Sign In

By signing in or creating an account, you agree with Associated Broadcasting Company's Terms & Conditions and Privacy Policy.

Nodidavaru Enantare Review: ‘ನೋಡಿದವರು ಏನಂತಾರೆ’ ಎಂಬ ಎಲ್ಲರೊಳಗಿನ ಪ್ರಶ್ನೆಗೆ ಉತ್ತರ ಈ ಸಿನಿಮಾ

‘ನೋಡಿದವರು ಏನಂತಾರೆ’ ಸಿನಿಮಾ ಮೂಲಕ ನಿರ್ದೇಶಕ ಕುಲದೀಪ್ ಕಾರಿಯಪ್ಪ ಅವರು ಒಂದು ಭಿನ್ನವಾದ ಪ್ರಯತ್ನ ಮಾಡಿದ್ದಾರೆ. ಅವರ ಪ್ರಯತ್ನಕ್ಕೆ ನಟ ನವೀನ್ ಶಂಕರ್​ ಅವರು ಉತ್ತಮವಾಗಿ ಸಾಥ್ ನೀಡಿದ್ದಾರೆ. ಭಾವ ತೀವ್ರತೆಗೆ ಹೆಚ್ಚು ಒತ್ತು ನೀಡಿರುವ ಈ ಸಿನಿಮಾವನ್ನು ನಿಧಾನಗತಿಯಲ್ಲಿ ಕಟ್ಟಿಕೊಡಲಾಗಿದೆ. ‘ನೋಡಿದವರು ಏನಂತಾರೆ’ ಸಿನಿಮಾದ ವಿಮರ್ಶೆ ಇಲ್ಲಿದೆ..

Nodidavaru Enantare Review: ‘ನೋಡಿದವರು ಏನಂತಾರೆ’ ಎಂಬ ಎಲ್ಲರೊಳಗಿನ ಪ್ರಶ್ನೆಗೆ ಉತ್ತರ ಈ ಸಿನಿಮಾ
Nodidavaru Enantare
Follow us
ಮದನ್​ ಕುಮಾರ್​
|

Updated on: Jan 31, 2025 | 3:46 PM

ಸಿನಿಮಾ: ನೋಡಿದವರು ಏನಂತಾರೆ. ನಿರ್ಮಾಣ: ನಾಗೇಶ್ ಗೋಪಾಲ್. ನಿರ್ದೇಶನ: ಕುಲದೀಪ್ ಕಾರಿಯಪ್ಪ. ಪಾತ್ರವರ್ಗ: ನವೀನ್ ಶಂಕರ್, ಅಪೂರ್ವಾ ಭಾರದ್ವಜ್, ಪದ್ಮಾವತಿ ರಾವ್, ಆರ್ಯ ಕೃಷ್ಣ, ಸೋನು ಗೌಡ ಮುಂತಾದವರು. ಸ್ಟಾರ್: 3.5/5

ನಟ ನವೀನ್ ಶಂಕರ್ ಅವರು ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತಾರೆ. ಆ ಕಾರಣದಿಂದ ಅವರು ಕನ್ನಡ ಚಿತ್ರರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರು ‘ನೋಡಿದವರು ಏನಂತಾರೆ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಬಾರಿ ಕೂಡ ಅವರು ಡಿಫರೆಂಟ್ ಆದಂತಹ ಪಾತ್ರವನ್ನೇ ಮಾಡಿದ್ದಾರೆ. ನಿರ್ದೇಶಕ ಕುಲದೀಪ್ ಕಾರಿಯಪ್ಪ ಬರೆದ ಕಥೆ ಮತ್ತು ಪಾತ್ರಕ್ಕೆ ನವೀಶ್ ಶಂಕರ್​ ಜೀವ ತುಂಬಿದ್ದಾರೆ. ಇದು ಯಾವುದೋ ಒಬ್ಬ ವ್ಯಕ್ತಿಯ ಕಥೆಯಲ್ಲ. ಎಲ್ಲರೊಳಗೂ ಇರಬಹುದಾದ ಗೊಂದಲಗಳನ್ನೇ ಕಥೆಯಾಗಿಸಿದಂತಿದೆ.

‘ನೋಡಿದವರು ಏನಂತಾರೆ’ ಎಂಬ ಶೀರ್ಷಿಕೆಯೇ ಬಹಳ ವಿಶೇಷವಾಗಿದೆ. ಈ ಶೀರ್ಷಿಕೆಗೆ ತಕ್ಕಂತೆಯೇ ಇಡೀ ಕಥೆಯನ್ನು ಹೆಣೆಯಲಾಗಿದೆ. ನೋಡಿದವರು ಏನಂತಾರೆ ಎನ್ನುವ ಪ್ರಶ್ನೆ ಜೀವನದಲ್ಲಿ ಬಹುತೇಕ ಎಲ್ಲರನ್ನೂ ಕಾಡಿರುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಎಲ್ಲ ನಿರ್ಧಾರಗಳು ಅವಲಂಬಿತ ಆಗಿರುವುದೇ ಈ ಪ್ರಶ್ನೆಯ ಮೇಲೆ. ಸಮಾಜಕ್ಕಾಗಿಯೇ ಬದುಕುತ್ತಿರುವ ಎಲ್ಲರೂ ತಮ್ಮ ಬದುಕಿನಲ್ಲಿ ಸಾವಿರಾರು ಬಾರಿ ಈ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡಿರುತ್ತಾರೆ. ಅಂತಹ ಎಲ್ಲರ ಪ್ರತಿನಿಧಿಯಂತೆ ಈ ಸಿನಿಮಾದ ಕಥಾನಾಯಕನ ಪಾತ್ರ ಮೂಡಿಬಂದಿದೆ.

ಈ ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ.. ಬೆಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಕಥಾನಾಯಕನಿಗೆ ಎರಡು ತಿಂಗಳ ಹಿಂದಷ್ಟೇ ಆದ ಬ್ರೇಕಪ್ ನೋವು ಕಾಡುತ್ತಿರುತ್ತದೆ. ಇಡೀ ಹೆಣ್ಣುಕುಲವನ್ನು ದ್ವೇಷಿಸಲು ಅವನಿಗೆ ಬ್ರೇಕಪ್ ಜೊತೆ ಇನ್ನೊಂದು ಕಾರಣ ಕೂಡ ಇದೆ. ಅದೇನೆಂದರೆ, ಚಿಕ್ಕವಯಸ್ಸಿನಲ್ಲಿಯೇ ಆತನನ್ನು ಬಿಟ್ಟು ಹೋಗಿರುತ್ತಾಳೆ ಹೆತ್ತ ತಾಯಿ. ಹೆಚ್ಚು-ಕಡಿಮೆ ಒಂಟಿಯಾಗಿಯೇ ಜೀವನ ಸಾಗಿಸುವ ಅವನಿಗೆ ಸರಿಯಾದ ಸಾಂಗತ್ಯದ ತವಕ ಕೂಡ ಇದೆ. ಈ ಎರಡೂ ಸ್ಥಿತಿಗಳ ನಡುವಿನ ಇಬ್ಬಂದಿತನವನ್ನು ‘ನೋಡಿದವರು ಏನಂತಾರೆ’ ಸಿನಿಮಾ ವಿವರಿಸುತ್ತದೆ.

ಕಾರ್ಪೋರೇಟ್ ಜಗತ್ತಿನ ಬೂಟಾಟಿಕೆ, ಕ್ಷಣಿಕಕ್ಕೆ ಸೃಷ್ಟಿಯಾಗಿ ಸಾಯುವ ಸಂಬಂಧಗಳು, ಒತ್ತಡದ ಬದುಕು, ಎಲ್ಲವೂ ಇದ್ದರೂ ಇನ್ನೇನನ್ನೋ ಹುಡುಕುವ ಹಂಬಲ ಸೇರಿದಂತೆ ಹಲವು ಅಂಶಗಳ ಬಗ್ಗೆ ‘ನೋಡಿದವರು ಏನಂತಾರೆ’ ಸಿನಿಮಾದ ಮೊದಲಾರ್ಧ ಮಾತನಾಡುತ್ತದೆ. ಸ್ವತಂತ್ರ ಬದುಕಿನ ಕನಸು ಕಂಡ ಹೆಣ್ಣಿಗೆ ಅಡ್ಡಿ ಆಗುವ ಸಮಾಜದ ಬಗ್ಗೆ ದ್ವಿತೀಯಾರ್ಧದಲ್ಲಿ ಹೆಚ್ಚು ಹೇಳಲಾಗಿದೆ. ತಾಯಿ-ಮಗನ ಸೆಂಟಿಮೆಂಟ್ ಕೂಡ ಈ ಚಿತ್ರದಲ್ಲಿದೆ. ನೋಡುಗರ ಬದುಕಿನ ಅನುಭವಕ್ಕೆ ತಕ್ಕಂತೆ ಒಂದಲ್ಲಾ ಒಂದು ರೀತಿಯಲ್ಲಿ ಕನೆಕ್ಟ್ ಆಗುವ ಗುಣ ಈ ಸಿನಿಮಾಗಿದೆ.

ಇದೊಂದು ಮಾಸ್ ಸಿನಿಮಾ ಅಲ್ಲ. ಪಕ್ಕಾ ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಸಿನಿಮಾ. ಅಬ್ಬರ ಡೈಲಾಗ್​ಗಳಿಲ್ಲ, ಅತಿರೇಕದ ವೈಭವೀಕರಣ ಇಲ್ಲ, ಹೊಡಿ-ಬಡಿ ದೃಶ್ಯಗಳಿಲ್ಲ, ಕಥಾನಾಯಕನಿಗೆ ಬಿಲ್ಡಪ್ ಇಲ್ಲ. ಒಂದು ಕಾವ್ಯದ ರೀತಿಯಲ್ಲಿ ನಿರ್ದೇಶಕ ಕುಲದೀಪ್ ಕಾರಿಯಪ್ಪ ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಕಥೆ ವಿವರಿಸುವಲ್ಲಿ ಅವರು ಅವಸರವನ್ನೂ ತೋರಿಲ್ಲ. ಹಾಗಾಗಿ ನೋಡುಗರಿಗೆ ಕೊಂಚ ತಾಳ್ಮೆ ಕೂಡ ಅಗತ್ಯವಿದೆ. ಮಯೂರೇಶ್ ಅಧಿಕಾರಿ ಅವರ ಹಿನ್ನೆಲೆ ಸಂಗೀತದಿಂದಾಗಿ ಈ ಸಿನಿಮಾದ ಫೀಲ್ ಹೆಚ್ಚಿದೆ.

ಇದನ್ನೂ ಓದಿ: Review: ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು: ಇಲ್ಲಿದೆ ಕಳ್ಳತನದ ಹಲವು ಆಯಾಮ

ನಟಿ ಸೋನು ಗೌಡ ಅವರಿಗೆ ಈ ಸಿನಿಮಾದಲ್ಲಿ ಇರುವುದು ಅತಿಥಿ ಪಾತ್ರವಷ್ಟೇ. ನಟ ನವೀನ್ ಶಂಕರ್​ ಅವರು ತಮಗೆ ಸಿಕ್ಕ ಪಾತ್ರವನ್ನು ಜೀವಿಸಿದ್ದಾರೆ. ಒಂಟಿತನ, ತಿರಸ್ಕಾರ, ಹತಾಶೆ ಮುಂತಾದ ಭಾವನೆಗಳಿಗೆ ಅವರು ಜೀವ ತುಂಬಿದ್ದಾರೆ. ನಟಿ ಅಪೂರ್ವಾ ಭಾರದ್ವಜ್ ಅವರು ಲವಲವಿಕೆಯಿಂದ ನಟಿಸಿದ್ದಾರೆ. ಕೆಲವೇ ನಿಮಿಷಗಳು ಕಾಣಿಸಿಕೊಂಡರೂ ನಟಿ ಆರ್ಯಾ ಕೃಷ್ಣ ಗಮನ ಸೆಳೆಯುತ್ತಾರೆ. ತಾಯಿ ಮತ್ತು ಲೇಖಕಿಯ ಪಾತ್ರ ಮಾಡಿರುವ ಹಿರಿಯ ನಟಿ ಪದ್ಮಾವತಿ ರಾವ್ ಅವರು ಕ್ಲೈಮ್ಯಾಕ್ಸ್​ಗೆ ಬಲ ತುಂಬಿದ್ದಾರೆ.

‘ನೋಡಿದವರು ಏನಂತಾರೆ’ ಎಂಬುದನ್ನು ಪಕ್ಕಕ್ಕಿಟ್ಟರೆ ಏನಾಗುತ್ತದೆ ಎನ್ನುವ ಸಂದೇಶ ಈ ಸಿನಿಮಾದಲ್ಲಿದೆ. ಆದರೆ ಆ ಸಂದೇಶ ತೀರಾ ವಾಚ್ಯವಾಗಿಲ್ಲ. ಕಥೆ ಧ್ವನಿಸಬೇಕಿರುವ ಆಶಯಕ್ಕೆ ತಕ್ಕಂತೆ ಪ್ರತಿ ದೃಶ್ಯಗಳನ್ನೂ ನಿರ್ದೇಶಕರು ತೆರೆಗೆ ತಂದಿದ್ದಾರೆ. ಒಂದು ವಿಶೇಷ ಪ್ರಯತ್ನವಾಗಿ ಈ ಸಿನಿಮಾ ಗಮನ ಸೆಳೆಯುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್