Body Shaming ; ಸುಮ್ಮನಿರುವುದು ಹೇಗೆ? : ‘ರಸ್ತೆ ಮೇಲೆ ಬಿದ್ದ ಹಾಳೆಯನ್ನೂ ಓದುವ ಅಕ್ಕ ಇವಳೇ ನೋಡು‘

‘ಪ್ರತಿಯೊಬ್ಬರೂ ವಿಶಿಷ್ಟ ಎಂಬುದನ್ನು ಅರ್ಥ ಮಾಡಿಕೊಂಡು ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ತುರ್ತು ಅಗತ್ಯವಿದೆ. ದೈಹಿಕ ಸೌಂದರ್ಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಮಹತ್ವ ನೀಡಿ, ಆರೋಗ್ಯ ಕಾಪಾಡಿಕೊಂಡು ಮಾಡಬೇಕಿರುವ ಮುಖ್ಯ ಕೆಲಸಗಳತ್ತ ಲಕ್ಷ್ಯ ಹರಿಸುವುದೊಂದೇ ಈ ವಿಷವರ್ತುಲದಿಂದ ಪಾರಾಗಲು ಇರುವ ದಾರಿ. ಇದು ದಿನಂಪ್ರತಿಯ ಸಿದ್ಧಿ. ಮತ್ತಿದನ್ನೇ ಎಳೆಯರಿಗೆ ಮನದಟ್ಟು ಮಾಡುವುದು, ಅವರಲ್ಲಿ ಆತ್ಮವಿಶ್ವಾಸ ತುಂಬುವುದು ಪ್ರಜ್ಞಾವಂತ ನಾಗರಿಕರೆಲ್ಲರ ಜವಾಬ್ದಾರಿಯೂ ಹೌದು.’ ದೀಪಾ ಹಿರೇಗುತ್ತಿ

Body Shaming ; ಸುಮ್ಮನಿರುವುದು ಹೇಗೆ? : ‘ರಸ್ತೆ ಮೇಲೆ ಬಿದ್ದ ಹಾಳೆಯನ್ನೂ ಓದುವ ಅಕ್ಕ ಇವಳೇ ನೋಡು‘
ಲೇಖಕಿ ದೀಪಾ ಹಿರೇಗುತ್ತಿ
Follow us
ಶ್ರೀದೇವಿ ಕಳಸದ
|

Updated on:Apr 07, 2021 | 11:53 AM

ಜನಪ್ರತಿನಿಧಿಗಳೇ, ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

‘ಮಹಿಳೆಯರನ್ನು ಟೀಕಿಸುವುದು, ಅವರ ದೇಹದ ಬಗ್ಗೆ ಸಾರ್ವಜನಿಕವಾಗಿ ಮಾತಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂತಹ ಮಾತುಗಳು ತರುವ ಕೆಟ್ಟ ಹೆಸರನ್ನೂ ರಾಜಕಾರಣಿಗಳು ಯಾವುದೇ ಸಂಕೋಚವಿಲ್ಲದೇ ಸ್ವೀಕರಿಸುವುದೂ, ಕೊನೆಗೆ ಪ್ರತಿರೋಧ ಹೆಚ್ಚಿದಾಗ ಯಾವುದೇ ಪಶ್ಚಾತ್ತಾಪವಿಲ್ಲದೇ ಅಡ್ಡಗೋಡೆಯ ಮೇಲೆ ಮೇಲೆ ದೀಪ ಇಟ್ಟಂತೆ ಕ್ಷಮೆ ಕೇಳುವ ಶಾಸ್ತ್ರ ಮಾಡುವುದೂ ನಡೆಯುತ್ತಿದೆ!’ ಈ ಅಸಮಾಧಾನದಿಂದ ಸಿಡಿದ ಒಂದು ಕಿಡಿಯನ್ನು ನುಂಗಿ ತನ್ನ ನೆನಪಿನಾಳದೊಂದಿಗೆ ಹೆಕ್ಕಿತೆಗೆದ ಸಂಗತಿಗಳನ್ನು ಇಲ್ಲಿ ಒಪ್ಪಗೊಳಿಸಿದ್ದಾರೆ ಕೊಪ್ಪದಲ್ಲಿ ಉಪನ್ಯಾಸಕಿಯಾಗಿರುವ ಲೇಖಕಿ ಕವಿ ದೀಪಾ ಹಿರೇಗುತ್ತಿ.

ಕಳೆದ ವರ್ಷ ನೋಡಿದ ಕನ್ನಡ ಸಿನಿಮಾ ಒಂದರಲ್ಲಿ ನಾಯಕ ಚಿಕ್ಕಂದಿನಲ್ಲಿ ಇಷ್ಟಪಡುತ್ತಿದ್ದ ಹುಡುಗಿಯೊಬ್ಬಳು ಬಹಳ ವರ್ಷದ ನಂತರ ಭೇಟಿಯಾಗುತ್ತಾಳೆ. ಅವಳು ದಪ್ಪಕ್ಕಿದ್ದ ಕಾರಣ ಅವಳು ಹೋದ ಮೇಲೆ ಎಲ್ಲರೂ ನಾಯಕನನ್ನು ಅಪಹಾಸ್ಯ ಮಾಡುತ್ತಾರೆ. ಆ ದೃಶ್ಯ ನೋಡಿ ನನಗೆ ಬಾಲ್ಯದಲ್ಲಿ ನೋಡಿದ ಅನಂತನಾಗ್ ಸಿನಿಮಾವೊಂದು ನೆನಪಾಯಿತು. ಅದರಲ್ಲಿ ನಾಯಕ ತಾನಿಷ್ಟಪಟ್ಟ ಹುಡುಗಿಯನ್ನು ಹುಡುಕಿಕೊಂಡು ಬರುತ್ತಾನೆ. ಅಲ್ಲಿ ಆತ ಅದೇ ಹೆಸರಿನ ಮತ್ತೊಬ್ಬಳನ್ನು ನೋಡಿ ಹೆದರುವಂತೆಯೂ, ಪ್ರೇಕ್ಷಕರು ನಗುವಂತೆಯೂ ಚಿತ್ರಿಸಲಾಗಿತ್ತು. ಕಾರಣ ಆಕೆಯ ದಢೂತಿ ದೇಹ!

ಈ ಮೂರು ದಶಕಗಳಲ್ಲಿ ಕಾವೇರಿಯಲ್ಲಿ ಅದೆಷ್ಟೋ ನೀರು ಹರಿದು ಹೋಗಿದೆ. ತಾಂತ್ರಿಕ ಕ್ಷೇತ್ರ ಸೇರಿದಂತೆ ನಾವು ಹಲವಾರು ವಿಭಾಗಗಳಲ್ಲಿ ಬೆರಳು ಕಚ್ಚುವ ಸಾಧನೆ ಮಾಡಿದ್ದೇವೆ. ಆದರೆ ಅಂದಿನಿಂದ ಇಂದಿನವರೆಗೂ ನಮ್ಮ ಹಾಸ್ಯಪ್ರಜ್ಞೆ ಇಷ್ಟು ಕಳಪೆಯಾಗಿಯೇ ಮುಂದುವರೆದಿರುವುದು ವಿಷಾದನೀಯ ಮತ್ತು ಅಕ್ಷಮ್ಯ. ದೇಹದ ಆಕಾರವನ್ನು, ಬಣ್ಣವನ್ನು ಅವಮಾನಿಸುವುದು ನಮ್ಮ ಸಮಾಜಕ್ಕಂಟಿದ ಬಹುದೊಡ್ಡ ರೋಗ. ಇನ್ನೊಬ್ಬರ ದೇಹದ ಆಕಾರ, ಗಾತ್ರ ಮತ್ತು ತೂಕದ ಬಗ್ಗೆ ಋಣಾತ್ಮಕ ಮಾತುಗಳನ್ನಾಡುವುದನ್ನು ಬಾಡಿ ಶೇಮಿಂಗ್ ಎನ್ನುತ್ತೇವೆ. ಜತೆಗೆ ಬಣ್ಣದ ಕುರಿತು ಇರುವ ಪೂರ್ವಗ್ರಹಗಳಿಗಂತೂ ಕೊನೆಯೇ ಇಲ್ಲ. ಈ ಅಸಹ್ಯ ರೂಢಿ ತಡೆಯೇ ಇಲ್ಲದೇ ಅನೂಚಾನವಾಗಿ ನಡೆದುಕೊಂಡು ಬಂದಿರುವುದಕ್ಕೆ ನಮ್ಮ ಸಿನಿಮಾಗಳ ಕೊಡುಗೆ ದೊಡ್ಡದೇ ಇದೆ. ವ್ಯಕ್ತಿಯೊಬ್ಬರ ವ್ಯಕ್ತಿತ್ವ, ಸಾಧನೆಯನ್ನೆಲ್ಲ ಗೌಣವಾಗಿಸಿ ದೈಹಿಕ ಸೌಂದರ್ಯವೊಂದನ್ನೇ ಮುಖ್ಯವಾಗಿಸುವ ಈ ಬಾಡಿ ಶೇಮಿಂಗ್ ಜನರನ್ನು ಖಿನ್ನತೆಗೆ ದೂಡುವುದಷ್ಟೇ ಅಲ್ಲ ಅವರ ಓದು, ಉದ್ಯೋಗದ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ. ಆತ್ಮವಿಶ್ವಾಸವನ್ನು ಕುಗ್ಗಿಸಿಬಿಡುತ್ತದೆ! ಕೆಲವು ಸಲ ಆತ್ಮಹತ್ಯೆಗೂ ಪ್ರಚೋದಿಸುವಷ್ಟು ಅಪಾಯಕಾರಿ!

ಅಂದಹಾಗೆ ಈ ಬಾಡಿ ಶೇಮಿಂಗ್ ಪ್ರಾರಂಭವಾಗುವುದು ಮನೆಯಿಂದಲೇ! ತಮ್ಮ ಮತ್ತು ತಂಗಿಗಿಂತ ಕಪ್ಪಗಿದ್ದ ನಾನು ಕರಿಯಮ್ಮ ಎನಿಸಿಕೊಂಡರೆ, ಗುಂಡಕಿದ್ದ ನನ್ನ ತಂಗಿ ಡುಮ್ಮಿ ಎಂದೇ ಕರೆಸಿಕೊಳ್ಳುತ್ತಿದ್ದಳು. ಸುಮಾರು ಐದು ಆರನೇ ಕ್ಲಾಸಿಗೆ ಬರುವವರೆಗೂ ನನಗೆ ಸಂಬಂಧಿಕರಿಂದ ತಮಾಷೆಗೆ ಹಾಗೆ ಕರೆಸಿಕೊಂಡರೂ ಅಳು ಉಕ್ಕುಕ್ಕಿ ಬರುತ್ತಿತ್ತು. ನಂತರ ಇದ್ದಬದ್ದ ಸ್ಪರ್ಧೆಗಳಲ್ಲೆಲ್ಲಾ ಬಹುಮಾನ ಬಾಚಿಕೊಳ್ಳುವುದು, ಊರಿನ ಲೈಬ್ರರಿಯ ಎಲ್ಲಾ ಪುಸ್ತಕಗಳನ್ನೂ ಓದಿ ಮುಗಿಸುವುದು, ಅಭ್ಯಾಸದಲ್ಲೂ ಮುಂದೆ ಇರುವುದರ ಪ್ರಭಾವದ ಮುಂದೆ ಬಣ್ಣದ ಬಗೆಗಿನ ಮಾತು ಕಡಿಮೆಯಾಯಿತು. ನನ್ನ ಕೀಳರಿಮೆಯೂ! ಯಾರಾದರೂ ತಮ್ಮ ಮಕ್ಕಳಿಗೆ ನನ್ನನ್ನು ಪರಿಚಯಿಸುವಾಗ ‘ರಸ್ತೆ ಮೇಲೆ ಬಿದ್ದ ಹಾಳೆಯನ್ನೂ ಓದುವ ಅಕ್ಕ ಇವಳೇ ನೋಡು, ನೀನೂ ಅವಳ ಹಾಗೇ ಓದಬೇಕು’ ಎಂದೇ ಪರಿಚಯಿಸುತ್ತಿದ್ದರು! ಓದು, ನೌಕರಿ, ಬರವಣಿಗೆ ಇವೆಲ್ಲವೂ ಇದ್ದಾಗ ನೀವು ಯಾರ ಮಾತಿಗೂ ಸೊಪ್ಪು ಹಾಕಬೇಕೆಂದಿಲ್ಲ. ಆದರೆ ಸದೃಢ ಆರ್ಥಿಕ ಹಿನ್ನೆಲೆ, ಯಾರ ಮಾನಸಿಕ ಬೆಂಬಲವೂ ಇಲ್ಲದ ಹೆಣ್ಣುಮಕ್ಕಳಿಗೆ ಇದು ಹೇಳತೀರದ ಸಂಕಟ. ಅದಕ್ಕೇ ನಮ್ಮ ಕಾಲೇಜಿನ ಹುಡುಗಿಯರಿಗೆ ಹುಡುಗರಿಗೆ ತಮ್ಮ ಬಾಹ್ಯರೂಪದ ಮಿತಿಯನ್ನು ಮೀರುವುದರ ಬಗ್ಗೆ ತಿಂಗಳಿಗೊಮ್ಮೆಯಾದರೂ ಮನದಟ್ಟು ಮಾಡಿಸುತ್ತಿರುತ್ತೇನೆ. ಚೆನ್ನಾಗಿ ಓದಿ ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಲಾಭಗಳ ಬಗ್ಗೆ ಹೇಳದೇ ಇದ್ದರೆ ನನಗಂತೂ ಸಮಾಧಾನವಾಗುವುದಿಲ್ಲ.

body shaming

ಸೌಜನ್ಯ : ಅಂತರ್ಜಾಲ

ಮೊನ್ನೆ ಇದೇ ಸರಣಿಯಲ್ಲಿ ಯಾರೋ ತಮ್ಮ ಆರತಕ್ಷತೆಗೆ ಕಪ್ಪುಸೀರೆ ಉಟ್ಟ ಸಂಗತಿ ಓದಿ ಖುಶಿಯಾಯಿತು. ಜತೆಗೇ ನನ್ನ ಜೀವನದಲ್ಲಿ ನಡೆದ ಘಟನೆಗಳೂ ನೆನಪಿಗೆ ಬಂದವು. ಚಿಕ್ಕಂದಿನಿಂದಲೂ ನಮ್ಮ ಮನೆಯಲ್ಲಿ ನನಗೆ ಕಪ್ಪುಬಣ್ಣದ ಡ್ರೆಸ್ ಹಾಕಲೇ ಬಿಡುತ್ತಿರಲಿಲ್ಲ. ನನಗೋ ಕಪ್ಪುಬಣ್ಣವೆಂದರೆ ಬಹಳ ಇಷ್ಟ. ಒಂಬತ್ತನೇ ತರಗತಿಯಲ್ಲಿ ನಮ್ಮ ಹೈಸ್ಕೂಲಿನಿಂದ ಹೈದರಾಬಾದ್ ಪ್ರವಾಸ ಏರ್ಪಡಿಸಿದ್ದರು. ಹೋಗಿ ವಾಪಾಸ್ ಬರುವಾಗ ಗದಗದಲ್ಲಿ ಅಂಗಡಿಗೆ ಹೊಕ್ಕು ಅದು ಇದು ಖರೀದಿಸಿದೆವು. ನಾನು ಒಂದು ಕಪ್ಪು ಬಣ್ಣದ ಟಿ-ಶರ್ಟ್ ಖರೀದಿಸಿದೆ. ಮನೆಗೆ ಬಂದ ಮೇಲೆ ಎಷ್ಟು ಬೈಸಿಕೊಂಡೆ ಎಂದರೆ ಹೈದರಾಬಾದ್ ಪ್ರವಾಸಕ್ಕೆ ಹೋಗಿಬಂದ ಖುಶಿಯೆಲ್ಲ ಮಣ್ಣಾಗಿ ಹೋಯಿತು. ಪ್ರವಾಸಕ್ಕೆ ಕೈಖರ್ಚಿಗೆ ಹಣ ಕೊಟ್ಟ ನನ್ನ ತಂದೆ ನನಗೆ ಹಣ ಕಡಿಮೆ ಬಿದ್ದರೆ ಎಂದು ನಮ್ಮ ಸರ್ ಹತ್ತಿರವೂ ಎಕ್ಸ್ಟ್ರಾ ಹಣ ಕೊಟ್ಟಿದ್ದರು. ಆದರೆ ಆ ಹಣದಿಂದ ಖರೀದಿಸಿದ ಶರ್ಟ್ ಧರಿಸುವ ಭಾಗ್ಯ ನನಗೆ ಇಲ್ಲದೇ ಹೋಯಿತು. ಈ ರೀತಿಯ ಬೈಗುಳಗಳು ಎಷ್ಟು ಸಹಜ ಸಂಗತಿಯೆಂದರೆ ಅದರ ಪರಿಣಾಮಗಳು ಹೇಳುವವರಿಗೆ ಗೊತ್ತೇ ಆಗುವುದಿಲ್ಲ! ನನ್ನ ಅಪ್ಪ ಅಮ್ಮ ನನಗೆ ನೋವನ್ನುಂಟು ಮಾಡುವ ಉದ್ದೇಶದಿಂದ ಹೇಳಿದ್ದಲ್ಲ. ಕಪ್ಪಗಿರುವವರಿಗೆ ಕಪ್ಪು ಬಟ್ಟೆ ಒಪ್ಪುವುದಿಲ್ಲ ಎಂಬುದು ಅವರ ದೃಢ ನಂಬಿಕೆ! ಈಗಲೂ ಆ ನಂಬಿಕೆ ಅವರದ್ದು. ಆದರೆ ಈಗ ನನ್ನ ವಾರ್ಡ್‍ರೋಬ್‍ನಲ್ಲಿ ಮಾತ್ರ ಕಪ್ಪುಬಣ್ಣದ ಸೀರೆಗಳೇ ಜಾಸ್ತಿ! ನಾನು ಯಾವುದಾದರೂ ಡಾರ್ಕ್ ಕಲರ್ ಸೀರೆ ತೆಗೆದುಕೊಂಡರೆ ನನ್ನ ಅತ್ತೆ ‘ಈ ಸೀರೆಯನ್ನು ಅವರು ಉಟ್ಟಿದ್ದರೆ ಎಷ್ಟು ಚೆನ್ನಾಗಿ ಕಾಣುತ್ತಿತ್ತು’ ಎಂದು ನಮ್ಮ ಬೆಳ್ಳಗಿರುವ ನಮ್ಮ ಪರಿಚಿತ ಮಹಿಳೆಯೊಬ್ಬರ ಹೆಸರು ಹೇಳಿ ಹೇಳುತ್ತಾರೆ. ಇವರ ಉದ್ದೇಶವೂ ಅವಮಾನವಲ್ಲ! ಆದರೆ ಈ ಬಣ್ಣ, ಎತ್ತರ ಗಾತ್ರದ ಹೋಲಿಕೆಗಳು ಉಸಿರಾಟದಷ್ಟೇ ಸಹಜವಾಗಿರುತ್ತವೆ.

ನನ್ನ ಎಂಗೇಜ್‍ಮೆಂಟ್ ಆದಾಗಲೂ ಅಷ್ಟೇ, ನನ್ನ ಪತಿಯ ಹತ್ತಿರದ ಸಂಬಂಧಿಯೊಬ್ಬರು ನನ್ನನ್ನು ನೋಡಿ ಬಹಳ ಬೇಸರ ಮಾಡಿಕೊಂಡಿದ್ದರೆಂದೂ, ಅಯ್ಯೋ ನಮ್ಮ ಬೆಳ್ಳಗಿರುವ ಹುಡುಗನಿಗೆ ಕಪ್ಪು ಹುಡುಗಿಯೇ ಎಂದು ಸಿಟ್ಟು ಮಾಡಿಕೊಂಡಿದ್ದರೆಂದೂ ಆಮೇಲೆ ಗೊತ್ತಾಯಿತು. ನನಗಿಂತ ಸುಮಾರು ನಾಲ್ಕು ಪಟ್ಟು ಜಾಸ್ತಿ ಕಪ್ಪಗಿರುವ ಅವರ ಮನಸ್ಥಿತಿಯೇ ಹೀಗೆಂದು ಗೊತ್ತಾದಾಗ ಅಳಬೇಕೋ ನಗಬೇಕೋ ಗೊತ್ತಾಗಲಿಲ್ಲ. ಈ ಲೇಖನ ಬರೆಯುವಾಗ ತಂಗಿಯ ಹತ್ತಿರ ಫೋನಿನಲ್ಲಿ ಈ ವಿಚಾರ ಚರ್ಚಿಸುತ್ತಿದ್ದಾಗ ಅವಳೆಂದಳು, ಚಿಕ್ಕವಳಾದರೂ ನನಗಿಂತ ಜಾಸ್ತಿ ಅನ್ನ ಊಟ ಮಾಡುತ್ತೀಯಾ ಡುಮ್ಮಿ ಎಂದು ನಾನು ಅವಳನ್ನು ಛೇಡಿಸುತ್ತಿದ್ದೆನಂತೆ. ಆಗ ಅವಳಿಗೆ ಬಹಳ ಸಂಕಟವಾಗುತ್ತಿತ್ತಂತೆ. ಈ ಬಾಡಿ ಶೇಮಿಂಗ್ ಬಗ್ಗೆ ದೂರುವಾಗ ಒಂದು ಬೆರಳು ಇತರರ ಕಡೆ ತೋರಿದರೆ ಉಳಿದ ಬೆರಳುಗಳು ನಮ್ಮ ಕಡೆಗೇ ಇರುವುದು ಸತ್ಯವೂ ಹೌದು!

ಗೆಳತಿ ಹೊಸ ಸೀರೆಯುಟ್ಟು ಬಂದರೆ, ನೀನು ತೆಳ್ಳಗಿದ್ದಿದ್ದರೆ ಈ ಸೀರೆ ಬಹಳ ಚೆನ್ನಾಗಿ ಕಾಣಿಸುತ್ತಿತ್ತು ಎಂದು ಅವಳ ಸಂತಸವನ್ನು ಕ್ಷಣಾರ್ಧದಲ್ಲಿ ನುಚ್ಚುನೂರು ಮಾಡುವವರಿದ್ದಾರೆ. ತೆಳ್ಳಗಿರುವವರಿಗೆ ಸ್ವಲ್ಪವಾದರೂ ಮೈಕೈ ತುಂಬಿಕೊಂಡಿರಬೇಕಪ್ಪಾ ಎನ್ನುವವರೂ ಇವರೇ! ದಪ್ಪಗಾಗುವ, ತೆಳ್ಳಗಾಗುವ ಬಗ್ಗೆ ಉಚಿತ ಸಲಹೆ ಕೊಡದೇ ಹೋದರೆ ಬಹಳ ಜನರಿಗೆ ಸಮಾಧಾನವೇ ಇರುವುದಿಲ್ಲ. ಈ ರೀತಿ ಬೇರೆಯವರನ್ನು ಅವಮಾನಿಸುವ ಕೀಳು ಮನಃಸ್ಥಿತಿ ನಮ್ಮೆಲ್ಲರಲ್ಲೂ ಇದ್ದೇ ಇರುತ್ತದೆ. ಏಕೆಂದರೆ ನಾವು ಜನರ ಜತೆ ವ್ಯವಹರಿಸುವಾಗ ಯಾವಾಗಲೂ ವಿಮರ್ಶೆಯ ಕನ್ನಡಕವನ್ನು ಹಾಕಿಕೊಂಡೇ ಇರುತ್ತೇವೆ. ಜನರು ಹೇಗಿರುವರೋ ಹಾಗೆ ಒಪ್ಪಿಕೊಳ್ಳುವುದು ನಮ್ಮಿಂದ ಸಾಧ್ಯವಾಗುವವರೆಗೂ ಈ ಪ್ರವೃತ್ತಿ ನಿಲ್ಲುವುದಿಲ್ಲ. ಬಾಡಿ ಶೇಮಿಂಗ್ ಎನ್ನುವುದು ಅವಮಾನಿಸಲು ಬೇರೆ ಯಾವ ಮಾರ್ಗವೂ ಇಲ್ಲದ ಮೂರ್ಖರ ಅಸ್ತ್ರ. ಅದು ನಮ್ಮ ಕೀಳರಿಮೆಯ, ಹತಾಶೆಯ, ಸಣ್ಣ ಮನಸ್ಸಿನ ಪ್ರದರ್ಶನ ಮಾತ್ರ.

ಬಾಡಿ ಶೇಮಿಂಗ್‍ಗೆ ಒಳಗಾಗುವವರು ಏನು ಮಾಡಬಹುದು? ನಮ್ಮ ಆತ್ಮವಿಶ್ವಾಸ ಕುಗ್ಗಲು, ಮನಸ್ಸು ನೋಯಲು, ಹತಾಶೆ ಆವರಿಸಲು, ಕೋಪವುಂಟಾಗಲು ಕಾರಣ ನಮ್ಮನ್ನು ನಾವು ಬೇರೆಯವರ ದೃಷ್ಟಿಕೋನದಿಂದ ನೋಡುವುದು. ಯಾವ ವ್ಯಕ್ತಿಯೂ ಜನರು ವ್ಯಕ್ತಪಡಿಸುವ ಅಭಿಪ್ರಾಯಗಳ ಮೊತ್ತವಲ್ಲ. ಪ್ರತೀ ವ್ಯಕ್ತಿಯೂ ವಿಶಿಷ್ಟ ಎಂಬುದನ್ನು ಅರ್ಥ ಮಾಡಿಕೊಂಡು ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ತುರ್ತು ಅಗತ್ಯವಿದೆ. ಹೊಗಳಿಕೆಗೆ ಹಿಗ್ಗದೇ ತೆಗಳಿಕೆಗೆ ಕುಗ್ಗದೇ, ದೈಹಿಕ ಸೌಂದರ್ಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಮಹತ್ವ ನೀಡಿ, ಆರೋಗ್ಯ ಕಾಪಾಡಿಕೊಂಡು ಮಾಡಬೇಕಿರುವ ಮುಖ್ಯ ಕೆಲಸಗಳತ್ತ ಲಕ್ಷ್ಯ ಹರಿಸುವುದೊಂದೇ ಈ ವಿಷವರ್ತುಲದಿಂದ ಪಾರಾಗಲು ಇರುವ ದಾರಿ. ಆದರೆ ಇದು ಹೇಳಿದಷ್ಟು ಸುಲಭವಲ್ಲ. ಪ್ರತೀ ದಿನವೂ ಪ್ರಯತ್ನ ಪಟ್ಟು ಸಿದ್ಧಿಸಿಕೊಳ್ಳಬೇಕಾದ ಸಂಗತಿ. ಮತ್ತಿದನ್ನು ಎಳೆಯರಿಗೆ ಮನದಟ್ಟು ಮಾಡುವುದು, ಅವರಲ್ಲಿ ಆತ್ಮವಿಶ್ವಾಸ ತುಂಬುವುದು ಪ್ರಜ್ಞಾವಂತ ನಾಗರಿಕರೆಲ್ಲರ ಜವಾಬ್ದಾರಿಯೂ ಹೌದು.

body shaming

ಸೌಜನ್ಯ : ಅಂತರ್ಜಾಲ

ಕೊನೆಯಲ್ಲಿ ಮತ್ತೊಂದು ವಿಚಾರ. ನಾನು ಬಣ್ಣದ ಬಗ್ಗೆಯಾಗಲೀ ಬೇರೆ ಯಾವ ವಿಚಾರದ ಬಗ್ಗೆಯಾಗಲೀ ಎಂದಿಗೂ ತಲೆ ಕೆಡಿಸಿಕೊಂಡಿಲ್ಲ. ನಾನು ನನ್ನ ಬಗ್ಗೆ ಅಷ್ಟೇ ಅಲ್ಲ, ಬೇರೆಯವರ ಬಗ್ಗೆ ಯಾರಾದರೂ ವಿನಾಕಾರಣ ಕೊಂಕು ಮಾತಾಡಿದರೂ ಸುಮ್ಮನಿರುವುದಿಲ್ಲ. ಕಾರಣ ಯಾರದೋ ಮಾತು ನನ್ನ ನೆಮ್ಮದಿಯನ್ನು ಕಿತ್ತುಕೊಳ್ಳಲು ನಾನು ಅವಕಾಶವನ್ನೇ ಕೊಡುವುದಿಲ್ಲ. ಅಲ್ಲೇ ತಿರುಗಿಸಿ ಹೇಳಿಬಿಡುತ್ತೇನೆ. ಅಲ್ಲೇ ಡ್ರಾ ಅಲ್ಲೇ ಬಹುಮಾನ! ಅದಕ್ಕೇ ನನ್ನ ತಂಗಿ ಹೇಳುತ್ತಿರುತ್ತಾಳೆ, ‘ನೀನು ನಿನ್ನ ಈ ಸ್ವಭಾವದಿಂದ ಆರಾಮಾಗಿ ಇದ್ದೀಯಾ, ನನಗೋ ಒಂದು ಮಾತು ಹೇಳಲೂ ಸಂಕೋಚ, ಮನಸ್ಸಿನಲ್ಲೇ ಅನುಭವಿಸಬೇಕು.’ ಹಾ, ಇದಕ್ಕೆ ಉದಾಹರಣೆ ಇಲ್ಲಿದೆ ನೋಡಿ. ಮೂರೋ ನಾಲ್ಕೋ ವರ್ಷದ ಹಿಂದೆ ಎಲ್ಲೋ ಯಾರೋ ಮಾತಾಡುತ್ತಿದ್ದರು. ನಾನೂ ಆ ಗುಂಪಿಗೆ ಆಕಸ್ಮಿಕವಾಗಿ ಸೇರಿಕೊಂಡೆ. ಒಬ್ಬರು ಹೇಳುತ್ತಿದ್ದರು, ‘ನನಗೆ ಈ ಕನ್ನಡ ಧಾರಾವಾಹಿಯವರನ್ನು ನೋಡಿದರೆ ಆಗಲ್ಲಪ್ಪ, ಥೂ! ಚೆನ್ನಾಗೇ ಇರಲ್ಲ. ಅದೇ ಹಿಂದಿ ಧಾರಾವಾಹಿಯವರನ್ನು ನೋಡಿ ಎಷ್ಟು ಚೆನ್ನಾಗಿರ್ತಾರೆ!’ ನನಗೋ ಮೈ ಉರಿದು ಹೋಯಿತು. ‘ಮೇಡಂ, ಹಿಂದಿ ಧಾರಾವಾಹಿಯವರು ಉತ್ತರ ಭಾರತದವರು, ಅವರು ಉತ್ತರ ಭಾರತದವರ ಥರವೇ ಇರ್ತಾರೆ, ಕನ್ನಡ ಧಾರಾವಾಹಿಯವರು ನಿಮ್ಮ ಥರ ನನ್ನ ಥರ ಇರ್ತಾರೆ, ಅಂದ್ರೆ ದಕ್ಷಿಣ ಭಾರತದವರ ಥರ ಇದ್ದಾರೆ ಅಷ್ಟೇ. ಆದ್ರೂ ನಿಮಗೆ ನನಗೆ ಹೋಲಿಸಿದ್ರೆ ನಮ್ಮ ಕನ್ನಡ ಧಾರಾವಾಹಿಯವರು ತುಂಬಾ ಚೆನ್ನಾಗಿಯೇ ಇದ್ದಾರೆ ಅಂತ ಅನ್ಸುತ್ತೆ ಅಲ್ವಾ’ ಅಂದುಬಿಟ್ಟೆ!

ಇದನ್ನೂ ಓದಿ : Body Shaming; ಸುಮ್ಮನಿರುವುದು ಹೇಗೆ? : ನನ್ನ ದೇಹದಲ್ಲಿ ನಾನಿರಬೇಕೇ ಹೊರತು ಇತರರ ಅನಿಸಿಕೆಗಳಲ್ಲ!

Summaniruvudu Hege series on Body Shaming controversial statement by Dindigul Leoni and response from writer Deepa Hiregutti

Published On - 11:51 am, Wed, 7 April 21

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್