Sydney Diary : ‘ಈ ಕೀಳು ಸಂಸ್ಕೃತಿಯ ದೇಶಕ್ಕೇಕಪ್ಪಾ ಬಂದಿರಿ, ಇಲ್ಲಿಯ ಪೌರತ್ವಕ್ಕಾಗಿ ಅದ್ಯಾಕೆ ಅಷ್ಟು ತಿಣುಕಾಡಿದಿರಿ?’

NRI : ‘ಇವರು ರಾತ್ರೋರಾತ್ರಿ ತಮ್ಮನ್ನು ಸಿರಿವಂತರೆಂದೂ ಬಾಡಿಗೆ ಮನೆಯವರು ಬಡವರೆಂದು ಅದೆಷ್ಟು ಭ್ರಮೆಗೆ ಬೀಳುತ್ತಾರೆಂದರೆ ನಮ್ಮ ಮಗುವಿನ ಶೂ ಚಿಕ್ಕದಾಗುತ್ತಿದೆ, ಬಟ್ಟೆ ಹಾಕಿಕೊಳ್ಳದೇ ಹಾಳಾಗುತ್ತಿದೆ ನಿಮ್ಮ ಮಗುವಿಗೆ ತಂದುಕೊಡಲೇ? ಅಂತ ಕೇಳುವಷ್ಟು! ಬೇಸತ್ತು ಒಂದು ದಿನ ಅವರನ್ನು ಎದುರಿಗೆ ಕೂರಿಸಿಕೊಂಡು ನನ್ನ ಸಂಬಳ ಎಷ್ಟಿದೆ ಅಂತ ಹೇಳಿದೆ.’ ಶ್ರೀಹರ್ಷ ಸಾಲಿಮಠ

Sydney Diary : ‘ಈ ಕೀಳು ಸಂಸ್ಕೃತಿಯ ದೇಶಕ್ಕೇಕಪ್ಪಾ ಬಂದಿರಿ, ಇಲ್ಲಿಯ ಪೌರತ್ವಕ್ಕಾಗಿ ಅದ್ಯಾಕೆ ಅಷ್ಟು ತಿಣುಕಾಡಿದಿರಿ?’
Follow us
ಶ್ರೀದೇವಿ ಕಳಸದ
|

Updated on:Sep 05, 2021 | 11:57 AM

ಸಿಡ್ನಿ ಡೈರಿ – Sydney Diary – 2 : ಕೆಲಸದ ವೀಸಾ ಮೇಲೆ ಬಂದಿದ್ದ ನನ್ನ ಗೆಳೆಯ ತಿಪ್ಪ ನನ್ನೊಡನೆ ಹೇಳಿಕೊಂಡ ಹಾಗೆ ಅವನ ಜೊತೆ ನಡೆದದ್ದೇನೆಂದರೆ, ಕನ್ನಡಿಗರು ನಮ್ಮವರು ಎಂಬ ಒಲುಮೆಯಿಂದ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಹೋಗಿದ್ದನಂತೆ. ಆತ್ಮೀಯವಾಗಿ ಬರಮಾಡಿಕೊಂಡು ಇಪ್ಪತ್ತು ಡಾಲರುಗಳ ಮೇಂಬರ್​ಶಿಪ್  ಶುಲ್ಕವನ್ನು ಪೀಕಿಸಿಕೊಂಡರಂತೆ. ಕೊಂಚ ಹೊತ್ತು ಎಲ್ಲರೂ ಆತ್ಮೀಯವಾಗೇ ಮಾತನಾಡಿಸಿದರಂತೆ. ಒಬ್ಬೊಬ್ಬರ ಪರಿಚಯ ಬೆಳದಂತೆ ತಿಪ್ಪ ರೆಸಿಡೆಂಟ್ ಅಥವಾ ಪ್ರಜೆ ಅಲ್ಲ ಕೆಲಸದ ವೀಸಾದ ಮೇಲೆ ಬಂದಿರುವವನು ಎಂದು ತಿಳಿಯಿತಂತೆ. ಎರಡು ಅಂದರೆ ಕರಾರುವಾಕ್ ಎರಡೇ ಕ್ಷಣದಲ್ಲಿ ಅನೇಕ ಜನ ಅವನ ಜೊತೆ ಮಾತನಾಡಿಸುವುದು ನಿಲ್ಲಿಸಿದರಂತೆ. ಇಲ್ಲಿಯವರೆಗೂ ಎದುರಿಗೆ ಕಂಡರೂ ಮಾತನಾಡಿಸಿಲ್ಲವಂತೆ! ತಿಪ್ಪನ ಕತೆಯಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ನನಗೂ ಇಂತಹ ಅನೇಕ ಅನುಭವಗಳಾಗಿರುವುದುಂಟು. ಶ್ರೀಹರ್ಷ ಸಾಲಿಮಠ 

“ಎನ್ನಾರೈಗಳಲ್ಲಿ ಜಾತಿ ಮತ್ತು ವರ್ಗ ವಿಭಜನೆಯ ಸ್ವರೂಪ” ಎನ್ನುವುದು ಒಂದು ಒಳ್ಳೆಯ ಸಮಾಜಶಾಸ್ತ್ರದ ಪಿಎಚ್​.ಡಿ ವಿಷಯವಾಗಬಲ್ಲದು. ಇಂಡಿಯಾದಲ್ಲಿ ಹುಟ್ಟಿದವನು ಯಾವ ದೇಶಕ್ಕೇ ಹೋದರೂ ಸಹ ತನ್ನ ಜೊತೆಗೆ ತನ್ನ ಜಾತಿಯನ್ನು ಮತ್ತು ವರ್ಗವನ್ನು ಕೊಂಡೊಯ್ಯುತ್ತಾನೆ ಎಂಬುದು ನಾನು ಕೇಳಿದ ಮಾತ್ರವಲ್ಲ ನೋಡಿದ ಸತ್ಯ ಕೂಡ ಹೌದು. ಕನ್ನಡಿಗರಲ್ಲಿ ಜಾತಿಮೂಲದ ಸಂಘಟನೆಗಳು ಸಾಕಷ್ಟು ಬಲವಾಗಿರದಿದ್ದರೂ ಆಂಧ್ರದ ರೆಡ್ಡಿ ಮತ್ತು ನಾಯುಡುಗಳ ಜಾತಿಸಂಘಟನೆಗಳು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ನನಗೆ ಎರಡೂ ಕಡೆಯಿಂದ ಆಹ್ವಾನಗಳು ಬರುತ್ತವೆ!

ಕನ್ನಡ ಸಂಘಟನೆಗಳ ಕಡೆಗೆ ನಾನು ಹೋಗುವುದಿಲ್ಲ. ಎಷ್ಟೋ ಜನ ಸಿಡ್ನಿಯ ಕನ್ನಡ ಸಂಘದಲ್ಲಿ ಇಂಥವರಿದ್ದಾರೆ ಅಂಥವರಿದ್ದಾರೆ ನಿಮಗೆ ಗೊತ್ತೇ ಅಂತ ಕೇಳುವುದುಂಟು. ನಿಜವಾಗಿ ಹೇಳಬೇಕೆಂದರೆ ನನಗೆ ಗೊತ್ತಿಲ್ಲ. ಇತ್ತೀಚೆಗೆ ಪರದೇಶದಲ್ಲಿ ಅಚಾನಕಾಗಿ ಕನ್ನಡ ಕೇಳಿದರೆ ಉಂಟಾಗುವ ರೋಮಾಂಚನವೂ ಹೊರಟು ಹೋಗಿದೆ. ನಿಜ ಹೇಳಬೇಕೆಂದರೆ ಸಿಡ್ನಿಯಲ್ಲಿ ಎಷ್ಟು ಕನ್ನಡ ಸಂಘಗಳಿದ್ದಾವೆ ನನಗೆ ಗೊತ್ತಿಲ್ಲ. ಎಲ್ಲರೂ ತಮ್ಮದೊಂದು ಕನ್ನಡ ಸಂಘ ಅಂತ ಹೇಳಿಕೊಂಡೇ ಅಡ್ಡಾಡುತ್ತಾರೆ. ನನ್ನ ಮನೆ ಎದುರಿಗೆ ಇದ್ದ ಒಬ್ಬ ನಮ್ಮದು “ಬ್ರಾಹ್ಮಣರಿಗೆ ಮಾತ್ರ” ಕನ್ನಡ ಸಂಘ ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದ. ನವೆಂಬರ್ ನ “ವೀಕೆಂಡ್” ಗಳಲ್ಲಿ ಈ ಕನ್ನಡ ಸಂಘಗಳು “ಆ್ಯಕ್ಟಿವ್” ಆಗುತ್ತವೆ. ಕನ್ನಡಕ್ಕಾಗಿ ವಾರದ ದುಡಿಮೆ ಕಳೆದುಕೊಳ್ಳಲಾಗುತ್ತದೆಯೇ?

ಆದರೆ ಇಷ್ಟು ವರ್ಷಗಳಲ್ಲಿ ನಾನು ಕಂಡುಕೊಂಡ ಹಾಗೆ ಒಂದು ವರ್ಗಶ್ರೇಣಿಯಿದೆ. ಆಸ್ಟ್ರೇಲಿಯಾದ ವೀಸಾ ಗಳಿಕೆಯ ಹಿನ್ನೆಲೆಯನ್ನು ಹೇಳಿಬಿಡುವುದು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ ಒಳ್ಳೆಯದು. ಇಂಡಿಯಾದ ಮೂಲದವರು ಮೂರು-ನಾಲ್ಕು ರೀತಿಯ ವೀಸಾದವರಿದ್ದಾರೆ. ಮೊದಲನೆಯದು ವಿದ್ಯಾರ್ಥಿ ವೀಸಾ, ಎರಡನೆಯದು ಕೆಲಸದ ವೀಸಾ ಅಂದರೆ ಕಂಪನಿಗಳ ಮೂಲಕ ಇಲ್ಲಿಗೆ ಬಂದು ಕೆಲಸ ಮಾಡಿ ವಾಪಸು ಹೋಗುವವರು, ಮೂರನೆಯದು ಪರ್ಮನೆಂಟ್ ರೆಸಿಡೆಂಟ್ಸ್ ಅಂದರೆ ಮತ ಚಲಾಯಿಸುವ ಅಧಿಕಾರವನ್ನು ಹೊರತುಪಡಿಸಿ ಬೇರೆಲ್ಲದರಲ್ಲೂ ಇವರು ಆಸ್ಟ್ರೇಲಿಯಾದ ಪ್ರಜೆಗಳು, ಕೊನೆಯದು ಸಿಟಿಜನ್​ಗಳು ಅಂದರೆ ಇಲ್ಲಿಯ ಪೌರತ್ವ ಪಡೆದು ಮತ ಹಾಕುವ ಪ್ರಜೆಗಳಾಗಿರುವವರು. ಮೊದಲನೆಯದರಿಂದ ಕೊನೆಯದರವರೆಗೆ ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗುತ್ತಾ ಹೋಗುತ್ತವೆ. ಪ್ರಜೆಗಳಿಗೆ ಮತ್ತು ರೆಸಿಡೆಂಟ್​ಗಳಿಗೆ ಇಲ್ಲಿ ಆಸ್ತಿ ಕೊಂಡುಕೊಳ್ಳುವ ಹಕ್ಕಿರುತ್ತದೆ. ಉಳಿದೆರಡು ವೀಸಾಗಳವರು ದುಡಿಯಬೇಕು, ತೆರಿಗೆ ಕಟ್ಟಬೇಕು, ವಾಪಸು ಹೋಗಬೇಕಷ್ಟೇ!

ಕೆಲಸದ ವೀಸಾ ಮೇಲೆ ಬಂದಿದ್ದ ನನ್ನ ಗೆಳೆಯ ತಿಪ್ಪ ನನ್ನೊಡನೆ ಹೇಳಿಕೊಂಡ ಹಾಗೆ ಅವನ ಜೊತೆ ನಡೆದದ್ದೇನೆಂದರೆ ಕನ್ನಡಿಗರು ನಮ್ಮವರು ಎಂಬ ಒಲುಮೆಯಿಂದ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಹೋಗಿದ್ದನಂತೆ. ಆತ್ಮೀಯವಾಗಿ ಬರಮಾಡಿಕೊಂಡು ಇಪ್ಪತ್ತು ಡಾಲರುಗಳ ಮೇಂಬರ್​ಶಿಪ್ ಶುಲ್ಕವನ್ನು ಪೀಕಿಸಿಕೊಂಡರಂತೆ. ಕೊಂಚ ಹೊತ್ತು ಎಲ್ಲರೂ ಆತ್ಮೀಯವಾಗೇ ಮಾತನಾಡಿಸಿದರಂತೆ. ಒಬ್ಬೊಬ್ಬರ ಪರಿಚಯ ಬೆಳದಂತೆ ತಿಪ್ಪ ರೆಸಿಡೆಂಟ್ ಅಥವಾ ಪ್ರಜೆ ಅಲ್ಲ ಕೆಲಸದ ವೀಸಾದ ಮೇಲೆ ಬಂದಿರುವವನು ಎಂದು ತಿಳಿಯಿತಂತೆ. ಎರಡು ಅಂದರೆ ಕರಾರುವಾಕ್ ಎರಡೇ ಕ್ಷಣದಲ್ಲಿ ಅನೇಕ ಜನ ಅವನ ಜೊತೆ ಮಾತನಾಡಿಸುವುದು ನಿಲ್ಲಿಸಿದರಂತೆ. ಇಲ್ಲಿಯವರೆಗೂ ಎದುರಿಗೆ ಕಂಡರೂ ಮಾತನಾಡಿಸಿಲ್ಲವಂತೆ! ತಿಪ್ಪನ ಕತೆಯಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ನನಗೂ ಇಂತಹ ಅನೇಕ ಅನುಭವಗಳಾಗಿರುವುದುಂಟು.

ಕೆಲಸದ ವೀಸಾ ಮತ್ತು ವಿದ್ಯಾರ್ಥಿ ವೀಸಾದವರನ್ನು ಈ ರೆಸಿಡೆಂಟ್ ಮತ್ತು ಪ್ರಜೆಗಳು ಇಂಡಿಯಾದ ಕಡೆ ಫ್ಯೂಡಲ್ ಜಾತಿಗಳವರು ದಲಿತರನ್ನು ನಡೆಸಿಕೊಂಡಂತೆ ನಡೆಸಿಕೊಳ್ಳುವುದು ಸರಿಯಷ್ಟೇ. ಆಸ್ತಿ ಮಾಡಿಕೊಳ್ಳಲು ಅನುಮತಿಯಿಲ್ಲದವರನ್ನು ಯಾಕೆ ಮಾತಾಡಿಸಿಯಾರು? ಇದನ್ನು ಅರ್ಥ ಮಾಡಿಕೊಳ್ಳಲು To understand the gravity of situation ಇನ್ನೂ ಹೆಚ್ಚಿನ ವಿವರಗಳನ್ನು ನೀಡುವುದು ಅಗತ್ಯ. ರೆಸಿಡೆಂಟ್ ಗಳು ಮತ್ತು ಪ್ರಜೆಗಳಲ್ಲಿ ಮತ್ತಷ್ಟು ಶ್ರೇಣಿಗಳಿವೆ. ಸಾಮಾಜಿಕ ಶ್ರೇಣಿಯಲ್ಲಿ ಮೇಲಿನ ಹಂತದಿಂದ ಕೆಳಹಂತಕ್ಕೆ ಬರುವಂತೆ ಪಟ್ಟಿ ಮಾಡುವುದಾದರೆ ಸ್ವಂತ ಮನೆ ಐಷಾರಾಮಿ ಕಾರು ಇರುವವರು, ಸ್ವಂತ ಮನೆ ಸಾಧಾರಣ ಕಾರು ಇರುವವರು, ಬಾಡಿಗೆ ಮನೆ ಕಾರು ಇರುವವರು, ಬಾಡಿಗೆ ಮನೆಯಲ್ಲಿದ್ದು ಕಾರು ಇಲ್ಲದಿರುವವರು.ಈ ನಾಲ್ಕು ಹಂತಗಳು. ಆಯಾ ಹಂತದಲ್ಲಿರುವವರು ಆಯಾ ಹಂತದವರೊಡನೆ ಮಾತ್ರ ಸ್ನೇಹ ಮಾಡಿಕೊಳ್ಳುತ್ತಾರೆ. ಈ ಹಿಂದೆ ಹೇಳಿದ ತಿಪ್ಪನ ಸ್ವಂತ ಅಣ್ಣ ಮೊದಲನೆಯ ಹಂತದಲ್ಲಿ ಬರುತ್ತಾನೆ. ಆದರೆ ತಿಪ್ಪ ರೆಸಿಡೆಂಟ್ ಕೂಡ ಅಲ್ಲ ಅವನು ವರ್ಕ್ ವಿಸಾ ಮೇಲೆ ಬಂದಿರುವವನು. ಅಂದರೆ ಅವನ ಸ್ವಂತ ಅಣ್ಣನ ಸ್ನೇಹ ವಲಯದಲ್ಲಿ ಆತನಿಗೆ ಜಾಗವಿಲ್ಲ! ಹಾಗಂತ ಅಣ್ಣ ತಿಪ್ಪನನ್ನೇನೂ ದೂರ ಇಡುವುದಿಲ್ಲ. ತಿಪ್ಪನ ಮತ್ತು ಅಣ್ಣ ಪರಸ್ಪರ ಮನೆಗೆ ಹೋಗುವುದು ಉಳಿದುಕೊಳ್ಳುವುದು ಒಡನಾಡುವುದು ಇರುತ್ತದೆ. ಆದರೆ ಅಣ್ಣನ ಸ್ನೇಹಿತರ ಗುಂಪು ಇರುತ್ತದಲ್ಲ ಅದರಲ್ಲಿ ತಿಪ್ಪನಿಗೆ ಪ್ರವೇಶ ಇರುವುದಿಲ್ಲ. ಆದರೆ ಅಣ್ಣನ ಸಾಮಾಜಿಕ ಸ್ಥಾನಮಾನ ಇರುವವನು ಆ ಸ್ನೇಹವಲಯವನ್ನು ಪ್ರವೇಶಿಸಬಹುದು. ಈ ವಲಯಕ್ಕೆ ಇನ್ನೊಂದು ಆಯಾಮವಿದೆ. ಈ ಸ್ನೇಹವಲಯಗಳಲ್ಲಿರುವವರು ಬಹುತೇಕ ಸಮಯದಲ್ಲಿ ಒಂದೇ ಜಾತಿಯವರಾಗಿರುತ್ತಾರೆ. ತಿಪ್ಪ ಅಂತರ್ಜಾತಿ ಮದುವೆಯಾದವನಾಗಿದ್ದು ಅಣ್ಣನಂತೆ ಸ್ವಂತ ಮನೆ ಐಶಾರಾಮಿ ಕಾರು ಖರೀದಿಸಿದರೂ ಆ ಸ್ನೇಹವಲಯದೊಳಗೆ ಹೊಕ್ಕುವುದು ಕಷ್ಟವಿದೆ!

sydney diary sriharsha salimath

ಸೌಜನ್ಯ : ಅಂತರ್ಜಾಲ

ಸ್ವತಃ ನನ್ನ ಅನುಭವವನ್ನೇ ಹೇಳುವುದಾದರೆ ನನ್ನ ಜೊತೆಗೆ ಒಡನಾಡಿದವರನೇಕರು ಬಾಡಿಗೆ ಮನೆಯಲ್ಲಿದ್ದವರು ಸ್ವಂತ ಮನೆಯನ್ನು ಖರೀದಿಸಿದ ಕೂಡಲೆ ಮಾತನ್ನು ನಿಲ್ಲಿಸಿದ್ದಾರೆ. ಗೆಳೆಯ ಅನ್ನುವ ಕಾರಣಕ್ಕೆ ಗೃಹಪ್ರವೇಶಕ್ಕೆ ಕರೆದಿದ್ದರಾದರೂ ಅಲ್ಲಿಗೆ ಹೋದಾಗ ನಮ್ಮನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಹಾಗಂತ ಅವರು ಭಯಂಕರ ಬಿಝಿಯಾಗಿದ್ದರು ಅಂತಲ್ಲ. ಈಗ ಅವರು ಮನೆ ಖರೀದಿಸಿ ಹೊಸ ದರ್ಜೆಗೆ ಹೋದವರಾದ್ದರಿಂದ ಆ ದರ್ಜೆಯವರನ್ನು ಮಾತಾಡಿಸುವುದರಲ್ಲಿ ಲೀನರಾಗಿದ್ದರು. ವೃತ್ತಿಪರ ಫೋಟೋಗ್ರಾಫರ್ ಬಂದಿದ್ದರೂ ಬಾಡಿಗೆ ಮನೆಯಲ್ಲಿದ್ದವರ ಜೊತೆಗೆ ಫೋಟೋ ತೆಗೆಸಿಕೊಳ್ಳುವ ಗಂಡಾಂತರವನ್ನು ಎದೆಯ ಮೇಲೆ ಎಳೆದುಕೊಳ್ಳಲಿಲ್ಲ. ನಾವು ಅವರ ಗೃಹಪ್ರವೇಶಕ್ಕೆ ಹೋದುದರ ಯಾವುದೇ ಸಾಕ್ಷಿ ಅವರ ಬಳಿಯಾಗಲಿ ನಮ್ಮ ಬಳಿಯಾಗಲಿ ಇಲ್ಲ. ಹೊಸ ಮನೆ ತೆಗೆದುಕೊಂಡದ್ದರಿಂದ ಅವರದು ಅದೇನು ಅದೃಷ್ಟ ಕುದುರಿತೊ ಎರಡನೆಯ ಮಗು ಹುಟ್ಟಿಬಿಟ್ಟಿತು. ಗಂಡಾದ್ದರಿಂದ ಅದನ್ನು ಅವತರಿಸಲು ಬಿಟ್ಟಿದ್ದರು.

ಜನಸಂಖ್ಯೆಯ ಕೊರತೆಯಿಂದ ನರಳುತ್ತಿರುವ ಆಸ್ಟ್ರೇಲಿಯಾ ದೇಶಕ್ಕೆ ಅವರ ಅನನ್ಯ ಕೊಡುಗೆಯನ್ನು ಅಭಿನಂದಿಸಲು ಮತ್ತು ನಮ್ಮ ಯೋಗ್ಯತೆಗೆ ತಕ್ಕಂತ ಕೊಡುಗೆಯನ್ನು ಕೊಡಲು ಆ ಶನಿವಾರದ ದಿನ ಅವರ ಮನೆಗೆ ಬರುವುದಾಗಿ ತಿಳಿಸಿದೆವು. ಮೊದಲು ಒಪ್ಪಿದವರು ಶುಕ್ರವಾರದ ದಿನ ಮೆಸೇಜ್​ನಲ್ಲಿ ಶನಿವಾರ ಅವರು ಯಾರದೋ ತುರ್ತು ಕೆಲಸದ ಮೇಲೆ ಹೊರಹೋಗುತ್ತಿರುವುದಾಗಿಯೂ ಹಾಗಾಗಿ ಭಾನುವಾರ ಬರಬೇಕೆಂದು ತಿಳಿಸಿದರು. ನಾವು ಭಾನುವಾರ ಹೋಗಿ ವಾಪಸು ಬಂದ ಮೇಲೆ ಮತ್ತೊಬ್ಬ ವ್ಯಕ್ತಿಯಿಂದ ತಿಳಿದದ್ದೇನೆಂದರೆ ಶನಿವಾರದ ಸಂಜೆ ಅವರ ದರ್ಜೆಯ ಅಂದರೆ ಸ್ವಂತ ಮನೆಯಿರುವ ಗೆಳೆಯ ವಲಯದವರು ಮಗುವನ್ನು ಮುದ್ದುಮಾಡಲು ಬರುವವರಿದ್ದರು. ಹಾಗಾಗಿ ನಮಗೆ ಪ್ರವೇಶ ನಿರಾಕರಿಸಲಾಗಿತ್ತು. ಗೃಹಪ್ರವೇಶದ ದಿನ ಒಬ್ಬ ಬೆಂಝ್ ಕಾರಿನವ ಗೃಹಪ್ರವೇಶಕ್ಕೆ ಬಂದದ್ದು ಕಂಡು ಇವರು ತಮ್ಮ ಅದೃಷ್ಟದ ಬಾಗಿಲೇ ತೆರೆದಂತೆ ಆತನನ್ನು ಕೊಂಡಾಡಿದ್ದರ ಕಾರಣ ತಿಳಿಯಿತು! ನನಗೆ ಅವರ ಬಗ್ಗೆ ಹುಟ್ಟಿದ ಭಾವನೆಗೆ ‘ಅಸಹ್ಯ’ ಎನ್ನುವ ಹೆಸರು ತೀರಾ ಪೇಲವವಾದದ್ದು. ಇದು ನನ್ನಂತೆ ಅನೇಕರ ಅನುಭವ.

ಇವರು ರಾತ್ರೋರಾತ್ರಿ ತಮ್ಮನ್ನು ಸಿರಿವಂತರೆಂದೂ ಬಾಡಿಗೆ ಮನೆಯವರು ಬಡವರೆಂದು ಅದೆಷ್ಟು ಭ್ರಮೆಗೆ ಬೀಳುತ್ತಾರೆಂದರೆ ನಮ್ಮ ಮಗುವಿನ ಶೂ ಚಿಕ್ಕದಾಗುತ್ತಿದೆ, ಬಟ್ಟೆ ಹಾಕಿಕೊಳ್ಳದೇ ಹಾಳಾಗುತ್ತಿದೆ ನಿಮ್ಮ ಮಗುವಿಗೆ ತಂದುಕೊಡಲೇ? ಅಂತ ಕೇಳುವಷ್ಟು! ಬೇಸತ್ತು ಒಂದು ದಿನ ಅವರನ್ನು ಎದುರಿಗೆ ಕೂರಿಸಿಕೊಂಡು ನನ್ನ ಸಂಬಳ ಎಷ್ಟಿದೆ ಅಂತ ಹೇಳಿದೆ. ನನ್ನೊಬ್ಬನ ಸಂಬಳ ಆ ಗಂಡಹೆಂಡಿರಿಬ್ಬರ ಒಟ್ಟು ಸಂಬಳಕ್ಕೆ ಬಹುತೇಕ ಸಮಾನವಾಗಿತ್ತು! ನಾನು ಮನೆ ಖರೀದಿಸದಿರುವುದು ನನ್ನ ಆಯ್ಕೆ. ಹಾಗಂದ ಮಾತ್ರಕ್ಕೆ ಘನತೆ ಮೀರಿ ವರ್ತಿಸುವುದಕ್ಕೆ ಇವರಿಗೇನು ಅಧಿಕಾರವಿದೆ?

ನನಗೆ ಇಲ್ಲಿಯವರೆಗೆ ಇದಕ್ಕೆ ಅಪವಾದವಾಗಿ ನಡೆದುಕೊಂಡವನೆಂದರೆ ಆಂಧ್ರದ ಮೂಲದ ಒಬ್ಬ ಗೆಳೆಯ ಮಾತ್ರ. ಅಕ್ಕಪಕ್ಕದ ಮನೆಯಲ್ಲಿದ್ದಾಗ ಪರಿಚಯವಾದವನು ಈಗ ಮಿಲಿಯಗಟ್ಟಲೆ ಬೆಲೆಬಾಳುವ ದೊಡ್ಡ ಮನೆಯನ್ನು ಕೊಂಡಿದ್ದಾನೆ. ಈಗಲೂ ಅದೇ ಪ್ರೀತಿ ಅದೇ ವಿಶ್ವಾಸ.

ನಾನು ಸಂಘಗಳ ಸುದ್ದಿಗೆ ಹೋಗುವುದಿಲ್ಲ ಎಂದು ಹೇಳಿದ್ದೆನಷ್ಟೇ. ಒಂದೇ ಒಂದು ಬಾರಿ ಮಾತ್ರ ಅದೇನು ದೆವ್ವ ಹೊಕ್ಕಿತ್ತೋ ಒಂದು ದುರದೃಷ್ಟಕರ ನವೆಂಬರ್ ವೀಕೆಂಡಿನಲ್ಲಿ ನಡೆಯುವ ರಾಜ್ಯೋತ್ಸವಕ್ಕೆ ಹೋಗುವ ನಿರ್ಧಾರ ಮಾಡಿಬಿಟ್ಟಿದ್ದೆ. ಹೋದಾಗ ಬಾಗಿಲಲ್ಲಿ ವಸೂಲಿಗೆ ನಿಂತಿದ್ದವರು ಪ್ರೀತಿಯಿಂದ ಇಪ್ಪತ್ತು ಡಾಲರ್ ಕಕ್ಕಿಸಿಕೊಂಡು ರಸೀದಿ ಕೊಟ್ಟರು. ಒಳಗೆ ಹೋಗಿ ಕೂತರೆ ಪ್ರತಿಭೆಯನ್ನು ಕಾರಿಕೊಳ್ಳಲು ಸ್ಟೇಜ್ ಮೇಲೆ ಒಬ್ಬೊಬ್ಬರಾಗಿ ಬರುತ್ತಿದ್ದ ಕಲಾಭಯಂಕರರು, ಪ್ರ್ಯಾಕ್ಟೀಸ್ ಮಾಡುವ ಗೋಜಿಗೆ ಹೋಗದೆ ಮಾಡಿದ ನಾಟಕಗಳು, ಹಾಡುಗಳು, ಕುಣಿತಗಳು, ಅಸಹ್ಯ ರೋಮ್ಯಾನ್ಸ್​ಗಳು. ಜಗತ್ತಿನಲ್ಲಿ ಅದ್ಯಾವ ರಾಸು ತನ್ನ ಹೆಂಡತಿಯ ಕೈ ಹಿಡಿದು “ಮಸ್ತು ಮಸ್ತು ಹುಡುಗಿ ಬಂದ್ಲು…” ಅಂತ ಕುಣಿಯುತ್ತದೆ ಹೇಳಿ? ಅದೂ ಸ್ಟೇಜ್ ಮೇಲೆ ನೂರಾರು ಜನಗಳ ಮುಂದೆ ಕುಣಿತದ ಪ್ರ್ಯಾಕ್ಟೀಸ್ ಕೂಡ ಮಾಡದೆ! ಈ ಕಾರ್ಯಕ್ರಮದಲ್ಲಿ ಎಣಿಸಿ ಎಣಿಸಿ ನೋಡಿದರೆ ಇಡೀ ಸಮಾರಂಭದಲ್ಲಿ ಐವತ್ತು ತಲೆಗಳು. ಅವರಿಗೆ ಇವರ ಚಪ್ಪಾಳೆ ಇವರಿಗೆ ಅವರ ಚಪ್ಪಾಳೆ! ನನಗೆ ಮುಕ್ಕಾಲು ಗಂಟೆಯೂ ಈ ಚಿತ್ರಹಿಂಸೆ ತಡೆಯಲಾಗಲಿಲ್ಲ. ನನ್ನ ಒಂದೂವರೆ ವರ್ಷದ ಕೂಸಿಗೆ ಈ ಚಿತ್ರಹಿಂಸೆಯ ರಿಸೀವಿಂಗ್ ಎಂಡ್​ನಲ್ಲಿ ಕೂರಿಸಿದ್ದಕ್ಕೆ ನನ್ನನ್ನು ನಾನು ಯಾವತ್ತೂ ಕ್ಷಮಿಸಿಕೊಳ್ಳಲಾರೆ! ಒಂದೇ ಗುಂಪಿಗೆ ಸೇರಿದ ಎಂಟತ್ತು ಕುಟುಂಬಗಳು ಮಾಡಿದ ಸಮಾರಂಭದಂತಿತ್ತು. ಹೊರಗಿನಿಂದ ಬಂದ ನನ್ನಂತ ಕೆಲವರು ಇಪ್ಪತ್ತು ಡಾಲರ್ ಬೋಳಿಸಿಕೊಂಡು ಬೆಸ್ತು ಬಿದ್ದದ್ದಾಗಿತ್ತು. ಮುಂದಿನ ಪೀಳಿಗೆಗೆ ತಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ದಾಟಿಸಲು ತಿಣುಕುತ್ತಿರುವ ಸಾಂಸ್ಕೃತಿಕ ಬಂಜೆತನದ ಅಸಹಾಯಕ ಪ್ರದರ್ಶನವಾಗಿತ್ತು ಈ ಸಮಾರಂಭ.

ಹಾಗಂತ ಎಲ್ಲರೂ ಹೀಗೆಯೆ ಇರುತ್ತಾರೆ ಅಂತ ನಾನು ಹೇಳುವುದಿಲ್ಲ. ಅಲ್ಲಲ್ಲಿ ಒಳ್ಳೆಯವರೂ ಸಿಗುತ್ತಾರೆ. ಅದರೆ ಅವರು ನನಗೆ ಸಿಗುವ ಸಾಧ್ಯತೆಗಳು ತೀರಾ ಕಡಿಮೆ. ಅದಿರಲಿ. ನನಗೆ ಈ ಎನ್ನಾರೈಗಳಲ್ಲಿ ಅತಿ ಕಿರಿಕಿರಿಯನ್ನುಂಟು ಮಾಡುವುದು ಈ ಜನಗಳು ಕಕ್ಕಿಕೊಳ್ಳುವ ದೇಶಭಕ್ತಿ! ಇವರ ಪ್ರಕಾರ ಇಂಡಿಯಾ ಅತ್ಯಂತ ಶ್ರೇಷ್ಠ ದೇಶವಂತೆ ಈ ದೇಶದ ಸಂಸ್ಕೃತಿ ಅತ್ಯಂತ ಶ್ರೇಷ್ಠವಂತೆ. ಹಾಗಿದ್ದರೆ ನೀವೆಲ್ಲ ಈ ಕೀಳು ಸಂಸ್ಕೃತಿಯ ದೇಶಕ್ಕೇಕಪ್ಪಾ ಬಂದಿರಿ? ಇಲ್ಲಿಯ ಪೌರತ್ವಕ್ಕಾಗಿ ಅದ್ಯಾಕೆ ಅಷ್ಟು ತಿಣುಕಾಡಿದಿರಿ? ನಿಮ್ಮ ಮಕ್ಕಳನ್ನೇಕೆ ಇಲ್ಲಿ ಬೆಳೆಸುತ್ತಿದ್ದೀರಿ ಎಂಬುದಕ್ಕೆ ಉತ್ತರವಿಲ್ಲ! ಮಾತಿಗೂ ಕೃತಿಗೂ ಒಂದು ಹಂತಕ್ಕಾದರೂ ಸಾಮ್ಯತೆ ಬೇಡವೇ? ಇದೇ ಮತ್ತು ಇದೇ ಜನಗಳು ಆಸ್ಟ್ರೇಲಿಯಾದಲ್ಲಿ ತಮ್ಮ ಮನೆಗಳನ್ನು ಬಾಡಿಗೆ ಕೊಡಲು ಬೀಫ್ ತಿನ್ನುವ ಬಿಳಿಯ ಜನರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಂಡಿಯಾದಲ್ಲಿ ಕಟ್ಟಿಕೊಂಡ ಮನೆಗಳ ಮುಂದೆ “ಬ್ರಾಹ್ಮಣರಿಗೆ ಮಾತ್ರ” , “ಸಸ್ಯಾಹಾರಿಗಳಿಗೆ ಮಾತ್ರ” ಎಂಬ ಬೋರ್ಡನ್ನು ಹಾಕಿಕೊಳ್ಳುತ್ತಾರೆ.

ನಿಮ್ಮ ಅಭಿಪ್ರಾಯಗಳನ್ನು ಈ ವಿಳಾಸಕ್ಕೆ ಕಳಿಸಬಹುದು: tv9kannadadigital@gmail.com

ಕಂತು – 1 : Sydney Diary : ಹುಲಲಲ ಹುರ್ರೆ; ‘ಯಾರೇ ಸತ್ತರೂ ತಮಗೆ ಇಷ್ಟು ದುಃಖವಾಗಲು ಹೇಗೆ ಸಾಧ್ಯ?’

Published On - 11:14 am, Sun, 5 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ