ಕೊಪ್ಪಳ: ಶ್ರಿಕೃಷ್ಣದೇವರಾಯರ ಸಮಾಧಿಯ ಮೇಲೆ ಮಾಂಸ ಶುದ್ಧೀಕರಣ, ಯತ್ನಾಳ್ ಕಿಡಿ
ಶ್ರೀ ಕೃಷ್ಣದೇವರಾಯರ ಸಮಾಧಿಯ ಮೇಲೆ ಮಾಂಸ ಸ್ವಚ್ಛಗೊಳಿಸುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯನ್ನು ಯತ್ನಾಳ್ ಖಂಡಿಸಿದ್ದು, ಸಮಾಧಿಯ ದುಸ್ಥಿತಿಯನ್ನು ಪ್ರಶ್ನಿಸಿದ್ದಾರೆ. ಔರಂಗಜೇಬನ ಸಮಾಧಿಗೆ ರಕ್ಷಣೆ ಇದ್ದರೂ, ಕೃಷ್ಣದೇವರಾಯರ ಸಮಾಧಿ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಕೊಪ್ಪಳ, ಏಪ್ರಿಲ್ 21: ಗಂಗಾವತಿ (Gangavati) ತಾಲೂಕಿನ ಆನೆಗೊಂದಿ (Anegundi) ಬಳಿಯ ತುಂಗಭದ್ರಾ ನದಿಯ (Tungabhadra River) ದಡದಲ್ಲಿರೋ ವಿಜಯನಗರ ಸಾಮ್ರಾಜ್ಯದ (Vijayanagar Empire) ಶ್ರೇಷ್ಠ ಅರಸ ಶ್ರಿಕೃಷ್ಣದೇವರಾಯ (Sri Krishnadevaraya) ಅವರ ಸಮಾಧಿಯ ಮೇಲೆ ಮಾಂಸ ಶುದ್ಧೀಕರಣ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕೃಷ್ಣದೇವರಾಯ ಅವರ ಸಮಾಧಿ ಅಕ್ಷರಶಃ ಮಾಂಸದ ಅಂಗಡಿಯಾಗಿದೆ. 64 ಕಂಬಗಳನ್ನು ಒಳಗೊಂಡಿರುವ ಕೃಷ್ಣದೇವರಾಯ ಅವರ ಸಮಾಧಿ ಮಂಟಪದ ಒಂದು ಕಂಬಕ್ಕೆ ದುಷ್ಕರ್ಮಿಗಳು ಮೇಕೆ ಕಟ್ಟಿ ಮಾಂಸ ಸ್ವಚ್ಛ ಮಾಡಿದ್ದಾರೆ. ದುಷ್ಕರ್ಮಿಗಳು ಮಾಂಸ ಸ್ವಚ್ಛ ಮಾಡುತ್ತಿದ್ದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಗೆ ಯತ್ನಾಳ್ ಕಿಡಿ
ಈ ಘಟನೆಯನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಖಂಡಿಸಿದ್ದಾರೆ. “ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಆಡಳಿತಗಾರರಾಗಿದ್ದ ವಿಜಯನಗರದ ಶ್ರೀ ಕೃಷ್ಣದೇವರಾಯರ ಸಮಾಧಿಯ ದುಸ್ಥಿತಿ ಇದು. ಈ ಜಾಗವನ್ನು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಕೆಲ ಸ್ಥಳೀಯರು ಪರಿವರ್ತಿಸಿರುವುದು ಕನ್ನಡ ನಾಡಿನ ಹೆಮ್ಮೆಯ ಅರಸರಾದ ಅಸಾಮಾನ್ಯ ಆಡಳಿತಗಾರ, ಅಪ್ರತಿಮ ದಂಡನಾಯಕ ಶ್ರೀ ಕೃಷ್ಣದೇವರಾಯರಿಗೆ ಮಾಡಿದ ಅವಮಾನ” ಎಂದಿದ್ದಾರೆ.
“ಹಿಂದೂ ದೇವಾಲಯಗಳನ್ನು ಕೆಡವಿ, ದೇಶದ ಸಂಪತ್ತನ್ನು ದೋಚಿ, ಸಾವಿರಾರು ಹಿಂದೂಗಳನ್ನು ಅಮಾನವೀಯಗಿ ಕೊಂದ ಔರಂಗಜೇಬನ ಸಮಾಧಿಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ [ASI] ತೆರಿಗೆದಾರರ ಹಣದಿಂದ ಸಂರಕ್ಷಣೆ ಮಾಡುತ್ತಿದೆ; ಆದರೆ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಪರಾಕ್ರಮಿ; ಕಲೆ,ಸಾಹಿತ್ಯ ರಂಗಗಳ ಪೋಷಕ ಶ್ರೀ ಕೃಷ್ಣದೇವರಾಯರ ಸಮಾಧಿಗೆ ಏಕೆ ಈ ರೀತಿಯಾದ ದಿವ್ಯ ನಿರ್ಲಕ್ಷ್ಯ?” ಎಂದು ಪ್ರಶ್ನಿಸಿದ್ದಾರೆ.
ಟ್ವಿಟರ್ ಪೋಸ್ಟ್
ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಆಡಳಿತಗಾರರಾಗಿದ್ದ ವಿಜಯನಗರದ ಶ್ರೀ ಕೃಷ್ಣದೇವರಾಯರ ಸಮಾಧಿಯ ದುಸ್ಥಿತಿ ಇದು. ಈ ಜಾಗವನ್ನು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಕೆಲ ಸ್ಥಳೀಯರು ಪರಿವರ್ತಿಸಿರುವುದು ಕನ್ನಡ ನಾಡಿನ ಹೆಮ್ಮೆಯ ಅರಸರಾದ ಅಸಾಮಾನ್ಯ ಆಡಳಿತಗಾರ, ಅಪ್ರತಿಮ ದಂಡನಾಯಕ ಶ್ರೀ ಕೃಷ್ಣದೇವರಾಯರಿಗೆ ಮಾಡಿದ ಅವಮಾನ.
ಹಿಂದೂ ದೇವಾಲಯಗಳನ್ನು… https://t.co/PhBUoXxjPn
— Basanagouda R Patil (Yatnal) (@BasanagoudaBJP) April 21, 2025
ಇದನ್ನೂ ಓದಿ: ತುಂಗಭದ್ರಾ ಡ್ಯಾಂನಲ್ಲಿ ಮತ್ತೊಂದು ಸಮಸ್ಯೆ: ಶೀಘ್ರ ಕ್ರಮಕ್ಕೆ ರೈತರ ಆಗ್ರಹ
“ಇದು ಕನ್ನಡಿಗರಿಗಷ್ಟೇ ಅಲ್ಲ ರಾಷ್ಟ್ರಕ್ಕೆ ಮಾಡಿದ ಅವಮಾನ, ಮಾಂಸವನ್ನು ಮಾರುತ್ತ ಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿರುವ ಇಂತವರನ್ನು ಜಿಲ್ಲಾಡಳಿತ ಕೂಡಲೇ ಜಾಗ ಖಾಲಿ ಮಾಡಲು ಸೂಚಿಸಬೇಕು ಹಾಗೂ ಇಲ್ಲಿ ನೈರ್ಮಲ್ಯ ಮತ್ತು ಸಮಾಧಿಯ ಪಾವಿತ್ರ್ಯತೆಯನ್ನು ಕಾಪಾಡುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಲಿ” ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Mon, 21 April 25