Meeting Point : ಅವಳನ್ನು ದೂರ ಮಾಡುವುದು ಅಷ್ಟು ಸುಲಭದ್ದಾಗಿರಲಿಲ್ಲ

True Love Never Ends : ‘ನಿನ್ನ ಓದ್ಸುಕೆ ಪ್ರಾಣನೇ ಒತ್ತಿಟ್ಟಿವ್ನಿ, ಪಟ್ನ ಅಂತ ಹೋಯ್ತಿಯ ಪಿರುತಿ ಪ್ರೇಮ ಅಂತ ಮಾನ ಕಳುದ್ಬುಟ್ಟೀಯ ಗ್ಯಪ್ತಿ ಇರ‍್ಲಿ ಮಗ’ ಎಂದು ಉಸಿರುಗಚ್ಚಿದ್ದ ನೆನಪು ಆಗಾಗ್ಗೆ ನನ್ನ ಕಣ್ಣುಗಳಲ್ಲು ನೀರಿಳಿಸಿ ಹೋಗುತ್ತಿತ್ತು. ಅಪ್ಪನ ಹರಿದ ಬನಿಯನ್, ಮುರಿದ ಮನೆ ತಡಿಕೆ ಬಾಗಿಲು, ಸೆರಗು ಹರಿದ ಅವ್ವಳ ಸೀರೆ, ಒಣಗಿ ನಿಂತ ರಾಗಿ ಪೈರು ಎಲ್ಲವು ಅವಳು ನನ್ನನು ಹಿಂಬಾಲಿಸುವಾಗಲೆಲ್ಲಾ ಒಂದು ಚುಚ್ಚು ಚುಚ್ಚಿ ಮಾಯವಾಗುತ್ತಿದ್ದವು.- ಪ್ರಕಾಶ್ ಪೊನ್ನಾಚಿ

Meeting Point : ಅವಳನ್ನು ದೂರ ಮಾಡುವುದು ಅಷ್ಟು ಸುಲಭದ್ದಾಗಿರಲಿಲ್ಲ
ಲೇಖಕ ಪ್ರಕಾಶ ಪೊನ್ನಾಚಿ
ಶ್ರೀದೇವಿ ಕಳಸದ | Shridevi Kalasad

|

Sep 09, 2021 | 10:46 AM

Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್​’

ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್​ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ? ಓದುತ್ತಿರುವ ನೀವೂ ಈ ಸಂವಾದದಲ್ಲಿ ಪ್ರತಿಕ್ರಿಯಾತ್ಮಕ ಬರಹಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com

ಪ್ರಕಾಶ್ ಪೊನ್ನಾಚಿ (ಜಯಪ್ರಕಾಶ ಪಿ) ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮದವರು. ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹನೂರು ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಮಣ್ಣಿಗೆ ಬಿದ್ದ ಮಳೆ’ ಮೊದಲ ಕವನ ಸಂಕಲನವು 2014 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನಸಹಾಯದಲ್ಲಿ ಆಯ್ಕೆಯಾಗಿ ಬಿಡುಗಡೆಯಾಗಿದೆ. ಸದ್ಯ ಎರಡನೇ ಕವನ ಸಂಕಲನದ ಬಿಡುಗಡೆಗೆ ತಯಾರಿ ನಡೆದಿದೆ.

ಪ್ರಕಾಶ್ ಅವರ ಬರಹ ನಿಮ್ಮ ಓದಿಗೆ :

ಆಗೆಲ್ಲಾ ಈ ಮೊಬೈಲುಗಳ ಹಾವಳಿ ಅಷ್ಟಿರಲಿಲ್ಲ. ಹಾಸ್ಟೆಲಿನಲಿ ಇದ್ದ ಲ್ಯಾಂಡ್​ಲೈನಿಗೆ ಎಲ್ಲಾ ಹುಡುಗರ ಮನೆಯವರು ಕರೆ ಮಾಡುತ್ತಿದ್ದರು. ಅತ್ತಲಿಂದ ಅಪ್ಪನೋ ಅಮ್ಮನೋ ಇನ್ಯಾರದೋ ಅಕ್ಕನೋ ತಂಗಿಯೋ ಧ್ವನಿಗಳು ಮಾಮೂಲಿ. ನನಗೂ ಫೋನೂ ಬರುತ್ತಿತ್ತು. ಏನೇನೋ ಹುಸಿಸುಳ್ಳುಗಳನ್ನು ಹೇಳಿ ಹೆಚ್ಚು ಹೊತ್ತು ಕಳೆಯದೆ ಅವಳೊಟ್ಟಿಗೆ ನಾಲ್ಕು ಮಾತು ಆಡಿ ಫೋನು ಇಡುವುದು ದೈನಂದಿನ ಅಭ್ಯಾಸವಾಗಿತ್ತು. ಆದರೆ ಆ ಸುಳ್ಳು ಹೆಚ್ಚು ಹೊತ್ತು ಗಟ್ಟಿಯಾಗಿ ನಿಲ್ಲಲಿಲ್ಲ ಇಡೀ ಹಾಸ್ಟೆಲಿಗೆ ನಾನು ಅದೇ ಏರಿಯಾದ ಹುಡುಗಿಯೊಟ್ಟಿಗೆ ಸಂಭಾಷಿಸುತ್ತಿದ್ದೇನೆಂಬ ಸತ್ಯ ಬಹುಬೇಗನೆ ಹಬ್ಬಿಯಾಗಿತ್ತು. ಫೋನು ರಿಂಗಾದಾಗೆಲ್ಲ ಅದು ಅವಳದೇ ಕರೆ ಇರಬೇಕು ‘ಹೋಗು ಹೋಗು’ ಎಂದು ಗೆಳೆಯರ ಗುಂಪು ಪುಸಲಾಯಿಸುತ್ತಿದ್ದುದು ನನಗೆ ತೀರಾ ಕಿರಿಕಿರಿ ಉಂಟುಮಾಡುತ್ತಿತ್ತು.

ಪ್ರೇಮ ಯಾವಾಗ ಯಾವ ರೀತಿ ತನ್ನ ಕೂಪಕ್ಕೆ ಎಳೆದುಕೊಳ್ಳುತ್ತದೆ ಎಂದು ಯೋಚಿಸುವಷ್ಟರಲ್ಲಿ ಎಲ್ಲವೂ ಕಳೆದು ಹೋಗಿರುತ್ತದೆ. ಪ್ರೀತಿ ಪ್ರೇಮ ನನ್ನುಸಿರು ಎನ್ನುವವರ ನಡುವೆ ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಎನ್ನುವವರವರೆಗೂ ಪ್ರೇಮ ತನ್ನ ಮಜಲುಗಳನ್ನು ಚಾಚಿಕೊಂಡಿದೆ. ಪ್ರೇಮ ಒಂದು ಆಧ್ಯಾತ್ಮಿಕ ಸ್ಥಿತಿ. ಅನುಭವಿಸಿದಷ್ಟೂ ಆಹ್ಲಾದವನ್ನೇ ಉಂಟು ಮಾಡುವ ಒಂದು ಕ್ರಿಯೆ. ಮನುಷ್ಯನನ್ನು ಉನ್ಮಾದದಲಿ ತೇಲಿಸಿ ಒಂದು ವಿಶೇಷ ಅನುಭೂತಿ ನೀಡುವ ಮತ್ತು ತನ್ನ ಸಾಂಗತ್ಯಕ್ಕೆ ತಾನೇ ರಹದಾರಿಯೊಂದನ್ನು ಸೃಷ್ಟಿಸಿಬಿಡುವ ವಿಶ್ವಾಸಿ. ಹಾಗಾಗಿಯೇ ವಯಸ್ಸಿನ ಹಂಗಿಲ್ಲದೇ ಎಲ್ಲರೊಳಗೊಂದಾಗಿ ತನ್ನನ್ನು ತಾನು ಜಗತ್ತಿಗೆ ತೆರೆದುಕೊಂಡು ಒಂದು ವಿಸ್ಮಯವನ್ನು ಸೃಷ್ಟಿಸಿದೆ.

ಹಳ್ಳಿಗಾಡಿನಿಂದ ಪಟ್ಟಣದ ಕಾಲೇಜು ಮೆಟ್ಟಿಲು ತುಳಿಯುವ ನಮ್ಮಂತಹ ಹುಡುಗರ ಪಾಡು ಹೇಳತೀರದ್ದಾಗಿತ್ತು. ಒಂದು ಕಡೆ ತಲೆಗೆ ಕೆಟ್ಟ ಕಿರಿಕಿರಿ ಕೊಡುತ್ತಿದ್ದ ಇಂಗ್ಲಿಷ್ ಪಾಠಗಳು ಮತ್ತೊಂದು ಕಡೆ ತರಹೇವಾರಿ ಬಟ್ಟೆ, ಬೂಟು, ಬೈಕುಗಳಲ್ಲಿ ಕ್ಯಾಂಪಸ್‌ನಲ್ಲಿ ಕಾಣುತ್ತಿದ್ದ ಸಹಪಾಠಿಗಳೊಟ್ಟಿಗೆ ಮಂಡಿಯುದ್ದ ಶರ್ಟು, ಹವಾಯಿ ಚಪ್ಪಲಿ ಹಾಕಿ ತಿರುಗಬೇಕಾದ ಮಹತ್ತರವಾದ ಕೀಳರಿಮೆ (ಆಗ ನಾವು ಅಂದುಕೊಂಡಿದ್ದು) ನಮ್ಮನ್ನು ಹೈರಾಣಾಗಿಸುತ್ತಿತ್ತು. ಇಷ್ಟೆಲ್ಲಾ ಅವಾಂತರಗಳ ನಡುವೆ ಅವಳು ಅದು ಹೇಗೆ ನನ್ನ ಸಾಂಗತ್ಯಕ್ಕೆ ಹಾತೊರೆದಳು ಎಂಬುದು ನನಗೀಗಲು ಪ್ರಶ್ನೆಯಾಗಿಯೇ ಉಳಿದಿದೆ. ಪ್ರೇಮ ಕುರುಡು ಮಣ್ಣು ಮಸಿ ಇಂತಹದ್ದೇ ಸಾಲು ಸಾಲು ಸಂಭಾಷಣೆಗಳು ಕಾಲೇಜಿನ ಕ್ಯಾಂಪಸಿನಲಿ ಮಾಮೂಲು ಕಿವಿಗೆ ಬೀಳುತ್ತಲೇ ಇದ್ದವು. ಆದರೆ ನಮ್ಮ ಕಾಲೇಜಿನಲಿ ಬೇರೆಯದೇ ಕಟ್ಟುಪಾಡುಗಳಿದ್ದವು. ಯಾವುದೋ ಹುಡುಗ ಹುಡುಗಿ ವಿಚಾರಕ್ಕೆ ಕ್ಯಾಂಪಸ್ಸಿನೊಳಗೆ ಪೊಲೀಸರ ಬೂಟಿನ ಸದ್ದಾದಾಗಿನಿಂದ ಇಲ್ಲಿ ಕಟ್ಟುನಿಟ್ಟಾದ ರೂಲ್ಸುಗಳನ್ನು ಜಾರಿಗೊಳಿಸಲಾಗಿತ್ತು.

ಹುಡುಗರು ಹುಡುಗಿಯರು ಒಟ್ಟಿಗೆ ಕೂರುವಂತಿಲ್ಲ, ಓಡಾಡುವಂತಿಲ್ಲ. ಲೈಬ್ರರಿಯಲ್ಲಿಯೂ ಬೇರೆ ಬೇರೆ ಆಸನ ವ್ಯವಸ್ಥೆ ಮಾಡುವಷ್ಟರ ಮಟ್ಟಿಗೆ ಎಲ್ಲವೂ ಬದಲಾಗಿತ್ತು. ಆದರೂ ಇವಳು ಅದು ಹೇಗೆ ಮತ್ತು ಏಕೆ ನನ್ನ ಸಹವಾಸಕ್ಕೆ ಹೀಗೆ ಹಾತೊರೆಯುತ್ತಿದ್ದಳು ಎಂಬುದು ನನಗೂ ಅರ್ಥವಾಗಿರಲಿಲ್ಲ. ಹೇಳಿಕೇಳಿ ನನ್ನದೇ ಹಾಸ್ಟೆಲ್ ಏರಿಯಾದ ಒಂದು ಮಟ್ಟಿಗೆ ಅನುಕೂಲಸ್ಥ ಮನೆತನದ ಹುಡುಗಿ ಯಾವ ಕಾರಣಕ್ಕೆ ನನ್ನನ್ನು ಹಚ್ಚಿಕೊಳ್ಳಲು ಹೀಗೆ ಕಾತರಿಸುತ್ತಾಳೆಂಬುದು ನಿಜಕ್ಕೂ ನನಗೆ ಅಚ್ಚರಿಯಾಗಿತ್ತು. ಪ್ರೇಮ ಒಮ್ಮೊಮ್ಮೆ ಹೂವು ಒಮ್ಮೊಮ್ಮೆ ಮುಳ್ಳು. ಆದರೂ ಇದು ಸ್ನೇಹವೋ ಪ್ರೇಮವೋ ಗೊಂದಲ ತಾನಾಗಿಯೇ ಸೃಷ್ಟಿಯಾಗಿತ್ತು.

ಕಾಲೇಜಿನ ಬಿಡುವಿನ ವೇಳೆಯಲ್ಲೋ ಅಥವಾ ಲೈಬ್ರರಿಯಲ್ಲೋ ಅಥವಾ ಕ್ಯಾಂಟೀನಿನ ಅಂಗಳದಲ್ಲೋ ಅವಳು ನನ್ನೊಟ್ಟಿಗೆ ಮಾತಿಗಿಳಿಯಲು ಸದಾ ಕಾತರಿಸುತ್ತಿದ್ದಾಳೆಂಬ ಸುಳಿವು ನನಗೆ ಅರಿವಾಗಿತ್ತು. ನನ್ನ ಸೈಕಲ್​ಅನ್ನು ಹಿಂಬಾಲಿಸಿ ಸೈಕಲ್ ವೇಗದಲಿ ತನ್ನ ಸ್ಕೂಟಿಯನ್ನು ಓಡಿಸಿಕೊಂಡು ಸ್ಟ್ಯಾಂಡಿನಲಿ ಸೈಕಲ್ ನಿಲ್ಲಿಸುವಾಗಲು ಹೇಗಾದರೂ ನನ್ನನ್ನು ಮಾತಿಗೆಳೆಯಬೇಕೆಂದು ಹಂಬಲಿಸುತ್ತಾಳೆ ಎಂಬ ಎಲ್ಲಾ ಸೂಚನೆಗಳು ಕಾಣುತ್ತಿದ್ದವು. ಆದರೆ ಹುಡುಗ ಹುಡುಗಿ ಹೀಗೆ ಸಂಧಿಸಿ ಭೇಟಿ ಮಾಡಬಹುದಾದ ಎಲ್ಲಾ ಬಾಗಿಲುಗಳನ್ನು ಕಾಲೇಜಿನ ಆಡಳಿತ ಮಂಡಳಿ ಮುಚ್ಚಿಹಾಕಿತ್ತು. ಆಕೆ ನನ್ನ ಹಿಂದೆ ಬಿದ್ದಿರಬಹುದಾದ ಎಲ್ಲಾ ಸುಳಿವುಗಳನ್ನು ಗೆಳೆಯರ ಬಳಗ ನಿಶ್ಚಯ  ಮಾಡಿತ್ತು. ನನಗೂ ಅವಳಿಗೂ ಯಾವುದರಲ್ಲೂ ಹೋಲಿಕೆಯಿಲ್ಲದ ಮೇಲೂ ಅವಳು ನನ್ನ ಸಖ್ಯವನ್ನು ಹಂಬಲಿಸುತ್ತಾಳೆಂಬ ಗೊಂದಲ ಸದಾ ನನ್ನೊಟ್ಟಿಗೆ ಜಾಗೃತವಾಗೇ ಇತ್ತು.

Meeting Point Prakash Ponnachi

ಸೌಜನ್ಯ : ಅಂತರ್ಜಾಲ

ಇದು ಪ್ರೀತಿ, ಪ್ರೇಮ, ಪ್ರಣಯ ಎಂದು ಗೀಳಿಡುವ ವಯಸ್ಸು ನಿಜ. ಯಾವುದು ಸರಿ ಯಾವುದು ತಪ್ಪು ಯಾವುದು ಸಮಂಜಸ ಎಂಬುದು ಏನೂ ಅರಿಯದೆ ವಯಸ್ಸಿನೊಟ್ಟಿಗೆ ಮನಸ್ಸು ಜಂಟಿಯಾಗಿಕೊಳ್ಳುವ ಹರೆಯ. ಆದರೆ ಹಳ್ಳಿಯ ಸಾಂಪ್ರದಾಯಿಕ ವ್ಯವಸ್ಥೆ, ಹುಟ್ಟು ಬಡತನ, ಹೆಗಲ ಮೇಲೆ ಹೆಳವನಂತೆ ಹೇರಿಕೊಂಡ ಜವಾಬ್ದಾರಿಗಳು, ಕಾಲೇಜಿನ ತರಗತಿಯಲ್ಲಿ ರಾಚುತ್ತಿದ್ದ ವ್ಯಕ್ತಿ ಭಿನ್ನತೆಗಳು, ಪಟ್ಟಣದವರೆಂದರೆ ಶ್ರೇಷ್ಠರೆಂದು ತಿಳಿದುಕೊಂಡಿದ್ದ ಸಾಮಾಜಿಕ ಜ್ಞಾನ- ಇವು ವಯಸ್ಸಿನ ಆಟೋಟಗಳಿಗೆಲ್ಲಾ ಬೇಲಿ ಹಾಕಿ ಕೂರಿಸಿದ್ದವು. ಹಾಸ್ಟೇಲಿನಲಿ ಬಿಟ್ಟಿ ಊಟ ತಿಂದು ಖಾಲಿ ಜೇಬಿನಲಿ ಕಾಲೇಜು ಮೆಟ್ಟಿಲು ತುಳಿಯುತ್ತಿದ್ದ ಜೀವ ಕ್ಯಾಂಟೀನಿನತ್ತ ಮುಖ ಮಾಡಿದರೆ ಎಲ್ಲಿ ಅಲ್ಲಿರುವ ಸ್ನೇಹಿತರೊಡನೆ ಮುಜುಗರಕ್ಕೀಡಾಗಬಹುದೋ ಎಂದು ಕಾಫಿ, ಟೀ ಕುಡಿಯುವುದಿಲ್ಲ ಎಂದು ದಾರಿ ತಪ್ಪುತಿತ್ತೋ, ಅವಳ ಹೈ ಹೀಲ್ಡ್ ಚಪ್ಪಲಿಗಳ ಮುಂದೆ ಅಟ್ಟೆ ಕಿತ್ತ ಹವಾಯಿ ತೊಟ್ಟವನ ತೊಳಲಾಟ ಮಂಪರು ಹಿಡಿಯುವುದೋ… ಅಂತಹವನ ಜೊತೆಗೆ ಪ್ರೇಮದ ಪರಿಪಾಠ ಎಂದಿಗೂ ರುಚಿಸಲಾರದು.

ಆದರೆ ಎಲ್ಲವನು ಕಣ್ಣಿನಲ್ಲೇ ವ್ಯಕ್ತಪಡಿಸಿ, ನೋಟದಲ್ಲೇ ತನ್ನೆಲ್ಲಾ ಭಾವಬಂಧಗಳನು ತನ್ನೊಟ್ಟಿಗೆ ಹಂಚುತ್ತಿರುವ ಅವಳಿಗೆ ಇದನ್ನೆಲ್ಲಾ ವಿವರಿಸುವುದಾದರು ಹೇಗೆ? ಅರಿಯದ ಹರೆಯ, ಹುಚ್ಚು ಮನಸ್ಸಿನ ಕೆಟ್ಟ ಮುಖಗಳ ಪರಿಚಯ ಅವಳಿಗೆ ಮಾಡಿಸುವುದಾದರೂ ಹೇಗೆ? ಬದುಕು ಮಾಯೆಯ ಆಟ ಎಲ್ಲಾ ಬಲೆಗಳನ್ನು ನುಣುಚಿ ಇಲ್ಲಿ ಗುರಿ ಹಿಡಿಯುವುದು ಅಸಾಧ್ಯವಾದ ಕಾಯಕ ಎಂದು ಅವಳ ಮನಸ್ಸಿನೊಳಗೆ ತುರುಕುವುದಾದರೂ ಹೇಗೆ? ಕ್ಯಾಂಟೀನೋ, ಲೈಬ್ರರಿಯೋ, ಸೈಕಲ್ ಸ್ಟ್ಯಾಂಡಿನಲ್ಲೋ ಭೇಟಿ ಮಾಡಬಹುದಾದ ಯಾವ ಸಂದರ್ಭಗಳೂ ಇಲ್ಲಿ ಇಲ್ಲ. ಅವಳ ಮನಸ್ಸಿನಲ್ಲಿ ಕನಸಿನ ಗೋಪುರಗಳೊಂದಷ್ಟನ್ನು ಅದಾಗಲೇ ಎತ್ತರಕ್ಕೆ ಅವಳು ಕಟ್ಟಿದ್ದಾಳೆ. ಆದರೆ ಅದು ಗಾಳಿಗೆ ಬೀಳುವಂತಹದ್ದು ಎಂದು ಮನವರಿಕೆಯಾದರೂ, ಅದನ್ನು ತಿಳಿಸುವವರು ಯಾರು? ಅಷ್ಟಕ್ಕೂ ಕಾಲೇಜಿನ ಆರಂಭದ ದಿನದಿಂದಲೂ ಅವಳೊಟ್ಟಿಗೆ ನಾನು ಮಾತನಾಡಿದ್ದು ಇಲ್ಲ. ಭೇಟಿ ಮಾಡುವ, ಮಾಡಿ ಅವಳಿಗೆ ಬುದ್ಧಿ ಹೇಳಿ ಓದಿನತ್ತ ಗಮನ ಹರಿಸಲು ತಿಳಿಸುವ ಎಂದುಕೊಂಡೆ ಆದರೆ ಭೇಟಿಗೆ, ಭೇಟಿಯ ಏಕಾಂತಕ್ಕೆ, ಅಲ್ಲಿನ ಆಗುಹೋಗುಗಳಿಗೆ ಸಹಿಸಿಕೊಳ್ಳುವಷ್ಟು ಹೃದಯ ಗಟ್ಟಿಯಾಗಲಿಲ್ಲ.

ಕಾಲೇಜಿನ ಕ್ಯಾಂಪಸ್ಸಿನಲಿ ಆಗಾಗ್ಗೆ ಪ್ರೀತಿ ಪ್ರೇಮದ ಗುಮಾನಿಗಳು ಸದ್ದು ಮಾಡುತ್ತಿದ್ದವು. ಯಾರಿಗೆ ಯಾರೋ ಪ್ರೇಮಪತ್ರ ಬರೆದದ್ದು, ಗಿಫ್ಟ್​ ಕೊಟ್ಟಿದ್ದು, ಬೈಕಿನಲಿ ಸುತ್ತಾಡಿದ್ದು, ಕಾಫಿಡೇಯಲಿ ಫೋಟೋ ಕ್ಲಿಕ್ಕಿಸಿದ್ದು ಇಂತಹುದೇ ಸಂಗತಿಗಳು ದಿನಕ್ಕೊಂದರಂತೆ ಚಿಗುರೊಡೆಯುತ್ತಿದ್ದವು. ಬಂಗಲೆಯಂತಹ ಬೈಕ್‌ಸ್ಟ್ಯಾಂಡಿನಲಿ ಅಷ್ಟೊಂದು ಐಷಾರಾಮಿ ಬೈಕುಗಳ ನಡುವೆ ವಿರಾಜಮಾನವಾಗಿ ನಿಲ್ಲುತ್ತಿದ್ದ ನನ್ನ ಸೈಕಲ್, ಅಂಗಳದಲಿ ಅಚ್ಚೊತ್ತುತ್ತಿದ್ದ ತರಹೇವಾರಿ ಬೂಟಿನ ಗುರುತುಗಳ ನಡುವೆ ಗುರುತೇ ಇಲ್ಲದ ನನ್ನ ಅಟ್ಟೆ ಕಿತ್ತ ಹವಾಯಿ ಚಪ್ಪಲಿ, ಚಪ್ಪಲಿಯನ್ನೇ ಕಾಣದ ಅಪ್ಪನ ಬೊಬ್ಬೆ ತುಂಬಿಕೊಂಡ ಕಾಲುಗಳು, ಸೋರುವ ಸೂರಲಿ ರಾತ್ರಿಯಿಡೀ ಸೆರಗು ಹಿಡಿದು ತಮ್ಮಂದಿರನು ನಿದ್ದೆಗ್ಹಚ್ಚುವ ಅವ್ವ, ಕಾಲದ ಸುಳಿಯೊಳಗೆ ಯಾವುದೋ ಗುರಿಗಾಗಿ ಹಂಬಲಿಸುತ್ತಿರುವ ನನ್ನ ನಿರ್ಗತಿಕ ಮನಸ್ಸು ಇಷ್ಟೆಲ್ಲದರ ನಡುವೆ ಅವಳು.

ಯಾವುದೋ ಗುರಿಯ ಹಿಂದೆ ಬಿದ್ದ ನಾನು. ನನ್ನನೇ ಗುರಿ ಎಂದುಕೊಂಡ ಅವಳು. ಇಲ್ಲಿ ಯಾವುದು ಸತ್ಯ ಯಾವುದು ಮಿಥ್ಯ ಗೊಂದಲದ ಮನಸ್ಸು ಅವಳೆಡೆಗೆ ವಾಲಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಆದರೂ ಅದನ್ನು ಅವಳಿಗೆ ಮುಟ್ಟಿಸುವುದಾಗಲಿ ಅಥವಾ ಅಂತಹ ಒಂದು ನಡವಳಿಕೆಯನ್ನು ಹರಾಜಿಗಿಡುವುದಾಗಲಿ ಮಾಡಲು ನನ್ನಿಂದಾಗಲಿಲ್ಲ. ಒಂದು ಕಪ್ ಚಹಾ ಜೊತೆಗೆ ಕೂತು ಹೀರಲೋ, ಅಥವಾ ಒಂದು ಪ್ಲೇಟ್ ಪಾನಿಪುರಿ ತಿನ್ನುತ್ತಾ ಒಂದಷ್ಟು ಹರಟಲೋ ಸದಾ ಅವಳು ಕಾಯುತ್ತಿದ್ದಳು. ಆದರೆ ಈ ಬೆತ್ತಲೆ ಜಗತ್ತಿನೆದುರು ಅದನ್ನು ಅನಾವರಣಗೊಳಿಸಲು, ಒಂದು ಏಕಾಂತ ಜಾಗದಲಿ ಅವಳ ಬೆನ್ನಮೇಲೆ ಕೈ ಇಟ್ಟು ನನ್ನ ಹಾದಿಯೇ ಬೇರೆ, ನನ್ನ ಚರಿತ್ರೆಗಾಗಲಿ ಅಥವಾ ವರ್ತಮಾನ, ಭವಿಷ್ಯಕ್ಕಾಗಲಿ ಈ ಪ್ರೀತಿ, ಪ್ರೇಮ ದೂರದ ಚಂದಿರನೇ, ಯಾವುದೋ ಕಾಣದ ಕುದುರೆಯ ಬೆನ್ನೇರಿ ಅಜ್ಞಾತ ಗುರಿಗಳೆಡೆಗೆ ಏಕಾಂಗಿಯಾಗಿ ಹೊರಟ ನನ್ನೊಟ್ಟಿಗೆ ಅವಳು ಸಹವರ್ತಿಯಾಗಲಾರಳು ಎಂದು ಹೇಳಬೇಕು ಎನಿಸಿದರೂ ಯಾಕೋ ನನ್ನ ಸೈಕಲನ್ನು ಹಿಂಬಾಲಿಸುವಾಗಲೂ, ತರಗತಿ ಕೋಣೆಗೆ ಹೊಕ್ಕಾಗ ನನ್ನನೇ ದಿಟ್ಟಿಸಿ ಕೂತಾಗಲೂ, ಎಲ್ಲರೂ ಲೈಬ್ರರಿಯಲಿ ಪುಸ್ತಕ ಹಿಡಿದಾಗ ಅವಳು ನನ್ನತ್ತಲೇ ನೋಡುವಾಗಲೂ ಮರುಕ ಒಂದು ಎದೆಯ ಗೂಡೊಳಗೆ ಸದ್ದಿಲ್ಲದೇ ಹುಟ್ಟಿಕೊಳ್ಳುತ್ತದೆ.

ಕಾಲೇಜಿನಲಿ ಕನ್ನಡ ಬೋಧಿಸುತ್ತಿದ್ದ ಲೆಕ್ಚರರ್‌ಗೆ ನಾನೆಂದರೆ ವಿಶೇಷ ಕಾಳಜಿಯೇ ಇತ್ತು. ಆಗಾಗ್ಗೆ ಸಣ್ಣಪುಟ್ಟ ಬರಹಗಳಲ್ಲಿ ತೊಡಗಿಕೊಂಡಿದ್ದ ನನ್ನನ್ನು ಪ್ರೋತ್ಸಾಹಿಸಿ ಒಂದಷ್ಟು ಬರೆಯಲು ವೇದಿಕೆ ಸೃಷ್ಟಿಸುತ್ತಿದ್ದರು ಅವರು. ಸಾಹಿತ್ಯಿಕ ಸ್ಪರ್ಧೆಗಳು ಸಾಮಾನ್ಯವಾಗಿ ನಡೆಯುತ್ತಿತ್ತು. ನಾನು ಸಣ್ಣಪುಟ್ಟ ಲೇಖನಗಳನ್ನು ಬರೆದಾಗ ಅದನ್ನು ಕಾಲೇಜಿನ ನೋಟೀಸ್‌ ಬೋರ್ಡಿನಲಿ ಎಲ್ಲರೂ ಓದುವಂತೆ ಪ್ರದರ್ಶಿಸಲಾಗುತ್ತಿತ್ತು. ಆ ಬಾರಿ ನಾನು ‘ಹದಿಹರೆಯದ ಹುಚ್ಚು ಬಯಕೆಗಳು’ ಎಂಬ ಶೀರ್ಷಿಕೆಯಿತ್ತು ಪ್ರೇಮ ಮತ್ತು ಅದರ ಪರಿಣಾಮದ ಕುರಿತಾಗಿ ಒಂದಷ್ಟು ಸಾಲುಗಳನ್ನು ಬರೆದು ಅವಳಿಗೆ ಅದು ತಲುಪಲೆಂದೇ ಕಾದೆ. ಬರಹ ಎಲ್ಲರ ಮೆಚ್ಚುಗೆ ಗಳಿಸಿತಾದರೂ ಅವಳ ಮೇಲೆ ಅದು ಯಾವ ಪರಿಣಾಮವನ್ನೂ ಬೀರಲಿಲ್ಲ.

ಬಹುಶಃ ಅವಳಿಗೆ ಪ್ರೇಮದ ಯಾವುದೋ ಒಂದು ಮುಖದ ಪರಿಚಯವಷ್ಟೇ ಅನುಭವಕ್ಕೆ ಬಂದಿದೆ. ಅದು ವಯೋಸಹಜದ್ದು. ಒಂದು ಹುಡುಗ ಹುಡುಗಿಯಲ್ಲಿ, ಹುಡುಗಿ ಹುಡುಗನಲ್ಲಿ ಕಾರಣವಿಲ್ಲದೆ ಬೆಳೆಸಿಕೊಂಡ ಅನುಭೂತಿ. ಅದರಾಚೆಗಿನ ಪ್ರೇಮದ ಕವಲುಗಳು ಅವಳ ಅನುಭವಕ್ಕೆ ಬಂದಿರಲಿಕ್ಕಿಲ್ಲ. ಅಪ್ಪನ ಬೆವರ ಹನಿಯಲ್ಲಿನ ಪ್ರೇಮ, ಹಸಿವಿಗೆ ಅವ್ವ ಕೈತುತ್ತಿಟ್ಟ ಪ್ರೇಮ, ಹೆಗಲ ಮೇಲೆ ಹೊತ್ತು ಜಗವ ತೋರಿಸಿದ ಅಜ್ಜನ ಪ್ರೇಮ, ಕಥೆಯಲ್ಲಿಯೇ ರಾಜಕುಮಾರನನ್ನ ಸೃಷ್ಟಿಸೋ ಅಜ್ಜಿಯ ಪ್ರೇಮ. ನನ್ನ ಮುಂದೆ ಇಂತಹವುಗಳ ನಡುವೆ ಅವಳೀಗ ಒಮ್ಮೊಮ್ಮೆ ಏನೂ ಅಲ್ಲವೆನಿಸಿದರೂ ಯಾವುದೋ ಒಂದು ತುಡಿತ, ಯಾವುದೋ ಸಣ್ಣ ಮಿಡಿತ ಅವಳೆಡೆಗೆ ಸದ್ದಿಲ್ಲದೆ ಎಳೆದೊಯ್ಯುತ್ತಿತ್ತು.

ಊರಿನಲ್ಲಿ ಯಾರೋ ಯಾರನ್ನೋ ಕದ್ದು ಮದುವೆಯಾದದ್ದು, ಧಾರಾವಾಹಿಯೊಂದರಲಿ ಅಪ್ಪನ ವಿರುದ್ಧವಾಗಿ ನಿಂತು ಓಡಿ ಹೋಗಿ ಮದುವೆ ಆಗುವುದು ಎಲ್ಲವನು ನೋಡಿದ್ದ ಅಪ್ಪ ಕಣ್ಣಾಲಿಗಳಲಿ ನೀರಾಡಿಸಿ ‘ನಿನ್ನ ಓದ್ಸುಕೆ ಪ್ರಾಣನೇ ಒತ್ತಿಟ್ಟಿವ್ನಿ, ಪಟ್ನ ಅಂತ ಹೋಯ್ತಿಯ ಪಿರುತಿ ಪ್ರೇಮ ಅಂತ ಮಾನ ಕಳುದ್ಬುಟ್ಟೀಯ ಗ್ಯಪ್ತಿ ಇರ‍್ಲಿ ಮಗ’ ಎಂದು ಉಸಿರುಗಚ್ಚಿದ್ದ ನೆನಪು ಆಗಾಗ್ಗೆ ನನ್ನ ಕಣ್ಣುಗಳಲ್ಲು ನೀರಿಳಿಸಿ ಹೋಗುತ್ತಿತ್ತು. ಅಪ್ಪನ ಹರಿದ ಬನಿಯನ್, ಮುರಿದ ಮನೆ ತಡಿಕೆ ಬಾಗಿಲು, ಸೆರಗು ಹರಿದ ಅವ್ವಳ ಸೀರೆ, ಒಣಗಿ ನಿಂತ ರಾಗಿ ಪೈರು ಎಲ್ಲವು ಅವಳು ನನ್ನನು ಹಿಂಬಾಲಿಸುವಾಗಲೆಲ್ಲಾ ಒಂದು ಚುಚ್ಚು ಚುಚ್ಚಿ ಮಾಯವಾಗುತ್ತಿದ್ದವು. ಅಲ್ಲಿಗೆ ಪ್ರೇಮದ ವಾಸನೆ ಮೂಗಿಗೆ ಬಡಿಯುವ ಮುನ್ನವೇ ಗಾಯಗೊಂಡ ನೆನಪುಗಳು ರಕ್ತಸ್ರಾವಗೊಳ್ಳಲಾರಂಭಿಸುತ್ತಿದ್ದವು.

Meeting Point Prakash Ponnachi

ಸೌಜನ್ಯ : ಅಂತರ್ಜಾಲ

ಸದ್ಯ ಸಂಪರ್ಕಕ್ಕೆ ಅಂತ ಉಳಿದದ್ದು ನನ್ನ ಹಾಸ್ಟೇಲಿನ ಲ್ಯಾಂಡ್‌ಲೈನ್ ಎಂಬ ಅರಿವು ಅವಳಿಗೆ ಇದ್ದುದರಿಂದಲೇ ಮತ್ತು ನನ್ನ ಹಾಸ್ಟೆಲ್‌ನ ಏರಿಯಾದಲ್ಲೇ ಅವಳ ಮನೆಯೂ ಇದ್ದುದರ ಪರಿಣಾಮ ಲ್ಯಾಂಡ್‌ಲೈನ್ ನಂಬರ್ ಸೆರೆಹಾಕಿ ಸೀದಾ ಅಲ್ಲಿಗೆ ಫೋನಾಯಿಸಿದ್ದಳು. ಇತ್ತಲಿಂದ ಹಲೋ ಎಂದಾಗ ಬಿದ್ದ ಅತ್ತಲಿನ ಮೌನದ ಉಸಿರಾಟ ಅವಳ ಎಲ್ಲಾ ಭಾವನೆಗಳನು ನನ್ನ ಎದೆಯ ಗೋಡೆಮೇಲೆ ಸರಸರನೆ ಅಚ್ಚೊತ್ತಿದಂತೆ ಭಾಸವಾಗಿತ್ತು. ಅವಳು ನನ್ನನು ಕಾಣಲೆಂದೇ ಅವರ ಮಹಡಿಯ ಮೇಲೆ ಗಂಟೆಗಟ್ಟಲೆ ಕಾಯುವ, ಯಾವುದೇ ಸೈಕಲ್ ಹಾರ್ನ್​ಗಾದರೂ  ನನ್ನದೇ ಎಂದು ಇಣಕುವ ಚಾಳಿ ದಿನಚರಿಯಂತೆ ನಡೆಯುತ್ತಿತ್ತು. ಕೆಲ ದಿನಗಳ ನಂತರ ಹೀಗೆ ಹಾಸ್ಟೆಲ್‌ಗೆ ಫೋನಾಯಿಸುವುದು ಅದರಾಚೆಗಿನ ಪರಿಣಾಮಗಳ ಕುರಿತು ಹೇಳಿದೆ. ಅಂದಿನಿಂದ ನನಗೆ ಬರುತ್ತಿದ್ದ ಫೋನಿನ ದನಿ ‘ಸೆಂದಾಗಿದ್ದೀಯಾ ಮಗ’ ಎನ್ನುವ ಅವ್ವಳ ದನಿಯದ್ದಷ್ಟೇ ಆಗಿತ್ತು.

ಕಾಲೇಜಿನ ಕೊನೆಯ ದಿನಗಳು. ಅಲ್ಲೊಂದು ಬೀಳ್ಕೊಡುಗೆ ಸಮಾರಂಭಕ್ಕೆ ಕಾಲೇಜನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸಹಪಾಠಿಗಳು ಬಣ್ಣಬಣ್ಣದ ಕಾರು, ಬಟ್ಟೆ, ಬೂಟುಗಳಿಂದ ಸಿಂಗಾರಗೊಂಡು ಕ್ಯಾಂಪಸ್ಸಿನಲ್ಲಿ ಜಮಾವಣೆಯಾಗಿದ್ದರು. ಅವಳು ಬೈತಲೆ ತೆಗೆದು ಬಾಚಿದ ನೀಳವಾದ ಕೂದಲು ಬಿಟ್ಟು, ಕೆಂಪುಗಲ್ಲದ ಮೇಲೆ ಕಪ್ಪು ಚುಕ್ಕೆಯ ಇಟ್ಟು, ತಿಳಿ ನೀಲಿ ಬಣ್ಣದ ಸೀರೆಯಲ್ಲಿ ನೀರೆಯಂತೆ ಬಂದಳಾದರೂ ಅವಳ ಮನಸ್ಸು ಮಳೆಯಲಿ ಮಿಂದ ಹೂವಿನ ಹಾಗೆ ಮೃದುವಾದ ಅನುಭವವನ್ನು ಅವಳ ಮುಖ ನೆನಪಿಸುತ್ತಿತ್ತು. ಒಂದೇ ಕಾಲೇಜಿನ ಕೋಣೆಯಲ್ಲಿ ಇದ್ದರೂ ಪೂರ್ಣವಾಗದ ಒಂದು ಅಪೂರ್ಣ ಸಂಬಂಧ ಹೀಗೆ ಅಂತ್ಯ ಕಾಲಕ್ಕೆ ಮುನ್ನುಡಿ ಬರೆದುಕೊಂಡ ದುಃಖ ಈಗ ಅವಳೊಟ್ಟಿಗೆ ನನಗೂ ಆಗ ತೊಡಗಿತ್ತು.

ಸಮಾರಂಭ ಮುಗಿಸಿ ಎಲ್ಲರೂ ಮನೆಯತ್ತ ದಾಪುಗಾಲು ಹಾಕುತ್ತಿದ್ದರು ನಾನು ಕಾಲೇಜಿನ ಪಕ್ಕದಲ್ಲೇ ಇದ್ದ ಕಾಕಾನ ಅಂಗಡಿಯಲಿ ಒದ್ದೆಯಾದ ಮನಸ್ಸಿಗೆ ಬಿಸಿಮುಟ್ಟಲೆಂದು ಒಂದು ಕಪ್ ಚಹಾ ಹಿಡಿದು ನಿಂತಿದ್ದೆ. ಅವಳ ಸುಜುಕಿ ಆಕ್ಸೆಸ್ ಸದ್ದು ದೂರದಲ್ಲೇ ಕಿವಿಗೆ ಬಿತ್ತು. ಯಾತನೆ ಮತ್ತು ವೇದನೆ ಜಂಟಿಯಾಗಿ ಈಗ ಮನಸ್ಸಿನೊಳಗೆ ಖಾತೆಯೊಂದ ತೆರೆದಂತಾಯಿತು. ಅವಳ ಮುಖವನ್ನು ನೋಡುವಷ್ಟು ಧೈರ್ಯವಾಗಲಿ, ಸ್ಥೈರ್ಯವಾಗಲಿ ನನ್ನಲ್ಲುಂಟಾಗದೆ ತಲೆ ತಗ್ಗಿಸಿ ಕುಳಿತೆ. ಕಾಕಾನ ಅಂಗಡಿಯ ಅನತಿ ದೂರದಲಿ ತನ್ನ ಗಾಡಿ ನಿಲ್ಲಿಸಿ ಒಂದೇ ಸಮನೆ ಹಾರ್ನ್ ಮಾಡಲಾರಂಭಿಸಿದಳು. ಸೈರನ್‌ನಂತೆ ಕಿವಿ ಸೀಳುತ್ತಿದ್ದ ಹಾರ್ನ್​ ಸದ್ದು ಸುತ್ತಮುತ್ತಲಿನವರ ಗಮನ ಸೆಳೆಯಿತೆ ವಿನಾ ಕೆಳಗೆ ಬಗ್ಗಿದ್ದ ನನ್ನ ತಲೆ ಮೇಲೇಳಿಸಲಾಗಲಿಲ್ಲ. ಕಿತ್ತು ಬರುತ್ತಿದ್ದ ನನ್ನೊಳಗಿನ ತಲ್ಲಣಗಳನ್ನೆಲ್ಲಾ ಅಲ್ಲೇ ಅದುಮಿಟ್ಟುಕೊಂಡು ಗುಟುಕು ನುಂಗಿದೆ. ಸೂರಿನಲಿ ತೊಟ್ಟಿಕ್ಕುತ್ತಿದ್ದ ಮಳೆಹನಿಗಳೊಟ್ಟಿಗೆ ನನ್ನ ಕಣ್ಣ ನೀರು ಜಾರಿಹೋಗಿದ್ದು ಅವಳ ಅರಿವಿಗೂ ಬಂದಿತ್ತು. ಕಾಕಾನ ಅಂಗಡಿಯಲಿ ಅಂಟಿಸಿದ್ದ ಜಾಹೀರಾತು ಹಾಳೆಯೊಂದರಲ್ಲಿ ಬರೆದಿದ್ದ ‘ಟ್ರೂ ಲವ್ ನೆವರ್ ಎಂಡ್ಸ್’ ಎಂಬ ಸಾಲು ಪಟ್ಟನೆ ಕಣ್ಣಿಗೆ ಬಿದ್ದಿತು.

ಇದನ್ನೂ ಓದಿ : Meeting Point : ಅಲ್ಲಿ ನೋಡ್ರೋ ‘ಮ್ಯಾಳಿಗಿ’ ಮ್ಯಾಲ ಹೊಂಟಾದ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada