ಮುತ್ತಪ್ಪ ರೈ ಪುತ್ರನ ಹತ್ಯೆ ಯತ್ನ ಹಿಂದೆ ಶಾರ್ಪ್ಶೂಟರ್? ರಿಕ್ಕಿ ಮೇಲಿನ ಗುಂಡಿನ ದಾಳಿಗೆ ಅಸಲಿ ಕಾರಣವೇನು?
Ricky Rai: ಭೂಗತ ಲೋಕದ ಮಾಜಿ ಡಾನ್ ಪುತ್ರ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾನೆ. ನಡುರಾತ್ರಿ ನಡೆದು ಹೋಗ್ಬೇಕಿದ್ದ ಹತ್ಯೆಯೊಂದು ಸ್ವಲ್ಪದರಲ್ಲೇ ತಪ್ಪಿದೆ. ಮುತ್ತಪ್ಪ ರೈ ಪುತ್ರ, ರಿಕ್ಕಿ ರೈ ಟಾರ್ಗೆಟ್ ಮಾಡಿ ಫೈರಿಂಗ್ ಮಾಡಿದ್ದಾರೆ. ಅಷ್ಟಕ್ಕೂ ಮಧ್ಯರಾತ್ರಿ ಬಿಡದಿಯಲ್ಲಿ ನಡೆದಿದ್ದೇನು? ಹತ್ಯೆ ಸ್ಕೆಚ್ ಹಿಂದಿನ ಕಾರಣವಾದರೂ ಏನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, (ಏಪ್ರಿಲ್ 20): ಮಾಜಿ ಡಾನ್ ಮುತ್ತಪ್ಪ ರೈ (muthappa rai ) ಬೆಂಗಳೂರು(Bengaluru) ಭೂಗತಲೋಕದಲ್ಲಿ ಸೃಷ್ಟಿಸಿದ್ದ ರಕ್ತಚರಿತ್ರೆ ಇವತ್ತು ಬೆಚ್ಚಿಬೀಳಿಸುವಂತಿದೆ. ಅದೆಷ್ಟೋ ಡಾನ್ಗಳು, ಮುತ್ತಪ್ಪ ರೈನನ್ನ ಟಾರ್ಗೆಟ್ ಮಾಡಿದ್ದರು. ಆದ್ರೆ ದಾಳಿಯೂ ಮುತ್ತಪ್ಪ ರೈರನ್ನ ಅಲುಗಾಡಿಸಲು ಆಗಲಿಲ್ಲ. ಇದೀಗ ಅದೇ ಮುತ್ತಪ್ಪ ರೈ ಮಗನ ಮೇಲೆ ಫೈರಿಂಗ್ ಮಾಡಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಆದ್ರೆ ರಿಕ್ಕಿ ರೈ (Ricky Rai) ಜಸ್ಟ್ ಮಿಸ್ ಆಗಿದ್ದು, ಕೊಲೆ ಯತ್ನದ ಹಿಂದೆ ಸಾಕಷ್ಟು ಸಂಶಯ ಹುಟ್ಟಿಕೊಂಡಿದೆ. ತಂದೆ ಸಾವಿನ ಬಳಿಕ ಆಸ್ತಿ ವ್ಯಾಜ್ಯ ಹಾಗೂ ತಂದೆಯ ವ್ಯವಹಾರ ಪಾಲುದಾರರಾಗಿದ್ದವರ ಜೊತೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸುಫಾರಿ ಕಿಲ್ಲರ್ ಮೂಲಕ ರಿಕ್ಕಿ ಹತ್ಯೆಗೆ ಸ್ಕೆಚ್ ಹಾಕಿರುವ ಶಂಕೆ ವ್ಯಕ್ತವಾಗಿವೆ. ಹೀಗಾಗಿ ಪೊಲೀಸರು ಈ ಬಗ್ಗೆ ವಿವಿಧ ಆಯಾಮಗಳ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಮೊನ್ನೆ ರಾತ್ರಿ ಗುಂಡಿನ ದಾಳಿ ನಡೆದಿದೆ. ರಾತ್ರಿ 12.30ರ ಸುಮಾರಿಗೆ ಬಿಡದಿಯ ಮನೆಯಿಂದ ಹೊರಗೆ ಬರುತ್ತಿದ್ದಂತೆಯೇ ಆಗಂತುಕರು ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾರೆ. ರಿಕ್ಕಿ ಕಾರು ಚಾಲಕ ಬಸವರಾಜು ದೂರಿನಂತೆಯೇ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಿಡದಿಯ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸ್ತಿದ್ದಾರೆ. ಇದೀಗ ಸಿಸಿಬಿ ಪೊಲೀಸರು ತನಿಖೆಗಿಳಿದಿದ್ದು, ರಾಮನಗರ ಪೊಲೀಸರ ಜೊತೆ ಪ್ಯಾರಲಲ್ ಆಗಿದೆ ತನಿಖೆ ಮಾಡುತ್ತಿದ್ದಾರೆ. ಕೊಲೆ ಯತ್ನದಲ್ಲಿ ಅಂಡರ್ ವರ್ಲ್ಡ್ ಲಿಂಕ್ ಇದ್ಯಾ? ಕುಟುಂಬದ ಭೂವಿವಾದದ ಲಿಂಕ್ ಇದ್ಯಾ? ಎಂದು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: Gun Firing on Rikki Rai: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್: ಮೂಗು, ಕೈಗೆ ತಾಕಿದ ಗುಂಡು
ಇನ್ನು ತನಿಖೆ ತೀವ್ರಗೊಳಿಸಿರೋ ಬಿಡದಿ ಪೊಲೀಸರು, ತಡರಾತ್ರಿ ರಿಕ್ಕಿಯ ಇಬ್ಬರು ಗನ್ಮ್ಯಾನ್ಗಳನ್ನ, ಬಿಡದಿಯ ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗಿದೆ. ಯಾಕಂದ್ರೆ ರಿಕ್ಕಿ ಮೇಲೆ ಫೈರಿಂಗ್ ಶಬ್ಧ ಕೇಳಿ ಇಬ್ಬರು ಗನ್ಮ್ಯಾನ್ಗಳು ಏರ್ಫೈಯರ್ ಮಾಡಿದ್ರು. ಶಬ್ಧ ಕೇಳಿ ತಕ್ಷಣವೇ ಮನೆಯಿಂದ ಹೊರಬಂದು ಏರ್ಫೈಯರ್ ಮಾಡುತ್ತಿದ್ದಂತೆಯೇ ಶಾರ್ಪ್ಶೂಟರ್ಗಳು ಸ್ಥಳದಿಂದ ಪರಾರಿಯಾಗಿದ್ದರು. ಹೀಗಾಗಿ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಬೇಸಿಕ್ ಮೊಬೈಲ್ ಬಳಸಿದ್ದು ಯಾಕೆ?
ಬಿಡದಿ ಪೊಲೀಸರ ತನಿಖೆ ವೇಳೆ ಶೂಟೌಟ್ ಪ್ರಕರಣದ ಇಂಟೆರೆಸ್ಟಿಂಗ್ ವಿಚಾರಗಳು ಬಯಲಾಗಿದೆ. ಶೂಟರ್ಸ್‌ಗಳು ಗುಂಡಿನ ದಾಳಿಗೆ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಅನ್ನು ಬಳಸಿದ್ದಾರೆ. ಹೌದು.. ದುಷ್ಕರ್ಮಿಗಳು ತಡರಾತ್ರಿ ಕತ್ತಲೆಯಲ್ಲಿ ರಿಕ್ಕಿ ರೈ ಮೇಲೆ ಫೈರಿಂಗ್ ಮಾಡಲು ಕಾದು ಕುಳಿತಿದ್ದರು. ಕತ್ತಲೆಯಲ್ಲಿ ಟಾರ್ಚ್‌ಗಾಗಿ ಶೂಟರ್‌ಗಳು ಈ ಸಿಮ್ ಇಲ್ಲದ ಮೊಬೈಲ್ ಬಳಕೆ ಮಾಡಿದ್ದಾರೆ. ಶೂಟ್ ಮಾಡಿದ ಸ್ಥಳವನ್ನು ಮಹಜರು ಮಾಡಿದ ಪೊಲೀಸರಿಗೆ ನಿನ್ನೆಯೇ ಸಿಮ್ ಕಾರ್ಡ್ ಇಲ್ಲದ ಬೇಸಿಕ್ ಮೊಬೈಲ್ ಸಿಕ್ಕಿತ್ತು. ಪರಿಶೀಲನೆ ವೇಳೆ ಸಿಮ್ ಕಾರ್ಡ್ ಇಲ್ಲದೇ ಇರೋ ಫೋನ್ ಅನ್ನು ಕತ್ತಲೆಯಲ್ಲಿ ಟಾರ್ಚ್‌ಗಾಗಿ ಬಳಕೆ ಮಾಡಿರೋದು ತನಿಖೆ ವೇಳೆ ಗೊತ್ತಾಗಿದೆ.
ನಾಲ್ವರ ವಿರುದ್ಧ ಎಫ್ಐಆರ್ ದಾಖಲು
ಇಷ್ಟೆಲ್ಲಾ ತನಿಖೆ ಆಗ್ತಿದ್ರೂ ಕುಟುಂಬದ ಆಯಾಮದಲ್ಲೂ ಬಿಡದಿ ಪೊಲೀಸರು ತನಿಖೆ ಮಾಡ್ತಿದ್ದಾರೆ. ಈಗಗಾಲೇ ರಿಕ್ಕಿ ಕಾರು ಚಾಲಕ ಬಸವರಾಜು ಕೊಟ್ಟ ದೂರಿನ ಮೇಲೆ ನಾಲ್ವರ ವಿರುದ್ಧ ಎಫ್ಐಆರ್ ಆಗಿದೆ. ಮುತ್ತಪ್ಪ ರೈ ಬಲಗೈ ಬಂಟನಾಗಿದ್ದ ರಾಕೇಶ್ ಮಲ್ಲಿ, ರಿಕ್ಕಿ ರೈ ಮಲತಾಯಿ ಅನುರಾಧಾ ಮೇಲೆ ಕೇಸ್ ದಾಖಲಾಗಿದೆ. ಆಸ್ತಿಯ ವಿಚಾರದಲ್ಲಿ ಎಲ್ಲಾದ್ರೂ ಕೊಲೆ ಯತ್ನ ನಡೆದಿದ್ಯಾ ಅನ್ನೋ ಬಗ್ಗೆಯೂ ತನಿಖೆ ನಡೆದಿದೆ.
ಇತ್ತ ಕಾರು ಚಾಲಕ ಬಸವರಾಜ್ ನಾಲ್ವರ ವಿರುದ್ಧ ಬಿಡದಿ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಎ1 ರಾಕೇಶ್ ಮುತ್ತಪ್ಪ ರೈ ಮಾಜಿ ಬಲಗೈ ಬಂಟ. ಎ2 ಅನುರಾಧ ಮುತ್ತಪ್ಪ ರೈ ಎರಡನೇ ಪತ್ನಿ, ಎ3 ನಿತೇಶ್ ಎಸ್ಟೇಟ್ ಎಂಬ ರಿಯಲ್ ಎಸ್ಟೇಟ್ ಕಂಪೆನಿ ಒಡೆಯ, ಎ 4 ವೈದ್ಯನಾಥನ್ ಕಂಪೆನಿಯ ಎಕ್ಸಿಕ್ಯುಟಿವ್ ಡೈರೆಕ್ಟರ್. ನಾಲ್ವರ ವಿರುದ್ಧ ರಿಕ್ಕಿ ರೈ ಕಾರು ಚಾಲಕ ದೂರು ನೀಡಿದ್ದಾರೆ.
ಮುತ್ತಪ್ಪ ರೈ ಮಾಜಿ ಬಲಗೈ ಬಂಟನ ಮೇಲೇಕೆ ಕೇಸ್?
ಫೋಟೋದಲ್ಲಿ ಕಾಣುವಂತೆ ಮುತ್ತಪ್ಪ ರೈ ಬಲಭಾಗದಲ್ಲಿ ಇರೋನು ಪುತ್ರ ರಿಕ್ಕಿ. ಎಡಭಾಗದಲ್ಲಿ ಇರೋದು ರಾಕೇಶ್ ಮಲ್ಲಿ. ಆಪ್ತರಾಗಿದ್ದ ರಾಕೇಶ್ ಮಲ್ಲಿ, ಮುತ್ತಪ್ಪ ರೈ ನಡುವೆ ಬೇನಾಮಿ ಜಮೀನು ವಿಚಾರಕ್ಕೆ ವೈಮನಸ್ಸು ಶುರುವಾಯ್ತು ಎನ್ನಲಾಗಿದೆ. ಬಂಟ್ವಾಳದಲ್ಲಿ ಜಮೀನನ್ನನ ಮುತ್ತಪ್ಪ ರೈ ಖರೀದಿಸಿದ್ರು. ಈ ಸಂಬಂಧ ಇಬ್ಬರ ನಡುವೆ ಗಲಾಟೆ ಆಗಿದೆ. ಕೊಲ್ಲೋಕೆ ಮುತ್ತಪ್ಪ ರೈ ಸುಪಾರಿ ನೀಡಿದ್ದಾರೆ ಎಂದು ರಾಕೇಶ್ ದೂರು ಕೊಟ್ಟಿದ್ದ. ಇದಿಷ್ಟೇ ಅಲ್ಲ, ಮುತ್ತಪ್ಪ ರೈ 2ನೇ ಪತ್ನಿಯ ಜೊತೆ ರಾಕೇಶ್ ವ್ಯವಹಾರ ಮಾಡ್ತಿದ್ದ ಎನ್ನಲಾಗಿದೆ. ಮುತ್ತಪ್ಪ ರೈ ಮಕ್ಕಳು ವೈರತ್ವ ಬೆಳೆಸಿಕೊಂಡರು ಎಂದು ಮೂಲಗಳು ತಿಳಿಸಿವೆ.
ಎ2 ಮುತ್ತಪ್ಪ ರೈ 2ನೇ ಪತ್ನಿ ಮೇಲೆ ಅನುಮಾನ ಏಕೆ?
ಇನ್ನು ಗುಂಡಿನ ದಾಳಿ ಪ್ರಕರಣದಲ್ಲಿ A-2ಆಗಿರೋದು, ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ. ಮೊದಲನೇ ಪತ್ನಿ ರೇಖಾ ನಿಧನದ ಬಳಿಕ ಅಂದ್ರೆ 2016ರಲ್ಲಿ ಅನುರಾಧರನ್ನ ಮುತ್ತಪ್ಪ ರೈ 2ನೇ ಮದುವೆಯಾಗಿದ್ರು. 2020 ರಲ್ಲಿ ರೈ ನಿಧನಹೊಂದಿದ್ರು. 41 ಪುಟಗಳ ವಿಲ್ನಲ್ಲಿ ಮುತ್ತಪ್ಪ ರೈ ತಮ್ಮ, ಪುತ್ರರಾದ ರಾಕಿ ಮತ್ತು ರಿಕ್ಕಿ ಹಾಗೂ ತಮ್ಮ 2ನೇ ಪತ್ನಿ ಅನುರಾಧಾಗೆ ಆಸ್ತಿ ಪಾಲು ಮಾಡಿದ್ರು. ಮುತ್ತಪ್ಪ ರೈ ನಿಧನದ ಬಳಿಕ ₹2 ಸಾವಿರ ಕೋಟಿ ಆಸ್ತಿಯ ಬಗ್ಗೆ ವಿವಾದ ಉಂಟಾಗಿತ್ತು. ಆಸ್ತಿಗಾಗಿ 2ನೇ ಪತ್ನಿ ಅನುರಾಧಾ ಧಾವೆ ಹೂಡಿದ್ರು. ತಮಗೆ ಕಾನೂನು ಪ್ರಕಾರ ಆಸ್ತಿ ಸಿಕ್ಕಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
2 ಸಾವಿರ ಕೋಟಿ ರೂ. ಆಸ್ತಿಗಾಗಿ ಕಲಹ?
ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಕೋರ್ಟ್ನಲ್ಲಿ ರಾಕಿ, ರಿಕ್ಕಿ ಪ್ರತಿವಾದ ಮಂಡಿಸಿದ್ರು. ತಂದೆ ಇರುವಾಗಲೇ ಏನು ಬೇಕೋ ಅಷ್ಟು ಆಸ್ತಿ ಕೊಡಲಾಗಿದೆ ಎಂದು ವಾದ ಮಾಡಿದ್ರು. ಕೋರ್ಟ್ನಲ್ಲಿ ಕೇಸ್ ಇದ್ದಾಗಲೇ ಮುತ್ತಪ್ಪ ರೈ ಪುತ್ರರು ಕೆಲವು ಆಸ್ತಿ ಮಾರಲು ಯತ್ನಿಸಿದ್ರಂತೆ. ಈ ಬಗ್ಗೆ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಪ್ರಶ್ನೆ ಮಾಡಿದ್ದಕ್ಕೆ ಪ್ರಕರಣ ವಿಕೋಪಕ್ಕೆ ಹೋಗಿತ್ತು. ಬಳಿಕ ಚರ್ಚಿಸಿ ಆಸ್ತಿ ಹಂಚಿಕೊಳ್ಳಲು ನಿರ್ಧಾರ ಮಾಡಿದ್ರು. ಮೂಲಗಳ ಪ್ರಕಾರ ಅನುರಾಧಾ ಅವರಿಗೆ ಬರೋಬ್ಬರಿ ₹100 ಕೋಟಿ ಆಸ್ತಿ ಸಿಕ್ಕಿರೋ ಮಾಹಿತಿ ಇದೆ. Byte : ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ
ರಿಕ್ಕಿ ಬಿಸಿನೆಸ್ ಪಾರ್ಟ್ನರ್ ವಿರುದ್ಧ ಕೇಸ್
ಇದಿಷ್ಟೇ ಅಲ್ಲ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಬಿಸಿನೆಸ್ ಪಾರ್ಟ್ನರ್ ನಿತೇಶ್ ಶೆಟ್ಟಿ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇಬ್ಬರೂ ಸೇರಿ ಮಾಡಿದ್ದ ಲೇಔಟ್ ವಿಚಾರವಾಗಿ ವೈಮನಸ್ಸು ಇತ್ತು ಅಂತಾ ಹೇಳಲಾಗ್ತಿದೆ. ಇನ್ನು ನಿತೇಶ್ ಎಸ್ಟೇಟ್ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿದ್ದ ವೈದ್ಯನಾಥನ್ ವಿರುದ್ಧ ಕೂಡ ರಿಕ್ಕಿ ರೈ ಕಾರು ಚಾಲಕ ಕೇಸ್ ದಾಖಲು ಮಾಡಿದ್ದಾರೆ..
ರಿಕ್ಕಿಗೆ ಬಂದಿದ್ದ 2 ಫೋನ್ಕಾಲ್ ಯಾವುದು?
ಇನ್ನೊಂದೆಡೆ ರಿಕ್ಕಿ ರೈ ಚಾಲಕ ನೀಡಿದ ದೂರಿನಲ್ಲಿ ಮನೇಲಿ ಬಿಟ್ಟು ಬಂದಿದ್ದನ್ನ ಪರ್ಸ್ ತರಲು ವಾಪಸ್ ಹೋಗಿದ್ವಿ ಆಗ ಗುಂಡಿನ ದಾಳಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಜುಜುಬಿ ಪರ್ಸ್ಗಾಗಿ ಮನೆಗೆ ವಾಪಸ್ ಹೋಗಿದ್ದು ಏಕೆ ಅನ್ನೋದು ಸಹ ಪೊಲೀಸರ ಶಂಕೆಗೆ ಕಾರಣವಾಗಿದೆ. ಇದ್ರ ಜತೆ ಗುಂಡಿನದಾಳಿಗೂ ಮುನ್ನ ರಿಕ್ಕಿಗೆ ಎರಡು ಫೋನ್ ಕಾಲ್ ಬಂದಿತ್ತಂತೆ. ಆ ಎರಡು ಕಾಲ್ ಮಾಡಿದ್ಯಾರು ಅನ್ನೋದು ತನಿಖೆಯಲ್ಲಿ ಬಯಲಾಗಬೇಕಿದೆ. ಖಾಕಿ ಪಡೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದೆ.
ರಿಕ್ಕಿ ಮೇಲೆ ಪ್ರೀ ಪ್ಲ್ಯಾನ್ ಮಾಡಿಯೇ ಅಟ್ಯಾಕ್
ರಿಕ್ಕಿ ರೈನ ಹತ್ಯೆ ಮಾಡ್ಬೇಕು ಅಂತಾ ಪಕ್ಕಾ ಪ್ರೀ ಪ್ಲ್ಯಾನ್ ಮಾಡಿಯೇ ದಾಳಿ ಮಾಡಿರೋದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ರಿಕ್ಕಿಗೆ ಡ್ರೈವಿಂಗ್ ಅಂದ್ರೆ ಪ್ಯಾಷನ್. ಪ್ರತಿ ಬಾರಿಯೂ ತಮ್ಮ ಕಾರನ್ನ ರಿಕ್ಕಿನೇ ಡ್ರೈವ್ ಮಾಡ್ತಿದ್ದ. ಆದ್ರೆ ನಿನ್ನೆ ಅದೃಷ್ಟ ಚೆನ್ನಾಗಿದ್ದು, ಡ್ರೈವಿಂಗ್ ಸೀಟ್ನಲ್ಲಿ ಕೂರದೆ ಕಾರಿನ ಹಿಂಬದಿ ಸೀಟಿನಲ್ಲಿ ಕೂತಿದ್ದ. ಅಷ್ಟೇ ಅಲ್ಲ.. ರಿಕ್ಕಿ ಪ್ರತಿ ಬಾರಿ ರಾತ್ರಿ ವೇಳೆಯೇ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ. ರಿಕ್ಕಿ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಆಗಂತುಕರು, ನಿನ್ನೆ ರಾತ್ರಿ ದಾಳಿ ಮಾಡಿದ್ದಾರೆ. ವಿಪರ್ಯಾಸ ಅಂದ್ರೆ ಮುತ್ತಪ್ಪ ರೈ ಮನೆ ಮುಂಭಾಗದ ರಸ್ತೆಯಲ್ಲಿ ಲೈಟ್ ಇಲ್ಲ. ಇದೇ ಸರಿಯಾದ ಸ್ಥಳ ಅಂತಾ ಇದೇ ಕಾಂಪೌಂಡ್ ಬಳಿ ಕೂತು ಗುಂಡು ಹಾರಿಸಿದ್ದಾರೆ. ಅದೃಷ್ಟಕ್ಕೆ ರಿಕ್ಕಿ ಕಾರ್ ಡ್ರೈವರ್ ಬಸವರಾಜ್ ಸಹ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.
ರಿಕ್ಕಿ ಆರೋಗ್ಯದಲ್ಲಿ ಸ್ಥಿರ!
70mm ಬುಲೆಟ್ನ ಶಾಟ್ಗನ್ ಬಳಸಿ ಫೈರಿಂಗ್ ಮಾಡಲಾಗಿದೆ. ಶಾರ್ಪ್ ಶೂಟರ್ ಗನ್ನಿಂದ ಸಿಡಿದ ಬುಲೆಟ್ ಡ್ರೈವರ್ ಸೀಟ್ಗೆ ತಗುಲಿದೆ. ಸೀಟ್ಗೆ ಬಡಿದ ಗುಂಡಿನಿಂದ ಹಿಂಬದಿ ಕೂತಿದ್ದ ರಿಕ್ಕಿಗೂ ಗಾಯವಾಗಿದೆ. ಬುಲೆಟ್ ರಿಕ್ಕಿ ಕೈ ಮತ್ತು ಮೂಗಿಗೂ ತಾಕಿದೆ. ಗಾಯದಿಂದ ನರಳಾಡಿದ ರಿಕ್ಕಿ ರೈನ ಮೊದಲು ಬಿಡದಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಿಗಿ ಭದ್ರತೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗಿದ್ದು, ಸದ್ಯ ರಿಕ್ಕಿಗೆ 2 ಶಸ್ತ್ರ ಚಿಕಿತ್ಸೆ ಮಾಡಿ ರಿಕ್ಕಿ ಕೈಯಲ್ಲಿದ್ದ ಬುಲೆಟ್ನ ತೆಗೆದಿದ್ದಾರೆ.
ಮೂಗಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾರೆ. ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರೋ ರಿಕ್ಕಿ ರೈ ಆರೋಗ್ಯ ಸ್ಥಿರ ಆಗಿದ್ದು, ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಇನ್ನು 24 ಗಂಟೆಗೂ ಹೆಚ್ಚು ಕಾಲ ಯಾರೂ ಮಾತನಾಡಿಸಬಾರದು ಎಂದು ವೈದ್ಯರು ಸೂಚನೆ ಕೊಟ್ಟಿದ್ರು. ಹೀಗಾಗಿ ರಿಕ್ಕಿ ರೈ ನಿಂದ ಯಾವುದೇ ಹೇಳಿಕೆ ದಾಖಲು ಮಾಡಿಕೊಳ್ಳೋಕೆ ಪೊಲೀಸರಿಗೆ ಆಗಿರಲಿಲ್ಲ. ಇದೀಗ ಇವತ್ತು, ಮಣಿಪಾಲ ಆಸ್ಪತ್ರೆಯಲ್ಲಿ ರಿಕ್ಕಿ ರೈ ಹೇಳಿಕೆಯನ್ನ ದಾಖಲು ಮಾಡಿಕೊಳ್ಳೋಕೆ, ಬಿಡದಿ ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ.
ನಾಲ್ವರ ವಿರುದ್ಧ ಕಾರು ಚಾಲಕ ಬಸವರಾಜು ದೂರು ಕೊಟ್ಟಿದ್ರೂ, ರಿಕ್ಕಿ ರೈ ಹೇಳಿಕೆ ಪ್ರಮುಖ ಅಂಶವಾಗಲಿದೆ. ಹೀಗಾಗಿ ಪೊಲೀಸರ ವಿಚಾರಣೆಯಲ್ಲಿ ರಿಕ್ಕಿ ರೈ ಹೇಳಿಕೆ ಬಿಗ್ ಟ್ವಿಸ್ಟ್ ಕೊಡುತ್ತಾ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:24 pm, Sun, 20 April 25