ಕನ್ನಡಿಗನಿಗೆ ಹಿಗ್ಗಾಮುಗ್ಗಾ ಥಳಿತ: ಸಿಸಿಟಿವಿಯಲ್ಲಿ ಬಯಲಾಯ್ತು ವಿಂಗ್ ಕಮಾಂಡರ್ ನವರಂಗಿ ಆಟ
ಬೆಂಗಳೂರಿನಲ್ಲಿ ವಿಂಗ್ ಕಮಾಂಡರ್ ಬೋಸ್ ಮತ್ತು ಟೆಕ್ಕಿ ವಿಕಾಸ್ ಕುಮಾರ್ ನಡುವೆ ನಡೆದ ಹಲ್ಲೆಯ ಪ್ರಕರಣಕ್ಕೆ ಸಿಸಿಟಿವಿ ದೃಶ್ಯಗಳು ಟ್ವಿಸ್ಟ್ ನೀಡಿವೆ. ಆರಂಭದಲ್ಲಿ ಅಧಿಕಾರಿ ಮೇಲೆ ಹಲ್ಲೆ ಎಂದು ದೂರು ದಾಖಲಾಗಿತ್ತು. ಆದರೆ, ಸಿಸಿಟಿವಿ ಫೂಟೇಜ್ ಅಧಿಕಾರಿಯೇ ಟೆಕ್ಕಿ ಮೇಲೆ ಹಲ್ಲೆ ಮಾಡಿರುವುದನ್ನು ತೋರಿಸಿದೆ. ಭಾಷಾ ವಿವಾದ ಎಂದು ಹೇಳಲಾಗುತ್ತಿದ್ದರೂ, ಸತ್ಯಾಂಶ ಬೇರೆ ಇದೆ ಎಂದು ಸಿಸಿಟಿವಿ ಬಹಿರಂಗಪಡಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು, ಏಪ್ರಿಲ್ 21: ಬೆಂಗಳೂರಿನಲ್ಲಿ (Bengaluru) ವಿಂಗ್ ಕಮಾಂಡರ್ (Wing Commander) ಬೋಸ್ ಅವರಿಗೆ ಯುವಕನೋರ್ವ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸದ್ಯ ಟ್ವಿಸ್ಟ್ ಸಿಕ್ಕಿದೆ. ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ಘಟನೆ ನಡೆದಿದ್ದು, ಇಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ವಿಂಗ್ ಕಮಾಂಡರ್ ಬೋಸ್ ಅವರು ಬೈಕ್ ಸವಾರ, ಟೆಕ್ಕಿ ವಿಕಾಸ್ ಕುಮಾರ್ ಎಂಬುವರ ಮೇಲೆ ಹಲ್ಲೆ ಮಾಡಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಹಲ್ಲೆ ನಡೆದ ಬಳಿಕ ಬೋಸ್ ಅವರು ಸಂದರ್ಭವನ್ನು ತಿರುಚಲು ಯತ್ನಿಸಿದ್ದಾರೆ. ಭಾಷೆ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ವಿಂಗ್ ಕಮಾಂಡರ್ ವಿಡಿಯೋದಲ್ಲಿ ಹೇಳಿದ್ದಾರೆ. ಟೆಕ್ಕಿ ವಿಕಾಸ್ ಕುಮಾರ್ ಮತ್ತು ಬೋಸ್ ನಡುವೆ ಗಲಾಟೆ ನಡೆಯುತ್ತಿರುವ ವೇಳೆ, ಸ್ಥಳೀಯರು ಗಲಾಟೆ ಬಿಡಿಸಲು ಪ್ರಯತ್ನ ಪಟ್ಟರು. ಆದರೂ, ಕೂಡ ವಿಂಗ್ ಕಮಾಂಡರ್ ಬೋಸ್ ಬಿಡದೆ ಟೆಕ್ಕಿ ವಿಕಾಸ್ ಕುಮಾರ್ ಮೇಲೆ ಹಲ್ಲೆ ಮಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಬೈಯಪ್ಪನಹಳ್ಳಿ ಪೋಲಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಏನಿದು ಪ್ರಕರಣ
ವಿಂಗ್ ಕಮಾಂಡರ್ ಬೋಸ್ ಮತ್ತು ಅವರ ಪತ್ನಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ, ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ಬೋಸ್ ಅವರ ಕಾರಿಗೆ ಬೈಕ್ ಸವಾರ, ಟೆಕ್ಕಿ ವಿಕಾಸ್ ಕುಮಾರ್ ಅವರ ಬೈಕ್ ಟಚ್ ಆಗಿದೆ. ಈ ವಿಚಾರಕ್ಕೆ ಟೆಕ್ಕಿ ವಿಕಾಸ್ ಕುಮಾರ್ ಮತ್ತು ವಿಂಗ್ ಕಮಾಂಡರ್ ಬೋಸ್ ನಡುವೆ ಗಲಾಟೆಯಾಗಿ ಪರಸ್ಪರ ಹೊಡದಾಡಿದ್ದಾರೆ. ಭಾಷೆ ವಿಚಾರಕ್ಕೆ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ವಿಂಗ್ ಕಮಾಂಡರ್ ಬೋಸ್ ಅವರು ವಿಡಿಯೋ ಮಾಡಿದ್ದಾರೆ.
ವಿಂಗ್ ಕಮಾಂಡರ್ ಬೋಸ್ ಅವರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಟೆಕ್ಕಿ ವಿಕಾಸ್ ಕುಮಾರ್ ಅವರ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಿಕಾಸ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸಶಸ್ತ್ರ ಪಡೆಯ ಅಧಿಕಾರಿಗೆ ರಕ್ತ ಬರುವ ಹಾಗೆ ಹಲ್ಲೆ ಆರೋಪ: ವಿಡಿಯೋ ವೈರಲ್
ಘಟನೆ ಸಂಬಂಧ ಬೆಂಗಳೂರಿನ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಮಾತನಾಡಿ, ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿ ಬೆಳಗ್ಗೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ವಿಂಗ್ ಕಮಾಂಡರ್ ಬೋಸ್ ಹಾಗೂ ಅವರ ಪತ್ನಿ ವಾಯುಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರಿನಲ್ಲಿ ತೆರಳುವಾಗ ಅಡ್ಡಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆಯಾಗಿದೆ. ತನ್ನ ಬೈಕ್ ಕೀನಿಂದ ಬೋಸ್ ಮೇಲೆ ಸವಾರ ಹಲ್ಲೆ ನಡೆಸಿದ್ದಾನೆ. ವಿಂಗ್ ಕಮಾಂಡರ್ ಬೋಸ್ ಅವರ ತಲೆ, ಹಣೆ ಮೇಲೆ ಗಾಯಗಳಾಗಿವೆ. ಏರ್‌ಪೋರ್ಟ್‌ನ ಸಿಎಂಹೆಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರ ಪತ್ನಿ ದೂರಿನ ಮೇರೆಗೆ ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:36 pm, Mon, 21 April 25