ವಿಂಗ್ ಕಮಾಂಡರ್ ಗಲಾಟೆ: ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಹಲ್ಲೆಗೊಳಗಾದ ಕನ್ನಡಿಗ
ವಿಂಗ್ ಕಮಾಂಡರ್ ಗಲಾಟೆ ಪ್ರಕರಣ ಸಂಬಂಧ ಹಲ್ಲೆಗೊಳಗಾದ ಕನ್ನಡಿಗ ವಿಕಾಸ್ ಕುಮಾರ್ ಸ್ಟೇಷನ್ ಬೇಲ್ನಿಂದ ಬಿಡುಗಡೆಯಾಗಿದ್ದಾರೆ. ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಬೆಂಬಲಿಸಿದವರಿಗೆ ಧನ್ಯವಾದ ತಿಳಿಸಿ ಜೊತೆಗೆ ತಮ್ಮ ಕೆಲಸ ಹೋಗುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, (ಏಪ್ರಿಲ್ 22): ವಿಂಗ್ ಕಮಾಂಡರ್ ಶಿಲಾದಿತ್ಯ (Wing Commander Shiladitya Bose) ಹಾಗೂ ಟೆಕ್ಕಿ ವಿಕಾಸ್ ಕುಮಾರ್ (Vikas Kumar) ನಡುವೆ ಬೆಂಗಳೂರಿನಲ್ಲಿ (Bengaluru) ನಡೆದ ಗಲಾಟೆ ದೇಶದೆಲ್ಲೆಡೆ ಸದ್ದು ಮಾಡಲಾರಂಭಿಸಿದೆ. ಈ ಸಂಬಂಧ ಇಬ್ಬರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ವಿಂಗ್ ಕಮಾಂಡರ್ ವಿಕಾಸ್ ಹಿಗ್ಗಾಮುಗ್ಗ ಥಳಿಸಿ (assault) ಬಳಿಕ ತಾನೇ ದೂರು ನೀಡಿದ್ದ. ಇದೀಗ ಸಿಸಿಟಿವಿಯಿಂದ ವಿಂಗ್ ಕಮಾಂಡರ್ನ ಕಳ್ಳಾಟ ಬಯಲಾಗಿದ್ದು, ಈ ಸಂಬಂಧ ಶಿಲಾದಿತ್ಯ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಹಲ್ಲೆಗೊಳಗಾಗಿದ್ದ ವಿಕಾಸ್ ಕುಮಾರ್ ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯಾಗಿದ್ದು, ಪ್ರಕರಣ ಸಂಬಂಧ ಮೊದಲ ಪ್ರತಿಕ್ರಿಯೆ ನೀಡಿ ಘಟನೆ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ.
ನಾಗವಾರಪಾಳ್ಯದ ಬಳಿ ಆಗಿರೋ ಘಟನೆ ನೋಡಿದ್ದೀರಾ. ವಿಂಗ್ ಕಮಾಂಡರ್ ಮಾಡಿರುವ ಆರೋಪ ಸುಳ್ಳು. ನನ್ನ ಪರವಾಗಿ ನಿಂತ ಎಲ್ಲಾ ಎಲ್ಲಾ ಕನ್ನಡ ಮಾಧ್ಯಮ, ಕನ್ನಡ ಸಂಘಟನೆಗಳಿಗೆ ಧನ್ಯವಾದ. ಆಗಿರುವ ಗಾಯದಿಂದ ಮಾತನಾಡಲು ಆಗುತ್ತಿಲ್ಲ. ತನಿಖೆ ಮಾಡ್ತೇವೆಂದು ಕಮಿಷನರ್ ಕೂಡ ಮಾತು ಕೊಟ್ಟಿದ್ದಾರೆ. ನನಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ರೌಡಿ ವರ್ತನೆ: ಅಸಲಿಗೆ ಆಗಿದ್ದೇನು?
ಗಾಯಾಳುವಾಗಿ ನಾನು ಬೈಯಪ್ಪನಹಳ್ಳಿ ಪೊಲೀಸರ ಬಳಿ ಇದ್ದೆ. ವೈದ್ಯಕೀಯ ವ್ಯವಸ್ಥೆ ಪೊಲೀಸರೇ ಮಾಡಿದ್ದಾರೆ. ನನ್ನ ಭಾಗದ ಸ್ಟೋರಿನೂ ಪೊಲೀಸರು ಕೇಳಿಸಿಕೊಂಡಿದ್ದಾರೆ. ಅಲ್ಲದೇ ನನ್ನ ಕಡೆಯಿಂದಲೂ ಪೊಲೀಸರು ದೂರು ಪಡೆದುಕೊಂಡಿದ್ದಾರೆ. ಸದ್ಯಕ್ಕೆ ನನ್ನ ಕೆಲಸಕ್ಕೆ ತುಂಬ ಸಮಸ್ಯೆಯಾಗಿದೆ. ನನ್ನ ತಂದೆ ಎರಡು ವರ್ಷದ ಹಿಂದೆ ತೀರಿಕೊಂಡಿದ್ದಾರೆ. ನಾನು ಕೆಲಸ ಮಾಡಿಕೊಂಡು ತಾಯಿ ನೋಡಿಕೊಳ್ಳುತಿದ್ದೆ. ಈಗ ಸಮಸ್ಯೆ ಆಗಿದೆ. ಈಗಾಗಲೇ ನನ್ನ ಕಂಪನಿ ಹೆಚ್ಆರ್ ನನಗೆ ಕಾಲ್ ಮಾಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಆದರೇ ನಾನು ಇಲ್ಲಿಗೆ ಬಿಡುವುದಿಲ್ಲ, ನ್ಯಾಯ ಪಡೆದುಕೊಳ್ಳುತ್ತೇವೆ. ಭಾಷೆ ವಿಚಾರವಾಗಿ ಅಂತಾ ನನ್ನ ವಿರುದ್ಧ ಸುಳ್ಳು ದೂರು ಕೊಟ್ಟಿದ್ದಾರೆ. ಅವರೇ ಹಲ್ಲೆ ಮಾಡಿ ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ. ನಾನು 5 ಐದು ಭಾಷೆ ಮಾತನಾಡುತ್ತೇನೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮಾತನಾಡಲು ಬರುತ್ತೆ ಎಂದು ಸಿಎಂ, ಗೃಹಸಚಿವರು ಹಾಗೂ ಪೊಲೀಸರಿಗೆ ವಿಕಾಸ್ ಕುಮಾರ್ ಧನ್ಯವಾದ ಎಂದರು.