AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಿಗರು ಉದ್ಯೋಗಕ್ಕಾಗಿ, ಬಡ್ತಿಗಾಗಿ ಕೇಂದ್ರದ ಮುಂದೆ ಭಿಕ್ಷೆಗೆ ನಿಂತಿಲ್ಲ: ರೈಲ್ವೆ ಪರೀಕ್ಷೆ ಮುಂದೂಡಿದಕ್ಕೆ ಸಿಎಂ ಕೆಂಡಾಮಂಡಲ

ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡಿರುವ ಮೂಲಕ ರೈಲ್ವೆ ಇಲಾಖೆಯಿಂದ ಮತ್ತೊಮ್ಮೆ ಕನ್ನಡಕ್ಕೆ ಮಲತಾಯಿ ಧೋರಣೆ ಮಾಡಲಾಗಿದೆ. ರಾಜ್ಯದಲ್ಲಿ ಈ ಬಗ್ಗೆ ಹೋರಾಟಗಳು ನಡೆಯುತ್ತಿದ್ದಂತೆ ಪರೀಕ್ಷೆ ಮುಂದೂಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದು, ಕೇಂದ್ರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಕನ್ನಡಿಗರು ಉದ್ಯೋಗಕ್ಕಾಗಿ, ಬಡ್ತಿಗಾಗಿ ಕೇಂದ್ರದ ಮುಂದೆ ಭಿಕ್ಷೆಗೆ ನಿಂತಿಲ್ಲ: ರೈಲ್ವೆ ಪರೀಕ್ಷೆ ಮುಂದೂಡಿದಕ್ಕೆ ಸಿಎಂ ಕೆಂಡಾಮಂಡಲ
ಸಿಎಂ ಸಿದ್ದರಾಮಯ್ಯImage Credit source: tv9 kannada
ಗಂಗಾಧರ​ ಬ. ಸಾಬೋಜಿ
|

Updated on:Mar 17, 2026 | 7:45 PM

Share

ಬೆಂಗಳೂರು, ಮಾರ್ಚ್​ 17: ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ತೆಗೆದ ವಿಚಾರವಾಗಿ ರಾಜ್ಯದ ವಿವಿಧೆಡೆ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗಿದೆ. ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಇತ್ತ ಹುಬ್ಬಳ್ಳಿಯಲ್ಲಿ ರೈಲ್ವೆ ನೇಮಕಾತಿ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಬಳಿಕ ವಿವಿಧ ಸಂಘಟನೆಗಳ ಹೋರಾಟಕ್ಕೆ ಮಣಿದ ರೈಲೆ ಇಲಾಖೆ ಇಂದಿನ ಪರೀಕ್ಷೆಯನ್ನು ಮುಂದೂಡಿದೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ (Siddaramaiah) ನೈರುತ್ಯ ರೈಲ್ವೆ ಇಲಾಖೆ ನಡೆಯನ್ನು ಖಂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮಧ್ಯೆಪ್ರವೇಶಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ, ನೈರುತ್ಯ ರೈಲ್ವೆ ಇಲಾಖೆಯ 194 ಗೂಡ್ಸ್‌ ರೈಲು ಮ್ಯಾನೇಜರ್‌ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಎಲ್‌ಡಿಸಿಇ 101 ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂಬಂಧ ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳ ಭಾರೀ ವಿರೋಧದ ತರುವಾಯ ರೈಲ್ವೆ ಇಲಾಖೆಯೂ ದಿಢೀರನೇ ರದ್ದುಪಡಿಸಿ ಕನ್ನಡಿಗ ಉದ್ಯೋಗಿಗಳನ್ನು ಅತಂತ್ರ ಪರಿಸ್ಥಿತಿಗೆ ತಳ್ಳಿದೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​​

ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಬಗ್ಗೆ ಈ ಮೊದಲೇ ಸಾವಿರಾರು ಕನ್ನಡಿಗ ಉದ್ಯೋಗಿಗಳು ಧ್ವನಿಯೆತ್ತಿದ್ದರು. ಶಾಂತ ರೀತಿಯ ಪ್ರತಿಭಟನೆಯನ್ನು, ಪ್ರತಿರೋಧವನ್ನು ನಿರ್ಲಕ್ಷಿಸುತ್ತಾ ಬಂದ ರೈಲ್ವೆ ಇಲಾಖೆ ಪರೀಕ್ಷೆ ಆರಂಭವಾಗುವ ಕೊನೆ ಕ್ಷಣದಲ್ಲಿ ರದ್ದುಮಾಡಿರುವುದು ಈಗಿನ ಗೊಂದಲಕ್ಕೆ ಕಾರಣವಾಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಮತ್ತೊಮ್ಮೆ ಕನ್ನಡಕ್ಕೆ ಮಲತಾಯಿ ಧೋರಣೆ: ಸಿಡಿದೆದ್ದ ಕರವೇ

ಪ್ರಾರಂಭದಲ್ಲಿಯೇ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡು ತನ್ನ ತಪ್ಪನ್ನು ತಿದ್ದಿಕೊಂಡು ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿದ್ದರೆ ಈಗಿನ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಆ ಪ್ರಯತ್ನವನ್ನೇ ಮಾಡದೆ, ಕನ್ನಡಿರನ್ನು ತಾತ್ಸಾರ ಭಾವನೆಯಿಂದ ಕಂಡು, ಪ್ರತಿಭಟನೆಯ ಕಾವು ಹೆಚ್ಚಾದ ಕೂಡಲೇ ತರಾತುರಿಯಲ್ಲಿ ಪರೀಕ್ಷೆ ರದ್ದುಪಡಿಸುವ ನಿರ್ಧಾರಕ್ಕೆ ಬಂದಿರುವುದು ಖಂಡನೀಯ.

ಕನ್ನಡ,‌ ಕರ್ನಾಟಕ ಮತ್ತು ಕನ್ನಡಿಗರಿಗೆ ಅನ್ಯಾಯ

ಕನ್ನಡಿಗರಿಗೆ ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಅನ್ಯಾಯವಾಗುತ್ತಿರುವುದು ಇದು ಮೊದಲ ಬಾರಿ ಅಲ್ಲ ಬಹುಷಃ ಕೊನೆಯದ್ದೂ ಅಲ್ಲ. ಕೇಂದ್ರದ ವಿವಿಧ ಇಲಾಖೆಗಳ ಉದ್ಯೋಗ ಭರ್ತಿಯಲ್ಲಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಕುಟಿಲತನದಿಂದಾಗಿ ಕನ್ನಡಿಗ ಉದ್ಯೋಗಾಕಾಂಕ್ಷಿಗಳು ಮೊದಲಿಂದಲೂ ಅನ್ಯಾಯಕ್ಕೆ ತುತ್ತಾಗುತ್ತಾ ಬಂದಿದ್ದಾರೆ. ಇದರ ವಿರುದ್ಧ ಕನ್ನಡಿಗರು ನ್ಯಾಯಕ್ಕಾಗಿ ಧ್ವನಿಯೆತ್ತುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಕನ್ನಡಿಗರಾದ ವಿ.ಸೋಮಣ್ಣನವರು ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿರುವಾಗಲೇ ರೈಲ್ವೆ ಇಲಾಖೆ ಕನ್ನಡ ವಿರೋಧಿ ನಿಲುವು ತಳೆದು ಕನ್ನಡ,‌ ಕರ್ನಾಟಕ ಮತ್ತು ಕನ್ನಡಿಗರಿಗೆ ಅನ್ಯಾಯ ಮಾಡಿರುವುದು ಅತ್ಯಂತ ದುರದೃಷ್ಟಕರ ಎಂದು ವಾಗ್ದಾಳಿ ಮಾಡಿದ್ದಾರೆ.

ಸೋಮಣ್ಣನವರು ಕನ್ನಡಿಗರ ಪರವಾಗಿ ನಿಂತು ಅನ್ಯಾಯವನ್ನು ಸರಿಪಡಿಸುತ್ತಾರೆ ಎಂಬ ಭರವಸೆಯನ್ನು ನಾನೂ ಇಟ್ಟುಕೊಂಡಿದ್ದೆ, ಆ ನಂಬಿಕೆ ಹುಸಿಯಾಗಿದೆ. ಸೋಮಣ್ಣನವರು ಮಾತನಾಡಲು ಶುರು ಮಾಡಿದರೆ ರೈಲ್ವೆ ಇಲಾಖೆ ಇರುವುದೇ ಕರ್ನಾಟಕಕ್ಕಾಗಿ ಎನ್ನುವಂತೆ ಮಾತಿನ ಅರಮನೆ ಕಟ್ಟುತ್ತಾರೆ. ಅವರು ಮಾತು ಸ್ವಲ್ಪ ಕಡಿಮೆಮಾಡಿ ಕರ್ನಾಟಕಕ್ಕಾಗಿ‌ ಮಾಡಬೇಕಾದ ಕೆಲಸವನ್ನು ನಿಷ್ಠೆಯಿಂದ ಮಾಡಲು ಮುಂದಾಗಬೇಕು.

ಇದನ್ನೂ ಓದಿ: ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಗೂಡ್ಸ್ ಮ್ಯಾನೇಜರ್ ಎಲ್‌ಡಿಸಿ ಹುದ್ದೆಗಳ ಮುಂಬಡ್ತಿ ಪರೀಕ್ಷೆ ಮುಂದೂಡಿಕೆ

ಕೇಂದ್ರ ಸರ್ಕಾರಕ್ಕೆ ಹಿಂದಿ ಭಾಷೆ ಮೇಲೆ ಇರುವ ಪ್ರೀತಿ ಮತ್ತು ಕನ್ನಡವೂ ಸೇರಿದಂತೆ ರಾಜ್ಯಭಾಷೆಗಳ ಮೇಲೆ ಇರುವ ತಾತ್ಸಾರ ಮನೋಭಾವದ ದುಷ್ಪರಿಣಾಮವನ್ನು ಕನ್ನಡಿಗರು ಈಗಾಗಲೇ ಅನುಭವಿಸಿದ್ದಾರೆ. ಉತ್ತರ ಭಾರತದ ಹಿಂದಿ ಭಾಷಿಗರಿಗೆ ನೆರವಾಗಬೇಕೆಂಬ ಏಕೈಕ ಉದ್ದೇಶದಿಂದ ಕೇಂದ್ರದ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್‌ ಗೆ ಮಾತ್ರ ಅವಕಾಶ ನೀಡುವ ಕೇಂದ್ರದ ಭಾಷಾ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ರಾಜ್ಯಗಳ ಒಕ್ಕೂಟ, ಈ ರಾಜ್ಯಗಳು ಭಾಷೆಗಳ ಆಧಾರದಲ್ಲಿಯೇ ರಚನೆಯಾಗಿರುವುದನ್ನು ಮರೆಯಬಾರದು. ನಾವು ಹಿಂದಿಯನ್ನು ಭಾಷೆಯಾಗಿ ವಿರೋಧಿಸುವುದಿಲ್ಲ, ಹಿಂದಿಯನ್ನು ಕನ್ನಡದ ಮೇಲೆ ಹೇರುವುದನ್ನು ಮಾತ್ರ ಖಂಡಿತ ಸಹಿಸುವುದಿಲ್ಲ. ಆಳುವ ಪಕ್ಷದ ಸಂಸದರು ಪಕ್ಷದ ಮುಲಾಜಿಗೆ ಬಿದ್ದು ಕನ್ನಡಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತದೆ ಬಾಯಿ ಮುಚ್ಚಿಕೊಂಡಿರಬಹುದು, ಆದರೆ ಕನ್ನಡಿಗರು ಜಾಗೃತರಾಗಿದ್ದಾರೆ.

ಕನ್ನಡಿಗರು ಉದ್ಯೋಗಕ್ಕಾಗಿ, ಬಡ್ತಿಗಾಗಿ ಕೇಂದ್ರದ ಮುಂದೆ ಭಿಕ್ಷೆಗೆ ನಿಂತಿಲ್ಲ

ಕನ್ನಡಿಗರು ಉದ್ಯೋಗಕ್ಕಾಗಿ, ಬಡ್ತಿಗಾಗಿ ಕೇಂದ್ರದ ಮುಂದೆ ಭಿಕ್ಷೆಗೆ ನಿಂತಿಲ್ಲ, ತಾವು ಶಿಕ್ಷಣ ಪಡೆದ ಭಾಷೆಯಲ್ಲೇ ತಮ್ಮ ಹಕ್ಕಿನ ಉದ್ಯೋಗ ಬಡ್ತಿಯನ್ನು ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಭಾಷಿಗರಿಗೆ ಭಾಷೆಯ ಹೆಸರಲ್ಲಿ ಅನ್ಯಾಯವಾಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರೇ ಮಧ್ಯೆಪ್ರವೇಶಿಸಿ ಸಂಬಂಧಿತ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ರದ್ದುಪಡಿಸಲಾದ ರೈಲ್ವೆ ಇಲಾಖೆಯ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ಕಲ್ಪಿಸಿ ಶೀಘ್ರದಲ್ಲಿಯೇ ನಡೆಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:40 pm, Tue, 17 March 26

Follow Us
ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ
ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ
‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು
‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು
ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿಗೆ ಫ್ರೀ ಹೆಲ್ತ್ ಚೆಕಪ್
ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿಗೆ ಫ್ರೀ ಹೆಲ್ತ್ ಚೆಕಪ್
ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!
ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!
ಬಸವಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಕೈ ಶಾಸಕ ಸ್ಫೋಟಕ ಹೇಳಿಕೆ
ಬಸವಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಕೈ ಶಾಸಕ ಸ್ಫೋಟಕ ಹೇಳಿಕೆ
ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಕೆಶಿ ಕೌಂಟರ್​​
ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಕೆಶಿ ಕೌಂಟರ್​​
ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು
ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ!
ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ!