Body Shaming; ಸುಮ್ಮನಿರುವುದು ಹೇಗೆ? : ಅಲಂಕಾರದ ಸಮಯವೆಲ್ಲ ನನ್ನ ಸೃಜನಶೀಲ ಕೆಲಸಗಳಿಗೆ ಬಳಸಿಕೊಳ್ಳುತ್ತೇನೆ
‘ಪೀಚಲು ದೇಹದ ಅಮ್ಮ ಮೈಕೈ ತುಂಬಿಕೊಂಡಿದ್ದ ಅಕ್ಕತಂಗಿಯರೆದುರು ಅದೆಂತಹ ಅವಮಾನವನ್ನು ಅನುಭವಿಸಿದ್ದರೋ ಕಾಣೆ, ನನ್ನಎದೆಯ ಬಗ್ಗೆ ಮಾತಾಡುತ್ತಾ, ‘ನಿನ್ನ ಎದೆಯೂ ಸಾರಿಸಿಟ್ಟ ಹಾಗಿದೆ’ ಎಂದುಬಿಟ್ಟಿದ್ದರು. ಯಾವಾಗಲೂ ರೂಪದ ವಿಷಯಕ್ಕೆ ಮಾತನಾಡದ ಅಮ್ಮ ಹೀಗೇಕೆ ಹೇಳಿದರೆಂದು ತಿಳಿಯದೇ ನಾನು ಅವಾಕ್ಕಾಗಿದ್ದೆ. ನಾನು ಚಂದವೆನ್ನುವ ಕೆಟಗರಿಗೆ ಎಂದೂ ಸೇರಲು ಸಾಧ್ಯವಿಲ್ಲವೆಂದು ತೀರ್ಮಾನಿಸಿಬಿಟ್ಟಿದ್ದೆ.‘ ಸುಧಾ ಆಡುಕಳ
ಆಕೆಯನ್ನು ಶಿಲೆಯಲ್ಲಿ ಬಾಲಿಕೆಯಾಗಿ ಅರಳಿಸಿದೆವು. ಪಟದಲ್ಲಿ ದೇವತೆಯಾಗಿ ನಸುಗುಲಾಬಿ ಬಣ್ಣ ಹಚ್ಚಿ ಚೌಕಟ್ಟಿನೊಳಗೆ ಕೂರಿಸಿದೆವು. ಮತ್ತಷ್ಟು ಬಣ್ಣ ಮೆತ್ತಿ ಬಗೆಬಗೆಯ ಪೋಷಾಕು ತೊಡಿಸಿ ರಂಗಸಜ್ಜಿಕೆಯನ್ನೂ ಏರಿಸಿದೆವು. ಬೆಳ್ಳಿಪರದೆ, ಟಿವಿ, ಕಂಪ್ಯೂಟರ್ಗಳಲ್ಲಿಯೂ ಆಕೆಯನ್ನು ಅಡಕಗೊಳಿಸಿದೆವು. ಈಗಂತೂ ಅಂಗೈನ ಪರದೆಗಳೊಳಗೆ ಆಕೆ ವಿಧವಿಧದಲ್ಲಿ ಪ್ರತ್ಯಕ್ಷಳಾಗುವಂತೆಯೂ ಮಾಡಿದೆವು. ಒಟ್ಟಿನಲ್ಲಿ ಸೌಂದರ್ಯವೆಂದರೆ ಹೀಗೇ ಎಂಬ ವ್ಯಾಖ್ಯಾನವನ್ನು ಸಹಸ್ರಾರು ವರ್ಷಗಳಿಂದ ಇಡೀ ಸಮಾಜದ ಮೆದುಳಿಗೇ ಮೊಳೆ ಬಡಿದು ಕುಳಿತೆವು. ಪೂರ್ವನಿರ್ಧರಿತ ಸೌಂದರ್ಯ ಪರಿಕಲ್ಪನೆಯ ಪರಿಣಾಮದಿಂದಾಗಿ ಆಕೆ ವ್ಯಕ್ತಿತ್ವಹೀನಳಾಗಿ ಬೆಳೆಯುವ ಅಪಾಯಕ್ಕೆ ಬಿದ್ದರೂ ಸುಮ್ಮನಿರುವುದು ಜವಾಬ್ದಾರಿತನದ ಲಕ್ಷಣವೇ? ಒಂದೊಮ್ಮೆ ತನ್ನತನದ ಬಗ್ಗೆ ತನಗೇ ಅರಿವು ಉಂಟಾಗಿ ಬೀಳಿಸಿದ ಕಂದಕಗಳಿಂದ ಎದ್ದು ಆಕೆ ಚಿಮ್ಮಬೇಕೆಂದಾಗೆಲ್ಲಾ ಅಡ್ಡವಾಗುವ ಗೋಡೆಗಳು ಒಂದೇ ಎರಡೇ?; ನೋವು, ಅವಮಾನ, ತಿರಸ್ಕಾರ ಎನ್ನುವುದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ. ದೇಹಕ್ಕೂ ಮನಸ್ಸಿಗೂ ಆದ್ಯಂತವಾಗಿ ಬೆಸೆದುಕೊಂಡಿರುವಂಥ ಆಳ, ಸೂಕ್ಷ್ಮ ಸಂಗತಿಯದು. ಇರಲಿ, ಎಷ್ಟೇ ಗಾಸಿಗೊಂಡರೂ ಧೃತಿಗೆಡದೆ ತನ್ನ ದಾರಿಯನ್ನು ತಾನೇ ನಿಚ್ಚಳವಾಗಿಸಿಕೊಳ್ಳಲು ಯೋಚನಾಶಕ್ತಿ ಅವಳಿಗೆ ಯಾವತ್ತೂ ಇದ್ದೇ ಇದೆ. ಅದಕ್ಕಾಗಿ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳುತ್ತಾಳೆ. ಇದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com
‘ಶಿಕ್ಷಕ’ ಎಂದೂ ಹೊಟ್ಟೆಪಾಡಿಗಾಗಿ ಸೀಮಿತವಾದ ವೃತ್ತಿಯಲ್ಲ; ಸದಾ ಮಕ್ಕಳೊಂದಿಗೆ ಜೀವಿಸುವ ಶಿಕ್ಷಕರು ಹೆಚ್ಚು ಚಲನಶೀಲರು. ಕ್ಷಣಕ್ಷಣವೂ ತಾವೂ ಬೆಳೆಯುತ್ತ ತಮ್ಮ ಜೊತೆಗಿರುವವರನ್ನೂ ಬೆಳೆಸುತ್ತ ಅರಿವಿನ ಹೊಸ ಖಾತೆಗಳನ್ನು ಪ್ರಾಯೋಗಿಕವಾಗಿ ತೆರೆಯುತ್ತಲೇ ಇರುವಂಥವರು. ಈಗಿಲ್ಲಿ ಕವಿ, ಲೇಖಕಿ, ಶಿಕ್ಷಕಿ ಸುಧಾ ಆಡುಕಳ ತಮ್ಮ ಬದುಕಿನ ಅನುಭವಗಳನ್ನು ಹೇಳಿಕೊಳ್ಳುತ್ತ ಕೊನೆಯಲ್ಲಿ ಕಥೆಯೊಂದನ್ನೂ ನಿಮಗಾಗಿ ಬರೆದಿದ್ದಾರೆ.
ನನಗೆ ಮತ್ತು ನನ್ನತಂಗಿಗೆ ಕೇವಲ ಒಂದೂವರೆ ವರ್ಷದ ಅಂತರವಾದ್ದರಿಂದ ಅವಳಿಗಳ ಹಾಗೆ ಬೆಳೆದವರು ನಾವು. ಅಪ್ಪನ ಹತ್ತಿರ ಹಟಮಾಡಿ ಒಂದೇ ಥರದ ಬಟ್ಟೆಯನ್ನು ತರಿಸಿಕೊಳ್ಳುತ್ತಿದ್ದೆವು. ಆಗೆಲ್ಲ ಟಿ.ವಿ. ಮೊಬೈಲ್‍ಗಳು ಇಲ್ಲದೇ ಇರುವುದರಿಂದ ಯಾರ ಮನೆಗೆ ಹೋದರೂ ಸಂಜೆಯ ವೇಳೆ ಮನರಂಜನೆಗೆಂದು ನಮ್ಮ ಹತ್ತಿರ ಡ್ಯಾನ್ಸ್ ಮಾಡಿಸುತ್ತಿದ್ದರು. ಹೆಣ್ಣು ಮಕ್ಕಳೆಂದರೆ ಡ್ಯಾನ್ಸ್ ಮಾಡಲೇಬೇಕೆಂದು ಅರ್ಥ. ಹಾಗೊಮ್ಮೆ ನರ್ತಿಸುವಾಗ ಎದುರು ಕುಳಿತ ಬಂಧುವೊಬ್ಬರು, ‘ಗೀತಾ ಅದೆಷ್ಟು ಚಂದ ಡ್ಯಾನ್ಸ್ ಮಾಡ್ತಾಳೆ, ಅವಳ ಕೈ ಎಷ್ಟು ಉಂಡುಂಡೆ. ಈ ಸುಧಾನ ಕೈ ಚಂದಿಲ್ಲ, ಬರಿಯ ದಬ್ಬೆ’ ಎಂದು ಹೇಳಿದರು. ಪಾಪ, ಅವರು ನನ್ನನ್ನುಅವಮಾನಿಸಲೆಂದೇ ಹಾಗೆ ಹೇಳಿದ್ದಾಗಿರಲಿಕ್ಕಿಲ್ಲ. ಆದರೆ ಅವರ ಮಾತುಗಳು ಸೂಕ್ಷ್ಮ ಮನಸ್ಸಿನ ನನ್ನಲ್ಲಿ ನಾನು ಡ್ಯಾನ್ಸ್ ಮಾಡಲು ಲಾಯಕ್ಕಿಲ್ಲ ಎಂಬ ಭಾವನೆಯನ್ನು ತುಂಬಿದವು. ಅಲ್ಲಿಂದ ಮುಂದೆ ನಾನು ಡ್ಯಾನ್ಸ್ ಮಾಡಲೇ ಇಲ್ಲ ಮಾತ್ರವಲ್ಲ, ಈಗಲೂ ಅಪರಿಚಿತರೆದುರು ಹೋಗುವಾಗಲೆಲ್ಲ ನನ್ನ ಕೈಯ್ಯನ್ನು ಹೊರಗೆ ಚಾಚದೇ ಕೈಕಟ್ಟಿಯೇ ನಿಂತಿರುತ್ತೇನೆ. ಬಾಲ್ಯದಿಂದ ಬಂದ ರೂಢಿಯದು.
ಸಣ್ಣವಯಸ್ಸಿನಲ್ಲಿ ಮಕ್ಕಳಿಗೆ ತಮ್ಮ ಶರೀರದ ಬಗ್ಗೆ ಕುತೂಹಲ ಮತ್ತು ಕೀಳರಿಮೆಗಳಿರುವುದು ಸಾಮಾನ್ಯ. ಆಗೆಲ್ಲ ಹೀಗೆ ಬರುವ ಅನಗತ್ಯ ಮಾತುಗಳು ಅವರ ಆತ್ಮವಿಶ್ವಾಸವನ್ನು ಕಸಿದುಬಿಡುತ್ತವೆ. ಇದಕ್ಕೆ ಹೆಣ್ಣು, ಗಂಡು ಎಂಬ ಬೇಧಭಾವವಿರುವುದಿಲ್ಲವಾದರೂ ಹೆಣ್ಣು ಮಕ್ಕಳ ದೇಹವು ಹೆಚ್ಚು ಟೀಕೆಗೊಳಗಾಗುತ್ತದೆ. ಗಂಡು ಹೇಗಿದ್ದರೂ ನಡೆಯುತ್ತದೆ ಎಂಬುದು ಸಮಾಜದಲ್ಲಿರುವ ನಂಬಿಕೆಯಾಗಿದೆ. ಅವು ನನ್ನ ಹೈಸ್ಕೂಲಿನ ದಿನಗಳಾಗಿರಬೇಕು. ಮುಡಿಯಿಂದ ಅಡಿಯವರೆಗಿದ್ದ ನನ್ನ ಕೂದಲನ್ನು ತೊಳೆಯಲು ಅಮ್ಮ ಸಹಾಯ ಮಾಡುತ್ತಿದ್ದರು. ಪೀಚಲು ದೇಹದ ಅಮ್ಮ ಮೈಕೈ ತುಂಬಿಕೊಂಡಿದ್ದ ಅಕ್ಕತಂಗಿಯರೆದುರು ಅದೆಂತಹ ಅವಮಾನವನ್ನು ಅನುಭವಿಸಿದ್ದರೋ ಕಾಣೆ, ನನ್ನಎದೆಯ ಬಗ್ಗೆ ಮಾತಾಡುತ್ತಾ, ‘ನಿನ್ನ ಎದೆಯೂ ಸಾರಿಸಿಟ್ಟ ಹಾಗಿದೆ’ ಎಂದುಬಿಟ್ಟಿದ್ದರು. ಯಾವಾಗಲೂ ರೂಪದ ವಿಷಯಕ್ಕೆ ಮಾತನಾಡದ ಅಮ್ಮ ಹೀಗೇಕೆ ಹೇಳಿದರೆಂದು ತಿಳಿಯದೇ ನಾನು ಅವಾಕ್ಕಾಗಿದ್ದೆ. ನಾನು ಚಂದವೆನ್ನುವ ಕೆಟಗರಿಗೆ ಎಂದೂ ಸೇರಲು ಸಾಧ್ಯವಿಲ್ಲವೆಂದು ತೀರ್ಮಾನಿಸಿಬಿಟ್ಟಿದ್ದೆ.
ಕಲಿಕೆಯಲ್ಲಿ ಸದಾ ಮುಂದಿರುವ ನಾನು ಎಲ್ಲಿ ಹೋದರೂ ಸಹಜವಾಗಿಯೇ ಶಿಕ್ಷಕರ ಪ್ರೀತಿಗೆ ಪಾತ್ರಳಾಗುತ್ತಿದ್ದೆ. ಅದನ್ನು ಕಂಡು ಕರುಬಿದ ನನ್ನ ಸಂಬಂಧಿಯೊಬ್ಬರು ನನ್ನ ಹಿಂದೆ, ‘ಈ ಪಕ್ರಿಗೆ (ಕಾಲು ಡೊಂಕಾಗಿರುವವರನ್ನು ಹಾಗೆನ್ನುತ್ತಾರೆ) ಅದೇನಂತ ಆ ಸರ್ಗಳು ಮಳ್ಳು ಬೀಳುತ್ತಾರೊ? ಚಂದಿದ್ರೆ ಇನ್ನೂಇತ್ತು’ಎಂದು ಲೇವಡಿ ಮಾಡಿದಾಗ ನಾನು ಭೂಮಿಗಿಳಿದು ಹೋಗಿದ್ದೆ. ಕಾಲೇಜಿನಲ್ಲಿ ಕೆಮಿಸ್ಟ್ರಿ ಉಪನ್ಯಾಸಕರು ಪ್ರತಿಸಲವೂ ನನಗೆ ಕೋಂಪ್ಲ್ಯಾನ್ ಕುಡಿಯುವಂತೆ ಸಲಹೆ ಮಾಡುತ್ತಿದ್ದಾಗ, ಅವುಗಳೆಲ್ಲ ನಮಗೆ ಕನಸಲ್ಲೂ ಎಟುಕದ ಪೇಯಗಳೆಂದು ಹೇಳಲಾಗದೇ ಕೊರಗುತ್ತಿದ್ದೆ. ಹೈಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದ ನನ್ನ ನೆಚ್ಚಿನ ಶಿಕ್ಷಕರು ನಾನು ಶಿಕ್ಷಕಿಯಾಗುತ್ತೇನೆ ಎನ್ನುವಾಗಲೆಲ್ಲ ಹೈಸ್ಕೂಲು ಮೇಡಂ ಆಗು, ಕಾಲೇಜಿನ ಮೇಡಂ ಆಗಲು ನಿನ್ನ ಜೀವ ಸಣ್ಣದು ಎಂದು ಸಲಹೆ ನೀಡುತ್ತಿದ್ದರು. ಆಗೆಲ್ಲ ಇಂಥದ್ದನ್ನು ಅದೆಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿದ್ದೆ. ಈಗ ಎಣಿಸಿದರೆ ಎಷ್ಟೊಂದು ಸಿಲ್ಲಿ ಅನಿಸುತ್ತಿದೆ.
ಇವೆಲ್ಲಾ ಕಾರಣಗಳಿಗಾಗಿಯೇ ಇರಬೇಕು, ನಾನು ದೇಹದರಚನೆಗೆ ಸಂಬಂಧಿಸಿದ ರಾಶಿ, ರಾಶಿ ಪುಸ್ತಕಗಳನ್ನು ಓದತೊಡಗಿದೆ. ಬಣ್ಣ, ಗಾತ್ರ, ರಚನೆಗೆ ಕಾರಣವಾಗುವ ಅಂಶಗಳನ್ನು ವೈಜ್ಞಾನಿಕವಾಗಿ ತಿಳಿದುಕೊಂಡೆ. ಹಾಗೆ ಅರಿವಿನ ಬಾಗಿಲು ತೆರೆಯುತ್ತಾ ಹೋದಂತೆ ಇವೆಲ್ಲ ಎಷ್ಟು ಗೌಣವಾದ ವಿಷಯಗಳು ಎನಿಸಿತು. ಅದ್ಯಾವುದೋ ಪುಸ್ತಕದಲ್ಲಿ ಸೌಂದರ್ಯದ ಬಗ್ಗೆ ಉಲ್ಲೇಖಿಸುತ್ತಾ ಬರೆದಿದ್ದರು, ‘ತೀರ ಸಾಮಾನ್ಯ ರೂಪದ ಗಾಂಧೀಜಿಯವರ ನಗೆಯಲ್ಲಿಅದೆಂಥ ಸೌಂದರ್ಯವಿದೆ! ಮದರ್ ಥೆರೇಸಾ ಎದುರು ಬಂದರೆ ಅದೆಷ್ಟು ಚಂದ ಅನಿಸಿಬಿಡುತ್ತಾರೆ. ನಮ್ಮೊಳಗಿನ ಆತ್ಮವಿಶ್ವಾಸವೇ ಸೌಂದರ್ಯ. ಅದು ಮುಖದಲ್ಲಿ ಪ್ರತಿಫಲಿಸಿದರೆ ನೀವು ಎಲ್ಲರಿಗಿಂತ ಚಂದ ಕಾಣುವಿರಿ.’ ಓದಿದ ನಾನು ನನ್ನಿಡೀ ವ್ಯಕ್ತಿತ್ವವನ್ನು ಮುಖದಲ್ಲಿ ಪ್ರತಿಫಲಿಸುತ್ತಾ ನನ್ನ ದೇಹದ ಕೊರೆಯನ್ನೆಲ್ಲ ಮರೆತುಬಿಟ್ಟೆ. ಇಂದಿಗೂ ನಿಮ್ಮ ಮುಖದಲ್ಲಿ ವಯಸ್ಸಾಗಿರುವುದು ಗೊತ್ತೇ ಆಗುವುದಿಲ್ಲ ಎನ್ನುವಾಗಲೆಲ್ಲ ಮತ್ತದೇ ಆತ್ಮವಿಶ್ವಾಸದ ನಗೆ ಬೀರುತ್ತೇನೆ.
ಎಷ್ಟೇ ಸಂತೈಸಿಕೊಂಡರೂ ಕೆಲವು ಗಳಿಗೆಗಳು ಹೆಣ್ಣಿಗೆ ಪರೀಕ್ಷಾಕಾಲವಾಗಿ ಬಂದೇಬರುತ್ತವೆ. ಮದುವೆಯ ಮಾತು ಬಂದಾಗ ಕನ್ಯೆ ನೋಡಲು ಬರುವ ವರನೆದುರು ಕುಳಿತುಕೊಳ್ಳುವುದನ್ನು ನನಗೆ ಕನಸಿನಲ್ಲಿಯೂ ಊಹಿಸಲು ಸಾಧ್ಯವಿರಲಿಲ್ಲ.ಇದರ ಬಗ್ಗೆ ನನ್ನ ಗೆಳತಿಯರ ಭಾವನೆ ಹೇಗಿದೆಯೆಂದು ತಿಳಿದುಕೊಳ್ಳಬೇಕೆನಿಸಿದರೂ ಕೇಳಲು ಸಂಕೋಚವಾಗುತ್ತಿತ್ತು. ಒಮ್ಮೆ ಬಹಳ ಹತ್ತಿರದ ಗೆಳತಿಯಲ್ಲಿ ಕೇಳಿದಾಗ ಅವಳು, ‘ಹೆಣ್ಣು ನೋಡಲು ಬಂದರೆ ತೋರಿಸುತ್ತೇನೆ.’ ಎಂದು ಹಗುರಾಗಿ ನಕ್ಕಿದ್ದಳು. ಆಗೆಲ್ಲ ನಾನು ಎಲ್ಲರಂತಿಲ್ಲ ಯಾಕೆ? ಎಂಬ ಚಿಂತೆಕಾಡುತ್ತಿತ್ತು. ಹಾಗಾಗಿ ನಾನು ಮದುವೆಯೇ ಆಗುವುದಿಲ್ಲ ಎಂದು ವರಾತ ತೆಗೆದಿದ್ದೆ. ಹೆಣ್ಣು ನೋಡುವ ಪ್ರಸಂಗವೇ ಬಾರದೇ ಮದುವೆಯಾದಾಗ ತುಂಬ ಖುಶಿಪಟ್ಟಿದ್ದೆ. ಅಚ್ಚ ಜಂಬೆಹಣ್ಣಿನ ಬಣ್ಣದ ಸ್ಪುರದ್ರೂಪಿಯಾದ ನನ್ನ ಸಂಗಾತಿ ನನ್ನನ್ನು ವರಿಸಿದ್ದು ಮದುವೆಯ ದಿನ ಎಲ್ಲರಿಗೂ ಇರಿಸುಮುರಿಸು ಮಾಡಿತ್ತಾದರೂ ‘ಅವಳು ಎಲ್ಲದರಲ್ಲಿಯೂ ಪ್ರವೀಣೆ’ ಎಂಬ ಹೊಗಳಿಗೆ ಕೀಳರಿಮೆಯನ್ನು ನುಂಗಿಹಾಕಿತ್ತು. ಗಂಡ ಮನೆಗೆ ಬರುವ ವೇಳೆಗೆ ಶೃಂಗರಿಸಿಕೊಂಡು, ಬಾರದ ಮುಗುಳುನಗೆಯನ್ನು ಮುಖದಲ್ಲಿ ಧರಿಸಿ ನಿಲ್ಲುವ ಹೆಂಗಳೆಯರನ್ನು ನಾನು ಕನಿಕರದಿಂದಲೇ ನೋಡುತ್ತೇನೆ. ಮದುವೆಯ ದಿನವೂ ಅಲಂಕಾರ, ಮೆಹಂದಿ, ನೇಲ್‍ಪಾಲಿಶ್ ಇಲ್ಲದೇ ಹಸೆಮಣೆಯೇರಿದ ನಾನು ಸಹಜತೆಯೇ ಸೌಂದರ್ಯವೆಂದು ಅರಿತು ಹಾಗೆಯೇ ಬದುಕುತ್ತಿದ್ದೇನೆ. ಅಲಂಕಾರಕ್ಕೆಂದು ಬಳಕೆಯಾಗುವ ಸಮಯವೆಲ್ಲವನ್ನೂ ನನ್ನ ಸೃಜನಶೀಲ ಕೆಲಸಗಳಿಗೆ ಬಳಸಿಕೊಳ್ಳುತ್ತೇನೆ.
ಬಣ್ಣ, ಗಾತ್ರ, ಆಕಾರಗಳಿಂದ ಹೆಣ್ಣು ಮತ್ತು ಗಂಡುಮಕ್ಕಳಿಬ್ಬರೂ ಕೀಳರಿಮೆ ಬೆಳೆಸಿಕೊಳ್ಳುವುದನ್ನು ಅವರೊಂದಿಗಿನ ಒಡನಾಟದಲ್ಲಿ ನಾನು ಕಂಡಿರುವೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಯಾವ ಅವಕಾಶವನ್ನೂ ನಾನು ಕಳೆದುಕೊಳ್ಳುವುದಿಲ್ಲ. ಹದಿಹರೆಯದವರೊಂದಿಗೆ ಸಂವಾದ ನಡೆಸುವಾಗಲೆಲ್ಲ ನಾನು ನಮ್ಮನ್ನು ನಾವು ಇದ್ದಂತೆಯೇ ಒಪ್ಪಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಡುತ್ತೇನೆ ಮತ್ತುಅದು ತರುವ ಆತ್ಮವಿಶ್ವಾಸದ ಬಗ್ಗೆ ಅನೇಕ ನಿದರ್ಶನಗಳನ್ನು ನೀಡಿ ವಿವರಿಸುತ್ತೇನೆ. ಇವೆಲ್ಲವುಗಳ ಪರಿಣಾಮವಾಗಿಯೇ ನಾನು ನನ್ನ ಮೊದಲ ಪುಸ್ತಕ ‘ಹದಿಹರೆಯದ ಕನಸುಗಳೊಂದಿಗೆ’ ಬರೆದೆ. ಚಂದಕ್ಕೆ ಸಂಬಂಧಿಸಿದ ಈ ಕಥೆಯನ್ನು ಓದಿ;
ಅಕ್ಬರ್ ಒಮ್ಮೆಆಸ್ಥಾನದಲ್ಲಿದ್ದಾಗ ಅವನ ಮಗ ಸಲೀಂ ಅಲ್ಲಿಗೆ ಬಂದು ತಂದೆಯ ತೊಡೆಯೇರಿ ಕುಳಿತುಕೊಳ್ಳುತ್ತಾನೆ. ಸಲೀಂ ಮೈಕೈ ತುಂಬಿಕೊಂಡಿರುವ ಸುಂದರವಾದ ಮಗು. ಅಕ್ಬರನಿಗೆ ಅವನನ್ನು ನೋಡಿ ಅದೆಷ್ಟು ಪ್ರೀತಿ ಉಕ್ಕಿತೆಂದರೆ ತನ್ನ ಸಭಾಸದರಲ್ಲಿ ಅವನು ಪ್ರಶ್ನೆ ಕೇಳುತ್ತಾನೆ, ‘ಈ ಜಗತ್ತಿನಲ್ಲಿಅತ್ಯಂತ ಚಂದದ ಮಗು ಯಾವುದು ಹೇಳಿ?’ ಎಂದು. ಎಲ್ಲರೂ ರಾಜನ ಮನದಿಂಗಿತವನ್ನು ಅರಿತವರಂತೆ ‘ಜಹಾಂಪನಾ, ನಿಮ್ಮ ಮಗು ಸಲೀಂ ಅಲ್ಲದೇಇನ್ಯಾರು?’ಎನ್ನುತ್ತಾರೆ. ಆದರೆ ಬೀರಬಲ್ಲನಿಗೆ ಮಾತ್ರ ದೊರೆಯ ಈ ಅಹಂ ಹಿಡಿಸುವುದಿಲ್ಲ. ಅವನು ಹೇಳುತ್ತಾನೆ, ‘ಜಹಾಂಪನಾ, ಜಗತ್ತಿನ ಅತಿ ಚಂದದ ಮಗು ದೂರದಲ್ಲೆಲ್ಲೋಇದೆ.’ ಎನ್ನುತ್ತಾನೆ. ಅಕ್ಬರನಿಗೆ ಕೋಪ ಬರುತ್ತದೆ. ‘ಸರಿ ಹಾಗಾದರೆ, ನನಗೆ ಆ ಮಗುವನ್ನು ಈಗಲೇ ತೋರಿಸು’ ಎನ್ನುತ್ತಾನೆ. ಬೀರಬಲ್ಲ ಜಗತ್ತಿನ ಅತಿ ಚಂದದ ಮಗುವನ್ನು ತೋರಿಸಲು ದೊರೆಯನ್ನು ಕರೆದುಕೊಂಡು ಹೋಗುತ್ತಾನೆ. ರಾಜಬೀದಿಗಳನ್ನು ದಾಟಿ, ತಿರುವುಗಳಲ್ಲಿ ತಿರುಗಿ ಅವರು ಒಂದು ಕೊಳಚೆ ಪ್ರದೇಶಕ್ಕೆ ಬರುತ್ತಾರೆ. ಅಲ್ಲಿ ಮನೆಯ ಮುಂದಿನ ಬೀದಿಯಲ್ಲಿ ಸಿಂಬಳವನ್ನು ಸುರಿಸುತ್ತಾ ಮಗುವೊಂದು ಮಣ್ಣಿನಲ್ಲಿಆಡುತ್ತಿರುತ್ತದೆ. ಬೀರಬಲ್ಲ ಆ ಮಗುವನ್ನು ತೋರಿಸಿ, ‘ಜಹಾಂಪನಾ, ಇದೇ ಜಗತ್ತಿನ ಅತಿಚಂದದ ಮಗು’ಎನ್ನುತ್ತಾನೆ. ಅಕ್ಬರನಿಗೆ ಸಿಟ್ಟು ಒತ್ತರಿಸಿಕೊಂಡು ಬರುತ್ತದೆ. ‘ಇದು ಚಂದದ ಮಗುವೆಂದು ಒಬ್ಬರೇ ಒಬ್ಬರು ಹೇಳಿದರೂ ಸಾಕು, ನಾನು ಒಪ್ಪಿಕೊಳ್ಳುತ್ತೇನೆ.’ ಎನ್ನುತ್ತಾನೆ. ಆಗ ಬೀರಬಲ್ ಆ ಮಗುವಿನ ತಾಯಿಯನ್ನು ಕರೆಯುತ್ತಾನೆ ಮತ್ತು ಜಗತ್ತಿನ ಚಂದದ ಮಗುವನ್ನು ತೋರಿಸುತ್ತೀರಾ?ಎಂದು ಕೇಳುತ್ತಾನೆ. ಅವಳು ಒಂದಿನಿತೂ ಯೋಚಿಸದೇ ಅಂಗಳದಲ್ಲಿ ಆಡುತ್ತಿರುವ ತನ್ನ ಮಗುವಿನೆಡೆಗೆ ಕೈತೋರಿಸುತ್ತಾಳೆ. ಅಕ್ಬರನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಸೌಂದರ್ಯವೆಂಬುದು ನಮ್ಮ ಭಾವಗಳೊಂದಿಗೂ ಬೆಸೆದುಕೊಂಡಿರುವ ಸಂಗತಿಯಾಗಿದೆ ಎಂಬುದನ್ನು ಈ ಕಥೆ ಎಷ್ಟೊಂದು ಪರಿಣಾಮಕಾರಿಯಾಗಿ ತಿಳಿಸುತ್ತದೆ.
ನಿಜವಾಗಿಯೂ ವೈಜ್ಞಾನಿಕವಾಗಿ ಯೋಚಿಸಿದರೆ ಕಪ್ಪುಬಣ್ಣವೆಂಬುದು ಎಷ್ಟೊಂದು ಆರೋಗ್ಯ ಸೂಚಕ! ಯಾಕೆಂದರೆ ಚರ್ಮಕ್ಕೆ ಕಪ್ಪು ಬಣ್ಣವನ್ನು ನೀಡುವುದು ಮೆಲನಿನ್ ಎಂಬ ವಸ್ತು.ಇದು ಹೆಚ್ಚಿದ್ದಷ್ಟೂ ತ್ವಚೆ ಹೊರಗಿನ ಮಾಲಿನ್ಯವನ್ನು ಹೆಚ್ಚು ತಡೆದುಕೊಳ್ಳಬಲ್ಲುದು. ಕೂದಲಿನ ವಿಷಯದಲ್ಲಿಯೂ ಹಾಗೇ. ನೇರಕೂದಲು ಮತ್ತು ಗುಂಗುರು ಕೂದಲುಗಳ ಜೀನ್‍ಗಳಲ್ಲಿ ಗುಂಗುರುಕೂದಲಿನ ಜೀನ್ ಪ್ರಭಾವಶಾಲಿಯಾದುದು. ಆದ್ದರಿಂದ ಹೆಚ್ಚಿನ ಭಾರತೀಯರ ಕೂದಲೆಲ್ಲ ಗುಂಗುರಾಗಿರುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡ ಸೌಂದರ್ಯವರ್ಧಕ ತಯಾರಿಕಾ ಕಂಪನಿಗಳು ರೇಶಿಮೆಯಂತೆ ಜಾರುವ ನೇರಕೂದಲನ್ನು ತೋರಿಸಿ ಅದನ್ನೇ ಸೌಂದರ್ಯವೆಂದು ಬಿಂಬಿಸುತ್ತವೆ. ಈಗೊಂದು ಕಾಲು ಶತಮಾನದ ಹಿಂದೆ ಮೈಕೈ ತುಂಬಿಕೊಂಡು ಮಟ್ಟಸವಾಗಿದ್ದ ಹೆಂಗಳೆಯರನ್ನು ಚಂದವೆಂದು ಬಿಂಬಿಸುತ್ತಿದ್ದರು, ಅದು ನಮ್ಮ ಭಾರತೀಯರಲ್ಲಿ ಸಹಜಕೂಡ. ಆದರೆ ಈಗ ಒಣಗಿ ಹೆಂಚಿಕಡ್ಡಿಯಾಗಿರುವುದನ್ನೇ ಚಂದವೆಂದು ಬಣ್ಣಿಸಲಾಗುತ್ತಿದೆ. ಅದಕ್ಕೆಂದು ತೂಕ ಇಳಿಸಿಕೊಳ್ಳುವ ಪ್ರಯಾಸದಲ್ಲಿ ಎಲ್ಲರೂ ಅದರಲ್ಲೂ ವಿಶೇಷವಾಗಿ ಮಹಿಳೆಯರು ಹೈರಾಣಾಗುತ್ತಿರುತ್ತಾರೆ. ನಮ್ಮದೈನಂದಿನ ಕೆಲಸಕ್ಕೆ ಅಡ್ಡಿಯಾಗದಿರುವ ಮೈಭಾರ ಒಳ್ಳೆಯದೇ.
ಸಾಮಾನ್ಯವಾಗಿ ಕೆಲಸ ಮಾಡುವ ಜಾಗದಲ್ಲೆಲ್ಲಾ ‘ಗ್ರೀನ್‍ರೂಮ್’ ಎಂಬ ಅಭಿದಾನವನ್ನು ಹೊತ್ತ ಗಂಡಸರು ಮಾತ್ರವೇ ಸೇರುವ ಜಾಗವಿರುತ್ತದೆ. ಅಲ್ಲೆಲ್ಲ ಹೆಂಗಳೆಯರ ಅಂಗರಚನೆಯ ಅಭ್ಯಾಸ ನಡೆಯುತ್ತಲೇ ಇರುತ್ತದೆ. ವಾಟ್ಸ್ಯಾಪ್ ಯುನಿವರ್ಸಿಟಿಗಳು ಹಂಚುವ ಥರಾವರಿ ಜೋಕುಗಳಲ್ಲಿ, ಮೂರ್ಖರ ಪೆಟ್ಟಿಗೆ ಭಿತ್ತರಿಸುವ ಹಾಸ್ಯವೆಂಬ ಅಪಹಾಸ್ಯ ಕಾರ್ಯಕ್ರಮಗಳಲ್ಲೆಲ್ಲ ಹೆಣ್ಣುಗಳ ದೇಹದ ವಿಡಂಬನೆಯೇ ಇರುತ್ತದೆ. ‘ಸಣ್ಣವರಂತೆ ಕಾಣುತ್ತೀರಿ’ ಎನ್ನುವುದರ ಮೂಲಕ ಹೆಣ್ಣುಗಳ ಮನಸ್ಸು ಗೆಲ್ಲಬಹುದು ಎಂಬ ಗ್ರಹಿಕೆಯೇ ಕೆಲವೊಮ್ಮೆ ಅವಳನ್ನು ಹೊಗಳಿಕೆಯ ಹೊನ್ನ ಶೂಲಕ್ಕೆ ಏರಿಸುತ್ತಿರುತ್ತದೆ.
ಬರೆಯುತ್ತ ಹೋದರೆ ನಿಲ್ಲದ ಪಯಣವಿದು. ಒಂದು ನಿದರ್ಶನ ನೀಡಿ ವಿರಮಿಸುವೆ. ಇತ್ತೀಚೆಗೆ ಕಾಲೇಜು ವಿದ್ಯಾರ್ಥಿನಿಯರೆಲ್ಲರಿಗೂ ಸಮವಸ್ತ್ರ ಬಂದುಕಾಲೇಜಿನ ಕಾರಿಡಾರುಗಳು ಬಣ್ಣ ಕಳಕೊಂಡಿವೆ. ಸಮಾನತೆಯ ಆಶಯದಿಂದ ಸಮವಸ್ತ್ರ ತರುವುದು ತಪ್ಪೇನಲ್ಲ. ಅದೇನೇ ಇರಲಿ, ಹುಡುಗಿಯರ ಸಮವಸ್ತ್ರದ ವಿನ್ಯಾಸ ನಿರ್ಧರಿಸುವಾಗ ಕಡ್ಡಾಯವಾಗಿ ಡ್ರೆಸ್‍ನ ಕುತ್ತಿಗೆಯನ್ನು ಸಾಧ್ಯವಾದಷ್ಟು ಕಿರಿದುಗೊಳಿಸಲಾಗುತ್ತದೆ. ಇಡೀ ದಿನ ಕುತ್ತಿಗೆಯನ್ನು ಬಿಗಿಯುವಂತಹ ದಿರಿಸನ್ನು ಧರಿಸುವುದು ಬಿಸಿಲುನಾಡಿನಲ್ಲಂತೂ ಬಹಳ ಕಷ್ಟವೇ. ಇದನ್ನು ನಾನು ಹೇಳಿದಾಗ ನಮ್ಮಲ್ಲಿಯ ಉಪನ್ಯಾಸಕಿಯೊಬ್ಬರು ಹಾಗೆಯೇ ಯಾಕಿರಬೇಕು ಎಂಬುದನ್ನು ನನಗೆ ತಿಳಿಸಿಹೇಳಿದರು. ‘ನೋಡಿ, ನಮ್ಮಲ್ಲಿಯ ಇಂಥ ಉಪನ್ಯಾಸಕರು ಜ್ಞಾನಿಗಳು ಮತ್ತು ದೇವರಂಥವರು. ಅವರೇ ಹೇಳುತ್ತಿದ್ದರು, ಪರೀಕ್ಷೆಯ ಕೊಠಡಿಯಲ್ಲಿ ತಲೆಬಗ್ಗಿಸಿ ಬರೆಯುವಾಗ ಸಹಿ ಮಾಡಲು ಹತ್ತಿರ ಹೋದಾಗ ಅವರಿಗೆ ಕುತ್ತಿಗೆಯ ಅಡಿಯಿಂದಲೇಎಲ್ಲವೂ ಕಂಡು ಒಂಥರಾ ಆಗಿ ಅಲ್ಲಿ ನಿಲ್ಲಲು ಆಗಲಿಲ್ಲ ಅಂತ. ಅಂಥವರಿಗೇ ಹಾಗಾದರೆ ಇನ್ನು ಉಳಿದವರಿಗೆ ಏನಾಗಬಹುದು? ಅದಕ್ಕೇ ಅವರು ಬಗ್ಗಿ ಬರೆದರೂ ಏನೇನೂ ಕಾಣದಂತೆ ಕುತ್ತಿಗೆಗೆ ಬಿಗಿಯಾಗಿ ಹೊಂದಿಕೊಳ್ಳುವ ದಿರಿಸನ್ನು ಹೊಲಿಸಬೇಕು’ ಎಂದು. ದೃಷ್ಟಿಯಂತೆ ಸೃಷ್ಟಿ ಅಷ್ಟೆ!
* ಪರಿಚಯ : ಲೇಖಕಿ ಸುಧಾ ಆಡುಕಳ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಉಡುಪಿಯ ಬಾಲಕಿಯರ ಸ. ಪ. ಪೂ. ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿದ್ದಾರೆ. ರಾಧಾ, ನೃತ್ಯಗಾಥಾ, ಆನಂದಭಾಮಿನಿ, ಮಾಧವಿ ಏಕವ್ಯಕ್ತಿ ನಾಟಕಗಳನ್ನು ರಚಿಸಿದ್ದಾರೆ. ಟ್ಯಾಗೋರರ ಕೆಂಪು ಕಣಗಿಲೆ, ಚಿತ್ರಾ ನಾಟಕಗಳ ಕನ್ನಡ ರೂಪಾಂತರ ಮಾಡಿದ್ದಾರೆ. ಹತ್ತಕ್ಕಿಂತ ಹೆಚ್ಚು ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಬಕುಲದ ಬಾಗಿಲಿನಿಂದ ಪ್ರಬಂಧ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಇದನ್ನೂ ಓದಿ : Body Shaming ; ಸುಮ್ಮನಿರುವುದು ಹೇಗೆ? : ‘ಬುರ್ಖಾದೊಳಗಿದ್ದುಕೊಂಡೇ ಓದುತ್ತಾಳಂತೆ’ ಅಚ್ಚರಿಯೋ ಕುಹಕವೋ ಮೆಚ್ಚುಗೆಯೋ?
Summaniruvudu Hege series on Body Shaming related self experience based response from writer Sudha Adukala
Published On - 1:50 pm, Thu, 15 April 21