Parenting; ಅಪ್ಪನಾಗುವುದೆಂದರೆ; ’ತೋಮ ಪಾಪಿ ತು ಹೀಹಾ‘ ಡಾಕ್ಟರ್ ಮಗಳನ್ನು ಕೈಗಿತ್ತಿದ್ದರು
Family Life : ‘ಮಕ್ಕಳನ್ನ ಸಾಕುವುದು, ಬೆಳೆಸುವುದು ಹದಿನೆಂಟು-ಇಪ್ಪತ್ತು ವರ್ಷದ ತಪಸ್ಸು ಅಥವಾ ಪ್ರಾಜೆಕ್ಟ್. ಮಕ್ಕಳು ನಮ್ಮನ್ನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ. ನಾವು ಹೇಳಿದ್ದು ಅವು ಮಾಡುವುದಿಲ್ಲ. ನಾವು ಮಾಡಿದ್ದನ್ನ ಖಂಡಿತ ಅವು ನಕಲು ಮಾಡುತ್ತವೆ. ಅವೇನು ಈ ಭೂಮಿಗೆ ಬರುತ್ತೇವೆ ಎಂದು ಬಯಸಿರುವುದಿಲ್ಲ, ನಾವು ನಮ್ಮ ಇಚ್ಛೆಯಿಂದ ಅವುಗಳನ್ನು ಈ ಭೂಮಿಗೆ ತಂದಿರುತ್ತೇವೆ. ಹೀಗಾಗಿ ಅವುಗಳನ್ನ ಉನ್ನತಿಯ ಕಡೆಗೆ ನಡೆಸುವ ಜವಾಬ್ದಾರಿ ನಮ್ಮದು.‘ ರಂಗಸ್ವಾಮಿ ಮೂಕನಹಳ್ಳಿ
ಪ್ರಿಯ ಅಪ್ಪಂದಿರೇ, ಎರಡು ತಲೆಮಾರುಗಳ ಮಧ್ಯೆ ನೀವಿದ್ದೀರಿ. ಬೆನ್ನ ಹಿಂದೆ ನಿಮ್ಮ ಅಪ್ಪ-ಅಮ್ಮ, ಕಣ್ಣ ಮುಂದೆ ನಿಮ್ಮ ಮಕ್ಕಳು-ಕುಟುಂಬ. ನೀವು ಸಾಗಿಬಂದ, ಸಾಗಿಬರುತ್ತಿರುವ ಹಾದಿಯಲ್ಲಿ ಯಾವುದೇ ನೆನಪುಗಳು ಕೈಮಾಡಿ ನಿಲ್ಲಿಸಬಹುದು. ವಾಸ್ತವ ಸಂಗತಿಗಳು ಕಾಲಿಗೆ ಚಕ್ರ ಕಟ್ಟಲು ನೋಡಬಹುದು. ಈ ಎರಡರ ಮಧ್ಯೆ ಹೃದಯ-ಮೆದುಳು ಗುದ್ದಾಟಕ್ಕೆ ಬಿದ್ದಿರಬಹುದು, ಬಿದ್ದರೂ ನಾವು ನಡೆದಿದ್ದೇ ಹಾದಿ ಎಂದೂ ಸಾಗುತ್ತಿರಲೂಬಹುದು. ಹೀಗೆ ನೀವು ಸಾಕಷ್ಟು ವಿಧದಲ್ಲಿ ಆಂತರಿಕವಾಗಿ ಬೆಳೆದಿದ್ದೀರಿ, ಬೆಳೆಯುತ್ತಲೂ ಇದ್ದೀರಿ. ಹಾಗಿದ್ದರೆ ಅಪ್ಪನಾಗುತ್ತಿದ್ದಂತೆ ನಿಮ್ಮೊಳಗಿನ ನೀವು ರೂಪಾಂತರಕ್ಕೆ ಒಳಗಾದಿರೇ? ಅಪ್ಪನಾಗುವುದೆಂದರೆ ಅನುಭವವೇ, ಅವಕಾಶವೇ, ಆದರ್ಶವೇ, ಅನಿವಾರ್ಯವೇ, ಜವಾಬ್ದಾರಿಯೇ, ಸಹಜ ಪ್ರಕ್ರಿಯೆಯೆ ಅಥವಾ ಇದ್ಯಾವುದೂ ಅಲ್ಲವಾಗಿದ್ದರೆ ಇನ್ನೂ ಏನೇನು? ಒಮ್ಮೆ ಹಿಂತಿರುಗಿ ನೋಡಬಹುದೆ ಎಂದು ಕೆಲ ಅಪ್ಪಂದಿರಿಗೆ ‘ಟಿವಿ9 ಕನ್ನಡ ಡಿಜಿಟಲ್’ ಕೇಳಿತು. ಇದೋ ಹೊಸ ಸರಣಿ ‘ಅಪ್ಪನಾಗುವುದೆಂದರೆ’ ಇಂದಿನಿಂದ ಪ್ರಾರಂಭ.
ನಿಮಗೂ ಈ ಸರಣಿಯಲ್ಲಿ ಪಾಲ್ಗೊಳ್ಳಬೇಕು ಎನ್ನಿಸಿದರೆ ದಯವಿಟ್ಟು ಬರೆಯಿರಿ. ಕನಿಷ್ಟ 1000 ಪದಗಳಿರಲಿ, ನಾಲ್ಕೈದು ಭಾವಚಿತ್ರಗಳು ಮತ್ತು ಸ್ವವಿವರವೂ ಇರಲಿ. ಇ- ಮೇಲ್ tv9kannadadigital@gmail.com ಪರಿಕಲ್ಪನೆ: ಶ್ರೀದೇವಿ ಕಳಸದ
ರಂಗಸ್ವಾಮಿ ಮೂಕನಹಳ್ಳಿ ಅವರು ಹಣ ಹೂಡಿಕೆಯ ತಜ್ಞ, ಸಲಹೆಗಾರ ಮತ್ತು ಉದ್ಯಮಿ. ಈ ತನಕ ಅರವತ್ತು ದೇಶಗಳನ್ನು ಸುತ್ತಿರುವ ಇವರು ಕನ್ನಡದ ಹಲವು ಪ್ರಮುಖ ಪತ್ರಿಕೆ ನಿಯತಕಾಲಿಕೆಗಳಲ್ಲಿ ಹಣಕಾಸು ವಿಷಯಗಳ ಬಗ್ಗೆ ಅಂಕಣ ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಮಗಳಿಗಾಗಿ ಸದ್ಯ ಬೆಂಗಳೂರುವಾಸಿ.
ನಾವು ಸಾಮಾನ್ಯವಾಗಿ ಎಳವೆಯಲ್ಲಿ ಏನಾದರೂ ತಪ್ಪು ಮಾಡಿದರೆ, ಅಂದರೆ ಅಪ್ಪ ಅಮ್ಮನಿಗೆ ನೋವುಂಟು ಮಾಡುವ ರೀತಿಯಲ್ಲಿ ನಡೆದುಕೊಂಡರೆ ಆಗ ಸಾಮಾನ್ಯವಾಗಿ ಕೇಳಿ ಬರುವ ಮಾತು ‘ನಿನಗೆ ಮಕ್ಕಳಾಗಲಿ ಆಗ ನೋವು ಏನು ಎಂದು ಗೊತ್ತಾಗುತ್ತದೆ ‘ ಎನ್ನುವುದು. ಒಮ್ಮೆ ಬೆಳಿಗ್ಗೆ ಆಡಲು ಹೋದವನು ಸಂಜೆಯಾದರೂ ಮನೆಗೆ ಹೋಗಿರಲಿಲ್ಲ. ಎಲ್ಲಿಗೆ ಹೋಗುತ್ತೇನೆ ಎಂದು ಕೂಡ ಹೇಳದೆ ಸ್ನೇಹಿತರ ಜೊತೆ ಕ್ರಿಕೆಟ್ ಆಡಲು ಹೊರಟು ಹೋಗಿದ್ದೆ. ಸಾಯಂಕಾಲ ಮನೆ ತಲುಪಿದಾಗ ಅಮ್ಮನ ಮುಖವನ್ನ ನೋಡುವಂತಿರಲಿಲ್ಲ. ಅಷ್ಟೊಂದು ಯಾಕೆ ಟೆನ್ಶನ್ ಮಾಡ್ಕೊತೀಯ, ಎಲ್ಲಿ ಹೋಗುತ್ತೇನೆ? ಎನ್ನುವ ನನ್ನ ಮಾತಿಗೆ ಅಮ್ಮ ಹೇಳಿದ್ದು ಅದೇ ಮಾತು ‘ನಿನಗೆ ಮಕ್ಕಳಾದಾಗ ಗೊತ್ತಾಗುತ್ತೆ’ ಅವತ್ತಿಗೆ ಅಮ್ಮ ಏನು ಹೇಳುತ್ತಾಳೆ ಎನ್ನುವುದು ಬಿಟ್ಟರೆ ಆ ಪದಗಳ ಅರ್ಥ ತಿಳಿದಿರಲೇ ಇಲ್ಲ. ಆ ಅಕ್ಷರಕ್ಕೆ ಜೀವ ತುಂಬಿದ್ದು ನನ್ನ ಮಗಳು ಅನನ್ಯ.
ನಾವಿದ್ದ ದೇಶದಲ್ಲಿ ಭಾರತಕ್ಕಿಂತ ಒಂದಷ್ಟೇನು ಸಾಕಷ್ಟೇ ಬದಲಾವಣೆ ಇತ್ತು. ಅಂದರೆ ಗಂಡ ಹೆಂಡತಿ ಅಮ್ಮನಾಗಿ ಬದಲಾಗುತ್ತಾರೆ ಎನ್ನುವುದು ತಿಳಿದ ನಂತರ ಒಂದು ವಾರ ‘ಅಪ್ಪ ಅಮ್ಮನ ಕಾರ್ಯ ನಿರ್ವಹಿಸುವ’ ಬಗ್ಗೆ ಆಸ್ಪತ್ರೆಯವರೇ ಒಂದು ಸಣ್ಣ ಸೆಮಿನಾರ್ ನಡೆಸುತ್ತಾರೆ. ಇದು ಕಾಡ್ದಯ. ಯಾರೂ ತಪ್ಪಿಸುವಂತಿಲ್ಲ. ಸರಕಾರವೂ ಈ ವಿಷಯದಲ್ಲಿ ಸಾಥ್ ನೀಡುತ್ತದೆ. ಮೂರು ತಿಂಗಳ ವೇಳೆಗೆ ಗರ್ಭವನ್ನ ಪರೀಕ್ಷಿಸಿ ಮಗು ಹೆಣ್ಣೋ ಅಥವಾ ಗಂಡೋ ಎನ್ನುವುದನ್ನ ಕೂಡ ಹೇಳುತ್ತಾರೆ. ಮಗುವಿನ ಹೆಸರನ್ನ ಇಟ್ಟುಕೊಳ್ಳಲು ಕೂಡ ಸೂಚಿಸುತ್ತಾರೆ. ನಾವು ಮಗುವಿನ ಹೆಸರನ್ನ ಹೇಳಿದರೆ ಸಾಕು, ಮಗುವಿನ ಹೆಸರಲ್ಲಿ ಆ ತಕ್ಷಣವೇ ಒಂದು ಹೆಲ್ತ್ ಬುಕ್ ಸಿದ್ದಪಡಿಸುತ್ತಾರೆ. ಪ್ರತೀ ಬಾರಿ ತಪಾಸಣೆಗೆ ಹೋದಾಗ ಮಗುವಿನ ಬೆಳವಣಿಗೆಯನ್ನು ದಾಖಲಿಸುತ್ತ ಹೋಗುತ್ತಾರೆ. ಮುಂದಿನ ಹಂತ ಹೆರಿಗೆ. ಆಸ್ಪತ್ರೆಯ ಹೆರಿಗೆ ಕೋಣೆಯಲ್ಲಿ ಕಣ್ಣೆದುರೇ ಹೆರಿಗೆ ನಡೆದು ಮಗಳು ಅನನ್ಯಳನ್ನು ಮತ್ತು ಹೆಂಡತಿ ರಮ್ಯಳನ್ನು ಸ್ವಲ್ಪ ಹೆಚ್ಚು ಎನ್ನುವಷ್ಟು ಸೂಕ್ಷ್ಮವಾಗಿ ನೋಡಿಕೊಂಡಿದ್ದೇನೆ. ಇದಕ್ಕೆ ಕಾರಣ ಅಲ್ಲಿ ನಮ್ಮವರು ಎನ್ನುವರು ಯಾರೂ ಇರಲಿಲ್ಲ. ಮಗು ಜನಿಸಿದ ತಕ್ಷಣ ಒಂದಷ್ಟು ಮಾತ್ರ ಸ್ವಚ್ಛಗೊಳಿಸಿ ‘ತೋಮ ಪಾಪಿ ತು ಹೀಹಾ ‘ (ಅಪ್ಪ, ನಿನ್ನ ಮಗಳನ್ನ ತೆಗೆದುಕೋ) ಎಂದು ವೈದ್ಯರು ಅನನ್ಯಳನ್ನ ನನ್ನ ಕೈಗಿತ್ತ ದಿನವನ್ನ ಮರೆಯುವುದಾದರೂ ಹೇಗೆ?
ವ್ಯಕ್ತಿಯಾಗಿ ಅತ್ಯಂತ ಬಿಡುಬೀಸಾಗಿದ್ದ ನನಗೆ ‘ ಅನನ್ಯ’ ಳ ಬರುವಿಕೆ ನನಗೆ ಗೊತ್ತಿಲ್ಲದೆ ಬಹಳ ಪ್ರಜ್ಞಾವಂತ ಸ್ಥಿತಿಗೆ ದೂಡಿಬಿಟ್ಟಿತು. ಕಾರನ್ನ ಚಲಾಯಿಸುವದರಿಂದ, ಇತರ ಸಹಜೀವಿಗಳೊಂದಿಗೆ ವ್ಯವಹರಿಸುವ ರೀತಿ ಕೂಡ ಬದಲಾಯ್ತು. ಮೊದಲಿದ್ದ ಕೋಪ, ಎಲ್ಲವೂ ಕ್ಷಣಾರ್ಧದಲ್ಲಿ ಆಗಿಬಿಡಬೇಕು ಎನ್ನುವ ಆತುರ ಎಲ್ಲಿ ಹೋದವು ಎನ್ನುವಷ್ಟು ಬದಲಾವಣೆ. ಇದಕ್ಕೆಲ್ಲ ಕಾರಣ ನಮ್ಮ ಮನೆಗೆ ಅನನ್ಯಳ ಆಗಮನವಾಗುತ್ತದೆ ಎನ್ನುವುದು. ಹೆಣ್ಣು ಮಗುವೊಂದು ಬೇಕು ಎನ್ನುವುದು ನನ್ನಪ್ಪ ಅಮ್ಮನ ಆಸೆಯಾಗಿತ್ತು. ಆದರೆ ನಾವು ಮೂವರೂ ಗಂಡು ಮಕ್ಕಳು. ಹೀಗಾಗಿ ನಮ್ಮ ಮನೆಯಲ್ಲಿ ಜನಿಸಿದ ಪ್ರಥಮ ಹೆಣ್ಣು ಮಗು ಅನನ್ಯ.
ಮಗು ಹುಟ್ಟುವ ಮುನ್ನವೇ ನಾನೊಬ್ಬ ಬದಲಾದ ವ್ಯಕ್ತಿಯಾಗಿದ್ದೆ. ಇನ್ನು ಅನನ್ಯ ಹುಟ್ಟಿದ ಮೇಲಿನ ಕಥೆಯೇ ಬೇರೆ. ಯಾವುದೇ ಮಗುವನ್ನ ನೋಡಲಿ ಆ ಮಗುವಿನಲ್ಲಿ ನಾನು ಅನನ್ಯಳನ್ನ ಕಾಣಲು ಶುರು ಮಾಡಿದೆ. ಅಬ್ಬಾ ಅದೆಂತಹ ಶಕ್ತಿಯಿದೆ ಈ ಮಮಕಾರದಲ್ಲಿ ಎನ್ನಿಸಿದ್ದು ಉಂಟು. ಅಲ್ಲಿಯವರೆಗೆ ಎಷ್ಟೋ ಮಕ್ಕಳನ್ನ ನೋಡಿದ್ದೆ. ನನ್ನ ಮನೆಯಲ್ಲಿ ನನ್ನ ಅಣ್ಣನ ಮಗುವನ್ನ ಕೂಡ ಕಂಡವನು. ಉಹೂಂ ಅದ್ಯಾವುದೂ ನಮಗೆ ಮಗುವಾದಾಗ ಅನುಭವದ ಮುಂದೆ ಸೊನ್ನೆ. ಆ ಮಕ್ಕಳನ್ನ ಪ್ರೀತಿಸಲಿಲ್ಲ ಎಂದಲ್ಲ. ಆದರೆ ಇದು ಅಕ್ಷರದಲ್ಲಿ ಬರೆಯಲಾಗದ ಸಂವೇದನೆ.
ಯಾವುದೇ ಕೆಲಸವಿರಲಿ, ಅದೆಷ್ಟೇ ಮುಖ್ಯವಾಗಿರಲಿ ಮೊದಲು ಮಗಳು ನಂತರ ಎಲ್ಲವೂ ಎನ್ನುವ ಮಟ್ಟಕ್ಕೆ ಬದುಕು ಬದಲಾಗಿ ಹೋಯ್ತು. ಅನನ್ಯಳನ್ನ ಮೊದಲ ಬಾರಿಗೆ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಾಡಲು ಬಿಟ್ಟಾಗ ಅವಳಿಗೆ ಕೇವಲ ಹದಿನೆಂಟು ತಿಂಗಳು. ಅವಳ ಪ್ರೀ ಸ್ಕೂಲ್ ಟೀಚರ್ ಅವಳಿಗೆ ಸ್ವಿಮ್ಮಿಂಗ್ ಕಲಿಸುವ ಜವಾಬ್ದಾರಿ ಕೂಡ ಹೊತ್ತಿದ್ದರು. ಅವರು ಸರಾಗವಾಗಿ ಮಗುವನ್ನ ನೀರಿಗೆ ಹಾಕಿ ಕೈಕಾಲಾಡಿಸಲು ಹೇಳುತ್ತಿದ್ದರು. ಅನನ್ಯ ಖುಷಿಯಿಂದ ಇರುತ್ತಿದ್ದಳು. ನನಗೆ ಮಾತ್ರ ಜೀವ ಬಾಯಿಗೆ ಬಂದಿರುತ್ತಿತ್ತು. ಒಂದೆರೆಡು ತರಗತಿಯ ನಂತರ ರಮ್ಯ ಒಬ್ಬಳೇ ಹೋಗುತ್ತಿದ್ದಳು. ಶಾಲೆಗೆ ಬಿಡುವುದಕ್ಕೆ ನನ್ನ ಮತ್ತು ರಮ್ಯಳ ನಡುವೆ ಪುಟಾಣಿ ಕದನ ಏರ್ಪಡುತ್ತಿತ್ತು. ಶಾಲೆಗೆ ಬಿಡುವಾಗ ಕಣ್ತುಂಬ ನೀರು ತುಂಬಿಕೊಂಡು ‘ಪಪ್ಪಾ ಬಿಟ್ಟು ಹೋಗಬೇಡ ‘ ಎಂದಾಗ ಕರುಳು ಕಿತ್ತು ಬರುತ್ತಿತ್ತು . ರಮ್ಯ ಮಾತ್ರ ನಿತ್ಯವೂ ಶಾಲೆಯಿಂದ ಕರೆತರುವ ಕೆಲಸವನ್ನ ಹೊತ್ತಿದ್ದಳು. ಬರುವಾಗ ಮಕ್ಕಳು ಬಹಳ ಖುಷಿಯಾಗಿರುತ್ತವೆ.
ರಮ್ಯಳಿಗೆ ಅನನ್ಯಳನ್ನ ಬೆಂಗಳೂರಿನಲ್ಲಿ ಓದಿಸಬೇಕು, ಕನಿಷ್ಟ ಪ್ರಾಥಮಿಕ ಶಿಕ್ಷಣ ಭಾರತದಲ್ಲಿ ಆದರೆ ಮಗುವಿಗೆ ಸರಿ ತಪ್ಪುಗಳ ನಡುವಿನ ಅಂತರವನ್ನ ಕಲಿಸಲು ಸಾಧ್ಯ ಎನ್ನುವ ಮನೋಭಾವ. ಅವರಿಬ್ಬರೂ ಬೆಂಗಳೂರನ್ನ ಸೇರಿದರು. ಕೆಲಸದ ನಿಮಿತ್ತ ನಾನು ತಕ್ಷಣ ಬರಲಾಗಲಿಲ್ಲ. ಆ ಒಂದು ವರ್ಷ ನನ್ನ ಜೀವನದ ಅತ್ಯಂತ ಕಠಿಣ ವರ್ಷ. ನನ್ನ ಕೆರಿಯರ್ ನ ಉತ್ತುಂಗ ಸ್ಥಿತಿಯನ್ನ ಬಿಟ್ಟು ಮರಳಿ ಭಾರತಕ್ಕೆ ಬರಲು ನನ್ನ ಮಗಳು ಕಾರಣ. ನನ್ನ ಮುಂದೆ ಎರಡು ಆಯ್ಕೆಯಿತ್ತು ಒಂದು ಹಣ, ಕೆರಿಯರ್ ಮತ್ತು ಎರಡನೆಯದಾಗಿ ನನ್ನ ಪರಿವಾರ, ಮಗಳು. ನಾನು ಎರಡನೆಯದನ್ನ ಆಯ್ಕೆ ಮಾಡಿಕೊಂಡೆ.
ಸರಳವಾಗಿ ಹೇಳಬೇಕೆಂದರೆ ಜೀವನದಲ್ಲಿ ನಾನು ಬಹಳಷ್ಟು ಸಿಂಪಥಿಯ ಮಾತುಗಳನ್ನ ಬೇರೆಯವರ ಕುರಿತು ಆಡಿದ್ದೇನೆ. ಯಾರದಾದರೂ ಕಷ್ಟ ಕಂಡಾಗ ಮರುಗುವುದು ಅಯ್ಯೋ ಪಾಪ ಎನ್ನುವುದು ಮಾಡಿದ್ದೇನೆ. ಅದು ಸಿಂಪಥಿ. ಆದರೆ ಅವರಿರುವ ಸ್ಥಿತಿಯಲ್ಲಿ ನಮ್ಮನ್ನ ಊಹಿಸಿಕೊಂಡರೆ ಮಾತ್ರ ನಿಜವಾದ ನೋವಿನ ಅರ್ಥವಾಗುತ್ತದೆ. ಬಾಯಿಮಾತಿಗೆ ಅಯ್ಯೋ ಪಾಪ ಎನ್ನುವುದಕ್ಕೂ ನಿಜವಾಗಿ ಮರುಕ ಪಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂತಹ ಒಂದು ವ್ಯತ್ಯಾಸವನ್ನ ನನ್ನಲ್ಲಿ ತಂದಿದ್ದು ನನ್ನ ಮಗಳು. ಜಗತ್ತಿನ ಜನರಿಗೆಲ್ಲಾ ಸಹಾಯ ಮಾಡುತ್ತೇನೆ ಎನ್ನುವ ಸಿನಿಕತನವಿಲ್ಲ. ಆದರೆ ನನ್ನ ಮಗಳ ವಯಸ್ಸಿನ ಮಕ್ಕಳು ಕಷ್ಟದಲ್ಲಿರುವುದು ಕಂಡಾಗ ಮನಸ್ಸು ಕರಗಿಹೋಗುತ್ತದೆ. ಅದು ಎಂಪಥಿ. ಹೀಗಾಗಿ ಮಗಳ ಜೊತೆಗೆ ಹುಟ್ಟಿದ್ದು ‘ಅನನ್ಯ ಮೂಕನಹಳ್ಳಿ ಫೌಂಡೇಶನ್.’
ಮನುಷ್ಯ ಅದು ಯಾರೇ ಆಗಿರಲಿ ಹೆಣ್ಣು ಅಥವಾ ಗಂಡು, ಪರಿಪೂರ್ಣತೆಯ ಅನುಭವ ಪಡೆಯಲು ಅವರ ಬಾಳಿನಲ್ಲಿ ಮಕ್ಕಳು ಬರಬೇಕು. ಎಂತಹ ದುಷ್ಟರನ್ನೂ ಬದಲಾಯಿಸುವ ದೈವತ್ವ ಮಕ್ಕಳಿಗಿದೆ. ಅಂದಮೇಲೆ ಸಾಮಾನ್ಯ ಜನರ ಮಾತೇನು? ಪೋಷಕರ ಜೀವನ ಪೂರ್ತಿ ಮಕ್ಕಳ ಸುತ್ತಮುತ್ತ ತಿರುಗುತ್ತಿರುತ್ತದೆ. ಆದರೆ ಮಕ್ಕಳು ಬೆಳೆಯುತ್ತಾ ಹೋದಂತೆ ಕೇವಲ ಭಾವನೆ, ಪ್ರೀತಿ ಮಾತ್ರ ಕೆಲಸಕ್ಕೆ ಬರುವುದಿಲ್ಲ. ಪ್ರೀತಿಯ ಜೊತೆಗೆ ಕಲಿಕೆಯ ಬಗ್ಗೆ ಕೂಡ ಗಮನವನ್ನ ಹರಿಸಬೇಕಾಗುತ್ತದೆ. ಈ ಜಗತ್ತಿನಲ್ಲಿ ಮುಕ್ಕಾಲು ಮೂರುಪಾಲು ಜನ ಮಕ್ಕಳನ್ನ ಹೆತ್ತ ಮೇಲೆ ಗೆದ್ದೆವು ಎನ್ನುವ ಭಾವನೆಯನ್ನ ಇಟ್ಟುಕೊಂಡಿದ್ದಾರೆ. ಆದರೆ ಮಕ್ಕಳನ್ನ ಸಾಕುವುದು, ಬೆಳೆಸುವುದು ಹೆಚ್ಚೇನಿಲ್ಲ ಕೇವಲ ೧೮/೨೦ ವರ್ಷದ ತಪಸ್ಸು. ಮಕ್ಕಳು ನಮ್ಮನ್ನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ. ನಾವು ಹೇಳಿದ್ದು ಅವು ಮಾಡುವುದಿಲ್ಲ. ನಾವು ಮಾಡಿದ್ದನ್ನ ಖಂಡಿತ ಅವು ನಕಲು ಮಾಡುತ್ತವೆ. ಈ ನಿಟ್ಟಿನಲ್ಲಿ ಮೊದಲೇ ಹೇಳಿದಂತೆ ಒಂದು ಮಗು ಎಂದರೆ ಅದು ೨೦ ವರ್ಷದ ಪ್ರಾಜೆಕ್ಟ್. ಅವೇನು ಈ ಭೂಮಿಗೆ ಬರುತ್ತೇವೆ ಎಂದು ಬಯಸಿರುವುದಿಲ್ಲ, ನಾವು ನಮ್ಮ ಇಚ್ಛೆಯಿಂದ ಅವುಗಳನ್ನ ಈ ಭೂಮಿಗೆ ತಂದಿರುತ್ತೇವೆ. ಹೀಗಾಗಿ ಅವುಗಳನ್ನ ಉನ್ನತಿಯ ಕಡೆಗೆ ನಡೆಸುವ ಜವಾಬ್ದಾರಿ ನಮ್ಮದು. ನಮ್ಮ ಅಪ್ಪ ಅಮ್ಮ ಎಷ್ಟೆಲ್ಲಾ ಕಷ್ಟ ಪಟ್ಟಿರಬಹದು, ನಮ್ಮ ಭವಿಷ್ಯ, ಆರೋಗ್ಯ ಇತ್ಯಾದಿ ಕುರಿತು ಅವರೆಷ್ಟು ಚಿಂತಿಸಿರಬಹದು ಎನ್ನುವ ಯೋಚನೆಗಳನ್ನ ಕೂಡ ಬಂದದ್ದು ಮಗಳು ಬಂದ ನಂತರವೇ!
ಬದಲಾವಣೆ ಜಗದ ನಿಯಮ ಮಗು ಹುಟ್ಟಿದ ದಿನ, ನಮ್ಮಲಿರುವ ಅಪ್ಪ ಅಥವಾ ಅಮ್ಮ ಹುಟ್ಟಿದ ದಿನ ಕೂಡ ಅಲ್ಲವೇ? ಇಂದು ಜೀವನ ಅತ್ಯಂತ ವೇಗವಾಗಿ ಬದಲಾಗುತ್ತಿದೆ, ನಾವು ನಮ್ಮ ಮಕ್ಕಳೊಂದಿಗೆ ಕಲಿಯುವುದು ಸಾಕಷ್ಟಿದೆ. ಅವರ ಸಮಕ್ಕೆ ಹೆಜ್ಜೆ ಹಾಕಿದರೆ, ಅವರೊಂದಿಗೆ ಹೆಚ್ಚು ವೇಳೆಯನ್ನ ವ್ಯಯಿಸಿದರೆ ಅವು ನಮ್ಮೊಂದಿಗೆ ಕನೆಕ್ಟ್ ಆಗಿರುತ್ತವೆ. ಇಲ್ಲವಾದರೆ ಅಂತರ ಸೃಷ್ಟಿಯಾಗಲು ಬಹಳ ಸಮಯ ಬೇಕಿಲ್ಲ.
ಇದನ್ನೂ ಓದಿ: Girl Child; ಅಪ್ಪನಾಗುವುದೆಂದರೆ: ಮೈಗಂಟಿದ ಚರ್ಮದಂತಹಾ ಕರ್ಮ ಫಲ
Fatherhood: ಕಮಲ ಅಪ್ಪನಿಗೆ ಬಸವ ಅಮ್ಮನಿಗೆ ಯಾಕೆ ಸಹಾಯ ಮಾಡಬಾರದು?
Published On - 1:01 pm, Sat, 20 February 21