Body Shaming ; ಸುಮ್ಮನಿರುವುದು ಹೇಗೆ? : ‘ಬುರ್ಖಾದೊಳಗಿದ್ದುಕೊಂಡೇ ಓದುತ್ತಾಳಂತೆ’ ಅಚ್ಚರಿಯೋ ಕುಹಕವೋ ಮೆಚ್ಚುಗೆಯೋ?

‘ವಿಚಿತ್ರ ಎಂದರೆ ಈ ಎಲ್ಲಾ ಉತ್ಪನ್ನಗಳು ಹೆಣ್ಣಿನ ಸುತ್ತಲೇ ಸುತ್ತುತ್ತವೆ. ಮಾರುಕಟ್ಟೆಯ ತುತ್ತತುದಿಯಲ್ಲಿ ಕೂತು ಇವೆಲ್ಲವನ್ನೂ ಉತ್ಪಾದಿಸುವವನು ಮಾತ್ರ ಗಂಡಸು. ಅವನು ಹೆಣೆಯುವ, ಅವನು ರೂಪಿಸುವ ಸೌಂದರ್ಯದ ಬಲೆಯೊಳಗೆ ಹೆಣ್ಣು ಸುಮ್ಮನೆ‌ ಸವೆಯುತ್ತಾಳೆ, ತನ್ನದಲ್ಲದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಹೆಣಗುತ್ತಾಳೆ. ತಾನು ಇದ್ದಂತೆ ತನ್ನನ್ನು ಆಕೆ ಒಪ್ಪಿಕೊಂಡ ಮರುಕ್ಷಣ ಮಾರುಕಟ್ಟೆಯ ತುದಿಯಲ್ಲಿ ಕೂತ ಗಂಡಸಿನ ಅಹಂ ಮತ್ತು ಉತ್ಪನ್ನ ಎರಡೂ ಮುರಿದು ಬೀಳುತ್ತದೆ. ಆದರೆ ಅವಳು ಹಾಗೆ ಒಪ್ಪಿಕೊಳ್ಳದಂತ ಸ್ಥಿತಿಯಲ್ಲಿ ಸದಾ ಇರುವಂತೆ ನೋಡಿಕೊಳ್ಳಲಾಗುತ್ತಿದೆ.‘ ಫಾತೀಮಾ ರಲಿಯಾ ಹೆಜಮಾಡಿ

Body Shaming ; ಸುಮ್ಮನಿರುವುದು ಹೇಗೆ? : ‘ಬುರ್ಖಾದೊಳಗಿದ್ದುಕೊಂಡೇ ಓದುತ್ತಾಳಂತೆ’ ಅಚ್ಚರಿಯೋ ಕುಹಕವೋ ಮೆಚ್ಚುಗೆಯೋ?
ಲೇಖಕಿ ಫಾತೀಮಾ ರಲಿಯಾ ಹೆಜಮಾಡಿ
Follow us
|

Updated on: Apr 14, 2021 | 5:03 PM

ಜನಪ್ರತಿನಿಧಿಗಳೇ, ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

‘ಇತರರಿಗೆ ಅನಗತ್ಯ ಸಲಹೆ ಕೊಡುವುದು ಕೆಲಸ ಇಲ್ಲದ, ಆತ್ಮತೃಪ್ತಿ ಇಲ್ಲದ ಜನರ ಕೀಳು ಖಯಾಲಿ ಎನ್ನುವುದು ಅರ್ಥವಾದಂತೆ ದೇಹದ ಬಗೆಗಿನ ಎಲ್ಲಾ ಕಮೆಂಟ್​ಗಳನ್ನು ನಿರ್ಲಕ್ಷಿಸಲು, ತಾತ್ಸಾರ ಮಾಡಲು ಬದುಕು ಕಲಿಸಿತು; ಬೌದ್ಧಿಕವಾಗಿ ಬೆಳವಣಿಗೆಯಾಗದ ಜನ ಸದಾ ಇತರರ ದೇಹದ ಕುರಿತು ಆಡಿಕೊಳ್ಳುತ್ತಾರೆ.’ ಕವಿ, ಲೇಖಕಿ ಫಾತೀಮಾ ರಲಿಯಾ ಹೆಜಮಾಡಿ

ಹೆಣ್ಣಿನ ದೇಹ, ಬಣ್ಣ ಅನಾದಿ ಕಾಲದಿಂದಲೂ ‘ಬಿಸಿಬಿಸೀ ವಿಷಯ’. ನಾಲ್ಕು ಮಂದಿ ಸೇರಿರುವ ಮದುವೆಯಂತಹ ಸಮಾರಂಭದಲ್ಲಾಗಿರಲಿ, ಸಾವಿರಾರು ಮಂದಿ ಸೇರುವ ಸಾಹಿತ್ಯ ಗೋಷ್ಠಿಯಂತಹ ಸಮಾರಂಭವೇ ಆಗಿರಲಿ ಹೆಣ್ಣನ್ನು ಹೀಗೆಳೆಯುವ ಕಾರ್ಯಕ್ಕೆ ಮಾತ್ರ ಯಾವ ವಿನಾಯಿತಿಯೂ ಇಲ್ಲ. ಬಣ್ಣ, ರೂಪ, ಆಳ್ತನ, ಕೂದಲು, ಮೈಕಟ್ಟು ಹೆಣ್ಣಿಗೊಂದು ಹಣೆಪಟ್ಟಿ ಹಚ್ಚಲು ಎಷ್ಟೊಂದು ನೆವಗಳು!

ಒಮ್ಮೆ ‘ಸೌಂದರ್ಯ’ದ ಮಾರುಕಟ್ಟೆಯನ್ನು ಸುತ್ತಿ ಬಂದರೆ ಸಾಕು, ಬೆಳ್ಳಗಾಗಲು, ತೆಳ್ಳಗಾಗಲು, ದಪ್ಪ ಆಗಲು ಎಷ್ಟೊಂದು ಔಷಧಗಳು, ಕ್ರೀಂಗಳು, ಸೌಂದರ್ಯ ವರ್ಧಕ ಉತ್ಪನ್ನಗಳು ಇವೆ ಎನ್ನುವುದು ಅರ್ಥವಾಗುತ್ತದೆ. ಆದರೆ ವಿಚಿತ್ರ ಎಂದರೆ ಈ ಎಲ್ಲಾ ಉತ್ಪನ್ನಗಳು ಹೆಣ್ಣಿನ ಸುತ್ತಲೇ ಸುತ್ತುತ್ತವೆ. ಮಾರುಕಟ್ಟೆಯ ತುತ್ತ ತುದಿಯಲ್ಲಿ ಕೂತು ಇವೆಲ್ಲವನ್ನೂ ಉತ್ಪಾದಿಸುವವನು ಮಾತ್ರ ಗಂಡಸು. ಅವನು ಹೆಣೆಯುವ, ಅವನು ರೂಪಿಸುವ ಸೌಂದರ್ಯದ ಬಲೆಯೊಳಗೆ ಹೆಣ್ಣು ಸುಮ್ಮನೆ‌ ಸವೆಯುತ್ತಾಳೆ, ತನ್ನದಲ್ಲದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಹೆಣಗುತ್ತಾಳೆ. ತಾನು ಇದ್ದಂತೆ ತನ್ನನ್ನು ಹೆಣ್ಣು ಒಪ್ಪಿಕೊಂಡ ಮರುಕ್ಷಣ ಮಾರುಕಟ್ಟೆಯ ತುದಿಯಲ್ಲಿ ಕೂತ ಗಂಡಸಿನ ಅಹಂ ಮತ್ತು ಉತ್ಪನ್ನ ಎರಡೂ ಮುರಿದು ಬೀಳುತ್ತದೆ. ಆದರೆ ಅವಳು ಹಾಗೆ ಒಪ್ಪಿಕೊಳ್ಳದಂತ ಸ್ಥಿತಿಯಲ್ಲಿ ಸದಾ ಇರುವಂತೆ ನೋಡಿಕೊಳ್ಳಲಾಗುತ್ತಿದೆ.

ಈಗೀಗ ಕಪ್ಪಗಿರುವುದು ತಪ್ಪಲ್ಲ ಅನ್ನುವ ಚರ್ಚೆ ಚಾಲ್ತಿಗೆ ಬರುತ್ತಿದೆ. ಶತಮಾನಗಳಿಂದ ವರ್ಣಭೇದ ನೀತಿಯಲ್ಲಿ ಕರಟಿ ಹೋಗಿರುವವರ ನೋವು, ಸಂಕಟ, ಅವಮಾನಗಳ ಮಧ್ಯೆ ಬೆಳ್ಳಗಿರುವವರು ಅಲ್ಲಿ, ಇಲ್ಲಿ ಅವಮಾನಕ್ಕೊಳಗಾಗುವುದು ದೊಡ್ಡ ಅಪರಾಧವೆಂದು ಅನ್ನಿಸುವುದಿಲ್ಲ. ಆದರೆ ಬೆಳ್ಳಗಿರುವುದೂ ಅಪರಾಧವಲ್ಲವಲ್ಲಾ?

ನಾನು ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಭಾಷಾ ಮತ್ತು ವ್ಯಾಕರಣ ಪ್ರೇಮಿಯಾಗಿರುವ ಕನ್ನಡ ಮೇಷ್ಟ್ರು ಪರೀಕ್ಷೆಯಲ್ಲಿ ನಾಲ್ಕು ಅಂಕದ ಪ್ರಶ್ನೆಯೊಂದಕ್ಕೆ ಪೂರ್ತಿ ಅಂಕ ಕೊಟ್ಟುಬಿಟ್ಟಿದ್ದರು. ಪಕ್ಕದಲ್ಲಿ ಕೂರುವ ಗೆಳತಿ ನನ್ನಷ್ಟೇ ಉತ್ತರ ಬರೆದಿದ್ದರೂ ಎರಡೇ ಅಂಕ. ಅಕ್ಷರ ತಪ್ಪು, ವ್ಯಾಕರಣ ದೋಷ ಗಣನೆಗೆ ತೆಗೆದುಕೊಳ್ಳದ ಆಕೆ ‘ನೀನು ಬೆಳ್ಳಗಿರುವುದಕ್ಕೆ ಪೂರ್ತಿ ಅಂಕ ಕೊಟ್ಟಿದ್ದಾರೆ ನೋಡು’ ಎಂದು ಮೂತಿ ತಿರುವಿದಳು. ಆ ಕ್ಷಣಕ್ಕೆ ನನ್ನ ಬಣ್ಣದ ಬಗ್ಗೆ ನನಗೆ ಅಸಹ್ಯವೆನಿಸಿಬಿಟ್ಟಿತ್ತು. ಭಾಷೆಯ ಮೇಲೆ ನನಗಿರುವ ಪ್ರೀತಿ, ಹಿಡಿತಕ್ಕಿಂತ ನಾನು ‘ಅರ್ಜಿ ಹಾಕದೆ’ ಪಡೆದುಕೊಂಡ ಬಣ್ಣವೇ ಹೆಚ್ಚು ಮುಖ್ಯವಾಯಿತಲ್ಲಾ ಎಂದು ಸಂಕಟವಾಗುತ್ತಿತ್ತು.

ಶೈಕ್ಷಣಿಕ ಬದುಕಿನಲ್ಲಿ ಹೀಗೆ ಬಣ್ಣದ ಕಾರಣಕ್ಕೆ ನನ್ನ ಪರಿಶ್ರಮ, ಕಸುವು‌ ಮಣ್ಣುಪಾಲಾದದ್ದು ಎಷ್ಟು ಬಾರಿಯೋ! ಬಣ್ಣ ಮುನ್ನೆಲೆಗೆ ಬಾರದೇ ಇರಲಿ ಎಂದು ಎಷ್ಟೋ ಬಾರಿ ನಾನು‌ ಹಲವು ಸ್ಪರ್ಧೆಗಳಿಂದ ಹಿಂದಡಿ ಇಟ್ಟದ್ದಿದೆ. ಬಹುಶಃ ಮನೆಯಿಂದ ಹೊರಗೆ ದುಡಿದ್ದಿದ್ದರೆ (ಮನೆಯೊಳಗಿನ ಕೆಲಸವನ್ನು ‘ದುಡಿಮೆ’ ಎಂದು ಸ್ವೀಕರಿಸುವಷ್ಟು ಸಮಾಜ ಇನ್ನೂ ಪಕ್ವವಾಗಿಲ್ಲ ಅನ್ನುವುದು ಬೇರೆ ಮಾತು) ಇದರಾಚೆಗಿನ ಅನುಭವವೂ ಆಗುತ್ತಿತ್ತೇನೋ.

ಮೊನ್ನೆ ಮೊನ್ನೆಯ ಹಾಗೆ ಭಾಗವಹಿಸಿದ್ದ ಕವಿಗೋಷ್ಠಿ ಮುಗಿದು ವೇದಿಕೆಯಿಂದ ಇಳಿಯುತ್ತಿದ್ದಂತೆ ವೇದಿಕೆಯ ಮೇಲಿದ್ದ ಕವಯಿತ್ರಿ ಒಬ್ಬರು ನನ್ನ ಹತ್ತಿರ ಕರೆದು ‘ಎಷ್ಟು ಬೆಳ್ಳಗಿದ್ದೀಯಾ’ ಎಂದು ರಾಗವೆಳೆದಿದ್ದರು. ನನ್ನ ಕವಿತೆಯ, ವಾಚನದ ಬಗೆಗೆ ಮೆಚ್ಚುಗೆ ಅಥವಾ ವಿಮರ್ಶೆ ವ್ಯಕ್ತಪಡಿಸುತ್ತಾರೆ ಅಂದುಕೊಂಡಿದ್ದ ನನಗೆ ಒಂದು ಕ್ಷಣಕ್ಕೆ ಪುಟ್ಟ ಆಘಾತ, ಮರುಕ್ಷಣ ಇದೆಲ್ಲಾ ಇದ್ದಿದ್ದೇ ಬಿಡು ಅನ್ನಿಸುವಷ್ಟರ ಮಟ್ಟಿಗೆ ಇಂತಹ ಘಟನೆಗಳು ಸಲೀಸಾಗಿವೆಯಲ್ಲಾ ಅನಿಸಿತು.

ತೆಳ್ಳಗಿರುವದಕ್ಕೂ ನಾನು ಅನುಭವಿಸಿದ ಮಾನಸಿಕ ಹಿಂಸೆ ಅಷ್ಟಿಷ್ಟಲ್ಲ. ಇಷ್ಟಪಟ್ಟು ಧರಿಸಿದ ಡ್ರೆಸ್ ನೋಡಿ ‘ನೀನು ಚೂರು ದಪ್ಪಗಿರುತ್ತಿದ್ದರೆ ಎಷ್ಟು ಚೆನ್ನಾಗಿ ಕಾಣುತ್ತಿದ್ದಿ’ ಅನ್ನುವಲ್ಲಿಂದ ‘ಇಷ್ಟು ಓದಿಸಬಾರದಿತ್ತು, ಹದಿನಾರು ವರ್ಷಕ್ಕೆ ಮದುವೆ ಮಾಡಿಸಿಬಿಟ್ಟಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ, ಎಷ್ಟು ತೆಳ್ಳಗಿರುವವಳನ್ನು ಯಾರು ಮದುವೆಯಾದಾರು?’ ಎಂದು ಅಪ್ಪಅಮ್ಮನನ್ನು ಕಾಡಿಸಿದವರು ಎಷ್ಟು ಮಂದಿಯೋ? ಮದುವೆಯಾದಮೇಲೆ ‘ಎಷ್ಟು ತೆಳ್ಳಗಿದ್ದಾಳೆ! ಗರ್ಭ ಧರಿಸುವುದೇ‌‌ ಇಲ್ಲ ಇವಳು’ ಎಂದು ಮಾತಾಡಿಕೊಂಡವರದೂ‌ ದೊಡ್ಡ ಸಂಖ್ಯೆಯೇ. ಆದರೆ ದಪ್ಪಗಾಗುವ, ತೆಳ್ಳಗಾಗುವ, ಬಿಳಿಯಾಗುವ ಅನಗತ್ಯದ ಸಲಹೆ ಕೊಡುವುದು ಕೆಲಸ ಇಲ್ಲದ, ಆತ್ಮತೃಪ್ತಿ ಇಲ್ಲದ ಜನರ ಕೀಳು ಖಯಾಲಿ ಎನ್ನುವುದು ಅರ್ಥವಾದಂತೆ ದೇಹದ ಬಗೆಗಿನ ಎಲ್ಲಾ ಕಮೆಂಟ್‌ಗಳನ್ನು ನಿರ್ಲಕ್ಷಿಸಲು, ತಾತ್ಸಾರ ಮಾಡಲು ಬದುಕು ಕಲಿಸಿತು. ಬೌದ್ಧಿಕವಾಗಿ ಬೆಳವಣಿಗೆಯಾಗದ ಜನ ಸದಾ ಇತರರ ದೇಹದ ಕುರಿತು ಆಡಿಕೊಳ್ಳುತ್ತಾರೆ.

ಇವೆಲ್ಲಾ ಕಣ್ಣಿಗೆ ರಾಚುವ ಬಾಡಿ ಶೇಮಿಂಗ್ ಆದರೆ, ಮದುವೆಯಾಗದ ಹುಡುಗಿಯ ಬಳಿ ‘ಇನ್ನೂ‌‌ ಮದುವೆ ಆಗಿಲ್ವಾ’ ಎಂದು ಕೇಳುವುದು, ‘ಮದುವೆಯಾದ ಮೇಲೆ ಮಕ್ಕಳಾಗಿಲ್ವಾ’ ಎಂದು ಪ್ರಶ್ನಿಸುವುದು‌ ಎಲ್ಲಾ ಮತ್ತೊಂದು ರೀತಿಯ ಬಾಡಿ ಶೇಮಿಂಗ್. ಮೊನ್ನೆಮೊನ್ನೆಯ ಹಾಗೆ ಎಪ್ಪತ್ತಮೂರು ವರ್ಷ ವಯಸ್ಸಿನ ಮಹಿಳೆಯೊಬ್ಬರು ಮದುವೆಯಾಗಲು ವರ ಬೇಕು ಎಂದು ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟಾಗ, ವಿದ್ಯಾವಂತರು, ತಿಳಿವಳಿಕಸ್ಥರು ಅನ್ನಿಸಿಕೊಂಡವರೇ ಆ ಮಹಿಳೆಯನ್ನು ಆಡಿಕೊಂಡು ನಕ್ಕರು. ಕೆಲವು ದಿನಗಳವರೆಗೆ ಸೋಶಿಯಲ್ ಮೀಡಿಯಾದ ಟ್ರೋಲ್ ಪೇಜ್‌ಗಳಿಗೆ ಅವರೇ ಆಹಾರ. ಎಂಥಾ ಅಸೂಕ್ಷ್ಮತೆಯಿದು! ಮದುವೆ, ಮಕ್ಕಳಂತಹ ತೀರಾ ವೈಯಕ್ತಿಕ ನಿರ್ಧಾರಗಳಲ್ಲಿ ಇತರರು ಮೂಗು ತೂರಿಸಬಾರದು ಅನ್ನುವ ಕನಿಷ್ಟ ಪ್ರಜ್ಞೆಯೂ ನಮ್ಮಲ್ಲಿ ಇಲ್ಲದೇ ಹೋಯ್ತಲ್ಲ.

ಇಂತಹ ಕೀಳು‌ ಮನಸ್ಥಿತಿಗಳನ್ನೆಲ್ಲಾ ಪೂರ್ತಿ‌ ಕಡೆಗಣಿಸಿ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಆಂತರಿಕ ಸೌಂದರ್ಯದ ಪಾಠ ಮತ್ತು ಗಂಡು‌ ಮಕ್ಕಳಿಗೆ ಹೆಣ್ಣಿನ ದೇಹ ಮಾರುಕಟ್ಟೆಯಲ್ಲಿನ ಸರಕಲ್ಲ ಎನ್ನುವುದನ್ನು ತಾಯಯಂದಿರಾಗಿ ನಾವು ಅರ್ಥ ಮಾಡಿಸಬೇಕು ಅನ್ನಿಸುತ್ತದೆ. ಆದರೆ ಮುಖಕ್ಕೆ ಹಚ್ಚಿಕೊಳ್ಳುವ ಕ್ರೀಂ, ಅದ್ಯಾವುದೋ ಲೋಶನ್, ಪೌಡರ್ ಇವೆಲ್ಲವನ್ನೂ ನನ್ನ ಬೀರು ಮತ್ತು ಬದುಕಿನಿಂದ, ಅವೆಲ್ಲವೂ ಪರೋಕ್ಷವಾಗಿ ವರ್ಣಭೇದ ನೀತಿಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಹೆಣ್ಣಿನ ಅಸ್ಮಿತೆಯನ್ನು ಸದಾ ಪ್ರಶ್ನಿಸುತ್ತದೆ ಎನ್ನುವ ಕಾರಣಕ್ಕೆ ದೂರ ಇಟ್ಟಿದ್ದರೂ ವರ್ಷಕ್ಕೊಂದೋ ಎರಡೋ ಬಾರಿ ಸಿಗುವ, ಮಾತಾಡಿಸುವ ಪರಿಚಿತರಷ್ಟೇ ಆಗಿರುವ ಸಂಬಂಧಿಕರು ‘ನಿನ್ನ ಮಗಳು ನಿನ್ನ ಬಣ್ಣವನ್ನು ಹೊತ್ತು ತಂದಿಲ್ಲವಲ್ಲಾ’ ಎಂದು ಒಂದು ದೂರಿನಂತೆ, ಅಪರಾಧವೆಂಬಂತೆ ಲೊಚಗುಟ್ಟಿದಾಗ ಸಂಕಟ, ಸಿಟ್ಟು ಎರಡೂ ಎದೆಯಾಳದಿಂದ ಎದ್ದು ಬರುತ್ತದೆ, ಜೊತೆಗೆ ಮಗಳು ದೊಡ್ಡವಳಾದ ಮೇಲೆ ಇದೇ ಪ್ರಶ್ನೆ ಎತ್ತಿದರೆ ಎನ್ನುವ ದೂರದ ಆತಂಕವೂ. ಹೀಗೆ ಏನೆಲ್ಲ ಸಂಕಟ ಸುಳಿಗಳೊಳಗೇ ಕವನಗಳು ಅರಳುತ್ತವೆ.

ಬರೆಯದೇ ಉಳಿದ ಪದ್ಯ

ಬರೆಯದೇ ಉಳಿದ ಮೊದಲ ಪದ್ಯವ ಓದಿದ್ದು ಯಾರೋ? ಅಸ್ಪಷ್ಟ ಭಾವಬಿಗಿತಗಳು ಎದೆಯ ಕುಲುಮೆಯಲಿ ಕುದಿದದ್ದಷ್ಟೇ ಗೊತ್ತು

ಹೆಚ್ಚೆಂದರೆ ಅದು, ಅರೆ ಬೆಂದ ಕಮಟು ವಾಸನೆ ತುಟಿಯ ಸುಟ್ಟ ಸಿಗರೇಟಿನ ಕುರುಹು ತಂತಿ ಹರಿದ ಹಳೆಯ ವೀಣೆ ಬೇರು ಸತ್ತು ಹೂವು ಬಿಟ್ಟ ಮರ ಅಲ್ಲಲ್ಲಿ ಸೋರುವ ವ್ರಣದಂಥ ಪದ್ಯ

ಪುಟ್ಟ ಬಂಡಾಯ, ಒಂದು ಉತ್ಕಟ ಪ್ರೇಮ ಅಥವಾ ಭಾವಯಾನದ ಉತ್ಕೃಷ್ಟ ಗೀತೆ ಯಾವುದೂ ಅಲ್ಲದ, ಛಂದಸ್ಸು, ಲಾಲಿತ್ಯಗಳಿಲ್ಲದ ಬೆತ್ತಲೆ ಪದಗಳ ಪದ್ಯ ಬರೆಯದೇ ಉಳಿದದ್ದು

ಹೆಪ್ಪುಗಟ್ಟಿದ ಮೋಡ ಮಳೆ ಸುರಿಸೀತಷ್ಟೆ ಕಾಳಿದಾಸ, ಅವನ ಉಜ್ಜೈನಿ ಮೇಘ ಸಂದೇಶದ ಭ್ರಾಂತಿಯೇನಿರಲಿಲ್ಲ ಜೋರು ಮಳೆಗೆ ಶುಭ್ರವಾದ ಸರಕಾರಿ ಶಾಲೆಯ ತಗಡು ಬೋರ್ಡಿನಷ್ಟೇ ಸತ್ಯ ಮೊದಲ ಪದ್ಯ

‘ಬುರ್ಖಾದೊಳಗಿದ್ದುಕೊಂಡೇ ಓದುತ್ತಾಳಂತೆ’ ಉದ್ಘಾರ ಅಚ್ಚರಿಯೋ ಕುಹಕವೋ ಮೆಚ್ಚುಗೆಯೋ ಅರ್ಥವಾಗದಷ್ಟು ಬೋಳೇತನ ಮೊದಲ ಪದ್ಯಕ್ಕಿತ್ತು ಹಾಗೆಂದೇ ಅದು ಬರೆಯದೇ ಉಳಿದದ್ದು

ಬಹುಶಃ ಜ್ಯಾಮಿತಿ ಮಿತಿಯ ಮೀರಿ ಚಿತ್ರ ವಿಚಿತ್ರ ರೇಖೆಗಳಲರಳುವ ಪದ್ಯಗಳಷ್ಟೇ ಬರೆಯದೇ ಉಳಿದು ಎದೆಯ ಬಯಲಲಿ ನವಿಲುಗರಿಗಳಾಗುವುದು.

body shaming

ಸೌಜನ್ಯ : ಅಂತರ್ಜಾಲ

ಎದೆಯ ಸಂಕಟ ಬೆನ್ನೇರುತ್ತದೆ

ಇಫ್ತಾರಿನ ಟೇಬಲ್ ಮುಂದೆ ಕೂತಾಗ ಗಂಟಲ ಮುಳ್ಳಾಗಿ ಕಾಡುತ್ತಾಳೆ ಸಾರಾ ಶಗುಫ್ತಾ ರಮದಾನಿನ ರಾತ್ರಿಗಳಲ್ಲೂ ಅದೆಷ್ಟು ಬಾರಿ ಮಗ್ಗುಲು ಬದಲಾಯಿಸಿರಬಹುದು ಆಕೆ ಕವಿಯನ್ನು ವರಿಸಿದ ತಪ್ಪಿಗೆ?

ಖರ್ಜೂರದ ಚೂರು ಒಳಗಿಳಿದಂತೆ ಸಾರಾಗೂ ಸಿಗಬಾರದಿತ್ತೆ ಒಬ್ಬ ಕೃಷ್ಣ ರಾಧೆಗೊಲಿದಂತೆ ಎನ್ನುವ ಭಾವ ಒತ್ತರಿಸಿ ಬರುತ್ತದೆ ಅಥವಾ ಕೃಷ್ಣನೂ ನಿರಾಕರಿಸಿಬಿಟ್ಟರೆ? ಮತ್ತೆ ದಿಗಿಲಿಗೆ ಬೀಳುತ್ತೇನೆ

ಹಾಸಿಗೆಯಲಿ ಅವಿತಿರುವ ಹಳೆಯ ದುಃಖ ರಾತ್ರಿಗಳಲಿ ಚಳ್ಳನೆ ಚುಚುತ್ತದೆ ಬೆತ್ತಲೆ ಬೆನ್ನನು ಧಿಗ್ಗನೆ ಎದ್ದು ಕೂರುತ್ತೇನೆ ಬೆನ್ನು ಸವರುತ್ತಾ ಮಥುರೆಗೂ ಲಾಹೋರಿಗೂ ಎಷ್ಟು ಯುಗಗಳ ದೂರ? ತಪ್ಪು ಲೆಕ್ಕಕ್ಕೆ ನಗುತ್ತಾಳೆ ಅಂಗೈ ರೇಖೆಗಳಲ್ಲಿನ ಸಾರಾ

ಕ್ಷಣಕ್ಕೊಮ್ಮೆ ಬದಲಾಗುವ ಮಳೆಗಾಲದ ಆಕಾಶ ಈ ಮೌನ, ಅಮ್ಮನ ಸೆರಗು, ಮಳೆ, ಥಂಡಿ ಗಾಳಿ ಬಿಳಿಮರಳಿನಂಥಾ ಪದ್ಯ ಎಷ್ಟು ಚಂದ ಈ ಜಗತ್ತು ಅಂದುಕೊಳ್ಳುತ್ತಿರುವಾಗಲೇ ಎಂದೂ ತೀರದ ತೃಷೆಗೆ ಬಲಿಯಾದ ಹಾಲುಗಲ್ಲದ ಮಗು ಎದೆಯ ಸಂಕಟವಾಗಿ ಬೆನ್ನೇರುತ್ತಾಳೆ ಬೇತಾಳದಂತೆ

ಹೊರಲಾಗದ, ಇಳಿಸಲೂ ಆಗದ ಭಾರ ಹೊತ್ತುಕೊಂಡ ನಾನು ಕಣ್ಣು ಹೊರಳಿಸುತ್ತೇನೆ ಸಾರಾಳತ್ತ ಜಗದ ಎಲ್ಲ ಪಾಪಿ ಗಂಡಸರ ಚಿತ್ರ ಕೆಡಿಸುವ ಕ್ಷುದ್ರ ದೇವತೆಯಂಥ ನಿಗಿ ನಿಗಿ ಕೆಂಡ ಅವಳು ಕೃಷ್ಣನಿಗೂ ಈಗೀಗ ಸಂಜ್ಞೆಗಳು ಅರ್ಥಾಗುವುದಿಲ್ಲವೇನೋ?

* ಪರಿಚಯ : ಫಾತಿಮಾ ರಲಿಯಾ ಓದಿರುವುದು ಎಮ್‌ಬಿಎ. ಉಡುಪಿ ಜಿಲ್ಲೆಯ ಹೆಜಮಾಡಿ ಎಂಬ ಕಡಲ ತೀರದ ಊರಲ್ಲಿ ವಾಸ. ಓದು ನನ್ನ ಬದುಕು ಮತ್ತು ಬರಹ ಬದುಕಿಗಂಟಿಕೊಂಡಿರುವ ಗೀಳು. ನಾಡಿನ ಹಲವು ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನಗಳು ಪ್ರಕಟವಾಗಿವೆ. ‘ಸುಧಾ ಯುಗಾದಿ ವಿಶೇಷಾಂಕ’ಕ್ಕೆ ಬರೆದ ಲಲಿತ ಪ್ರಬಂಧಕ್ಕೆ ಮೊದಲ ಬಹುಮಾನ ದೊರಕಿದೆ. ಉಳಿದಂತೆ ಬದುಕಿನ ಬಗ್ಗೆ ಅಗಾಧ ಅಚ್ಚರಿ ಮತ್ತು ಕುತೂಹಲ ಇರುವ, ಬದುಕು‌ ಕಲಿಸಿದ್ದನ್ನೆಲ್ಲಾ ಅಚ್ಚುಕಟ್ಟಾಗಿ ಕಲಿಯಬೇಕು ಅಂದುಕೊಂಡಿರುವ ವಿಧೇಯ ವಿದ್ಯಾರ್ಥಿನಿ.

ಇದನ್ನೂ ಓದಿ : Body Shaming; ಸುಮ್ಮನಿರುವುದು ಹೇಗೆ? : ನನ್ನ ದೇಹದಲ್ಲಿ ನಾನಿರಬೇಕೇ ಹೊರತು ಇತರರ ಅನಿಸಿಕೆಗಳಲ್ಲ!

Summaniruvudu Hege series on body shaming controversial statement by Dindigul Leoni and response from writer Fathima Raliya Hejamady

ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ