Body Shaming; ಸುಮ್ಮನಿರುವುದು ಹೇಗೆ? : ಎಲ್ಲಿದ್ದೀರಿ ಪ್ರೊಫೆಸರ್, ಈಗ ಹುಡುಕಿ ನೋಡೋಣ ’ಮಲ್ನಾಡ್​ ಕಾಂಪ್ಲೆಕ್ಸ್‘

‘ಅವಮಾನವನ್ನು ಗೆಲ್ಲಲು ಏಕೈಕ ದಾರಿ ಓದು; ನಮ್ಮ ‘ಇಂಟಲೆಕ್ಟ್’ ಅನ್ನು ವಿಸ್ತರಿಸಿಕೊಳ್ಳುವುದು. ಪುಸ್ತಕಗಳಿಲ್ಲದಿದ್ದರೆ ನಾನು ಸತ್ತೇ ಹೋಗುತ್ತಿದ್ದೆ, ಅದೇ ರೀತಿ ಬರವಣಿಯ ಬೆನ್ನು ಹಿಡಿಯದೆ ಹೋದರೂ. ಐದನೇ ಕ್ಲಾಸಿನಲ್ಲಿ ಇಲಿಮರಿಯ ಬಗ್ಗೆ ಬರೆದ ಕವಿತೆಯಿಂದ ಹಿಡಿದು ಇತ್ತೀಚಿನ ಪ್ರಕಟಿಸಿದ ಪುಸ್ತಕಗಳವರೆಗೆ ಬರವಣಿಗೆ ನನಗೆ ಐಡೆಂಟಿಟಿ ತಂದುಕೊಟ್ಟಿದೆ. ಇನ್ನು ‘ಮೂಡ್ ಆಫ್’ ಆದಾಗೆಲ್ಲ ಎಲ್ಲವನ್ನು ‘ಬಿಟ್ಟಾಕಿ’ ನಮ್ಮ ಹಳ್ಳಿಯ ಕಾಡುಮೇಡುಗಳಲ್ಲಿ ಮುಖಕ್ಕೆ ಒಂದು ಪೌಡರ್ ಕೂಡ ಹಾಕಿಕೊಳ್ಳದೆ ಹಸು, ಕಾಗೆಯಂತೆ ಸುತ್ತುವ ಸ್ವಾತಂತ್ರ್ಯದಲ್ಲಿ ಇರಬೇಕು ಅನ್ನಿಸಿಬಿಡುತ್ತದೆ.’ ಡಾ. ಜಯಶ್ರೀ ಕದ್ರಿ

Body Shaming; ಸುಮ್ಮನಿರುವುದು ಹೇಗೆ? : ಎಲ್ಲಿದ್ದೀರಿ ಪ್ರೊಫೆಸರ್, ಈಗ ಹುಡುಕಿ ನೋಡೋಣ ’ಮಲ್ನಾಡ್​ ಕಾಂಪ್ಲೆಕ್ಸ್‘
ಲೇಖಕಿ ಡಾ. ಜಯಶ್ರೀ ಕದ್ರಿ
Follow us
ಶ್ರೀದೇವಿ ಕಳಸದ
|

Updated on:Apr 08, 2021 | 3:24 PM

ಜನಪ್ರತಿನಿಧಿಗಳೇ,  ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ 

ದುಂಡುಗೆನ್ನೆಯ ಹುಡುಗಿ ಟೀಚರ್ ಕೈ ಯಿಂದ ಮುದ್ದಿಸಿಕೊಳ್ಳುತ್ತಾಳೆ. ನಾಟಕದಲ್ಲಿ ಹೀರೋಯಿನ್ ಪಾತ್ರವೂ ಸಿಗುವಲ್ಲಿಂದ ಶುರು ಆಗುವ ಈ ಕೀಳರಿಮೆಯ ಯಾನ ಕೊನೆಗೊಳ್ಳುವುದು ಆತ್ಮವಿಶ್ವಾಸ ಬೆಳೆಸಿಕೊಂಡಾಗ ಮಾತ್ರ. ಈ ಕಾರಣಕ್ಕಾಗಿಯೇ ನಾವೆಲ್ಲ ಕ್ಲಾಸಿಗೆ ‘ಫರ್ಸ್ಟ್​​’ ಬರಲು ಹವಣಿಸುತ್ತಿದ್ದೆವು ಎನಿಸುತ್ತದೆ ಎನ್ನುತ್ತಿದ್ದಾರೆ ಮಂಗಳೂರಿನಲ್ಲಿ ಇಂಗ್ಲಿಷ್​ ಉಪನ್ಯಾಸಕಿಯಾಗಿರುವ ಡಾ. ಜಯಶ್ರೀ ಬಿ. ಕದ್ರಿ.  

ನಾನಾಗ ಹತ್ತನೇ ತರಗತಿ. ಕುಳ್ಳಗೆ, ಬೆಳ್ಳಗೆ, ಸಪೂರವಾಗಿ ಇದ್ದೆ. ಆಗ ನನ್ನ ಗುರಿ ಎಂದರೆ ‘ಡಿಸ್ಟಿಂಕ್ಷನ್’ ಗಳಿಸಬೇಕು ಎನ್ನುವುದಷ್ಟೇ ಇತ್ತು. ಸ್ಟಾಫ್​ರೂಮ್ ಬಳಿ ಬಯಾಲಜಿ ಮೇಷ್ಟ್ರು, ಫಿಸಿಕ್ಸ್ ಸರ್ ಜತೆ ಮಾತಾಡುತ್ತ, ‘ನೋಡಲ್ಲಿ ಬಿಳಿ ಜಿರಳೆಯ ಹಾಗೆ ನಿಂತದ್ದು ಅವಳು’ ಅಂತ ಹೇಳಿದರು. ಅದು ಪ್ರೀತಿಯಿಂದ ಹೇಳಿದ್ದು ಎನ್ನುವ ಹಾವ ಭಾವ ಬೇರೆ. ‘ನೀನೇನು ಸರಿಯಾಗಿ ಊಟ ಮಾಡುವುದಿಲ್ಲವೇ? ನೀನ್ಯಾಕೆ ಇಷ್ಟು ಗಿಡ್ಡ?’ ಬೆನ್ನಲ್ಲೇ ಪ್ರಶ್ನೆಗಳು ಶುರು.

ಮನೆಯಲ್ಲಿ ಅಕ್ಕ, ಅಣ್ಣ ಎಲ್ಲರೂ ಉದ್ದ. ನನಗೆ ನನ್ನ ಅಜ್ಜಿಯ ಜೀನ್ಸ್ ಬಂದಿದ್ದು ಗಿಡ್ಡ ಎಂದೇ ಹೇಳಬಹುದು. ತೀರಾ ಇತ್ತೀಚೆಗೆ ನನಗಿಂತಲೂ ಗಿಡ್ಡ ವಿದ್ಯಾರ್ಥಿಗಳನ್ನು ನೋಡುವಾಗೆಲ್ಲ ಆ ಪಾಪದ ವಿದ್ಯಾರ್ಥಿಗಳು ಅನುಭವಿಸಬಹುದಾದ ಯಾತನೆಯನ್ನು ಅಂದಾಜಿಸಿಕೊಳ್ಳಬಲ್ಲೆ. ನನ್ನ ಕಣ್ಣೆದುರಿಗೇ ಕುಳ್ಳಗಿರುವ ಹುಡುಗಿಯೊಬ್ಬಳಿಗೆ’ ನೀನು ಗೇರು ಬೀಜದ ಮರದ ಗೆಲ್ಲು ಹಿಡಿದು ನೇತಾಡಬೇಕು’ ಎಂದು ಕಾಳಜಿಯಿಂದಲೇ ಹೇಳಿರಬಹುದಾದ ಮಾತನ್ನು ಕೇಳಿದೆ. ಹೆಚ್ಚಿನವರಿಗೂ, ನಾವು ಅರಿವಿಲ್ಲದೆ ಮಾಡುವ ಕಮೆಂಟುಗಳು ಬೇರೊಬ್ಬರನ್ನು ಇಂಚಿಂಚಾಗಿ ಕೊಲ್ಲಬಹುದು ಎನ್ನುವ ಪರಿಜ್ಞಾನವೇ ಇರುವುದಿಲ್ಲ. ದೇಹ ಸೌಂದರ್ಯ ದ ಬಗ್ಗೆ ತಲೆತಲಾಂತರದಿಂದ ನಾವು ಕಂಡಿಶನ್ ಆಗಿದ್ದೇವೆ ಎನಿಸುತ್ತದೆ. ‘ಒಥೆಲೊ ವಾಸ್ ಅ ಮೋರ್ ಯು ನೊ, ವೆರಿ ಡಾರ್ಕ್’ ಎಂದು ಪಾಠ ಹೇಳಿದಾಗ ಆ ವಿದ್ಯಾರ್ಥಿನಿಯ ಗಾಯಗೊಂಡ ಜಿಂಕೆಯಂತಹ ಮುಖವನ್ನು ನಾನೆಂದೂ ಮರೆಯಲಾರೆ.

ಇನ್ನೊಂದು ಕ್ರೂರವಾದ ಬಾಡಿ ಶೇಮಿಂಗ್ ನಮ್ಮ ಗಮನಕ್ಕೆ ಬರುವುದು ಸಂಬಂಧಗಳಲ್ಲಿ. ಅಕ್ಕ- ತಂಗಿ, ತಾಯಿ- ಮಗಳು, ಅಪ್ಪ, ಮಗ ಹೀಗೆಲ್ಲ ನಮ್ಮ ಬಣ್ಣ, ಎತ್ತರ, ಮುಖದ ಶೇಪ್, ಎತ್ತರ, ಬುದ್ಧಿ ಮತ್ತೆ, ಯಾರು ‘ಯಂಗ್’ ಆಗಿ ಕಾಣಿಸ್ತಾರೆ. ಹೀಗೆ ನಮ್ಮ ಜನ್ಮ ಜಾಲಾಡಿ ಇರಬಹುದಾದ ಚೂರು ಪಾರು ಆತ್ಮವಿಶ್ವಾಸವನ್ನು ಕುಗ್ಗಿಸಲು ನೆಂಟರಿಷ್ಟರಿಂದ ಹಿಡಿದು ನಮ್ಮ ಆಪ್ತವಲಯದವರೇ ಇರುತ್ತಾರೆ. ಹುಟ್ಟಿದಾಗಿನಿಂದ ‘ರೂಪ’ ಎನ್ನುವುದು ಎಷ್ಟು ಪ್ರಮುಖ ಎನ್ನುವುದು ನಮ್ಮ ಅರಿವಿಗೆ ಬರುತ್ತಲೇ ಇರುತ್ತದೆ. ದುಂಡುಗೆನ್ನೆಯ ಹುಡುಗಿ ಟೀಚರ್ ಕೈ ಯಿಂದ ಮುದ್ದಿಸಿಕೊಳ್ಳುತ್ತಾಳೆ. ನಾಟಕದಲ್ಲಿ ಹೀರೋಯಿನ್ ಪಾತ್ರವೂ ಸಿಗುವಲ್ಲಿಂದ ಶುರು ಆಗುವ ಈ ಕೀಳರಿಮೆಯ ಯಾನ ಕೊನೆಗೊಳ್ಳುವುದು ಆತ್ಮವಿಶ್ವಾಸ ಬೆಳೆಸಿಕೊಂಡಾಗ ಮಾತ್ರ. ಈ ಕಾರಣಕ್ಕಾಗಿಯೇ ನಾವೆಲ್ಲ ಕ್ಲಾಸಿಗೆ ‘ಫರ್ಸ್ಟ್​​’ ಬರಲು ಹವಣಿಸುತ್ತಿದ್ದೆವು ಎನಿಸುತ್ತದೆ.

ನಾವು ಹೈಸ್ಕೂಲ್ ಹಂತದಲ್ಲಿ ಕದ್ದು ಮುಚ್ಚಿ ಓದುತ್ತಿದ್ದ ಜನಪ್ರಿಯ ಧಾರಾವಾಹಿ, ಕಾದಂಬರಿಗಳಲ್ಲೂ ಹೀರೋಯಿನ್ ಕಡ್ಡಾಯವಾಗಿ ಸುಂದರಿ ಆಗಿಯೇ ಇರುತ್ತಿದ್ದಳು. ಆಕೆಯಂತೆ ಮುಂಗುರುಳು ಬೇಕೆಂದು ತಮ್ಮ ಕೂದಲನ್ನು ಅಸಡ್ಡಾಳವಾಗಿ ಕತ್ತರಿಸಿಕೊಂಡ ಹುಡುಗಿಯರೂ ಈಗ ನೆನಪಾಗುತ್ತಾರೆ. ಇನ್ನು ಹಳ್ಳಿ ಮೂಲೆಗಳ ಸರಕಾರಿ ಸ್ಕೂಲು ಕಾಲೇಜುಗಳಲ್ಲೇ ಓದಿದ ನಮಗೆ ಅಂದವಾಗಿ ಕಾಣಿಸಲು ಬ್ಯೂಟಿ ಪಾರ್ಲರ್ಗಳಿವೆ ಎಂದೆಲ್ಲ ಗೊತ್ತಿರಲಿಲ್ಲ, ಇದ್ದರೂ ಹೋಗಲು ಸಾಧ್ಯವಿರಲಿಲ್ಲವೆನ್ನಿ. ಹೀಗಾಗಿಯೇ ಈಗೇನಾದರೂ ಮೇಕಪ್ ಮೆತ್ತಿಕೊಂಡರೆ ಅರ್ಧಗಂಟೆಗೆಲ್ಲ ತಳಮಳ ಶುರು ಆಗುತ್ತದೆ. ಹಾಗೆಂದು ‘ಪ್ರೆಸೆಂಟಬಲ್’ ಆಗಿರಲು ಎಷ್ಟು ಬೇಕು ಅಷ್ಟು ಸೌಂದರ್ಯವರ್ಧಕಗಳನ್ನು ಬಳಸಲೇಬೇಕಾದ ಅನಿವಾರ್ಯತೆ ಇದೆ ಹಾಗೂ ಅದು ನಮ್ಮ ಆತ್ಮವಿಶ್ವಾಸವನ್ನು ವರ್ಧಿಸುವುದಿದ್ದಲ್ಲಿ ಯಾವ ತಪ್ಪೂ ಇಲ್ಲ ಎಂದು ನನ್ನ ಭಾವನೆ. ಎಲ್ಲ ಥಿಯರಿಗಳಿಗಿಂತ ನಮ್ಮೊಳಗಿನ ಕುಟುಕು ಜೀವಕ್ಕೆ, ಮನಸ್ಸಿಗೆ ಸಮಾಧಾನವಾಗುವುದನ್ನೇ ಮಾಡುವುದನ್ನು ಈಗೀಗ ರೂಢಿಸಿಕೊಂಡಿದ್ದೇನೆ.

ತೀರಾ ಒಡ್ಡೊಡ್ಡಾಗಿ ಇರುವುದರ ಬದಲು ನೀಟಾಗಿದ್ದರೆ ನಮಗೆ ಅದು ಲಾಭವೇ. ಅತಿ ಆಗಬಾರದು ಅಷ್ಟೆ. ತೀರ ಮುಖದಲ್ಲಿ ಮೊಡವೆ ಕಂಡಾಗ ಹೌಹಾರುವ ಹುಡುಗಿಯರಲ್ಲದಿದ್ದರೂ ಎಣ್ಣೆ ಮುಖದ, ರಾಶಿ ಕೂದಲನ್ನು ಸ್ಟೈಲ್ ಆಗಿ ಬಾಚಲು ಕೂಡ ಗೊತ್ತಿರದ ಹಳ್ಳಿ ಹುಡುಗಿಯರು ನಾವು ಯುನಿವರ್ಸಿಟಿಯಲ್ಲಿ ಕೂಡ ಕುಗ್ಗುತ್ತಲೇ ಇದ್ದಿದ್ದು ಸತ್ಯ. ಈ ರೀತಿಯ ಚಿಪ್ಪಿನಲ್ಲಿರುವ ಆಮೆಯಂತೆ ಇರುವವರನ್ನು ನಮ್ಮ ಮಾನಸ ಗಂಗೋತ್ರಿಯ ಪ್ರೊಫೆಸರುಗಳು ‘ಮಲ್ನಾಡ್ ಕಾಂಪ್ಲೆಕ್ಸ್’ ಎಂದು ಲಘುವಾಗಿ ಛೇಡಿಸುತ್ತಿದ್ದರು. ಅಗತ್ಯಕ್ಕಿಂತ ಜಾಸ್ತಿ ಚಂದ ಇಲ್ಲದ್ದು ಒಂದು ರೀತಿಯಿಂದ ಲಾಭವೇ ಆಗಿತ್ತು ಅಂತ ಹೇಳಬಹುದು. ಬಹುಶಃ ಈ ಕಾರಣಕ್ಕಾಗಿಯೇ ನಾವೆಲ್ಲ ಪುಸ್ತಕಗಳ ಸಾಂಗತ್ಯ ಬೆಳೆಸಿಕೊಂಡೆವು.

ಬಹುಶಃ ಬಾಡಿ ಶೇಮಿಂಗ್​ಅನ್ನು ಗೆಲ್ಲಲು ಏಕೈಕ ದಾರಿ ಓದು; ನಮ್ಮ ‘ಇಂಟಲೆಕ್ಟ್’ ಅನ್ನು ವಿಸ್ತರಿಸಿಕೊಳ್ಳುವುದು. ಪುಸ್ತಕಗಳಿಲ್ಲದಿದ್ದರೆ ನಾನು ಸತ್ತೇ ಹೋಗುತ್ತಿದ್ದೆ ಎಂದು ನನಗೆ ಎಷ್ಟೋ ಸಲ ಅನಿಸಿದೆ. ಅದೇ ರೀತಿ ಬರವಣಿಗೆ ಕೂಡ. ಐದನೇ ಕ್ಲಾಸಿನಲ್ಲಿ ಇಲಿಮರಿಯ ಬಗ್ಗೆ ಬರೆದ ಕವಿತೆಯಿಂದ ಹಿಡಿದು ಇತ್ತೀಚೆಗಿನ ವರ್ಷಗಳಲ್ಲಿ ಪ್ರಕಟಿಸಿದ ಎರಡು ಪುಸ್ತಕಗಳವರೆಗೆ ಬರವಣಿಗೆ ನನಗೆ ಒಂದು ರೀತಿಯ ಐಡೆಂಟಿಟಿ ತಂದು ಕೊಟ್ಟಿದೆ.

body shaming

ಸೌಜನ್ಯ : ಅಂತರ್ಜಾಲ

ಬಾಡಿ ಶೇಮಿಂಗ್ ನಲ್ಲಿ ಇನ್ನೊಂದು ಪ್ರಮುಖ ಶತ್ರು ನಮ್ಮ ತೂಕ. ಹೆಣ್ಣುಗಂಡೆಂಬ ಭೇದವಿಲ್ಲದೆ ಹೆಚ್ಚಿನವರೂ ತಮ್ಮ ತೂಕದ ಬಗ್ಗೆ ಕಸಿವಿಸಿಗೊಳ್ಳುವುದನ್ನು ನೋಡುತ್ತಲೇ ಇರುತ್ತೇವೆ. ಪ್ರಿಯವಾದ ಬನಾರಸ್ ಟಿಶ್ಯೂ ಸೀರೆ ಉಟ್ಟುಕೊಂಡು ಹೋದಾಗ ವಿದ್ಯಾರ್ಥಿನಿ ಒಬ್ಬಳು ಮುಸಿಮುಸಿ ನಗುತ್ತಿದ್ದಳು. ಕಾರಣ ಕೇಳಿದಾಗ ಹಿಂಜರಿಯುತ್ತಲೇ ಈ ಸೀರೆಯಲ್ಲಿ ತುಂಬ ದಪ್ಪ ಕಾಣ್ತೀರಿ ಮೇಡಂ ಅಂದಳು. ಕಡ್ದಿಯಂತಿದ್ದವಳು ಮದುವೆ, ಮಗು ನಂತರ ಇಪ್ಪತ್ತು ಕೇಜಿ ದಪ್ಪವಾಗಿದ್ದು ಕಾಲದ ಚೋದ್ಯ. ಇನ್ನು ಈ ತೂಕ ತಗ್ಗಿಸಿಕೊಳ್ಳಲು ಸಲಾಡ್, ಜಿಮ್, ಯೋಗ ಎಂದೆಲ್ಲ ಕಸರತ್ತುಗಳು. ‘ಮೂಡ್ ಆಫ್’ ಆದಾಗೆಲ್ಲ ಎಲ್ಲವನ್ನು ‘ಬಿಟ್ಟಾಕಿ’ ನಮ್ಮ ಹಳ್ಳಿಯ ಕಾಡುಮೇಡುಗಳಲ್ಲಿ ಮುಖಕ್ಕೆ ಒಂದು ಪೌಡರ್ ಕೂಡ ಹಾಕಿಕೊಳ್ಳದೆ ಒಂದು ಹಸುವಿನಂತೆಯೋ, ಕಾಗೆಯಂತೆಯೋ ಸುತ್ತುವ ಸ್ವಾತಂತ್ರ್ಯದಲ್ಲಿ ಇರಬೇಕು ಅನ್ನಿಸುತ್ತದೆ.

ಈಗಿನ ಕಾರ್ಪೋರೇಟ್ ಜಗತ್ತಿನಲ್ಲಿ ಅಂದವಾಗಿ ಕಾಣಿಸಿಕೊಳ್ಳಬೇಕಾಗಿರುವುದೂ ನಮ್ಮ ಕೆಲಸದ ಅಗತ್ಯವೇ ಆಗಿ ಬಿಟ್ಟಿದೆ. ಅದಕ್ಕೆ ‘ಪವರ್ ಡ್ರೆಸಿಂಗ್’ ಎಂಬ ಹೆಸರು ಬೇರೆ. ಇದನ್ನೇ ಸಕಾರಾತ್ಮಕವಾಗಿ ಬಳಸಿಕೊಳ್ಳುವ ಯೋಚನೆ ನನ್ನದು. ಸೀರೆ, ಬಳೆ, ಡಿಸೈನರ್ ಬ್ಲೌಸ್ ಎಂದೆಲ್ಲ ವ್ಯಯಿಸುವ ಕ್ಷಣಗಳು ಸಣ್ಣಸಣ್ಣ ಸಂಭ್ರಮವನ್ನು ತಂದುಕೊಡುವುದು ಸುಳ್ಳಲ್ಲ. ಒಂದು ರೀತಿಯಲ್ಲಿ ‘ರೂಪ, ರಸ, ಗಂಧವನ್ನು ತುಂಬಿಕೊಳ್ಳುವ ಪರಿ ಇದು. ಸೀರೆಯಂಗಡಿಯಲ್ಲಿ ಬಣ್ಣಗಳ ನಡುವೆ ಕಳೆದುಹೋಗುವ, ಫ್ಯಾನ್ಸಿ ಅಂಗಡಿಯಲ್ಲಿ ಬೇರೆ ಬೇರೆ ಕಲರ್ ಕಿವಿಯೋಲೆ, ಕ್ಲಿಪ್, ಲಿಪ್ ಸ್ಟಿಕ್ ಎಂದೆಲ್ಲ ‘ಮಿ ಟೈಂ’ ಅಂತಾರಲ್ಲ ಹಾಗೆ ಅಡುಗೆಮನೆ ಗೊಡವೆ ಇಲ್ಲದೆ ಸಂಭ್ರಮಿಸುವುದೂ ಸ್ವಾತಂತ್ರ್ಯವೇ ಎಂದು ಕೆಲವೊಮ್ಮೆ ಅನಿಸಿದ್ದಿದೆ. ಹಾಗೆ ನೋಡಿದರೆ ‘ಲಿಪ್ ಸ್ಟಿಕ್ ಫೆಮಿನಿಸಂ’ ಎನ್ನುವ ಸ್ತ್ರೀವಾದ ಮಹಿಳೆಯರ ಅಲಂಕಾರ ಪ್ರಿಯತೆಯನ್ನು ಸಮರ್ಥಿಸುತ್ತದೆ. ಅದು ಒಂದು ರೀತಿಯ ಜೀವನಪ್ರೀತಿ ಕೂಡ. ಫೆಮಿನಿಸಂ, ಅದು ಇದು ಏನೂ ಗೊತ್ತಿರದ ನಮ್ಮ ಅಜ್ಜಿ ಕಾಲು ನೀಡಿ ಕುಳಿತು ಪುಟ್ಟ ಕನ್ನಡಿಯಲ್ಲಿ ಮುಖನೋಡಿ, ಜೇನುಮೇಣ ಇಟ್ಟು ಕುಂಕುಮ ವಿಟ್ಟು, ಎಣ್ಣೆ ಹಚ್ಚಿ ತಲೆ ಬಾಚಿ, ತೋಟದ ಅಬ್ಬಲಿಗೆ, ಮುತ್ತು ಮಲ್ಲಿಗೆ ಹೂವೋ, ಏನಿಲ್ಲವಾದಲ್ಲಿ ಮಂದಾರವೋ, ಒಂದು ದೊಡ್ಡ ಗಂಟೆಯಂತಹ ದಾಸವಾಳ ಹೂವನ್ನೋ ಮುಡಿಯುತ್ತಿದ್ದುದು ನೆನಪಿದೆ. ಆದು ಅವರ ಸೌಂದರ್ಯ ಪ್ರಜ್ಞೆ, ಜೀವನ ಪ್ರೀತಿ. ಇದ್ದುದರಲ್ಲಿ ಸುಂದರವಾಗಿ ಅಲಂಕರಿಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲವೆಂದೇ ನನ್ನ ಭಾವನೆ. ಮೂರು ಹೊತ್ತು ಅದೇ ಧ್ಯಾನವಾಗಬಾರದು ಅಷ್ಟೆ.

ನಾವು ಈಗ ಮಾಧ್ಯಮಗಳಲ್ಲಿ ನೋಡುತ್ತಿರುವ ಜಾಹೀರಾತುಗಳು ನಗರ ಕೇಂದ್ರಿತವಾಗಿದ್ದು ಹಳ್ಳಿ ಮೂಲದವರಲ್ಲಿ, ಅಥವಾ ಈಗಲೂ ಹಳ್ಳಿಯಲ್ಲಿ ಇರುವವರಲ್ಲಿ ಕೀಳರಿಮೆ ಬಿತ್ತುವ ಸಾಧ್ಯತೆ ಇದೆ. ಆಗ ತಾನೇ ಬ್ಯೂಟಿಪಾರ್ಲರ್​ನಿಂದ ಬಂದಿರುವಂತಹ, ತ್ವಚೆ, ಕೂದಲು, ಸೊಂಟದ ಅಳತೆ, ಮೈಬಣ್ಣ ,ಅಡುಗೆ, ಯೌವನ ಬಿಟ್ಟರೆ ಬೇರೆ ಏನೂ ಇಲ್ಲವೇನೋ ಎಂಬಂತೆ ಬಿಂಬಿಸುವ ಲೋಕ ಅದು. ಈ ಭ್ರಮೆಗಳ ಹೊರತಾದ ಸೌಂದರ್ಯ ಪ್ರಜ್ಞೆ, ಜೀವನ ಪ್ರೀತಿ ನಮಗಿದ್ದಲ್ಲಿ, ಎಲ್ಲಕಿಂತ ಮಿಗಿಲಾಗಿ ಮಾನವೀಯತೆಗಿಂತ ಮಿಗಿಲಾದ ಅಂದ ಈ ಜಗತ್ತಿನಲ್ಲಿ ಇಲ್ಲ, ದಯೆಗಿಂತ ಮಿಗಿಲಾದ ಸೌಂದರ್ಯ ಇಲ್ಲ ಎನ್ನುವ ಅರಿವು ಇದ್ದರೆ ಸಾಕು. ಅಂತಃಕರಣಕ್ಕಿಂತ ಮಿಗಿಲಾದ ಚೆಲುವು, ನಿಸರ್ಗಕ್ಕಿಂತ ರಮ್ಯವಾದ ಅಂದ ಬೇರೆಲ್ಲಿದೆ?

* ಪರಿಚಯ: ಕಾಸರಗೊಡಿನ ಕುಂಬಳೆಯವರಾದ ಡಾ. ಜಯಶ್ರೀ ಬಿ. ಕದ್ರಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಎಂ. ಎ.  ಮತ್ತು ಪಿಎಚ್. ಡಿ ಪದವಿ ಪಡೆದಿರುತ್ತಾರೆ. ವೃತ್ತಿಯಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ. ಕನ್ನಡದಲ್ಲಿ ಕಥೆ, ಕವನ, ಲೇಖನ ಬರೆಯುವುದು ಹವ್ಯಾಸ. ಸಂಗೀತದಲ್ಲಿ ವಿಶೇಷ ಆಸಕ್ತಿ. ‘ತೆರೆದಂತೆ ಹಾದಿ’ ಮತ್ತು ‘ಬೆಳಕು ಬಳ್ಳಿ’ ಪ್ರಕಟಿತ ಕೃತಿಗಳು.

ಇದನ್ನೂ ಓದಿ : Body Shaming; ಸುಮ್ಮನಿರುವುದು ಹೇಗೆ? : ‘ನಾನು ಹೇಗಾದರೂ ಇರುತ್ತೇನೆ, ಹೇಳಲು ಕೇಳಲು ನೀವ್ಯಾರು?’

Summaniruvudu Hege series on body shaming controversial statement by Dindigul Leoni and response from writer Jayashree Kadri

Published On - 3:23 pm, Thu, 8 April 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ