AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈ ಹಿಂದ್ ಜೈ ಸಿಂಧ್’ ಬಾಲಿವುಡ್ ಸಿನಿಮಾಗೆ ಇಂದ್ರಜಿತ್ ಲಂಕೇಶ್ ನಿರ್ದೇಶನ

ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ‘ಜೈ ಹಿಂದ್ ಜೈ ಸಿಂಧ್’ ಬಾಲಿವುಡ್ ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾಗೆ ಉತ್ತರಾಖಂಡದಲ್ಲಿ ಕೊನೇ ಹಂತದ ಚಿತ್ರೀಕರಣ ಮಾಡಲಾಗುತ್ತಿದೆ. ಹಲವು ಕಲಾವಿದರು ನಟಿಸುತ್ತಿದ್ದಾರೆ. ಇತ್ತೀಚೆಗೆ ಡೆಹ್ರಾಡೂನ್​ನಲ್ಲಿ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮತ್ತು ಸುದ್ದಿಗೋಷ್ಠಿ ನಡೆಯಿತು. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಜೈ ಹಿಂದ್ ಜೈ ಸಿಂಧ್’ ಬಾಲಿವುಡ್ ಸಿನಿಮಾಗೆ ಇಂದ್ರಜಿತ್ ಲಂಕೇಶ್ ನಿರ್ದೇಶನ
Indrajit Lankesh
ಮದನ್​ ಕುಮಾರ್​
|

Updated on: Mar 02, 2026 | 5:13 PM

Share

‘ಐಶ್ವರ್ಯಾ’, ‘ಮೊನಾಲಿಸಾ’, ‘ಲಂಕೇಶ್ ಪತ್ರಿಕೆ’ ಮುಂತಾದ ಸಿನಿಮಾಗಳ ಅನುಭವಿ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಅವರು ಈಗ ಹಿಂದಿ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಹೌದು, ಅವರೊಂದು ಬಾಲಿವುಡ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾಗೆ ‘ಜೈ ಹಿಂದ್ ಜೈ ಸಿಂಧ್’ (Jai Hind Jai Sindh) ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ಸದ್ದಿಲ್ಲದೆ ಚಿತ್ರೀಕರಣ ಮಾಡಲಾಗಿದೆ. ಇಂದ್ರಜಿತ್ ಲಂಕೇಶ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಉತ್ತರಾಖಂಡದಲ್ಲಿ ಚಿತ್ರಕ್ಕೆ ಕೊನೆಯ ಹಂತದ ಶೂಟಿಂಗ್ ಮಾಡಲಾಗುತ್ತಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ಮಾಡಲಾಯಿತು.

ಡೆಹ್ರಾಡೂನ್​ನಲ್ಲಿ ‘ಜೈ ಹಿಂದ್ ಜೈ ಸಿಂಧ್’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ಮೊದಲ ಸುದ್ದಿಗೋಷ್ಠಿ ಅದ್ದೂರಿಯಾಗಿ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಇಂದ್ರಜಿತ್ ಜೊತೆಗೆ ನಿರ್ಮಾಪಕ ಸ್ಯಾಮಿ ನನ್ವಾನಿ, ಆಕಾಶ ವತ್ಸ್, ವಿಕ್ರಂ ಕೊಚ್ಚರ್ ಮುಂತಾದವರು ಭಾಗಿಯಾಗಿದ್ದರು. ಸಿನಿಮಾದ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು.

ಸ್ಯಾಮೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಮೂಲಕ ಸ್ಯಾಮಿ ನನ್ವಾನಿ ಅವರು ‘ಜೈ ಹಿಂದ್ ಜೈ ಸಿಂಧ್’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಮಂಜ್ರೇಕರ್, ವಿಕ್ರಂ ಕೋಚಾರ್, ಜರೀನಾ ವಹಾಬ್, ಜಯಪ್ರದಾ, ಅಮಿತ್ ಬಹಲ್, ಉಪಾಸನಾ ಸಿಂಗ್ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ನಾಲ್ವರು ಹೊಸ ಪ್ರತಿಭೆಗಳನ್ನು ಇಂದ್ರಜಿತ್ ಲಂಕೇಶ್ ಅವರು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ಸದ್ಯದಲ್ಲೇ ಈ ಸಿನಿಮಾಗೆ ಚಿತ್ರೀಕರಣ ಮುಗಿಯಲಿದೆ. ಈ ವರ್ಷದ ಮಧ್ಯಭಾಗದ ಹೊತ್ತಿಗೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿದರು. ‘ಇದೊಂದು ಪ್ರೇಮಕಥೆಯಾಗಿದೆ. ದೇಶ ವಿಭಜನೆ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿವಿಧತೆಯಲ್ಲಿ ಏಕತೆ ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಫಿಲ್ಮ್​ಫೇರ್: ಲಂಕೇಶ್, ಇಂದ್ರಜಿತ್ ಬಳಿಕ ಸಮರ್ಜಿತ್​ಗೂ ಒಲಿದ ಪ್ರತಿಷ್ಠಿತ ಪ್ರಶಸ್ತಿ

‘ದೇಶ ವಿಭಜನೆ ಆದಾಗ ಸಿಂಧ್ ಪ್ರಾಂತ್ಯದ ಜನ ಹೇಗೆ ನರಳಿದರು? ಅದರಿಂದ ಹೊರಬಂದು ಈಗ ತಮ್ಮ ಬದುಕನ್ನು ಹೇಗೆ ಕಟ್ಟಿಕೊಂಡಿದ್ದಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದಿದ್ದಾರೆ ಇಂದ್ರಜಿತ್ ಲಂಕೇಶ್. ‘ನನ್ನ ಮೊದಲ ಸಿನಿಮಾದಿಂದ ಈವರೆಗೆ ಹಲವು ನಟ-ನಟಿಯರನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ. ಈಗ ಈ ಸಿನಿಮಾದ ಮೂಲಕ ನಾಲ್ವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us