ಅಂಜನಾದ್ರಿ ಬೆಟ್ಟ ಹತ್ತುವಾಗಲೇ 17 ವರ್ಷದ ಯುವಕ ಹೃದಯಸ್ತಂಭನದಿಂದ ಸಾವು
ಹೃದಯಾಘಾತ ಮತ್ತು ಹೃದಯಸ್ತಂಭನ ಇಂದು ಚಿಕ್ಕಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಕೆಲವೇ ಕ್ಷಣಗಳಲ್ಲಿ ಪ್ರಾಣಕ್ಕೆ ಎರವಾಗುತ್ತಿರುವ ಈ ಕಾಯಿಲೆ ದಿಢೀರ್ ಜೀವ ತೆಗೆಯುತ್ತಿರುವುದು ಆತಂಕದ ವಿಷಯವಾಗಿದೆ. ಅದರಲ್ಲೂ ಯುವ ಜನತೆಯಲ್ಲಿ ಹೃದಯಾಘಾತದ ಘಟನೆಗಳು ಹೆಚ್ಚುತ್ತಿವೆ. ಅದರಂತೆ ಕೊಪ್ಪಳದಲ್ಲಿ ಹದಿನೇಳು ವರ್ಷದ ಯುವಕ ಅಂಜನಾದ್ರಿ ಬೆಟ್ಟ ಹತ್ತುವಾಗ ಅಸುನೀಗಿದ್ದಾನೆ.

ಕೊಪ್ಪಳ, (ಜನವರಿ 29): ಹದಿನೇಳು ವರ್ಷದ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಜಯೇಶ್ ಯಾದವ್ ಮೃತ ದುರ್ದೈವಿ. ಕೊಪ್ಪಳ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಜಯೇಶ್ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಸ್ನೇಹಿತರೊಂದಿಗೆ ಅಂಜನಾದ್ರಿ ಬೆಟ್ಟ ಹತ್ತಿ ಇನ್ನೇನು ದರ್ಶನ ಪಡೆಯಬೇಕು ಎನ್ನುವಷ್ಟರಲ್ಲೇ ಹೃದಯಾಘಾತವಾಗಿದೆ.
ಸ್ನೇಹಿತರ ಜೊತೆಗೆ ಇಂದು ಜಿಲ್ಲೆಯ ಗಂಗಾವತಿ ತಾಲೂಕಿನ ಸುಪ್ರಸಿದ್ದ ಅಂಜನಾದ್ರಿ ಬೆಟ್ಟಕ್ಕೆ ಜಯೇಶ್ ಹೋಗಿದ್ದ. ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ 575 ಮೆಟ್ಟಿಲುಗಳನ್ನು ಹತ್ತಿ, ಆಂಜನೇಯನ ದರ್ಶನಕ್ಕೆ ಜಯೇಶ್ ಹೋಗುತ್ತಿದ್ದ. ಆದ್ರೆ ಅರ್ಧ ಬೆಟ್ಟ ಹತ್ತಿದಾಗಲೇ ದಿಢೀರನೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಆಸ್ಪತ್ರೆಗೆ ತಲುಪುವ ಮುನ್ನವೇ ಜಯೇಶ್ ಉಸಿರು ನಿಂತು ಹೋಗಿತ್ತು. ಹೃದಯಾಘಾತದಿಂದ ಜಯೇಶ್ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದದಾರೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಕಾಲದಲ್ಲಿ ವಯಸ್ಸಾದವರು ಮಾತ್ರ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದರು. ಆದರೆ ಈಗ ಹಾಗಲ್ಲ. ಯುವಕರು ಸಹ ಹೃದಯಾಘಾತ, ಹೃದಯ ಸ್ತಂಭನ ಮತ್ತು ಹೃದಯ ವೈಫಲ್ಯದಿಂದ ಕುಸಿದು ಸಾಯುತ್ತಿದ್ದಾರೆ. ಚಿಕ್ಕವರಿಂದ ಹಿಡಿದು ದೊಡ್ಡವರು ವರೆಗೂ ಅನೇಕ ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಕೊರೊನಾ ಬಳಿಕ ಜಗತ್ತಿನಾದ್ಯಂತ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಲಿವೆ. ಭಾರತದಲ್ಲೂ ಮಕ್ಕಳಿಂದ ಮುದುಕರವರೆಗೂ ಹೃದಯಾಘಾತದಿಂದ ಸಾವಿನ ಪ್ರಮಾಣ ಹೆಚ್ಚುತ್ತಿರುವದು ಆತಂಕ ಮೂಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ