ಫುಲ್ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ: ನಶೆಯಲ್ಲಿ ಹೆಚ್ಚು ಕಮ್ಮಿಯಾದ್ರೆ ಏನು ಗತಿ?
ಬೆಳಗಾವಿ ಜಿಲ್ಲೆಯ ಸವದತ್ತಿ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಮದ್ಯಪಾನ ಮಾಡಿ ರೋಗಿಯನ್ನು ಪರೀಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯನ್ನು ಎಣ್ಣೆ ಮತ್ತಿನಲ್ಲಿ ಪರೀಕ್ಷಿಸಿದ್ದಾರೆ ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಬೆಳಗಾವಿ, ಏಪ್ರಿಲ್ 22: ವೈದ್ಯೋ ನಾರಾಯಣೋ ಹರಿ ಅಂತಾರೆ. ಆದರೆ, ಬೆಳಗಾವಿ ಜಿಲ್ಲೆಯ ಸವದತ್ತಿ ಸರ್ಕಾರಿ ಆಸ್ಪತ್ರೆಯ ವೈದ್ಯ ಫುಲ್ ಟೈಟ್ ಆಗಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯ ತಪಾಸಣೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ ರಾತ್ರಿ ಹೃದಯ ಸಂಬಂಧಿ ಕಾಯಿಲೆಯಿಂದ ರೋಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಫುಲ್ ಟೈಟ್ ಎಣ್ಣೆ ಮತ್ತಿನಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಸುರೇಶ್ ಹಿತ್ತಲಮನಿ ಅವರು ರೋಗಿಯ ತಪಾಸಣೆ ನಡೆಸಿದ್ದಾರೆ. ರೋಗಿಯ ಸಂಬಂಧಿಕರು ತಪಾಸಣೆ ನಡೆಸದಂತೆ ಹೇಳಿದರೂ ಡೋಂಟ್ ಕೇರ್ ಎಂದು ನಿಲ್ಲಲು ಆಗದ ಸ್ಥಿತಿಯಲ್ಲೇ ವೈದ್ಯ ತಪಾಸಣೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ರೋಗಿ ಸಂಬಂಧಿಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ನರ್ಸ್ ತಪಾಸಣೆ ನಡೆಸಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಸ್ಥಳೀಯ ಶಾಸಕ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ.