Review: ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು: ಇಲ್ಲಿದೆ ಕಳ್ಳತನದ ಹಲವು ಆಯಾಮ
ಕೇಶವ ಮೂರ್ತಿ ನಿರ್ದೇಶನ ಮಾಡಿರುವ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸಿನಿಮಾ ಈ ವಾರ (ಜನವರಿ 10) ತೆರೆಕಂಡಿದೆ. ಇದು ಕಳ್ಳತನದ ಕಥೆ ಇರುವ ಸಿನಿಮಾ. ಹಾಗಂತ ಒಳ್ಳೆಯ ಮತ್ತು ಕೆಟ್ಟ ಪಾತ್ರಗಳ ಬಗ್ಗೆ ಜಡ್ಜ್ಮೆಂಟಲ್ ಆದಂತಹ ಸಿನಿಮಾ ಅಲ್ಲ. ಮಾಮೂಲಿ ಸಿನಿಮಾಗಳಿಗಿಂತಲೂ ಚೂರು ಡಿಫರೆಂಟ್ ಆಗಿ ಈ ಚಿತ್ರ ಮೂಡಿಬಂದಿದೆ. ಚಿತ್ರದ ವಿಮರ್ಶೆ ಇಲ್ಲಿದೆ ಓದಿ..
ಸಿನಿಮಾ: ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು. ನಿರ್ಮಾಣ: ಪಿಕ್ಚರ್ ಶಾಪ್, ಮಹೇಶ್ ರವೀಂದ್ರನ್, ಕುಬೇಂದ್ರನ್. ನಿರ್ದೇಶನ: ಕೇಶವ ಮೂರ್ತಿ. ಪಾತ್ರವರ್ಗ: ದಿಲೀಪ್ ರಾಜ್, ಶಿಲ್ಪಾ ಮಂಜುನಾಥ್, ಮಧುಸೂದನ್ ಗೋವಿಂದ್, ಅಪೂರ್ವಾ ಭಾರದ್ವಜ್, ಪ್ರಸನ್ನ ಶೆಟ್ಟಿ ಮುಂತಾದವರು. ಸ್ಟಾರ್: 3/5
ಸವಕಲು ಕಥೆಗಳನ್ನು ಬಿಟ್ಟು ಹೊಸ ಬಗೆಯ ಕಥೆಯನ್ನು ಹೇಳಿದರೆ ಪ್ರೇಕ್ಷಕರಿಗೆ ತಾಜಾ ಮನರಂಜನೆ ಸಿಗುತ್ತದೆ. ಸ್ಯಾಂಡಲ್ವುಡ್ನಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಇಂಥ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಒಂದು ಡಿಫರೆಂಟ್ ಆದಂತಹ ಅನುಭವ ನೀಡುವ ರೀತಿಯಲ್ಲಿ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸಿನಿಮಾ ಮೂಡಿಬಂದಿದೆ. ಹೊಸಬರು ಮತ್ತು ಅನುಭವಿಗಳು ಸೇರಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಸಿನಿಮಾದ ಥೀಮ್ ಮತ್ತು ಅದನ್ನು ಪ್ರಸ್ತುತಪಡಿಸಿದ ರೀತಿ ಕೂಡ ಭಿನ್ನವಾಗಿದೆ.
‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಎಂಬ ಶೀರ್ಷಿಕೆಯೇ ಸೂಚಿಸುತ್ತಿರುವಂತೆ ಇಡೀ ಸಿನಿಮಾದಲ್ಲಿ ಕಳ್ಳತನವೇ ಪ್ರಮುಖ ವಿಷಯ! ಕಳ್ಳತನದ ಚಾಳಿಗೆ ಅಂಟಿಕೊಂಡಿರುವ ಒಂದಷ್ಟು ಪಾತ್ರಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಒಬ್ಬೊಬ್ಬರ ಕಳ್ಳತನ ಒಂದೊಂದು ರೀತಿ ಇದೆ. ಆ ಕಳ್ಳತನಕ್ಕೂ ಹಲವು ಆಯಾಮಗಳು ಇವೆ. ಅದನ್ನು ತುಂಬಾ ನವಿರಾಗಿ ತೋರಿಸಲಾಗಿದೆ.
ಈ ಸಿನಿಮಾದಲ್ಲಿ ಮೂರು ಕಥೆಗಳು ಇವೆ. ಥೀಮ್ ಒಂದೇ ಎಂಬುದು ಬಿಟ್ಟರೆ ಆ ಕಥೆಗಳಿಗೆ ಪರಸ್ಪರ ನೇರ ಸಂಬಂಧ ಇಲ್ಲ. ಅಂತ್ಯದಲ್ಲಿ ಮೂರು ಕಥೆಗಳು ಸಂಧಿಸುವುದೂ ಇಲ್ಲ. ಮೂರೂ ಕಥೆಯನ್ನು ಒಂದರ ನಂತರ ಒಂದನ್ನು ನೋಡಿದಾಗ ಒಂದು ಬಗೆಯ ಪೂರ್ಣ ಭಾವ ಆವರಿಸುವುದಂತೂ ನಿಜ. ಈ ಮೂರೂ ಕಥೆಗಳ ಶೈಲಿ ಬೇರೆಯಾಗಿದೆ. ಮೊದಲ ಕಥೆಯಲ್ಲಿ ಕಾಮಿಡಿ, ಎರಡನೇ ಕಥೆಯಲ್ಲಿ ರೊಮ್ಯಾನ್ಸ್, ಮೂರನೇ ಕಥೆಯಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳು ಇವೆ.
ಕೆಲವರು ಅನಿವಾರ್ಯಕ್ಕೆ ಕದಿಯುತ್ತಾರೆ. ಕೆಲವರು ಬದುಕಿಗಾಗಿ ಕದಿಯುತ್ತಾರೆ. ಕೆಲವರಿಗೆ ಕಳ್ಳತನ ಎಂಬುದೊಂದು ಗೀಳು. ಮನಸ್ಸು, ಹೃದಯ ಕದಿಯುವ ಕಳ್ಳರ ಸಂಖ್ಯೆಗೂ ಕಡಿಮೆ ಏನಿಲ್ಲ. ಕಳ್ಳತನಕಕ್ಕೆ ಇರುವ ಮುಖಗಳು ಹಲವು. ಕಳ್ಳರನ್ನೇ ದೋಚುವ ಮಹಾನ್ ಕಳ್ಳರು ಕೂಡ ಈ ಕಥೆಯಲ್ಲಿ ಇದ್ದಾರೆ. ಇಂಥ ಎಲ್ಲ ಅಂಶಗಳನ್ನು ಬೆರೆಸಿ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸಿನಿಮಾ ತಯಾರಾಗಿದೆ.
ಇದನ್ನೂ ಓದಿ: Game Changer Review: ಪ್ರೇಕ್ಷಕರಿಗೆ ಪಾಠ ಮಾಡಿ, ರಾಜಕೀಯಕ್ಕೆ ಚಾಟಿ ಬೀಸಿದ ಗೇಮ್ ಚೇಂಜರ್
ಬೈಕ್ ಕದಿಯುವ ವ್ಯಕ್ತಿಯ ಪಾತ್ರದಲ್ಲಿ ಪ್ರಸನ್ನ ಶೆಟ್ಟಿ ಅವರು ನಟಿಸಿದ್ದಾರೆ. ಪಾತ್ರಕ್ಕೆ ಅವರು ಸೂಕ್ತ ನ್ಯಾಯ ಒದಗಿಸಿದ್ದಾರೆ. ಸಾಲಗಾರನಾಗಿ ತೋರುವ ಚಡಪಡಿಕೆ, ಕಳ್ಳನಾಗಿ ತೋರುವ ಚಾಲಾಕಿತನ, ತಾನೇ ಕಳೆದುಕೊಂಡಾಗ ತೋರುವ ಹತಾಶೆ ಮುಂತಾದ ಭಾವಗಳು ಅವರ ನಟನೆಯಲ್ಲಿ ಗಮನ ಸೆಳೆಯುತ್ತವೆ. ಲೋಕದ ಅರಿವೇ ಇಲ್ಲದೇ ತಮ್ಮದೇ ಜಗತ್ತಿನಲ್ಲಿ ಮುಳುಗಿದ ಒಂದು ಕ್ಯೂಟ್ ಜೋಡಿಯ ಲವ್ ಸ್ಟೋರಿ ಈ ಸಿನಿಮಾದ ಎರಡನೇ ಕಥೆಯಲ್ಲಿದೆ. ಹದಿಹರೆಯದ ಮನಸ್ಸುಗಳನ್ನು ಈ ಕಥೆ ಸ್ಪರ್ಶಿಸುತ್ತದೆ. ಇದರಲ್ಲಿ ಅಪೂರ್ವಾ ಭಾರದ್ವಜ್ ಹಾಗೂ ಮಧುಸೂದನ್ ಗೋವಿಂದ್ ಅವರ ಕೆಮಿಸ್ಟ್ರಿ ಚೆನ್ನಾಗಿದೆ.
ಈ ಕಥೆಗಳ ಗುಚ್ಛದಲ್ಲಿ ತುಸು ಗಂಭೀರ ಎನಿಸುವುದು ಮೂರನೇ ಕಹಾನಿ. ಈ ಕಥೆಯಲ್ಲಿ ಇರುವ ಕಳ್ಳರು ಅಸಮಾನ್ಯರು. ಹಣ ಮಾತ್ರವಲ್ಲದೇ ಮೈ ಮನಸ್ಸುಗಳನ್ನೇ ಕದಿಯುವ ಚಾಲಾಕಿಗಳು. ಮನಸ್ಸು ಕದ್ದರೆ ಕಳೆದುಕೊಂಡವರ ಜೊತೆ ಕದ್ದವರು ಕೂಡ ಚಡಪಡಿಸಲೇ ಬೇಕಲ್ಲವೇ? ಅಂತಹ ಒಂದು ಸಂಕೀರ್ಣವಾದ ಕಥೆಯನ್ನು ಈ ಸಿನಿಮಾ ಪ್ರೇಕ್ಷಕರಿಗೆ ತೋರಿಸುತ್ತದೆ. ಶಿಲ್ಪಾ ಮಂಜುನಾಥ್, ದಿಲೀಪ್ ರಾಜ್ ಅವರು ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ.
ಇದನ್ನೂ ಓದಿ: Movie Review: ಕಾಲೇಜ್ ಹುಡುಗರಿಗೆ ಔಟ್ ಆಫ್ ಸಿಲಬಸ್ ವಿಷಯ ತಿಳಿಸಿದ ಪ್ರದೀಪ್ ದೊಡ್ಡಯ್ಯ
ಒಟ್ಟಾರೆ ಈ ಸಿನಿಮಾದಲ್ಲಿ ಮನರಂಜನೆಗಿಂತಲೂ ಹೆಚ್ಚಾಗಿ ಒಂದು ಫೀಲ್ ಇದೆ. ಅದಕ್ಕೆ ನಿರೂಪಣೆಯ ಶೈಲಿ, ಕಲಾವಿದರ ಅಭಿನಯದ ಜೊತೆಗೆ ಮುದ ನೀಡುವಂತಹ ಹಿನ್ನೆಲೆ ಸಂಗೀತ ಕೂಡ ಕಾರಣವಾಗಿದೆ. ಸಂಗೀತದ ಮೂಲಕ ಪ್ರಸಾದ್ ಕೆ. ಶೆಟ್ಟಿ ಅವರು ಈ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ. ಅಂದಹಾಗೆ, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟ ಆಗದೇ ಇರಬಹುದು. ಯಾಕೆಂದರೆ ಇದರ ಶೈಲಿಯೇ ತುಸು ಭಿನ್ನವಾಗಿದೆ. ಅಂಥ ಡಿಫರೆಂಟ್ ಸಿನಿಮಾಗಳನ್ನು ನೋಡಿ ಸವಿಯುವ ಪ್ರೇಕ್ಷಕರು ಇದು ಹೇಳಿಮಾಡಿಸಿದ ಚಿತ್ರ ಎನ್ನಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.