ರೈಲ್ವೆ ಇಲಾಖೆಯಿಂದ ಮತ್ತೊಮ್ಮೆ ಕನ್ನಡಕ್ಕೆ ಮಲತಾಯಿ ಧೋರಣೆ: ಸಿಡಿದೆದ್ದ ಕರವೇ
ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ನಿರಂತರ ಭಾಷಾ ತಾರತಮ್ಯ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಹಿಂದಿ, ಇಂಗ್ಲಿಷ್ಗೆ ಮಾತ್ರ ಆದ್ಯತೆ ನೀಡಿದ್ದನ್ನು ಕರ್ನಾಟಕ ರಕ್ಷಣಾ ವೇದಿಕೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿತು. ಹೋರಾಟದ ಫಲವಾಗಿ ಪರೀಕ್ಷೆಯನ್ನು ಮುಂದೂಡಲಾಗಿದೆ.

ಹುಬ್ಬಳ್ಳಿ, ಮಾರ್ಚ್ 17: ರೈಲ್ವೆ ಪರೀಕ್ಷೆಗಳಲ್ಲಿ (Railway Exam) ಮೇಲಿಂದ ಮೇಲೆ ಕನ್ನಡಿಗರಿಗೆ ಅನ್ಯಾಯವಾಗುತ್ತಲೇ ಇದೆ. ಈ ಹಿಂದೆ ಅನೇಕ ರೈಲ್ವೆ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡುವಂತೆ ಹೋರಾಟ ಮಾಡಿ ಅವಕಾಶ ಪಡೆಯಲಾಗಿತ್ತು. ಇದೀಗ ರೈಲ್ವೆ ಇಲಾಖೆಯ ಪದೋನ್ನತಿ ಪರೀಕ್ಷೆಯಲ್ಲಿ ಕೂಡ ಕನ್ನಡಕ್ಕೆ ಮಲತಾಯಿ ಧೋರಣೆ ಮಾಡಲಾಗಿದೆ. ಕೇವಲ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಇದನ್ನು ಖಂಡಿಸಿ ಇಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸಂಘಟನೆ ರೈಲ್ವೆ ನೇಮಕಾತಿ ಕಚೇರಿಗೆ ಮುತ್ತಿಗೆ ಹಾಕಿತ್ತು. ಹೋರಾಟಕ್ಕೆ ಮಣಿದ ಇಲಾಖೆ, ಪರೀಕ್ಷೆಯನ್ನು ಮುಂದೂಡಿದೆ.
ರೈಲ್ವೆ ಇಲಾಖೆ ಕನ್ನಡಿಗರನ್ನು ತಾತ್ಸಾರದಿಂದ ನೋಡುತ್ತಿರುವು ಮುಂದುವರಿಸಿದೆ. ಈ ಹಿಂದೆ ನಡೆದ ಅನೇಕ ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಡೆಸಿ ಕನ್ನಡಿಗರ ಕೆಂಗಣ್ಣಿಗೆ ಇಲಾಖೆ ಗುರಿಯಾಗಿತ್ತು. ಹೀಗಾಗಿ ರೈಲ್ವೆ ಇಲಾಖೆ ವಿರುದ್ಧ ಅನೇಕ ಹೋರಾಟಗಳು ನಡೆದಿದ್ದವು. ಹೋರಾಟಕ್ಕೆ ಮಣಿದು ವಿವಿಧ ನೇಮಕಾತಿಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ನೈರುತ್ಯ ರೈಲ್ವೆ ವಿಭಾಗದಲ್ಲಿ ಈಗಾಗಲೇ ಕೆಲಸ ಮಾಡ್ತಿರುವ ಗ್ರೂಪ್ ಡಿ ಮತ್ತು ಸಿ ದರ್ಜೆಯ ನೌಕರರಿಗೆ ಮುಂಬಡ್ತಿ ನೀಡಲು ಇಲಾಖಾವಾರು ಪರೀಕ್ಷೆಗಳನ್ನು ರೈಲ್ವೆ ನೇಮಕಾತಿ ಕೋಶ ಇಂದು ನಿಗದಿ ಮಾಡಿತ್ತು.
ಇದನ್ನೂ ಓದಿ: ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಗೂಡ್ಸ್ ಮ್ಯಾನೇಜರ್ ಎಲ್‌ಡಿಸಿ ಹುದ್ದೆಗಳ ಮುಂಬಡ್ತಿ ಪರೀಕ್ಷೆ ಮುಂದೂಡಿಕೆ
ಹುಬ್ಬಳ್ಳಿಯ ರೈಲ್ವೆ ನೇಮಕಾತಿ ಕೋಶದ ಕಚೇರಿಯಲ್ಲಿ ಕಂಪ್ಯೂಟರ್ ಮೂಲಕ ಪರೀಕ್ಷೆಗೆ ತಯಾರಿ ನಡೆದಿತ್ತು. ಅನೇಕರು ಪರೀಕ್ಷಾ ಕೇಂದ್ರಕ್ಕೆ ಕೂಡ ಆಗಮಿಸಿದ್ದರು. ಆದರೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡಿರಲಿಲ್ಲ. ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಇಂದು ಹುಬ್ಬಳ್ಳಿಯಲ್ಲಿರುವ ರೈಲ್ವೆ ನೇಮಕಾತಿ ಕೋಶದ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದರು.
ರೈಲ್ವೆ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಸಲು ಅವಕಾಶ ನೀಡಲ್ಲ. ಪದೋನ್ನತಿ ಪರೀಕ್ಷೆಯನ್ನು ಮುಂದೂಡಬೇಕು. ಅದನ್ನು ಕನ್ನಡದಲ್ಲಿಯೇ ನಡೆಸಬೇಕು ಅಂತ ಕರವೇ ಹೋರಾಟಗಾರ ಹನುಮಂತಪ್ಪ ಅಬ್ಬಿಗೇರಿ ಆಗ್ರಹಿಸಿದರು.
ಪರೀಕ್ಷೆ ಮಂದೂಡಿಕೆ
ಬೇರೆ ಬೇರೆ ಕಡೆಗಳಿಂದ ಬಂದಿದ್ದ ನೂರಾರು ಅಭ್ಯರ್ಥಿಗಳ ಪೈಕಿ ಕೆಲವರು ಪರೀಕ್ಷಾ ಕೇಂದ್ರದೊಳಗೆ ಹೋದರೆ ಕೆಲವರು ಪರೀಕ್ಷಾ ಕೇಂದ್ರದ ಹೊರಗೆ ನಿಂತಿದ್ದರು. ಕೆಲಹೊತ್ತು ಪರೀಕ್ಷಾ ಕೇಂದ್ರದ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಆರ್ಪಿಎಫ್ ಪೊಲೀಸರ ಮತ್ತು ನಗರದ ವಿವಿಧ ಠಾಣೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕಚೇರಿಯ ಪ್ರವೇಶ ದ್ವಾರದ ಮುಂದೆಯೇ ಹೋರಾಟ ಮಾಡುತ್ತಿದ್ದ ಕರವೇ ಕಾರ್ಯಕರ್ತರು, ತಮ್ಮ ಪಟ್ಟು ಸಡಿಲಿಸದೇ ಇದ್ದಿದ್ದರಿಂದ, ನೇಮಕಾತಿ ಕೋಶದ ಅಧಿಕಾರಿಗಳು ಮೇಲಾಧಿಕಾರಿಗಳ ಜೊತೆ ಮಾತನಾಡಿ, ಪರೀಕ್ಷೆಯನ್ನು ಮಂದೂಡಿಕೆ ಮಾಡಿರುವುದಾಗಿ ಘೋಷಣೆ ಮಾಡಿದರು. ಅಲ್ಲದೇ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಅಭ್ಯರ್ಥಿಗಳನ್ನು ಮರಳಿ ಕಳುಹಿಸಿದರು. ಇಂದಿನ ಪರೀಕ್ಷೆ ಮುಂದೂಡಿದ್ದೇವೆ ಅಂತ ಅಭ್ಯರ್ಥಿಗಳಿಗೆ ಕೂಡ ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡದಲ್ಲಿ ರೆಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ: ರೊಚ್ಚಿಗೆದ್ದ ಕನ್ನಡಪರ ಹೋರಾಟಗಾರರು
ಸದ್ಯ ರೈಲ್ವೆ ಇಲಾಖೆ, ಪದೋನ್ನತಿ ಪರೀಕ್ಷೆಯನ್ನು ಮುಂದೂಡಿದೆ. ಮುಂದಿನ ಪರೀಕ್ಷಾ ದಿನಾಂಕವನ್ನು ತಿಳಿಸೋದಾಗಿ ಅಭ್ಯರ್ಥಿಗಳಿಗೆ ಹೇಳಿದೆ. ಆದರೆ ಮುಂದೂಡಿಕೆ ಆಗಿರುವ ಪರೀಕ್ಷೆಯನ್ನು ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿಯೇ ಬರೆಯಲು ತೀರ್ಮಾನವನ್ನು ಆದಷ್ಟು ಬೇಗನೆ ಮೇಲಾಧಿಕಾರಿಗಳು ಕೈಗೊಳ್ಳಬೇಕಿದೆ. ಜೊತೆಗೆ ಮುಂದೆ ಈ ರೀತಿಯ ಭಾಷಾ ತಾರತಮ್ಯವಾಗದಂತೆ ರೈಲ್ವೆ ಇಲಾಖೆ ಕಟ್ಟೆಚ್ಚರ ವಹಿಸಬೇಕಿದೆ.
ರೈಲ್ವೆ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಕೇಂದ್ರ ಸರ್ಕಾರವನ್ನ ಒತ್ತಾಯಿಸಲು ಆಗ್ರಹ
ಕನ್ನಡ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ರೈಲ್ವೆ ಪರೀಕ್ಷೆಗಳನ್ನು ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ರಾಜ್ಯದ ಸಂಸದರಿಗೆ ಮನವಿ ಮಾಡಿದ್ದಾರೆ. ಈ ಕುರಿತಂತೆ ಪತ್ರವನ್ನು ಬರೆದಿದ್ದು, ಪ್ರಸ್ತುತ ರೈಲ್ವೆ ನೇಮಕಾತಿ ಹಾಗೂ ಪದೋನ್ನತಿ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿ ಲಭ್ಯವಿಲ್ಲ. ಕನ್ನಡ ಭಾಷಾಭಿಮಾನಿಗಳಲ್ಲಿ ಹಾಗೂ ಅಭ್ಯರ್ಥಿಗಳಲ್ಲಿ ತೀವ್ರ ಅಸಮಾಧಾನವನ್ನು ಉಂಟು ಮಾಡಿದೆ. ರಾಜ್ಯ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶವು ಅಭ್ಯರ್ಥಿಗಳ ಮೂಲಭೂತ ಸಾಂವಿಧಾನಿಕ ಹಕ್ಕು. ಇದು ಸಮಾನ ಅವಕಾಶಗಳ ಸಿದ್ಧಾಂತಕ್ಕೆ ಅನುಗುಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:57 pm, Tue, 17 March 26