ಅಂಜನಾದ್ರಿ ಆಂಜನೇಯನ ದರ್ಶನಕ್ಕೆ ರೋಪ್ ವೇ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್
ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ವೃದ್ಧರು ಮತ್ತು ಅನಾರೋಗ್ಯದಿಂದ ಬಳಲುವ ಭಕ್ತರಿಗೆ ಬೆಟ್ಟ ಹತ್ತುವುದು ಕಷ್ಟಕರವಾಗಿದ್ದರಿಂದ ಈ ನಿರ್ಧಾರ ಮಹತ್ವದ್ದಾಗಿದೆ. ಮೂರು ರೋಪ್ ವೇಗಳನ್ನು ನಿರ್ಮಿಸುವ ಯೋಜನೆಯಿದೆ. ಇದರಿಂದ ಪ್ರತಿ ಗಂಟೆಗೆ 800 ಭಕ್ತರು ಬೆಟ್ಟಕ್ಕೆ ಏರಿ ದರ್ಶನ ಪಡೆಯಬಹುದು. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಕೊಪ್ಪಳ, ಮಾರ್ಚ್ 30: ಪೌರಾಣಿಕವಾಗಿ, ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಅಂಜನಾದ್ರಿ (Anjanadri), ಹನುಮನ (Hanuma) ಜನ್ಮಸ್ಥಳ ಅಂತಲೇ ಪ್ರಸಿದ್ದಿ ಪಡೆದಿದೆ. ಆದರೆ, ಬೆಟ್ಟದ ಮೇಲಿರುವ ಆಂಜನೇಯನ ದರ್ಶನ ಪಡೆಯಬೇಕಾದರೆ ಸಾಕಷ್ಟು ಕಷ್ಟ ಪಡಬೇಕಾಗಿದೆ. ವೃದ್ದರು, ಅನಾರೋಗ್ಯ ಪೀಡಿತರು ಬೆಟ್ಟ ಹತ್ತಿ ದರ್ಶನ ಪಡೆಯೋದು ಕಷ್ಟಸಾಧ್ಯವಾಗಿದೆ. ಅನೇಕರು ಬೆಟ್ಟಹತ್ತುವಾಗಲೇ ಬಾರದ ಲೋಕಕ್ಕೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ರೂಪ್ ವೇ (Ropeway) ನಿರ್ಮಾಣ ಮಾಡಬೇಕು ಅನ್ನೋದು ಬಹುವರ್ಷಗಳ ಬೇಡಿಕೆಯಾಗಿತ್ತು. ಇದೀಗ ಬೇಡಿಕೆ ಇಡೇರುತ್ತಿದ್ದು, ರೋಪ್ ವೇ ನಿರ್ಮಾಣಕ್ಕೆ ಅನುಮೋಧನೆ ಸಿಕ್ಕಿದೆ.
ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯಿರೋ ಅಂಜನಾದ್ರಿ ಬೆಟ್ಟಕ್ಕೆ, ದೇಶ ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಇದೇ ಅಂಜನಾದ್ರಿ ಬೆಟ್ಟ, ರಾಮಾಯಣದ ಆಂಜನೇಯನ ಜನ್ಮಸ್ಥಳ ಅಂತಲೇ ಪ್ರಸಿದ್ದಿ ಪಡೆದಿದೆ. ಹೀಗಾಗಿ ಹೆಚ್ಚಿನ ಭಕ್ತರು, ಅಂಜನಾದ್ರಿಗೆ ಬರುತ್ತಾರೆ. ಆದರೆ, ಅಂಜನಾದ್ರಿ ಬೆಟ್ಟ ಹತ್ತಿ, ಆಂಜನೇಯನ ದರ್ಶನ ಪಡೆಯಬೇಕಾದರೆ, ಬೆಟ್ಟದಲ್ಲಿರುವ 575 ಮೆಟ್ಟಿಲುಗಳನ್ನು ಹತ್ತಲೇಬೇಕು. ಸದ್ಯ ಬೆಟ್ಟ ಹತ್ತಲು ಮೆಟ್ಟಿಲು ಬಿಟ್ಟರೆ ಬೇರೆ ಯಾವುದೇ ವ್ಯವಸ್ಥೆ ಇಲ್ಲ.
ಹೀಗಾಗಿ, ಆಂಜನೇಯನ ದರ್ಶನ ಪಡೆಯಬೇಕಾದರೆ, ಮಟ್ಟಿಲು ಹತ್ತಿ ಹೋಗಬೇಕು. ಆದರೆ, ಇದು ಬಹುತೇಕರಿಗೆ ಕಷ್ಟಸಾಧ್ಯವಾಗಿತ್ತು. ವೃದ್ದರು, ಮಕ್ಕಳು, ಆರೋಗ್ಯ ಸಮಸ್ಯೆ ಇರುವರು, ಬೆಟ್ಟ ಹತ್ತಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಬೆಟ್ಟ ಹತ್ತುವಾಗ ಅನೇಕರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ದುರ್ಘಟನೆಗಳು ಕೂಡಾ ನಡೆದಿವೆ. ಇದೇ ಕಾರಣಕ್ಕೆ ಬೆಟ್ಟ ಹತ್ತಲು ರೋಪ್ ವೇ ನಿರ್ಮಾಣ ಮಾಡಬೇಕು ಅನ್ನೋ ಆಗ್ರಹ ಜೋರಾಗಿತ್ತು.
3 ರೋಪ್ ವೇಗಳ ನಿರ್ಮಾಣ
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡ ಆದಷ್ಟು ಬೇಗನೆ ರೋಪ್ ವೇ ನಿರ್ಮಾಣ ಮಾಡುತ್ತೇವೆ ಅಂತ ಅನೇಕ ವರ್ಷಗಳಿಂದ ಹೇಳುತ್ತಲೇ ಇದ್ದರು. ಆದರೆ, ರೂಪ್ ವೇ ನಿರ್ಮಾಣ ಮಾತ್ರ ಆಗಿರಲಿಲ್ಲ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಆದ್ರೆ ಇದೀಗ ರೋಪ್ ವೇ ನಿರ್ಮಾಣದ ಕನಸು ನನಸಾಗುವ ಸಮಯ ಬಂದಿದೆ. ಅಂದುಕೊಂಡಂತೆ ಎಲ್ಲವೂ ನಡೆದರೇ ಅಂಜನಾದ್ರಿ ಬೆಟ್ಟಕ್ಕೆ ಒಂದಲ್ಲ, ಎರಡಲ್ಲ, ಮೂರು ರೋಪ್ ವೇ ನಿರ್ಮಾಣದ ಪ್ಲ್ಯಾನ್ ನಡೆದಿದ್ದು, ಮೊದಲ ಹಂತದಲ್ಲಿ ಒಂದು ರೋಪ್ ವೇ ನಿರ್ಮಾಣಕ್ಕೆ ಈಗಾಗಲೇ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ.
ರೋಪ್ ವೇ ಎಲ್ಲಿಂದ ಎಲ್ಲಿಗೆ?
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಕೇಂದ್ರದ ರೈಟ್ ಸಂಸ್ಥೆಯ ಅಧಿಕಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲಿಂದ ರೂಪ್ ವೇ ನಿರ್ಮಾಣ ಮಾಡಬೇಕು, ಅದರ ಸಾಧಕ ಬಾಧಕಗಳೇನು ಎಂಬುವುದರ ಬಗ್ಗೆ ಸ್ಥಳ ಪರಿಶೀಲನೆ ಕೂಡ ನಡೆಸಿದ್ದಾರೆ. ಸದ್ಯ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ, ಅಂಜನಾಂದ್ರಿ ಬೆಟ್ಟದ ಎಡಬಾಗದಲ್ಲಿ ಬೇಸ್ ಸ್ಟೇಷನ್ ಸಿದ್ದ ಮಾಡಿಕೊಂಡು, ಬೆಟ್ಟದ ಮೇಲಿರುವ ಚಿಕ್ಕ ಕೆರೆ ಬಳಿ ಲ್ಯಾಂಡಿಂಗ್ ಸ್ಟೇಷನ್ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಒಟ್ಟು 450 ಮೀಟರ್ ಉದ್ದದ ರೂಪ್ ವೇ ನಿರ್ಮಾಣ ಮಾಡಲಾಗುತ್ತದೆ.
ಒಂದು ಗಂಟೆಗೆ ಎಂಟು ನೂರು ಭಕ್ತರು ಹೋಗಿ ಬರಲು ಅವಕಾಶವಾಗಲಿದೆ. ಮುಂಜಾನೆ ಆರು ಗಂಟೆಯಿಂದ ರಾತ್ರಿವರಗೆ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ 45 ದಿನದಲ್ಲಿ ಈ ಕೆಲಸ ಆರಂಭವಾಗಲಿದ್ದು, ಒಂದು ವರ್ಷದಲ್ಲಿ ಮುಗಿಯಲಿದೆಯಂತೆ. ಇದನ್ನು ಹೊರತು ಪಡೆಸಿ ಇನ್ನು ಎರಡು ರೋಪ್ ವೇ ನಿರ್ಮಾಣಕ್ಕೆ ಚಿಂತನೆ ನಡೆದಿದೆಯಂತೆ.
ಹೊಸಪೇಟೆಯಿಂದ ಗಂಗಾವತಿ ಕಾರಿಗನೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು, ಮೂರು ಕಿಲೋ ಮೀಟರ ರೋಪ್ ವೇಯನ್ನು 120 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆಯಂತೆ. ಇನ್ನು, ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನದಿಂದ ನೇರವಾಗಿ ಅಂಜನಾದ್ರಿ ಬೆಟ್ಟಕ್ಕೆ ನೇರವಾಗಿ ಬರಲು ರೂಪ ವೇ ನಿರ್ಮಾಣಕ್ಕೆ ಕೂಡಾ ರೈಟ್ ಸಂಸ್ಥೆಯವರು ಪ್ಲ್ಯಾನ್ ಮಾಡಿದ್ದಾರಂತೆ. ಈ ರೋಪ್ ವೇ ನಿರ್ಮಾಣವಾದರೆ ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನದಿಂದ ನೇರವಾಗಿ ಅಂಜನಾದ್ರಿಗೆ ರೋಪ್ ವೇ ನಿರ್ಮಾಣವಾಗಲಿದೆ.
ಇದನ್ನೂ ಓದಿ: ಅಂಜನಾದ್ರಿ ಬೆಟ್ಟ ಹತ್ತುವಾಗಲೇ 17 ವರ್ಷದ ಯುವಕ ಹೃದಯಸ್ತಂಭನದಿಂದ ಸಾವು
ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಬೇಕು ಅನ್ನೋದು ಬಹುವರ್ಷಗಳ ಕನಸಾಗಿದೆ. ಹೀಗಾಗಿ ಆದಷ್ಟು ಬೇಗನೆ ರೋಪ್ ವೇ ನಿರ್ಮಾಣ ಕಾರ್ಯ ಆರಂಭಿಸಿ, ಭಕ್ತರಿಗೆ ಅನಕೂಲ ಕಲ್ಪಿಸುವ ಕೆಲಸವನ್ನು ಮಾಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Sun, 30 March 25