UI Movie Review: ಯುಐ ಸಿನಿಮಾದಲ್ಲಿ ಉಪೇಂದ್ರ ವಿಚಾರಗಳ ಓವರ್​ ಡೋಸ್​

ಉಪೇಂದ್ರ ಅವರು ನಿರ್ದೇಶನಕ್ಕೆ ಕಮ್​ಬ್ಯಾಕ್​ ಮಾಡಬೇಕು ಎಂಬುದು ಅಭಿಮಾನಿಗಳ ಬಹುದಿನಗಳ ಬೇಡಿಕೆ ಆಗಿತ್ತು. ಅದು ‘ಯುಐ’ ಸಿನಿಮಾದ ಮೂಲಕ ಈಡೇರಿದೆ. ಇಂದು (ಡಿ.20) ಉಪ್ಪಿ ನಿರ್ದೇಶನದ ಈ ಸಿನಿಮಾ ಅದ್ದೂರಿಯಾಗಿ ತೆರೆಕಂಡಿದೆ. ಸಾಂಗ್​ ಮತ್ತು ಟ್ರೇಲರ್​ ಮೂಲಕ ಕುತೂಹಲ ಮೂಡಿಸಿದ್ದ ಈ ಚಿತ್ರದಲ್ಲಿ ಉಪೇಂದ್ರ ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ. ಯುಐ ಸಿನಿಮಾದ ವಿಮರ್ಶೆ ಇಲ್ಲಿದೆ..

UI Movie Review: ಯುಐ ಸಿನಿಮಾದಲ್ಲಿ ಉಪೇಂದ್ರ ವಿಚಾರಗಳ ಓವರ್​ ಡೋಸ್​
Upendra
Follow us
ಮದನ್​ ಕುಮಾರ್​
|

Updated on:Dec 20, 2024 | 11:30 AM

ಸಿನಿಮಾ: ಯುಐ. ನಿರ್ಮಾಣ: ಜಿ. ಮನೋಹರನ್, ಶ್ರೀಕಾಂತ್ ಕೆ.ಪಿ. ನಿರ್ದೇಶನ: ಉಪೇಂದ್ರ. ಪಾತ್ರವರ್ಗ: ಉಪೇಂದ್ರ, ರೀಷ್ಮಾ ನಾಣಯ್ಯ, ರವಿಶಂಕರ್​, ಅಚ್ಯುತ್​ ಕುಮಾರ್​, ಸಾಧುಕೋಕಿಲ ಮುಂತಾದವರು. ಸ್ಟಾರ್​: 3/5

ಡಿಫರೆಂಟ್ ಎಂಬ ಪದಕ್ಕೆ ಇನ್ನೊಂದು ಅರ್ಥವೇ ಉಪೇಂದ್ರ. ಊರೆಲ್ಲ ಒಂದು ರೀತಿ ಯೋಚಿಸಿದರೆ ಉಪೇಂದ್ರ ಅವರ ಆಲೋಚನೆ ಮಾತ್ರ ಬೇರೆ ರೀತಿ ಇರುತ್ತದೆ. ಸಿನಿಮಾ ಮಾಡುವ ವಿಷಯದಲ್ಲಿ ಅದು ಈಗಾಗಲೇ ಸಾಬೀತಾಗಿದೆ. ‘ಯುಐ’ ಸಿನಿಮಾ ಕೂಡ ಉಪೇಂದ್ರ ಅವರ ಒಂದು ಭಿನ್ನ ಪ್ರಯತ್ನ. ಮಾಮೂಲಿ ಕಮರ್ಷಿಯಲ್ ಸಿನಿಮಾಗಳ ಸೂತ್ರಗಳನ್ನೆಲ್ಲ ಬದಿಗಿಟ್ಟು, ತಮ್ಮದೇ ಹೊಸ ಶೈಲಿಯಲ್ಲಿ ಅವರು ಈ ಸಿನಿಮಾವನ್ನು ಮಾಡಿದ್ದಾರೆ. ಕಟ್ಟುಕಥೆಗಳ ಬದಲು ರಿಯಲ್ ಲೈಫ್​ನ ಸಮಸ್ಯೆಗಳನ್ನೇ ಕಥೆಯಾಗಿಸಿ ‘ಯುಐ’ ಸಿನಿಮಾವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ.

ಉಪೇಂದ್ರ ಈಗ ಬರೀ ನಟ, ನಿರ್ದೇಶಕ ಮಾತ್ರವಲ್ಲ. ಪ್ರಜಾಕೀಯ ಎಂಬ ಕಾನ್ಸೆಪ್ಟ್ ಮೂಲಕ ಅವರು ರಾಜಕೀಯಕ್ಕೂ ಎಂಟ್ರಿ ನೀಡಿದ್ದಾರೆ. ಸಮಾಜವನ್ನು ಸುಧಾರಿಸುವ ಕುರಿತು ಆಗಾಗ ಮಾತನಾಡುತ್ತಾರೆ. ಆದರೆ ಅವರ ಮಾತು ಮತ್ತು ಆಲೋಚನಾ ಶೈಲಿ ಭಿನ್ನವಾಗಿ ಇರುತ್ತದೆ. ಅದೇ ಸೂತ್ರವನ್ನು ಇಟ್ಟುಕೊಂಡು ಅವರು ‘ಯುಐ’ ಸಿನಿಮಾ ಮಾಡಿದ್ದಾರೆ. ಸಮಾಜವನ್ನು ತಿದ್ದಲು ಬೇಕಾದ ಹಲವು ವಿಷಯಗಳನ್ನು ಅವರು ಈ ಸಿನಿಮಾ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ.

ಸಿನಿಮಾದೊಳಗೊಂದು ಸಿನಿಮಾ ಇರುವಂತೆ ಉಪೇಂದ್ರ ಅವರು ‘ಎ’ ಸಿನಿಮಾ ಮಾಡಿದ್ದರು. ಈಗ ‘ಯುಐ’ ಸಿನಿಮಾದಲ್ಲಿಯೂ ಅವರು ಅದನ್ನೇ ಮಾಡಿದ್ದಾರೆ. ಈ ಚಿತ್ರದ ಕಥೆಯ ಒಳಗೆ ಯುಐ ಎಂಬ ಸಿನಿಮಾ ರಿಲೀಸ್​ ಆಗುತ್ತದೆ. ಕೆಲವರಿಗೆ ಮಾತ್ರ ಅರ್ಥ ಆಗುತ್ತದೆ. ವಿಮರ್ಶೆ ಬರೆಯಲು ವಿಮರ್ಶಕರು ಕೂಡ ಕಷ್ಟಪಡುತ್ತಾರೆ. ಅಷ್ಟಕ್ಕೂ ಯುಐ ಚಿತ್ರದ ಒರಿಜಿನಲ್ ಸ್ಕ್ರಿಪ್ಟ್ ಬೇರೆಯೇ ಇರುತ್ತದೆ. ಅದೇನು ಎಂಬುದನ್ನು ವಿಮರ್ಶಕನೊಬ್ಬ ಹುಡುಕಿ ಹೊರಟಾಗ ಕಲ್ಕಿ ಕಹಾನಿ ತೆರೆದುಕೊಳ್ಳುತ್ತದೆ. ಅದರ ಮೂಲಕ ಹಲವಾರು ವಿಷಯಗಳನ್ನು ಜನರ ಎದುರು ತೆರೆದಿಡಲಾಗುತ್ತದೆ. ಇದು ಒಟ್ಟಾರೆ ಯುಐ ಸಿನಿಮಾದ ಸಾರಾಂಶ.

ಯುಐ ಸಿನಿಮಾದ ಕಥೆ ಏನು ಎಂದು ಕೇಳಿದರೆ ಒಂದೆರಡು ವಾಕ್ಯಗಳಲ್ಲಿ ಹೇಳಿ ಮುಗಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಇದರಲ್ಲಿ ಕಥೆಗಿಂತಲೂ ಹೆಚ್ಚಾಗಿ ವಿಚಾರಗಳೇ ತುಂಬಿ ಹೋಗಿವೆ. ಅಸಮಾನತೆ, ಜಾತಿ, ಧರ್ಮ, ದೇವರು, ಭ್ರಷ್ಟಾಚಾರ, ಸರಿ, ತಪ್ಪು, ಬುದ್ಧ, ಬಸವ, ಚುನಾವಣೆ, ಪ್ರಜಾಪ್ರಭುತ್ವ, ಪ್ರಕೃತಿ ನಾಶ, ಜೋತಿಷ್ಯ, ಹೆಣ್ಣು, ಹಪಾಹಪಿತನ, ಕಲ್ಕಿ ಅವತಾರ, ಸತ್ಯ ಯುಗ, ಸೋಶಿಯಲ್ ಮೀಡಿಯಾ, ಮಾಫಿಯಾ.. ಹೀಗೆ ಸಾಗುತ್ತದೆ ಈ ಸಿನಿಮಾದಲ್ಲಿ ವಿಚಾರಗಳ ಪಟ್ಟಿ. ಪ್ರತಿ ದೃಶ್ಯವನ್ನು ಕೆದಕಿ ನೋಡಿದರೂ ಒಂದಲ್ಲಾ ಒಂದು ವಿಚಾರ ಕಾಣಿಸುತ್ತದೆ. ಆದರೆ ಇದನ್ನೆಲ್ಲ ಒಂದೇ ಸಿನಿಮಾದಲ್ಲಿ ಹೇಳಲು ಹೊರಟಿದ್ದರಿಂದ ಖಂಡಿತವಾಗಿಯೂ ಓವರ್​ ಡೋಸ್​ ಆಗಿದೆ ಎನಿಸುತ್ತದೆ.

ಜನರಿಗೆ ಉಪೇಂದ್ರ ಅವರು ತಿಳಿಸಲು ಹೊರಟಿರುವ ಎಲ್ಲ ವಿಷಯಗಳ ಕೂಡ ಮುಖ್ಯವಾದವೇ ಹೌದು. ಆದರೆ ಆ ಎಲ್ಲ ವಿಷಯದ ಮೇಲೂ ವಿಸ್ತೃತವಾಗಿ ಒಂದೊಂದು ಸಿನಿಮಾ ಮಾಡಬಹುದು. ಅವೆಲ್ಲವನ್ನೂ ಒಂದೇ ಸಿನಿಮಾದಲ್ಲಿ ತುರುಕಿದ್ದರಿಂದ ಓವರ್​ ಡೋಸ್​ ಫೀಲ್ ಆಗುವುದು ಸಹಜ. ಯಾವುದನ್ನೂ ನೇರವಾಗಿ ಹೇಳದೇ ಎಲ್ಲವನ್ನೂ ರೂಪಕಗಳ ಮೂಲಕವೇ ಹೇಳಲು ಉಪೇಂದ್ರ ಪ್ರಯತ್ನಿಸಿದ್ದಾರೆ. ಹಾಗಾಗಿ ಈ ಸಿನಿಮಾ ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥವಾದರೂ ಅಚ್ಚರಿ ಏನಿಲ್ಲ. ಮನರಂಜನೆಗೆ ಇಲ್ಲಿ ಉಪೇಂದ್ರ ಹೆಚ್ಚು ಒತ್ತು ನೀಡಿಲ್ಲ. ಅದರ ಬದಲು ಆಲೋಚನೆ ಮಾಡುವಂತೆ ಜನರನ್ನು ಪ್ರೇರೇಪಿಸಿದ್ದಾರೆ.

ಇದನ್ನೂ ಓದಿ: ‘ಯುಐ’ ಸಿನಿಮಾ ಅದ್ದೂರಿ ಬಿಡುಗಡೆ: ಚಿತ್ರದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ ನೋಡಿ..

ಈ ಚಿತ್ರದ ಬಹುತೇಕ ದೃಶ್ಯಗಳು ಯಾವುದೋ ಕಲ್ಪನಾ ಲೋಕದಲ್ಲಿ ನಡೆಯುತ್ತಿರುವಂತೆ ಕಾಣಿಸುತ್ತವೆ. ಅದನ್ನೆಲ್ಲ ಇಂದಿನ ಕಾಲಕ್ಕೆ ಅನ್ವಯ ಆಗುವಂತೆ ಅರ್ಥ ಮಾಡಿಕೊಂಡು ಸಿನಿಮಾವನ್ನು ನೋಡಬೇಕು. ಎಲ್ಲವನ್ನೂ ಡಿಕೋಡ್​ ಮಾಡುತ್ತಾ ಕೂರುವಷ್ಟು ತಾಳ್ಮೆ ಇದ್ದರೆ ಮಾತ್ರ ‘ಯುಐ’ ಸಿನಿಮಾ ಹಿಡಿಸುತ್ತದೆ. ಇಲ್ಲದಿದ್ದರೆ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗದೇ ಮುಂದಿನ ದೃಶ್ಯಕ್ಕೆ ಹೋಗಬೇಕಾಗುತ್ತದೆ.

ಇದನ್ನೂ ಓದಿ: ‘ಯುಐ’ ಚಿತ್ರ ರಿಲೀಸ್ ಬೆನ್ನಲ್ಲೇ ಪ್ರೇಕ್ಷಕರಿಗೆ ಸವಾಲು ಹಾಕಿದ ಉಪೇಂದ್ರ; ಚಾಲೆಂಜ್ ಸ್ವೀಕರಿಸುತ್ತೀರಾ?

ಉಪೇಂದ್ರ ಅವರು ಎರಡು ಪಾತ್ರವನ್ನು ನಿಭಾಯಿಸಿದ್ದಾರೆ. ಬಹುತೇಕ ಸಿನಿಮಾವನ್ನು ಅವರೇ ಆವರಿಸಿಕೊಂಡಿದ್ದಾರೆ. ನಟಿ ರೀಷ್ಮಾ ನಾಣಯ್ಯ ಅವರು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬಂತಹ ಪಾತ್ರ ಮಾಡಿದ್ದಾರೆ. ಸಾಧುಕೋಕಿಲ ಇದ್ದರೂ ಈ ಚಿತ್ರದಲ್ಲಿ ನಗು ನಿರೀಕ್ಷಿಸೋದು ಕಷ್ಟ. ರವಿಶಂಕರ್​ ಅವರಿಗೆ ಸ್ಕ್ರೀನ್​ ಸ್ಪೇಸ್​ ಸಿಕ್ಕಿದ್ದರೂ ಕೂಡ ತೀವ್ರತೆ ಕಾಣಿಸುತ್ತಿಲ್ಲ. ಚಿಕ್ಕ ಪಾತ್ರಕ್ಕೆ ಅಚ್ಯುತ್​ ಕುಮಾರ್​ ಸೀಮಿತವಾಗಿದ್ದಾರೆ. ಹೆಚ್​.ಸಿ. ವೇಣು ಅವರ ಛಾಯಾಗ್ರಹಣ, ಅಜನೀಶ್​ ಬಿ. ಲೋಕನಾಥ್ ಅವರ ಸಂಗೀತ, ವಿಜಯ್ ರಾಜ್ ಅವರ ಸಂಕಲನದಿಂದ ಈ ಚಿತ್ರ ತಾಂತ್ರಿಕವಾಗಿ ಶ್ರೀಮಂತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:14 am, Fri, 20 December 24