Body Shaming; ಸುಮ್ಮನಿರುವುದು ಹೇಗೆ? : ‘ನಾನು ಹೇಗಾದರೂ ಇರುತ್ತೇನೆ, ಹೇಳಲು ಕೇಳಲು ನೀವ್ಯಾರು?’

'ನಮ್ಮ ಪ್ರೌಢಶಾಲಾ ವಿದ್ಯಾರ್ಥಿನಿಯರನ್ನು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಕರೆದೊಯ್ಯುತ್ತಿದ್ದೆ. ಅವರನ್ನು ವೇದಿಕೆಗೆ ಅಣಿಗೊಳಿಸಲೆಂದು ಕೋಣೆಗೆ ಹೋದಾಗ ಆಘಾತಕಾರಿ ಸಂಗತಿಯೊಂದು ಹೊರಬಿತ್ತು. ಬ್ರೇಸಿಯರ್​ಗಳನ್ನು ತೆಗೆದುಕೊಳ್ಳಲು ದುಡ್ಡಿನ ಅನುಕೂಲವಿಲ್ಲದ ಕೆಲ ಹಳ್ಳಿಗಾಡಿನ ಹುಡುಗಿಯರು ಬಟ್ಟೆಯ ತುಂಡನ್ನೇ ತಮ್ಮ ಎದೆಯ ಭಾಗಕ್ಕೆ ಬಹಳ ಬಿಗಿಯಾಗಿ ಕಟ್ಟಿಕೊಳ್ಳುತ್ತಾರೆ ಎಂಬುದು. ಅವೈಜ್ಞಾನಿಕವಾದ, ಉಸಿರುಗಟ್ಟಿಸುವ ಈ ಕ್ರಮ ಅವರ ಆರೋಗ್ಯದ ಮೇಲೆ ನಿಸ್ಸಂಶಯವಾಗಿ ಕೆಟ್ಟ ಪ್ರಭಾವ ಬೀರುತ್ತದೆ. ಈ ಹುಡುಗಿಯರ ಇಂತಹ ನಡೆವಳಿಕೆಗೆ ಮುಖ್ಯ ಕಾರಣ ಕೆಲ ಗಂಡಸರ ಮತ್ತು ಇಡೀ ಸಮಾಜದ ‘ವಕ್ರದೃಷ್ಟಿ’ ಎಂದು ಬೇರೆ ಹೇಳಬೇಕಾಗಿಲ್ಲ!‘ ವಿಜಯಶ್ರೀ ಹಾಲಾಡಿ

  • TV9 Web Team
  • Published On - 11:43 AM, 8 Apr 2021
Body Shaming; ಸುಮ್ಮನಿರುವುದು ಹೇಗೆ? : ‘ನಾನು ಹೇಗಾದರೂ ಇರುತ್ತೇನೆ, ಹೇಳಲು ಕೇಳಲು ನೀವ್ಯಾರು?’
ಲೇಖಕಿ ವಿಜಯಶ್ರೀ ಹಾಲಾಡಿ

ಜನಪ್ರತಿನಿಧಿಗಳೇ,
ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

‘ಎಲ್ಲವನ್ನೂ ಜಾಡಿಸಿ ಒದ್ದು, ‘ನಾನು ಹೇಗಾದರೂ ಇರುತ್ತೇನೆ, ಹೇಳಲು ಕೇಳಲು ನೀವ್ಯಾರು?’ ಎಂಬ ದಿಟ್ಟ ಉತ್ತರವನ್ನು ಮಹಿಳೆ ಆಗಾಗ ಕೊಡುತ್ತಲೇ ಬಂದಿದ್ದಾಳೆ; ಇನ್ನು ಮುಂದೆ ಮತ್ತಷ್ಟು ಗಟ್ಟಿಯಾಗಿಯೇ ಕೊಡುತ್ತಾಳೆ. ಇನ್ನೊಂದು ವಿಷಯವೆಂದರೆ ಎಲ್ಲಾ ವಿಧದಲ್ಲೂ ಪ್ರಗತಿ ಸಾಧಿಸುತ್ತಿರುವ ತನ್ನನ್ನು ಹಣಿಯುವ ಹುನ್ನಾರವೂ ಇಂತಹ ದೇಹಕೇಂದ್ರಿತ ಮಾತುಗಳ ಹಿನ್ನೆಲೆಯಲ್ಲಿದೆ ಎಂಬುದನ್ನು ಆಕೆ ಅರ್ಥಮಾಡಿಕೊಂಡಿದ್ದಾಳೆ. ಹೀಗಿರುವಾಗ ಸಮಾಜದ ವಿಕೃತಿಗಳ ಮಧ್ಯೆ ‘ಹ್ಯಾಪಿ ಟು ಬ್ಲೀಡ್’ ಸಾಧ್ಯವೇ?’ ಲೇಖಕಿ, ಕವಿ, ಶಿಕ್ಷಕಿ ವಿಜಯಶ್ರೀ ಹಾಲಾಡಿ. 

ಹುಟ್ಟಿನಿಂದ ಸಾಯುವ ದಿನದವರೆಗೂ ಹೆಣ್ಣಿನ ದೇಹವನ್ನು ಗುರಿಯಾಗಿಸಿಕೊಂಡ ಅನೇಕ ರೀತಿಯ ದಾಳಿಗಳು ನಡೆಯುತ್ತಿವೆ. ಇವುಗಳಲ್ಲಿ ಮಾತಿನ ದಾಳಿ ಪ್ರಮುಖವಾದದ್ದು. ಇವೆಲ್ಲವನ್ನೂ ಸಹಿಸಿ ಆಕೆ ಪ್ರತಿ ಮಾತಿಲ್ಲದೆ ಬದುಕಬೇಕು ಎನ್ನಲಾಗುತ್ತದೆ. ಆದರೆ ಅವಳ ತಾಳ್ಮೆಗೂ ಮಿತಿಯಿದೆ; ಒಂದಿಲ್ಲೊಂದು ದಿನ ಅದು ಸ್ಫೋಟಗೊಳ್ಳುತ್ತದೆ. ಸಣ್ಣಂದಿನಿಂದಲೂ ನನ್ನದು ಸಪೂರ ಮತ್ತು ತುಸು ನಿಶ್ಯಕ್ತ ದೇಹ, ಆಗಾಗ ಕಾಡುವ ಜ್ವರ. ‘ಟ್ಯಾಂಟ್ರಕ್ಕಿ ಕೈಕಾಲ್’, ‘ಕಡ್ಡಿ ಪೈಲ್ವಾನ್’ ಎನ್ನುವುದೆಲ್ಲ ಆಗ ನಮ್ಮ ಮನೆಮಂದಿ ಮುದ್ದಿನಿಂದ ನನ್ನನ್ನು ಕರೆಯುತ್ತಿದ್ದ ರೀತಿ. ಹರೆಯದರಲ್ಲಿ ಸ್ವಲ್ಪ ಮೈಕೈ ತುಂಬಿಕೊಂಡರೂ ಮತ್ತೆ ಸಪೂರವೇ ಆದ ನಾನು ಮದುವೆಯಾಗಿ ಮಗ ಸುಮಾರು ದೊಡ್ಡ ಆಗುವವರೆಗೂ ತೀರಾ ಸಪೂರವೇ ಇದ್ದೆ. ಆಗ ಸಹೋದ್ಯೋಗಿಗಳು ಮತ್ತು ಕಂಡಕಂಡವರೆಲ್ಲ ನನ್ನ ಸಣಕಲು ದೇಹವನ್ನು, ನಿಶ್ಯಕ್ತಿಯನ್ನು ತಮಾಷೆ ಮಾಡುತ್ತಿದ್ದರು. ಇದೆಲ್ಲದರಿಂದಾಗಿ ಸ್ವಲ್ಪವಾದರೂ ದಪ್ಪವಾಗಬೇಕೆಂದು ನನಗನ್ನಿಸಿತು. ಅವರಿವರ ಸಲಹೆಯಂತೆ ಮೊಸರು, ಸಿಹಿತಿಂಡಿ ಎಲ್ಲ ತಿಂದು ತುಸು ದಪ್ಪವಾದಾಗ ಖುಷಿಪಟ್ಟೆ.

ನಂತರ ನನ್ನ ತವರು ಜಿಲ್ಲೆಯಾದ ದಕ್ಷಿಣ ಕನ್ನಡಕ್ಕೆ ವರ್ಗಾವಣೆ ತೆಗೆದುಕೊಂಡು ಬಂದಾಗ ಇಲ್ಲಿಯ ವಾತಾವರಣ ನನ್ನ ಆರೋಗ್ಯಕ್ಕೆ ಪ್ರತಿಕೂಲವೆನಿಸಿತು. ಅಲರ್ಜಿ ಟೆಸ್ಟ್​ಗಳನ್ನು ಮಾಡಿದಾಗ ಕರಾವಳಿತೀರದ ಗಾಳಿ, ನೀರು ಎಲ್ಲವೂ ನನ್ನ ದೇಹಕ್ಕೆ ಅಲರ್ಜಿ ಎಂಬ ರಿಪೋರ್ಟ್ ಬಂದಿತು. ಇದರೊಂದಿಗೆ ಶ್ವಾಸಕೋಶದ ಇನ್ಫೆಕ್ಷನ್ ಆಗಿರುವ ವಿಚಾರವೂ ತಿಳಿಯಿತು. ಈ ಸಂದರ್ಭದಲ್ಲಿ ತೆಗೆದುಕೊಂಡ ಟ್ರೀಟ್​ಮೆಂಟ್​ಗಳು ಮತ್ತು ಅಲರ್ಜಿ, ಬಿಡದೇ ಕಾಡುವ ಮೈಗ್ರೇನ್​ಗಾಗಿ ತಿಂದಿರುವ ಸಾವಿರಾರು ಮಾತ್ರೆಗಳು ನನ್ನನ್ನು ದಪ್ಪಗೊಳಿಸಿದವು. ಒಂದೇ ವರ್ಷದಲ್ಲಿ ಒಮ್ಮೆಲೇ ಹನ್ನೆರಡು ಕೆ.ಜಿ. ಜಾಸ್ತಿಯಾದೆ. ಈ ಸಂದರ್ಭದಲ್ಲಿನ ಜನರ ವಿವಿಧ ಪ್ರತಿಕ್ರಿಯೆ, ವ್ಯಂಗ್ಯ, ಜಡ್ಜ್​ಮೆಂಟ್​ಗಳನ್ನು ನೋಡುತ್ತ ಇವರೇ ನನ್ನ ಭಾರವನ್ನು ಹೊತ್ತು ತಿರುಗಾಡುತ್ತಿದ್ದಾರೇನೋ ಅನ್ನಿಸಿ ನಗು ಬರುತ್ತಿತ್ತು! ಈಗ ನಾಲ್ಕೈದು ವರ್ಷಗಳ ಕೆಳಗೆ ಅಕಸ್ಮಾತ್ ಭೇಟಿಯಾದ ನನ್ನ ಸಹಪಾಠಿಯೊಬ್ಬ ‘ಎಂಥಾ ಮರ್ರೇ, ಒಳ್ಳೇ ಎಮ್ಮೆ ತರ ಬೆಳೆದಿದ್ದೀರಿ!? ಎಂದು ಮುಖಕ್ಕೆ ಹೊಡೆದಂತೆ ಹೇಳಿ ಆಘಾತ ಹುಟ್ಟಿಸಿದ. ‘ನಿಮ್ಮ ಎಮ್ಮೆ ಯಾವ ಸೀಮೆಯದ್ದು, ನನ್ನಷ್ಟು ಸಣ್ಣ ಇದೆಯಾ, ಹಾಗಾದರೆ ನೀವದಕ್ಕೆ ಆಹಾರ ಕೊಡದೆ ಉಪವಾಸ ಕೆಡವಿದ್ದೀರಾ’ ಎಂದೆಲ್ಲ ಪ್ರಶ್ನಿಸಲು ಹೋಗದೆ ನಕ್ಕು ಸುಮ್ಮನಾದೆ. ಇಂಥಹ ವ್ಯಂಗ್ಯಗಳು ಆಗಾಗ ಎದುರಾಗುತ್ತಿರುತ್ತವೆ.

ನನ್ನೀ ದೇಹ ಮಗುವನ್ನು ಹೊತ್ತು, ಹೆತ್ತು ಸಾಕಿ ದೊಡ್ಡದು ಮಾಡುತ್ತ ತಾನು ಘಾಸಿಗೊಳಗಾಗಿದೆ; ಈ ನಡುವೆ ಎರಡು ಆಪರೇಶನ್​ಗಳಿಗೂ ತೆರೆದುಕೊಂಡು ಬದುಕಿ ಬಂದಿದೆ, ಪ್ರತೀ ತಿಂಗಳೂ ಓವರ್ ಬ್ಲೀಡಿಂಗ್ ಸಮಸ್ಯೆಯನ್ನು ಎದುರಿಸುತ್ತಾ ಕ್ಷೋಭೆಗೊಳಗಾಗಿದೆ, ಈಗ ನಡುವಯಸ್ಸಿನಲ್ಲಿ ಹಾರ್ಮೋನ್ ಏರುಪೇರುಗಳನ್ನು ಎದುರಿಸುತ್ತಿದೆ, ಈ ಎಲ್ಲ ಸಂಕಷ್ಟಗಳ ಮಧ್ಯೆ ಮನೆಕೆಲಸವನ್ನೂ ಮಾಡಿಕೊಂಡು ನಿರಂತರ ಹದಿನೈದು ವರ್ಷಗಳ ಕಾಲ ಶಿಕ್ಷಕಿಯಾಗಿ ದುಡಿದೆ. ಇವೆಲ್ಲವನ್ನೂ ಯಾರಲ್ಲಿ ಹೇಳುವುದು; ಅಥವಾ ಹೇಳಿಯಾದರೂ ಏನು ಪ್ರಯೋಜನ! ಆದರೂ ಹೇಳಿದ್ದೇನೆ ‘ಹೀಗೆ ತುಸು ದಪ್ಪ ಇರುವುದೇ ನನಗಿಷ್ಟ. ಮಾತ್ರೆಗಳ ಪ್ರಭಾವದಿಂದ ಒಮ್ಮೆಲೇ ದಪ್ಪಗಾದೆ, ಇದು ಬೇಸರದ ಸಂಗತಿಯೇನೂ ಅಲ್ಲ, ನನ್ನ ಕೆನ್ನೆಗಳು ಸದಾ ತುಂಬಿಕೊಂಡಿರಬೇಕು ಎನ್ನುವುದೇ ನನ್ನ ಆಸೆ’ ಎಂದು. ಹೆಂಗಸಿನ ದೇಹವೇ ಅವಳ ವ್ಯಕ್ತಿತ್ವವನ್ನು, ಸ್ವಭಾವವನ್ನು ಅಳೆಯುವ ಅಳತೆಗೋಲೆನಿಸಿಕೊಂಡಿರುವುದು ವಿಷಾದನೀಯ.

ಹೆಣ್ಣಿನ ದೇಹದ ಮೇಲೆ ಆಗಾಗ ಕಣ್ಣಾಡಿಸಿ ತೃಪ್ತಿಗೊಳ್ಳುವುದು ಕೆಲ ಗಂಡಸರ ಹವ್ಯಾಸ. ಎದುರೆದುರೇ ವಿಕೃತವಾಗಿ ದಿಟ್ಟಿಸಿ ನೋಡಿ, ಆಕೆಗೆ ಮುಜುಗರ ಹುಟ್ಟಿಸಿ, ಆ ಮೂಲಕ ಆನಂದ ಹೊಂದುವವರೂ ಇದ್ದಾರೆ. ನಮ್ಮ ಪ್ರೌಢಶಾಲಾ ಹಂತದ ಕೆಲ ಸ್ಪರ್ಧೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದೇನೆ. ಆಗ ನಾಟಕ, ನೃತ್ಯಗಳಲ್ಲಿ ಭಾಗವಹಿಸುವ ನನ್ನ ವಿದ್ಯಾರ್ಥಿಗಳಿಗೆ ಡ್ರೆಸ್ ಮಾಡಿ ಅಣಿಗೊಳಿಸಲೆಂದು ಹೆಣ್ಣುಮಕ್ಕಳ ಕೋಣೆಗೆ ಹೋದದ್ದಿದೆ. ಆ ಹೊತ್ತಿನಲ್ಲಿ ಗಮನಿಸಿದ ಆಘಾತಕಾರಿ ಸಂಗತಿಯೆಂದರೆ ಬ್ರೇಸಿಯರ್ಗಳನ್ನು ತೆಗೆದುಕೊಳ್ಳಲು ದುಡ್ಡಿನ ಅನುಕೂಲವಿಲ್ಲದ ಕೆಲ ಹಳ್ಳಿಗಾಡಿನ ಹುಡುಗಿಯರು ಬಟ್ಟೆಯ ತುಂಡನ್ನೇ ತಮ್ಮ ಎದೆಯ ಭಾಗಕ್ಕೆ ಬಹಳ ಬಿಗಿಯಾಗಿ ಕಟ್ಟಿಕೊಳ್ಳುತ್ತಾರೆ ಎಂಬುದು. ಅವೈಜ್ಞಾನಿಕವಾದ, ಉಸಿರುಗಟ್ಟಿಸುವ ಈ ಕ್ರಮ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ನಿಸ್ಸಂಶಯವಾಗಿ ಕೆಟ್ಟ ಪ್ರಭಾವ ಬೀರುತ್ತದೆ. ಈ ಹುಡುಗಿಯರ ಇಂತಹ ನಡವಳಿಕೆಗೆ ಮುಖ್ಯ ಕಾರಣ ಕೆಲ ಗಂಡಸರ ಮತ್ತು ಇಡೀ ಸಮಾಜದ ‘ವಕ್ರದೃಷ್ಟಿ’ ಎಂದು ಬೇರೆ ಹೇಳಬೇಕಾಗಿಲ್ಲ!

ಇನ್ನೊಂದು ದೊಡ್ಡ ಇರುಸುಮುರಿಸೆಂದರೆ ತಿಂಗಳ ಆರೇಳು ದಿನಗಳು. ಹದಿಹರೆಯದ ಹುಡುಗಿಯರಿಂದ ಹಿಡಿದು ಐವತ್ತು ವರ್ಷದ ಮಹಿಳೆಯರೂ ಈ ವಿಷಯದಲ್ಲಿ ಮುಜುಗರ ಅನುಭವಿಸುತ್ತಾರೆ. ಮೊದಲನೆಯದಾಗಿ ಈ ಸಂದರ್ಭದಲ್ಲಿ ಹೆಣ್ಣನ್ನು ನಿಷಿದ್ಧಳು, ಕೊಳಕು, ಮುಟ್ಟಬಾರದವಳು ಎಂದೆಲ್ಲ ನಮ್ಮ ಪರಂಪರೆ ವ್ಯಾಖ್ಯಾನಿಸಿ ಅಪಮಾನಿಸುತ್ತದೆ. ಇದರ ಪರಿಣಾಮವಾಗಿ ತಿಂಗಳ ಈ ದಿನಗಳಲ್ಲಿ ನಿಸರ್ಗಸಹಜ ಕ್ರಿಯೆಯಿಂದ ಅವಳ ದೇಹದಿಂದ ಹೊರಹೋಗುವ ರಕ್ತ ಅಸಹ್ಯ ಮತ್ತು ಅವಮಾನಕರ ಎಂಬ ಚಿತ್ರಣ ವ್ಯವಸ್ಥೆಯಲ್ಲಿ ಮೂಡಿದೆ. ಈ ವಿಷಯಗಳು ಪ್ರತಿಯೊಬ್ಬಳು ಹೆಣ್ಣಿನ ಮನಸ್ಸಿನ ಮೇಲೂ ವ್ಯತಿರಿಕ್ತವಾಗಿ ಪರಿಣಮಿಸಿ ಈ ಒತ್ತಡವೇ ಆ ಸಂದರ್ಭದ ಅವಳ ದೈಹಿಕ ನೋವನ್ನು ಹೆಚ್ಚಿಸುವ ವೇಗವರ್ಧಕವಾಗಿಯೂ ಕೆಲಸ ಮಾಡುತ್ತದೆ. ಅಪ್ಪಿತಪ್ಪಿ ಹೊರ ಉಡುಪಿನ ಮೇಲೆ ಕಲೆಗಳು ಕಂಡರೆ, ನೋಡಿದವರೆಲ್ಲ ಹುಳ್ಳಗೆ ಮುಖ ಮಾಡಿಕೊಂಡು, ಹಿಂದಿನಿಂದ ಕೆಟ್ಟದಾಗಿ ಚರ್ಚಿಸುವುದು ಸಾಮಾನ್ಯ ವಿಷಯ ಎಂಬಂತಾಗಿದೆ. ಹೀಗಾಗಿ ಈ ವಿಷಯದಲ್ಲಿ ಜಾಗ್ರತೆ ವಹಿಸಲೆಂದೇ ಹೆಣ್ಣುಮಕ್ಕಳ ಅರ್ಧಕ್ಕರ್ಧ ಶಕ್ತಿ ವ್ಯಯವಾಗುತ್ತದೆ. ಅದರಲ್ಲೂ ಫೈಬ್ರಾಯಿಡ್ ಸಮಸ್ಯೆಗಳಿಂದ ಮಿತಿಮೀರಿದ ರಕ್ತಸ್ರಾವ ಆಗುವವರ ಪಾಡಂತೂ ಊಹಿಸಲಸಾಧ್ಯ.

body shaming

ಸೌಜನ್ಯ : ಅಂತರ್ಜಾಲ

ಇಂತಹ ನರಕಸದೃಶ ದಿನಗಳನ್ನು ಸುಮಾರು ವರ್ಷಗಳಿಂದ ನುಂಗಿಕೊಂಡು ಬಂದಿರುವ ನನಗೆ ಹೆಣ್ಣುಮಕ್ಕಳ ತೊಂದರೆಯ ಆಳ ಅರ್ಥವಾಗುತ್ತದೆ. ಆ ದಿನಗಳಲ್ಲಿ ಹಾರ್ಮೋನು ಏರುಪೇರಿನಿಂದಾಗುವ ದೈಹಿಕ ನಿಶ್ಯಕ್ತಿ, ಹೊಟ್ಟೆನೋವು, ಕೈಕಾಲು, ತಲೆನೋವುಗಳು ಒಂದು ಕಡೆಯಾದರೆ, ಏನಾದರೂ ಅನಾಹುತವಾಗಿ ಮಾನ ಮರ್ಯಾದೆ ಹೋಗುತ್ತದೇನೋ ಎಂಬ ಹೆದರಿಕೆ ಮತ್ತೊಂದು ಕಡೆ. ಕೆಲವರು ಎರಡೆರಡು ಪ್ಯಾಡ್​ಗಳನ್ನು ಏಕಕಾಲದಲ್ಲಿ ಬಳಸಿದರೆ, ಇನ್ನೂ ಕೆಲವರು ಪ್ಯಾಡಿನ ಜೊತೆ ಬಟ್ಟೆಯನ್ನು ಬಳಸುತ್ತಾರೆ. ಡ್ಯೂಟಿಗೆ ಹೋಗುವ, ಶಾಲೆ-ಕಾಲೇಜಿಗೆ ತೆರಳುವ ಮಹಿಳೆಯರ ಸ್ಥಿತಿ ಮತ್ತಷ್ಟು ಭಯಾನಕ. ಮಧ್ಯಾಹ್ನ ಅಥವಾ ಜಾಸ್ತಿ ಬ್ಲೀಡಿಂಗ್ ಆದ ಹೊತ್ತಿನಲ್ಲಿ ಪ್ಯಾಡ್ ಬದಲಾಯಿಸುವುದೇ ಒಂದು ಸಂಕಟ. ಸರಿಯಾದ ಶೌಚಾಲಯಗಳೇ ಅಪರೂಪವಾಗಿರುವ ನಮ್ಮ ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳು ಎಷ್ಟು ಪರದಾಡಬಹುದೆಂಬುದು ಎಂತವರಿಗೂ ಅರ್ಥವಾಗುತ್ತದೆ. ಋತುಚಕ್ರದಂತಹ ಸಹಜ ದೈಹಿಕ ಚಟುವಟಿಕೆಯನ್ನು ನಮ್ಮ ಸಮಾಜ ಸ್ವಸ್ಥ ಮನಸ್ಸಿನಿಂದ ಆರಾಮವಾಗಿ ಸ್ವೀಕರಿಸುವ ಕಾಲ ಇನ್ನೂ ಬಹಳ ದೂರದಲ್ಲಿರಬಹುದು! ಆದರೆ ಅಲ್ಲಿಯವರೆಗೂ ಕಾಯುತ್ತ ಕುಳಿತುಕೊಳ್ಳದೆ ‘ಹ್ಯಾಪಿ ಟು ಬ್ಲೀಡ್’ ತರಹದ ಸಾಮಾಜಿಕ ಜಾಗೃತಿಯ ಮೂಲಕ ಹೆಚ್ಚು ಮಂದಿಯನ್ನು ತಲುಪಲು ಪ್ರಯತ್ನಿಸುವುದು ಆಶಾದಾಯಕ ಬೆಳವಣಿಗೆಯಾಗಿ ಕಾಣಿಸುತ್ತದೆ. ಹೆಣ್ಣೆಂದರೆ ಬರೀ ದೇಹವಲ್ಲ, ಕಾಮದ ಸರಕಲ್ಲ, ಅವಳಿಗೆ ಅವಳದೇ ಆದ ವ್ಯಕ್ತಿತ್ವ, ಅಸ್ಮಿತೆಯಿದೆ ಎಂಬ ತಿಳಿವಳಿಕೆ ನಮ್ಮ ವ್ಯವಸ್ಥೆಗೆ ಬರುವವರೆಗೂ ಗಟ್ಟಿತನ, ಹೋರಾಟ, ಪ್ರಶ್ನಿಸುವಿಕೆ, ಪ್ರತಿಭಟನೆಗಳೇ ಹೆಣ್ಣಿಗೆ ಬಲ ತುಂಬಬೇಕು. ಪ್ರತಿಯೊಬ್ಬಳು ಹೆಣ್ಣೂ ದಿಟ್ಟತನದಿಂದ, ಪಜ್ಞಾವಂತಿಕೆಯಿಂದ ಈ ಎಲ್ಲವನ್ನೂ ಎದುರಿಸಿ ನಿಲ್ಲಬೇಕಲ್ಲದೇ ‘ನನಗ್ಯಾಕೆ ಬೇಕು’ ಎಂಬಂತಹ ಹಿಂಜರಿಕೆ ತಾಳುವುದು ಸರಿಯಲ್ಲ.

ಹೆಣ್ಣು ತನ್ನ ಅಡಿಯಾಳಾಗಿಯೇ ಬದುಕು ಸವೆಸಬೇಕು ಎಂಬ ಪುರುಷಾಹಂಕಾರ ಇಂದು ನಿನ್ನೆಯದಲ್ಲ. ಇಪ್ಪತ್ತೊಂದನೇ ಶತಮಾನದ ಆಧುನಿಕ ದಿನಗಳಲ್ಲೂ ಹೆಣ್ಣನ್ನು ಎರಡನೇ ದರ್ಜೆಯ ಪ್ರಜೆಯಾಗಿ ಪರಿಗಣಿಸುವಲ್ಲಿ ಆಸಕ್ತಿ ಹೊಂದಿರುವ ಅಪಕ್ವ ವ್ಯವಸ್ಥೆ ನಮ್ಮದು. ಮಹಿಳೆಯ ಜೀವನಪ್ರೀತಿ, ಪೊರೆಯುವ ಗುಣ, ಗಟ್ಟಿತನ, ತಾಳ್ಮೆ ಮೊದಲಾದ ಗುಣಗಳು ಮನೆಯನ್ನಲ್ಲದೆ ಇಡೀ ಸಮಾಜವನ್ನೇ ಪೋಷಿಸುತ್ತಿರುವುದನ್ನು ಕಂಡೂ ಅರ್ಥಮಾಡಿಕೊಳ್ಳದೆ, ಸಹಿಸಲಾರದೆ ಮತ್ತೆ ಮತ್ತೆ ತಮ್ಮ ನಾಲಿಗೆಯನ್ನು ಅವಳ ಮೇಲೆ ಹರಿಬಿಡುವ ಸಂಭಾವಿತ ವ್ಯಕ್ತಿತ್ವಗಳು ದಿನಬೆಳಗೂ ಎದುರಾಗುತ್ತಿವೆ. ಹೆಣ್ಣಿನ ದೇಹದ ರಚನೆ, ಅಳತೆ ಎಲ್ಲವೂ ತಮ್ಮ ಮರ್ಜಿಗನುಗುಣವಾಗಿರಬೇಕು, ನಿಯಂತ್ರಿಸಲ್ಪಡಬೇಕು ಎಂಬ ಹಳಹಳಿಕೆಗಳು ತೀವ್ರವಾಗಿಯೇ ಸಾಗುತ್ತಿವೆ. ಮುಂಭಾಗ ಹಿಂಭಾಗ ಇಂತಿರಬೇಕು, ನಡು ಇಷ್ಟಿರಬೇಕು, ಮುಖ ಹಾಗಿರಬೇಕು, ಪಾದ ಹೀಗಿರಬೇಕು ಇವರ ವರ್ಣನೆಗಳಿಗೆ ಮಿತಿಯೇ ಇಲ್ಲ! ಎಲ್ಲವನ್ನೂ ಜಾಡಿಸಿ ಒದ್ದು, ‘ನಾನು ಹೇಗಾದರೂ ಇರುತ್ತೇನೆ, ಹೇಳಲು ಕೇಳಲು ನೀವ್ಯಾರು?’ ಎಂಬ ದಿಟ್ಟ ಉತ್ತರವನ್ನು ಮಹಿಳೆ ಆಗಾಗ ಕೊಡುತ್ತಲೇ ಬಂದಿದ್ದಾಳೆ; ಇನ್ನು ಮುಂದೆ ಮತ್ತಷ್ಟು ಗಟ್ಟಿಯಾಗಿಯೇ ಕೊಡುತ್ತಾಳೆ. ಇನ್ನೊಂದು ವಿಷಯವೆಂದರೆ ಎಲ್ಲಾ ವಿಧದಲ್ಲೂ ಪ್ರಗತಿ ಸಾಧಿಸುತ್ತಿರುವ ತನ್ನನ್ನು ಹಣಿಯುವ ಹುನ್ನಾರವೂ ಇಂತಹ ದೇಹಕೇಂದ್ರಿತ ಮಾತುಗಳ ಹಿನ್ನೆಲೆಯಲ್ಲಿದೆ ಎಂಬುದನ್ನು ಹೆಣ್ಣು ಅರ್ಥಮಾಡಿಕೊಂಡಿದ್ದಾಳೆ.

ತನ್ನ ವಾಟ್ಸಪ್ ಹ್ಯಾಕ್ ಮಾಡಿ, ಖಾಸಗಿ ವಿಷಯಗಳನ್ನು ಮನೆ ಮಾಲಿಕ ಬಹಿರಂಗಪಡಿಸಿದ ಪ್ರಕರಣದಲ್ಲಿ ನೊಂದ ಯುವತಿಯೊಬ್ಬಳು ತನ್ನನ್ನು ಕೊಂದುಕೊಂಡ ಘಟನೆ ಕಳೆದ ವರ್ಷ ದೆಹಲಿಯಿಂದ ವರದಿಯಾಗಿತ್ತು. ಇದೀಗ ಮೊನ್ನೆ ತಾನೇ ಕನ್ನಡದ ಯುವ ಲೇಖಕಿಯೊಬ್ಬರು ತಮಗೆ ಕಿರಿಕಿರಿ ಕೊಡುತ್ತ, ವೈಯಕ್ತಿಕ ವಿಷಯವನ್ನು ಪಬ್ಲಿಸಿಟಿ ಮಾಡುವ ಬೆದರಿಕೆಯೊಡ್ಡಿದ ವ್ಯಕ್ತಿಯೊಬ್ಬನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವು ಈ ಕ್ಷಣಕ್ಕೆ ನೆನಪಿಗೆ ಬಂದ ಎರಡು ಘಟನೆಗಳು. ಇಂತಹ ನೂರಾರು ಪ್ರಕರಣಗಳು ದಿನವೂ ನಡೆಯುತ್ತಿವೆ. ಹೆಣ್ಣುಮಕ್ಕಳು ಮನೋಕ್ಷೋಭೆಗೆ ಒಳಗಾಗಿ ದುಡುಕಿನ ನಿರ್ಧಾರಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ವಿಕೃತ ಮನೋಭಾವದ ಗಂಡಸರ ಬಗ್ಗೆ ಏನೆಂದು ಹೇಳುವುದು? ಇಂತಹವರಿಗೆ ಹೆಣ್ಣೆಂದರೆ ಒಂದು ಆಟಿಕೆ ಎಂಬಂತಾಗಿದೆ. ಹೆಣ್ಣನ್ನು ಸಾವಿನ ದವಡೆಗೆ ತಳ್ಳುತ್ತಿರುವ ಇಂತಹ ಗಂಡಸರ ಕುರಿತು ಇಡೀ ಸಮಾಜವೇ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಪ್ರಕರಣಗಳಲ್ಲಿ ಮುಖ್ಯ ಗುರಿಯಾಗಿರುವುದು ಹೆಣ್ಣಿನ ದೇಹ ಮತ್ತು ಆಕೆಯ ಖಾಸಗಿತನ. ಗಮನಿಸಬೇಕಾದ ವಿಷಯವೆಂದರೆ ಗಂಡಿನ ನಗ್ನತೆ ಎಲ್ಲೂ ಬಳಸಿಕೊಳ್ಳಲ್ಪಡುವುದಿಲ್ಲ, ಎಲ್ಲಿಯೂ ಅಪ್ಲೋಡ್ ಆಗುವುದಿಲ್ಲ, ಯಾರೂ ಬ್ಲಾಕ್ಮೇಲ್ ತಂತ್ರಕ್ಕಾಗಿ ಉಪಯೋಗಿಸುವುದಿಲ್ಲ. ಅಸಲಿಗೆ ಅದೊಂದು ವಿಷಯವೇ ಅಲ್ಲ! ಏಕೆಂದರೆ ಗಂಡಿನ ದೇಹವನ್ನು ಅದು ಇರುವಂತೆಯೇ ಪ್ರಕೃತಿ ಸಹಜ ಸೃಷ್ಟಿಯಾಗಿ ನಮ್ಮ ಸಮಾಜ, ಅದರಲ್ಲೂ ಹೆಣ್ಣುಮಕ್ಕಳು ಒಪ್ಪಿಕೊಂಡಿದ್ದಾರೆ. ಆದರೆ ಹೆಣ್ಣಿನ ದೇಹದ ಯಾವುದೇ ಖಾಸಗಿ ಭಾಗ ತುಸುವೇ ಕಾಣಿಸಿದರೂ ಅದು ಕುತೂಹಲದ, ಅಶ್ಲೀಲತೆಯ, ಅವಮಾನದ ಕೇಂದ್ರಬಿಂದುವಾಗುತ್ತದೆ. ಅಂದರೆ ಹೆಣ್ಣಿನ ದೇಹವನ್ನು ಅದಿರುವ ಸಹಜ ಸ್ಥಿತಿಯಲ್ಲಿ ನಮ್ಮ ನಾಗರಿಕ ಸಮಾಜ; ಅದರಲ್ಲೂ ಗಂಡು ಇನ್ನೂ ಒಪ್ಪಿಕೊಂಡಿಲ್ಲ. ಹೆಣ್ಣಿನ ದೇಹವನ್ನು ಸೃಷ್ಟಿಸಿರುವುದು ಕೂಡಾ ಪ್ರಕೃತಿಯೇ; ಇದರಲ್ಲಿ ಹೆಣ್ಣಿನ ಕೈವಾಡ-ತಪ್ಪು ಒಪ್ಪು ಯಾವುದೂ ಇಲ್ಲ. ಈ ದೇಹದ ಕುರಿತು ಅತಿರಂಜಿತ ವರ್ಣನೆಗಳು, ಗ್ರಹಿಕೆಗಳನ್ನೆಲ್ಲ ಕಟ್ಟಿದ್ದು-ಸಮಾಜವನ್ನು ಒಪ್ಪಿಸಿದ್ದು ಪುರುಷ. ಅಂದರೆ ಹೆಣ್ಣು ಮಾಡದ ತಪ್ಪಿಗೆ ಅವಳಿಗೆ ಶಿಕ್ಷೆ!

ಅವಳ ಎದೆ, ಹೊಕ್ಕಳು, ಸೊಂಟ, ತೊಡೆ, ತೋಳು ಎಲ್ಲವೂ ಪ್ರತಿಯೊಂದು ಪ್ರಾಣಿಯ ದೇಹದಂತೆ ರಕ್ತ, ಮಾಂಸ, ಎಲುಬು, ಚರ್ಮಗಳಿಂದ ಆದದ್ದು. ಅಕಸ್ಮಾತ್ ಅವು ಬಟ್ಟೆಯಿಂದ ಹೊರಗೆ ಕಾಣಿಸಿದರೆ ಅದನ್ನು ಸಹಜವಾಗಿ ಸ್ವೀಕರಿಸಬೇಕಾದದ್ದು ಮಾನವಧರ್ಮ. ಆದರೆ ಹೆಣ್ಣನ್ನು ‘ದೇವತೆ’ಯಾಗಿ ಕಾಣುವ ನಮ್ಮ ವ್ಯವಸ್ಥೆ, ಅವಳನ್ನು ಮನುಷ್ಯಳಾಗಿ, ಕೊನೆಯ ಪಕ್ಷ ನಿಸರ್ಗದ ಒಂದು ಸಹಜ ಪ್ರಾಣಿಪ್ರಬೇಧವಾಗಿಯೂ ಕಾಣಲು ಇಷ್ಟಪಡುವುದಿಲ್ಲ. ನಮ್ಮ ವ್ಯವಸ್ಥೆಯ ಮುಖವಾಡದ ಹಿಂದಿನ ಮುಖ ಏನೆಂದರೆ ಹೆಣ್ಣೆಂದರೆ ಕಾಮದ ಗೊಂಬೆ, ಅವಳ ದೇಹ ಅದಕ್ಕೆಂದೇ ಮೀಸಲಾದ ಸರಕು. ಇನ್ನೂ ಹೇಳಬೇಕೆಂದರೆ ಇಡೀ ಅವಳ ದೇಹವೇ ಅಶ್ಲೀಲ, ಅದನ್ನು ನೋಡುವುದು; ಸಾಧ್ಯವಾದರೆ ಅನುಭವಿಸುವುದು ಪುರುಷ ಚಕ್ರಾಧಿಪತ್ಯದ ವಿಜಯ! ಹಾಗೊಂದು ವೇಳೆ ಯಾರೋ ಕಿಡಿಗೇಡಿಗಳ ಕೃತ್ಯದಿಂದ ಅವಳ ದೇಹದ ಖಾಸಗಿ ಭಾಗಗಳು ಕಾಣುವಂತಾದರೆ, ಮರುಕ್ಷಣ ಆ ಹೆಣ್ಣು ಮರ್ಯಾದೆ ಬಿಟ್ಟವಳಾಗುತ್ತಾಳೆ, ನಾಗರಿಕ ಸಮಾಜದಲ್ಲಿ ವಾಸಿಸಲು ಯೋಗ್ಯಳಲ್ಲದವಳಾಗುತ್ತಾಳೆ. ಕೊನೆಗಿದಕ್ಕೆ ಪರಿಣಾಮವೆಂದರೆ ಅವಳು ಸಾಯಬೇಕು. ತಾನಾಗಿ ಸಾಯದಿದ್ದರೆ, ಮಾನ-ಮರ್ಯಾದೆ, ಪಾತಿವ್ರತ್ಯ ಮುಂತಾದ ಮಾನದಂಡಗಳ ಅಡಿಯಲ್ಲಿ ಇಡೀ ಸಮಾಜವೇ ಅವಳನ್ನು ಇಂಚಿಂಚಾಗಿ ಮಾನಸಿಕವಾಗಿ ಇರಿದು ಸಾಯಿಸುತ್ತದೆ ಅಥವಾ ಹುಚ್ಚು ಹಿಡಿಸುತ್ತದೆ!

body shaming

ಸೌಜನ್ಯ : ಅಂತರ್ಜಾಲ

ಹೌದು, ಇದ್ಯಾವುದೋ ಕಾಡುಜನಾಂಗದಲ್ಲಿ ಇದ್ದ ರೂಕ್ಷ ಸಂಪ್ರದಾಯವಲ್ಲ; ಇಪ್ಪತ್ತೊಂದನೇ ಶತಮಾನದ ಹೆಣ್ಣಿನ ಪರಿಸ್ಥಿತಿ. ಒಮ್ಮೆ ಸರಿಯಾಗಿ ಯೋಚಿಸಿ ನೋಡಿದರೆ ಮಹಿಳೆ ಎಷ್ಟು ದೊಡ್ಡ ಮಾನಸಿಕ ತಲ್ಲಣ, ಕ್ಷೋಭೆಯಲ್ಲಿ ಮುಳುಗಿದ್ದಾಳೆ ಎಂದು ಅರಿವಾಗುತ್ತದೆ. ಇಲ್ಲಿ ಆಕೆಯ ದೇಹವೇ ಆಕೆಯನ್ನು ‘ಹಿಡಿದುಹಾಕುವ’ ಮಂದಿಯ ಅಸ್ತ್ರವಾಗಿದೆ. ಇಂತಹ ಕ್ರೂರತೆಗೆ ಇಂಬು ನೀಡುತ್ತಿರುವುದು ಮನುಷ್ಯ ಕಂಡುಹಿಡಿದಿರುವ ವಿವಿಧ ಆಧುನಿಕ ತಂತ್ರಜ್ಞಾನಗಳು. ಸದಾ ಕೈಯ್ಯೊಳಗೆ ಅಡಗಿರುವ ಮೊಬೈಲಿನಿಂದ ಫೋಟೋ-ವಿಡಿಯೋ ತೆಗೆಯುವುದು. ಮತ್ತೆ ಅದನ್ನು ಫೋಟೋಶಾಪ್ ಮಾಡುವುದು ಆಮೇಲೆ ಬ್ಲಾಕ್ಮೇಲ್ ತಂತ್ರಕ್ಕೆ ಸಿಕ್ಕಿಸಿ ಭಯಹುಟ್ಟಿಸಿ ಅವಳಿಂದ ಹೇಳಿಕೆ ತೆಗೆದುಕೊಂಡು ರೆಕಾರ್ಡ್ ಮಾಡಿ ಜನರ ಮಧ್ಯೆ ಹರಿಬಿಟ್ಟು ಮಾನಸಿಕ ಹಿಂಸೆ ನೀಡುವುದು ಅಥವಾ ಹೆಣ್ಣುಮಕ್ಕಳ ಮೊಬೈಲ್ ಎಗರಿಸಿ, ಅದರಿಂದ ಅವರ ಖಾಸಗಿ ವಿಷಯಗಳನ್ನು ಸಂಗ್ರಹಿಸಿ ಬಯಲು ಮಾಡುವುದು. ಹೀಗೆಲ್ಲ ತಂತ್ರಗಾರಿಕೆ ನಡೆಸುವ ದೊಡ್ಡ ಜಾಲಗಳೇ ಇವೆ. ಹಣ ಕೀಳುವ ದಂಧೆಯಾಗಿಯೂ ಇದು ಬಳಕೆಯಾಗುತ್ತಿದೆ. ಇವೆಲ್ಲದಕ್ಕೆ ಮುಖ್ಯ ಕಚ್ಛಾವಸ್ತು ಹೆಣ್ಣಿನ ಚಾರಿತ್ರ್ಯ ಮತ್ತು ಅವಳ ದೇಹ. ‘ಚಾರಿತ್ರ್ಯ’ ಎಂದರೆ ಪ್ರಾಮಾಣಿಕತೆ, ಮೋಸ, ದ್ರೋಹ ಮಾಡದಿರುವುದು. ಲಂಚ ತೆಗೆದುಕೊಳ್ಳದಿರುವುದು, ಕೊಲೆ-ಸುಲಿಗೆಯಂತಹ ವಿಷಯಗಳನ್ನು ಯೋಚಿಸದಿರುವುದು ಎಂಬೆಲ್ಲ ಮೌಲ್ಯಗಳು ಕಿತ್ತುಹೋಗಿ ಚಾರಿತ್ರ್ಯ ಎಂದರೆ ‘ಹೆಣ್ಣಿನ ಶೀಲ’ ಎಂಬಲ್ಲಿಗೆ ಬಂದು ನಿಂತಿದೆ. ಇಂತಹ ಅಭಿಪ್ರಾಯ ಹೊಂದಿದವರ ಪ್ರಕಾರ ಗಂಡಿಗೆ ಶೀಲ ಎನ್ನುವುದು ಮುಖ್ಯವೆನಿಸುವುದೇ ಇಲ್ಲ! ನಿಜಕ್ಕೂ ಮಹಿಳೆಯರು ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದಾರೆ. ಹೀಗೆ ಅವರ ಖಾಸಗಿತನವನ್ನು ಹರಾಜು ಹಾಕುವ ಮಂದಿಗೆ ಕಠಿಣ ಕಾನೂನಿನ ಶಿಕ್ಷೆ ಜಾರಿಗೆ ತರದಿದ್ದರೆ ಅನೇಕ ಮುಗ್ಧ ಹೆಣ್ಣುಜೀವಗಳ ಬಲಿಯಾದೀತು. ಅವರ ಇಡೀ ಬದುಕೇ ನಾಶವಾದೀತು. ಈ ಕುರಿತು ಪ್ರಜ್ಞಾವಂತ ಮಹಿಳೆಯರು ಸಂಘಟಿತರಾಗಿ ಕಾನೂನಿನ ಮೇಲೆ ಒತ್ತಡ ತರಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ.

ಇದನ್ನೂ ಓದಿ : Body Shaming ; ಸುಮ್ಮನಿರುವುದು ಹೇಗೆ? : ‘ರಸ್ತೆ ಮೇಲೆ ಬಿದ್ದ ಹಾಳೆಯನ್ನೂ ಓದುವ ಅಕ್ಕ ಇವಳೇ ನೋಡು’

Summaniruvudu Hege series on Body Shaming controversial statement by Dindigul Leoni and response from writer Vijayashree Haladi