Meeting Point : ಹಾಕಿದ ನಿಯಮ ಮುರಿಯುವುದು ಹೋಗಲಿ ಅತ್ತಿತ್ತ ದೂಡಾಡುವ ಪ್ರಯತ್ನ ಮಾಡದಿದ್ದರೆ ಅದೆಂಥಾ ಹರೆಯ?
Kukkarahalli Lake : ‘ವಾಚ್‍ಮನ್ ಕೈಯಲ್ಲೊಂದು ಲಾಠಿ ಹಿಡಿದು ಅವರನ್ನು ದೂರ ದೂರ ಕೂಡಲು ಅಥವಾ ಅಲ್ಲಿಂದ ಎದ್ದು ಹೋಗಲು ಜೋರು ಮಾಡಿ ಹೇಳುವುದನ್ನು ನಾನೇ ಕೇಳಿದ್ದೇನೆ. ಇದೆಂಥಾ ನ್ಯಾಯ? ಯಾರ ನೈತಿಕ ಮಟ್ಟವನ್ನು ಕಾಪಿಡಲು ಈ ಕ್ರೌಂಚಪಕ್ಷಿಗಳ ಬಲವಂತದ ಅಗಲಿಕೆ? ಆ ಜೋಡಿಗಳು ಏನು ಮಾಡಬೇಕು? ಅವರು ನಿರ್ಜನ ಪ್ರದೇಶವನ್ನು ಹುಡುಕುತ್ತಾ ಬೆಟ್ಟದ ತಪ್ಪಲನ್ನು ತಲುಪಿಬಿಟ್ಟರೆ, ಅದಕ್ಕೆ ಕಾರಣರು ಯಾರು?’ ಜಯಶ್ರೀ ಜಗನ್ನಾಥ
Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್’
ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ? ಓದುತ್ತಿರುವ ನೀವೂ ಈ ಸಂವಾದದಲ್ಲಿ ಪ್ರತಿಕ್ರಿಯಾತ್ಮಕ ಬರಹಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com
ಜಯಶ್ರೀ ಜಗನ್ನಾಥ ಮೈಸೂರಿನಲ್ಲಿ ವಾಸವಾಗಿರುವ ಲೇಖಕಿ, ಅನುವಾದಕಿ ಮತ್ತು ಫ್ರೆಂಚ್ ಶಿಕ್ಷಕಿ. ಜಗತ್ತಿನ ಆಗುಹೋಗುಗಳನ್ನು ಅಷ್ಟೇ ಕುತೂಹಲದಿಂದ ಗಮನಿಸುತ್ತ ಅದನ್ನು ಪ್ರಶ್ನಿಸುವ, ಪ್ರತಿಕ್ರಿಯಿಸುವ ಜೀವಂತಿಕೆ ಉಳಿಸಿಕೊಂಡಿರುವ ಉತ್ಸಾಹಿ. ಅವರ ವಿಚಾರಚಿತ್ರಣಗಳು ನಿಮ್ಮ ಓದಿಗೆ.
ಹರೆಯ, ಲೈಂಗಿಕ ಆಸಕ್ತಿ, ಆಕರ್ಷಣೆ, ನಿಯಮ ಭಂಗ, ಸ್ವಾತಂತ್ರ್ಯ, ಸ್ವೇಚ್ಚಾಚಾರ, ಏಕಾಂತ, ಅತ್ಯಾಚಾರ… ಇವೆಲ್ಲವುಗಳೂ ಮತ್ತೆ ಮತ್ತೆ ಉಪಯೋಗಿಸಿ ತಮ್ಮ ತಮ್ಮ ಸೂಕ್ಷ್ಮ ಅರ್ಥಗಳನ್ನೇ ಕಳೆದುಕೊಂಡಿರುವ ಹಳಸಲು ಪದಗಳಾಗಿಬಿಟ್ಟಿವೆ.
ಆದರೆ ಪ್ರತಿ ಹರೆಯದ ವ್ಯಕ್ತಿಗೂ ಹರೆಯವೆಂಬುದೊಂದು ನವನವೀನ ರೋಮಾಂಚನ. ಒಂದು ಸಮಾಜವಾಗಿ ನಾವು ಆ ಭಾವನೆಗಳಿಗೆ, ಅದು ತೋರುವ ಕುತೂಹಲಕ್ಕೆ ಮತ್ತು ಅದು ಬೇಡುವ ಏಕಾಂತಕ್ಕೆ ಅದೆಷ್ಟರ ಮಟ್ಟಿಗೆ ಉದಾರಿಗಳಾಗಿದ್ದೇವೆ? ಆ ಬೆರಗುಗೊಳಿಸುವ ವಯೋಧರ್ಮವನ್ನು ನಾವೆಲ್ಲಿ ಸಹಜವೆಂದು ಭಾವಿಸಿ ಅದರ ಅಭಿವ್ಯಕ್ತಿಗೆ ಸಹಕರಿಸಿ ಸುರಕ್ಷಿತ ತಾಣಗಳನ್ನು ಒದಗಿಸಿದ್ದೇವೆ?
ನನ್ನ ಮನಸ್ಸಿಗೆ ಬರುವ ನೆನಪಿನ ವಿವಿಧ ಚಿತ್ರಗಳು;
ನನ್ನ ಅಜ್ಜಿಯ ಹರೆಯ ಹೇಗಿದ್ದಿರಬಹುದು? ಶಿವಮೊಗ್ಗೆಯ ದೊಡ್ಡ ಬ್ರಾಹ್ಮಣರ ಕೇರಿಯಲ್ಲಿ ಬೆಳೆದ ಅವರಿಗೆ ಮೈನೆರೆಯುವ ಮುನ್ನವೇ ಒಂದು ಮಗುವಿದ್ದ ವಿಧುರನೊಂದಿಗೆ ಮದುವೆಯಾಗಿತ್ತು. ಲೋವರ್ ಸೆಕೆಂಡರಿಯವರೆಗೆ ಕಲಿತಿದ್ದ ಆಕೆ ಜೀವನ್ಮುಖಿಯಾದ ಜಾಣೆಯಾಗಿದ್ದರು. ಆ ಕಾಲದಲ್ಲಿ ನಾಟಕಗಳಿಗೆ ಹೋಗಲು ಅವರಿಗೆ ಸಾಧ್ಯವಿರಲಿಲ್ಲ. ಮನೆಯ ಹಿಂದಲ ಹಿತ್ತಿಲಲ್ಲಿ ಸರಿರಾತ್ರಿಯಲ್ಲಿ ನಿಂತು ತನ್ನ ಅಣ್ಣಂದಿರು ಹೇಳಿದ್ದ ನಾಟಕದ ಕತೆಗಳನ್ನು ನೆನಪಿಸಿಕೊಂಡು ಅದಕ್ಕೆ ತಕ್ಕ ಹಾಗೆ ಕತ್ತಲಲ್ಲಿ ದೂರದಿಂದ ತೇಲಿ ಬರುತ್ತಿದ್ದ ಟೈಗರ್ ವರದಾಚಾರ್ಯರದೋ ಇನ್ಯಾರದೋ ಹಾಡುಗಳನ್ನು ಮನನಮಾಡಿದ್ದರು. ದಶಕಗಳ ನಂತರವೂ ನಾನು ಚಿಕ್ಕ ಹುಡುಗಿಯಾಗಿದ್ದಾಗ ಹಾಡಿ ತೋರಿಸುತ್ತಿದ್ದರು. ನಾನು ಮತ್ತು ನನ್ನ ಅಕ್ಕನಿಗಿದ್ದ ಒಟ್ಟು ನಾಲ್ಕು ಅಡಿ ಜಡೆಗಳನ್ನು ದವನ ಮರುಗ ಹಾಕಿ ಕುದಿಸಿದ ಕೊಬ್ಬರಿ ಎಣ್ಣೆ ಹಚ್ಚಿ (ಮುಂದೆ ಕೂದಲು ಸೊಂಪಾಗಿ ಬೆಳೆದು ಒಳ್ಳೆಗಂಡ ಸಿಕ್ಕಲಿ ಅಂತ) ತೀಡಿ ಬಾಚಿ ಹೆಣೆಯುವಾಗಲೆಲ್ಲಾ ನಾಟಕದ ಹಾಡುಗಳು ಅವರ ಬಾಯಲ್ಲಿ ಬರುತ್ತಿದ್ದವು. ಟೈಗರ್ ವರದಾಚಾರ್ಯರು ದಶಾವತಾರ ನಾಟಕದಲ್ಲಿ ಕೂರ್ಮಾವತಾರದಲ್ಲಿ ಭೂದೇವಿಯ ಸೊಂಟ ಹಿಡಿದೆತ್ತಿ ಕೊಂಡೊಯ್ಯುವಾಗ ಭೂದೇವಿಯ ಪಾತ್ರಮಾಡುತ್ತಿದ್ದವರ ತಲೆಗೂದಲು ನೆಲ ಸಾರಿಸಿಕೊಂಡು ಸಾಗುತ್ತಿತ್ತು ಎಂದು ತಾವು ಕಣ್ಣಲ್ಲಿ ನೋಡೇ ಇರದ ದೃಶ್ಯವನ್ನು ವಿವರಿಸುವಾಗ ಅವರ ಕಣ್ಣಲ್ಲಿ ತಮ್ಮ ಹರೆಯದ ರಮ್ಯ ಕಲ್ಪನೆಗಳ ಮೃದು ಭಾವನೆಗಳ ಛಳಕಿತ್ತೇ?
ನಾನಿನ್ನೂ ಆಗ ಚಿಕ್ಕವಳು ಅವರು ಹೇಳುವ ಕತೆಗಳಲ್ಲಿ ರಾಕ್ಷಸರನ್ನು ಮಹಾವಿಷ್ಣು ಬಂದು ಕೊಲ್ಲುವುದನ್ನು ಕಾಯುತ್ತಿದ್ದೆ. ಅವರನ್ನು ಈ ಭಾವನೆಗಳ ಬಗ್ಗೆ ಕೇಳಲೇ ಇಲ್ಲವಲ್ಲಾ ಅಂತ ಈಗ ಅನ್ನಿಸುತ್ತದೆ. ನಾವೇಕೆ ಇಂತಹ ಸೂಕ್ಷ್ಮಗಳ ಬಗ್ಗೆ ಮಾತನಾಡಲಿ ಹಿಂಜರಿಯುತ್ತೇವೆ? ಬ್ರಾಹ್ಮಣರ ಕೇರಿಯಲ್ಲಿ ಹಿಂದೆಂದೋ ನಡೆದ ಯಾವುದೋ ಮಡಿ ಹೆಂಗಸು ಗರ್ಭಿಣಿಯಾಗಿ ಯಾವುದೋ ಬಾವಿಯಲ್ಲೋ ತುಂಗೆಯಲ್ಲೋ ಮುಳುಗಿ ಸತ್ತ ಕತೆಗಳನ್ನು ನಮ್ಮ ಕಿವಿಗೆ ಹಾಕುತ್ತಿದ್ದರು. ಹೀಗಾದರೆ ಹಾಗಾಗಬಹುದು ಎಂದು ಮಸುಕು ಮಸುಕಾದ ಚಿತ್ರಣಗಳನ್ನು ಹರಡಿ ನಮ್ಮನ್ನು ಹೆದರಿಸಿ ಎಚ್ಚರಿಕೆಯಲ್ಲಿರಿಸುವ ಒಂದು ಟ್ರಿಕ್ ಅದಾಗಿದ್ದಿರಬಹುದೇ?
ರುಕ್ಮಿಣಿ ಕೃಷ್ಣನ ಜೊತೆ ಎಲೋಪ್ ಮಾಡಿದ್ದು, ಪದ್ಮಾವತಿ ಶ್ರೀನಿವಾಸನನ್ನು ಪ್ರೇಮಿಸಿ ವರಿಸಿದ್ದು, ರಾಧಾರಾಸಲೀಲೆ, ಸುಭದ್ರಾಪರಿಣಯ ಶಕುಂತಲೆಯ ಕತೆ ಸತ್ಯವಾನ್ ಸಾವಿತ್ರಿ ಎಲ್ಲವನ್ನೂ ಓದಿ ಕೇಳಿಯೇ ಬೆಳೆದ ನಮ್ಮ ಸಮಾಜದ ಹೆಣ್ಣುಮಕ್ಕಳು/ಗಂಡುಮಕ್ಕಳು ತಮ್ಮ ತಮ್ಮ ಬದುಕಿನಲ್ಲಿ ಮಾತ್ರಾ ಪ್ರೀತಿ ಪ್ರೇಮಗಳ ಬಗ್ಗೆ ಉಸಿರೆತ್ತುವಂತಿರಲಿಲ್ಲ.
ನನ್ನಮ್ಮ ನನ್ನ ಅಜ್ಜಿಗಿಂತ ಕಡಿಮೆ ಮಾತನಾಡುವವರು. ಮದರಾಸಿನ ಇನ್ನೂರು ವರ್ಷಗಳಿಗೂ ಹಳೆಯ ಶಾಲೆಯಾದ ಪ್ರೆಸಿಡೆಂಸಿ ಗರ್ಲ್ಸ್ ಶಾಲೆಯಲ್ಲಿ ಸ್ವಾತಂತ್ರ್ಯಕ್ಕೆ ಮುಂಚೆ ಆಂಗ್ಲ ಉಪಾಧ್ಯಾಯಿನಿಯರುಗಳ ಕೆಳಗೆ ಕಲಿತು ಆಂಗ್ಲ ಪದ್ಧತಿಯ ಸೀನಿಯರ್ ಕ್ಯಾಂಬ್ರಿಜ್‍ಗೆ ಸಮಾನವಾದ ಎಸೆಸೆಲ್ಸಿಯನ್ನು ಮುಗಿಸಿದ್ದರು. ಈಗ ತೊಂಭತ್ತು ವರ್ಷದಲ್ಲೂ ಓದುವುದನ್ನು ಮುಂದುವರೆಸಿರುವ ಅವರು ಕನ್ನಡ ತಮಿಳು ಮತ್ತು ಆಂಗ್ಲಭಾಷೆಗಳಲ್ಲಿ ಕತೆಗಳನ್ನು ಓದುತ್ತಾರೆ. ಬೇಕಾದಷ್ಟು ರಮ್ಯಕತೆಗಳನ್ನು, ಶೇಕ್ಸ್ಪಿಯರ್ ಶೆಲ್ಲೀ ಕೀಟ್ಸ್ರನ್ನು ಓದಿರಬಹುದಾದ ಅವರ ಹರೆಯದಲ್ಲಿ ಅವರಿಗೆ ಏನೆನ್ನಿಸಿತ್ತು ಎಂದು ತಿಳಿದುಕೊಳ್ಳಲು ಅನೇಕ ಬಾರಿ ಪ್ರಯತ್ನಿಸಿ ತಲೆಹರಟೆ ಎನ್ನಿಸಿಕೊಂಡಿದ್ದೇನೆ. ತಮ್ಮ ಮಕ್ಕಳಿಗೆ ತಾವು ಕಂಡದ್ದಕ್ಕಿಂತ ಹೆಚ್ಚು ಸ್ವಾತಂತ್ರ್ಯ ಕೊಟ್ಟು ಕಾಲೇಜು ಸ್ನಾತಕೋತ್ತರ ಕೇಂದ್ರಗಳಿಗೆ ಕಳುಹಿಸಿ ಆಟಪಾಟಗಳಿಗೆ ಉತ್ತೇಜನ ನೀಡಿದ್ದರಾದರೂ ಗಂಡುಮಕ್ಕಳ ಜೊತೆ ಎಲ್ಲಾದರೂ ಕಾಣಿಸಿಕೊಂಡು ಮನೆತನಕ್ಕೆ ಕೆಟ್ಟ ಹೆಸರು ತರಬಾರದು ಎಂಬ ನಿಯಮವನ್ನು ನಮ್ಮ ತಲೆಯಲ್ಲಿ ಅಚ್ಚೊತ್ತಿಸಿಯೇ ಕಳುಹಿಸಿದ್ದರು. ಅವರಾದರೂ ಒಂದೇ ಒಂದು ಬಾರಿಯಾದರೂ ನನ್ನ ತಂದೆಯ ಕೈ ಹಿಡಿದಿದ್ದನ್ನು ಕೂಡಾ ನಾನು ನೋಡಲಿಲ್ಲ. ಹಾಗಾದರೆ ಅಷ್ಟೊಂದು ಓದಿದ್ದ ಸಾಹಿತ್ಯದ ರಸಾಸ್ವಾದವೆಲ್ಲಾ ಒಳಗೊಳಗೇ ಇಂಗಿ ಹೋಗುತ್ತಿತ್ತೇ?
ಅರವತ್ತರ ದಶಕದಲ್ಲಿ ಅಮೆರಿಕಕ್ಕೆ ಹೋಗಿದ್ದು ಬಂದಿದ್ದ ನಮ್ಮ ಒಬ್ಬ ಸೋದರತ್ತೆ ನಾನು ಕಾಲೇಜಿನಲ್ಲಿದ್ದಾಗ ಹೇಳಿದ್ದ ಒಂದು ಮಾತು ನೆನಪಾಗುತ್ತದೆ. ಅವರು ಅಮೆರಿಕದಲ್ಲಿದ್ದಾಗ ಅವರ ಪಕ್ಕದ ಮನೆಯಲ್ಲಿದ್ದ ಕುಟುಂಬದ ತಾಯಿ ತನ್ನ ಹದಿಹರೆಯದ ಮಗಳಿಗೆ ಗರ್ಭನಿರೋಧಕವನ್ನು ಉಪಯೋಗಿಸುವುದು ಹೇಗೆ ಎಂದು ಹೇಳಿಕೊಡುತ್ತಿದ್ದಳಂತೆ. ಅದನ್ನು ನೋಡಿ ಇವರಿಗೆ ದಂಗು ಬಡೆದಿತ್ತಂತೆ!
ನನ್ನ ಮಕ್ಕಳು ಅದೇ ಅಮೆರಿಕದಲ್ಲಿ ಕಾಲೇಜಿಗೆ ಹೋದಾಗ ನಾನೂ ಅವರೊಟ್ಟಿಗೆ ಹೋಗಿ ಹದಿಹರೆಯದವರಿಗೆ ಅಲ್ಲಿ ಕೊಡುವ ಸ್ವಾತಂತ್ರ್ಯದ ಮಟ್ಟ ಏನೆಂದು ನೋಡಿದೆ. ಒಂದೇ ಹಾಸ್ಟೆಲಿನಲ್ಲಿ ಹುಡುಗರು ಹುಡುಗಿಯರು ಇರಬಹುದು. ಯಾವ ಮಕ್ಕಳು ಯಾವುದೇ ಹಾಸ್ಟೆಲ್ಲಿನ ಒಳಗೆ ಎಷ್ಟು ಹೊತ್ತಿಗಾದರೂ ಹೋಗಬಹುದು. ವಾಚನಾಲಯಗಳೂ ಪ್ರಯೋಗಾಲಯಗಳೂ ಹೆಚೂಕಮ್ಮಿ 24 ಗಂಟೆಗಳವರೆಗೂ ತೆಗೆದಿರುತ್ತವೆ. ಹಾಗೆಂದು ಆ ಕಾಲೇಜುಗಳಲ್ಲಿ ಎಲ್ಲಾ ಮಕ್ಕಳೂ ತಮ್ಮ ಜವಾಬ್ದಾರಿಗಳನ್ನು ಮರೆತು ಹಾಳಾಗಿ ಹೋಗುತ್ತಾರಾ? ಇಲ್ಲವೇ ಇಲ್ಲ. ಓದಿನ ಜೊತೆಗೇ ಸಣ್ಣಪುಟ್ಟ ಕೆಲಸಗಳನ್ನೂ ಮಾಡುತ್ತಿರುತ್ತಾರೆ. ಅಲ್ಲಿ ಇಲ್ಲಿ ಮತ್ತು ಎಲ್ಲೆಲ್ಲೂ ಚೌಕಟ್ಟಿನಿಂದಾಚೆಗೆ ಜಾರಿ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವ ಒಂದಿಷ್ಟು ಯುವಕಯುವತಿಯರಿದ್ದೇ ಇರುತ್ತಾರೆ. ಯಾವ ಬೇಲಿಯೂ ಅದನ್ನು ಸಂಪೂರ್ಣವಾಗಿ ತಡೆಯಲಾಗದು.
ಹಾಗಾದರೆ ಕರ್ಫ್ಯೂ ಮತ್ತಿತರ ನಿರ್ಬಂಧಗಳಿಂದ ಪ್ರಯೋಜನವಾಗುತ್ತದೆಯೋ ಅಥವಾ ತಮ್ಮತಮ್ಮ ಜವಾಬ್ದಾರಿಯನ್ನು ತಾವೇ ಅರ್ಥ ಮಾಡಿಕೊಳ್ಳುವುದರಿಂದ ಪ್ರಯೋಜನವಾಗಬಹುದೋ?
ನಾನು ಮುಕ್ಕಾಲುವಾಸಿ ದಿನಗಳಲ್ಲಿ ನಮ್ಮೂರಿನ ಕುಕ್ಕರಳ್ಳಿಕೆರೆಯ ಸುತ್ತಾ ವ್ಯಾಯಾಮಕ್ಕೆಂದು ನಡೆಯುತ್ತೇನೆ. ಈ ಕೆರೆಯಲ್ಲಿ ಅಲ್ಲಲ್ಲಿ ಮರಗಳ ನಡುವೆ, ಲತಾಕುಂಜಗಳ ಕೆಳಗೆ ಕಲ್ಲುಬೆಂಚುಗಳಿವೆ. (ಇಂಥದೊಂದು ಬೆಂಚಿನ ಮೇಲೆ ಕುಳಿತೇ ಕುವೆಂಪುರವರು ತಮ್ಮ “ದೋಣಿ ಸಾಗಲಿ…” ಬರೆದರೆಂದು ಪ್ರತೀತಿ) ಅಂಥಾ ರಮ್ಯ ಕತೆಯಿರುವ ಬೆಂಚಿನ ಮೇಲೆ ಯುವಜೋಡಿಗಳು ಕೂತಿರುವಾಗ ಆಗಾಗ್ಯೆ ಒಬ್ಬ ವಾಚ್‍ಮನ್ ಕೈಯಲ್ಲೊಂದು ಲಾಠಿ ಹಿಡಿದು ಬಂದು ಅವರನ್ನು ದೂರ ದೂರ ಕೂಡಲು ಅಥವಾ ಅಲ್ಲಿಂದ ಎದ್ದು ಹೋಗಲು ಜೋರು ಮಾಡಿ ಹೇಳುವುದನ್ನು ನಾನೇ ಕೇಳಿದ್ದೇನೆ. ಇದೆಂಥಾ ನ್ಯಾಯ? ಯಾರ ನೈತಿಕ ಮಟ್ಟವನ್ನು ಕಾಪಿಡಲು ಈ ಕ್ರೌಂಚಪಕ್ಷಿಗಳ ಬಲವಂತದ ಅಗಲಿಕೆ? ಆ ಜೋಡಿಗಳು ಏನು ಮಾಡಬೇಕು? ಅವರು ನಿರ್ಜನ ಪ್ರದೇಶವನ್ನು ಹುಡುಕುತ್ತಾ ಬೆಟ್ಟದ ತಪ್ಪಲನ್ನು ತಲುಪಿ ಬಿಟ್ಟರೆ, ಅದಕ್ಕೆ ಕಾರಣರು ಯಾರು?
ಅಪ್ಪಅಮ್ಮ ತೋರಿಸಿದ ವ್ಯಕ್ತಿಯನ್ನು ಮದುವೆಯಾಗಿ ಅದು ಆಗುವವರೆಗೂ ಕನಸುಗಳನ್ನು ಕಡಿವಾಣ ಹಾಕಿಟ್ಟು ತಮಗೆ ಹರೆಯವೇ ಬಂದಿಲ್ಲವೇನೋ ಎಂಬಂತೆ ನಡೆದುಕೊಳ್ಳುವ ಮಕ್ಕಳು ನಮಗೆ ಸಿಗಬೇಕೆಂದು ನಾವ್ಯಾಕೆ ಬಯಸುತ್ತೇವೆ? ಅಥವಾ ಕುತೂಹಲಕಾಗಿ ಕೈಕೈ ಹಿಡಿದು ಹತ್ತಿರ ಕುಳಿತು ನಾಲ್ಕಾರು ಮಾತುಗಳನ್ನು ಆಡಿದ ಮಾತ್ರಕ್ಕೇ ಶೀಲಹರಣವೇ ಆಗಿ ಹೋಯಿತು, ಮನೆತನದ ಮಾನವೇ ಹಾಳಾಯಿತು ಎಂಬ ಗೋಳ್ಯಾಕೆ? ಹಿರಿಯರಾಗಿ ನಾವು ಅಂತಹ ಕಿರಿವಯಸ್ಸಿನವರಿಗೆ ತಮ್ಮ ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಲು ಅವಕಾಶ ಕೊಟ್ಟಿದ್ದೇವೆಯೇ? ಎಲ್ಲಾದರೂ ಯಾರಿಗಾದರೂ ತಾವು ಜೋಡಿಯಾಗಿ ಕಾಣಿಸಿಕೊಂಡು ಬಿಟ್ಟರೆ ಅವರು ಮನೆಗೆ ಹೋಗಿ ಚಾಡಿ ಹೇಳಿ ಗಾಸ್ಸಿಪ್ ಮಾಡಿ ಸಮಸ್ಯೆ ತಂದಿಡುತ್ತಾರೆ ಎಂದು ಹೆದರಿ ಜೋಡಿಗಳು ಬೆಟ್ಟದ ತಪ್ಪಲನ್ನು ಅರಸುತ್ತಿರಬಹುದಲ್ಲವೇ?
ನಾನು ಹಾಕುವ ಚೌಕಟ್ಟಿನ ಒಳಗೇ ನಿನ್ನ ಹರೆಯದ ಕನಸುಗಳನ್ನು ಕಟ್ಟಿಡು ಎಂಬ ಅಪ್ಪಣೆ ಹಿರಿಯರಿಂದ ಸಿಗುತ್ತದೆ. ಅದು ನಿನ್ನ ಒಳ್ಳೆಯದಕ್ಕೇ ಎನ್ನುತಾರೆ, ನಿಜ. ಅದು ಸತ್ಯವೂ ಹೌದು. ಚೌಕಟ್ಟು ಮುರಿಯಲೆತ್ನಿಸಿದರೆ ಅಲ್ಲಿ ಅಪಾಯವಿರಬಹುದು ಎಂದು ತಿಳಿದಿರುತ್ತದೆ, ಖಂಡಿತ. ಆದರೂ ಸಮಾಜ ಹಾಕಿರುವ ಚೌಕಟ್ಟಿನ ನಿಯಮಗಳನ್ನು ಮುರಿಯದಿದ್ದರೆ ಹೋಗಲಿ ಅತ್ತಿತ್ತ ದೂಡಲಾದರೂ ಪ್ರಯತ್ನಿಸದ ಹರೆಯವೆಂಥಾ ಹರೆಯ?
ಇದನ್ನೂ ಓದಿ : Meeting Point : ‘ನಿನ್ನ ಗೆಳೆಯನನ್ನು ಆಗಾಗ ಇಲ್ಲಿ ಕರೆಯಬಹುದು ನನಗೇನೂ ತೊಂದರೆ ಇಲ್ಲ’