Virat Kohli: ಕಿಂಗ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಹಿಮಾಂಶು ಸಾಂಗ್ವಾನ್ ಯಾರು ಗೊತ್ತಾ?
Virat Kohli's Ranji Trophy Return Disappoints: 13 ವರ್ಷಗಳ ನಂತರ ರಣಜಿ ಟ್ರೋಫಿಗೆ ಮರಳಿದ ವಿರಾಟ್ ಕೊಹ್ಲಿ ಕೇವಲ 6 ರನ್ ಗಳಿಸಿ ಔಟ್ ಆದರು. 29 ವರ್ಷದ ಹಿಮಾಂಶು ಸಂಗ್ವಾನ್ ಅವರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಕೊಹ್ಲಿ ಸಾವಿರಾರು ಅಭಿಮಾನಿಗಳ ಹೃದಯ ಒಡೆದರು. ಕೊಹ್ಲಿ ಔಟಾಗುತ್ತಿದ್ದಂತೆ ಇಡೀ ಮೈದಾನವೇ ಖಾಲಿಯಾಗ ತೊಡಗಿತು. ಇತ್ತ ಕೊಹ್ಲಿ ವಿಕೆಟ್ ಉರುಳಿಸಿದ ಹಿಮಾಂಶು ಸಂಗ್ವಾನ್ ಯಾರು ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಟ ತುಂಬಾ ಜೋರಾಗಿಯೇ ನಡೆಯುತ್ತಿದೆ.
ಸುಮಾರು 13 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ರಣಜಿ ಟ್ರೋಫಿಗೆ ಮರಳಿರುವ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದ್ದಾರೆ. ದೆಹಲಿ ಮತ್ತು ರೈಲ್ವೇಸ್ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ವಿರಾಟ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 6 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ರನ್ ಸಾಮ್ರಾಟನ ಬ್ಯಾಟಿಂಗ್ ಆನಂದಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಸಾವಿರಾರು ಅಭಿಮಾನಿಗಳು ಬೇಸರದಿಂದಲೇ ಮೈದಾನದಿಂದ ಹೊರನಡೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಕೊಹ್ಲಿ, ತಮ್ಮ ಹಳೆಯ ಲಯವನ್ನು ಕಂಡುಕೊಳ್ಳುವ ಸಲುವಾಗಿ ದೇಶೀ ಅಂಗಳಕ್ಕೆ ಕಾಲಿರಿಸಿದ್ದರು. ಆದರೆ 29 ವರ್ಷದ ಬೌಲರ್ ಹಿಮಾಂಶು ಸಂಗ್ವಾನ್ ಅವರ ಇನ್ಸ್ವಿಂಗ್ ಎಸೆತವನ್ನು ಡಿಫೆಂಡ್ ಮಾಡುವಲ್ಲಿ ವಿಫಲರಾದ ಕೊಹ್ಲಿ ಒಂದಂಕಿಗೆ ಪೆವಿಯನ್ ಸೇರಿಕೊಂಡರು. ಇತ್ತ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿ ಅಭಿಮಾನಿಗಳ ಹೃದಯ ಒಡೆದ ಹಿಮಾಂಶು ಸಾಂಗ್ವಾನ್ ಯಾರು ಎಂಬುದರ ಬಗ್ಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಟ ಶುರುವಾಗಿದೆ.
ಹಿಮಾಂಶು ಸಾಂಗ್ವಾನ್ ಯಾರು?
ಹಿಮಾಂಶು ಸಾಂಗ್ವಾನ್ ದೇಶೀಯ ಕ್ರಿಕೆಟ್‌ನಲ್ಲಿ ರೈಲ್ವೇಸ್ ಪರ ಆಡುತ್ತಿದ್ದಾರೆ. 29 ವರ್ಷದ ಸಾಂಗ್ವಾನ್ 2 ಸೆಪ್ಟೆಂಬರ್ 1995 ರಂದು ದೆಹಲಿಯಲ್ಲಿ ಜನಿಸಿದರು. ಟೀಂ ಇಂಡಿಯಾ ಪರ ಆಡಲು ಕಾಯುತ್ತಿರುವ ಹಿಮಾಂಶು ದೇಶಿಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 2019-20ರಲ್ಲಿ ರೈಲ್ವೇಸ್ ಪರ ರಣಜಿಗೆ ಪಾದಾರ್ಪಣೆ ಮಾಡಿದ ಹಿಮಾಂಶು ಇದುವರೆಗೆ 23 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 77 ವಿಕೆಟ್ ಪಡೆದಿದ್ದಾರೆ. ಹಾಗೆಯೇ 17 ಲಿಸ್ಟ್ ಎ ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇವುಗಳ ಹೊರತಾಗಿ ದೇಶೀಯ ಟಿ20ಯಲ್ಲಿ 5 ವಿಕೆಟ್ ಪಡೆದಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್
ವಿರಾಟ್ ಕೊಹ್ಲಿ ವಿಕೆಟ್ ಪಡೆದ ಹಿಮಾಂಶು, ದೇಶೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಮೊದಲು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಅಂತರಾಷ್ಟ್ರೀಯ ಪದಾರ್ಪಣೆಗೂ ಮುನ್ನ ಇದೇ ಕೆಲಸವನ್ನು ಮಾಡುತ್ತಿದ್ದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಹಿಮಾಂಶು ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದರು. ಮುಂಬೈ ವಿರುದ್ಧದ ರಣಜಿ ಪಂದ್ಯದಲ್ಲಿ 60 ರನ್ ನೀಡಿ 6 ವಿಕೆಟ್ ಪಡೆದು ಸಾಕಷ್ಟು ಸುದ್ದಿ ಮಾಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ