AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದಲ್ಲಿ ರೇಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ: ರೊಚ್ಚಿಗೆದ್ದ ಕನ್ನಡಪರ ಹೋರಾಟಗಾರರು

ಕನ್ನಡದಲ್ಲಿ ರೇಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ: ರೊಚ್ಚಿಗೆದ್ದ ಕನ್ನಡಪರ ಹೋರಾಟಗಾರರು

ಸಂಜಯ್ಯಾ ಚಿಕ್ಕಮಠ
| Edited By: |

Updated on:Mar 17, 2026 | 11:37 AM

Share

ರೇಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದಾರೆ. ಗೂಡ್ಸ್ ರೈಲ್ವೆ ಮ್ಯಾನೇಜರ್ ಮತ್ತು LDCE ಹುದ್ದೆಗಳ ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಮಾತ್ರ ನಡೆಸುತ್ತಿದ್ದು, ಇದು ಕನ್ನಡಿಗರಿಗೆ ಅನ್ಯಾಯ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.

ಹುಬ್ಬಳ್ಳಿ, ಮಾ.17: ರೇಲ್ವೆ ಇಲಾಖೆಯು ನಡೆಸುವ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದಿರುವ ಕುರಿತು ತೀವ್ರ ವಿರೋಧ ವ್ಯಕ್ತವಾಗಿದೆ. ಗೂಡ್ಸ್ ರೈಲ್ವೆ ಮ್ಯಾನೇಜರ್ ಹಾಗೂ LDCE ಹುದ್ದೆಗಳಿಗೆ ನಡೆಯುವ ಮುಂಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶವಿಲ್ಲದ ಕಾರಣ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ಖಂಡಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಬರೆಯಲು ಅವಕಾಶವಿರುವುದು ಸ್ಥಳೀಯ ಭಾಷಿಕರಾದ ಕನ್ನಡಿಗರಿಗೆ ದೊಡ್ಡ ಅಡ್ಡಿಯಾಗಿದೆ ಎಂದು ಕಾರ್ಯಕರ್ತರು ದೂರಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಸಮರ ಸಿಂಹ ಟಿ.ಎ. ನಾರಾಯಣ್ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರದ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕಾರ್ಯಕರ್ತರು, ಕನ್ನಡವನ್ನು ಕಡ್ಡಾಯವಾಗಿ ಪರೀಕ್ಷಾ ಮಾಧ್ಯಮಗಳಲ್ಲಿ ಸೇರಿಸುವಂತೆ ಒತ್ತಾಯಿಸಿದರು. ಕನ್ನಡಿಗರ ಹಿತಾಸಕ್ತಿಗಳನ್ನು ರಕ್ಷಿಸಲು ರೇಲ್ವೆ ಇಲಾಖೆಯು ತನ್ನ ನೀತಿಯನ್ನು ಪರಿಷ್ಕರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ರಣಕಹಳೆಗೆ ದೊಡ್ಡ ಯಶಸ್ಸು ಸಿಕ್ಕಿದೆ. ಕರವೇ ಕಾರ್ಯಕರ್ತರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ರೈಲ್ವೆ ಇಲಾಖೆಯು ಇಂದು ನಡೆಯಬೇಕಿದ್ದ ಪದೋನ್ನತಿ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಗೂಡ್ಸ್ ರೈಲ್ವೆ ಮ್ಯಾನೇಜರ್ ಹಾಗೂ LDCE ಹುದ್ದೆಗಳ ಮುಂಬಡ್ತಿಗಾಗಿ ಇಂದು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ ಪ್ರತಿಭಟನೆಯ ತೀವ್ರತೆಗೆ ಹೆದರಿದ ಅಧಿಕಾರಿಗಳು ಪರೀಕ್ಷೆಯನ್ನು ಮುಂದೂಡಿ, ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಅಭ್ಯರ್ಥಿಗಳನ್ನು ವಾಪಸ್ ಕಳುಹಿಸಿದ್ದಾರೆ. ಹುಬ್ಬಳ್ಳಿಯ ರೈಲ್ವೆ ವಿಭಾಗೀಯ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ, ಕನ್ನಡಿಗರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ-ನೂಕಾಟವೂ ನಡೆಯಿತು.ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವ ಕುರಿತು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 17, 2026 11:34 AM
Follow Us