Sydney Diary : ಹುಲಲಲ ಹುರ್ರೆ… ‘ಯಾರೇ ಸತ್ತರೂ ತಮಗೆ ಇಷ್ಟು ದುಃಖವಾಗಲು ಹೇಗೆ ಸಾಧ್ಯ?’
Cultural Clash : ‘ಒಂದು ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವನಿಗೆ ಮತ್ತೊಂದು ಸಾಂಸ್ಕೃತಿಕ ಹಿನ್ನೆಲೆಯ ಜಾಗಗಳಲ್ಲಿ ಅಡ್ಡಾಡುವಾಗ ಅಲ್ಲಿನ ಸಾಂಸ್ಕೃತಿಕ ಅರಿವು ಅವನನ್ನು ಆವರಿಸಿ Cultural Clash ಉಂಟಾಗುತ್ತದೆ. ಅದರಿಂದ ಹುಟ್ಟುವ ಸಾವಿರ ಭಾವಗಳನ್ನು ಸಂಗ್ರಹಿಸಿ ನಿರ್ಲಿಪ್ತ ಭಾವದೊಂದಿಗೆ ತಲುಪಿಸುವ ಪ್ರಯತ್ನವೇ ಈ ಸಿಡ್ನಿ ಡೈರಿಯದು.’ ಶ್ರೀಹರ್ಷ ಸಾಲಿಮಠ
ಸಿಡ್ನಿ ಡೈರಿ – Sydney Diary : ಶ್ರೀಹರ್ಷ ಸಾಲಿಮಠ ಅವರ ಹೊಸ ಅಂಕಣವಿದು. ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುವ ಈ ಅಂಕಣದ ಪ್ರವೇಶಿಕೆಯೊಂದಿಗೆ ಮೊದಲ ಕಂತನ್ನು ನೀವಿಲ್ಲಿ ಓದಬಹುದು. ಇವರು ದಾವಣಗೆರೆ ಮೂಲದವರು. ಬಾಲ್ಯದಿಂದ ಎಂಜಿನಿಯರಿಂಗ್ ಪದವಿತನಕ ಅಲ್ಲಿಯೇ ವಾಸವಾಗಿದ್ದು ಸ್ನಾತಕೋತ್ತರ ಪದವಿಯನ್ನು ಮೈಸೂರಿನಲ್ಲಿ ಪೂರೈಸಿದ ನಂತರ ವೃತ್ತಿಗಾಗಿ ಚೆನ್ನೈ, ತ್ರಿವೇಂದ್ರಮ್, ಬೆಂಗಳೂರಿಗೆ ತೆರಳಿದರು. ಸದ್ಯ ಆಸ್ಟ್ರೇಲಿಯಾದಲ್ಲಿ ಸಾಫ್ಟ್ವೇರ್ ಎಂಜಿನಿಯರಿಂಗ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದ ಅನೇಕ ತಾಂತ್ರಿಕ ಸಾಧನಗಳಿಗೆ ಇವರ ಕೊಡುಗೆ ಇದೆ. ಪತ್ರಿಕೆ, ವೆಬ್ಗಳಲ್ಲಿ ಇವರ ಅಂಕಣ ಮತ್ತು ಬಿಡಿ ಬರಹಗಳು ಪ್ರಕಟವಾಗಿವೆ. ‘ಉದಕ ಉರಿದು’ ಇವರ ಮೊದಲ ಕಥಾ ಸಂಕಲನ ವಾರದೊಪ್ಪತ್ತಿನಲ್ಲಿ ಓದುಗರ ಕೈಸೇರಲಿದೆ.
ಜಗತ್ತಿನಲ್ಲಿ ಏಳುನೂರು ಕೋಟಿ ಜನರಿದ್ದಾರೆ. ಅಂದರೆ ಏಳುನೂರು ಕೋಟಿ ಮನಃಸ್ಥಿತಿಗಳು! ಹತ್ತಿರತ್ತಿರ ಇನ್ನೂರು ದೇಶಗಳು, ಒಂದೊಂದು ದೇಶದಲ್ಲೂ ನೂರಾರು ಸಂಸ್ಕೃತಿಗಳು. ಎಷ್ಟೋ ಸಾಂಸ್ಕೃತಿಕ ನಡಾವಳಿಗಳನ್ನು ಇದು ಸರಿ ಇದು ತಪ್ಪು ಎಂಬಂತೆ ತೀರ್ಪು ಕೊಡಲಾಗುವುದಿಲ್ಲ. ಪ್ರತಿಯೊಂದು ನಡಾವಳಿಗೂ ತನ್ನದೇ ಐತಿಹ್ಯವಿದೆ. ಎಷ್ಟೋ ಬಾರಿ ನಿರ್ಲಿಪ್ತವಾಗಿ ದಾಖಲಿಸುತ್ತಾ ಹೋಗುವುದು ಒಳ್ಳೆಯದು. ಆದರೆ ಒಂದು ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವನಿಗೆ ಮತ್ತೊಂದು ಸಾಂಸ್ಕೃತಿಕ ಹಿನ್ನೆಲೆಯ ಜಾಗಗಳಲ್ಲಿ ಅಡ್ಡಾಡುವಾಗ ಅಲ್ಲಿನ ಸಾಂಸ್ಕೃತಿಕ ಅರಿವು ಅವನನ್ನು ಆವರಿಸಿ Cultural Clash ಉಂಟಾಗುತ್ತದೆ. ಅದರಿಂದ ಹುಟ್ಟುವ ಸಾವಿರ ಭಾವಗಳನ್ನು ಸಂಗ್ರಹಿಸಿ ನಿರ್ಲಿಪ್ತ ಭಾವದೊಂದಿಗೆ ತಲುಪಿಸುವ ಪ್ರಯತ್ನವೇ ಈ ಸಿಡ್ನಿ ಡೈರಿಯದು.
ಇತಿಹಾಸದ ಲಕ್ಷಾಂತರ ಜನ ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದ ಹಲವು ಬೃಹತ್ ಸಂಸ್ಕೃತಿಗಳ ನಡುವೆ ಏಕಾಂಗಿಯಾಗಿ ನಿಂತು ಒಂದೇ ಸಾರಿಗೆ ನೂರಾರು ಚಲನಶೀಲ ಐತಿಹ್ಯ, ಸಾಹಿತ್ಯ, ಜನಪದ, ನಂಬಿಕೆಗಳು, ಪದ್ಧತಿಗಳನ್ನು ಒಮ್ಮಿಂದೊಮ್ಮೆಲೆ ಈ ಜಗತ್ತಿನ ಮುಂದೆ ನಾನೆಷ್ಟರವನು ಎಂಬ ಭಾವ ಮೂಡತೊಡಗುತ್ತದೆ. ನಾನು ಕಲಿಯುವುದು ಇನ್ನೂ ಮುಗಿದಿಲ್ಲ ಹಾಗೂ ಮುಗಿಯುವುದೂ ಎಂಬ ದಿಗಿಲು ಆವರಿಸಿಕೊಳ್ಳತೊಡಗುತ್ತದೆ. ಎಲ್ಲವನ್ನೂ ಅರಗಿಸಿಕೊಳ್ಳಲು ಯತ್ನಿಸಿ ಮುಂದೆ ನಡೆಯುವ ಮುನ್ನ ಸಾಕಷ್ಟು ಜನರೊಡನೆ ಹಂಚಿಕೊಳ್ಳೋಣ ಎಂಬ ತಲ್ಲಣ ಮೈಯೆಲ್ಲಾ ಹರಿದಾಡತೊಡಗುತ್ತದೆ. ಡ್ರೈವ್ ಮಾಡುವಾಗ ರೈಲು ಪಯಣದಲ್ಲಿ ಊಟ ಜಗಿಯುವಾಗ ಈ ಎಲ್ಲ ತಲ್ಲಣಗಳು ಭಾವಗಳು ರಸಗಳು ಪದಗಳಾಗುತ್ತವೆ, ವಾಕ್ಯಗಳಾಗುತ್ತವೆ. ವಾರಗಳ ಕಾಲ ಮೆದುಳನ್ನು ಆಕ್ರಮಿಸಿ ತಮ್ಮನ್ನು ತಾವು ಮಾಗಿಸಿಕೊಳ್ಳುತ್ತವೆ. ಕಡೆಗೊಂದು ದಿನ ಒತ್ತಡ ತಡೆಯಲಾಗದೇ ಅಕ್ಷರಗಳಾಗಿ ಮೂಡುತ್ತವೆ.
ಕ್ಯಾಪಿಟಲಿಸಂ ಎಂಬ ರಾಕ್ಷಸ ಪ್ರತಿ ಯೋಚನೆ ಚಿಂತನೆಗಳನ್ನೂ ಪದತಲದಲ್ಲಿ ನಿರ್ದೇಶಿಸುತ್ತಿರುವಾಗ ಆಂತರಿಕ ಪ್ರತಿಭಟನೆಯ ಅಂಗವಾಗಿ ನನ್ನ ಮಟ್ಟಿಗೆ ಅದರಿಂದ ತಾತ್ಕಾಲಿಕ ಬಿಡುಗಡೆ ಪಡೆಯುವ ಅಥವಾ ಕನಿಷ್ಟ ಪಕ್ಷ ಒಂದು ಕುಳಿರ್ಗಾಳಿಯ ಅನುಭವ ಪಡೆಯುವುದಕ್ಕಾಗಿ ಈ ಬರಹಗಳು. ಇವುಗಳಿಗೆ ನಿರ್ದಿಷ್ಟ ಉದ್ದೇಶ ಅಂತ ಇಲ್ಲ. ಆದರೆ ತಾವು ನೋಡದ ಜಗತ್ತೊಂದು ಹೀಗಿದೆ ಅದಕ್ಕೆ ನಾವೂ ಸ್ಪಂದಿಸುವ ಅವಶ್ಯಕತೆ ಇದೆ ಎಂದು ಓದುಗರಿಗೆ ಅನ್ನಿಸಿದರೆ ಅಷ್ಟರ ಮಟ್ಟಿಗೆ ನಾನು ಕಲಿತದ್ದು ಮತ್ತು ತಲುಪಿಸಲು ಪ್ರಯತ್ನಿಸಿದ್ದು ಸಾರ್ಥಕ.
ಕಂತು – 1
ಹಿಂದೊಂದು ಕಾಲದಲ್ಲಿ ಯಾರಾದರೂ ಇಲ್ಲವಾದರೆ ಒಮ್ಮೆಲೆ ಹಬ್ಬದ ವಾತಾವರಣ ಉಂಟಾಗುತ್ತಿತ್ತು. ನನಗೆ ಇನ್ನೂ ನೆನಪಿದೆ. ನಮ್ಮ ಮನೆಯಲ್ಲಿ ಅಜ್ಜಂದಿರಾರಾದರೂ ತೀರಿಕೊಂಡಾಗ ಊರ ಜನರೆಲ್ಲ ಸೇರುತ್ತಿದ್ದರು. ಮನೆಯಲ್ಲಿ ಎಲ್ಲಾ ಕೆಲಸ ಮಾಡಲು ಜನವೋ ಜನ, ರಾತ್ರಿಯೆಲ್ಲಾ ಭಜನೆಗಳಿರುತ್ತಿದ್ದವು, ದೊಡ್ಡವರೆಲ್ಲ ಕಡೆಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾಗ ಮಕ್ಕಳು ರಾತ್ರಿಯೆಲ್ಲಾ ಆಟವಾಡುತ್ತಿದ್ದುದು. ನಮ್ಮ ಅಜ್ಜ ತೀರಿಕೊಂಡಾಗ ರಾತ್ರಿ ಹೀಗೆಯೇ ಭಜನೆ ಏರ್ಪಾಡಾಗಿತ್ತು. ಅದರಲ್ಲಿ ರಾಗ ತಾರಕಕ್ಕೆ ಏರುತ್ತಿದ್ದಂತೆ ಮೃದಂಗ ಬಾರಿಸುತ್ತಿದ್ದವನು ಅನುಭವಿಸುತ್ತಿದ್ದ ಉನ್ಮಾದಕತೆಯ ಭಾವಾಭಿನಯ ಇಷ್ಟು ವರ್ಷಗಳಾದರೂ ಕಣ್ಣಿಗೆ ಕಟ್ಟಿದಂತಿದೆ. ಇತ್ತೀಚಿನ ದಿನಗಳಲ್ಲಿ ಸಾವಿನ ಮನೆಗಳಲ್ಲಿ ಈ ಸಂಭ್ರಮ ಕಾಣಸಿಗುವುದಿಲ್ಲ ಆದರೆ ತೀರಿಹೋದವನು “ಸದ್ಯ ಹೋದನಲ್ಲ” ಎಂಬ ಸಂಭ್ರಮ ಮಾತ್ರ ಸುತ್ತಲಿದ್ದವರ ಮುಖದ ಮೇಲೆ ಕಾಣುತ್ತದೆ!
ಈಗ ಅಳುವವರೂ ಕಡಿಮೆ. ಐದಾರು ವರ್ಷಗಳ ಹಿಂದೆ ನಮ್ಮ ಎದುರು ಮನೆಯಲ್ಲಿ ಹಿರಿಯರೊಬ್ಬರು ತೀರಿಹೋದರು. ಅವರ ಮಗ ಪರಿಚಯದವರಾದುದರಿಂದ ಗುಡಿಯ ಬಳಿ ಹೂ ಮಾರುವವರ ಹತ್ತಿರ ಒಂದು ಹಾರ ಕೊಂಡುಕೊಂಡು ಅವರ ಮನೆಗೆ ಹೋದೆ. ಮಗ ಬಹಳ ನೀಟಾಗಿ ಡ್ರೆಸ್ ಮಾಡಿಕೊಂಡಿದ್ದರು. ನಾನು ಬಂದ ಕೂಡಲೆ “ಬನ್ನಿ.. ಬನ್ನಿ ಹರ್ಷ.. ಬಹಳ ದಿನಗಳಾದವು ಭೇಟಿ ಆಗೇ ಇಲ್ಲ!” ಅಂತ ಬರಮಾಡಿಕೊಂಡರು. ತಂದೆ ಸತ್ತ ಬಗ್ಗೆ ಅವರಿಗೆ ವಿಷಾದ ಇದ್ದಂತಿರಲಿಲ್ಲ. ಅಷ್ಟರಲ್ಲಿ ಸತ್ತವರ ಅಕ್ಕನೋ ತಂಗಿಯೋ ಬಂದು “ಏನಪ್ಪಾ ನಿಮ್ಮಪ್ಪನೆ ಮೊದಲೆ ಹೋಗಿಬಿಟ್ಟನಾ? ನೋಡು ನಾನು ಚಾಲೆಂಜ್ ಮಾಡಿದ್ದೆ ಮೊದಲೇ ನೀನು ಹೋಗೋದು ಅಂತ ನಾನೇ ಗೆದ್ದೆ” ಅಂತ ಬೀಗಿದರು. ಯಾವುದೋ ಮದುವೆ ಸಮಾರಂಭಕ್ಕೆ ಹೋಗುವಂತೆ ಉಡುಪು ಧರಿಸಿ ಬಂದಿದ್ದರು! ನಮ್ಮಜ್ಜ ಸತ್ತಾಗ ಹಿಂಗಿರಲಿಲ್ಲ. ಮನೆ ತುಂಬಾ ಜನ ಅಳೋದೇ ಅಳೋದು, ಸ್ವಾಮಿಗಳು ಅಡ್ಡಾಡೋದು, ಸಮಾಧಾನ ಮಾಡೋರು ನೀರು ಚಾ ಹಿಡಿದು ಅಡ್ಡಾಡೋದು ಅದೇನು ಕಾಲಿಡಲೂ ಜಾಗ ಇಲ್ಲದಷ್ಟು ಮನೆ ಕಿಕ್ಕಿರಿದು ಹೋಗಿತ್ತು. ಆಗ ನನಗೆ ಐದೋ ಆರೋ ವಯಸ್ಸು. ಸಾವುಗಳು ತೀರಾ ನಮ್ಮನ್ನು ವಿಚಲಿತಗೋಳಿಸುವ ವಯಸ್ಸಲ್ಲ. ಅಜ್ಜ ತೀರಿಹೋದರು ಅಂತ ಜನ ಮಾತಾಡಿಕೊಂಡದ್ದು ಗೊತ್ತು. ಆಮೇಲೆ ಗೆಳೆಯರ ಜೊತೆ ಆಟ ಆಡುವುದು ಬಂದು ಮೃದಂಗದವನ ಭಾವತೀವ್ರತೆಯ ಭಂಗಿಯನ್ನು ನೋಡುವುದು ಮತ್ತೆ ಆಡಲು ಹೋಗುವುದು. ಮನೆಯಲ್ಲಿ ಜನ ಅಳುತ್ತಿದ್ದರು.
ನಾನು ಯಾವಾಗಲಾದರೂ ಅತ್ತಾಗ ಎಲ್ಲರೂ “ಇಷ್ಟು ದೊಡ್ಡವನಾಗಿದಿಯಾ ಅಳುತ್ತಿದ್ದೀಯಾ ” ಅಂತ ಛೇಡಿಸುವುದನ್ನು ನೋಡಿ ದೊಡ್ಡವರು ಯಾವತ್ತೂ ಅಳುವುದಿಲ್ಲ ಅಂತಲೇ ಬಗೆದಿದ್ದೆ. ಮೊದಲ ಬಾರಿಗೆ ದೊಡ್ಡವರೆಲ್ಲಾ ಅಳುತ್ತಿದ್ದುದು ನೋಡಿ ನನಗೆ ಒಮ್ಮೆಲೆ ದಿಗಿಲಾಗಿ ಹೋಗಿತ್ತು. ಅದರಲ್ಲೂ ಪೇಟೆಗೆ ಹೋಗಿದ್ದ ನನ್ನ ಅಪ್ಪ ಬಂದು ಜೋರು ಜೋರು ಸದ್ದು ಮಾಡಿ ಅಳತೊಡಗಿದಾಗ ದಿಕ್ಕೇ ತೋಚದಂತಾಗಿ ನಾನು ಗೊಳೋ ಎಂದು ಅಳತೊಡಗಿದ್ದೆ. ನನ್ನಪ್ಪ ಯಾವುದಕ್ಕೂ ಅಲ್ಲಾಡದ ಹೆಬ್ಬಂಡೆಯಂತಹ ಮನುಷ್ಯ. ಅಜ್ಜಿ ಇಡಿ ಮನೆಯನ್ನೆ ಮುಷ್ಟಿಯಲ್ಲಿಟ್ಟುಕೊಂಡಿದ್ದ ಗಟ್ಟಿ ಹೆಂಗಸು. ಇವರಿಬ್ಬರು ಜೋರಾದ ಸದ್ದು ಮಾಡಿ ಅತ್ತದ್ದು ನನ್ನ ಪಾಲಿಗೆ ಪ್ರಳಯಕ್ಕಿಂತ ಕಡಿಮೆಯೇನೂ ಆಗಿರಲಿಲ್ಲ. ಈ ನಡುವೆ ಆಗಿನ್ನೂ ಟೀನೇಜರ್ ಆಗಿದ್ದ ಕೊಟ್ರವ್ವತ್ತಿ ಅತ್ಯಂತ ಎಕ್ಸೈಟೆಡ್ ಆಗಿ ಮನೆಯ ದಿಗ್ಗಜರನ್ನೆಲ್ಲ ಸಮಾಧಾನಪಡಿಸುವ ಕೈಂಕರ್ಯದಲ್ಲಿ ತೊಡಗಿದ್ದಳು. ಗೊಳೋ ಅಂತ ಅಳುತ್ತಿದ್ದ ನನ್ನನ್ನು ಅವರಿಬ್ಬರೆದುರಿಗೆ ರೂಪದರ್ಶಿಯಾಗಿ ನಿಲ್ಲಿಸಿ “ನೋಡ್ರಿ ನೋಡ್ರಿ ಸಾಣ ಹುಡುಗ ಅಳಕತತಿ… ನೀವ ಅತಗೋತ ಕುಂತ್ರ ಅವನ್ನ ನೋಡೋರ್ಯಾರು?” ಅಂತ ನೀರು ಕುಡಿಸಲು ನೋಡುತ್ತಿದ್ದಳು. ನಮ್ಮಮ್ಮ ಅಪ್ಪನಿಗೆ ನೀರು ಕೊಡುತ್ತಿದ್ದರು. ಉಳಿದವರೆಲ್ಲ ಅತ್ತದ್ದು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ನನ್ನಮ್ಮ ಅತ್ತದ್ದು ಯಾಕೆ ಅಂತ ನನಗೆ ಇನ್ನೂ ಅರ್ಥ ಆಗಿಲ್ಲ. ಆಕೆ ಜೋರಾಗಿ ಏನೂ ಅತ್ತದ್ದಲ್ಲ. ಔಪಚಾರಿಕವಾಗಿ ನಾಲ್ಕೆಂಟು ಸಾರಿ ಬಿಕ್ಕಳಿಸಿದ್ದಷ್ಟೇ. ಇದು ಯಾಕೆ ನೆನಪಿದೆಯೆಂದರೆ ನನ್ನನ್ನು ಸೊಂಟದಲ್ಲಿ ಎತ್ತಿಕೊಂಡೇ ಅಮ್ಮ ಬಿಕ್ಕಳಿಸಿದ್ದು! ಆದರೆ ಕೊಟ್ರವ್ವತ್ತಿಯ ಎಕ್ಸೈಟ್ಮೆಂಟು ನನಗೆ ಅರ್ಥ ಆಗುತ್ತದೆ. ಹೋದವರು ಹೋದ ದುಃಖದ ಭಾರ ತನ್ನ ತಲೆಯ ಮೆಲಿಲ್ಲದುದರಿಂದ ಇನ್ನೂ ಸ್ವಲ್ಪ ಜವಾಬುದಾರಿ ಹೊತ್ತು ದೊಡ್ಡವರನ್ನು ಸಂಭಾಳಿಸಿದ ಆತ್ಮತೃಪ್ತಿ ಆಕೆಗೆ ಸಿಕ್ಕಿರಬಹುದು.
ಕೆಲವರು ಸಾವಿನ ಮನೆಯಲ್ಲಿ ಯಾಕೆ ಹಂಗೆ ಅಳುತ್ತಾರೆ ಅನ್ನೋದೇ ಅರ್ಥ ಆಗೋದಿಲ್ಲ. ಈ ಜನ ನಿಧಾನಕ್ಕೆ ಗಂಭೀರವದನರಾಗೆ ಬರ್ತಾರೆ. ತಮ್ಮ ಜೊತೆಗಿನ ಸರಂಜಾಮುಗಳನ್ನೆಲ್ಲ ಯಾವುದಾದರೂ ಕೋಣೆಯ ಸುರಕ್ಷಿತ ಜಾಗದಲ್ಲಿರಿಸಿ ವಿಸರ್ಜನೆಗಳಿದ್ದರೆ ಮುಗಿಸಿಕೊಂಡು ಬಂದು ಒಂದು ಲೋಟ ನೀರು ಕುಡಿದು ನಿಧಾನಕ್ಕೆ ಜನರ ನಡುವಿನಿಂದ ಜಾಗ ಮಾಡಿಕೊಂಡು ಹೆಣದ ಮುಂದೇ ಬಂದು “ಹುಲಲ ಹುರ್ರೇ…” ಎಂಬಂತಹ ಕೂಗಿನೊಂದಿಗೆ ಎದೆ ಎದೆ ಬಡಿದುಕೊಂಡು ಅಳತೊಡಗುತ್ತಾರೆ. ಶಾಂತ ಸ್ಥಬ್ದವಾಗಿದ್ದ ಮನೆ ಕ್ಷಣಾರ್ಧದಲ್ಲಿ ರಣರಂಗವಾಗಿಬಿಡುತ್ತದೆ. ಆಕೆಯ ಹೂಂಕಾರ ಗುಗ್ಗುಳಗಳನ್ನು ಶಾಂತಪಡಿಸಲು ಎಲ್ಲರೂ ಹರಸಾಹಸ ಪಡುತ್ತಿದ್ದಾಗ ನಡುನಡುವೆ “ಹಿಂಗತ್ತರ ಸತ್ತೋರು ಎದ್ದು ಬರ್ತಾರೆನು? ಹುಚ್ಚವ್ವಾ” ಅಂತ ಮಾತು ಕೇಳಿಸುತ್ತದೆ. ಮನೆಯನ್ನೆಲ್ಲಾ ತಲೆ ಮೆಲೆ ಹೊತ್ತು ಶಕ್ತಿ ಇಂಗಿದ ಮೇಲೆ ಮೂಲೆಯಲ್ಲಿ ಸಲ್ಪ ಹೊತ್ತು ಬಿಕ್ಕಳಿಸುತ್ತಾ ಕೂತು ನೀರು ಕುಡಿದು ನಂತರ ಕೊಟ್ರವ್ವತ್ತಿಯರು ಸರಬರಾಜು ಮಾಡುವ ಚಾ ಕುಡಿದು ಮಾತಾಡುತ್ತಾ ಕೂತುಕೊಳ್ಳುತ್ತಾರೆ. ರುದ್ರಭೂಮಿಗೆ ಹೋಗಿ ಮಣ್ಣು ಮಾಡಿದ ಮೇಲೆ ಮರುದಿನದಿಂದ ಊಟ ನಿದ್ರೆ ಮೈಥುನಗಳು ಎಂದಿನಂತೆ ಮುಂದುವರಿಯುತ್ತವೆ! ಇದು ಇವರು ತಮ್ಮ ಹತ್ತಿರದವರಿಗೆ ಮಾತ್ರ ಮಾಡುತ್ತಾರೆ ಅಂತಲ್ಲ. ಯಾರು ಸತ್ತರೂ ಈ ಪ್ಯಾಟರ್ನ್ ಮುಂದುವರಿಯುತ್ತದೆ. ಈ ರೀತಿ ಅಳುವವರನ್ನೆಲ್ಲ ನಾನು ಎದುರಿಗೆ ಕೂರಿಸಿಕೊಂಡು ಒಂದು ಸಾರಿ ವಿವರವಾದ ಸಂದರ್ಶನ ಮಾಡಬೇಕು ಅಂತ ಅನೇಕ ಬಾರಿ ಅಂದುಕೊಂಡಿದ್ದೇನೆ. ಪ್ರಶ್ನೆಗಳು ಈ ಕೆಳಗಿನ ಮಾದರಿಯದ್ದಾಗಿರುತ್ತವೆ.
1. ಯಾರೇ ಸತ್ತರೂ ತಮಗೆ ಇಷ್ಟು ದುಃಖವಾಗಲು ಹೇಗೆ ಸಾಧ್ಯ? 2. ಸತ್ತವನಿಂದ ನಮಗಾಗಲಿ ನಿಮ್ಮ ಕುಟುಂಬಕ್ಕಾಗಲೀ ಸಮಾಜಕ್ಕಾಗಲೀ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉಪಕಾರವಾಗಿರುವುದು ತಮ್ಮ ಗಮನಕ್ಕೆ ಬಂದದ್ದಿದೆಯೇ? 3. ನಿಮ್ಮ ಗೋಳಾಟ ಕಣ್ಣೀರುಗಳು ನಿಜಕ್ಕೂ ದುಃಖದ ಕಾರಣದಿಂದ ಒಳಗಿನಿಂತ ಬರುತ್ತವೆಯೇ ಅಥವಾ ಇದಕ್ಕಾಗಿ ಅನುವಂಶಿಕವಾಗಿ ಅಥವಾ ಹುಟ್ಟಿನಿಂದ ಬಂದ ವಿಶೇಷ ಗುಣಗಳು ಕಾರಣವೇ? 4. ಲಗೇಜ್ ಇಡುವವರೆಗೆ ಮತ್ತು ಕೈಗೆ ಚಾ ಸಿಗುವವರೆಗೆ ಮಾತ್ರ ಗೋಳಾಡುವಷ್ಟು ದುಃಖ ನಿಮ್ಮಲ್ಲಿ ಹೇಗೆ ಸ್ಟಾಕ್ ಇರುತ್ತದೆ? ಇತ್ಯಾದಿ ಇತ್ಯಾದಿ.
ಆದರೆ ಒಂದು ದಿಟವೆಂದರೆ ಈ ರೀತಿ ಗೋಳಾಡಲು ವಿಶೇಷ ಪ್ರತಿಭೆ ಇರುವುದು ಅವಶ್ಯಕ. ಅದರಲ್ಲೂ ಅವರು ಸತ್ತವರ ಬಗ್ಗೆ ಹೇಳುವಾಗ ಬಳಸುವ ಪ್ರಾಸ ವಿಶೇಷಣಗಳು ಉಪಮೆಗಳು ಪ್ರತಿಮೆಗಳು ನನಗೆ ಅದ್ಭುತ ಎನ್ನಿಸುವುದುಂಟು. ಒಮ್ಮೆ ನಮ್ಮ ಒಬ್ಬ ಮಾವ ತನಗೆ ತುಂಬಾ ದೂರದ ಎಷ್ಟು ಅಂದರೆ ತಾಯಿಯ ಕಸಿನ್ ತಂಗಿಯ ಗಂಡನ ಹೆಣ ಎತ್ತುವಾಗ ಗೋಳಾಡಿದ್ದು ಹಿಂಗೆ…
“ಯಪ್ಪಾ.. ಯಪ್ಪಾ.. ನೀ ಹಿಂಗ ಮೋಸ ಮಾಡಬಾರದಿತ್ತು ನೀ.. ಯಾಕ ಹಿಂಗ ಮಾಡಿದಿ.. ಏನು ಅನ್ಯಾಯ ಮಾಡಿದ್ವಿ..? ಮಕ್ಕಳ ಮೊಮ್ಮಕ್ಕಳ ಜೊತಿ ಚಂದಗ ಆಟಾಡಿಕೆಂಡಿರು ಅಂದರ ಬಿದುರು ಬಂಡಿ ಮ್ಯಾಲ ಮೆರವಣಿಗೆ ಹೆಂಗ ಹೊಂಟಾನ ನೋಡ್ರಪ್ಪೋ ನೋಡ್ರಿ… ” ಆತ ಅತ್ತದ್ದು ಇಡೀ ಓಣಿಗೆ ಕೇಳಿಸಿತ್ತು. ಸ್ವತಃ ಸತ್ತವನ ಹೆಂಡತಿಯೇ “ಮೂರೋ ನಾಲ್ಕೋ ವರ್ಷಕ್ಕೊಮ್ಮೆ ಭೇಟಿಯಾಗೋ ಇವನ್ಯಾಕೆ ಹಿಂಗೆ ಅಳ್ತಿದಾನೆ?” ಎಂಬಂತೆ ನೋಡಿದ್ದರು! ಹಿಂಗೆ ಇನ್ನೊಂದು “ಮುಂದಿನ ವಾರ ಹಬ್ಬ ಐತಿ ಹೋಳಿಗಿ ಉಂಡು ಸುಕಾ ಪಡು ಅಂದರ ಬಾಯಗ ಮಣ್ಣು ಹೇರಕಳಾಕ ಹೊಂಟೀಯಲ್ಲೋ.. ಛೊಲೋ ಅಕಾತಾ ನಿಂಗ..?” ಹಾಗಂತ ಇವರ್ಯಾರೂ ಸಹಜವಾಗಿ ಮಾತಾಡುವಾಗ ಹೀಗೆಲ್ಲಾ ಮಾತಾಡುವುದಿಲ್ಲ. ಯಾರಾದರೂ ಸತ್ತಾಗ ಮಾತ್ರ ಅವರಲ್ಲಿನ ಕವಿಮನಸ್ಸು ಜಾಗೃತವಾಗುತ್ತದೆ! ನನ್ನ ಸಂದರ್ಶನದ ಪ್ರಶ್ನಾವಳಿಗಳಲ್ಲಿ ಈ ಕವಿಮನಸ್ಸು ಇದ್ದಕ್ಕಿದ್ದಂಗೆ ಹೆಣ ನೋಡಿದ ಕೂಡಲೆ ಎಚ್ಚೆತ್ತು ಕುಳಿತುಕೊಳ್ಳುವುದು ಹೇಗೆ ಅಲಂಕಾರ ಪಾಂಡಿತ್ಯ ಒದಗುವುದು ಹೇಗೆ ಅಂಬುದನ್ನೂ ಸೇರಿಸಬೇಕು. ಇಂತಹ ನುಡಿಸೊಗಡನ್ನು ಕೇಳಲೆಂದೇ ನಾನು ವಿಶೇಷವಾಗ ಹಳ್ಳಿಗಳಲ್ಲಿ ಸಂಬಂಧಿಕರ ಸಾವಿನ ಮನೆಗಳಿಗೆ ಹೋಗುವುದುಂಟು. ಹಳ್ಳಿಗಳಲ್ಲಿ ಈ ಆತ್ಮೀಯತೆ ಉಂಟು. ನಗರಗಳಲ್ಲಿ ಇದಾಗಲೆ ಜನರು ಡಾರ್ಕ್ ಹ್ಯೂಮರ್ಗೆ ಒಗ್ಗಿ ಹೋಗಿದ್ದಾರೆ. ಆದರೆ ಅಲ್ಲಿ ನನಗೆ ಅತಿ ದೊಡ್ಡ ಸಂಕಷ್ಟವೆಂದರೆ ಇದನ್ನು ಸವಿಯುವ ನಡುವೆ ಅತ್ಯಂತ ಬಲವಂತದಿಂದ ಪೆಚ್ಚುಮೋರೆ ಹಾಕಿ ಕೂರಬೇಕು!
ಹಳ್ಳಿಯ ಕಡೆಗಳಲ್ಲಿ ಮೊದಲೆಲ್ಲ ಅಳಲೆಂದೇ ಜನರನ್ನು ಹಣ ಕೊಟ್ಟು ಕರೆಸುತ್ತಿದ್ದರಂತೆ. ಅಂದರೆ ಅಳುವುದೇ ಅವರುಗಳ ಕುಲಕಸುಬು. ಅವರು ಸತ್ತ ವ್ಯಕ್ತಿಯ ಬಗ್ಗೆ ಪದಗಳನ್ನು ಕಟ್ಟಿ ಹಾಡಿ ಅಳುತ್ತಿದ್ದರಂತೆ. ಅವರು ಹಾಡುವುದು ಅಳುವುದು ಕೇಳಿಯೇ ಅಳು ಬಾರದ ಜನರಿಗೂ ಅಳು ಬರುತ್ತಿತ್ತಂತೆ. ಒಂದು ಸಾರಿ ನಾನು ಪರೀಕ್ಷೆ ಇದ್ದ ಕಾರಣಕ್ಕಾಗಿ ಇದೇ ರೀತಿಯ ಒಂದು ಸಾವಿನ ಮನೆಯನ್ನು ತಪ್ಪಿಸಿಕೊಂಡೆ. ಆ ಮನೆಗೆ ಹೋಗಿ ವಾಪಸು ಬಂದ ನಮ್ಮ ಮನೆಯವರು ಬಿದ್ದು ಬಿದ್ದು ನಗುತ್ತಿದ್ದರು. ಅವರು ಸತ್ತವರ ಊರಿಗೆ ಹೋದಾಗ ಅಗಸೆಯ ಬಾಗಿಲಿನ ಬಳಿಯೇ ಈ ಅಳುವವರು ಎದುರುಗೊಂಡರಂತೆ ಬಂದು ಇವರನ್ನು ಸ್ವಾಗತಿಸುತ್ತಾ ಕೈಕಾಲು ಬಟ್ಟೆ ಹಿಡಿದು ಎಳೆಯುತ್ತಾ ಜೋರಾಗಿ ಅಳುತ್ತಾ ಹಾಡಾಡುತ್ತಾ ಸತ್ತವನಿಗೆ ಇಲ್ಲದ ಒಳ್ಳೆಯ ಗುಣಗಳನ್ನು ಆರೋಪಿಸಿಕೊಂಡು ಹೊಗಳಿ ಹಾಡುತ್ತಾ ಮನೆಯವರೆಗೆ ಕರೆದೊಯ್ದರಂತೆ. ಈ ರೀತಿ ನಾಲ್ಕೈದು ಬ್ಯಾಚ್ಗಳಿದ್ದವಂತೆ. ಮದುವೆಯಲ್ಲಿ ಎದುರುಗೊಳ್ಳುವ ವ್ಯವಸ್ಥೆ ಮಾಡುವಂತೆ ಸಾವಿನ ಮನೆಗೆ ಕರೆತರಲೂ ವ್ಯವಸ್ಥೆಯಾಗಿದ್ದಂತೆ. ಇದೆಲ್ಲ ಅವಸ್ಥೆಯನ್ನು ನೋಡಿ ಅಲ್ಲೆ ನಗು ಬಂದರೂ ನಗಲಾರದೇ ತಡೆದುಕೊಂಡು ಮನೆಗೆ ಬಂದು ನಗತೊಡಗಿದ್ದರು.
ಸಾವಿನಲ್ಲಿ ಅಳುವ ಕಸುಬನ್ನು ಒಂದು ಜನಪದ ಕಲೆಯಾಗಿ ನೋಡಲು ನಾನು ಬಯಸುತ್ತೇನೆ. ಈ ಒಂದು ಕ್ಷೇತ್ರವನ್ನು ಜನಪದ ತಜ್ಞರು ಗಂಭೀರವಾಗಿ ತೆಗೆದುಕೊಂಡು ಅಧ್ಯಯನ ಮಾಡಿ ದಾಖಲಿಸಿದ್ದಾರೋ ಅಂಥ ತಿಳಿಯದು. ಸಾಧ್ಯವಾದರೆ ಅದನ್ನು ದಾಖಲಿಸುವ ಇಚ್ಛೆಯೂ ನನಗಿದೆ. ಇದೊಂದು ಹಳೆಯ ಕಾಲದಿಂದ ಬಂದ ಸಾವನ್ನು ಜನಪದ ಕಲೆಯೊಂದಿಗೆ ಜೋಡಿಸುವ ಅಮೂಲ್ಯ ಕೊಂಡಿ! ಇದನ್ನು ದಾಖಲಿಸಿಡುವುದು ಅವಶ್ಯಕ. ಹಾಗೆ ನೋಡಿದರೆ ಸಾವಿನ ಬಗ್ಗೆ ನಾನು ಗಂಭೀರವಾಗಿ ಮಾತಾಡುವುದು ಕಡಿಮೆ. ಒಂದು ದಿನ ನನ್ನ ತಂಗಿ ಹಾರುವರ ಹುಡುಗನನ್ನು ಪ್ರೀತಿಸಿರುವುದಾಗಿಯೂ ಆತನನ್ನು ಮದುವೆಯಾಗುವುದಾಗಿಯೂ ಎಂದು ತೋಡಿಕೊಂಡಾಗ ನಾನು ಆಕೆಗೆ ಕೆಳಿದ ಮೊದಲ ಪ್ರಶ್ನೆ. “ಸರಿ. ತೊಂದರೆ ಇಲ್ಲ. ಆದರೆ ಒಂದು ಡೌಟು, ಸತ್ತಾಗ ನಿನ್ನ ಹೂಳಬೇಕಾ ಇಲ್ಲ ಸುಡಬೇಕಾ?”
ನಾನೊಬ್ಬನೆ ಅಲ್ಲ. ನನ್ನಂಗೆ ಇನ್ನೂ ಇರುತ್ತಾರೆ. ನನ್ನ ಸಂಬಂಧಿಕರೊಬ್ಬರು ಹೊಸದೊಂದು ಮನೆ ಕಟ್ಟಿಸಿದರು ಹೆಮ್ಮೆಯಿಂದ ಗೋಡೆಯ ಕಡೆಗೆ ನೋಡುತ್ತಾ ಇಲ್ಲವಾದ ತಮ್ಮ ಹಿರಿಯರ ನೆನಪಿಗಾಗಿ “ಇಲ್ಲಿ ನಮ್ಮಜ್ಜ ಅಜ್ಜಿಯ ಫೋಟೋ ಹಾಕೋಣ, ಇಲ್ಲಿ ಅಪ್ಪ ಅವ್ವನ ಫೋಟೋ, ಇಲ್ಲಿ ಚಿಕ್ಕಪ್ಪ ಚಿಗವ್ವನ ಫೋಟೋ..” ಅಂತ ಪಟ್ಟಿ ವಿವರಿಸುತ್ತದ್ದರು. ಅವರ ಮಗಾ “ಸಾಕು ಸಾಕು.. ನಿಮ್ಮ ಫೋಟೋ ಹಾಕೋಕೂ ಜಾಗ ಉಳಿಸಿ…” ಅಂದ. ಅಷ್ಟಕ್ಕೂ ಬದುಕು ಅಂದರೆ ಏನು? ಕವಿಗಳೊಬ್ಬರು ಹೇಳುವಂತೆ ಸುದೀರ್ಘ ಮೌನದ ನಡುವೆ ಒಂದು ಥಳಕು! ನಾವು ಹುಟ್ಟುವುದಕ್ಕೂ ಮುಂಚೆ ಮೌನ ಸತ್ತ ಮೇಲೂ ಮೌನ. ಹುಟ್ಟು ಆಕಸ್ಮಿಕ ಸಾವು ನಿತ್ಯ ಸತ್ಯ. ಹುಟ್ಟು ಒಂದೇ ರೀತಿ ಸಾವಿನಲ್ಲಿ ನೂರಾರು ವೈವಿಧ್ಯತೆ. ಹುಟ್ಟು ಬೋರಿಂಗ್ ಸಾವು ರಂಗುರಂಗಾದುದು!
ಬರಹ ಮುಗಿಸುವ ಮುನ್ನ ಒಂದು ಸಂಗತಿ ದಾಖಲಿಸಲೆಬೇಕು. ಒಂದು ಬಾರಿ ಮಣ್ಣಿಗೆ ಹೋಗಿದ್ದಾಗ ಹೆಣದ ಪೂಜೆ ಮಾಡುತ್ತಿದ್ದ ಪೂಜಾರಿ “ಎಲ್ಲಾ ಕೆಲಸ ಮುಗಿಯಿತು. ಕಡೇ ಬಾರಿ ಮುಖ ನೋಡಿಕೊಂಡು ಬಿಡಿ” ಅಂದ ಎಲ್ಲರೂ ನೋಡಿ ಕೈ ಮುಗಿದ ಮೆಲೆ “ಇವಾಗ ಹಿಂಗೆ ಮಣ್ಣು ಹಾಕೋಣವಾ ಇಲ್ಲಾ ಬಟ್ಟೆ ಕಟ್ಟಿ ಮಣ್ಣು ಹಾಕೋಣವಾ? ಬಟ್ಟೆ ಕಟ್ಟಿದರೆ ಹೆಣ ಬಹಳ ದಿನ ಕೊಳೆಯೋದಿಲ್ಲ” ಅಂದ. ಅದಕ್ಕೆ ಮಕ್ಕಳು “ಹಾಗಿದ್ದರೆ ಜಾಸ್ತಿ ದಿನ ಕೊಳೆಯದ ಹಾಗೆ ಎರಡು ರೌಂಡು ಬಟ್ಟೆ ಕಟ್ಟಿ” ಅಂತ ಹೊಸಾ ಶುಭ್ರ ಬಿಳಿ ಲುಂಗಿಗಳನ್ನು ತರಿಸಿ ಹೆಣಕ್ಕೆ ಸುತ್ತಿಸಿದರು. ಗಂಭೀರ ಪರಿಸ್ಥಿತಿಗಳಲ್ಲಿ ನನ್ನ ತಲೆಹರಟೆ ಬುದ್ದಿ ಜಾಗೃತವಾಗುವುದು ಜಾಸ್ತಿ. ಇವಾಗೇನು ಒಂದು ನಾಲ್ಕು ಹೆಚ್ಚು ದಿನ ಹೆಣ ಕೊಳೆಯದೇ ಇದ್ದರೆ ಅಷ್ಟರೊಳಗೆ ಸತ್ತವರನ್ನು ಬದುಕಿಸುವ ತಂತ್ರಜ್ಞಾನ ಬಂದು ಇವರಪ್ಪನನ್ನು ಬದುಕಿಸಿಕೊಂಡು ಬಿಡುತ್ತಾರಾ? ಆಯ್ತ ಬಂತು ಅಂತಲೇ ಇಟ್ಟುಕೊಳ್ಳೋಣ ಬದುಕಿ ಬಂದ ಮುದುಕನನ್ನು ಇವರು ಅದೆಷ್ಟರ ಮಟ್ಟಿಗೆ ಚೆಂದಗೆ ನೋಡಿಕೊಂಡಾರು? ಚಿಲ್ರೆ ಪ್ರತಿಷ್ಟೆ ಮಕ್ಕಳು ಅನ್ಕೊಂಡು ಸುಮ್ಮನೆ ಬಂದೆ.
ಇನ್ನೊಮ್ಮೆ ಹಿರಿಯರೊಬ್ಬರು ತೀರಿಕೊಂಡರು. ನಾನಿನ್ನೂ ತೀರಾ ಚಿಕ್ಕವನು. ಯಾರೋ ಬಂದು ಸುದ್ದಿ ಹೇಳಿದರು. ನಾನು ತಕ್ಷಣ “ಛೇ ಅನ್ಯಾಯ ಆಯ್ತು” ಅಂತ ಉದ್ಗರಿಸಿದೆ. ಆಗ ನನ್ನ ತಂದೆಯಿತ್ಯಾದಿಯಾಗಿ ಎಲ್ಲ ನನ್ನ ಕಡೆ ನೋಡಿ ಯಾರಿಗೆ ಅವ್ಯಾಯ ಹೇಗೆ? ಅಂತ ಕೇಳಿದರು. ನಿಜವೆಂದರೆ ಈ ಮೊದಲು ಯಾರೇ ತೀರಿಹೋದರೂ ದೊಡ್ಡವರು “ಛೇ ಅನ್ಯಾಯ ಆತು” ಅನ್ನೋದು ಕೇಳಿಸಿಕೊಂಡಿದ್ದೆ. ಕೈಗೆ ಪೆಟ್ಟು ಬಿದ್ದಾಗ “ಅಯ್ಯೋ ನೋವು” ಅಂತ ಚೀರಿದ ಹಾಗೆಯೇ ಇದೂ ಸಹ ಒಂದು ಪ್ರತಿಕ್ರಿಯೆ ಅಂದುಕೊಂಡಿದ್ದೆ. ಆ ವೃದ್ಧರು ಒಂಟಿಯಾಗಿದ್ದು ಅವರಿಗೆ ಮಕ್ಕಳಿರಲಿಲ್ಲ. ಹೆಂಡತಿ ಯಾವುದೋ ಕಾಲದಲ್ಲಿ ತೀರಿ ಹೋಗಿದ್ದರು. ಮನೆಯೊಂದರಲ್ಲಿ ಒಂಟಿ ಬಾಳು ಬದುಕಿ ಮನೆಯನ್ನು ಯಾವುದೋ ಮಠಕ್ಕೆ ಬರೆದು ಇಹವ್ಯಾಪಾರ ಮುಗಿಸಿದ್ದರು. ಅಸಲಿಗೆ ಯಾರಿಗೂ ಅನ್ಯಾಯವಾಗಿರಲಿಲ್ಲ!
ನಿಮ್ಮ ಅಭಿಪ್ರಾಯಗಳನ್ನು ಈ ವಿಳಾಸಕ್ಕೆ ಕಳಿಸಬಹುದು: tv9kannadadigital@gmail.com
ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ದಾವಣಗೆರೆಯಿಂದ ಆಸ್ಟ್ರೇಲಿಯಾದ ತನಕ ‘ಉದಕ ಉರಿದು’
Published On - 5:23 pm, Sun, 22 August 21