Orange Signal : ‘ಅಯ್ಯೋ ಗೋಡೆಯ ಬಣ್ಣ ಏನಿರಬೇಕಂತ ಹೇಳಿದರೆ ಸಾಕು ಅವಳು’

Awareness : ‘ನಮ್ಮಲ್ಲಿ ಎಷ್ಟು ಹುಡುಗಿಯರಿಗೆ ಶೇರ್ ಮಾರ್ಕೆಟ್‍ ಆಗಲೀ, ಮ್ಯೂಚುವಲ್ ಫಂಡ್‍ಗಳ ಬಗ್ಗೆಯಾಗಲೀ ಅರಿವಿದೆ? ಇಂದಿಗೂ ಎಷ್ಟೊಂದು ಹೆಣ್ಣುಮಕ್ಕಳಿಗೆ ಮನೆಯ ಉಳಿತಾಯ ಹೇಗೆ ನಡೆಯುತ್ತಿದೆ ಎಂಬುದರ ಲೆಕ್ಕ ಪೂರ್ತಿ ಗೊತ್ತಿದೆ? ಆದರೆ, ಬಹುತೇಕ ಗಂಡಸರಿಗೆ ತಮ್ಮ ದುಡಿಯುವ ಹೆಂಡತಿಯರ ಸಂಬಳ ಎಷ್ಟೆಂದು ಗೊತ್ತಿರುತ್ತದೆ.’ ಸೌರಭಾ ಕಾರಿಂಜೆ

Orange Signal : ‘ಅಯ್ಯೋ ಗೋಡೆಯ ಬಣ್ಣ ಏನಿರಬೇಕಂತ ಹೇಳಿದರೆ ಸಾಕು ಅವಳು’
Follow us
ಶ್ರೀದೇವಿ ಕಳಸದ
|

Updated on:Oct 02, 2021 | 7:28 PM

Orange Signal : ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸದಿರಲು ನನ್ನಿಂದ ಸಾಧ್ಯವಿಲ್ಲ. ಮತ್ತದನ್ನು ಅಕ್ಷರರೂಪಕ್ಕೆ ಇಳಿಸುವುದೆಂದರೆ ನನಗೆ ಬೇಕಾದ ಸ್ಪಷ್ಟತೆಯನ್ನು ನನಗೆ ನಾನೇ ದೊರಕಿಸಿಕೊಳ್ಳುವುದು. ಹಾಗೆಂದು ಯಾವ ವಿಷಯವನ್ನೂ ಆತ್ಯಂತಿಕವಾಗಿ ನಾನು ಅರಿತುಕೊಂಡಿದ್ದೇನೆ ಅಂತಲ್ಲ. ಭಿನ್ನ ಅಭಿಪ್ರಾಯ, ವಿಚಾರ ವಿನಿಮಯಗಳು ಗೌರವಯುತ ರೀತಿಯಲ್ಲಿ ನಡೆದು ಪರಸ್ಪರರ ಲೋಕದೃಷ್ಟಿಯನ್ನು ಹರಿತಗೊಳಿಸುತ್ತಾ ಸಾಗುವ, ಬದಲಾಗುವ ಪ್ರಕ್ರಿಯೆಯಲ್ಲಿ ನನಗೆ ನಂಬಿಕೆ ಇದ್ದುದರಿಂದ ಇದೊಂದು ರೀತಿಯಲ್ಲಿ ನನ್ನ ವೈಯಕ್ತಿಕ ಕಲಿಕೆಯ ದಾರಿಯೂ ಹೌದು. ಈ ದಾರಿಯಲ್ಲಿ ಓದುಗರಾದ ನಿಮಗೂ ಇಲ್ಲಿ ಪ್ರಸ್ತಾಪಿಸುವ ವಿಚಾರಗಳು ಆಲೋಚನೆಗೆ ತೊಡಗಿಕೊಳ್ಳುವಂತೆ ಪ್ರೇರೇಪಿಸಿದಲ್ಲಿ ಖುಷಿಯೇ. ಸೌರಭಾ ಕಾರಿಂಜೆ

ಬೆಂಗಳೂರಿನಲ್ಲಿ ಸಾಫ್ಟ್​ವೇರ್ ತಂತ್ರಜ್ಞೆಯಾಗಿರುವ ಸೌರಭಾ ಕಾರಿಂಜೆ ಮೂಲತಃ ದಕ್ಷಿಣ ಕನ್ನಡದವರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿ. ಓದು, ಬರಹ, ಪ್ರವಾಸ, ಬ್ಯಾಡ್ಮಿಂಟನ್, ಅಡುಗೆ, ಯೋಗ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಕತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಕೆಲವು ಬಹುಮಾನವನ್ನೂ ಗಳಿಸಿವೆ. ಇಂದಿನಿಂದ ಶುರುವಾಗುವ ಇವರ ಅಂಕಣ ಪ್ರತೀ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗಲಿದೆ. 

ಕಂತು – 1

ಇತ್ತೀಚೆಗೆ ಸ್ನೇಹಕೂಟವೊಂದಕ್ಕೆ ಹೋಗಿದ್ದೆ. ಅನೇಕ ಕುಟುಂಬಗಳು ಸೇರಿ ಹಬ್ಬವೊಂದನ್ನು ಆಚರಿಸುತ್ತಿದ್ದೆವು. ಒಬ್ಬರಿಗೆ ಹೊಸ ಉದ್ಯೋಗ ದೊರೆತಿತ್ತು, ಎಲ್ಲರೂ ಅವರನ್ನು ಅಭಿನಂದಿಸುತ್ತಿದ್ದರು. ಅಭಿನಂದನೆಗಳನ್ನು ಸ್ವೀಕರಿಸುತ್ತಾ ಮಾತಿನ ನಡುವೆ ಅವರು, “ನಾನು ನನ್ನ ಸಂಬಳವನ್ನು ಹೆಂಡತಿಗೆ ಹೇಳಿಲ್ಲ” ಎಂದರು. ಮತ್ತೊಂದಷ್ಟು ಗಂಡಸರು ನಗೆಯಾಡುತ್ತಲೇ ತಮ್ಮದೂ ಅದೇ ಕತೆ ಎಂದು ತಲೆದೂಗಿದರು. ಅವರ ಹೆಂಡತಿಯರೂ ನಗುತ್ತಾ “ಹೇಳಬೇಡಿ ಹೋಗ್ರೀ, ನಮ್ಮ ಶಾಪಿಂಗ್‍ಗೆ ತೊಂದರೆಯಾಗದಿದ್ದರೆ ಸಾಕು” ಮತ್ತಷ್ಟು ನಗೆಬುಗ್ಗೆ ಎದ್ದಿತು.

ಮತ್ತೊಂದು ಘಟನೆಯಲ್ಲಿ ಸ್ನೇಹಿತೆಯೊಬ್ಬರ ಗಂಡ ಹೊಸ ಮನೆಯೊಂದರ ಖರೀದಿಯ ಬಗ್ಗೆ ನಿರ್ಧರಿಸಿದ್ದರು. ಆದರೆ ಹೆಂಡತಿಗೆ ಆ ಮನೆಯನ್ನು ತೋರಿಸುವ ಸೌಜನ್ಯವನ್ನೂ ತೋರಿರಲಿಲ್ಲ. ಆಕಸ್ಮಿಕವಾಗಿ ಅವರನ್ನು ಭೇಟಿ ಆದಾಗ ಮನೆಯ ಸಂಪೂರ್ಣ ವಿವರವನ್ನು ನನ್ನೊಂದಿಗೆ ಹಂಚಿಕೊಂಡರು ಮತ್ತು ಮನೆಯ ಸಾಲದ ಮೊತ್ತ, ಬ್ಯಾಂಕಿನ ಬಡ್ಡಿ ದರಗಳು, ಬೀಲ್ಡರ್​ನ ಶರತ್ತುಗಳು ಮುಂತಾದ ಕೆಲ ವಿಷಯಗಳಲ್ಲಿ ನನ್ನ ಅಭಿಪ್ರಾಯವನ್ನೂ ಕೇಳಿದರು. ಇವ್ಯಾವುವನ್ನೂ ತನ್ನ ಬಾಳಸಂಗಾತಿಯೊಂದಿಗೆ ಚರ್ಚಿಸುವ ಗೋಜಿಗೇ ಅವರು ಹೋಗಿರಲಿಲ್ಲ ಅನ್ನುವುದು ನನಗೆ ತಿಳಿದಿತ್ತು. ಮಾತಿನ ಮಧ್ಯೆ ಕೇಳಿದೆ,

“ನಿಮ್ಮ ಹೆಂಡತಿ ಇದಕ್ಕೆ ಏನೆನ್ನುತ್ತಾರೆ?” “ಅಯ್ಯೋ, ಗೋಡೆಯ ಬಣ್ಣವೊಂದು ಏನಿರಬೇಕಂತ ಕೇಳಿದರೆ ಸಾಕು ಅವಳು. ಅದಷ್ಟೇ ಗೊತ್ತಾಗೋದು ಅವಳಿಗೆ. ಇವೆಲ್ಲ ಅರ್ಥವಾಗಲ್ಲ”

ಇವೆರಡೂ ಮೇಲ್ಮಧ್ಯಮ ವರ್ಗದ ಕುಟುಂಬಗಳು.

ಈ ಎರಡೂ ಪ್ರಸಂಗಗಳಲ್ಲಿ ಈ ಹೆಣ್ಣುಮಕ್ಕಳು ದುಡಿಯುವವರಲ್ಲ. ಅವರಿಗೆ ಹಣಕಾಸಿನ ವ್ಯವಹಾರಗಳಲ್ಲಿ ಧ್ವನಿಯಿಲ್ಲ. ಜೊತೆಗೆ ಯಾವುದೇ ವಿಚಾರವನ್ನು ಚರ್ಚಿಸಲು ಸ್ವಲ್ಪ ಸಾಮಾನ್ಯ ಜ್ಞಾನವೂ ಬೇಕಿರುತ್ತದೆ. ಅದವರಿಗೆ ಇಲ್ಲ. ಅವರು ಮನೆಯ ಹೊರಗಿನ ಪ್ರಪಂಚದಲ್ಲಿ ಸಕ್ರಿಯ-ಸಮಾನ ಪಾಲುದಾರರಲ್ಲ. ಇದರ ಪರಿಣಾಮವಾಗಿ ಅವರು ಕಂಡುಕೊಳ್ಳಲು ಹೊರಟಿರುವ ಅಸ್ಮಿತೆ ಬಲುಮುಖ್ಯ ಸಂಗತಿಯಾಗಿ ನನಗೆ ಗೋಚರಿಸುತ್ತದೆ. ಈ ಹೆಣ್ಣುಮಕ್ಕಳ ಕೆಲಸ ಏನು? ಮನೆಯನ್ನು ಒಪ್ಪ ಓರಣವಾಗಿ ಇಟ್ಟುಕೊಳ್ಳುವುದು, ಮಕ್ಕಳನ್ನು ಬೆಳೆಸುವುದು ಮತ್ತು ಎಲ್ಲರಿಗೂ ಹೊತ್ತುಹೊತ್ತಿಗೆ ಆರೋಗ್ಯಕರ ಆಹಾರ ಬೇಯಿಸುವುದು. ಈ ಮೇಲ್ಮಧ್ಯಮ ವರ್ಗದ ಕುಟುಂಬಗಳಲ್ಲಿ ಇವೆಲ್ಲದಕ್ಕೂ ಆಳು-ಕಾಳು ಇರುತ್ತಾರೆ. ಆಳು-ಕಾಳುಗಳನ್ನು ನಿರ್ವಹಿಸುವುದು ಒಂದು ಕೆಲಸ ನಿಜ, ಆದರದು ಇಡೀ ದಿನದ ಸಮಯವನ್ನು ನುಂಗುವುದಿಲ್ಲ. ಬಾಕಿ ಸಮಯ ಸೀರಿಯಲ್‍ ನೋಡುವುದರಲ್ಲಿ, ಶಾಪಿಂಗ್‍ ಮಾಡುವುದರಲ್ಲಿ ಕಳೆದುಹೋಗುತ್ತದೆ.

ನಿಮ್ಮ ಹವ್ಯಾಸ ಏನು ಎಂದು ಕೇಳಿದರೆ ಶಾಪಿಂಗ್‍ ಎನ್ನುವ ಎಷ್ಟೋ ಹೆಣ್ಣುಮಕ್ಕಳನ್ನು ಕಂಡಿದ್ದೇನೆ. ಶಾಪಿಂಗ್‍ ಹವ್ಯಾಸವಾಗಿರುವ ಹೆಂಡತಿಯರಿಗೆ, ಇರುವುದಕ್ಕಿಂತ ಕಡಿಮೆ ಸಂಬಳವನ್ನು ತೋರಿಸಿ ದುಡ್ಡು ಉಳಿಸಬೇಕಾದ ಅನಿವಾರ್ಯತೆ ಇರುವ ಗಂಡಸರನ್ನು ಕಂಡಿದ್ದೇನೆ. ತನ್ನ ಗಂಡ ತಿಂದ ತಟ್ಟೆಯನ್ನೂ ತೊಳೆಯಲು ಹಾಕುವುದಿಲ್ಲ, ನಾನೇ ಮಾಡಬೇಕು ಅಂತ ಹೆಮ್ಮೆಯಲ್ಲಿ ಸಾರುವ ಪತ್ನಿಯರನ್ನು ಕಂಡಿದ್ದೇನೆ. ನೀವು ಗಂಡ ತಿಂದ ತಟ್ಟೆಯ ವಿಲೇವಾರಿಯಲ್ಲೇ ಮುಳುಗಿದ್ದರೆ, ಮುಖ್ಯ ನಿರ್ಧಾರಗಳ ಕಡೆ ತಲೆ ಹಾಕಲು ಸಮಯವಾಗಲೀ-ವ್ಯವಧಾನವಾಗಲೀ ಹೇಗಿರಲು ಸಾಧ್ಯ? ಪ್ರಪಂಚದಲ್ಲಿ ಕಲಿಯಲು (ಆರ್ಥಿಕವಾಗಿ ಪ್ರಯೋಜನಕಾರಿಯಲ್ಲದಿದ್ದರೂ) ನೂರೆಂಟು ವಿಷಯಗಳಿವೆ. ಅವುಗಳಲ್ಲಿ ತೊಡಗಿಸಿಕೊಳ್ಳುವ ಇಚ್ಛಾಶಕ್ತಿಯಾಗಲೀ ಪೂರಕ ವಾತಾವರಣವಾಗಲೀ ನಮ್ಮ ಅನೇಕ ಹೆಣ್ಣುಮಕ್ಕಳಿಗೆ ಒದಗಿಲ್ಲ ಎಂಬುದು ನನಗೆ ಅತ್ಯಂತ ಕಳವಳಕಾರಿಯಾಗಿ ಕಂಡುಬರುತ್ತದೆ.

ಇನ್ನಿಬ್ಬರು ಲಕ್ಷಗಟ್ಟಲೆ ದುಡಿಯುವ ಗೆಳತಿಯರು. ಸಂಬಳವನ್ನು ಏನು ಮಾಡುತ್ತೀರಿ ಎಂದು ಮಾತಿಗಾಗಿ ಪ್ರಶ್ನೆ ಹಾಕಿದರೆ “ಗಂಡನಿಗೆ ಕೊಟ್ಟರೆ ಆಯಿತು, ಅದರಲ್ಲೆಲ್ಲ ಅವನು ಬಹಳ ಜಾಣ. ಯಾರಿಗೆ ಬೇಕು ಹೂಡಿಕೆಯ ತಲೆಬಿಸಿ?” ಅನ್ನುವ ಉತ್ತರ. ತಪ್ಪೇನಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕ್ಷೇತ್ರದಲ್ಲಿ ಪರಿಣತಿ ಇರುತ್ತದೆ, ಆದ್ದರಿಂದ ಆಯಾ ಕ್ಷೇತ್ರದ ಜವಾಬ್ದಾರಿಯನ್ನು ಅವರೇ ಹೆಚ್ಚು ವಹಿಸಿಕೊಳ್ಳುತ್ತಾರೆ. ಆದರೆ ಯಾಕೆ ಇಂತಹ ಜಾಣತನ ಗಂಡಸರಿಗೇ ಹೆಚ್ಚಿರುತ್ತದೆ ಎಂಬುದು ಪ್ರಶ್ನೆ!

ಎಳವೆಯಿಂದಲೇ ಎಷ್ಟು ಹೆಣ್ಣುಮಕ್ಕಳಿಗೆ ವಿದ್ಯುತ್‍ ಬಿಲ್ಲಾಗಲೀ, ಬ್ಯಾಂಕಿನಿಂದ ದುಡ್ಡು ವಿಥ್‍ಡ್ರಾ ಮಾಡುವುದಾಗಲೀ ಅಭ್ಯಾಸವಾಗಿರುತ್ತದೆಯೆ? ಅವನ್ನೆಲ್ಲ ಮನೆಯ ಗಂಡಸರು ಮಾಡುತ್ತಾರೆ. ನಮ್ಮಲ್ಲಿ ಎಷ್ಟು ಹುಡುಗಿಯರಿಗೆ ಶೇರ್ ಮಾರ್ಕೆಟ್‍ ಆಗಲೀ, ಮ್ಯೂಚುವಲ್ ಫಂಡ್‍ಗಳ ಬಗ್ಗೆಯಾಗಲೀ ಅರಿವಿದೆ? ಇಂದಿಗೂ ಎಷ್ಟೊಂದು ಹೆಣ್ಣುಮಕ್ಕಳಿಗೆ, (ದುಡಿಯುವ ಹೆಣ್ಣುಮಕ್ಕಳನ್ನೂ ಸೇರಿಸಿ) ಮನೆಯ ಉಳಿತಾಯ ಹೇಗೆ ನಡೆಯುತ್ತಿದೆ ಎಂಬುದರ ಲೆಕ್ಕ ಪೂರ್ತಿ ಗೊತ್ತಿದೆ? ಅದೇ ಬಹುತೇಕ ಗಂಡಸರಿಗೆ ತಮ್ಮ ದುಡಿಯುವ ಹೆಂಡತಿಯರ ಸಂಬಳ ಎಷ್ಟೆಂದು ಗೊತ್ತಿರುತ್ತದೆ. ಮಾತ್ರವಲ್ಲ ಅದರ ಹೂಡಿಕೆ, ಖರ್ಚು ಎಲ್ಲವನ್ನೂ ಅವರೇ ನಿರ್ವಹಿಸುತ್ತಾರೆ.

ಇಂತಹ ಮಹಿಳೆಯ ಅಸ್ಮಿತೆ ಎಲ್ಲಿದೆ? ಮನೆ ನಿರ್ವಹಣೆ ಮಹಿಳೆಯದ್ದು, ದುಡ್ಡು ಕಾಸು ನಿರ್ವಹಣೆ ಪುರುಷನದ್ದು ಅನ್ನುವುದು ಮೇಲ್ನೋಟಕ್ಕೆ ಸಮಾನ ಹಂಚಿಕೆ ಅನಿಸಿದರೂ ಮುಖ್ಯ ನಿರ್ಧಾರಗಳಲ್ಲಿ ಹೆಣ್ಣು ಹೊರಗೇ ಉಳಿಯುವ ಸಾಧ್ಯತೆ ಹೆಚ್ಚು. ಇವೆರಡಕ್ಕೂ ಸಮಾನ ಗೌರವ ಇಲ್ಲವಲ್ಲ ನಮ್ಮ ಸಮಾಜದಲ್ಲಿ? ಹಾಗಿರುವಾಗ ಅದು ಹೇಗೆ ಸಮಾನ ಹಂಚಿಕೆಯಾಗಲು ಸಾಧ್ಯ?

ಪರಕೀಯಳಾದ ನನ್ನೊಂದಿಗೆ ತಮ್ಮ ಹಣಕಾಸಿನ ವ್ಯವಹಾರಗಳನ್ನು ಚರ್ಚಿಸಲು ಹಿಂಜರಿಕೆಯನ್ನಾಗಲೀ ಒಣ ಜಂಭವನ್ನಾಗಲೀ ತೋರದ ಇಂತಹ ಗಂಡಸರಲ್ಲಿ ಎಲ್ಲರೂ ಪ್ರಜ್ಞಾಪೂರ್ವಕವಾಗಿ ಸ್ತ್ರೀ ವಿರೋಧಿಗಳು ಎಂದು ನನಗೆ ಅನಿಸುವುದಿಲ್ಲ. ಆದರೆ ತಮ್ಮ ಮನೆಯ ಹೆಣ್ಣುಮಕ್ಕಳೇ ಇಂತಹ ಗಂಭೀರ ವಿಚಾರಗಳಲ್ಲಿ ಪರಿಣತಿಯನ್ನು ಪಡೆಯಲು ಅರ್ಹರು ಎಂಬ ಬಗ್ಗೆಯೂ ಇವರಿಗೆ ನಂಬಿಕೆಯಿಲ್ಲ. ಅನೇಕ ಮಂದಿ ಹೆಣ್ಣಿಗೊಂದು ಆರ್ಥಿಕ ದನಿಯಿರುವುದನ್ನು ಒಪ್ಪುವುದೂ ಇಲ್ಲ. ಹಾಗೇನಾದರೂ ದನಿಯಿರುವ ಗಟ್ಟಿಗಿತ್ತಿ ಹೆಣ್ಣು ಬಜಾರಿಯೆಂಬ ಹಣೆಪಟ್ಟಿಯನ್ನು ಹೊರಬೇಕಾಗುತ್ತದೆ. ಇಂತಹ ವಿಚಾರಗಳನ್ನು ಚರ್ಚಿಸಲು ತಮ್ಮನ್ನು ತಾವು ಅರ್ಹರನ್ನಾಗಿಸಿಕೊಳ್ಳದ ಮಹಿಳೆಯರನ್ನು ದೂರುವುದೂ ಸರಿಯೆನಿಸುವುದಿಲ್ಲ. ಆದರೆ ಸಮಾಜದ ಈ ಸಂರಚನೆ ಅಪಾಯಕಾರಿಯೆನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ತಾಯಿ ಮನೆಗೆ ಬಿಟ್ಟರೆ ಶಾಪಿಂಗ್‍ಗೆ, ಅಲಂಕಾರಕ್ಕೆ ಸೀಮಿತವಾಗಿರುವುದನ್ನೇ ನೋಡಿಕೊಂಡು ಮಕ್ಕಳು ಬೆಳೆಯಬೇಕೇ? ಗಂಡುಮಗು ಬೆಳೆದು ಮುಂದೆ ಹೆಣ್ಣುಮಕ್ಕಳಿಗೆ ನೀಡಬೇಕಾದ ಸ್ಥಾನ ಯಾವುದೆಂಬುದನ್ನು ಈ ಸಂರಚನೆ ಮತ್ತೆ ಮತ್ತೆ ಸಾರುವುದಿಲ್ಲವೇ? ಮನೆಯ ಹೆಣ್ಣುಮಗು ಬೆಳೆದು ಉದ್ಯೋಗಸ್ಥೆಯಾದರೂ ಮನೆಯನ್ನು ಸಂಭಾಳಿಸುವುದೇ ಬಲು ಮುಖ್ಯ ಅಸ್ಮಿತೆಯಾಗುವುದಿಲ್ಲವೇ?

Orange Signal Sowrabha Karinje

ಸೌಜನ್ಯ : ಅಂತರ್ಜಾಲ

ಅದೇ ನಮ್ಮ ಮನೆಕೆಲಸದ ಅಂದರೆ, ಆರ್ಥಿಕವಾಗಿ ಹಿಂದುಳಿದ ಕೆಳವರ್ಗದವರನ್ನು ಮಾತನಾಡಿಸಿದರೆ, ಅನೇಕ ಸಂಸಾರಗಳಲ್ಲಿ ಕುಡಿತ-ಬಡಿತ-ದುಡ್ಡು ಕೀಳುವುದು ಸಾಮಾನ್ಯ, ಅದಕ್ಕೆಂದೇ ಹೆಂಡತಿಯರು ಗಂಡಂದಿರಿಗೆ  ಗೊತ್ತಿಲ್ಲದ ಹಾಗೆ ತಮ್ಮ ಸಂಬಳದ ದುಡ್ಡು ಕೂಡಿಡುತ್ತಾರೆ. ಅವನು ಕಿತ್ತುಕೊಂಡು ಉಳಿದಿದ್ದನ್ನು ತಮ್ಮ ತಂದೆ-ತಾಯಿಗೋ ಮಕ್ಕಳ ಓದಿಗೋ ಅದನ್ನು ಖರ್ಚು ಮಾಡುತ್ತಾರೆ. ಇಲ್ಲಿ ಬಡಹೆಣ್ಣುಮಕ್ಕಳ ದುಡಿಮೆಯ ಬೆಲೆ ಅವಳ ಗಂಡನ “ಕರುಣೆ”ಯ ಮೇಲೆ ನಿರ್ಧರಿತವಾಗುತ್ತದೆ. ಇದು ಮೇಲ್ವರ್ಗದ ಮಹಿಳೆಯರ ಆರ್ಥಿಕ ಅಜಾಗೃತಿಯ ವಿಡಂಬನಾತ್ಮಕ ಪರಿಸ್ಥಿತಿ.

ನೋಟು ಅಮಾನ್ಯೀಕರಣ ನಡೆದಾಗ ಬಹಳ ಚಾಲ್ತಿಯಲ್ಲಿದ್ದ ಜೋಕುಗಳಲ್ಲಿ ಹೆಣ್ಣುಮಕ್ಕಳು ತಾವು ಅಡಗಿಸಿಟ್ಟಿದ್ದ ನೋಟುಗಳನ್ನು ಹೊರತೆಗೆದು ವಿನಿಮಯ ಮಾಡಿಕೊಳ್ಳಲು ಹೊರಟಂತಹ ಸನ್ನಿವೇಶದ ಸುತ್ತಲೂ ಇದ್ದ ಜೋಕುಗಳಿದ್ದವು. ಅವುಗಳನ್ನು ಕಂಡಾಗ ಈ ಹೆಣ್ಣುಮಕ್ಕಳು ದುಡ್ಡನ್ನು ಯಾಕೆ ಅಡಗಿಸಬೇಕಾಯಿತು ಅನ್ನುವುದು ನನ್ನನ್ನು ಕಾಡಿದ ಬಹುಮುಖ್ಯ ಪ್ರಶ್ನೆಯಾಗಿತ್ತು. ಮಧ್ಯಮವರ್ಗದ ಹೆಣ್ಣುಮಕ್ಕಳು ಗಂಡ ಮನೆಖರ್ಚಿಗೆ ಕೊಟ್ಟ ದುಡ್ಡಿಗೆ ತಪ್ಪು ಲೆಕ್ಕ ಹೇಳಿ ಕೂಡಿಡುವುದನ್ನು ಕಂಡಿದ್ದೇನೆ. ಬಹಳ ಹೆಣ್ಣುಮಕ್ಕಳು ತವರುಮನೆಯಿಂದ ಬಂದ ಉಡುಗೊರೆಯನ್ನೂ ಜೋಪಾನವಾಗಿ ಕೂಡಿಡುವವರು. ಗಂಡನ ಜೇಬಿನಿಂದ ಎಗರಿಸುವವರ ಬಗ್ಗೆಯೂ ಕೇಳಿದ್ದೇವೆ ನಾವೆಲ್ಲ. ಆ ದುಡ್ಡನ್ನು ತಮ್ಮ ಮಕ್ಕಳಿಗೋ, ಪ್ರೀತಿಪಾತ್ರರಿಗೋ ಉಡುಗೊರೆ ನೀಡಲು ಅಥವಾ ಬಹಳ ಇಷ್ಟಪಟ್ಟದ್ದನ್ನು ಕೊಂಡುಕೊಳ್ಳಲು ಬಳಸುವುದು ನಡೆಯುತ್ತದೆ. ಅನೇಕ ಗಂಡಂದಿರಿಗೆ ತಾನು ಮುಖ್ಯ ದುಡಿಮೆಗಾರನಾದ್ದರಿಂದ ದುಡ್ಡು ಹೇಗೆ ಖರ್ಚಾಗಬೇಕು ಅನ್ನುವ ನಿರ್ಧಾರ ಸಂಪೂರ್ಣವಾಗಿ ತನ್ನದಾಗಿರಬೇಕು ಎಂಬ ಹಟ. ದುಡ್ಡಿನ ವ್ಯವಹಾರ ಗಂಡಂದಿರದ್ದು ಮಾತ್ರ ಆದ ಕಾರಣ ಸಣ್ಣಪುಟ್ಟದ್ದಕ್ಕೂ ಅವರಿಗೆ ಲೆಕ್ಕ ಹೇಳಬೇಕೆಂಬ ಬೇಗುದಿ ಹೆಣ್ಣುಮಕ್ಕಳಿಗೆ. ಅದಕ್ಕೆಂದೇ ಈ ರೀತಿಯ ಕದ್ದುಮುಚ್ಚಿದ ವ್ಯವಹಾರಗಳು. ಸಮಾನತೆ ಗೌರವ ಇವನ್ನೆಲ್ಲ ನಾವು ಸಾಮಾಜಿಕವಾಗಿ ಎಷ್ಟು ವಿಚಾರಗೊಳಪಡಿಸಿದರೂ ಅದು ಶುರುವಾಗಬೇಕಾದದ್ದು ಮನೆಯಲ್ಲಿ, ಮತ್ತು ತಾರ್ಕಿಕ ಅಂತ್ಯವೂ ನಮ್ಮ ಮನೆಗಳಲ್ಲೇ ಅಲ್ಲವೇ?

ಇಂದಿಗೂ ಮದುವೆಗೆ ಹುಡುಗಿ-ಹುಡುಗನ ಜೊತೆ ನೋಡುವಾಗ ಹುಡುಗನ ಸಂಬಳ ಹುಡುಗಿಗಿಂತ ಹೆಚ್ಚಿರಲೇಬೇಕೆನ್ನುವುದು ಸರ್ವವಿಧಿತ. ಇಲ್ಲದಿದ್ದರೆ ನಾಳೆ ತೊಂದರೆಯಾದೀತು ಎಂಬುದು ಎಲ್ಲರ ಕಳಕಳಿ. ಈ “ತೊಂದರೆ”ಯಾಗುವುದು ಸಮಾಜದ ಸ್ವಾಸ್ಥ್ಯಕ್ಕೆ ಎಷ್ಟು ದೊಡ್ಡ ತೊಂದರೆ ಎನ್ನುವುದನ್ನು ಒಂದು ಗಳಿಗೆ ಚಿಂತಿಸಿ ನೋಡಬೇಕಿದೆ.

ಸ್ವಾತಂತ್ರ್ಯ ಅನ್ನುವುದು ಒಂದು ರುಚಿ. ಅದನ್ನು ಅನುಭವಿಸಿದಾಗಲೇ ಅದರ ಸ್ವಾದ ಅರಿವಿಗೆ ಬರುವುದು. ಗಂಡನ ಸಂಬಳವೂ ತಿಳಿಯದ ಹೆಂಡತಿಗೆ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಷ್ಟು ಮುಕ್ತತೆಯಿದ್ದೀತು? ಹಾಗೆಯೇ ಗಂಡನಿಗೂ ತನ್ನ ದುಡಿಮೆ ಅಥವಾ ಜವಾಬ್ದಾರಿಯಿಂದಲೇ ಮನೆ ನಡೆಯಬೇಕೆಂಬ ಒತ್ತಡವೂ ಕಡಿಮೆಯಾಗಬೇಕಲ್ಲವೇ? ಅವನೂ ಮನೆ ಸಂಭಾಳಿಸುವ ಕೆಲಸದಲ್ಲಿ ಹೆಗಲು ಕೊಡಬೇಕಲ್ಲವೇ?

ಹೆಣ್ಣಿನ ಸಮಾನತೆಯ-ಘನತೆಯ ಗುರಿಯಲ್ಲಿ ಆರ್ಥಿಕ ಸ್ವಾವಲಂಬನೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಮದುವೆಯಾಗಬೇಕೇ ಬೇಡವೇ, ಯಾರನ್ನು ಮದುವೆಯಾಗಬೇಕು, ಹೇಗೆ ಬದುಕಬೇಕು, ಎಷ್ಟು ಗೌರವಕ್ಕೆ ತಾನು ಪಾತ್ರಳು, ಮತ್ತದನ್ನು ಹಕ್ಕಾಗಿ ಹೇಗೆ ಪಡೆಯಬೇಕು ಅನ್ನುವುದನ್ನು ನಿರ್ಧರಿಸುವಲ್ಲಿಯೂ ಆರ್ಥಿಕ ಜ್ಞಾನದ ಪಾತ್ರವಿದೆ.

ಹೆಣ್ಣಿಗೂ ಗಂಡಿಗೂ ಮಾತನಾಡಲು ಪ್ರೀತಿಯ ಮಾತುಗಳ ಹೊರತಾಗಿಯೂ ಬೇರೆ ವಿಷಯಗಳ ಅಗತ್ಯವಿದೆ. ಒಬ್ಬರಿಗೊಬ್ಬರ ಕಾರ್ಯಕ್ಷೇತ್ರವನ್ನು ಇಷ್ಟೊಂದು ಬೇರ್ಪಡಿಸಿದರೆ ಮಾತನಾಡಲು ಸಾಮಾನ್ಯ ವಿಷಯವಾದರೂ ಏನಿರುತ್ತದೆ? ಹೊರಗಿನವರ ಜೊತೆ ಇಷ್ಟು ಚೆನ್ನಾಗಿರೋ ನನ್ನ ಗಂಡ ನನ್ನ ಜೊತೆ ಮಾತನಾಡುವುದೇ ಇಲ್ಲ ಅಂತ ಹೆಣ್ಣು ಹಲುಬಿದರೆ, ಅಯ್ಯೋ ಇವಳ ಜೊತೆ ಮಾತಾಡಲು ವಿಷಯವೇ ಇಲ್ಲ ಅಂತ ಗಂಡು ಸಂಜೆಯಾದರೆ ಸ್ನೇಹಿತರನ್ನು ಅರಸಿಕೊಂಡು ಹೋಗುತ್ತಾನೆ.

ಪ್ರೀತಿಗೂ-ಗೌರವಕ್ಕೂ ತುಂಬಾ ವ್ಯತ್ಯಾಸವಿದೆ ಮತ್ತು ಗೌರವ ಎನ್ನುವುದು ಆರೋಗ್ಯಕರ ಬದುಕಿಗೆ ಪ್ರೀತಿಯಷ್ಟೇ ಮುಖ್ಯ.

ಇದನ್ನೂ ಓದಿ : Meeting Point : ಒಂಟಿ ಹುಡುಗನ ಮೇಲೆ ಹುಡುಗಿಯರು ಅತ್ಯಾಚಾರ ಮಾಡುವುದಿಲ್ಲವೆಂಬ ಧೈರ್ಯ ನಮಗೆ!

Published On - 7:22 pm, Sat, 2 October 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ