಕ್ಕಿಟ್ಟು ನನ್ನ ಹಿಂದೆ ಮುಂದೆ ಓಡಾಡುವ ಮಂದಿ!  ಹಳ್ಳಿ ಜನ, ಏನೋ ದೂರದಿಂದ ಬಂದ ಸ್ನೇಹಿತೆ ನಾನು ಅಂತ ಎಲ್ಲ ಪ್ರೀತಿ ತೋರಿಸುತ್ತಿದ್ದಾರೆ ಅಂದುಕೊಂಡೆ ನಾನು ಮೊದಲಿಗೆ. ಆಮೇಲೆ ಗೊತ್ತಾಗಿದ್ದು ಅವರ ಮಟ್ಟಿಗೆ ನಾನು ಬಿಳಿ ಹುಡುಗಿ ಅನ್ನುವ ಕಾರಣಕ್ಕೆ ಈ ಉಪಚಾರ ಅಂತ! ಬಾಲ್ಯದ ಕಮೆಂಟುಗಳೆಲ್ಲ ನೆನಪಾಗಿ ನಗು ಉಕ್ಕಿತ್ತು. ಅವರಿಗೆ ಹೇಳಿಯೂ ಬಿಟ್ಟೆ, ನಮ್ಮೂರಲ್ಲಿ ನಾನೇ ಕಪ್ಪು ಅಂತ.

ನಮ್ಮ ಮನೆಕೆಲಸದವರ ಮಗಳೊಬ್ಬಳು ಬೆಳ್ಳಗೆ ಇದ್ದಳು. “ಆ… ಜಾತಿಯಲ್ಲಿ ಹುಟ್ಟಿದರೂ ಇಷ್ಟು ಬೆಳ್ಳಗೆ ಇದ್ದಾಳೆ!” ಎಂದು ಮಂದಿ ಅಸೂಯೆಯಲ್ಲಿ ಮೂಗುಮುರಿದದ್ದನ್ನು ನಾನು ಬಹಳ ಕೇಳಿದ್ದೇನೆ.

ಅದೆಷ್ಟೋ ಹೆಣ್ಣುಮಕ್ಕಳಿಗೆ ಕಪ್ಪಗಿರುವ ಕಾರಣ ಮದುವೆ ಕಷ್ಟದ ವಿಷಯ. ವೈವಾಹಿಕ ಜಾಹೀರಾತುಗಳಲ್ಲಿ ಹುಡುಗಿ ಬೆಳ್ಳಗಿರಬೇಕು ಎಂಬ ಶರತ್ತು. ಹುಡುಗನ ಮನೆಯವರಿಗೆ ಫೋಟೋ ಕಳಿಸುವಾಗ ಫೋಟೋದಲ್ಲಿ ತಮ್ಮನ್ನು ಬೆಳ್ಳಗಾಗಿಸಲು ಪಡಿಪಾಟಲು. ಎಷ್ಟೊಂದು ಆ್ಯಪ್​ಗಳು ಕೂಡ ಬಂದಿವೆ ಈಗ ಕಂದುಬಣ್ಣವನ್ನು ಬಿಳಿಯನ್ನಾಗಿಸಲು. ಇವೆಲ್ಲ ನಮ್ಮ ಸಮಾಜದ ಸಣ್ಣತನಗಳನ್ನು ಸೂಚಿಸುತ್ತವೆ ಎಂಬುದೂ ನಮಗೆ ತಿಳಿಯುವುದಿಲ್ಲ.

ನಮ್ಮ ಮಹಾಭಾರತ, ರಾಮಾಯಣಗಳನ್ನು ಬರೆದ ಕಾಲದಲ್ಲಿ ಬಣ್ಣ-ಆಧಾರಿತ ತಾರತಮ್ಯ ಅಷ್ಟಾಗಿ ಕಾಣಸಿಗುವುದಿಲ್ಲ. ಕೃಷ್ಣ, ದ್ರೌಪದಿಯಂತಹ ಪಾತ್ರಗಳು ಬೆಳ್ಳಗಿರಲಿಲ್ಲ. ನಮ್ಮ ಬಣ್ಣದ ವ್ಯಾಮೋಹ ಆರಂಭವಾದದ್ದು ಯಾವಾಗ ಎಂಬುದರ ಮೂಲ ಹುಡುಕಲು ಹೊರಟರೆ ಸಂಶೋಧನೆಗಳು ಹೊರಗಿನಿಂದ ಬಂದು ನಮ್ಮನ್ನು ಆಳಿದ ಜನಾಂಗಗಳತ್ತ ಬೆಟ್ಟು ಮಾಡುತ್ತವೆ. ಪರ್ಶಿಯನ್ನರು, ಜೊತೆಗೆ ಮುಘಲರು, ನಂತರ ಐರೋಪ್ಯರು, ತದನಂತರ ಬಂದ ಬ್ರಿಟಿಷರ ಬಣ್ಣವೆಲ್ಲ ಬಿಳಿಯದು. ಹೀಗೆ ಆಳುವ ವರ್ಗದ ಅಂದರೆ ಬಲಿಷ್ಠ ವರ್ಗದ ಬಣ್ಣ ನಮ್ಮಲ್ಲಿ ಬಿಳಿ ಬಣ್ಣದ ಕುರಿತಾದ ಪೂರ್ವಗ್ರಹಗಳನ್ನು ಹುಟ್ಟುಹಾಕಿತು. ಬೆಳ್ಳಗಿದ್ದವರು ಅಧಿಕಾರ ಮತ್ತು ಅಂತಸ್ತು ಉಳ್ಳವರಾಗಿದ್ದರು, ಕಪ್ಪಗಿದ್ದವರು ದುಡಿಯುವ ವರ್ಗ. ಅದೇ ಚಿಂತನೆ ಇವತ್ತಿನವರೆಗೂ ತಲೆಮಾರಿನಿಂದ ತಲೆಮಾರಿಗೆ ಹರಿಯುತ್ತಾ ಬಂದಿದೆ. ಇಂದಿಗೂ ಬೆಳ್ಳಗಿರುವವರು ಮೇಲ್ವರ್ಗ-ಮೇಲ್ಜಾತಿ-ಶ್ರೀಮಂತ ಜನ, ಮತ್ತು ಕಪ್ಪಗಿರುವವರು ಕೆಳವರ್ಗ-ಕೆಳಜಾತಿ-ಬಡಜನ ಎಂಬ ಭಾವ ಆಳವಾಗಿದೆ.

1952ರ ಮೊದಲ ಮಿಸ್‍ ಇಂಡಿಯಾ ಸ್ಪರ್ಧೆಯು ಚರ್ಮವನ್ನು ಬೆಳ್ಳಗಾಗಿಸುವ “ಅಫ್ಘನ್‍ ಸ್ನೋ” ಕಂಪನಿಯಿಂದ ಪ್ರಾಯೋಜಿತವಾಗಿತ್ತು. 1970ರ ದಶಕದಲ್ಲಿ ಫೇರ್ ಅಂಡ್‍ ಲವ್ಲಿ ಮಾರುಕಟ್ಟೆಗೆ ಬಂತು ಮತ್ತು ಅಲ್ಲಿಂದ ಬಲು ಜನಪ್ರಿಯವಾಯಿತು. ನಂತರ ಬಂದ ಜಾಹೀರಾತುಗಳೆಲ್ಲ ಬಿಳಿಬಣ್ಣವನ್ನು ಎತ್ತಿಹಿಡಿಯುತ್ತಾ ಹೋದವು. ಹೀಗೆ ಸದೃಢಗೊಳ್ಳುತ್ತಾ ಹೋದ ಒಂದು ಸಾರ್ವಜನಿಕ ಅಭಿಪ್ರಾಯ ಎಷ್ಟು ಬದುಕುಗಳನ್ನು, ಮದುವೆಗಳನ್ನು, ಆತ್ಮಗೌರವಗಳನ್ನು ನಿರ್ಧರಿಸುತ್ತಿದೆ!

Orange Signal Sowarabha Karinje on Color Discrimination

ಸೌಜನ್ಯ : ಅಂತರ್ಜಾಲ

ಬಣ್ಣದಿಂದಾಗಿ ಇಂದಿಗೂ ಎಲ್ಲರಿಗೂ ಎಲ್ಲ ಶಿಕ್ಷಣಾವಕಾಶಗಳು-ಉದ್ಯೋಗಗಳು ಸುಲಭವಾಗಿ ಲಭ್ಯವಿಲ್ಲ. ಸುಪ್ತವಾದ ಆದ್ಯತೆಗಳು ಅಲ್ಲೆಲ್ಲ ಕೆಲಸ ಮಾಡುತ್ತವೆ. ನಮಗೇ ಅರಿವಿಲ್ಲದಂತೆ ಬೆಳ್ಳಗಿರುವವರು ಹೆಚ್ಚು ಸಮರ್ಥರು ಅಂತ ನಾವು ನಿರ್ಧರಿಸಿ ಅವರಿಗೆ ಉದ್ಯೋಗ ನೀಡುತ್ತೇವೆ! ಎಲ್ಲ ಜನಾಂಗದ ಮಕ್ಕಳನ್ನು ಒಳಗೊಂಡ ಒಂದು ಅಧ್ಯಯನದ ಪ್ರಕಾರ ಕೆಲ ಕಾರ್ಟೂನುಗಳನ್ನು ತೋರಿಸಿದಾಗ, ಹೆಚ್ಚಿನ ಮಕ್ಕಳು ಬೆಳ್ಳಗಿದ್ದ ಪಾತ್ರವು ಒಳ್ಳೆಯ ವ್ಯಕ್ತಿಯೆಂದೂ ಕಪ್ಪಾಗಿದ್ದ ಪಾತ್ರವು ವಿಲನ್ ಎಂದೂ ತೀರ್ಮಾನಿಸಿದ್ದರು.

ನಮ್ಮ ಹೆಣ್ಣುಮಕ್ಕಳು ಕಪ್ಪಾಗುವುದನ್ನು ತಡೆಯಲು ಬಿಸಿಲಿಗೆ ಹೋಗುವುದನ್ನು ಕಮ್ಮಿ ಮಾಡುತ್ತಾರೆ. ವಿಟಮಿನ್‍ ಡಿ ಕೊರತೆ ಅವರನ್ನು ಬಾಧಿಸುತ್ತದೆ. ಚರ್ಮಕ್ಕೆ ಸಿಕ್ಕಸಿಕ್ಕ ಉತ್ಪನ್ನಗಳನ್ನೆಲ್ಲ ಹಚ್ಚಿ ಬೆಳ್ಳಗಾಗಲು ಪ್ರಯತ್ನಿಸುತ್ತಾರೆ. ಬ್ಯೂಟಿ ಪಾರ್ಲರ್​ಗಳು ರಾಸಾಯನಿಕಗಳನ್ನು ತಿಕ್ಕಿ ಮೈಯನ್ನು ಬ್ಲೀಚ್‍ ಮಾಡುತ್ತವೆ. ಬೆಳ್ಳಗಾಗಿಸಲು ಇಂಜೆಕ್ಷನ್‍ಗಳಿವೆ, ಲೇಸರ್ ಚಿಕಿತ್ಸೆ ಇದೆ. ನಮ್ಮ ಚಲನಚಿತ್ರ ನಟ ನಟಿಯರೂ, ಸೆಲಬ್ರಿಟಿಗಳೂ ಆ ಉತ್ಪನ್ನಗಳನ್ನೆಲ್ಲ ಮಾರುತ್ತಾರೆ.

ಗಂಡಸರೂ ಈ ಬೆಳ್ಳಗಾಗುವ ಹುಚ್ಚಿನಿಂದ ಹೊರತಾಗಿಲ್ಲ ಇವತ್ತು. ಅವರಿಗೂ ಬಗೆಬಗೆಯ ಕ್ರೀಂಗಳಿವೆ. ಟಾಲ್‍-ಡಾರ್ಕ್‍-ಹ್ಯಾನ್‍ಸಮ್‍ ಪರಿಕಲ್ಪನೆಯೂ ಬದಲಾಗುತ್ತಿದೆ. ಬೆಳ್ಳಗಿರುವ ಗಂಡಸರೂ ಸೌಂದರ್ಯದ ಅಳತೆಗೋಲಲ್ಲಿ ಹೆಚ್ಚು ಅಂಕ ಪಡೆಯುತ್ತಿದ್ದಾರೆ.

ವ್ಯಕ್ತಿಯೊಬ್ಬನನ್ನು ಕಂಡ ತಕ್ಷಣ ಆತನ ಬಣ್ಣದ ಆಧಾರದ ಮೇಲೆ ಆತ ಯಾವ ಜಾತಿ ಇರಬಹುದೆಂದು ಊಹಿಸಲು ಶುರುಮಾಡುತ್ತೇವೆ. ಬಣ್ಣದ ಮೇಲೆ ಆತನ ಸಾಮಾಜಿಕ ಸ್ತರ, “ಸಂಸ್ಕಾರ”, ಅಂತಸ್ತು, ಶ್ರೀಮಂತಿಕೆ ಇವುಗಳನ್ನೆಲ್ಲ ಮನಸ್ಸಲ್ಲೇ ಲೆಕ್ಕ ಹಾಕುತ್ತೇವೆ. ಅದಕ್ಕೆ ತಕ್ಕನಾದ ಗೌರವ, ಬೆಲೆಯನ್ನು ಆತನಿಗೆ ನೀಡುತ್ತೇವೆ. ಇದು ಎಂಥ ನಾಚಿಕೆಗೇಡಿನ ಪ್ರಕ್ರಿಯೆ ಎಂಬುದು ನಮಗೆ ಅರಿವಾಗುವುದೇ ಇಲ್ಲ. ಅಷ್ಟರ ಮಟ್ಟಿಗೆ ನಾವು ಸಮಾಜ ನಮ್ಮ ಮೇಲೆ ಹೊರಿಸಿದ ಪೂರ್ವಗ್ರಹಗಳಲ್ಲಿ ಮುಳುಗಿದ್ದೇವೆ.

ಪ್ರಪಂಚದ ಒಂದು ಅಧ್ಯಯನದ ಪ್ರಕಾರ ಬೆಳ್ಳಗಾಗಿಸುವ ಉದ್ಯಮ 2024ರ ಹೊತ್ತಿಗೆ 31.2 ಬಿಲಿಯನ್ ಡಾಲರ್​ಗಳು ಆಗುವ ನಿರೀಕ್ಷೆಯಿದೆ. ಇದರ ಸಿಂಹಪಾಲು, ಅರ್ಧಕ್ಕೂ ಹೆಚ್ಚು, ಭಾರತವನ್ನು ಒಳಗೊಂಡ ಏಷಿಯಾ ಪೆಸಿಫಿಕ್‍ ಪ್ರಾಂತ್ಯದ್ದು. ಈ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಉಂಟು ಮಾಡುವ ಅಡ್ಡಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಆದರೆ ‘ಸಮಾಜದ ಮಾನದಂಡ’ಗಳಿಗೆ ಅನುಗುಣವಾಗಿ ಒಳಗೊಳ್ಳುವ ಹಪಾಹಪಿಯಲ್ಲಿರುವ ಮಂದಿಗೆ ಅವೆಲ್ಲ ಗಣನೆಗೇ ಬರುವುದಿಲ್ಲ. ಜೊತೆಗೆ ಕಪ್ಪು ಬಣ್ಣ ಹೊಂದಿರುವ ಅನೇಕರಿಗೆ ತಾವು ಬೆಳ್ಳಗಾಗಿ ತಮ್ಮ ಬದುಕು ಒಳ್ಳೆಯದಾದರೆ ಸಾಕು ಎಂಬ ಭ್ರಮೆ ಇದ್ದಾಗ, ಈ ಅಧ್ಯಯನಗಳನ್ನು ತಿರುಗಿ ನೋಡುವವರಾರು?

2020ರಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್ ಆಂದೋಲನ ಹರಿತಗೊಂಡ ಮೇಲೆ ಇದರ ಕುರಿತ ಮಾತುಕತೆಗಳು ಸ್ವಲ್ಪ ಹೆಚ್ಚಾಗಿವೆ. 2020ರಲ್ಲಿ “ಫೇರ್ ಅಂಡ್ ಲವ್ಲಿ” ಕಂಪೆನಿಯು ತನ್ನ ಹೆಸರನ್ನು “ಗ್ಲೋ ಅಂಡ್‍ ಲವ್ಲಿ” ಅಂತ ಬದಲಾಯಿಸಿಕೊಂಡಿದೆ. ಜಾನ್ಸನ್ ಅಂಡ್ ಜಾನ್ಸನ್‍ನಂತಹ ಕಂಪನಿಗಳು ತಮ್ಮ ಬೆಳ್ಳಗಾಗಿಸುವ ಉತ್ಪನ್ನಗಳ ತಯಾರಿಕೆಯನ್ನು ಸ್ಥಗಿತಗೊಳಿಸಿವೆ. ಆದರೆ ಭಾರತದಂತಹ ದೇಶದಲ್ಲಿ ತಳಮಟ್ಟದಲ್ಲಿನ ಮನಸ್ಥಿತಿಗಳಲ್ಲಿ ಬದಲಾವಣೆ ಬರಲು ಎಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ.

ಮೊದಲ ಕಂತು : Orange Signal : ‘ಅಯ್ಯೋ ಗೋಡೆಯ ಬಣ್ಣ ಏನಿರಬೇಕಂತ ಹೇಳಿದರೆ ಸಾಕು ಅವಳು’

Published On - 2:36 pm, Sat, 16 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ