Award : ಲೇಖಕಿ ಕಾವ್ಯಾ ಕಡಮೆಗೆ ‘ಛಂದ ಪುಸ್ತಕ ಹಸ್ತಪ್ರತಿ ಪ್ರಶಸ್ತಿ‘

Literature : ‘ವಿಭಿನ್ನ ಸಾಂಸ್ಕೃತಿಕ ಆವರಣಗಳಲ್ಲಿ ಅರಳಿರುವ ಕಾವ್ಯಾ ಕಡಮೆ ಅವರ ಕತೆಗಳು ಅನುಭವದ ತಾಜಾತನದಿಂದ, ಲವಲವಿಕೆಯ ನಿರೂಪಣೆಯಿಂದ, ಪ್ರಬುದ್ಧ ನಿರ್ವಹಣೆಯಿಂದ ಮನಮುಟ್ಟುತ್ತವೆ. ತೀರ್ಪು ಕೊಡುವ ಆತುರಕ್ಕೆ ಬೀಳದೆ ಮನುಷ್ಯ ಸ್ವಭಾವ ಮತ್ತು ಸಂಬಂಧಗಳ ಹಲವು ಆಯಾಮಗಳನ್ನು ಮುಕ್ತವಾಗಿ, ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳುವ ವ್ಯವಧಾನ, ಉದಾರತೆ ಇಲ್ಲಿ ಕಾಣುತ್ತವೆ. ಜೀವನ ವೈಶಾಲ್ಯ-ವೈವಿಧ್ಯಗಳ ಬಗ್ಗೆ ಲೇಖಕಿ ಉಳಿಸಿಕೊಂಡಿರುವ ಬೆರಗು ಈ ಕತೆಗಳ ಸ್ಥಾಯೀಭಾವವಾಗಿದೆ.’ ಟಿ. ಪಿ. ಅಶೋಕ

Award : ಲೇಖಕಿ ಕಾವ್ಯಾ ಕಡಮೆಗೆ ‘ಛಂದ ಪುಸ್ತಕ ಹಸ್ತಪ್ರತಿ ಪ್ರಶಸ್ತಿ‘
ಲೇಖಕಿ ಕಾವ್ಯಾ ಕಡಮೆ
Follow us
|

Updated on:Aug 22, 2021 | 12:33 PM

ಬೆಂಗಳೂರು : 2021 ನೇ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಲೇಖಕಿ ಕಾವ್ಯಾ ಕಡಮೆ ಪಡೆದುಕೊಂಡಿದ್ದಾರೆ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕಡಮೆ ಊರಿನವರು. ಈಗಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದಿರುವ ಈ ಕತೆಗಾರ್ತಿ, ಸದ್ಯ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿದ್ದಾರೆ.

ಲೇಖಕ, ಪ್ರಕಾಶಕ ವಸುಧೇಂದ್ರ, ‘ಈ ಸ್ಪರ್ಧೆಯಲ್ಲಿ ಈ ಬಾರಿ 118 ಕತೆಗಾರರು ಭಾಗವಹಿಸಿದ್ದರು. ಹಿರಿಯ ವಿಮರ್ಶಕ ಟಿ.ಪಿ. ಅಶೋಕ ಅವರು ತೀರ್ಪುಗಾರರಾಗಿದ್ದರು. ಕಾವ್ಯಾ ಅವರಿಗೆ ರೂ. 30,000 ಬಹುಮಾನ, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಕೊಡಲಾಗುತ್ತದೆ. ಪುಸ್ತಕವನ್ನು ಸೆಪ್ಟಂಬರ್ ತಿಂಗಳಲ್ಲಿ ಪ್ರಕಟಣೆ ಮಾಡಲಾಗುತ್ತದೆ. ಇದೇ ಬಹುಮಾನವನ್ನು 2005 ರಲ್ಲಿ ಅವರ ತಾಯಿ, ಕತೆಗಾರ್ತಿ, ಸುನಂದಾ ಪ್ರಕಾಶ ಕಡಮೆ ಅವರು ಪ್ರಪ್ರಥಮವಾಗಿ ಪಡೆದುಕೊಂಡಿದ್ದರು. ಈ ಹದಿನಾರು ವರ್ಷಗಳಲ್ಲಿ ಛಂದ ಪುಸ್ತಕವು ಎರಡು ತಲೆಮಾರಿನ ಲೇಖಕರನ್ನು ಸ್ಪರ್ಶಿಸಿದೆ’ ಎಂದಿದ್ದಾರೆ.

chanda pustaka prashasti kavya kadame

ಕಾವ್ಯಾ ಅವರ ಕೃತಿಗಳು

ಕಾವ್ಯಾ ಅವರ ‘ಕೊನೇ ಊಟ’ ಕಥೆಯ ಆಯ್ದ ಭಾಗ

ನೀವು ಭಾರತೀಯರು ಕುಡುಮಿಗಳು ನೋಡು. ಕ್ರೈಮ್ ಮಾಡಿದರೂ ಕಂಪ್ಯೂಟರಿನಲ್ಲೇ ಮಾಡ್ತೀರಾ. ಎಷ್ಟದು? ಎರಡು ನೂರು ಮಿಲಿಯನ್ ಡಾಲರ್ ಫ್ರಾಡಿನಲ್ಲಲ್ಲವೇ ನೀನು ಒಳಬಂದಿದ್ದು? ನಾನು ಯಾಕೆ ಬಂದೆ ಗೊತ್ತಾ? ಒಬ್ಬನಿಗೆ ಚೂರಿ ಹಾಕಿದರೆ ಎಂಟುನೂರು ಡಾಲರು ಸಿಗೋದಿತ್ತು. ನಾನು ಅವನ ಕರುಳನ್ನೇ ಬಗೆದು ತಂದೆ. ಆ ಯಾವನೋ ತಿರಬೋಕಿ ದಾರಿಹೋಕ ಮುದುಕ ಬಂದು ಸಾಕ್ಷಿ ಹೇಳಿರದಿದ್ದರೆ ಇಷ್ಟು ಹೊತ್ತಿಗೆ ಎಲ್ಲಿರುತ್ತಿದ್ದನೋ’ ಎನ್ನುತ್ತಾನೆ ಫೆಡ್ರಿಕ್. ಸ್ವಲ್ಪ ಹೆಣ್ಣಿಗನಂತೆ ಕಾಣುತ್ತಾನೆ, ಇವನಿಂದ ಅಂಥ ಅಪಾಯವೇನೂ ಆಗಲಿಕ್ಕಿಲ್ಲ ಎಂಬ ಕಾರಣಕ್ಕೆ ನಲವತ್ತೆರಡು ವಸಂತಗಳನ್ನು ಈ ರವಿವಾರವಷ್ಟೇ ಪೂರೈಸಿದ ದತ್ತ ಇಪ್ಪತ್ತರ ಆಸುಪಾಸಿನ ಫೆಡ್ರಿಕ್​ನ ಜೊತೆಗೆ ಸ್ನೇಹವನ್ನು ಮುಂದುವರೆಸಿದ್ದ. ಜೈಲಿನ ಅಲಿಖಿತ ನಿಯಮಗಳನ್ನು ತಿಳಿಯಲು ಇಲ್ಲಿನವರೇ ಆದ ಒಬ್ಬರಾದರೂ ಆಪ್ತ ಸ್ನೇಹಿತರಿಲ್ಲದಿದ್ದರೆ ಇಂಥ ಕಡೆ ವ್ಯವಹರಿಸೋದೇ ಕಷ್ಟ ಎಂಬ ಸತ್ಯವನ್ನು ತನ್ನ ಹಿಂದಿನ ಜೈಲು ವಾಸದಲ್ಲಿ ಅರಿತವು ಅವನು.

‘ಊಟ ಸೇರ್ತಿದೆಯಾ?’

‘ಕಾಂಟ್ ಕಂಪ್ಲೇನ್’

‘ನಿಮ್ಮ ದೇಶದಲ್ಲಿ ಎಲ್ಲರೂ ವೆಜಿಟೇರಿಯನ್​ಗಳಂತೆ ಹೌದಾ?’

ದತ್ತ ನಕ್ಕುಬಿಟ್ಟ. ‘ಇಲ್ಲಪ್ಪ ಎಲ್ಲ ಥರದ ಊಟ ಮಾಡೋರೂ ಇದಾರೆ. ಆದ್ರೆ ಆ ದೇಶಕ್ಕೆ ಹೋಗದೆ, ಎಷ್ಟು, ಈಗ ಇಪ್ಪತ್ತು ವರ್ಷದ ಮೇಲೆನೇ ಆಗಿ ಹೋಯ್ತೇನೋ’

‘ನೋಡು ನೀನೇನೇ ಮಾಡು. ಆದ್ರೆ ನಿಯಮವನ್ನು ಮಾತ್ರ ನೆನಪಿಡು. ಡೋಂಟ್ ಡ್ರಾಪ್ ದ ಸೋಪ್! ಗೊತ್ತಾಯ್ತಲ್ಲ?’ ಎಂದು ನೆಲದ ಮೇಲೆ ಹತ್ತಾರು ಪುಟ್ಟ ಕಲ್ಲುಗಳನ್ನು ಆರಿಸಿ ಹಸ್ತದ ಮೇಲೆ ಚನ್ನೆಮಣೆ ಆಟವಾಡುತ್ತ ನುಡಿದ ಫೆಡ್ರಿಕ್​ನ ಮಾತು ದತ್ತನಿಗೆ ಅರ್ಥವಾಗಲಿಲ್ಲ. ಮಧ್ಯಾಹ್ನದ ದುಡಿಮೆ ಮುಗಿದು ಸಂಜೆಯ ಸ್ಟಡೀ ಸರ್ಕಲ್​ಗಳಿಗೆ ತೆರಳುವ ಮುನ್ನ ಸಿಕ್ಕಿದ ಹದಿನೈದು ನಿಮಿಷದ ಬಿಡುವಿನಲ್ಲಿ ಅವರಿಬ್ಬರೂ ಕಾರಾಗೃಹದ ಹಸಿರು ಹುಲ್ಲು ಹಾಸಿನ ಮೇಲೆ ನಡೆಯುತ್ತ ಮಾತನಾಡುತ್ತಿದ್ದರು. ಇವರ ಜೊತೆಗೇ ಗುಂಪಿನಲ್ಲೋ, ಪ್ರತ್ಯೇಕವಾಗಿಯೋ ನಡೆಯುತ್ತಿದ್ದ ಮಿಕ್ಕ ಸೆರೆಯಾಳುಗಳು ‘ಯಾಕಲೇ ಫೆಡ್ರಿಕ್? ಹೊಸ ಗಂಡ ಸಿಕ್ಕನೇನು?’ ಅಂತ ತಮಾಷೆ ಮಾಡಿ ಮಾಯವಾಗುತ್ತಿದ್ದರು.

ತೀರ್ಪುಗಾರರ ಅಭಿಪ್ರಾಯ

ವಿಭಿನ್ನ ಸಾಂಸ್ಕೃತಿಕ ಆವರಣಗಳಲ್ಲಿ ಅರಳಿರುವ ಕಾವ್ಯಾ ಕಡಮೆ ಅವರ ಕತೆಗಳು ಅನುಭವದ ತಾಜಾತನದಿಂದ, ಲವಲವಿಕೆಯ ನಿರೂಪಣೆಯಿಂದ, ಪ್ರಬುದ್ಧ ನಿರ್ವಹಣೆಯಿಂದ ಮನಮುಟ್ಟುತ್ತವೆ. ತೀರ್ಪು ಕೊಡುವ ಆತುರಕ್ಕೆ ಬೀಳದೆ ಮನುಷ್ಯ ಸ್ವಭಾವ ಮತ್ತು ಸಂಬಂಧಗಳ ಹಲವು ಆಯಾಮಗಳನ್ನು ಮುಕ್ತವಾಗಿ, ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳುವ ವ್ಯವಧಾನ, ಉದಾರತೆ ಇಲ್ಲಿ ಕಾಣುತ್ತವೆ. ಜೀವನ ವೈಶಾಲ್ಯ-ವೈವಿಧ್ಯಗಳ ಬಗ್ಗೆ ಲೇಖಕಿ ಉಳಿಸಿಕೊಂಡಿರುವ ಬೆರಗು ಈ ಕತೆಗಳ ಸ್ಥಾಯೀಭಾವವಾಗಿದೆ. ಸಿದ್ಧಜಾಡನ್ನು ಬಿಟ್ಟು ಹೊಸ ಹೊಸ ಲೋಕಗಳನ್ನು ಅನ್ವೇಷಿಸುವ ದಿಟ್ಟತನ, ಕಾವ್ಯಕ್ಕೆ ಸಮೀಪವೆನ್ನಿಸುವಂಥ ಭಾಷಾ ಬಳಕೆ, ಕತೆಗಿಂತ ಕಥನಕ್ಕೆ ನೀಡಿರುವ ಪ್ರಾಮುಖ್ಯತೆಗಳಿಂದಾಗಿ ಈ ಬರಹಗಳು ವಿಶಿಷ್ಟವಾಗಿವೆ. ಕನ್ನಡೇತರ ಪರಿಸರಗಳಲ್ಲಿ ಸೃಷ್ಟಿಯಾಗುವ ಅನುಭವಗಳನ್ನು ಕನ್ನಡ ಭಾಷೆಯಲ್ಲಿ ಗ್ರಹಿಸಿ-ಅಭಿವ್ಯಕ್ತಿಸುವ ಮೂಲಕ ಕನ್ನಡ ಓದುಗರ ಭಾವಲೋಕಗಳನ್ನು ಹಿಗ್ಗಿಸುವಲ್ಲಿ ಲೇಖಕಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಈ ಕತೆಗಳನ್ನು ಓದುತ್ತಿದ್ದಂತೆ ಹೊಸದೇನನ್ನೋ ಅನುಸಂಧಾನ ಮಾಡುತ್ತಿರುವ ಅನುಭವವಾಗುತ್ತದೆ. ಟಿ.ಪಿ. ಅಶೋಕ, ಹಿರಿಯ ವಿಮರ್ಶಕರು

ಪರಿಚಯ : ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. 1988 ರಲ್ಲಿ ಜನನ. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ.ಎ ಪದವಿ. 2013 ರಿಂದ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ‘ಧ್ಯಾನಕೆ ತಾರೀಖಿನ ಹಂಗಿಲ್ಲ’, ‘ಜೀನ್ಸ್ ತೊಟ್ಟ ದೇವರು’ ಪ್ರಕಟಿತ ಕವನ ಸಂಕಲನಗಳು. ‘ಪುನರಪಿ’ ಕಾದಂಬರಿ. ‘ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು’ ನಾಟಕಗಳ ಸಂಕಲನ. ‘ದೂರ ದೇಶವೆಂಬ ಪಕ್ಕದ ಮನೆ’ ಪ್ರಬಂಧ ಸಂಕಲನ. ಇವರ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಯುವ ಪುರಸ್ಕಾರ,’ ಯುವ ಬರಹಗಾರರಿಗೆ ನೀಡುವ ಟೋಟೋ ಪುರಸ್ಕಾರ, ಗುಲ್ಬರ್ಗ ಜಿಲ್ಲೆಯ ಸೇಡಂನ ಅಮ್ಮ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ, ಕಡಂಗೋಡ್ಲು ಕಾವ್ಯ ಪುರಸ್ಕಾರ, ದಿನಕರ ಕಾವ್ಯ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ಕಾಕೋಳ ಸರೋಜಮ್ಮ ದತ್ತಿ ಬಹುಮಾನ ಮತ್ತು ನಾಟಕ ಅಕಾಡೆಮಿಯ ನಾಟಕ ಬಹುಮಾನ ದೊರೆತಿವೆ.

ಇದನ್ನೂ ಓದಿ : ಅವಿತಕವಿತೆ: ಮಿದುಳಿನಲಿ ಹುಟ್ಟಿದ ಅವನ ಚಿತ್ರ

Published On - 12:32 pm, Sun, 22 August 21