Kaadumale Movie Review: ಭ್ರಮೆಯ ಸುಳಿಗೆ ಸಿಲುಕಿದ ‘ಕಾಡುಮಳೆ’
ಸಸ್ಪೆನ್ಸ್, ಥ್ರಿಲ್ಲರ್ ಕಹಾನಿ ಇರುವ ‘ಕಾಡುಮಳೆ’ ಸಿನಿಮಾ ತೆರೆಕಂಡಿದೆ. ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದ ಕಥೆ ಪೂರ್ತಿಯಾಗಿ ಕಾಡಿನಲ್ಲೇ ನಡೆಯುತ್ತದೆ. ಅದೊಂದು ವಿಚಿತ್ರವಾದ ಕಾಡು. ಅಲ್ಲಿ ನಡೆಯುವುದು ಕೂಡ ವಿಚಿತ್ರಗಳೇ. ನಿರ್ದೇಶಕ ಸಮರ್ಥ ಅವರು ಭ್ರಮೆ ಮತ್ತು ವಾಸ್ತವಗಳ ಕುರಿತಾದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ.

ಸಿನಿಮಾ: ಕಾಡುಮಳೆ. ನಿರ್ಮಾಣ: ಮಂಜುನಾಥ್ ಟಿ.ಎಸ್. ನಿರ್ದೇಶನ: ಸಮರ್ಥ. ಪಾತ್ರವರ್ಗ: ಹರ್ಷನ್, ಸಂಗೀತಾ, ವಿಜಯಲಕ್ಷ್ಮಿ ಮುಂತಾದವರು. ಸ್ಟಾರ್: 3/5
ಭ್ರಮೆ ಮತ್ತು ವಾಸ್ತವ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಬಂದ ಸಿನಿಮಾಗಳ ಸಂಖ್ಯೆ ವಿರಳ. ಯಾವುದು ನಿಜ, ಯಾವುದು ಕನಸು ಎಂಬುದೇ ಗೊತ್ತಾಗದಂತಹ ಸ್ಥಿತಿ ಕೆಲವೊಮ್ಮೆ ಎದುರಾಗುತ್ತದೆ. ಅಂಥ ಸಬ್ಜೆಕ್ಟ್ ಆಧರಿಸಿ ‘ಕಾಡುಮಳೆ’ ಸಿನಿಮಾ ಸಿದ್ಧವಾಗಿದೆ. ಟ್ರೇಲರ್ ಮೂಲಕ ಕುತೂಹಲ ಮೂಡಿಸಿದ್ದ ಸಿನಿಮಾ ಈ ವಾರ (ಜನವರಿ 31) ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಹರ್ಷನ್ ಮತ್ತು ಸಂಗೀತಾ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಬಹುತೇಕ ಸಿನಿಮಾ ಕಾಡಿನಲ್ಲಿ ನಡೆಯುತ್ತದೆ.
ಯುವತಿಯೊಬ್ಬಳು ಅಕಸ್ಮಿಕವಾಗಿ ದೊಡ್ಡ ಕಾಡಿನ ಒಳಗೆ ಸಿಕ್ಕಿ ಹಾಕಿಕೊಳ್ಳುತ್ತಾಳೆ. ನಿನ್ನೆ ರಾತ್ರಿ ಕಂಡ ಕನಸಿನ ರೀತಿಯೇ ಆ ಕಾಡಿನಲ್ಲಿ ಎಲ್ಲ ಘಟನೆಗಳು ಪುನರಾವರ್ತನೆ ಆಗುತ್ತವೆ. ಇದರಲ್ಲಿ ನಿಜ ಯಾವುದು? ಕನಸು ಯಾವುದು ಎಂಬುದು ಗೊತ್ತಾಗದೇ ಆಕೆ ಒದ್ದಾಡುತ್ತಾಳೆ. ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ. ತನ್ನಂತೆಯೇ ಇರುವ ಮತ್ತೋರ್ವ ಯುವತಿ ಕೂಡ ಪ್ರತ್ಯಕ್ಷ ಆಗುತ್ತಾಳೆ. ತನ್ನ ತದ್ರೂಪಿಯನ್ನು ಆಕೆ ಕೊಲೆ ಮಾಡುತ್ತಾಳೆ. ಮುಂದೇನು ಎಂಬುದು ತಿಳಿಯದೇ ಗೊಂದಲ ಇನ್ನಷ್ಟು ಹೆಚ್ಚಾಗುತ್ತದೆ. ಇದೇ ರೀತಿ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತದೆ. ಇದು ‘ಕಾಡುಮಳೆ’ ಸಿನಿಮಾದ ಕಥೆ.
ಕಾಡು ಎಂದಿಗೂ ಕೂಡ ರಹಸ್ಯಗಳ ತಾಣ. ದಟ್ಟ ಕಾನನದಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಪೂರ್ತಿಯಾಗಿ ಕಂಡವರಿಲ್ಲ. ಮನುಷ್ಯರು ತಲುಪುಲು ಸಾಧ್ಯವಾದಷ್ಟು ದಟ್ಟವಾದ ಅರಣ್ಯ ಪ್ರದೇಶಗಳು ಕೂಡ ಇವೆ. ಕೆಲವು ಜಾಗಗಳಲ್ಲಿ ವಿಚಿತ್ರವಾದ ಶಕ್ತಿ ಇರುತ್ತದೆ. ಅವುಗಳ ಬಗ್ಗೆ ವಿಶ್ಲೇಷಣೆ ಮಾಡಲು ವಿಜ್ಞಾನವೂ ಸೋಲುತ್ತದೆ ಎಂಬುದು ಕೆಲವರ ಅಭಿಪ್ರಾಯ. ಆ ರೀತಿಯ ಒಂದು ಜಾಗದ ಬಗ್ಗೆ ‘ಕಾಡುಮಳೆ’ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಕಾಲ್ಪನಿಕ ಕಥೆಗೆ ಥ್ರಿಲ್ಲರ್ ಗುಣವನ್ನು ಬೆರೆಸಲಾಗಿದೆ.
‘ಕಾಡುಮಳೆ’ ಸಿನಿಮಾದ ಕಥೆಯಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯಲು ಸ್ವಲ್ಪ ಹೊತ್ತು ಹಿಡಿಯುತ್ತದೆ. ಯಾಕೆ ಹೀಗೆಲ್ಲ ಆಗುತ್ತದೆ ಎಂಬುದು ಗೊತ್ತಾಗುವಾಗ ಮಧ್ಯಂತರ ಸಮೀಪಿಸುತ್ತದೆ. ಪುನರಾವರ್ತನೆಯ ಸುಳಿ ಅಂತ್ಯವಾಗಬೇಕಾದರೆ ಕ್ಲೈಮ್ಯಾಕ್ಸ್ ಬರುತ್ತದೆ. ಅಲ್ಲಿಂದ ಮತ್ತೆ ಹೊಸ ಕಥೆ ಕೂಡ ಆರಂಭ ಆಗಬಹುದು ಎಂಬ ಸೂಚನೆಯನ್ನು ನಿರ್ದೇಶಕರು ನೀಡಿದ್ದಾರೆ. ಒಂದರ್ಧದಲ್ಲಿ ಇದು ಕೊನೆ ಮತ್ತು ಮೊದಲುಗಳೇ ಇಲ್ಲದಂತಹ ಕಥೆಯಾಗಿದೆ.
ಈ ಸಿನಿಮಾದಲ್ಲಿ ಪ್ರಮುಖವಾಗಿ ಇರುವುದು ಎರಡೇ ಪಾತ್ರಗಳು. ಅವರಿಬ್ಬರು ಕಾಡಿನ ಒಳಗೆ ಭ್ರಮೆಯಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ. ಅದರಿಂದ ಹೊರಗೆ ಬರಲು ನಾನಾ ಬಗೆಯ ಪ್ರಯತ್ನ ಮಾಡುತ್ತಾರೆ. ಪ್ರೇಕ್ಷಕರು ಕೂಡ ಯಾವುದು ಭ್ರಮೆ, ಯಾವುದು ನಿಜ ಎಂಬುದನ್ನು ತಿಳಿಯಲು ಬುದ್ಧಿಗೆ ಕೆಲಸ ಕೊಡಬೇಕು. ಸಿಕ್ಕಾಪಟ್ಟೆ ಗಮನ ಕೊಟ್ಟ ಸಿನಿಮಾ ನೋಡಬೇಕು. ಇಂಥ ಸಿನಿಮಾಗಳನ್ನು ಬಯಸುವವರಿಗೆ ‘ಕಾಡುಮಳೆ’ ಇಷ್ಟವಾಗುತ್ತದೆ. ಗಮನ ಬೇರೆಡೆಗೆ ಕೊಟ್ಟರೆ ಏನು ಮುಂದಿನ ದೃಶ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯದೇ ಗೊಂದಲ ಮೂಡಬಹುದು.
ಇದನ್ನೂ ಓದಿ: Nodidavaru Enantare Review: ‘ನೋಡಿದವರು ಏನಂತಾರೆ’ ಎಂಬ ಎಲ್ಲರೊಳಗಿನ ಪ್ರಶ್ನೆಗೆ ಉತ್ತರ ಈ ಸಿನಿಮಾ
ಎರಡೇ ಪಾತ್ರ, ಒಂದೇ ಜಾಗ, ದೃಶ್ಯಗಳ ಪುನರಾವರ್ತನೆಯಿಂದ ಪ್ರೇಕ್ಷಕರಿಗೆ ಏಕತಾನತೆ ಕಾಡುವುದು ಸಹಜ. ಇದರ ನಡುವೆ ಹಾಡು, ಕಾಮಿಡಿ, ರೊಮ್ಯಾನ್ಸ್ ಏನನ್ನೂ ನಿರೀಕ್ಷಿಸುವಂತಿಲ್ಲ. ಹಾಗಾಗಿ ಏಕತಾನತೆ ಇನ್ನಷ್ಟು ಹೆಚ್ಚಾಗುತ್ತದೆ. ಹಿನ್ನೆಲೆ ಸಂಗೀತದಿಂದಾಗಿ ‘ಕಾಡುಮಳೆ’ ಹೆಚ್ಚು ಥ್ರಿಲ್ಲಿಂಗ್ ಎನಿಸುತ್ತದೆ. ಕಾಡಿನೊಳಗಿನ ವಿಚಿತ್ರ ವರ್ತನೆಗೆ ಕಾರಣ ಏನು ಎಂಬುದನ್ನು ವಿವರಿಸಲು ನಿರ್ದೇಶಕರು ಕೆಲವು ಥಿಯೆರಿಗಳನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.