Poetry : ಅವಿತಕವಿತೆ ; ಅಮ್ಮ ಹಾರಿಕೊಂಡ ಬಾವಿಯ ನೀರು ಕುಡಿಯಬಹುದೆ? ಅಪ್ಪನಿಗೆ ಕೇಳಲಾಗುವುದಿಲ್ಲ

Poem : ಆಡಿದ ಮಾತು, ಆಡದ ಮಾತು, ಆಡಬೇಕಾದ ಮಾತೆಲ್ಲ ಇಲ್ಲಿ ಬಂದು ಶೇಖರಣೆಯಾಗುತ್ತಿದೆ ಅನ್ನುವ ಮಟ್ಟಿಗೆ ಇದರೊಳಗಿನ ಸಾಧ್ಯತೆ, ನನ್ನಲ್ಲಿ ಬೆರಗನ್ನು ಹುಟ್ಟಿಸಿದೆ. ಅಗಾಧವಾದದ್ದು, ಕಠಿಣವಾದದ್ದು, ಅರ್ಥವಾಗದ್ದು ಸದಾ ನನ್ನ ಕೆಣಕುತ್ತಲೇ ಬಂದಂತೆ. ಈ ಕಾವ್ಯದ ಅಗಾಧ ಸಾಧ್ಯತೆ ನನ್ನ ಕೆಣಕುತ್ತ ಪ್ರೇರೇಪಿಸುತ್ತ ಛೇಡಿಸುತ್ತ ಮೆಲ್ಲಗೆ ನಡೆಸುತ್ತಿದೆ ಮುಂದೆ ಮುಂದೆ.‘ ಇಂದ್ರಕುಮಾರ ಎಚ್. ಬಿ

Poetry : ಅವಿತಕವಿತೆ ; ಅಮ್ಮ ಹಾರಿಕೊಂಡ ಬಾವಿಯ ನೀರು ಕುಡಿಯಬಹುದೆ? ಅಪ್ಪನಿಗೆ ಕೇಳಲಾಗುವುದಿಲ್ಲ
Follow us
ಶ್ರೀದೇವಿ ಕಳಸದ
|

Updated on:Aug 15, 2021 | 12:24 PM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕಥೆಗಾರ, ಕವಿ ಇಂದ್ರಕುಮಾರ ಎಚ್. ಬಿ. ಅವರ ಕವಿತೆಗಳು ನಿಮ್ಮ ಓದಿಗೆ. 

*

ತಾನು ಕಂಡ ಪರಿಸರದ, ಸಮಾಜದ ಬೂಟಾಟಿಕೆಯನ್ನು ವಿಭಿನ್ನವಾಗಿ ಇಂದ್ರಕುಮಾರ ಕಟ್ಟಿಕೊಡುತ್ತಾರೆ. ಇವರ ಅನುಭವ ದ್ರವ್ಯ ಬೇರೆ ರೀತಿಯಲ್ಲಿಯೇ ಕಾಣುತ್ತದೆ. ಅದೇ ಇವರ ಕಾವ್ಯ ವಿಶೇಷ. ಸತ್ಯ, ಪ್ರಾಮಾಣಿಕತೆ, ಮುಖವಾಡಗಳಿಲ್ಲದ ಜಗತ್ತು ಎಲ್ಲರಿಗೂ ಬೇಕು. ಆದರೆ ಅದೆಲ್ಲ ಇಂದಿನ ವರ್ತಮಾನದಲ್ಲಿ ಯಾವ ಯಾವ ರೀತಿಯಾಗಿ ರೂಪ ಬದಲಿಸಿಕೊಂಡು ನಿಂತಿದೆ ಎಂಬುದನ್ನು ಕವಿತೆಗಳು ಸ್ಪಷ್ಟಪಡಿಸುತ್ತವೆ. ಇವರ ಕವನಗಳು ಸಹೃದಯನ ಒಳದನಿಯಾಗಿ ನಿಲ್ಲುತ್ತವೆ. ಅಕ್ಷತಾ ಕೃಷ್ಣಮೂರ್ತಿ, ಕವಿ

ಇಂದ್ರಕುಮಾರ ಅವರ ಕವಿತೆಗಳಲ್ಲಿ ವಸ್ತುವೊಂದನ್ನು ನಿರೂಪಿಸುವ ಹಾಗೂ ವಸ್ತು ತಾನಾಗೇ ಮೈದಳೆಯುವ ರೀತಿ ಬಹು ಅಪರೂಪದ ಅನುಭೂತಿ ನೀಡುತ್ತದೆ. ಕ್ಲೀಷೆಯಾಗುತ್ತಿರುವ ಪ್ರತಿಮೆಗಳನ್ನು ದಾಟಿ ಹೊಚ್ಚ ಹೊಸ ನುಡಿಗಟ್ಟಿನಲ್ಲಿ ಕಾವ್ಯ ಕಟ್ಟುತ್ತಿರುವ ಇವರು ಕೇವಲ ಭಾಷೆಯ ಕಾರಣದಿಂದ ಅಲ್ಲ ವಸ್ತುವನ್ನು ವಿನೂತನವಾಗಿ ಒಳಪಡಿಸಿಕೊಳ್ಳುವ ಕಾರಣಕ್ಕಾಗಿಯೂ ನಮ್ಮ ಗಮನ ಸೆಳೆಯುತ್ತಾರೆ. ಚನ್ನಬಸವ ಆಸ್ಪರಿ, ಲೇಖಕರು

*

ಬಾವಿಗ್ಯಾನವ ಮರೆತು

ಅಮ್ಮ ಹಾರಿಕೊಂಡ ಬಾವಿಯ ನೀರು ಕುಡಿಯಬಹುದೆ ಪ್ರಶ್ನೆಯಿದೆ ವರ್ಷಗಳಿಂದ ತಂದೆಗೆ ಕೇಳಲಾಗುವುದಿಲ್ಲ. ಅವನು ನಿರ್ಗಮನಕ್ಕೆ ಆರಿಸಿಕೊಂಡದ್ದು ಮರವನ್ನು ಹಗ್ಗವನ್ನು ಅದು ನೆರಳಿನ ಮರ, ಹಸಿವಿಗೆ ಹಣ್ಣುಕೊಡುವಂಥದ್ದಲ್ಲ ಅಕ್ಕತಂಗಿಯರೋ ಬಾವಿಯ ಸೆಳೆತಕ್ಕೆ ಹೆದರಿ ಹಿತ್ತಲ ದಾರಿಯೇ ಬಿಟ್ಟಿದ್ದಾರೆ.

ನನ್ನ ಜೊತೆಗೇ ಹುಟ್ಟಿದ್ದಂತಿದ್ದ ಹಿತ್ತಿಲ ಬಾವಿಯನ್ನು ಪಾಳು-ಬೋಳು-ಬಂಜೆಯೆಂದು ಜರಿದವರಿಗೆ ಜಂಗುಜೀಡು ಜೇಡಬಾವಲಿ ದಾಟಿ ಅದರೊಳಗೆ ದೃಷ್ಟಿ ಇಳಿಸದವರಿಗೆ ಅಮ್ಮ ಹಾರಿಕೊಂಡೇ ತೋರಿಸಬೇಕಾಯಿತು, ಪಾತಾಳದಲ್ಲಿದ್ದ ಮುಳುಗುವಷ್ಟೇ ನೀರು ಇಷ್ಟುದಿನ ನೀರನ್ನಷ್ಟೆ ಕುಡಿಸಿ ಬದುಕಿಸಿದವಳಿಗೆ ನೀರು ಕುಡಿಸಿತವಳಿಗೆ ಬಾವಿ

ಅವಮಾನ ಮುಚ್ಚಿಕೊಳ್ಳುವ ಹರಸಾಹಸದಿ ಬೆವರುತ್ತ ಒರಲುತ್ತ ಕೆಮ್ಮುತ್ತ ಕಟ್ಟಿಗೆಯಾರಿಸುತ್ತ ಮುಳ್ಳು ಕೆಬರುತ್ತಿದ್ದವಳಿಗೆ ಒಮ್ಮೆಲೆ ಎಲ್ಲ ಕೈಬಿಡುವಂತೆ ಕರೆದಿತ್ತಿರಬೇಕು ಬಾವಿ

ಎಲ್ಲ ಮುಗಿದು ನಿಸ್ತೇಜ ಲೋಕದ ಮಂಕು ಮೆಲ್ಲಗೆ ಹರಡುತ್ತಿದ್ದಾಗ ಹಿತ್ತಿಲಬಾವಿಯ ನೀರು ಉಕ್ಕೇರಿ ಹರಿಯತೊಡಗಿತ್ತು. ಊರ ಜನ ‘ನೀರಿಲ್ಲದ ಬಾವಿ ಆಹುತಿ ಬೇಡಿತ್ತು ಈಡೇರಿತು ನೋಡಿ’ ಎಂದು ಮಾತಾಡಿಕೊಂಡರು.

ಬಾವಿಯೊಳಗಿನ ಬಾಗಿಲ ತೆರೆದಿದ್ದಾಳೆ ಅವಳು… ಉಸಿರುಸಿಕ್ಕು ಸಾಯುತ್ತಿರುವ ಜಲಮಾತೆಗಾಗಿ ತಳದ ಕಿಟಕಿಯನ್ನು ತೆರೆಯಲು ಹೋಗಿರಬಹುದೆ? ಕಿಟಕಿ ಬಾಗಿಲಾಗಿ ಬಾಗಿಲು ಲೋಕವಾಗಿ ತೆರೆದುಕೊಂಡಿರಬಹುದೆ ಅದನ್ನು ಆಹುತಿ ಎನ್ನಲಾದೀತೇ?

ಅವಳ ಬಾವಿಗೆ ಅವಳದ್ದೇ ಗುಣ ಅಂದರು ಜನ, ಊರ ಹಳ್ಳವನ್ನೂ ಮರೆಸುವ ಹಳ್ಳವನ್ನೇ ಸೃಷ್ಟಿಸಿದ್ದಾಳೆಂದರು, ಬಲುಜೋರಿನ ನೀರನ್ನು ದಿಟ್ಟಿಸುತ್ತ ನಿಂತೆ

*

avithakavithe hb indrakumar

ಇಂದ್ರಕುಮಾರ ಕೈಬರಹದೊಂದಿಗೆ

ಕಾವ್ಯವೆಂದರೆ ನನ್ನ ಪಾಲಿಗೆ ಒಂದು ಸವಾಲು. ಒಂದು ಬಿಡುಗಡೆ. ಒಂದು ಹೊಸಜಾಗಕ್ಕೆ ಹೊಸಬರನ್ನು ಪರಿಚಯ ಮಾಡಿಕೊಂಡಾಗಿನ ಭಾವ. ಎಲ್ಲಿಗೆ ಬೇಕಾದರೂ ಕರೆದೊಯ್ದು ಕಲಿತ ಮಗ್ಗಿ ಒಪ್ಪಿಸಿಬಿಡು ಎಂದೂ ಕೇಳುತ್ತ, ಒಳಗೇ ಅದುಮಿಟ್ಟುಕೊಂಡು ಕೊರಗುತ್ತಿದ್ದುದುನ್ನು ಅದರ ಜೊತೆಗೇ ಹೇಳಿಬಿಡು ಅನ್ನುತ್ತ, ನಿನ್ನ ಒಳಗಣ್ಣು ಬಿಟ್ಟು ಲೋಕದ ಜನರ ಸಂಕಟಗಳನ್ನು ಹುಡುಕಾಡುತ್ತಿದ್ದೆಯಲ್ಲ ಅದನ್ನೆಲ್ಲ ಕಕ್ಕಿಬಿಡು ಅನ್ನುತ್ತ ಹೋಗುವ ಒಂದು ಅಶರೀರವಾಣಿಯಂಥ ಜೀವ. ಕಥೆ, ಕಾದಂಬರಿ ನಂತರ ಈ ಪ್ರಕಾರ ಹುಚ್ಚಿನಂತೆ ಅಂಟಿಕೊಂಡು ಬಿಟ್ಟಿದೆ. ಆಡಿದ ಮಾತು, ಆಡದ ಮಾತು, ಆಡಬೇಕಾದ ಮಾತೆಲ್ಲ ಇಲ್ಲಿ ಬಂದು ಶೇಖರಣೆಯಾಗುತ್ತಿದೆ ಅನ್ನುವ ಮಟ್ಟಿಗೆ ಇದರೊಳಗಿನ ಸಾಧ್ಯತೆ, ನನ್ನಲ್ಲಿ ಬೆರಗನ್ನು ಹುಟ್ಟಿಸಿದೆ. ಅಗಾಧವಾದದ್ದು, ಕಠಿಣವಾದದ್ದು, ಅರ್ಥವಾಗದ್ದು ಸದಾ ನನ್ನ ಕೆಣಕುತ್ತಲೇ ಬಂದಂತೆ. ಈ ಕಾವ್ಯದ ಅಗಾಧ ಸಾಧ್ಯತೆ ನನ್ನ ಕೆಣಕುತ್ತ ಪ್ರೇರೇಪಿಸುತ್ತ ಛೇಡಿಸುತ್ತ ಮೆಲ್ಲಗೆ ನಡೆಸುತ್ತಿದೆ ಮುಂದೆ ಮುಂದೆ…

* ಕರೆಯದ ಒಲೆಗಳು

ಒಲೆ ಮಾಡುವ ಮಣ್ಣಿನ ಹುಡುಕಾಟ ನಡೆಸಿದ್ದಳು ನನ್ನಜ್ಜಿ ‘ಅಲೆದಾಟದ ಬದುಕು ಮುಗಿಯಿತು ನಮ್ಮದು ಇನ್ನು ಹೋದಲೆಲ್ಲ ಒಲೆಹೂಡುವ ಬಿಟ್ಟು ನಡೆಯುವ ಕಷ್ಟವಿಲ್ಲ’ ಎಂದೆ – ಕೇಳಲಿಲ್ಲ ಅವಳು

ಬಹುಶಃ ಅಲ್ಲಿಗೇ ನಿಂತಿರಬಹುದೆ ಅವಳ ಬಾಳುವೆಯ ಸ್ಮರಣೆ? ಮಣ್ಣಿನ ಒಲೆ ಹೂಡಿಯೇ ತೀರುವವಳಿಗೆ ‘ಅಪಾರ್ಟ್‍ಮೆಂಟ್ ಫ್ಲಾಟ್‍ನಲ್ಲಿ ಹೊಗೆಯೇಳಿಸಿದರೆ ಶಂಖನಾದ ಮೊಳಗಿಸಿದರೆ ಅಲ್ಲೋಲಕಲ್ಲೋಲವಾಗಿಬಿಡುತ್ತದೆ ಸ್ವಸ್ಥ ಸಮಾಜದಲ್ಲೊಂದು ಅಸ್ವಸ್ಥ ಬದುಕಿನವರೆಂದು ದೂರುಕೊಡುತ್ತಾರೆ ದೂಷಿಸುತ್ತಾರೆ ಒಳಗೇನು ಬೇಯಿಸಿದಿರಿ ಏನು ಕುದಿಸಿಕೊಳ್ಳುತ್ತಿರುವಿರಿ ಎಂದು ಕಣ್‍ಬಾಯ್ ತೆರೆದು ಎಲ್ಲರೂ ಕೇಳುತ್ತಾರೆ’ ಅಂದೆ ತಲೆಕೊಡವಿದವಳ ಹಠಕ್ಕೆ ಏನು ಹೇಳುವುದು ಮುನಿದು ಕೂತವಳ ರಮಿಸಿ ಮಾತನಾಡಿಸಲಾಯಿತು ಅವಳ ಆಸೆಯಿಷ್ಟೇ ‘ಒಲೆ ಕರೆಯುತ್ತಿದೆ ಯಾರೋ ಬರುತ್ತಾರೆ’ ಅನ್ನಬೇಕಿದೆ ಅವಳಿಗೆ

ಹೊಳೆವ ಕಿಚನ್ನಿನಲ್ಲಿ ಕೇವಲ ಸುಕೋಮಲ ಶಿಸ್ತಿನ ನೀಲಿಯಗ್ನಿಗೆ ಮಾತ್ರ ಸಲಿಗೆ ‘ನಿನ್ನ ದನಪ್ರವೇಶ-ಅಗ್ನಿಪ್ರವೇಶ ಸಲ್ಲದು ಗೋಮೂತ್ರ- ಸಗಣಿ ಸಾರಿಸಿ ಬಳಿದು ಉರುಮಂಜು ಹಚ್ಚಿ ಸುಣ್ಣದಲ್ಲಿ ಚಿತ್ತಾರ ಬಿಡಿಸುವುದೆಲ್ಲ ಈಗ ತಪ್ಪು ತಪ್ಪು’ ಅಂದೆ.. .ಬೆಪ್ಪಾಗಿಸಿತು ನನ್ನ ಅವಳ ಆ ನೋಟ

ತತ್ಕಾಲಕ್ಕೆ ಮೂರು ಇಟ್ಟಿಗೆ ತಂದುಕೊಡುವೆ ಇಲ್ಲೇ ನಾಲ್ಕು ಪುಳ್ಳೆಗಳಿಗೆ ಕಿಡಿಹೊತ್ತಿಸಿ ಕ್ಷಣಕಾಲ ಕಣ್ತುಂಬಿಸಿಕೋ ಹೊಗೆಯನ್ನು ಅಂದೆ ಬಿಳಿಗೂದಲ ಮುದಿತಲೆ ಕೊಡವಿತು ಸೆಡವಿನಲಿ

ಬರುವವರ ಬಾರದವರ ಕರೆಯದೇ ಯುಗ ಕಳೆಯಿತು ಇದ್ದವರ ಮಾತ್ರ ನೆನಪಿಸಿಕೊಳ್ಳುವ ಲೋಕವಿದು ಇರುವವರೆಲ್ಲರೂ ಸುತ್ತಲಿರುವವರು ಮಾತ್ರ ಇಲ್ಲಿ ಯಾರೂ ಬಾರರು ಒಲೆ ಕರೆದರೂ ಕಾಗೆ ಕೂಗಿದರೂ ಅಂದೆ ಶೋಕೇಸಿನಲ್ಲಿನ ಹೊಸ ರೆಡಿಮೇಡ್ ಮಣ್ಣಿನ ಒಲೆ ದಿಟ್ಟಿಸುತ್ತ ಕೂತವಳಿನ್ನೂ ಮಾತು ಮುರಿದಿಲ್ಲ.

avithakavithe hb indrakumar

ಇಂದ್ರಕುಮಾರ ಅವರ ಕೃತಿಗಳು

ಕಂಬಿಗಳೊಳಗಿನ ಮಾಯಾಬಜಾರು

ಊಟದ ರುಚಿ ಕುರಿತ ಮಾತುಕತೆಗೆ ಜನರಿಲ್ಲ ಇಲ್ಲಿ ಅರುಚಿಯೋ ಅಭಿರುಚಿ ಇಲ್ಲವೋ ತಿಳಿಯದು. ಇಲ್ಲಿ ನೀರನ್ನು ಪ್ರೀತಿಸಿದ ಸಾರು – ಸದಾ ಆರೋಪಿ ನಿಸ್ಸಾರ ನಿಸ್ಸತ್ವದ ಸಾರಿಗಿಲ್ಲ ಪೈಪೋಟಿ ನೋಡುತ್ತಿರುವುದು ಅನುಭವಿಸುತ್ತಿರುವುದಷ್ಟೇ ಸರಿ ಒಂಥರಾ ಬಾವಿಕಪ್ಪೆಗಳ ಸಂಬಂಧಿಕರಿವರು.

ವೃದ್ಧಖೈದಿಗಳ ನಡುರಾತ್ರಿಯ ಮಾತು ಬೆಳಗಿನವರೆಗೂ ಮುಂದುವರೆದರೇನೂ ನಷ್ಟವಿಲ್ಲ ಎಲ್ಲಿಗೂ ಯಾರಿಗೂ ತಡವಾಗುವುದೇ ಇಲ್ಲವಲ್ಲ. ಎಲ್ಲ ಅಗುಳ ಮೇಲೂ ಜೈಲು ಎಂದು ಬರೆದಂತೆ ಟಿವಿನೋಡುತ್ತಿರುವ ನಮಗಷ್ಟೆ ಕಾಣಿಸುತ್ತಿರಬಹುದೆ? ಊಟದಲ್ಲಿ ಹೊರಗಿನ ಪ್ರಪಂಚವ ಮರೆಸುವ ಉಪ್ಪನ್ನು ಬೆರೆಸಲಾಗಿದೆಯೆ.

ಹೆಚ್ಚು ಸಮಯದಿಂದಿರುವವ ಹೆಚ್ಚು ಗಣ್ಯರು ತಪ್ಪನ್ನು ಖಾತ್ರಿ ಪಡಿಸಿಕೊಳ್ಳಲು ಪದೇ ಪದೇ ಮಾಡಿದವರಿರಬೇಕು. ಮಾಡಿದ ತಪ್ಪಿಗೆ ಮಾಡದ ತಪ್ಪಿಗೆ ಯಾರೋ ಮಾಡಿದ ತಪ್ಪಿಗೆ ತಪ್ಪು ಮಾಡದೇ ಬಂದ ತಪ್ಪಿಗೆ ತಲೆ ಕೊಟ್ಟು ಒಳ ಬಂದ ಕೆಲವರ ಪಾಲಿಗಂತೂ ಜೈಲಿನ ಬಾಗಿಲು ಒಳಹೋಗಲಷ್ಟೆ

ಪಕ್ಕದ ಸೆಲ್ಲಿನವನಿಗೆ ಮೂರು ದಿನಗಳಿಂದ ಬೇಧಿಯಾಗಿಲ್ಲವಂತೆ ಆ ಪಕ್ಕದ ಸೆಲ್ಲಿನವನಿಗೆ ಹೇರ್‍ಡೈ ಬೇಕಂತೆ ಎದುರಿನವರಿಗೆ ಜೋಕ್ಸ್ ಹೇಳುವ ಹುಕಿ. ಇನ್ನೊಬ್ಬನಿಗೆ ಹೆಂಡತಿಯ ಮೇಲೆ ಅನುಮಾನವಂತೆ ಅಣ್ಣ ಅಪ್ಪ ತಮ್ಮ ಚಿಕ್ಕಪ್ಪ ಮಾವ… ಎಲ್ಲ ಸಂಬಂಧಗಳನು ಒಂದೇ ಸೋಪಿನಲ್ಲಿ ತೊಳೆದುಕೊಂಡವರಿವರು ತಲೆಗೂದಲು ಮೀಸೆ ಗಡ್ಡ ಇದ್ದರೂ ಇರದಿದ್ದರೂ ಬಾಯಿವಾಸನೆ ನಿದ್ದೆನಡಿಗೆ ಇದ್ದರೂ ಇರದಿದ್ದರೂ ಸರಿಯೆ… ಕೈತುತ್ತು, ಬೀದಿಬದಿಯ ರುಚಿಗಳು, ತಿಥಿಯೂಟಗಳು, ಕದ್ದ ಕೋಳಿ, ಸಾಕಿದ ಕುರಿ ರುಚಿ ಹೇಗಿರುತ್ತದೆಂದು ತಿಳಿಯಬೇಕಿರುವುದಿಲ್ಲ, ಬೆಳಕು ಕತ್ತಲ ನಡುವೆ ದೈನಿಕವೊಂದು ನಿರಾಯಾಸ ಜಾರಬೇಕಷ್ಟೆ…

ಮಗ ಹೇಗೆ ಗೊರಕೆ ಹೊಡೆವನು ಮಗಳು ಯಾರ ಹೋಲುವಳು ಅಪ್ಪನ ಸತ್ತು ವಾರವಾಗಿರಬಹುದೆ ಹೆಂಡತಿ ಈಗ ಚಿನ್ನದ ಕನಸು ಬಿಟ್ಟಿರುವಳೆ – ಯಾರು ಹೇಳಬೇಕು ವಾರ್ತೆಗಳ

ತಪ್ಪು ಮರೆತು ಹೋಗಿ, ತಪ್ಪಿದಲ್ಲಿಗೆ ಹೋಗಲಾಗದವರ ಜೀವಿತ ಅವಧಿ ಜೀವಾವಧಿ ನಡುವಿನ ಅವಧಿಯವರ ಮನೋವ್ಯಾಧಿಯಲ್ಲದ ವ್ಯಾಧಿಯನ್ನು ಅರ್ಥಮಾಡಿಸುವ ಬಗೆ ಹೇಗೆ

avithakavithe hb indrakumar

ಇಂದ್ರಕುಮಾರ ಅವರ ಕೃತಿಗಳು

ಒಲ್ಲದ ಲೇವಾದೇವಿ

‘ಅರವತ್ತು ಸಾಯುವ ವಯಸ್ಸೇ?’ – ಮಾತಾಡಿಕೊಳ್ಳುತ್ತಿದ್ದರು ಜನ

ಅರಳುಮರಳಿನ ಸಮಯಕ್ಕೇ ಗಿರವಿ ಅಂಗಡಿಯಲ್ಲೇ ಕೊಳೆಯುತ್ತಿರಬಹುದಾದ ಕರಗಿಹೋಗಿ ಇನ್ನೊಬ್ಬರ ಕಿವಿಯಲ್ಲಿ ಹೊಳೆಯುತ್ತಿರಬಹುದಾದ ಅಮ್ಮನ ಬೆಂಡೋಲೆಗಳು ನೆನಪಾಗುತ್ತಿವೆಯೆಂದರೆ – ಯಾರು ನಂಬಿಯಾರು…

ಐವತ್ತು ವರ್ಷಗಳ ಹಿಂದೆ ಕಣ್ಣೆದುರೆ ನಡೆದಿತ್ತು ಈ ವಿಲೇವಾರಿ ಅಮ್ಮನ ಏಕೈಕ ಚಿನ್ನದ ತುಂಡನ್ನು ಅನುಮಾನಿಸುತ್ತಲೇ ಇಸಿದುಕೊಂಡು ನೋಡಿ ಪಟ್ಟಿ ಬರೆದುಕೊಂಡಿಟ್ಟುಕೊಂಡಿದ್ದ ಸೇಠು ದುಡ್ಡು ಎಣಿಸಿಕೊಂಡು, ಸೆರಗಿಗೆ ಸುತ್ತಿಕೊಂಡು ಆತಂಕದಲಿ ಮನೆವರೆಗೆ ನನ್ನ ಕೈಬಿಡದೇ ಬಂದದ್ದೇ, ಅಮ್ಮನಿಗೆ ಮಾತು ಮರೆತುಹೋದವೇನೋ ಬಲಿಯ ಹೊಂಡದಲ್ಲಿ ಬಿದ್ದ ತನ್ನ ಏಕೈಕ ಸ್ಥಿರಾಸ್ತಿ, ತವರಿನ ನೆನಪಿನಾಸ್ತಿಯನ್ನು ಕೈಯಾರೆ ಬೀಳ್ಕೊಟ್ಟಿದ್ದಳು ಬಗೆಬಗೆ ಸಂಕಟದಲಿ ತಂತಾನೆ ಕಳಕೊಳ್ಳುವುದೆಂದರೆ ಹೀಗೆಯೆ? ಗಿರವಿಯಿಡುವಾಗಲೇ ಇದು ಮತ್ತೆ ತನ್ನ ಕೈಗೆ ಬಾರದೆನ್ನುವ ಅರಿವಿತ್ತೇನೋ ಮತ್ತೆಲ್ಲೂ ಅದರ ಸೊಲ್ಲೆತ್ತಲಿಲ್ಲ, ಇದ್ದವನೊಬ್ಬನೇ ನಾನು. ಹೊಸ್ತಿಲು ದಾಟಿ ನಡೆಯಲಿಲ್ಲ ಅವಳು ಯಾವ ಮಂಗಳಕಾರ್ಯಗಳಿಗೆ ಗಿಲೀಟಿನ ಬಂಗಾರದ ಹೊಳಪಿಗೂ ತಲೆಕೆಡಿಸಿಕೊಳ್ಳಲಿಲ್ಲ, ಮಧ್ಯರಾತ್ರಿ ಎಷ್ಟು ಬಾರಿ ಎದ್ದು ಬೆಂಡೋಲೆಗಳಿದ್ದ ಡಬ್ಬಿ ಮುಚ್ಚಳ ತೆರೆದು ನಿಟ್ಟುಸಿರು ಸುರಿಸಿ ಮುಚ್ಚುತ್ತಿದ್ದಳೋ ಅರ್ಧ ರೊಟ್ಟಿಗೆ ಗಾಢ ನಿದ್ರೆಯಲ್ಲಿರುತ್ತಿದ್ದ ನನಗೆ ಯಾವ ಕನಸಲ್ಲೂ ಹೊಳೆಯಲಿಲ್ಲ

ಬಿಡಿಸಿಕೊಳ್ಳಲು ಮರೆತಳೋ ಯಾರೋ ಬಿಡಿಸಿಕೊಂಡು ಹೋಗಿದ್ದರೋ ನಾನು ಆಕೆಯ ಮರೆತೆನೋ ಆ ಬೆಂಡೋಲೆಯೇ ಅವಳ ತೊರೆದಿತೋ ಯಾರು ಬಲ್ಲರು ಬಡ್ಡಿಬೆಳೆದಂತೆ ಆಸೆ ಕರಗಿರಬಹುದು ಸಲ್ಲದ ಒಲ್ಲದ ಈ ಲೇವಾದೇವಿಯೊಂದು ಮಾಯೆ ಚಿನ್ನ ಇದೆ ಚಿನ್ನ ಇಲ್ಲ ಭ್ರಮೆಗಳ ಕಲಸುಮೇಲೋಗರ ಬದುಕು ಬಾಡತೊಡಗಿದೆ ಆದರೂ ಇದೆ ಮರ್ಯಾದೆ ಮುಚ್ಚಲು ಜೀತಕ್ಕಿದ್ದು ಬಿಡುಗಡೆಯಾಗಲಾಗದ ನೆನಪೊಂದರ ನೆನಪು ಈಗ…

*

ಪರಿಚಯ : ಚಿತ್ರದುರ್ಗ ಮೂಲದ ಇಂದ್ರಕುಮಾರ ಎಚ್. ಬಿ. ಇವರು ವೃತ್ತಿಯಲ್ಲಿ ಶಿಕ್ಷಕರು. ಸದ್ಯ  ದಾವಣಗೆರೆಯಲ್ಲಿ ವಾಸವಾಗಿದ್ದಾರೆ. ಆ ಮುಖ, ನನ್ನ ನಿನ್ನ ನೆಂಟತನ, ಪರಮೂ ಪ್ರಪಂಚ, ಮೃದುಲಾ, ಆತ್ಮದ ಹಕ್ಕಿಯ ಹಾಡು, ಹುಲಿಕಾನು, ಕಾಣದ ಕಡಲು, ಒಳಗೊಂದು ವಿಲಕ್ಷಣ ಮಿಶ್ರಣ, ಕಾಣದಿರೆ ಕಾಂಬೊಂದು ಹಂಬಲು ಪ್ರಕಟಿದ ಕೃತಿಗಳು. ಪರಮೂ ಪ್ರಪಂಚ ಕಥಾಸಂಕಲನದ ಗ್ರಹಣ ಕಥೆ ಸೂಜಿದಾರ ಸಿನಿಮಾ ಆಗಿ ತೆರೆಕಂಡಿದೆ. ಅರಳು ಪ್ರಶಸ್ತಿ, ಜನ್ನಾ ಸನದಿ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿ, ಯು. ಆರ್. ಅನಂತಮೂರ್ತಿ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ಬಸವರಾಜ ಕಟ್ಟೀಮನಿ ಪ್ರಶಸ್ತಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ, ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ ಲಭಿಸಿವೆ.

ಇದನ್ನೂ ಓದಿ : Poetry : ಅವಿತಕವಿತೆ ; ಬಂದು ಹೋದ ಗುರುತು ಪತ್ತೆ ಉಳಿಯದಂತೆ

Published On - 11:16 am, Sun, 15 August 21

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್