Poetry; ಅವಿತಕವಿತೆ: ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗತೊಡಗಿತು

Poem : ‘ಸಂಜೆ ಹೊತ್ತಿಳಿಯುತ್ತಿದ್ದಂತೆ ಪೇಟೆ ನಡುವಿನ ಪಾರ್ಕಿನ ಮಾವು, ಬೇವು, ಆಲದ ಮರಗಳ ಮೇಲೆಲ್ಲ ಕುಳಿತು, ಕವಕವ ಮಾತಾಡಿ, ಎದ್ದು ಬಾನಲ್ಲಿ ಬಗೆಬಗೆಯ ವಿನ್ಯಾಸಗಳ ರೂಪಿಸುತ್ತ ಹಾರಾಡಿ, ಮತ್ತೆ ಮರಕ್ಕೆ ಮರಳಿ ಎಬ್ಬಿಸಿವೆ ಹಕ್ಕಿಗದ್ದಲ. ಈ ಹಕ್ಕಿಗಳ ಚಿಕ್ಕಚಿಕ್ಕ ದನಿಗಳ ಮೊತ್ತ ಪಕ್ಕಕ್ಕೇ ಸಾಗುವ ಭರಭರನೆ ಬಸ್ಸುಗಳ, ಲಾರಿಗಳ, ಕಾರುಗಳ ಎಲ್ಲ ಲೌಕಿಕ ಗೌಜುಗದ್ದಲವ ಮರೆಸುವಂತಿದೆ. ಮತ್ತೇನೋ ಅರಸುವಂತಿದೆ. ನೆಲಬಾನುಗಳ ನಡುವೆ ಸರಸ ನಡೆಸುವಂತಿದೆ. ಇಹಲೋಕದಿಂದ ಸಗ್ಗಕ್ಕೆ, ಸದ್ಯದಿಂದ ಸಾಧ್ಯಕ್ಕೆ, ಆನುವಿನಿಂದ ಅನ್ಯಕ್ಕೆ ಹೊಡೆದ ಸಿಳ್ಳೆಯಂತಿದೆ. ಸತ್ಯ ಸುಳ್ಳಿಗೆ ಕೊಟ್ಟ ಏಟಿನಂತಿದೆ. ಅಷ್ಟೇ, ಸಾಕು ನನ್ನ ಕಾವ್ಯಕ್ಕೆ.’ ಕಮಲಾಕರ ಕಡವೆ

  • TV9 Web Team
  • Published On - 12:01 PM, 21 Feb 2021
Poetry; ಅವಿತಕವಿತೆ: ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗತೊಡಗಿತು
ಕಮಲಾಕರ ಕಡವೆ

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ಅವಿತಕವಿತೆ. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ಕಮಲಾಕರ ಕಡವೆ ಅವರ ಕವನಗಳು ನಿಮ್ಮ ಓದಿಗೆ.

ಪರಿಕಲ್ಪನೆ : ಶ್ರೀದೇವಿ ಕಳಸದ

ಕಮಲಾಕರರದು ನವೋದಯದ ಈಚೆಗಿನ ಓದು ಮತ್ತು ಪ್ರಭಾಗಳಿಂದ ತಯಾರಾದ ಒಂದು ಸ್ಪಷ್ಟ ಮತ್ತು ವಿಶಿಷ್ಟ ಸಂವೇದನೆ. ಈ ಸಂವೇದನೆಯಲ್ಲಿ ನವೋದಯದ ಭೌಮದ, ಅತೀತದ ಆವೇಶ, ಆಟಾಟೋಪಗಳಿಲ್ಲ. ನವ್ಯದ ನವರಾದ ವ್ಯಂಗವಿಲ್ಲ. ಬಂಡಾಯದ ಕೂಗಾಟ, ರೇಗಾಟಗಳಿಲ್ಲ. ಮರ್ತ್ಯದ ಪರಿಧಿಯೊಳಗೆ ಕ್ಷಣಭಂಗುರತೆಯ ಅವಧಿಯೊಳಗೆ ಹಾದು ಹೋಗುತ್ತಿರುವ ಜೀವಜಾತಗಳ ಲೋಕದ ಧ್ಯಾನದೊಂದಿಗಿನ ಅನಿರೀಕ್ಷಿತ ಹೊಳಹುಗಳ, ಅಪರಿಚಿತ ಕೌತುಕಗಳ ಸೂಕ್ಷ್ಮ ನೋಟಗಳು ಈ ಕವಿತೆಗಳ ಮುಖ್ಯಪ್ರಾಣ.
ಡಾ. ಎಚ್​.ಎಸ್​. ಶಿವಪ್ರಕಾಶ

ಕಮಲಾಕರರ ಕವನಗಳಲ್ಲಿ ಶಬ್ದಗಳು ಇಡಿಕಿರಿದು ತುಂಬಿದ್ದರೂ ಪ್ರತೀ ಎರಡು ಶಬ್ದಗಳ ನಡುವೆ ಹಲವು ಮೌನಗಳು ತಲೆಮೆರೆಸಿಕೊಂಡು ಕೂತಿವೆ. ದಿಟ್ಟಿಯಿಡುವಷ್ಟು ದೂರ ತುಂಡರಿಸದೆ ಹರಡಿರುವ ದಟ್ಟ ಕಾನನದ ನಡುವೆಯೂ ಹರಿವ ಹಾರುವ ಎರಗಿ ಎರಗುವ ಬಗೆಬಗೆಯ ಪ್ರಾಣಿಗಳ ಆವಾಸಕ್ಕೆ ತೆರಪಿಸುವ ಹಾಗೆ. ಕಾವ್ಯವೆಂದರೆ ಅಕ್ಕಪಕ್ಕದ ಶಬ್ದಗಳ ಸಹಬಾಳ್ವೆಯೆಂದು ನಂಬಿ ಈ ಕಾನನವ ಹೊಕ್ಕರೆ ನಮಗಿಲ್ಲಿ ಅಚ್ಚರಿಯ ಮೊತ್ತಗಳು ಧುತ್ತನೆ ಎದುರಾಗುತ್ತವೆ. ಪದಪದಕ್ಕೂ ಇಲ್ಲಿ ಹಲವೊಮ್ಮೆ ಹೊಯ್ದಕ್ಕಿ ಬೇಯುವುದಿಲ್ಲ. ಪ್ರತಿಮೆಪ್ರತಿಮೆಗಳು ಕೈಕೈ ಹಿಡಿದು ಗಂಡಹೆಂಡಿರ ಹಾಗೆ ನಡೆಯುವುದಿಲ್ಲ. ಬದಲು, ಹಗ್ಗಜಗ್ಗಾಟದ ಸ್ಫರ್ಧಾಳುಗಳ ಹಾಗೆ ಆಚೀಚೆ ಜಗ್ಗುತ್ತವೆ.
ಅಕ್ಷರ ಕೆ. ವಿ. 

***

ಹಕ್ಕಿ ಕಂಡರೂ ಹಾರಾಟ ಕಾಣದೇ

ಹಕ್ಕಿ ಕಂಡರೂ ಹಾರಾಟ ಕಾಣದೇ
ಅವರೊಳಗೆ ಶಂಕೆ ಮೊದಲಾಯಿತು

ಆ ಪುಟ್ಟಪುಟ್ಟ ಪುಕ್ಕಗಳಲ್ಲಿಯೇ
ನೆಲವ ಮೀರುವುದು
ಗಾಳಿ ಸುಳಿಗಳ ಸೀಳಿ ತೇಲುವುದು,
ಇಳಿದು ಏರುವುದು

ಅದರಾಟವೇ ಅಲ್ಲವೆಂದರು ಅವರು.

ಹಿಡಿದುಹಕ್ಕಿ, ಹಿಚುಕಿಕತ್ತು, ಪ್ರಾಣಕಿತ್ತು
ತೂಗಿದರೂ ಹಾರುವ ಶಕ್ತಿ ಕಾಣಲಿಲ್ಲ

ಹಕ್ಕಿ ನಿಜವೇ ಹೊರತು ಹಾರಾಟ ಅಲ್ಲ
ಎಂದು ಗುಟುರು ಹಾಕಿ ನಡೆದರವರು.

ಅವರದೇ ಎದೆಯೊಳಗಿನ ಹಕ್ಕಿಯೊಂದು
ಸೊರಗತೊಡಗಿತು ಅಂದು.

avitha kavithe

ಕೈಬರಹದೊಂದಿಗೆ

ಒಮ್ಮೊಮ್ಮೆ

ಒಮ್ಮೊಮ್ಮೆ
ನಿನ್ನ ಹುಡುಕುತ್ತ ಹುಡುಕುತ್ತ
ಈ ಟಿವಿಯೂಳಗಣ ಬಗೆಬಗೆಯ ಬಣ್ಣದ
ವಾಯರುಗಳ ಗೋಜಲಾಗುತ್ತೇನೆ
ಎಸಿ, ಪಿನ್ನುಗಳ ಗೂಡಾಗುತ್ತೇನೆ, ಕಾಡಾಗುತ್ತೇನೆ

ಒಮ್ಮೊಮ್ಮೆ ನಿನ್ನ
ಹುಡುಕುತ್ತ ಹುಡುಕುತ್ತ ಫ್ರಿಜ್ಜಿನೊಳಗೆ
ತಣ್ಣನ ಗ್ಲಾಸಿನ ಕಪಾಟಾಗುತ್ತೇನೆ
ಅದರೊಳಗೆ ನಿಧಾನ ಸುಡುವ ಬಲ್ಬಾಗುತ್ತೇನೆ

ಒಮ್ಮೊಮ್ಮೆ ನಿನ್ನ ಹುಡುಕುತ್ತ ಹುಡುಕುತ್ತ
ಗಾಳಿಯಿಂದುಬ್ಬಿದ ಗಾಡಿಯ ಗಾಲಿಯಾಗುತ್ತೇನೆ
ಗಾಡಿಯಿಂಜನ್ನಿನೊಳಗಣ ಪಿಸ್ಟನ್ನಿನಂತೆ
ಒಳಹೊರ ಗಡಬಡ ಬಡಬಡಿಸುತ್ತೇನೆ
ಅದರ ಹಾರ್ನಿನ ಸದ್ದಾಗುತ್ತೇನೆ

ಒಮ್ಮೊಮ್ಮೆ
ನಿನ್ನ ಹುಡುಕುತ್ತ ಹುಡುಕುತ್ತ
ಹೀಗೆ ವಸ್ತುವಾಗಿಬಿಡುವುದೂ
ಸಹ ಸಂಭ್ರಮವೇ ಸರಿ
ಬಗೆಬಗೆಯಲ್ಲಿ ಬಾಳ ದಿನನಿತ್ಯವಾಗುವುದು

ಒಮ್ಮೊಮ್ಮೆ ನಿನ್ನ
ಹುಡುಕುತ್ತ ಹುಡುಕುತ್ತ
ಹೂವಾಗಿ ಬಿಡುತ್ತೇನೆ, ಹೂವ ಮುತ್ತಿರುವ
ತುಂಬಿಯಾಗಿ ಬಿಡುತ್ತೇನೆ
ತುಂಬಿ ಹೊಮ್ಮಿಸುವ ಸಂಗೀತವಾಗುತ್ತೇನೆ

avitha kavithe

ಕಮಲಾಕರ ಅವರ ಕವನ ಸಂಕಲನಗಳು

ಎದೆಯಾಟ

ಡಿಸೆಂಬರ್ ಹತ್ತರ ರಾತ್ರಿ
ಎದೆ ಒಡೆದು ಸಾಯಬಹುದಿತ್ತು.

ಹಲವು ಗಾಯಗಳ ಹೊತ್ತ ಎದೆ
ಈವರೆಗೆ ಹಲ್ಲೆಗಳನೆಲ್ಲ ಹೇಗೆ ತಾಳಿತ್ತು?

ವಿಷಗಳಿಂದ ದಿನಂಪ್ರತಿ ಪಾರಾಗಿ
ತನ್ನ ಜರೂರಿಗಳನ್ನು ಹೇಗೆ ನೀಗಿಕೊಂಡಿತ್ತು?

ಕತ್ತಲು ಮುತ್ತುವ ಕ್ಷಣಕ್ಷಣವೂ
ತನ್ನ ಹಟದಿಂದ ಉಳಿದು ಪ್ರಜ್ವಲಿಸಿತ್ತು.

ತಿರುವುಗಳಲ್ಲಿ ಹೊಸ ಉಸಿರೆತ್ತಿ
ಬರಡು ಬೇನೆಯ ನಡುವಿನಲ್ಲೂ ಚಿಗುರಿತ್ತು.

ಎದೆಯ ಮಾತು ಮನಸಿಗಿಲ್ಲ
ಲೋಕಜ್ಞಾನದೊಳು ಮುಳುಗಿತ್ತು.

ಡಿಸೆಂಬರ್ ಹತ್ತರ ರಾತ್ರಿ
ಎದೆಒಡೆದು ಸಾಯಬಹುದಿತ್ತು.

ಎದೆ ಒಡೆಯುವುದು ಎಂದರೇನು ಎದೆಯೇ?;
ನಿನ್ನಾಟದ ಸೂತ್ರ ನಿನ್ನ ಕೈಯಲ್ಲಿಯೇ ಇರುವುದು.

***

ಪರಿಚಯ : ಕಮಲಾಕರ ಕಡವೆ ಅವರು ಮೂಲತಃ ಉತ್ತರಕನ್ನಡದ ಶಿರಸಿಯ ಕಡವೆ ಗ್ರಾಮದವರು. ಈಗ ಮಹಾರಾಷ್ಟ್ರದ ಅಹಮದನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ ಭಾಷೆಗಳಲ್ಲಿ ಬರವಣಿಗೆ, ಅನುವಾದದಲ್ಲಿ ತೊಡಗಿಕೊಂಡಿರುವ ಅವರು ಈವರೆಗೆ ಚೂರುಪಾರು ರೇಶಿಮೆ, ಮುಗಿಯದ ಮಧ್ಯಾಹ್ನ, ಜಗದ ಜತೆ ಮಾತುಕತೆ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ ‘ನಾಮದೇವ್ ಧಸಾಲ್ ವಾಚಿಕೆ’ ಪ್ರಕಟಿಸಿದ್ದಾರೆ. ಭಾರತೀಯ ಭಾಷೆಗಳಿಂದ ಅನುವಾದಿಸಿದ ಕವನಗಳ ಸಂಕಲನ ‘ಅಕ್ಕಪಕ್ಕದ ಪಾತರಗಿತ್ತಿ’ ಸದ್ಯದಲ್ಲಿಯೇ ಪ್ರಕಟವಾಗಲಿದೆ. ಸಮಕಾಲೀನ ಕಾವ್ಯದ ಇಂಗ್ಲಿಷ್ ಅನುವಾದಗಳ ಪುಸ್ತಕವೊಂದರ ತಯಾರಿಯಲ್ಲಿ ಇದ್ದಾರೆ. ಅವರ ಅಂಕಣ ಬರಹಗಳು ‘ಆಂದೋಲನ’ ಪತ್ರಿಕೆ ಮತ್ತು ‘ಕೆಂಡಸಂಪಿಗೆ’ ವೆಬ್​ನಲ್ಲಿ ಪ್ರಕಟವಾಗುತ್ತಿವೆ.

ಇದನ್ನೂ ಓದಿ : Poetry; ಅವಿತಕವಿತೆ: ಹುಷಾರಾಗಿರು! ಸುಲಭಕ್ಕೆ ಒಪ್ಪಿಸಿಕೊಳ್ಳಬೇಡ

ಇದನ್ನೂ ಓದಿ : ಅವಿತಕವಿತೆ: ಜಿಂಕೆಯ ನೆನಪಿನೊಂದಿಗೆ ಸಂಧ್ಯಾದೇವಿ