Motherhood; ನಾನೆಂಬ ಪರಿಮಳದ ಹಾದಿಯಲಿ: ಅಮ್ಮ ಕಾಲುಜಾರಿ ಬಿದ್ದ ಬಾವಿಗೆ ಕಟ್ಟೆ ಕಟ್ಟಲೇ ಇಲ್ಲ

My life: 'ಕೊನೆಯ ಪ್ರಯತ್ನವೆಂದು ಅಪ್ಪ ಮನೆಯ ಆಳೊಬ್ಬಳನ್ನು ಕರೆದುಕೊಂಡು ಆರುಮೈಲಿ ದೂರದ ಸರಕಾರಿ ದವಾಖಾನೆಗೆ ನಡೆದುಕೊಂಡೇ ನನ್ನನ್ನು ಎತ್ತಿಕೊಂಡು ಹೋದರೆ ಅಲ್ಲಿಯೂ ಡಾಕ್ಟರ್ ಆ ದಿನ ರಜೆ. ಉರಿಬಿಸಿಲಿನಲ್ಲಿ, ನೀರು ಕೂಡ ಸಿಗದ ಗುಡ್ಡದ ಮೇಲಿರುವ ಆಸ್ಪತ್ರೆಯೆದುರಿನ ಕಟ್ಟೆಯಲ್ಲಿ ನನ್ನನ್ನು ಮಲಗಿಸಿ ಮುಟ್ಟಿದರೆ ಉಸಿರೇ ನಿಂತಿದೆ ಎನಿಸಿತಂತೆ. ಹೆರಿಗೆಗೆ ದಿನ ಎಣಿಸುತ್ತಿರುವ ಅಮ್ಮನಿಗೆ ಇದನ್ನು ತಿಳಿಸುವುದು ಬೇಡವೆಂದು ಬಟ್ಟೆಯೊಳಗೆ ನನ್ನನ್ನು ಸುತ್ತಿಕೊಂಡು ಮನೆಗೆ ಮರಳುತ್ತಿರುವಾಗ ಮಾರ್ಗಮಧ್ಯದಲ್ಲಿ ಮೂತ್ರದ ಹನಿ ಬಟ್ಟೆಯಿಂದ ಸೋರತೊಡಗಿದಾಗ ಕೆಲಸದಾಳು ನಾನು ಜೀವಂತವಿರುವುದನ್ನು ತಿಳಿದು ಖುಷಿಯಿಂದ ಕುಣಿದುಬಿಟ್ಟಳಂತೆ. ಗತಕಾಲದ ಕಥೆಯಂತೆ ಅನೇಕ ಸಲ ಆ ತಾಯಿಯ ಬಾಯಲ್ಲಿ ಕೇಳಿದ ಈ ಕಥೆಯಲ್ಲಿ ಸತ್ಯವೆಷ್ಟೋ? ಸುಳ್ಳೆಷ್ಟೋ? ಅರ್ಥೈಸಲಾರೆ.‘ ಸುಧಾ ಆಡುಕಳ

Motherhood; ನಾನೆಂಬ ಪರಿಮಳದ ಹಾದಿಯಲಿ: ಅಮ್ಮ ಕಾಲುಜಾರಿ ಬಿದ್ದ ಬಾವಿಗೆ ಕಟ್ಟೆ ಕಟ್ಟಲೇ ಇಲ್ಲ
ಸುಧಾ ಆಡುಕಳ
Follow us
ಶ್ರೀದೇವಿ ಕಳಸದ
| Updated By: Digi Tech Desk

Updated on:Feb 19, 2021 | 4:50 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಲೇಖಕಿ ಸುಧಾ ಆಡುಕಳ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಉಡುಪಿಯ ಬಾಲಕಿಯರ ಸ. ಪ. ಪೂ. ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿದ್ದಾರೆ. ರಾಧಾ, ನೃತ್ಯಗಾಥಾ, ಆನಂದಭಾಮಿನಿ, ಮಾಧವಿ ಏಕವ್ಯಕ್ತಿ ನಾಟಕಗಳನ್ನು ರಚಿಸಿದ್ದಾರೆ. ಟ್ಯಾಗೋರರ ಕೆಂಪು ಕಣಗಿಲೆ, ಚಿತ್ರಾ ನಾಟಕಗಳ ಕನ್ನಡ ರೂಪಾಂತರ ಮಾಡಿದ್ದಾರೆ. ಹತ್ತಕ್ಕಿಂತ ಹೆಚ್ಚು ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ.  

‘ಕಂಗ್ರಾಟ್ಸ್, ನೀವು ಪ್ರೆಗ್ನೆಂಟ್’ ಎಂದು ಡಾಕ್ಟರ್ ಹೇಳಿದೊಡನೇ ನಾನು ನೆಲಕ್ಕೆ ಕುಸಿದು ಹೋಗಿದ್ದೆ. ಸಾಂತ್ವನಕ್ಕೆಂದು ಪಕ್ಕದಲ್ಲಿ ತಿರುಗಿದರೆ ಅಸಹಾಯಕತೆ ಮಾತ್ರವೇ ಪಕ್ಕದಲ್ಲಿ ಕುಳಿತವನ ಮುಖದಲ್ಲಿತ್ತು. ಏನು ಮಾಡಲು ಹೊಳೆಯದೇ ತಕ್ಷಣ ಹತ್ತಿರದ ಫೋನ್ಬೂತಿನಿಂದ ಜೀವದ ಗೆಳೆಯನಿಗೆ ಫೋನಾಯಿಸಿದೆ. ‘ನೀನು ವಿಜ್ಞಾನ ಓದಿದವಳು, ಎಲ್ಲವನ್ನೂ ಕರಾರುವಕ್ಕಾಗಿ ನಿಭಾಯಿಸುವೆ ಅಂದುಕೊಂಡಿದ್ದೆ. ಇಷ್ಟೆಲ್ಲ ಜಂಜಡಗಳ ನಡುವೆ ಮಗುವೆಂದರೆ… ನೋಡೋಣ, ಏನು ಮಾಡುವುದೆಂದು’ ಅವನ ಮಾತಿನಲ್ಲೂ ತಡವರಿಕೆ ಬಿಟ್ಟರೆ ಬೇರೇನೂ ಇರಲಿಲ್ಲ. ಕಾಲೇಜಿನ ಕಲಿಕೆ ಜೀವನವನ್ನು ಕಲಿಸುವಂತಿದ್ದರೆ, ಬದುಕು ನಮ್ಮ ಕರಾರುವಕ್ಕತೆಗೆ ಪಕ್ಕಾಗುವಂತಿದ್ದರೆ ಜೀವನದಲ್ಲಿ ಜಂಜಡವೇ ಇರುತ್ತಿರಲಿಲ್ಲ. ಆದರೆ ಬದುಕಿನ ಲೆಕ್ಕಾಚಾರ ಯಾವ ನಿಯಮಕ್ಕೂ ಒಳಪಡುವುದಿಲ್ಲ.

ಹೌದು, ಮದುವೆಯಾಗಿ ತಿಂಗಳು ಮಾತ್ರವೇ ಆಗಿತ್ತು. ಅಮ್ಮನನ್ನು ಕಳಕೊಂಡು ಮೂರು ತಿಂಗಳಾಗಿತ್ತು. ಯುನಿವರ್ಸಿಟಿಯಲ್ಲಿ ಓದುವ ಆಸೆ ಮನಸಿನ ತುಂಬಾ ತುಂಬಿತ್ತು. ಸಂಪ್ರದಾಯಸ್ಥರ ಮನೆಗೆ ಹೊಂದಿಕೊಳ್ಳುವ ತೊಳಲಾಟ ಎದುರಿಗಿತ್ತು.ಅವೆಲ್ಲದರ ನಡುವೆ ಹೊಟ್ಟೆಯಲ್ಲೊಂದು ಜೀವ ಮಿಡುಕಾಡತೊಡಗಿತ್ತು.ಅಮ್ಮನೂ ಇಲ್ಲದ, ಅತ್ತೆಯೂ ಇಲ್ಲದ ವಾಸ್ತವ ಕಣ್ಣೆದುರು ಇತ್ತು. ಸತ್ಯಕ್ಕೆಂದರೆ ಪುಟ್ಟಮಗುವೊಂದನ್ನು ನೋಡಿದ ನೆನಪೂ ಸರಿಯಾಗಿ ಇರಲಿಲ್ಲ. ತಾಯಿಯಾಗುವ ಕನಸೂ ಎಂದಿಗೂ ಬಿದ್ದಿರಲಿಲ್ಲ.

ತೋಟದ ಇಣುಕು ಬಾವಿಯಲ್ಲಿ ನೀರೆತ್ತಲು ಹೋಗಿ ಕಾಲುಜಾರಿ ಬಿದ್ದ ಅಮ್ಮ ಮರಳಿ ಬಾರದ ಲೋಕಕ್ಕೆ ಹೋಗಿದ್ದಳು. ಅದಾದ ಮೇಲೆಯೂ ಬಾವಿಗೊಂದು ಕಟ್ಟೆ ಕಟ್ಟಿಸುವ ಆಲೋಚನೆಯೂ ಯಾರಲ್ಲಿಯೂ ಸುಳಿಯಲಿಲ್ಲ. ಅಮ್ಮ ಹೋದ ತಿಂಗಳಿಗೆಲ್ಲ ಮತ್ತೊಮ್ಮೆ ಮದುವೆಯಾಗುವ ಹುಕಿಯಲ್ಲಿ ಓಡಾಡುತ್ತಿರುವ ಅಪ್ಪ, ಹದಿನೆಂಟು ತುಂಬುವ ಮೊದಲೇ ಮದುವೆಯಾಗಿ ಮಕ್ಕಳಿಲ್ಲದೇ ಬಂಜೆ ಪಟ್ಟ ಹೊತ್ತು ತೊಳಲುತ್ತಿರುವ ಅಕ್ಕ, ಅಮ್ಮನ ಅಚಾನಕ್ ಅಗಲಿಕೆಯನ್ನು ಭರಿಸಲಾರದೇ ಪರೀಕ್ಷೆ ಬರೆಯದೇ ಹಾಸ್ಟೆಲ್‍ನಿಂದ ಮರಳಿದ ತಂಗಿ… ಹೀಗೆ ಇಡಿಯ ಕುಟುಂಬ ದಿಕ್ಕೆಟ್ಟು ನಿಂತಿತ್ತು. ಅಷ್ಟರಲ್ಲಿಯೇ ಎಲ್ಲ ಹೊರೆಯನ್ನು ಹೊರಲು ಇನ್ನೊಂದು ಹೆಗಲಾಗುವ ಭರವಸೆಯಲ್ಲಿ ಮದುವೆಯೂ ನಡೆದುಹೋಗಿತ್ತು. ಗುಡಿಸಲಿನಂತಿರುವ ಪುಟ್ಟ ಮನೆಯಿಂದ ಮೈಲುಗಟ್ಟಲೇ ವಿಸ್ತಾರದ ದೊಡ್ಡ ಕುಟುಂಬವನ್ನು ಸೇರಿ ಹೊಂದಾಣಿಕೆಯ ತೊಳಲಾಟದಲ್ಲಿರುವ ಮನಸ್ಸು ಜೇಡನ ಬಲೆಯಲ್ಲಿ ಸಿಕ್ಕ ಕೀಟದಂತೆ ಪರಿತಪಿಸುತ್ತಿತ್ತು. ಇವೆಲ್ಲ ನಿರಾಸೆಗಳ ನಡುವೆ ಅಕ್ಕ ತನ್ನೊಡಲಿನಲ್ಲಿ ಎಳೆಯ ಜೀವವೊಂದನ್ನು ಧರಿಸಿ, ಸತ್ತ ಅಮ್ಮನೇ ತನ್ನೊಳಗೆ ಮಗುವಾಗಿ ಬರುವ ಭರವಸೆಯಲ್ಲಿದ್ದಳು. ಓದುವುದೊಂದೇ ಜೀವನದ ಪರಮಗುರಿಯೆಂದು ಅಂದುಕೊಂಡ ನನಗೆ ಯುನಿವರ್ಸಿಟಿಯಲ್ಲಿ ಬರೆದ ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆಯಲ್ಲಿ ಮೊದಲನೆಯವಳಾಗಿ ಸೀಟು ಸಿಕ್ಕಿತ್ತು. ಶಿಕ್ಷಕಿಯಾಗುವ ಕನಸಿನೊಂದಿಗೆ ಓದಿದ ಶಿಕ್ಷಣ ಪದವಿಯಲ್ಲಿ ಯುನಿವರ್ಸಿಟಿಯ ರ್ಯಾಂಕ್ ದೊರಕಿತ್ತು. ಎಲ್ಲ ಜಂಜಡಗಳಿಂದ ದೂರವಾಗಿ ನನ್ನಾಸೆಯಂತೆ ವಿಶ್ವವಿದ್ಯಾನಿಲಯದಲ್ಲಿ ಓದಬೇಕು, ಗ್ರಂಥಾಲಯಗಳಲ್ಲೇ ಹೆಚ್ಚಿನ ವೇಳೆಯನ್ನು ಕಳೆದುಬಿಡಬೇಕು, ಶೈಕ್ಷಣಿಕ ಸಂಶೋಧನೆಗಳಲ್ಲಿ ಮುಳುಗಿಹೋಗಬೇಕು, ಬಾಲ್ಯದಿಂದಲೂ ಕಾಡಿದ ದುಗುಡಗಳನ್ನೆಲ್ಲ ಮರೆತುಬಿಡಬೇಕು… ಹೀಗೆಲ್ಲ ಕನಸುಗಳ ಕೌದಿ ಹೊದ್ದಾಗಲೇ ಒಡಲಿನಲ್ಲೊಂದು ಕಂದಮ್ಮ ಒಡಮೂಡಿತ್ತು.

ಅಂತೂ ಒಂದಿಷ್ಟು ಹೊತ್ತು ನಾವಿಬ್ಬರೂ ಮಾತನಾಡಿ ಇಷ್ಟು ಬೇಗ ಮಕ್ಕಳ ಉಸಾಬರಿ ಬೇಡವೆಂದು ವೈದ್ಯೆರಿಗೆ ತಿಳಿಸಿದರೆ, ನಮ್ಮ ಕುಟುಂಬಕ್ಕೆ ಪರಿಚಿತರಾಗಿದ್ದ ಅವರು ಅಬಾರ್ಶನ್‍ಗೆ ನಾವು ಕೊಟ್ಟ ಕಾರಣಗಳನ್ನೆಲ್ಲ ಕೇವಲವೆಂದು ಬದಿಗೆ ಸರಿಸಿಬಿಟ್ಟರು. ಬಸುರಿತನ ಕಾಯಿಲೆಯಲ್ಲ, ಬಸುರಿಯಾಗಿಯೂ ಓದಬಹುದು, ಮಾನಸಿಕ ಗೊಂದಲಗಳನ್ನೆಲ್ಲ ಮಾಯಿಸಲೆಂದೇ ತಾಯ್ತನದ ಸುಖವಿರುವುದು, ಮದುವೆಯಾದ ಮೇಲೆ ಮಗು ಬೇಗ ಆದಷ್ಟೂ ಒಳ್ಳೆಯದು, ನೀವು ಉದ್ಯೋಗದಲ್ಲಿರುವಾಗಲೇ ಮಗುವಿನ ಜೀವನವೂ ಭದ್ರವಾಗುವುದು… ಎಂದೆಲ್ಲಾ ಹೇಳುತ್ತಲೇ ತೆಗೆದುಕೊಳ್ಳಬೇಕಾದ ಮಾತ್ರೆಗಳ ಪಟ್ಟಿಯನ್ನು ಮುಂದಿಟ್ಟುಬಿಟ್ಟರು. ಮತ್ತೂ ನಿರಾಕರಣೆಯನ್ನು ದೃಢವಾಗಿ ದಾಖಲಿಸಿದಾಗ ಮೊದಲ ಗರ್ಭವನ್ನು ತೆಗೆಸಿಕೊಂಡ ಸಾವಿರ ದಂಪತಿಗಳಲ್ಲಿ ಒಬ್ಬರಿಗಾದರೂ ಮುಂದೆ ಮಗುವಾಗದಿರುವ ಸಾಧ್ಯತೆಗಳಿವೆ. ಅದೇ ದಂಪತಿ ನೀವಾದರೆ? ಎಂದು ಭವಿಷ್ಯದ ಭಯವೊಂದನ್ನು ಬಿತ್ತಿದರು. ತಲೆಬಗ್ಗಿಸಿ ಔಷಧದ ಚೀಟಿ ಹಿಡಿದು ಅಲ್ಲಿಂದ ಮರಳಿದೆವು.

naanemba parimaladha haadhiyali

ಹಿರಿಯ ಕಥೆಗಾರರಾದ ವೈದೇಹಿ ಮತ್ತು ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಅವರೊಂದಿಗೆ ಸುಧಾ.

ಆದರೆ ಅವರೆಂದಂತೆ ಬದುಕು ಇರಲಿಲ್ಲ. ತವರೆಂಬ ಗುಡಿಸಲಿನಲ್ಲಿರುವ ಒಂದೇ ಕೋಣೆಯಲ್ಲಿ ಅಕ್ಕ ಮತ್ತು ನನ್ನ ಬಾಣಂತನಗಳು ಒಟ್ಟಿಗೆ ನಡೆಯುವ ಅವಕಾಶಗಳಿರಲಿಲ್ಲ. ಅಮ್ಮನ ಮರಣದೊಂದಿಗೆ ಮೂರು ಹೆಣ್ಣುಗಳ ಭಾರವೆಲ್ಲಿ ತಮ್ಮ ಮೇಲೆ ಬೀಳಬಹುದೇನೋ ಎಂದು ದೂರಸರಿದ ಬಂಧುಗಳ್ಯಾರಲ್ಲಿಯೂ ಸಹಾಯ ಕೇಳುವಂತಿರಲಿಲ್ಲ. ಸಂಪ್ರದಾಯಸ್ಥರಾದ ಗಂಡನ ಮನೆಯವರು ಅದನ್ನು ಮೀರುವ ಸಾಧ್ಯತೆಗಳೂ ಇಲ್ಲ. ಇಡಿಯ ಬಸುರಿತನ ಎಲ್ಲಿ ಹೆರುವುದೆಂಬ ಚಿಂತೆಯಲ್ಲಿಯೇ ಸೋರಿಹೋಯಿತು. ಸಾಂತ್ವನದ ನೆರಳು, ಸಂತೈಸುವ ಕರಗಳು ಏನಿಲ್ಲದ ಸಂಕಟದಲ್ಲಿ ಕೆಲವೊಮ್ಮೆ ಬಸಿರೇ ನನ್ನ ಶತ್ರುವಂತೆ ಕಾಣತೊಡಗಿತು. ಸುಲಭದಲ್ಲಿ ಕೈಗೆ ಸಿಗುವ ಕಳಲೆ, ಪಪ್ಪಾಯಗಳನ್ನು ಮೂರುಹೊತ್ತೂ ತಿಂದು ಬಸಿರು ಇಳಿದು ಹೋಗಲಿ ಎಂದು ಕಾದಿದ್ದೂ ಆಯಿತು. ಏನೊಂದೂ ನಾಟದಂತೆ ಹೊಟ್ಟೆಯ ಕೂಸು ಬೆಳೆಯುತ್ತಲೇ ಹೋಯಿತು.

ಇಂದು ನಿಂತು ನೋಡುವಾಗ ತಪ್ಪು ಬರಿಯ ಹೊರಗೆ ಮಾತ್ರವೇ ಇರಲಿಲ್ಲ, ನನ್ನಲ್ಲಿಯೂ ಬಹಳವಿತ್ತು ಎಂದು ಅನಿಸುತ್ತದೆ. ಅಪ್ಪ-ಅಮ್ಮನ ಮುಚ್ಚಟೆಯಲ್ಲಿ ಕಾಲ ಕಳೆಯುವಾಗ ಕೊರತೆಗಳೆಲ್ಲ ಬಲವಾಗಿಯೇ ಒದಗುತ್ತವೆ. ಸಾಲಲ್ಲಿ ಹುಟ್ಟಿದ ಮೂರು ಹೆಣ್ಣುಗಳ ನಂತರ ಇನ್ನು ಮಕ್ಕಳು ಬೇಡವೆಂದು ಆ ಕಾಲದಲ್ಲಿಯೇ ಕುಟುಂಬ ಯೋಜನೆಯ ಮೊರೆಹೋಗಿದ್ದರು ಅಮ್ಮ. ಬೆಳೆದು ಮದುವೆಯಾಗುವವರೆಗೂ ಉಳಿಯಲೊಂದು ಮನೆಯಿಲ್ಲದಿದ್ದರೂ ಅಮ್ಮನ ಬೆಚ್ಚನೆಯ ಮಡಿಲು ಅದೆಲ್ಲವನ್ನು ನೆನಪಿಸಿರಲೇ ಇಲ್ಲ. ವರ್ಷದ ಆರುತಿಂಗಳು ತುಂಬಿ ಹರಿವ ಹೊಳೆಯ ಕಾರಣದಿಂದ ಶಾಲೆಯೆಂಬುದು ಕನಸಾಗಿದ್ದರೂ ಆ ಕಾಲದಲ್ಲಿಯೇ ಮೂಲ್ಕಿ ಕಲಿತಿದ್ದ ಅಮ್ಮ ಅಕ್ಷರದವ್ವನಾಗಿ ಪೊರೆದಿದ್ದಳು. ಹಾಡು, ಕುಣಿತ, ಭಾಷಣ, ಯಕ್ಷಗಾನ, ಓದು, ನಾಟಕ, ಬರಹ, ಬಾಯಿಪಾಠ ಎಲ್ಲದರಲ್ಲಿ ಮುಂದಿದ್ದ ನನಗೆ ಓದೆಂಬುದು ಗೀಳಾಗಿ ಹೋಗಿತ್ತು. ಸದಾ ಪುಸ್ತಕದಲ್ಲಿ ಕಳೆದುಹೋದವಳಿಗೆ ಸುತ್ತಲಿನ ಬದುಕು ಹೇಗೆ ಅರ್ಥವಾಗಬೇಕು? ಮನೆಯ ಮಡಲಿನ ತಟ್ಟಿಗೆ ಸಾಲುಸಾಲು ಬಹುಮಾನಗಳನ್ನು ತೂಗಿಬಿಡುವಾಗ ಶಾಲೆಗೇ ಹೋಗದ ಅಪ್ಪನ ಕಣ್ಣುಗಳಲ್ಲಿ ಮೂಡುತ್ತಿದ್ದ ಬೆಳಕೊಂದೇ ಬಾಲ್ಯದ ನೆನಪಾಗಿ ಉಳಿದದ್ದು.

naanemba parimaladha haadhiyali

ದೃಢಕಾಯಳಾದ ಅಕ್ಕನ ಹಿಂದೆ ಹುಟ್ಟಿದ ನಾನು ಬಾಲ್ಯದಿಂದಲೂ ರೋಗಿ. ಅದೇನೋ ಮಕ್ಕಳ ಕಾಯಿಲೆಯೆಂದು ಕರೆಯುತ್ತಿದ್ದ ಕಸಾಲೆಯಿಂದ ಹೊಟ್ಟೆಯುಬ್ಬರಿಸಿ, ಕೈಕಾಲು ಸೊರಗಿ ನೆಲದಲ್ಲಿಯೇ ತೆವಳುತ್ತಿದ್ದ ನನ್ನನ್ನು ಅಪ್ಪ ಹೆಗಲ ಮೇಲೇರಿಸಿ ಮೆರೆಸುತ್ತಿದ್ದರಂತೆ. ಹಾಗಾಗಿಯೇ ಇರಬೇಕು, ನಾನು ಅಪ್ಪನ ಮಗಳಾಗಿಯೇ ಬೆಳೆದೆ. ಅವರಿಗಿದ್ದ ಕಲೆಯ ಬಗೆಗಿನ ಎಲ್ಲ ಸೆಳೆತಗಳನ್ನೂ ನನ್ನವಾಗಿಸಿಕೊಳ್ಳುತ್ತ ಹೋದೆ. ತಂಗಿಯ ಹೆರಿಗೆಗೆಂದು ಅಮ್ಮ ತವರಿಗೆ ಹೋದಾಗೊಮ್ಮೆ ಮೈಯ್ಯೆಲ್ಲ ಬಿಸಿಯೇರಿ ತೆವಳಲೂ ಆಗದಂತಾದೆ. ಕೊನೆಯ ಪ್ರಯತ್ನವೆಂದು ಅಪ್ಪ ಮನೆಯ ಆಳೊಬ್ಬಳನ್ನು ಕರೆದುಕೊಂಡು ಆರುಮೈಲಿ ದೂರದ ಸರಕಾರಿ ದವಾಖಾನೆಗೆ ನಡೆದುಕೊಂಡೇ ನನ್ನನ್ನು ಎತ್ತಿಕೊಂಡೇ ಹೋದರೆ ಅಲ್ಲಿಯೂ ಡಾಕ್ಟರ್ ಆ ದಿನ ರಜೆ. ಉರಿಬಿಸಿಲಿನಲ್ಲಿ, ನೀರು ಕೂಡ ಸಿಗದ ಗುಡ್ಡದ ಮೇಲಿರುವ ಆಸ್ಪತ್ರೆಯೆದುರಿನ ಕಟ್ಟೆಯಲ್ಲಿ ನನ್ನನ್ನು ಮಲಗಿಸಿ ಮುಟ್ಟಿದರೆ ಉಸಿರೇ ನಿಂತಿದೆ ಎನಿಸಿತಂತೆ. ಹೆರಿಗೆಗೆ ದಿನ ಎಣಿಸುತ್ತಿರುವ ಅಮ್ಮನಿಗೆ ಇದನ್ನು ತಿಳಿಸುವುದು ಬೇಡವೆಂದು ಬಟ್ಟೆಯೊಳಗೆ ನನ್ನನ್ನು ಸುತ್ತಿಕೊಂಡು ಮನೆಗೆ ಮರಳುವಾಗ ಮಾರ್ಗಮಧ್ಯದಲ್ಲಿ ಮೂತ್ರದ ಹನಿ ಬಟ್ಟೆಯಿಂದ ಸೋರತೊಡಗಿದಾಗ ಕೆಲಸದಾಳು ನಾನು ಜೀವಂತವಿರುವುದನ್ನು ತಿಳಿದು ಖುಷಿಯಿಂದ ಕುಣಿದುಬಿಟ್ಟಳಂತೆ. ಗತಕಾಲದ ಕಥೆಯಂತೆ ಅನೇಕ ಸಲ ಆ ತಾಯಿಯ ಬಾಯಲ್ಲಿ ಕೇಳಿದ ಈ ಕಥೆಯಲ್ಲಿ ಸತ್ಯವೆಷ್ಟೋ? ಸುಳ್ಳೆಷ್ಟೋ? ಅರ್ಥೈಸಲಾರೆ. ಬದುಕಿನ ಗತಿಗಳನ್ನೆಲ್ಲ ಕಥೆಯಾಗಿಸುವ, ನೋವು ನಲಿವನ್ನೆಲ್ಲ ಹಾಡಾಗಿಸುವ ಆ ಊರಿನ ಚಹರೆಯಲ್ಲಿ ನಿಜ ಮತ್ತು ಸುಳ್ಳುಗಳ ಗೆರೆಗಳು ಬಹಳ ತೆಳುವಾಗಿರುತ್ತವೆ.

ನೆಲದಲ್ಲಿ ತೆವಳುತ್ತಲೇ ಬದುಕಿನ ನಾಲ್ಕು ವರ್ಷ ಕಳೆದುಹೋಗಿತ್ತು. ನನ್ನ ನಂತರ ಹುಟ್ಟಿದ ತಂಗಿ ಹೆಜ್ಜೆಯಿಟ್ಟು ನಡೆಯುವಾಗ ನನ್ನನ್ನು ನೆಲದಿಂದ ಮೇಲೆತ್ತಿ ನಡೆಸತೊಡಗಿದಳು. ಇಂದಿಗೂ ನೆಲಕ್ಕಂಟಿದಾಗಲೆಲ್ಲ ಮತ್ತೆ, ಮತ್ತೆ ನಾನವಳ ತೋಳನ್ನೇ ಆಸರೆಗಾಗಿ ಹಂಬಲಿಸುತ್ತೇನೆ. ಅವಳೊಂದಿಗೆ ನನ್ನನ್ನು ಶಾಲೆಗೂ ಕರೆದೊಯ್ದಳು. ಅಕ್ಷರಲೋಕವನ್ನು ಅದಮ್ಯ ಪ್ರೀತಿಯಿಂದ ನನ್ನದಾಗಿಸಿಕೊಂಡು ಮುನ್ನುಗ್ಗುವ ನನ್ನ ಹಿಂದೆ ಬರುವ ಅವಳು ಅಕ್ಕನಷ್ಟು ಚುರುಕಿಲ್ಲ ಎಂಬ ಹೀಗಳಿಕೆಯೊಂದಿಗೇ ತನ್ನ ಇಡಿಯ ವಿದ್ಯಾಭ್ಯಾಸವನ್ನು ಮುಗಿಸುವಂತಾದದ್ದು ವ್ಯವಸ್ಥೆಯ ವಿಪರ್ಯಾಸ! ಓದು… ಓದು… ಓದು… ಮನೆಗೆ ಬರುವ ಸಾಮಾನು ಕಟ್ಟಿದ ಪೇಪರಿನಿಂದ ಹಿಡಿದು ಕಾಲೇಜಿನ ಗ್ರಂಥಾಲಯದವರೆಗಿನ ಎಲ್ಲ ಪುಸ್ತಕಗಳನ್ನೂ ಓದುವ ತವಕ. ನಡೆದು ಮುಟ್ಟಲಾಗದ ಶಾಲೆಗಳಿಗೆ ನೆಪಮಾತ್ರಕ್ಕೆ ಹೋದರೂ ಎಲ್ಲವನ್ನೂ ಸ್ವಯಂಓದಿನಿಂದಲೇ ಕಲಿಯುವ ಹಠ. ಆ ಕಾಲದಲ್ಲಿಯೇ ಏಳನೆಯ ತರಗತಿ ಓದಿದ ಅಮ್ಮನ ಓದುವ ಆಸೆ ನನ್ನೊಳಗೆ ಬೇರೂರಿ ಹೆಮ್ಮರವಾಗಿ ಬೆಳೆದಿತ್ತು. ಅಮ್ಮ ನನ್ನ ಜೊತೆಗಿದ್ದರೆ ಏನನ್ನೂ ಸಾಧಿಸಬಹುದೆಂಬ ಭರವಸೆ ಆಸರೆಯಾಗೊದಗಿತು. ಕಾಲುಜಾರಿದ್ದು ಅಮ್ಮ, ಆದರೆ ಬದುಕು ಜಾರಿದ್ದು ನಮ್ಮೆಲ್ಲರದ್ದು!

naanemba parimaladha haadhiyali

ಸುಧಾ ಅವರ ಪ್ರಕಟಿತ ಪುಸ್ತಕಗಳು

ಎಲ್ಲ ಕನಸುಗಳ ಮೂಟೆಯನ್ನು ಬದಿಗಿಟ್ಟು ಸಂಪ್ರದಾಯಸ್ಥ ಮನೆಯ ಪಟ್ಟುಗಳನ್ನು ಕಲಿಯತೊಡಗಿದೆ. ಹಬ್ಬ, ಪೂಜೆ, ಪುನಸ್ಕಾರ, ಶ್ರಾದ್ಧ, ಮಹಾಲಯಗಳಲ್ಲಿ ಮುಳುಗಿಹೋದೆ. ತಂಗಿ, ಇಬ್ಬರು ಬಸುರಿಯರ ಅಮ್ಮನಾದಳು. ಆಗತಾನೇ ಹುಟ್ಟಿದ ಮಗುವನ್ನು ಸಲೀಸಾಗಿ ಗೊಂಬೆಯಂತೆ ಎತ್ತಿ ಚಕಚಕನೆ ಕೆಲಸವನ್ನೆಲ್ಲ ಮಾಡುವ ಅವಳನ್ನು ನೋಡಿದ ಎಲ್ಲರೂ ದಾದಿಯ ತರಬೇತಿ ಆಗಿದೆಯೆ? ಎನ್ನುತ್ತಿದ್ದರು. ಅವಶ್ಯಕತೆಗಿಂತ ದೊಡ್ಡ ತರಬೇತಿ ಇನ್ಯಾವುದಿದೆ? ಹದಿಹರೆಯದ ಕೂಸು ಇಬ್ಬರನ್ನೂ ಅಮ್ಮನಾಗಿ ಆರೈಕೆ ಮಾಡಿದಳು. ಅಪ್ಪನ ಹೆಂಡತಿಯಾಗಿ ಚಿಕ್ಕಮ್ಮ ಮನೆಗೆ ಬಂದಳು. ಈ ನಡುವೆ ಸದಾ ಕೊರಗುವ ನನ್ನನ್ನು ಹೆರಿಗೆಗೊಂದು ಜೊತೆ ತಾನೆ, ಅದಕ್ಕೇತಕ್ಕೆ ಕೊರಗುವೆ? ನಮ್ಮನೆಗೆ ಬಾರೆಂದು ಕರೆದ ಗೆಳೆಯನನ್ನು ಹೇಗೆ ಮರೆಯುವುದು? ಅಕ್ಕನಿಗೊಂದು ಮಗಳು, ನನಗೊಬ್ಬ ಮಗ ಹುಟ್ಟಿದರು. ಮಗ ಹುಟ್ಟುವ ಮೊದಲ ದಿನವೇ ಸರಕಾರಿ ನೌಕರಿಯೂ ದೊರೆಯಿತು. ಹಾವೇರಿಯ ಹಳ್ಳಿಯ ಮೂಲೆಯಲ್ಲಿ ನಾನು, ತಂಗಿ. ಸುಳ್ಯದ ಸೀಮೆಯಲ್ಲಿ ಇವರು. ಜೋತ್ಸ್ನಾ ಮತ್ತು ಕೃಷ್ಣಾನಂದ ಕಾಮತರ ಪ್ರೇಮಪತ್ರದಲ್ಲಷ್ಟೇ ಇಂತಹ ದಾಂಪತ್ಯ ಸೊಗಸಾಗಿ ಕಾಣುವುದು ಎಂಬುದು ಅರಿವಿಗೆ ಬಂತು. ವರ್ಷದಲ್ಲಿಯೇ ತಂಗಿಗೂ ಕೆಲಸ ಸಿಕ್ಕಿ, ಮಗನನ್ನು ನೋಡಿಕೊಳ್ಳುವುದು ದುಸ್ತರವಾಯಿತು. ಅಷ್ಟಕ್ಕೂ ಅವನು ನನ್ನ ಬದುಕಿನ ಭಾಗವೆಂಬ ಅರಿವೇ ಮನಸ್ಸಿಗೆ ಇಳಿಯುತ್ತಿರಲಿಲ್ಲ. ಸದಾ ತರಗತಿ, ಮಕ್ಕಳು, ಶಾಲೆ, ಬೋಧನೆ, ಮನೆಯ ಆಚರಣೆಗಳು ಇವುಗಳದೇ ಚಿಂತೆ. ಇವುಗಳೆಲ್ಲದರ ಪ್ರತಿಫಲನದಂತೆ ಕ್ಷಣಮಾತ್ರವೂ ಕುಳಿತಲ್ಲಿ ಕುಳಿತಿರದ ಚಂಚಲತೆ ಮಗುವಿನ ಜೊತೆಯಾಯಿತು.

ಒಮ್ಮೆ ದೇವರ ಮಂಟಪವನ್ನು ದೂರದಿಂದ ನೋಡೆಂದು ಗದರಿದಾಗ ದೂರದಿಂದ ತನಗೆ ಏನೂ ಕಾಣಿಸದು ಎಂದಿದ್ದ ಮಗ. ಯಾವುದಕ್ಕೂ ಇರಲಿ ಎಂದು ನೇತ್ರ ತಜ್ಞರಲ್ಲಿಗೆ ಕರೆದುಕೊಂಡು ಹೋದೆವು. ಪರೀಕ್ಷಿಸಿದ ವೈದ್ಯರು ಚಾಕಲೇಟ್ ಕೊಟ್ಟು ಮಗನನ್ನು ಹೊರಗೆ ಕಳುಹಿಸಿಬಿಟ್ಟರು. ‘ನಿಮ್ಮ ಮಗುವಿಗೆ ತೀವ್ರವಾದ ಸಮೀಪ ದೃಷ್ಟಿದೋಷ. ಸದ್ಯಕ್ಕೆ ಕನ್ನಡಕ ಹಾಕಬಹುದು. ಬೆಳೆಯುತ್ತಾ ಹೋದಂತೆ ದೋಷವೂ ಬೆಳೆದರೆ ಕನ್ನಡಕವೂ ಕೆಲಸಕ್ಕೆ ಬಾರದು. ಯಾವುದಕ್ಕೂ ಬ್ರೇಲ್ ಲಿಪಿಯನ್ನು ಪರಿಚಯಿಸಿಡುವುದು ಒಳ್ಳೆಯದು’ ಎಂದರು. ಯಾವುದರ ಪರಿವೆಯಿಲ್ಲದೇ ಮಗ ಹೊರಗೆ ಆಡುತ್ತಿದ್ದ. ಮನಸ್ಸು ಪೂರ್ತಿ ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದುಹೋಯಿತು. ಬದುಕಿನ ಜಂಜಡಕ್ಕೆ ಸಿಲುಕಿ ಮಗುವನ್ನು ಕಡೆಗಣಿಸಿದೆನೆಂಬ ಪಾಪಪ್ರಜ್ಞೆ ಒಳಗೊಳಗೆ ಸುಡತೊಡಗಿತು. ನಿಜವಾಗಿ ಹೇಳಬೇಕೆಂದರೆ ಆ ದಿನ ನಾನವನ ತಾಯಿಯಾದೆ. ಮುಂದೆ ಕೆಲವು ವರ್ಷ ಪ್ರತಿ ಕ್ಷಣವೂ ಅವನಿಗಾಗಿ ಬದುಕಿದೆ. ಯಾರೆಲ್ಲ ಹೇಳಿದ ಏನೇನೋ ವ್ಯಾಯಾಮಗಳು, ಮನೆಯಲ್ಲಿ ನಡೆಸಿದ ಹೋಮ ಹವನಗಳು, ವಿವಿಧ ವೈದ್ಯಪದ್ಧತಿಯ ಉಪಚಾರಗಳು, ಬಗೆಬಗೆಯ ಆಹಾರ ಪದ್ಧತಿಗಳು, ಥರಾವರಿ ಗಿಡಮೂಲಿಕೆಯ ಪ್ರಯೋಗಗಳು… ಕಂಡದ್ದು, ಕೇಳಿದ್ದು, ಹೇಳಿದ್ದು ಎಲ್ಲವನ್ನೂ ಮಾಡತೊಡಗಿದೆ. ಕನ್ನಡಕ ಹಾಕಿ ಎಲ್ಲರಂತಾದ ಮಗ ಮಾತ್ರ ಕನ್ನಡಕವೂ ಅವನದೇ ಅಂಗವೇನೋ ಎಂಬಂತೆ ನಿರಾಳವಾಗಿದ್ದ. ಕನ್ನಡಕದ ಕಾರಣಕ್ಕಾಗಿ ಯಾವೊಂದು ಚಟುವಟಿಕೆಯಿಂದಲೂ ಅವನು ದೂರಾಗದಂತೆ ಸೂಕ್ಷ್ಮ ನಿರೀಕ್ಷಣೆಯನ್ನು ಜಾರಿಯಲ್ಲಿಟ್ಟಿದ್ದೆ.

naanemba parimaladha haadhiyali

ಹೀಗೆ ಹತ್ತು ವರ್ಷಗಳು ಕೈಗೇ ಸಿಗದೇ ಜಾರಿಹೋದವು. ಪ್ರತಿ ಆರು ತಿಂಗಳಿಗೊಮ್ಮೆ ಕಣ್ಣುಪರೀಕ್ಷೆ ಮಾತ್ರ ಕಡ್ಡಾಯವಾಗಿ ನಡೆಯುತ್ತಲೇ ಇತ್ತು. ಎಲ್ಲ ಪರದಾಟಗಳಲ್ಲಿ ನನ್ನಲ್ಲಿ ಉಳಿದದ್ದು ಮೂಳೆ ಮತ್ತು ಚಕ್ಕಳ ಮಾತ್ರವಾಗಿತ್ತು. ಒಮ್ಮೆ ನೇತ್ರ ಪರೀಕ್ಷೆಗೆ ಹೋದಾಗ ತಜ್ಞ ವೈದ್ಯರೊಬ್ಬರು ನನ್ನ ಮುಖದ ಮೇಲಿರುವ ತಳಮಳಗಳನ್ನು ಓದಿದರೇನೊ. ಸಮಾಧಾನವಾಗಿ ಕುಳ್ಳಿರಿಸಿಕೊಡು ಕಣ್ಣಿನ ರಚನೆ ಮತ್ತು ಬೆಳವಣಿಗೆಯ ಪಾಠವನ್ನು ಮಾಡಿದರು. ನೂರಾರು ವೈದ್ಯಪದ್ಧತಿಯನ್ನು ಎಡತಾಕಿ ಗೊಂದಲಗೊಳ್ಳದಿರುವಂತೆ ತಿಳಿಸಿ ಹೇಳಿದರು. ಹದಿಹರೆಯದ ಬೆಳವಣಿಗೆಯಲ್ಲಿ ಅವನ ದೋಷ ಕಡಿಮೆಯಾಗುವ ಅಥವಾ ಹೆಚ್ಚಾಗುವ ಸಹಜ ಅವಕಾಶಗಳು ಇದ್ದೇ ಇರುತ್ತವೆಯಾದ್ದರಿಂದ ಅವೆಲ್ಲ ಯಾವ ಔಷಧೋಪಚಾರಗಳ ಫಲವಲ್ಲವೆಂಬುದನ್ನು ಬಿಡಿಸಿಟ್ಟರು. ಲೇಸರ್ ಚಿಕಿತ್ಸೆಯಂತಹ ಆಧುನಿಕ ಚಿಕಿತ್ಸೆಗಳು ಈಗಲೇ ಕೆಲವು ಕಡೆ ಲಭ್ಯವಿದ್ದು, ಕೆಲವೇ ವರ್ಷಗಳಲ್ಲಿ ಎಲ್ಲ ಊರುಗಳಲ್ಲೂ ಸಿಗುತ್ತದೆಯೆಂದು ಧೈರ್ಯ ತುಂಬಿದರು. ನಾವು ಅವನಿಗೆ ಮಾಡಬೇಕಾದ ಅತ್ಯುತ್ತಮ ಚಿಕಿತ್ಸೆಯೆಂದರೆ ದೋಷದ ಬಗ್ಗೆ ಪದೇ ಪದೆ ಗಮನ ಸೆಳೆಯದಿರುವುದು ಮತ್ತು ಒಳ್ಳೆಯ ಗುಣಮಟ್ಟದ ಕನ್ನಡಕವನ್ನು ಕೊಡಿಸುವುದೆಂದು ಅವರು ಹೇಳಿದ ಗಳಿಗೆಯಲ್ಲಿ ಮನಸ್ಸು ನಿರಾಳಗೊಂಡಿತು. ಅದಕ್ಕೆಲ್ಲ ಪುರಾವೆಯೋ ಎಂಬಂತೆ ಮಗ ವಾಲಿಬಾಲ್, ಕಬಡ್ಡಿ, ಎತ್ತರಜಿಗಿತ ಎಲ್ಲದರಲ್ಲಿಯೂ ಸದಾ ಮುಂದಿದ್ದ. ಕನ್ನಡಕ ಧರಿಸಿಯೇ ಓಟದಲ್ಲಿ ಯಾವ ತರಬೇತಿಯಿಲ್ಲದೇ ರಾಜ್ಯಮಟ್ಟದವರೆಗೂ ಹೋಗಿಬಂದ. ಓದು, ಯಕ್ಷಗಾನ, ಹಾಡು, ಭಾಷಣ ಎಲ್ಲದರಲ್ಲಿಯೂ ಭಾಗವಹಿಸುತ್ತಾ ಆತ್ಮವಿಶ್ವಾಸಕ್ಕೆ ಮಿತಿಯಿಲ್ಲವೆಂಬುದನ್ನು ಸಾಬೀತು ಮಾಡುತ್ತಲೇ ನಡೆದ. ಆಗಾಗ ಕಣ್ಣಿನಲ್ಲಿ ಗುಳ್ಳೆಯೆದ್ದು ಕಣ್ತುಂಬಿಕೊಳ್ಳುವಾಗಲೆಲ್ಲ ಬಿಸಿನೀರ ಶಾಖಮಾಡಿ ಕೀವು ತೆಗೆಯುತ್ತಾ ನಾನವನೊಂದಿಗೆ ಡಾಕ್ಟರ್ ಆಟವಾಡುತ್ತಿದ್ದೆ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ನಾನು ಅವಳನ್ನು ಒಮ್ಮೆಯೂ ಅಮ್ಮಾ ಎನ್ನಲೇ ಇಲ್ಲ

ಸುಮ್ಮನೆ ಸರಿದುಹೋದ ಹತ್ತು ವರ್ಷ ಏನು ಮಾಡಿದೆಯೆಂದು ಕೇಳಿದರೆ ನಾನು ಅಮ್ಮನಾಗಲು ಕಲಿತೆ ಎಂದಷ್ಟೇ ಹೇಳಲು ಸಾಧ್ಯ. ನನ್ನ ತಾಯಿತನ ಮಗನಿಗೆ ಮಾತ್ರವೇ ಮೀಸಲಿರದೇ ಸುತ್ತಲಿನ ಎಲ್ಲರನ್ನೂ ಪ್ರೀತಿಸಲು ಕಲಿತ ಕಾಲವಿದು. ನನ್ನ ನೂರಾರು ವಿದ್ಯಾರ್ಥಿಗಳು ನನ್ನನ್ನು ತಮ್ಮ ಪುಟ್ಟಪುಟ್ಟ ಸಮಸ್ಯೆಗಳ ಪರಿಹಾರಕ್ಕಾಗಿ ನೋಡಿದ್ದರೆ ಅದಕ್ಕೆಲ್ಲ ನನ್ನೊಳಗೆ ಈ ಕಂದ ಕಸಿಮಾಡಿದ ತಾಯ್ತನವೇ ಕಾರಣವೆನಿಸುತ್ತದೆ. ನನ್ನ ಕಣ್ಮುಂದೆಯೇ ಕುಟುಂಬದಲ್ಲಿ ಅನೇಕ ಸಂಭ್ರಮದ ತಾಯ್ತನಗಳು ಕಳೆದುಹೋಗುತ್ತಿದ್ದವು. ಸಹೋದ್ಯೋಗಿಗಳೆಲ್ಲ ತಮ್ಮ ತಾಯ್ತನದ ಸುಂದರ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರೆ ನನ್ನ ಬಾಯಿ ಕಟ್ಟಿ ಹೋಗುತ್ತಿತ್ತು. ಅಂತಹ ಯಾವ ಅನುಭೂತಿಗಳು ನನ್ನ ಸ್ಮೃತಿಯ ಭಾಗವಾಗಿರಲೇ ಇಲ್ಲ. ಸಂಸಾರವೊಂದು ಹದಕ್ಕೆ ಬಂದಾಗ ಮತ್ತೆ ತಾಯಾಗುವ ಆಸೆ ಚಿಗುರೊಡೆಯಿತು. ಒಡಲಲ್ಲಿ ಒದೆವ ಕಂದನ ಮಿಡಿತವನ್ನು ಅನುಭವಿಸಬೇಕೆಂಬ ಅನಿಸತೊಡಗಿತು. ಮಗುವೇ ಬೇಡವೆಂದುಕೊಂಡಿದ್ದ ನಾನು ಬಾಣಂತನವನ್ನೂ ನಾನೇ ನಿಭಾಯಿಸಬಲ್ಲೆನೆಂಬ ಧೈರ್ಯ ಬಂದುಬಿಟ್ಟಿತ್ತು. ಮತ್ತೊಮ್ಮೆ ಒಡಲು ಚಿಗುರೊಡೆಯಿತು. ಒಡಲಲ್ಲಿ ಚಿಗುರಿದ ಕಂದ ಕೈಗೆ ಬರುವ ಮೊದಲೇ ಮೊದಲ ಮಗ ಕೈಯ್ಯನ್ನೇ ತುಂಡಾಗಿಸಿಕೊಂಡ. ಲೋಹದ ಪಟ್ಟಿಯಿಟ್ಟು ಕೂಡಿಸುವುದು, ಕೈಯ್ಯನ್ನು ಅಲುಗಾಡದಂತೆ ಕಾಪಿಡುವುದು. ಎಲ್ಲದರ ನಡುವೆಯೂ ಒಡಲೊಳಗಿರುವ ಕಂದನ ಪ್ರತಿ ಮಿಡುಕಾಟವನ್ನೂ ಮನಸ್ಸಿನೊಳಗೆ ಕಾಪಿಟ್ಟುಕೊಂಡೆ. ಬುದ್ಧನಂತಹ ಹಾಲುಗಲ್ಲದ ಹಸುಳೆ ಮಡಿಲಿಗೆ ಬಂದ. ಮಂದಸ್ಮಿತವನ್ನೇ ಮುಖದ ತುಂಬಾ ಧರಿಸಿ ದೇವರಂತೆ ಮಡಿಲು ತುಂಬಿದ. ಮನದ ಸಮಾಧಾನ ಮಗುವಿನ ಸ್ವಭಾವವೂ ಆಗುವುದನ್ನು ನಾನಂದು ಗಮನಿಸಿದೆ. ಮತ್ತೂ ಮುಗಿಯಲಿಲ್ಲ ಕಷ್ಟಗಳ ಕೋಟಲೆ. ಮಗನ ಕೈಯ್ಯಲ್ಲಿರುವ ಲೋಹದ ಪಟ್ಟಿಯನ್ನು ತೆಗೆಸುವ ಸರ್ಜರಿ ನಡೆಯುವಾಗಲೇ ನನ್ನ ಆರೋಗ್ಯವೂ ಬಿಗಡಾಯಿಸಿ ಎರಡೆರಡು ಶಸ್ತ್ರಚಿಕಿತ್ಸೆಗೆ ಒಳಗಾದೆ. ಅದೇನೋ ಅಚಾತುರ್ಯದಿಂದ ದೇಹವಿಡೀ ನಂಜೇರಿ ಸಾವಿನ ಮನೆಯ ಬಾಗಿಲಿನವರೆಗೂ ಹೋಗಿಬಂದೆ. ಎಚ್ಚರವಾದಾಗಲೆಲ್ಲ ತಪಸ್ಸೆಂಬಂತೆ ಪುಟ್ಟ ಶಿಶುವಿಗೆ ಹಾಲೂಡಿಸುತ್ತಲೇ ಇದ್ದೆ. ಎಲ್ಲ ನೆನಪಿಸಿಕೊಂಡರೆ ಪುನರ್ಜನ್ಮದ ಕಥೆಗಳಂತೆ ಭಾಸವಾಗುತ್ತವೆ.

naanemba parimaladha haadhiyali

ನನ್ನೊಳಗೆ ಎರಡು ಜಗತ್ತುಗಳಿವೆ. ಬಾಲ್ಯದಿಂದ ಬದುಕು ಹದಗೊಳ್ಳುವವರೆಗಿನ ಒಂದು ಜಗತ್ತು, ಎಲ್ಲ ಜಂಜಡಗಳನ್ನು ಮೀರಿನಿಂತ ನಂತರದ ಜಗತ್ತು. ಅನೇಕ ಕಹಿಗಳನ್ನು ಅನುಭವಿಸಿದ ಮೊದಲ ಜಗತ್ತು ಮೈದಾನದಂತೆ ನುಣುಪಾದ ಎರಡನೆಯದನ್ನು ತಾಡಿಸುತ್ತಲೇ ಇರುತ್ತದೆ. ಎರಡರ ತಾಕಲಾಟಗಳನ್ನು ನಿಭಾಯಿಸಲು ನಾನು ಅಕ್ಷರಗಳ ಮೊರೆಹೋದೆ. ಬರೆಯದೇ ಬದುಕಲಾರೆನೆಂಬಂತೆ ಬರೆಯುತ್ತಲೇ ಇದ್ದೇನೆ. ಓದು, ಬರಹ ಎಂದಿಗೂ ನನಗೆ ಬಿಡುಗಡೆಯ ದಾರಿಗಳಾಗಿ ಒದಗಿ ಬಂದಿವೆ. ಚಿಕ್ಕಂದಿನಿಂದಲೂ ನಾನು ಹೊರಲೋಕದಲ್ಲಿ ತೀರ ಸ್ಥಿರತೆಯನ್ನು ಕಾಯ್ದುಕೊಂಡವಳು. ಆದರೆ ನನ್ನ ಒಳಲೋಕದಲ್ಲಿನ ಭಾವನೆಗಳ ಭೋರ್ಗರೆತ ನನ್ನನ್ನು ತೀರ ವಿಚಲಿತಳನ್ನಾಗಿಸುತ್ತದೆ. ಇವೆಲ್ಲವನ್ನು ಮೀರಲು ಬರೆಯುವುದೊಂದೇ ಆಸರೆಯಾಗಿ ಒದಗಿಬರುತ್ತದೆ.

ಎಷ್ಟೊಂದು ಜೀವಗಳು ಇವೆಲ್ಲವನ್ನೂ ಮೀರಲು ನನಗೆ ಜೊತೆಯಾಗಿವೆ. ನನ್ನ ಹಠಮಾರಿತನ, ದ್ವಂದ್ವ ಎಲ್ಲವುಗಳನ್ನು ಕೋಪ, ಹತಾಶೆ, ಖುಷಿಯಿಂದಲೇ ನಿಭಾಯಿಸುವ ಸಂಗಾತಿ, ಕೊನೆಯವರೆಗೂ ‘ನನ್ನ ಮಗಳು ನನ್ನ ಹೆಮ್ಮೆ’ ಎನ್ನುತ್ತಲೇ ಬಾಳ ಪಯಣ ಮುಗಿಸಿದ ಅಪ್ಪ, ನನ್ನ ದೇಹದ ಭಾಗವೇ ಆಗಿಹೋಗಿರುವ ಸಹೋದರಿಯರು, ಅಮ್ಮನೇ ಆಗಿ ಒದಗಿ ಬಂದು ಇದ್ದಕ್ಕಿದ್ದಂತೆ ಅಗಲಿದ ಚಿಕ್ಕಮ್ಮ, ಎಲ್ಲ ನೋವುಗಳನ್ನು ಹಂಚಿಕೊಳ್ಳುವ ಗೆಳೆಯರು, ಹೊಸಕನಸುಗಳನ್ನು ನನ್ನೊಂದಿಗೆ ಸೇರಿಯೇ ಹೆಣೆಯುವ ಯುವ ಮನಸ್ಸುಗಳು, ಎಂದಿಗೂ ನನ್ನನ್ನು ವಯಸ್ಸಾಗದಂತೆ ಕಾಪಿಡುವ ನನ್ನ ಪ್ರೀತಿಯ ವಿದ್ಯಾರ್ಥಿ ಬಳಗ, ಎಲ್ಲಕ್ಕಿಂತ ಮಿಗಿಲಾಗಿ ನನ್ನನ್ನು ಗೆಳತಿಯಂತೆ ಪ್ರೀತಿಸುವ ಮತ್ತು ಬಯಸಿದಾಗಲೆಲ್ಲ ನನ್ನ ತಂದೆ-ತಾಯಿಯೂ ಆಗಬಲ್ಲ ನನ್ನೆರಡು ಮಕ್ಕಳು… ಹೀಗೆ ಬದುಕು ಸಾಗುತ್ತಿದೆ. ಆದರೂ ಏನನ್ನೋ ಕಳಕೊಂಡಂತೆ ಸದಾ ಹುಡುಕುವ ಹಾಗೂ ಇನ್ನೇನೋ ಮಾಡಬೇಕಿತ್ತೆಂದು ತಡಕಾಡುವ ನನ್ನ ಮನೋಬೇನೆಗೆ ಕೊನೆಯೇ ಇಲ್ಲವೆನ್ನುವ ಸತ್ಯವೂ ಸದಾ ಕಾಡುತ್ತದೆ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ನಾನೊಬ್ಬ ರೈತ ಮಹಿಳೆ ಮತ್ತಿದೇ ನನ್ನ ಅಸ್ತಿತ್ವ

Published On - 4:31 pm, Fri, 19 February 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ