Movie Review: ಕಾಲೇಜ್ ಹುಡುಗರಿಗೆ ಔಟ್ ಆಫ್ ಸಿಲಬಸ್ ವಿಷಯ ತಿಳಿಸಿದ ಪ್ರದೀಪ್ ದೊಡ್ಡಯ್ಯ
ನಿಜವಾದ ಜೀವನ ಇರುವುದು ‘ಔಟ್ ಆಫ್ ಸಿಲಬಸ್’ನಲ್ಲಿ ಎಂಬ ವಿಷಯವನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಮೊದಲ ಪ್ರಯತ್ನದಲ್ಲಿ ನಟ, ನಿರ್ದೇಶಕ ಪ್ರದೀಪ್ ದೊಡ್ಡಯ್ಯ ಅವರು ಯುವ ಜನತೆಗೆ ಬೇಕಾಗುವ ಮುಖ್ಯವಾದ ಸಂದೇಶ ನೀಡಿದ್ದಾರೆ. ಈ ವಾರ (ಡಿಸೆಂಬರ್ 27) ತೆರೆಕಂಡ ‘ಔಟ್ ಆಫ್ ಸಿಲಬಸ್’ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..
ಸಿನಿಮಾ: ಔಟ್ ಆಫ್ ಸಿಲಬಸ್. ನಿರ್ಮಾಣ: ತನುಶ್ ಎಸ್.ವಿ. ದೇಸಾಯಿ ಗೌಡ, ಕೆ. ವಿಜಯಕಲಾ ಸುಧಾಕರ್. ನಿರ್ದೇಶನ: ಪ್ರದೀಪ್ ದೊಡ್ಡಯ್ಯ. ಪಾತ್ರವರ್ಗ: ಪ್ರದೀಪ್ ದೊಡ್ಡಯ್ಯ, ಹೃತಿಕಾ ಶ್ರೀನಿವಾಸ್, ಮಹಂತೇಶ್ ಹಿರೇಮಠ, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಜಹಾಂಗೀರ್ ಮುಂತಾದವರು. ಸ್ಟಾರ್: 3/5
ಕಾಲೇಜು ಕಹಾನಿಗಳು ಎವರ್ಗ್ರೀನ್ ಆಗಿರುತ್ತವೆ. ಕ್ಯಾಂಪಸ್ನಲ್ಲಿ ನಡೆಯುವ ತರಲೆ ತಮಾಷೆಗಳು ಒಂದೆರಡಲ್ಲ. ಅದರ ಜೊತೆಗೆ ಪ್ರೀತಿ-ಪ್ರೇಮದ ಅಧ್ಯಾಯ ಕೂಡ ಖಂಡಿತಾ ಇರುತ್ತದೆ. ಇಂಥ ಎಳೆಯನ್ನು ಇಟ್ಟುಕೊಂಡು ಸಾಕಷ್ಟು ಸಿನಿಮಾಗಳು ಬಂದಿವೆ. ಹಾಗಿದ್ದರೂ ಕೂಡ ಕ್ಯಾಂಪಸ್ ಲವ್ಸ್ಟೋರಿಗಳಿಗೆ ಕೊರತೆ ಏನಿಲ್ಲ. ಹಾಗಾಗಿ ಹೊಸದೊಂದು ಪ್ರೇಮಕಥೆಯನ್ನು ಇಟ್ಟುಕೊಂಡು ‘ಔಟ್ ಆಫ್ ಸಿಲಬಸ್’ ಸಿನಿಮಾ ಮಾಡಲಾಗಿದೆ. ಈ ಸಿನಿಮಾದ ವಿಮರ್ಶೆ ಇಲ್ಲಿದೆ..
ಪ್ರದೀಪ್ ದೊಡ್ಡಯ್ಯ ಅವರು ‘ಔಟ್ ಆಫ್ ಸಿಲಬಸ್’ ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಪಾತ್ರದಲ್ಲೂ ಅವರೇ ಕಾಣಿಸಿಕೊಂಡಿದ್ದಾರೆ. ಹೀರೋ ಆಗಿ ಅವರು ಮೊದಲ ಬಾರಿಗೆ ಪ್ರೇಕ್ಷಕರ ಎದುರು ಬಂದಿದ್ದಾರೆ. ಶೀರ್ಷಿಕೆ ನೋಡಿದರೆ ತಿಳಿಯುತ್ತದೆ ಇದು ಕಾಲೇಜಿನ ದಿನಗಳಿಗೆ ಸಂಬಂಧಿಸಿದ ಕಥೆ. ಹಾಗಂತ ಈ ಕಹಾನಿ ಕೇವಲ ಕ್ಯಾಂಪಸ್ಗೆ ಸೀಮಿತವಾಗಿಲ್ಲ. ಸಿಲಬಸ್ನಲ್ಲಿ ಇಲ್ಲದ ಕೆಲವು ಪ್ರಮುಖ ವಿಚಾರಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಒಂದಷ್ಟು ಮೋಟಿವೇಷನ್ ಕೂಡ ಈ ಚಿತ್ರದಲ್ಲಿದೆ.
ಕಾಲೇಜಿನಲ್ಲಿ ಇದ್ದಾಗ ಹೀರೋ-ಹೀರೋಯಿನ್ ನಡುವೆ ಪ್ರೀತಿ ಚಿಗುರುತ್ತದೆ. ಇನ್ನೇನು ಮದುವೆ ಆಗಬೇಕು ಎಂಬಷ್ಟರಲ್ಲಿ ಕಾಲೇಜು ಮುಗಿದು ವೃತ್ತಿಜೀವನದ ಒತ್ತಡ ಶುರುವಾಗಿರುತ್ತದೆ. ಅದನ್ನು ಕೂಡ ಹೇಗೋ ನಿಭಾಯಿಸಿಕೊಂಡು ಮದುವೆಗೆ ಸಜ್ಜಾದರೆ ಒಂದೇ ಒಂದು ಮೆಸೇಜ್ನಿಂದ ಇಬ್ಬರ ನಡುವೆ ಅನುಮಾನದ ಹುತ್ತ ಬೆಳೆಯುತ್ತದೆ. ಆ ಮೆಸೇಜ್ ಯಾವುದು? ಮದುವೆಯೇ ಮುರಿದು ಬೀಳುವಂತಹ ವಿಷಯ ಆ ಮೆಸೇಜ್ನಲ್ಲಿ ಏನಿದೆ? ಅಂತಿಮವಾಗಿ ಮದುವೆ ಆಗುತ್ತೋ ಇಲ್ಲವೋ ಎಂಬುದೇ ‘ಔಟ್ ಆಫ್ ಸಿಲಬಸ್’ ಸಿನಿಮಾದಲ್ಲಿನ ಕಥೆಯ ಸಾರಾಂಶ. ಆದರೆ ಈ ಕಥೆಯ ಒಳಗೆ ಸಾಕಷ್ಟು ವಿಷಯಗಳು ಇವೆ.
ಕ್ಯಾಂಪಸ್ ಕಥೆ ಆದ್ದರಿಂದ ಮುಕ್ಕಾಲು ಭಾಗ ಸಿನಿಮಾವನ್ನು ಆದಷ್ಟು ಲವಲವಿಕೆಯಿಂದ ಕಟ್ಟಿಕೊಡಲು ಪ್ರದೀಪ್ ದೊಡ್ಡಯ್ಯ ಅವರು ಪ್ರಯತ್ನಿಸಿದ್ದಾರೆ. ಕ್ಲಾಸ್ ರೂಮ್ ತರಲೆಗಳನ್ನು ಅವರು ಹಾಸ್ಯಕ್ಕಾಗಿ ಬಳಸಿಕೊಂಡಿದ್ದಾರೆ. ನಡುವೆ ಬರುವ ಯೋಗರಾಜ್ ಭಟ್ ಅವರು ಲೆಕ್ಚರರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಂತೇಶ್ ಹಿರೇಮಠ್ ಅವರು ಅಸಿಸ್ಟೆಂಟ್ ಪ್ರಿನ್ಸಿಪಾಲ್ ಅಲಿಯಾಸ್ ಪ್ರಿನ್ಸಿಪಾಲ್ ಅಸಿಸ್ಟೆಂಟ್ ಆಗಿ ನಗಿಸುವ ಪ್ರಯತ್ನ ಮಾಡಿದ್ದಾರೆ.
ಪ್ರೀತಿ ಶುರು ಮಾಡುವುದು ಸುಲಭದ ಕೆಲಸ. ಆದರೆ ಆ ಪ್ರೀತಿಯನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ಆ ವಿಚಾರಗಳ ಬಗ್ಗೆ ಯಾವ ಸಿಲಬಸ್ನಲ್ಲೂ ಪಾಠ ಇರುವುದಿಲ್ಲ. ಬದುಕಿನ ಅನುಭವಗಳೇ ಅದನ್ನು ಕಲಿಸುತ್ತವೆ. ಸಾಮಾನ್ಯವಾಗಿ ಯುವ ಜನತೆಯ ಪ್ರೀತಿಯಲ್ಲಿ ಅನುಮಾನವೇ ಮೊದಲ ವಿಲನ್ ಆಗಿರುತ್ತದೆ. ಆ ಅನುಮಾನವನ್ನು ಹೊಡೆದು ಹಾಕುವುದು ಹೇಗೆ ಎಂಬುದನ್ನು ‘ಔಟ್ ಆಫ್ ಸಿಲಬಸ್’ ಸಿನಿಮಾದಲ್ಲಿ ಪ್ರದೀಪ್ ದೊಡ್ಡಯ್ಯ ತೋರಿಸಿದ್ದಾರೆ.
ಇದನ್ನೂ ಓದಿ: Max Movie Review: ‘ಮ್ಯಾಕ್ಸ್’ ಸಿನಿಮಾಗೆ ಬಲ ತುಂಬಿದ ಕಥೆಯ ಶರವೇಗ, ಕಿಚ್ಚನ ಆವೇಗ
ಆರಂಭದಲ್ಲಿ ಲಘುವಾಗಿ ಸಾಗುವ ‘ಔಟ್ ಆಫ್ ಸಿಲಬಸ್’ ಸಿನಿಮಾ ಕೊನೆಯಲ್ಲಿ ತೂಕಬದ್ಧವಾಗಿ ಅಂತ್ಯವಾಗುತ್ತದೆ. ಮೊದಮೊದಲಿಗೆ ಕೆಲವು ದೃಶ್ಯಗಳು ಬಾಲಿಶ ಎನಿಸಿಕೊಂಡರೂ ಕ್ಲೈಮ್ಯಾಕ್ಸ್ ತಲುಪುವ ವೇಳೆಗೆ ಪ್ರಭುದ್ಧ ಎನಿಸುವಂತಹ ವಿಚಾರಗಳು ಪ್ರೇಕ್ಷಕರನ್ನು ಎದುರುಕೊಳ್ಳುತ್ತವೆ. ಅಲ್ಲಲ್ಲಿ ಬರುವ ಡಬಲ್ ಮೀನಿಂಗ್ ಡೈಲಾಗ್ಗಳನ್ನು ಅವಾಯ್ಡ್ ಮಾಡಿದ್ದರೆ ಉತ್ತಮವಾಗಿ ಇರುತ್ತಿತ್ತು. ಆ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು.
ಇದನ್ನೂ ಓದಿ: UI Movie Review: ಯುಐ ಸಿನಿಮಾದಲ್ಲಿ ಉಪೇಂದ್ರ ವಿಚಾರಗಳ ಓವರ್ ಡೋಸ್
ಮೊದಲ ಪ್ರಯತ್ನದಲ್ಲೇ ಪ್ರದೀಪ್ ದೊಡ್ಡಯ್ಯ ಅವರು ಯುವಕರಿಗೆ ಬೇಕಾದಂತಹ ಸಿನಿಮಾವನ್ನು ಮಾಡಿದ್ದಾರೆ. ನಟನೆ ಮತ್ತು ನಿರ್ದೇಶನದಲ್ಲಿ ಅವರು ಭರವಸೆ ಮೂಡಿಸಿದ್ದಾರೆ. ನಟಿ ಹೃತಿಕಾ ಶ್ರೀನಿವಾಸ್ ಅವರು ಕೂಡ ಕ್ಯೂಟ್ ಆಗಿ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ತಾಂತ್ರಿಕವಾಗಿ ಸಿನಿಮಾವನ್ನು ಇನ್ನಷ್ಟು ಉತ್ತಮವಾಗಿಸುವ ಅವಕಾಶ ಇತ್ತು. ಕೆಲವು ಲೋಪಗಳ ನಡುವೆಯೂ ಉತ್ತಮ ಪ್ರಯತ್ನವಾಗಿ ‘ಔಟ್ ಆಫ್ ಸಿಲಬಸ್’ ಸಿನಿಮಾ ಗಮನ ಸೆಳೆಯುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.