ಶ್ರೀ ಕೃಷ್ಣದೇವರಾಯ ಸಮಾಧಿ ಮಂಟಪದಲ್ಲಿ ಮಾಂಸ ಶುದ್ಧೀಕರಣ: ಮೂವರ ವಿರುದ್ಧ FIR
ಆನೆಗೊಂದಿಯ ಶ್ರೀ ಕೃಷ್ಣದೇವರಾಯ ಸಮಾಧಿ ಮಂಟಪದಲ್ಲಿ ಮಾಂಸ ಶುದ್ಧೀಕರಣ ಮಾಡಿದ ಘಟನೆ ವೈರಲ್ ಆಗಿದ್ದು, ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರವಾಸೋದ್ಯಮ ಸಚಿವರು ಘಟನೆಯನ್ನು ಖಂಡಿಸಿದ್ದು, ರಾಜಕೀಯ ಬೆರೆಸದಂತೆ ಮನವಿ ಮಾಡಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷರು ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕೊಪ್ಪಳ, ಏಪ್ರಿಲ್ 22: ಆನೆಗೊಂದಿಯ ತುಂಗಭದ್ರಾ ನದಿ (Tungabhadra River) ದಡದಲ್ಲಿರುವ ಶ್ರೀ ಕೃಷ್ಣದೇವರಾಯ (Sri Krishnadevaraya) ಸಮಾಧಿ ಮಂಟಪದಲ್ಲಿ ಮಾಂಸ ಶುದ್ಧೀಕರಣ ಮಾಡಿದ್ದ ಮೂವರ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆನೆಗುಂದಿ ಗ್ರಾಮದ (Anegundi) ಹನುಮಂತ, ಫಕೀರಪ್ಪ, ಹುಲಗಪ್ಪ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶ್ರೀ ಕೃಷ್ಣದೇವರಾಯ ಸಮಾಧಿ ಮಂಟಪದಲ್ಲಿ ಮಾಂಸ ಶುದ್ಧೀಕರಣ ಮಾಡಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ, ಪ್ರವಾಸೋದ್ಯಮ ಸಚಿವ ಹೆಚ್ಕೆ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ರಾಜಕೀಯ ಬೆರೆಸುವುದಿಲ್ಲ, ಅವರೂ ಬೆರೆಸಬಾರದು. ಅಪಮಾನ ಆಗಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದರು.
ಸಮಾಧಿ ಮಂಟಪದಲ್ಲಿ ಅಚಾತುರ್ಯ ಆಗಿದೆ ಎಂದು ಇಲ್ಲಿಗೆ ಬಂದಿದ್ದೇನೆ. ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಬಗ್ಗೆ ಮೇ ತಿಂಗಳಲ್ಲಿ ಬಂದಾಗ ಹೇಳುತ್ತೇನೆ. ಆನೆಗೊಂದಿಯಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಬಗ್ಗೆ ಮನವರಿಕೆ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಶ್ರಿ ಕೃಷ್ಣದೇವರಾಯರ ಸಮಾಧಿಯ ಮೇಲೆ ಮಾಂಸ ಶುದ್ಧೀಕರಣ, ಯತ್ನಾಳ್ ಕಿಡಿ
ಪ್ರಕರಣ ಸಂಬಂಧ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಹುಲಿಗೆಮ್ಮ ಮಾತನಾಡಿ, ಗೊತ್ತಿದ್ದೊ, ಗೊತ್ತಿಲ್ಲದೆಯೋ ಮಾಡಿದ್ದಾರೆ. ಅಚಾನಕ್ಕಾಗಿ ಘಟನೆ ನಡೆದಿದೆ. ಇದರಲ್ಲಿ ರಾಜಕೀಯ ಮಾಡಬಾರದು. ತಪ್ಪಾಗಿದೆ ಮುಂದೆ ಆಗದಂತೆ ನೋಡಿಕೊಳ್ಳುತ್ತೇವೆ.ಈ ಕುರಿತು ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದರು.