ಅಮೇರಿಕ ತೆರಳಲು ಕೇಂದ್ರ ನಿರ್ಬಂಧ ವಿಧಿಸಿದ್ದರಿಂದ ರಾಜ್ಯಕ್ಕೆ ಕನಿಷ್ಠ ₹ 15,000 ಕೋಟಿ ನಷ್ಟವಾಗಿದೆ: ಪ್ರಿಯಾಂಕ್ ಖರ್ಗೆ
ಅನುಮತಿ ಈವಾಗ ನೀಡಿರುವುದನ್ನು ಗೇಲಿ ಮಾಡಿದ ಸಚಿವ, ಟ್ರೇನ್ ಹೋದ ನಂತರ ಟಿಕೆಟ್ ಪಡೆದರೆ ಏನು ಉಪಯೋಗ ಅಂತ ಹೇಳಿದರು. ಮೊದಲು ಯಾಕೆ ಅನುಮತಿ ನಿರಾಕರಿಸಲಾಯಿತು ಮತ್ತು ಈಗ ನೀಡಲಾಗುತ್ತಿದೆ ಅನ್ನೋದು ಅರ್ಥವಾಗದ ವಿಚಾರ, ನಮ್ಮ ಮನವಿ ಪತ್ರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ, ಆದಾಗ್ಯೂ ವಿದೇಶಾಂಗ ಸಚಿವಾಲಯದ ಧೋರಣೆ ಗೊತ್ತಾಗುತ್ತಿಲ್ಲ ಎಂದು ಖರ್ಗೆ ಹೇಳಿದರು.
ಕಲಬುರಗಿ, ಜೂನ್ 24: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ಉದ್ದೇಶಿಸಿ ಮಾತಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಮೆರಿಕ ತೆರಳಲು ಕೇಂದ್ರ ಸರ್ಕಾರ ತನಗೆ ಅನುಮತಿ ನಿರಾಕರಿಸಿದ ಕಾರಣ ಕರ್ನಾಟಕಕ್ಕೆ ಏನಿಲ್ಲವೆಂದರೂ ₹15 ಸಾವಿರ ಕೋಟಿ ನಷ್ಟವಾಗಿರಬಹುದು ಎಂದು ಹೇಳಿದರು. ಹಿಂದೆ ರಾಜ್ಯದ ನಿಯೋಗವೊಂದು (state delegation) ಯುಎಸ್ ಗೆ ಹೋಗಿದ್ದಾಗ ₹ 21,745 ಕೋಟಿ ಹೂಡಿಕೆಯನ್ನು ತರಲಾಗಿತ್ತು, ನಿವೇಶನ ತೊಡಗಿಸಿದ ಕಂಪನಿಗಳಲ್ಲಿ ಹಲವಾರು ಪ್ರತಿಷ್ಠಿತ ಸಂಸ್ಥೆಗಳಿದ್ದವು ಮತ್ತು ಅದರಿಂದ 18-20 ಸಾವಿರ ಜನರಿಗೆ ಉದ್ಯೋಗ ಸಿಕ್ಕಿತ್ತು ಎಂದು ಸಚಿವ ಹೇಳಿದರು. ಈ ಬಾರಿ ಹೋಗದ ಕಾರಣ ಭಾರೀ ಪ್ರಮಾಣದ ನಷ್ಟದೊಂದಿಗೆ ಸುಮಾರು 4-5ಸಾವಿರ ಜನಕ್ಕೆ ಕೆಲಸ ಸಿಗುವ ಅವಕಾಶ ಕೈತಪ್ಪಿದೆ ಎಂದು ಖರ್ಗೆ ವಿಷಾದ ವ್ಯಕ್ತಪಡಿಸಿದರು. ವೀಸಾ ನಿರಾಕರಣೆ ಬಗ್ಗೆ ವಿದೇಶಾಂಗ ಖಾತೆ ಸಚಿವರಿಗೆ ಪತ್ರ ಬರೆದು ಮೂರು ದಿನವಾದರೂ ಉತ್ತರವಿಲ್ಲ, ಕನಿಷ್ಟ ಯಾಕೆ ಅನುಮತಿ ನಿರಾಕರಿಸಲಾಯಿತು ಅಂತನಾದರೂ ಹೇಳಲಿ, ಈ ಭೇಟಿಯಿಂದ ರಾಜ್ಯಕ್ಕಾಗಲೀ, ದೇಶಕ್ಕಾಗಲೀ ಪ್ರಯೋಜನ ಇಲ್ಲ ಅಂತ ಕೇಂದ್ರ ಹೇಳಿದರೆ ಅದನ್ನು ಅಂಗೀಕರಿಸುತ್ತೇವೆ ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ: ನಾವು ಆಟ ಆಡಲು ವಿದೇಶಕ್ಕೆ ಹೋಗ್ತಿಲ್ಲ: ಅಮೆರಿಕಕ್ಕೆ ತೆರಳಲು ಅನುಮತಿ ನೀಡದ್ದಕ್ಕೆ ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ