Ambedkar Jayanthi : ಧರ್ಮಕದನ ಸಾಕು, ಕನಿಷ್ಟ ಬದುಕು ನಡೆಸಲು ಅಡ್ಡಲಾದ ಸಂಗತಿಗಳೊಂದಿಗೆ ಗುದ್ದಾಡೋಣ!

‘ನಮ್ಮ ಕಾಲದಲ್ಲಿ ಸಂವಿಧಾನದ ಪೀಠಿಕೆಯಲ್ಲಿನ ಮೂರನೇ ಪದ ‘ಜ್ಯಾತ್ಯತೀತ’ ಅಕ್ಷರಶಃ ಅರ್ಥ ಕಂಡುಕೊಳ್ಳುತ್ತಿದೆ ಅನಿಸುತ್ತದೆ. ಕಾರಣ ಇಂದು ಯಾವುದೇ ಜನರ ಜಾತಿಯ ಬಗ್ಗೆ ನಮ್ಮ ತಲೆಮಾರಿನವರು ಹೆಚ್ಚು-ಕಡಿಮೆ ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ. ಅವರ ಮನಃಸ್ಥಿತಿಗೆ ಸರಿ ಹೊಂದುವವರೊಂದಿಗೇ ಗೆಳೆತನ ಮಾಡುತ್ತಿದ್ದಾರೆ.‘ ಬೀನಾ ಶಿವಪ್ರಸಾದ ಹೊಸ್ಕೇರಿ

Ambedkar Jayanthi : ಧರ್ಮಕದನ ಸಾಕು, ಕನಿಷ್ಟ ಬದುಕು ನಡೆಸಲು ಅಡ್ಡಲಾದ ಸಂಗತಿಗಳೊಂದಿಗೆ ಗುದ್ದಾಡೋಣ!
ಬೀನಾ ಶಿವಪ್ರಸಾದ ಹೊಸಕೇರಿ
Follow us
ಶ್ರೀದೇವಿ ಕಳಸದ
|

Updated on:Apr 14, 2021 | 6:08 PM

ಸಂವಿಧಾನಶಿಲ್ಪಿ, ಮಾನವತಾವಾದಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಜನ್ಮದಿನ ಇಂದು. ಅವರನ್ನು ನೀವು ಹೇಗೆ ನೆನಪಿಸಿಕೊಳ್ಳಬಲ್ಲಿರಿ, ಅವರ ಆಶಯಗಳನ್ನು ಜೀವಂತವಾಗಿಡುವಲ್ಲಿ ಹೇಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಲ್ಲಿರಿ? ಅವರ ಚಿಂತನೆಗಳಿಗೆ ಪೂರಕವಾಗಿ ನಿಮ್ಮನ್ನು ಪ್ರಭಾವಿಸಿದ ಒಂದು ಘಟನೆಯನ್ನು ‘ಟಿವಿ9 ಕನ್ನಡ ಡಿಜಿಟಲ್’ ​ನೊಂದಿಗೆ  ಹಂಚಿಕೊಳ್ಳಬಹುದೆ? ಎಂದು ನಮ್ಮ ನಡುವಿನ ಕೆಲ ಸಹೃದಯರಿಗೆ ಕೇಳಲಾಯಿತು. 

ಪರಿಕಲ್ಪನೆ : ಶ್ರೀದೇವಿ ಕಳಸದ

ಲೇಖಕಿ ಬೀನಾ ಶಿವಪ್ರಸಾದ ಹೊಸ್ಕೇರಿಯವರ ಹುಟ್ಟುಹಬ್ಬವೂ ಈವತ್ತೇ. ಶಾಲಾದಿನಗಳಲ್ಲಿ ಚಾಕೋಲೇಟು ಹಂಚುವ ಪ್ರಸಂಗ ನೆನಪಿಸಿಕೊಳ್ಳುತ್ತ ಯಾವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ? ಓದಿ.   

ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ರಾಷ್ಟ್ರದ ಜನ ಒಟ್ಟಾಗಿ ಹೇಗೆ ಯಾವ ರೀತಿ ಬದುಕಬೇಕೆಂದು ಸಂವಿಧಾನವೆಂಬ ಚೌಕಟ್ಟನ್ನು ಹಾಕಿಕೊಟ್ಟ ಮಹಾನಾಯಕ ಬಾಬಾಸಾಹೇಬ ಭೀಮ್‍ರಾವ ಅಂಬೇಡ್ಕರ್.

ಬಹುಶಃ ಅಂದು ಅವರು ಈ ಸಾಹಸವನ್ನು ಅನೇಕ ದೇಶಗಳ ಸಂವಿಧಾನವನ್ನೋದಿ, ಅರ್ಥೈಸಿಕೊಂಡು ನಮ್ಮ ದೇಶಕ್ಕೆ ಎಂಟು ಅನುಸೂಚಿ 22 ಭಾಗ, 395 ವಿಧಿಗಳ (ಮೂಲ ಸಂವಿಧಾನದ ಪ್ರಕಾರ) ಸುಮಾರು 145000 ಪದಗಳ ಸುದೀರ್ಘ ಸಂವಿಧಾನವನ್ನು 1934 ರಲ್ಲಿ M. N. Roy ಮತ್ತು ಇತರರ ಸಂವಿಧಾನದ ಬೇಡಿಕೆಯಂತೆ ಅನೇಕರ ಸಹಾಯದೊಂದಿಗೆ ಸಂವಿಧಾನ ರಚಿಸದಿದ್ದರೆ, ಇಂದಿಗೂ ಅದು ಮಯನ್ಮಾರ್ ದೇಶದ ಸೇನಾ ಬೆಂಬಲಿತ ಸಂವಿಧಾನದಂತೆ ನಮಗೂ ಒಂದು ಭದ್ರ ಸಂವಿಧಾನವೆಂಬುದು ಕನಸಾಗೇ ಉಳಿಯುತ್ತಿತ್ತೇನೋ. ಅಂತಹ ಕನಸನ್ನು ನನಸು ಮಾಡಿದ ಧೀಮಂತ ವ್ಯಕ್ತಿಯ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ.

ಅದರಲ್ಲೂ ನಾವು ಸ್ಕೂಲಿಗೆ ಹೋಗುವಾಗ ಸುನಾರು 6ನೇ ತರಗತಿಯಿಂದ ಹಿಡಿದು 10ನೇ ತರಗತಿಯವರೆಗೆ ಕನ್ನಡ, ಇಂಗ್ಲೀಷ್, ಹಿಂದಿ ಹೀಗೆ ಯಾವುದಾದರೊಂದು ಭಾಷಾ ಪುಸ್ತಕದಲ್ಲಿ ಅವರ ಬಗ್ಗೆ ಒಂದು ಪಾಠವಾದರೂ ಇಲ್ಲದೇ ಇದ್ದದ್ದು ಇಲ್ಲ. ಆದರೂ ಎಷ್ಟೇ ಸಲ ಅವರ ಬಗ್ಗೆ ಪಾಠ ಬಂದರೂ ಮಾರನೇ ದಿನ ಅವರ ಬಗ್ಗೆ ಪಾಠವನ್ನು ಕಲಿಸುತ್ತಾರೆಂದರೆ ನನಗಂತೂ ಖುಷಿಯೋ ಖುಷಿ. ಕಾರಣ ಅವರು ಹುಟ್ಟಿದ್ದ ಎಪ್ರಿಲ್ 14ರಂದೇ ಅಂದರೆ ನಾನು ಹುಟ್ಟಿದ್ದೂ ಆ ದಿನವೇ. ಆ ಪಾಠವನ್ನು ಮಾಡುತ್ತಿದ್ದ ಶಿಕ್ಷಕರು `ನೀನೂ ಮುಂದೊಂದು ದಿನ ನಾಲ್ಕು ಜನರಲ್ಲಿ ಗುರುತಿಸಿಕೋ’ ಎಂದು ಆಶೀರ್ವಾದ ಮಾಡುತ್ತಿದ್ದದ್ದು ನನಗೆ ಆ ಪಾಠ ಮಾಡುವಾಗ ಸಿಗುತ್ತಿದ್ದ ವಿಶೇಷ ಖುಷಿಯಾಗಿತ್ತು.

ಆದರೆ ಅಂಬೇಡ್ಕರ್ ಜಯಂತಿಯೆಂದರೆ ನನಗೆ ಬಾಲ್ಯದಲ್ಲಿ ಸ್ವಲ್ಪ ಮುನಿಸೇ! ಕಾರಣ, ಅದು ಎಪ್ರಿಲ್ – ಮೇ ಶಾಲಾ ರಜಾ ಸಮಯದಲ್ಲಿ ಬರುತ್ತಿದ್ದುದು. ಈ ಸಮಯದಲ್ಲಿ ನನಗೆ ಶಾಲೆಯಲ್ಲಿ ಚಾಕೋಲೇಟ್ ಹಂಚಲು ಆಗುವದಿಲ್ಲವೆಂಬ ಕೊರಗು ಒಂದನೇ ನೇ ತರಗತಿ ಓದಿದ ಶಿರಸಿ ನಂ 3 ಶಾಲೆಯಿಂದ ಹಿಡಿದು 10 ನೇ ತರಗತಿ ಮುಗಿಸಿದ ಅಂಕೋಲಾದ ಕೆಎಲ್​ಇ ಸೊಸೈಟಿ ತನಕವೂ ಕಾಡಿದ್ದು ನಿಜ. ಆದರೆ ನನ್ನಮ್ಮ ಫಲಿತಾಂಶ ಬರುತ್ತಿದ್ದ ಏಪ್ರಿಲ್ 10 ನೇ ತಾರೀಕಿನಂದೇ ಚಾಕೊಲೇಟ್ ಕೊಟ್ಟು ಕಳಿಸುತ್ತಿದ್ದರು. ಅಮ್ಮ, ಫರ್ಸ್ಟ್​ ರ್ಯಾಂಕ್ ಬರದಿದ್ದರೂ ಚಾಕೋಲೇಟ್​ ಹಂಚಬೇಕಾ ಎನ್ನುವ ನನ್ನ ಪ್ರಶ್ನೆಗೆ, ನಾಡಿದ್ದು ನನ್ನ ಹುಟ್ಟುಹಬ್ಬ ಇದೆ ಅದಕ್ಕೇ ಹಂಚುತ್ತಿದ್ದೇನೆಂದು ಕೊಡು ಎಂದು ಹೇಳಿ ಕಳುಹಿಸುತ್ತಿದ್ದಳು. ಆದರೆ ನನಗೆ 9 ನೇ ತರಗತಿಯೊಂದನ್ನು ಬಿಟ್ಟು ಉಳಿದೆಲ್ಲಾ ತರಗತಿಯಲ್ಲೂ ಫರ್ಸ್ಟ್​ ಬಂದಿದ್ದರಿಂದ ಹುಟ್ಟುಹಬ್ಬ ಎಂದು ಚಾಕೋಲೇಟ್​ ಹಂಚುವ ಖುಷಿ ಸಿಕ್ಕಿರಲಿಲ್ಲ.

ಅದೇನೇ ಬಾಲ್ಯದ ಸವಿ ನೆನಪುಗಳು ಅಂಬೇಡ್ಕರ್ ಪಾಠದ ಜೊತೆಗಿದ್ದರೂ, ಆ ಪಾಠಗಳ ವಿಶ್ಲೇಷಣೆಯನ್ನು ಇಂದಿಗೆ ನಾವು ಪುನಃ ಮೆಲುಕು ಹಾಕಿದಾಗ, ತಮ್ಮನ್ನು ಕೊಲ್ಲುವ ಧರ್ಮದೊಂದಿಗೆ ಕದನ ಮಾಡುವ ಬದಲು ಕನಿಷ್ಟ ಬದುಕು ನಡೆಸಲು ಅಡ್ಡಲಾದ ಸಂಗತಿಗಳ ಜೊತೆ ಗುದ್ದಾಡಿದರೆ ಅದೇ ಒಳ್ಳೆಯದೆಂಬ ಅವರ ಮಾತಿಗೆ, ನನ್ನಮ್ಮ ಅವರ ಅಜ್ಜನ ಬಗ್ಗೆ ಹೇಳಿದ ಒಂದು ಘಟನೆ ನೆನಪಿಗೆ ಬರುತ್ತಿದೆ.

ಅಂದು ಕೆಳಜಾತಿಯ ಜನರು ಇತರರ ಮನೆಯ ಹೊರಗೆ ಕೆಲಸ ಮಾಡುತ್ತಿದ್ದರೂ ಮನೆಯ ಒಳಗೆ ಕಾಲಿಡುವದು ದೂರದ ಮಾತೇ ಆಗಿತ್ತಂತೆ. ಆದರೆ ನನ್ನಮ್ಮನ ಅಜ್ಜ ಅಂಬೇಡ್ಕರರ ಮಾತುಗಳಿಂದ ಪ್ರಭಾವಿತರಾಗಿ ಮಾವಿನಹಣ್ಣಿನ ಮೂಟೆಯನ್ನು ಹೊರಲು ಬಂದ ಕೆಳಜಾತಿಯವರನ್ನೂ ತಮ್ಮ ಒಳಕೋಣೆಯ ತನಕ  ಕರೆದೊಯ್ದು ಮಾತನಾಡಿಸುತ್ತಿದ್ದಂತೆ. ಜಾತಿಗಿಂತ ಮನಸಿನ ಸ್ವಚ್ಛತೆಗೆ ಅವರು ಹೆಚ್ಚು ಆದ್ಯತೆ ಕೊಡುತ್ತಿದ್ದರು. ಅಂಬೇಡ್ಕರ್ ಅವರು ಎಲ್ಲಿಯೋ ಇದ್ದರೂ ಭಾರತದ ಪ್ರತಿ ಮೂಲೆಯ ಮನೆಯ ಜನರ ಮನಸ್ಸನ್ನು ತಲುಪಲು ಸಾಧ್ಯವಾದದ್ದು ಅವರ ಸುಧಾರಣಾ ವಿಚಾರಗಳಿಂದಲೇ ಎನ್ನುವುದು ಹೀಗೇ ಅಲ್ಲವೆ?  ಆದರೆ ಅವರ ಆದರ್ಶಗಳು ಮತ್ತು ತತ್ವಗಳ ಅರಿವಿನ ಜೊತೆಗೆ ಸುಧಾರಣಾವಾದಿಯಾಗಿ ಸಮಾಜವನ್ನು ವಿರೋಧಿಸಿದ ಅವರ ಧೈರ್ಯ ಮತ್ತು ಸಮುದಾಯದ ಬೆಳವಣಿಗೆಯನ್ನು ಮಹಿಳೆಯರ ಸಾಧನೆಯ ಮೇಲೆ ಅಳೆದ ಅವರ ನೂರು ವರ್ಷ ಹಿಂದಿನ ಯೋಚನೆಗಳನ್ನು ನಾವು ಇಂದಿಗೂ ಎಷ್ಟರಮಟ್ಟಿಗೆ ತಲುಪಲು ಸಾಧ್ಯವಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಇನ್ನು ನನ್ನ ಅಜ್ಜ-ಅಜ್ಜಿಯ ಕಾಲದಲ್ಲೂ ಹಾಗೇ. ಗದ್ದೆ ಕೆಲಸಕ್ಕೆ ಬರುತ್ತಿದ್ದ ಕೆಳಜಾತಿಯವರಿಗೂ ಹಬ್ಬ-ಹರಿದಿನಗಳಂದು ವಿಶೇಷ ಅಡುಗೆಮಾಡಿ ಬಡಿಸುತ್ತಿದ್ದರೆಂದು ನನ್ನಪ್ಪ ಹೇಳುತ್ತಿರುತ್ತಾನೆ. ಇನ್ನೂ ಮುಂದುವರೆದಂತೆ ಶಿಕ್ಷಣ ಪಡೆದಂತೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ನನ್ನ ಅಪ್ಪ-ಅಮ್ಮನ ಜೊತೆಯವರೆಲ್ಲರೂ ಯಾವದೇ ಜಾತಿ ಬೇಧವಿಲ್ಲದೇ ಎಲ್ಲರೂ ಒಂದೆಡೆ ಕುಳಿತು ಮಧ್ಯಾಹ್ನದ ಊಟ ಮಾಡುತ್ತಿದ್ದದ್ದು ಅಂಬೇಡ್ಕರ್ ದೊರಕಿಸಿಕೊಟ್ಟ ಭಾಗ್ಯವೇ ಅಲ್ಲವೆ? ಇನ್ನು ನಮ್ಮ ಕಾಲದಲ್ಲಿ ಸಂವಿಧಾನದ ಪೀಠಿಕೆಯಲ್ಲಿನ ಮೂರನೇ ಪದ ‘ಜ್ಯಾತ್ಯತೀತ’ ಅಕ್ಷರಶಃ ಅರ್ಥ ಕಂಡುಕೊಳ್ಳುತ್ತಿದೆ ಅನಿಸುತ್ತದೆ. ಕಾರಣ ಇಂದು ಯಾವುದೇ ಜನರ ಜಾತಿಯ ಬಗ್ಗೆ ನಮ್ಮ ತಲೆಮಾರಿನವರು ಹೆಚ್ಚು-ಕಡಿಮೆ ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ. ಅವರ ಮನಃಸ್ಥಿತಿಗೆ ಸರಿ ಹೊಂದುವವರೊಂದಿಗೇ ಗೆಳೆತನ ಮಾಡುತ್ತಿದ್ದಾರೆ.

ಆದರೂ ಕೆಲವರು ವಿನಾಕಾರಣ ಗುದ್ದಾಡುತ್ತಲೇ ಇದ್ದಾರೆ. ಯಾಕಾಗಿ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಅನಿವಾರ್ಯವಿದೆ.

*

ಪರಿಚಯ : ಬೀನಾ ಶಿವಪ್ರಸಾದ ಅವರು ಅಂಕೋಲಾ ತಾಲೂಕಿನ ಹೊಸ್ಕೇರಿಯವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಆರ್ಗ್ಯಾನಿಕ್ ಕೆಮೆಸ್ಟ್ರಿ’ ವಿಷಯದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಪತ್ರಿಕೆ ಮತ್ತು ವೆಬ್​ಗಳಲ್ಲಿ ಇವರ ಕವನ, ಲೇಖನಗಳು ಪ್ರಕಟಗೊಂಡಿವೆ. ನಿರ್ಮಲಾ ಎಲಿಗಾರ ದತ್ತಿನಿಧಿ ಉದಯೋನ್ಮುಖ ಕವಯತ್ರಿ ಬಹುಮಾನವನ್ನು ಪಡೆದಿರುತ್ತಾರೆ.

ಇದನ್ನೂ ಓದಿ : Ambedkar Jayanthi : ಆ ಹುಡುಗನ ಜೀತ ತಪ್ಪಿಸಿದ ಶಿಕ್ಷಕ

Published On - 6:04 pm, Wed, 14 April 21