Poetry : ಅವಿತಕವಿತೆ ; ‘ಒಂದು ವಿಶ್ವಾಸವನ್ನು ಕಾಯಲು ಎಂಥ ಸುಂದರ ಕಾವಲು’

Poetry : ಅವಿತಕವಿತೆ ; ‘ಒಂದು ವಿಶ್ವಾಸವನ್ನು ಕಾಯಲು ಎಂಥ ಸುಂದರ ಕಾವಲು’

Writing : ‘ನಂಬಿಕೆಯು ನೆರಳಾಗದೆ, ಬಿಸಿಲ ಝಳದಲ್ಲಿ ಮೀಯಿಸುತ್ತಿರಬೇಕೆಂದು ಬಯಸುವೆ. ಎಚ್ಚರಿಸುವವರಿಲ್ಲದಲ್ಲೂ ಎಚ್ಚರಿಸಲು ಈ ಗುಣದ ಜರೂರು ಇದೆ. ಇಂಥ ಎಚ್ಚರವನ್ನು ಹಂಬಲಿಸುವ ಮತ್ತು ನಾನು ಬರೆಯದಿದ್ದರೂ ನಡೆಯುತ್ತದೆ ಎಂಬ ಒಂದು ಸಣ್ಣ ಮಟ್ಟಿಗಿನ ಉಪೇಕ್ಷೆಯನ್ನೂ ಇಟ್ಟುಕೊಂಡೇ ಬಂದಿರುವವನಾದ್ದರಿಂದ ನನ್ನಲ್ಲಿ ಭ್ರಮೆಗಳಿಲ್ಲ. ದಾಕ್ಷಿಣ್ಯಕ್ಕೆ ಬಸಿರಾಗದ ಸ್ವಾತಂತ್ರ್ಯಕ್ಕಿಂತ ಹೆಚ್ಚಿನ ಸಂಪತ್ತಿಲ್ಲ.’ ವೆಂಕಟ್ರಮಣ ಗೌಡ

ಶ್ರೀದೇವಿ ಕಳಸದ | Shridevi Kalasad

|

Aug 22, 2021 | 10:33 AM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ.  ಕವಿ ವೆಂಕಟ್ರಮಣ ಗೌಡ ಅವರ ಹೊಸ ಕವನಸಂಕಲನ ಉರಿವ ಜಾತ್ರೆ ಮುಂದಿನ ವಾರದಿಂದ ಓದುಗರಿಗೆ ಲಭ್ಯವಿದ್ದು ಈ ಸಂದರ್ಭದಲ್ಲಿ ಅವರ ಕೆಲ ಕವಿತೆಗಳು ನಿಮ್ಮ ಓದಿಗೆ.     

*

‘ತರುವಾಯ’ ಕಿರುಕಾದಂಬರಿ ಪ್ರಕಟಗೊಂಡ 18 ವರ್ಷಗಳ ಬಳಿಕ ವೆಂಕಟ್ರಮಣ ಗೌಡರ “ಉರಿವ ಜಾತ್ರೆ” ಪ್ರಕಟಗೊಳ್ಳುತ್ತಿದೆ. ಇದೊಂದು ವಿಷಾದದ ಬಿಡುವು. ಅವರೊಬ್ಬ ಸಶಕ್ತ ಕವಿ-ಕತೆಗಾರ. ಮುದ್ರಣ ಮಾಧ್ಯಮದಲ್ಲಿದ್ದಾಗ ಸಕ್ರಿಯರಾಗಿದ್ದ ಅವರು ದೃಶ್ಯ ಮಾಧ್ಯಮಕ್ಕೆ ಸ್ಥಿತ್ಯಂತರಗೊಂಡ ಬಳಿಕ ಒಂದರ್ಥದಲ್ಲಿ ಬರಹವನ್ನೇ ತೊರೆದರು. ಕವನ ಸಂಕಲನ ‘ಪಾಂಗು’, ಕಥಾಸಂಕಲನ ‘ಈ ಸರ್ತಿಯ ಸುಗ್ಗಿ’ ಅವರ ಕ್ರಿಯಾಶೀಲ-ಪ್ರಭಾವಶಾಲಿ ಕಸುಬುದಾರಿಕೆಗೆ ಸಾಕ್ಷಿ. ಅವರು ಕಳೆದುಹೋಗಿದ್ದರು ಎಂದೆ. ಅದು ಅರ್ಧ ಸತ್ಯ ಮಾತ್ರ. ಅವರದೇ ಬ್ಲಾಗ್‍ನಲ್ಲಿ ಅವರ ಬರಹಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದವು-ಬೆಳಕಿನ ಸೆಳಕಿನಂತೆ.

ಅಂಕೋಲೆ, ಹೈದರಾಬಾದ್, ಬೆಂಗಳೂರು ನಡುವೆ ಸುಳಿದಾಡಿದ ಈ ಕವಿ, ‘ಉರಿವ ಜಾತ್ರೆ’ ಮೂಲಕ ಮತ್ತೆ ದಿಗಿಲು, ತಲ್ಲಣ, ತಳಮಳ, ಪ್ರಾಮಾಣಿಕತೆ ಮತ್ತು ನೇರವಂತಿಕೆಗೆ ಮುಖಾಮುಖಿಯಾಗಿದ್ದಾರೆ. ರಾಜಕೀಯ-ಸಾಮಾಜಿಕ ಹೇಳಿಕೆಗಳನ್ನು ಮೀರಿದ ಸಂವೇದನೆ, ವಾಸ್ತವಕ್ಕೆ ಎದಿರಾಗುವ ಕೆಚ್ಚು, ಕಾಡುವ ಹುಟ್ಟೂರು, ಆರ್ದ್ರತೆಯ ನಡುವೆಯೇ ದಿಗಿಲುಗಳನ್ನು ಪುಳಕವಾಗಿ ಬದಲಾಯಿಸಿಬಿಡುವ ಮಗಳು. ಗೌಡರು ಈತನಕ ಬರೆದಿದ್ದು ಏನೇನೂ ಸಾಲದು. ಅವರು ಇನ್ನಷ್ಟು ಬರೆಯುತ್ತಾರೆ ಎಂದುಕೊಂಡಿದ್ದೇನೆ: “ಒಂದು ವಿಶ್ವಾಸವನ್ನು ಕಾಯಲು ಎಂಥ ಸುಂದರ ಕಾವಲು’’ ಎನ್ನುವ ಅವರ ಸಾಲುಗಳನ್ನು ಅಕ್ಷರಶಃ ನಂಬಿದ್ದೇನೆ. ಮಾಧವ ಐತಾಳ್, ಲೇಖಕರು

ಬರೆಯದೇ ಇರುವ ಕಾಲವೂ ಕೂಡ ಎಂದೂ ವ್ಯರ್ಥವಲ್ಲ, ಅದು ಮುಂದೆ ಬರೆಯುವ ಬರವಣಿಗೆಯಲ್ಲಿ ನಿಧಾನವಾಗಿ ವ್ಯವಧಾನವಾಗಿ ಧ್ಯಾನವಾಗಿ ಸೇರಿಕೊಳ್ಳುತ್ತದೆ ಎನ್ನುವ ತಿಳಿವಳಿಕೆಯ ಮಾತಿಗೆ ಪುರಾವೆಯಾಗಿದೆ, ವೆಂಕಟ್ರಮಣ ಗೌಡರ ಈ ಸಂಕಲನ. ಕವನಗಳಲ್ಲಿ ಸಹಜತೆಯಿದೆ, ಆರ್ದ್ರತೆಯಿದೆ. ವೈಚಾರಿಕವಾಗಿದ್ದರೂ ಪೆಡಸಾಗಿಲ್ಲ. ವಸ್ತು ಮತ್ತು ಲಯಗಳಲ್ಲಿ ವೈವಿಧ್ಯವಿದೆ. ಕಥನ, ಪ್ರತಿಮಾತ್ಮಕ ಕವನ, ಚಿತ್ರಮಯ ರಚನೆಗಳು, ಸ್ವಗತ ಹೀಗೆ ಎಲ್ಲ ಧಾಟಿಯ ಕವನಗಳು ಇಲ್ಲಿದ್ದರೂ, ಕೇವಲ ವೈವಿಧ್ಯಕ್ಕಾಗಿ ಇವುಗಳ ರಚನೆಯಾಗಿಲ್ಲ. ಒಳಗಿನ ತುಡಿತ ಮತ್ತು ಕವನದೊಳಗಿನ ಅನುಭವಕ್ಕನುಗುಣವಾಗಿ ಬೇರೆ ಬೇರೆ ಆಕಾರ ತಾಳಿವೆ.

ದೀರ್ಘ ಕವನ, ಖಂಡಕಾವ್ಯಗಳು ಕೂಡ ಓದುಗನಿಗೆ ದಣಿವು ಮೂಡಿಸುವುದಿಲ್ಲ. ಓದುಗನು ತನ್ನ ಗಮನವನ್ನು ಏಕಾಗ್ರಗೊಳಿಸುವಂತೆ ಆಹ್ವಾನಿಸುತ್ತವೆ. ವೈಯಕ್ತಿಕ, ಸಾಮಾಜಿಕ, ಒಳಮುಖಿ, ಸಮಾಜಮುಖಿ ಎಂದು ಕವನಗಳನ್ನು ವರ್ಗೀಕರಿಸಲು ಕಷ್ಟವಾಗಿದೆ. ಏಕೆಂದರೆ, ದಿಕ್ಕು ದೆಸೆ ಯಾವ ಕಡೆಗಿದ್ದರೂ ಕವನದೊಳಗೆ ಇರುವ ತೀವ್ರತೆ ಒಂದೇ ರೀತಿಯದು. ಗಮನವಿಟ್ಟು ಓದಿದರೆ, ಈಚಿನ ಕವನಸಂಕಲನಗಳಲ್ಲಿ ವೆಂಕಟ್ರಮಣ ಗೌಡರ ಬರವಣಿಗೆಯು ಪ್ರಾಮಾಣಿಕತೆ ಮತ್ತು ವೈಯಕ್ತಿಕ ತುರ್ತಿನಿಂದ ಬೆಳಗುತ್ತದೆ ಎಂಬುದು ಯಾರಿಗಾದರೂ ಗೊತ್ತಾಗುತ್ತದೆ. ಕೆ. ಸತ್ಯನಾರಾಯಣ, ಕಥೆಗಾರರು

avithakavithe venkatramana gowda

ವೆಂಕಟ್ರಮಣ ಗೌಡ ಅವರ ಕೃತಿಗಳು

ಈ ಘಳಿಗೆ

ಹೆಬ್ಬಾಗಿಲಿಗೆ ಬಂದು ದಾರಿಗಳು ಕಾದಿವೆ ಯಾರಿದ್ದೀರಿ ಊರೊಳಗೆ?

ಅರಳಿಕಟ್ಟೆಗಳೆಲ್ಲ ಮಾತಿಗಾಗಿ ತವಕಿಸಿವೆ ಯಾರಿಗಿದೆ ಪುರುಸೊತ್ತು?

ಪಂಜರದ ಗಿಣಿಗಳು ವಟಗುಟ್ಟುತ್ತಲೇ ಇವೆ ಅರ್ಥ ಬಲ್ಲವರಿದ್ದರೆ ಹೀಗೆ ಬನ್ನಿ

ಧೋ ಎಂದು ಸುರಿಯುತ್ತಿದ್ದ ಮಳೆ ನಿಂತು ಎಲ್ಲ ನಿಶ್ಶಬ್ದ. ಕೇಳಿಸುತ್ತಿದೆಯೇ ಹಾಡು?

ನಕ್ಷತ್ರಗಳು ಮಿನುಗುತ್ತ ಆಕಾಶ ಇಳಿದಿದೆ ಭೂಮಿಗೆ ಚಂದಿರನ ಕೇಳುತ್ತ ನಿದ್ದೆಹೋದ ಮಗು ಮುಗುಳ್ನಗೆ

ಈ ಘಳಿಗೆ ಹೀಗೆ; ಚಾಚಿಕೊಂಡು ಆಚೆಗೆ

*

ಕಾದವಳು

ಎಲ್ಲ ನಿಟ್ಟುಸಿರುಗಳನ್ನು ಒಳಗೊಳಗೇ ದಹಿಸುತ್ತ ಎಲ್ಲ ಕಾವಲಿನವರನ್ನು ಕಣ್ಣಲ್ಲೇ ಪ್ರತಿಭಟಿಸುತ್ತ ಎಲ್ಲ ರಾತ್ರಿಗಳನ್ನು ಕಾತರಿಸುತ್ತಲೇ ಕಳೆಯುತ್ತ ಎಲ್ಲ ಅನುಮಾನಗಳನ್ನು ಮೌನದಲ್ಲೇ ನೀಗುತ್ತ ಎಲ್ಲ ಅಗ್ನಿದಿವ್ಯಗಳನ್ನು ನಿಷ್ಕಳಂಕದಿಂದಲೇ ಉತ್ತರಿಸುತ್ತ ಎದೆಬಿಡದೆ ಹರಿದಳು

ಕ್ಷಣಕ್ಷಣವನ್ನೂ ಎಣಿಸಲು ಕಲಿತಳು ಅಣು ಅಣುವನ್ನೂ ಮುಟ್ಟಿ ಮುಟ್ಟಿ ಕೇಳಿದಳು ಹೊಸಿಲ ಒಳಗೇ ನಿಶ್ಚಯಗಳ ನೇರಕ್ಕೆ ಮಣಿದು ನಡೆದಳು

ಮಳೆಯ ಭಾಸದಲ್ಲಿ ನೆನೆದಳು ಬೆಳದಿಂಗಳ ಹಿತಕ್ಕೆ ಹಂಬಲಿಸಿದಳು ಎದೆಯೊಳಗೇ ಉರಿವ ಸೂರ್ಯಗೋಳವ ಸ್ಫೋಟಗೊಳ್ಳದಂತೆ ಕಾದಳು

*

avithakavithe venkatramana gowda

ವೆಂಕಟ್ರಮಣಗೌಡ ಅವರು ಕೈಬರಹದೊಂದಿಗೆ

ಕವಿತೆಯೆಂದರೆ ನನ್ನ ದೃಷ್ಟಿಯಲ್ಲಿ, ಬದುಕು ಮತ್ತು ಬದುಕನ್ನು ಕಟ್ಟಿಕೊಟ್ಟಿರುವ ಪ್ರಕೃತಿಯೊಂದಿಗೆ ಸಂಗತವಾದ ಮೌನವನ್ನು ಆಲಿಸುವುದು. ಕವಿತೆಯು ಶಬ್ದಗಳೊಂದಿಗಿನ ದಂದುಗವೆನ್ನಿಸಿಬಿಟ್ಟರೆ, ನಮ್ಮನ್ನು ಸದಾ ಕಾಯುವ ಮೌನದ ಮಹಿಮೆ ಎಂದೆಂದಿಗೂ ನಮಗೆ ಅರ್ಥವಾಗದೇ ಹೋದೀತು. ನೋಡುವ ಮತ್ತು ಗ್ರಹಿಸುವ ಕ್ರಮ ಶಬ್ದಸಂತೆಯಲ್ಲಿ ಕಳೆದುಹೋಗದೆ, ನಾವು ಬದುಕುತ್ತಿರುವ ಕಾಲಘಟ್ಟದ ವಿದ್ಯಮಾನಗಳಿಗೆ ನಮ್ಮೊಳಗಿನ ಪ್ರತಿಕ್ರಿಯೆಯಾಗಬೇಕು. ಹಾಗಾಗದೇ ಹೋದರೆ ಅದು ನಿರ್ಲಜ್ಜತನ ಎಂದು ಭಾವಿಸುತ್ತೇನೆ ನಾನು. ಸಹ್ಯಾದ್ರಿಯನ್ನು ಬರಿದಾಗಿಸುತ್ತಿರುವವರ ಸಂಚನ್ನು ಕಾಣಲಾರದೆ, ಅದರ ವರ್ಣನೆಯಲ್ಲಿ ವಿವಶವಾದವನು, ನಮ್ಮ ತಟ್ಟೆಯ ಅನ್ನವನ್ನು ಕಸಿಯುತ್ತಿರುವವರು ಭ್ರಮೆಗಳನ್ನು ಬಿತ್ತುವಾಗ ಆಹಾ ಎಂದು ಪುಳಕಿತನಾಗುವವನು, ಪ್ರಶ್ನಿಸಲಾರದ ನಾಲಿಗೆ ಇಲ್ಲದಿದ್ದರೂ ಆದೀತೆಂಬ ಕಟು ವಾಸ್ತವದಲ್ಲಿ ಬೇಯದವನು ಸತ್ಯವನ್ನು ಎದುರುಗೊಳ್ಳಲಾರ. ಅಂಥವನೆದುರು ಕವಿತೆಯೆಂಬ ಹುಡುಕಾಟವೂ ಇರುವುದಿಲ್ಲ.

ಇಷ್ಟು ನಂಬಿಕೆಯೊಂದಿಗೆ ನಾನು ಬರೆಯುತ್ತೇನೆ. ನಂಬಿಕೆಯು ನೆರಳಾಗದೆ, ಬಿಸಿಲ ಝಳದಲ್ಲಿ ಮೀಯಿಸುತ್ತಿರಬೇಕೆಂದು ಬಯಸುವೆ. ಎಚ್ಚರಿಸುವವರಿಲ್ಲದಲ್ಲೂ ಎಚ್ಚರಿಸಲು ಈ ಗುಣದ ಜರೂರು ಇದೆ. ಇಂಥ ಎಚ್ಚರವನ್ನು ಹಂಬಲಿಸುವ ಮತ್ತು ನಾನು ಬರೆಯದಿದ್ದರೂ ನಡೆಯುತ್ತದೆ ಎಂಬ ಒಂದು ಸಣ್ಣ ಮಟ್ಟಿಗಿನ ಉಪೇಕ್ಷೆಯನ್ನೂ ಇಟ್ಟುಕೊಂಡೇ ಬಂದಿರುವವನಾದ್ದರಿಂದ ನನ್ನಲ್ಲಿ ಭ್ರಮೆಗಳಿಲ್ಲ. ದಾಕ್ಷಿಣ್ಯಕ್ಕೆ ಬಸಿರಾಗದ ಸ್ವಾತಂತ್ರ್ಯಕ್ಕಿಂತ ಹೆಚ್ಚಿನ ಸಂಪತ್ತಿಲ್ಲ.

ದುರ್ದಿನಗಳನ್ನು ದಾಟುವ ನಿಬಿಡ ಯಾತನೆಯ ಆರ್ತತೆಯಂತೆ, ಕಾದ ಎದೆಗೆ ಮಳೆಯಾಗಿ ಒದಗಬಲ್ಲ ಆರ್ದ್ರತೆಯಂತೆ, ಎತ್ತರದ ಮರವೊಂದರಲ್ಲಿನ ಜೇನುಹುಟ್ಟನ್ನು ನೋಡುತ್ತ ನೋಡುತ್ತ ಜೇನ ಮಧುರತೆಯು ಭಾಸವಾಗುವುದರಲ್ಲಿರುವ ಪ್ರಾಕೃತಿಕ ಧನ್ಯತೆಯಂತೆ, ಜಗತ್ತಿನೆಲ್ಲ ಗಡಿಗೆರೆಗಳನ್ನು ನಿರ್ಭೀತ ಮುಗ್ಧತೆಯಿಂದ ಸರಿಸಿಬಿಡಬಲ್ಲಂತಿರುವ ಮಗುವಿನ ಬೆರಳುಗಳ ಚಲನೆಯಂತೆ, ಎಲ್ಲ ಅಬ್ಬರ ಆವೇಶಗಳನ್ನೂ ಮಣಿಸುವಂಥ ತಾಕತ್ತಿನೊಂದಿಗೆ ಬೆಳಗುವ ಪ್ರೀತಿ ತುಂಬಿದ ಕಂಗಳಂತೆ ನನ್ನ ಕವಿತೆ ನನ್ನೊಡನೆ ಇರುವಷ್ಟು ಕಾಲವೂ ನನ್ನ ಪಾಲಿಗೆ ಅಕ್ಷರ ಅನುದಿನ. ವೆಂಕಟ್ರಮಣ ಗೌಡ * ಒಂದು ವಿಶ್ವಾಸವನ್ನು ಕಾಯಲು

ಮಲಗಿದ್ದಾಳೆ ಮಗಳು ನಿರಾಳವಾಗಿ ಪಕ್ಕದಲ್ಲೇ ಅಡ್ಡಾಗಿರುವ ನನ್ನ ಹೊಟ್ಟೆಯ ಮೇಲೆ ಕಾಲು ಹಾಕಿಕೊಂಡು

ಮೆಲ್ಲಗೆ ಅವಳ ಕಾಲನ್ನೆತ್ತಿ ಕೆಳಗಿಟ್ಟು ಆಚೆ ಹೋಗಬಹುದು ನಾನು ಆದರೆ ಅವಳಿಗೆ ನಿರಾತಂಕದ ನಿದ್ರೆ ದಯಪಾಲಿಸಿರುವ ಅವಳೊಳಗಿನ ಭರವಸೆಯೇ ಹಿಡಿದಿಟ್ಟಿದೆ ನನ್ನನ್ನು ಬಿಟ್ಟು ಕದಲದಂತೆ

ಒಂದು ವಿಶ್ವಾಸವನ್ನು ಕಾಯಲು ಎಂಥ ಸುಂದರ ಕಾವಲು!

ಹಕ್ಕಿ ಇರುವೆ ಹುಲಿ

ನೀರಿಗೆ ಬಿದ್ದ ಇರುವೆಯನು ಎಲೆಯೊಡ್ಡಿ ದಡಕ್ಕೆ ತಂದ ಹಕ್ಕಿ

ಹಕ್ಕಿಯ ಉಪಕಾರ ಮರೆಯದೆ ಬೇಡನ ಕಾಲು ಕಚ್ಚಿ ಗುರಿ ತಪ್ಪಿಸಿ ಹಕ್ಕಿಯ ಪ್ರಾಣ ಕಾಯ್ದ ಇರುವೆ

ಮಾತು ತಪ್ಪದೆ ಮರಳಿದ ಗೋವಿನೆದುರು ಪರಿತಪಿಸಿ ತಾನೆ ಪ್ರಾಣವ ಬಿಟ್ಟ ಹುಲಿ

ಮನಸ್ಸುಗಳ ಶುದ್ಧಗೊಳಿಸಲು ದಣಿಯುತ್ತಲೇ ಇವೆ

ಶುದ್ಧಗೊಳ್ಳಲೇ ಇಲ್ಲ ಯಾರೂ

*

ಕೃತಿ : ಉರಿವ ಜಾತ್ರೆ (ಕವನಸಂಕಲನ) ಲೇಖಕ : ವೆಂಕಟ್ರಮಣ ಗೌಡ ಪುಟ : 124 ಬೆಲೆ : ರೂ. 125 ಮುಖಪುಟ ಚಿತ್ರ : ವಿಹಾ ಮುಖಪುಟ ವಿನ್ಯಾಸ : ಶ್ರೀಪಾದ್ ಪ್ರಕಾಶನ : ಋತ, ಬೆಂಗಳೂರು

(ಪುಸ್ತಕ ಖರೀದಿಗೆ ಸಂರ್ಕಿಸಬೇಕಾದ ಮೊಬೈಲ್ ಸಂಖ್ಯೆ : 9448076207)

*

ಪರಿಚಯ : ವೆಂಕಟ್ರಮಣ ಗೌಡ ಅವರ ಊರು ಉತ್ತರ ಕನ್ನಡದ ಅಂಕೋಲೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. ಕಳೆದ ಎರಡೂವರೆ ದಶಕಗಳಿಂದ ಪತ್ರಿಕೋದ್ಯಮದಲ್ಲಿ ದುಡಿಮೆ. ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಈ ಮೂರೂ ಮಾಧ್ಯಮಗಳಲ್ಲಿ ಪರಿಣತಿ. ಕೆಲಕಾಲ ‘ಹಂಗಾಮ’ ಸಾಹಿತ್ಯ ಪತ್ರಿಕೆ ಸಂಪಾದನೆ, ಪ್ರಕಟಣೆ. ‘ಪಾಂಗು’ ಕವನಸಂಕಲನ (1998), ‘ಈ ಸರ್ತಿಯ ಸುಗ್ಗಿ’ ಕಥಾಸಂಕಲನ (2000) ಮತ್ತು ‘ತರುವಾಯ’ ಕಿರು ಕಾದಂಬರಿ (2003) ಪ್ರಕಟಿತ ಕೃತಿಗಳು.

ಇದನ್ನೂ ಓದಿ : Poetry : ಅವಿತಕವಿತೆ ; ಅಮ್ಮ ಹಾರಿಕೊಂಡ ಬಾವಿಯ ನೀರು ಕುಡಿಯಬಹುದೆ? ಅಪ್ಪನಿಗೆ ಕೇಳಲಾಗುವುದಿಲ್ಲ

Follow us on

Related Stories

Most Read Stories

Click on your DTH Provider to Add TV9 Kannada