ಬೆಂಗಳೂರು ರೋಡ್ರೇಜ್, ಹಲ್ಲೆ ಪ್ರಕರಣ: ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು
ಬೆಂಗಳೂರು ರೋಡ್ರೇಜ್ ಪ್ರಕರಣ ಸಿನಿಮೀಯ ತಿರುವು ಪಡೆದಿದ್ದು, ಟೆಕ್ಕಿ ವಿಕಾಸ್ ಕುಮಾರ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ಧ ಕೊಲೆ ಯತ್ನ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಎಫ್ಐಆರ್ನಲ್ಲಿ ವಿಂಗ್ ಕಮಾಂಡರ್ ಹೆಸರು ಉಲ್ಲೇಖಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು, ಏಪ್ರಿಲ್ 22: ಬೆಂಗಳೂರಿನಲ್ಲಿ (Bengaluru) ವಿಂಗ್ ಕಮಾಂಡರ್ (Wing Commander) ಶಿಲಾದಿತ್ಯ ಬೋಸ್ ಮತ್ತು ಟೆಕ್ಕಿ ವಿಕಾಸ್ ಕುಮಾರ್ ನಡುವೆ ನಡೆದಿದ್ದ ಗಲಾಟೆ ಪ್ರಕರಣ ಇದೀಗ ಸಿನಿಮೀಯ ತಿರುವು ಪಡೆದಿದೆ. ಟೆಕ್ಕಿ ವಿಕಾಸ್ ಕುಮಾರ್ ನೀಡಿದ ದೂರಿನ ಹಾಗೂ ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧವೇ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಆದರೆ, ಎಫ್ಐಆರ್ನಲ್ಲಿ ನೇರವಾಗಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹೆಸರು ಉಲ್ಲೇಖಿಸದೇ ಇರುವುದಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ.
ಎಫ್ಐಆರ್ನಲ್ಲೇನಿದೆ?
ದೂರುದಾರರಾದ ವಿಕಾಸ ಕುಮಾರ್ ದಿನಾಂಕ 21 ರಂದು ಬೆಳಿಗ್ಗೆ, ಸುಮಾರು 6-20 ರ ಸಮಯದಲ್ಲಿ ತನ್ನ ಸ್ನೇಹಿತನ ಬೈಕ್ ವಾಪಸ್ಸು ನೀಡುವ ಸಂಬಂಧ ಅವರ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಮರೂನ್ ಕಲರ್ ಮಾರುತಿ ಸುಜುಕಿ ಎರ್ಟಿಗಾ ಕಾರ್ನಲ್ಲಿ ಬಂದ ವ್ಯಕ್ತಿ ದ್ವಿ ಚಕ್ರ ವಾಹನಕ್ಕೆ ಟಚ್ ಮಾಡಿದ್ದಾರೆ. ನಂತರ ದೂರುದಾರರ ಬೈಕ್ಗೆ ತಮ್ಮ ಕಾರನ್ನು ಅಡ್ಡ ಹಾಕಿ ತಡೆದು ನಿಲ್ಲಿಸಿ ತಮ್ಮ ಕಾರಿಗೆ ಏಕೆ ಟಚ್ ಮಾಡಿರುತ್ತೀಯಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ದೂರುದಾರರು, ಕಾರಿನಲ್ಲಿದ್ದ ವ್ಯಕ್ತಿಗೆ ನೀವೇ ನನ್ನ ಬೈಕ್ಗೆ ಟಚ್ ಮಾಡಿದ್ದೀರಿ ಎಂದು ತಿಳಿಸಿದ್ದಾರೆ. ಅಷ್ಟರಲ್ಲಿ, ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಕಾರಿನಿಂದ ಕೆಳಗೆ ಇಳಿದು ಬಂದು ಬೈಕ್ ಅನ್ನು ಮತ್ತು ದೂರುದಾರರನ್ನು ತಳ್ಳಿ, ಕೆಳಗೆ ಬೀಳಿಸಿದ್ದಾರೆ. ಜತೆಗೆ, ನಾನು ಏರ್ಪೋರ್ಸ್ನಲ್ಲಿ ಇರುವವರು. ನನ್ನ ಜೊತೆ ಆಟ ಆಡಬೇಡ ಎಂದು ಧಮಕಿ ಹಾಕಿ ಹೊಡೆದಿದ್ದಾರೆ. ಈ ವೇಳೆ, ದೂರುದಾರರು ಸ್ನೇಹಿತನಿಗೆ ಕರೆ ಮಾಡಲು ಪೋನ್ ತೆಗೆದುಕೊಂಡಾಗ ಕೈಯನ್ನು ಕಚ್ಚಿ ಮೊಬೈಲ್ ಪೋನ್ ಅನ್ನು ಕಿತ್ತುಕೊಂಡು ಬಿಸಾಕಿ ಒಡೆದು ಹಾಕಿದ್ದಲ್ಲದೆ, ಬೈಕ್ ಕೀ ಅನ್ನು ಕಿತ್ತುಕೊಂಡು ಬಿಸಾಡಿದ್ದಾರೆ. ಅಷ್ಟೇ ಅಲ್ಲದೆ, ಸಾಯಿಸುವ ಉದ್ದೇಶದಿಂದ ಹಿಂಬದಿಯಿಂದ ಕುತ್ತಿಗೆಯನ್ನು ಹಿಡಿದುಕೊಂಡು ಕತ್ತನ್ನು ಹಿಸುಕಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲಲೂ ರೆಕಾರ್ಡ್ ಆಗಿದ್ದವು. ಆದರೆ, ಇದೀಗ ಎಫ್ಐಆರ್ನಲ್ಲಿ ಶಿಲಾದಿತ್ಯ ಬೋಸ್ ಹೆಸರು ಉಲ್ಲೇಖಿಸದೇ ಇರುವುದಕ್ಕೆ ದೂರುದಾರರ ವಕೀಲರಿಂದ ಹಾಗೂ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ. ದೂರು ನೀಡುವಾಗ ವಿಂಗ್ ಕಮಾಂಡರ್ ಹೆಸರು ಬರೆದು ಕೊಟ್ಟಿದ್ದೆವು. ಆದರೆ ಹೆಸರು ಬರೆದುಕೊಟ್ಟರೂ ಎಫ್ಐಆರ್ನಲ್ಲಿ ಉಲ್ಲೇಖಿಸಿಲ್ಲ. ಪೊಲೀಸರು ಅವರನ್ನು ಬಂಧಿಸಬೇಕು ಎಂದು ವಿಕಾಸ್ ಪರ ವಕೀಲ ಅಜಯ್ ಕುಮಾರ್ ಆಗ್ರಹಿಸಿದ್ದಾರೆ.
ಸೋಮವಾರ ನಡೆದಿದ್ದೇನು?
ಸೋಮವಾರ ಬೆಳಗ್ಗೆ ಪತ್ನಿಯೊಂದಿಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿವಿಕಾಸ್ ಕುಮಾರ್ ಹಲ್ಲೆ ನಡೆಸಿದ್ದಾರೆ ಎಂದು ಶಿಲಾದಿತ್ಯ ಬೋಸ್ ಆರೋಪಿಸಿದ್ದರು. ಆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಮಾಡಿ, ಆರೋಪಗಳನ್ನು ಮಾಡಿದ್ದರು. ನಂತರ ಬೈಯಪ್ಪನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ವಿಕಾಸ್ ಕುಮಾರ್ ಅನ್ನು ಬಂಧಿಸಿದ್ದರು.
ಇದನ್ನೂ ಓದಿ: ಕನ್ನಡಿಗನಿಗೆ ಹಿಗ್ಗಾಮುಗ್ಗಾ ಥಳಿತ: ಸಿಸಿಟಿವಿಯಲ್ಲಿ ಬಯಲಾಯ್ತು ವಿಂಗ್ ಕಮಾಂಡರ್ ನವರಂಗಿ ಆಟ
ಏತನ್ಮಧ್ಯೆ, ವಿಂಗ್ ಕಮಾಂಡರ್ ಬೋಸ್ನಿಂದ ವಿಕಾಸ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಏರ್ಫೋರ್ಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:14 pm, Tue, 22 April 25