ಓಂ ಪ್ರಕಾಶ್ ಕೊಲೆ: ಪತಿಯನ್ನು 8-10 ಬಾರಿ ಇರಿದು ಪತ್ನಿ ಹತ್ಯೆ ಮಾಡಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ
Karnataka Former DG And IGP OM Prakash Murder: ಕರ್ನಾಟಕದ ಮಾಜಿ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆಯಾಗಿದ್ದಾರೆ. ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನಿವಾಸದಲ್ಲಿ ಓಂ ಪ್ರಕಾಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಓಂ ಪ್ರಕಾಶ ಅವರನ್ನು ಅವರ ಪತ್ನಿ ಪಲ್ಲವಿಯವರೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು, ಏಪ್ರಿಲ್ 20: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (DG and IG Om Prakash) (68) ಅವರನ್ನು ಹತ್ಯೆ ಮಾಡಲಾಗಿದೆ. ಬೆಂಗಳೂರಿನ (Bengaluru) ಹೆಚ್ಎಸ್ಆರ್ ಲೇಔಟ್ ನಿವಾಸದಲ್ಲಿ ಓಂ ಪ್ರಕಾಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿಯವರೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಚಾಕುವಿನಿಂದ 8-10 ಬಾರಿ ಇರಿದು ಕೊಲೆ
ಪ್ರಾಥಮಿಕ ತನಿಖೆ ವೇಳೆ, ಪತಿ ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿಯವರು 8 ರಿಂದ10 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಚಾಕು ಇರಿತದಿಂದ ಓಂ ಪ್ರಕಾಶ್ ಅವರ ಎದೆ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಇನ್ನು, ಹೊಟ್ಟೆ ಭಾಗಕ್ಕೆ ಸುಮಾರು 4-5 ಬಾರಿ ಚಾಕುವಿನಿಂದ ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಮನೆಯ ಪಡಸಾಲೆ ತುಂಬ ರಕ್ತ ಹರಿದಿದೆ. ಓಂ ಪ್ರಕಾಶ್ ಅವರು ಸುಮಾರು 15-20 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಪತಿಯ ನರಳಾಟವನ್ನು ಪತ್ನಿ ಪಲ್ಲವಿ ನೋಡುತ್ತಾ ನಿಂತಿದ್ದರು ಎಂಬ ಮಾಹಿತಿ ದೊರೆತಿದೆ. ನಂತರ, ಪತ್ನಿ ಪಲ್ಲವಿಯವರು ಹೆಚ್ಎಸ್ಆರ್ ಲೇಔಟ್ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
‘I have Finished monster’ ಅಂತ ಕರೆ ಮಾಡಿದ್ದ ಪಲ್ಲವಿ
ಇನ್ನು, ಪತಿ ಓಂ ಪ್ರಕಾಶ್ ಮೃತಪಟ್ಟ ಬಳಿಕ, ಪತ್ನಿ ಪಲ್ಲವಿಯವರು ಮತ್ತೋರ್ವ ನಿವೃತ್ತ ಡಿಜಿ ಮತ್ತು ಐಜಿಪಿಯ ಪತ್ನಿಗೆ ವಿಡಿಯೋ ಕರೆ ಮಾಡಿ, ‘I have Finished monster’ ಅಂತ ಎಂದಿದ್ದರಂತೆ.
ಆಸ್ತಿ ವಿಚಾರಕ್ಕೆ ನಡಿತಾ ಕೊಲೆ?
ಇನ್ನು, ಓಂ ಪ್ರಕಾಶ್ ಅವರನ್ನು ಕೊಲೆ ಮಾಡಲು ಕಾರಣಗಳೇನು? ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ? ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಆಸ್ತಿ ವಿಚಾರಕ್ಕೆ ಕೊಲೆಯಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ದಾಂಡೇಲಿಯಲ್ಲಿ ಆಸ್ತಿ ಹೊಂದಿದ್ದರು ಎನ್ನಲಾಗಿದೆ.
ಈ ಆಸ್ತಿಯನ್ನು ಓಂ ಪ್ರಕಾಶ್ ಅವರು ತಮ್ಮ ತಂಗಿಯ ಹೆಸರಿಗೆ ಮಾಡಿದ್ದರು ಎಂದು ತಿಳಿದುಬಂದಿದೆ. ತಂಗಿ ಹೆಸರಿನಲ್ಲಿ ಆಸ್ತಿ ಮಾಡಿದ್ದಕ್ಕೆ ಹಲವು ದಿನಗಳಿಂದ ಓಂ ಪ್ರಕಾಶ್ ಮತ್ತು ಅವರ ಪತ್ನಿ ಪಲ್ಲವಿ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಇನ್ನು, ತಂಗಿ ವಿಚಾರವಾಗಿ ಮಾತನಾಡಬೇಡ ಅಂತ ಪತ್ನಿ ಪಲ್ಲವಿ ಅವರಿಗೆ ಓಂಪ್ರಕಾಶ್ ವಾರ್ನ್ ಮಾಡಿದ್ದರಂತೆ. ಈ ವಿಚಾರಕ್ಕೆ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕ ಮಾಜಿ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ
ಓಂ ಪ್ರಕಾಶ್ ಅವರಿಗೆ ಸೇರಿದ ಎರಡು ಮನೆ ಬೆಂಗಳೂರಿನಲ್ಲಿ ಇವೆ. ಕಾವೇರಿ ಜಂಕ್ಷನ್ನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಇದೆ. ಹೆಚ್.ಎಸ್.ಆರ್ ಲೇಔಟ್ನ ಐಪಿಎಸ್ ಕ್ವಾಟ್ರಸ್ನಲ್ಲಿ ಮನೆ ಇದೆ. ಮನೆಯಲ್ಲಿ ಗಲಾಟೆ ಆದಾಗ ಓಂ ಪ್ರಕಾಶ್ ಅವರು ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು ಎಂದು ಮಾಹಿತಿ ದೊರೆತಿದೆ.
ಕೌಟುಂಬಿಕ ಕಲಹಕ್ಕೆ ಕೊಲೆ?
ಮೂರು ದಿನಗಳ ಹಿಂದೆ IPS ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ಪತ್ನಿ ಪಲ್ಲವಿಯವರು, “ನನ್ನ ಪತಿ ನನಗೆ, ಮಗಳಿಗೆ ತುಂಬಾ ಚಿತ್ರಹಿಂಸೆ ಕೊಡುತ್ತಿದ್ದಾರೆ. ಮನೆಯಲ್ಲಿ ನನ್ನ ಪತಿ ಗನ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಶೂಟ್ ಮಾಡಿ ಕೊಲೆ ಮಾಡುತ್ತೇನೆ ಎಂದು ಭಯಪಡಿಸುತ್ತಿದ್ದಾರೆ. ಹೀಗಾಗಿ, ಪತಿ ವಿರುದ್ಧ ಸುಮೊಟೋ ಕೇಸ್ ದಾಖಲಿಸುವಂತೆ” ಮೆಸೇಜ್ ಮಾಡಿದ್ದರಂತೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:36 pm, Sun, 20 April 25