Theatre Stories : ‘ನಿಮ್ಮವ್ವಾ, ಒಂದು ಮುಷ್ಟಿ ಉದಾರತೆಯನ್ನು ತನ್ನ ಸೊಸೆಯರಿಗೂ ತೋರಿಸಬೇಕಿತ್ತು‘
Husband and Wife : ‘ಗರುಡರು ಹೆಂಡತಿಯ ಬಳಿಯೇ ಹೋಗಿ ‘ನಂಜೋಡಿ ಬರ್ತೀಯೋ ಇಲ್ಲೋ?’ ಎಂದು ಕೇಳಿದರಂತೆ. ಆಕೆ ಹೊರಡಲು ಸಿದ್ಧವಾದಾಗ ‘ನಮ್ಮ ಮನೆದೇನೂ ತೊಗೊಂಡ ಹೋಗ್ಬೇಡಾ’ ಎಂದು ಅಪ್ಪ ಅಂದಾಗ ಒಣಹಾಕಿದ್ದ ಗರುಡರ ಧೋತರವನ್ನೇ ಉಟ್ಟು ಗಂಡನ ಜೊತೆಗೆ ನಡೆದರಂತೆ!’ ರಜನಿ ಗರುಡ
‘ಟಿವಿ9 ಕನ್ನಡ ಡಿಜಿಟಲ್ ; ಜಗನ್ನಾಟಕ ಮಹಾತ್ಮೆ’ (Kannada Theatre) ಹೊರಗೆ ಧೋ ಎಂದು ಮಳೆ ಸುರಿಯುತ್ತಿದೆ. ಕೊರೊನಾದಿಂದ ನಾಟಕ ಪ್ರದರ್ಶನಗಳಿಲ್ಲದೆ ರಂಗಕಲಾವಿದರ ಬದುಕಿಗೆ ತಾತ್ಕಾಲಿಕವಾಗಿ ಪರದೆ ಇಳಿಬಿದ್ದಂತಾಗಿ ಮನಸ್ಸು ಮ್ಲಾನವಾಗಿದೆ. ಆದರೂ ಶ್ರಾವಣ ನಿಂತಿದೆಯಾ, ನಾಳೆ ಭಾದ್ರಪದವೂ ಬರುತ್ತದೆ. ಎಷ್ಟಂತ ಮನಸ್ಸನ್ನು ಕಟ್ಟಿಹಾಕಿಕೊಳ್ಳುವುದು? ಬನ್ನಿ ಹಾಗಿದ್ದರೆ. ಈ ‘ಜಗನ್ನಾಟಕ ಮಹಾತ್ಮೆ’ಗೆ ಮೊದಲೇ ಟಿಕೆಟ್ ಬುಕ್ ಮಾಡಬೇಕಾದ ಅವಸರವಿಲ್ಲ. ಆಟೋ, ಕಾರು, ಬಸ್ಸು ಹಿಡಿದು ಓಡುವ ಜಂಜಾಟವಿಲ್ಲ. ಎಲ್ಲಿದ್ದೀರೋ ಅಲ್ಲೇ ಇದ್ದು ಓದುತ್ತಾ ಹೋದಂತೆ ಸಮಕಾಲೀನ ದೃಷ್ಟಿಕೋನದ ಹಿನ್ನೆಲೆಯಲ್ಲಿ ನಮ್ಮ ರಂಗಕಲಾವಿದರು ಹಂಚಿಕೊಳ್ಳುವ ಅನುಭವ ಕಥನಗಳು ನಿಮ್ಮೆದುರು ಅರಳುತ್ತ ಹೋಗುತ್ತವೆ.
ಭಾಗ – 3
ಗರುಡ ಸದಾಶಿವರಾಯರ ಬಗ್ಗೆ ಬಂದ ಪುಸ್ತಕಗಳನ್ನು ರಾಶಿ ಹಾಕಿಕೊಂಡು ಓದಿದರೆ ಅವರ ಹೆಂಡತಿ ಭೀಮಾಬಾಯಿಯ ಬಗೆಗೆ ಹತ್ತು ವಾಕ್ಯಗಳೂ ಅಲ್ಲಿ ಸಿಗುವುದಿಲ್ಲ. ಮಹಿಳೆಯರ ಚರಿತ್ರೆಯನ್ನು ಗಮನಿಸಿದರೆ ಇದೇನು ಆಶ್ಚರ್ಯಪಡುವ ಸಂಗತಿಯೇನಲ್ಲ. ಅವರ ಜೊತೆಯಲ್ಲಿ ಊರೂರು ಅಲೆಯುತ್ತ, ನೂರಕ್ಕಿಂತಲೂ ಹೆಚ್ಚಿದ್ದ ಕಂಪನಿಯ ಜನರನ್ನು ಸಂಭಾಳಿಸುತ್ತ, ಕುಟುಂಬದವರು – ಬಳಗದವರು, ತಮ್ಮದೇ ಮಕ್ಕಳೊಂದಿಗೆ ಕಂಪನಿಯ ಏಳು ಬೀಳಿನೊಂದಿಗೆ ಹೆಜ್ಜೆ ಜೋಡಿಸಿದ್ದು ಎಲ್ಲೂ ದಾಖಲಾಗಿಲ್ಲ! ರಜನಿ ಗರುಡ, ರಂಗನಿರ್ದೇಶಕಿ
ಕೊಪ್ಪಳದ ಶ್ರೀನಿವಾಸರಾಯರ ಮಗಳು ಭೀಮಾಬಾಯಿ ಗರುಡರ ಅಕ್ಕನ ಮಗಳು. ಮದುವೆ ಮಾಡಿಕೊಟ್ಟಿದ್ದರೂ ಮಗಳನ್ನು ಅಳಿಯನೊಂದಿಗೆ ಕಳಿಸಿರಲಿಲ್ಲ. ‘ಊರೂರು ತಿರಗ್ತಾ, ಬಣ್ಣ ಹಚ್ಚಿ ನಾಟ್ಕಾ ಮಾಡೋ ನೀನು ನನ್ನ ಮಗಳನ್ನು ಏನು ಸಾಕ್ತೀ?’ ಎಂದು ಕರೆದುಕೊಂಡು ಹೋಗಲು ಬಂದಾಗೆಲ್ಲ ಬೈಯ್ಯುತ್ತಿದ್ದರಂತೆ. ಕೊನೆಗೆ ಗರುಡರು ಹೆಂಡತಿಯ ಬಳಿಯೇ ಹೋಗಿ ‘ನಂಜೋಡಿ ಬರ್ತೀಯೋ ಇಲ್ಲೋ?’ ಎಂದು ಕೇಳಿದರಂತೆ. ಆಕೆ ಹೊರಡಲು ಸಿದ್ಧವಾದಾಗ ‘ನಮ್ಮ ಮನೆದೇನೂ ತೊಗೊಂಡ ಹೋಗ್ಬೇಡಾ’ ಎಂದು ಅಪ್ಪ ಅಂದಾಗ ಒಣಹಾಕಿದ್ದ ಗರುಡರ ಧೋತರವನ್ನೇ ಉಟ್ಟು ಗಂಡನ ಜೊತೆಗೆ ನಡೆದರಂತೆ! 96 ವರ್ಷ ತುಂಬು ಜೀವನ ನಡೆಸಿದ ಭೀಮಾಬಾಯಿ ಕೊನೆಯವರೆಗೂ ಅಷ್ಟೇ ಧೀಮಂತರಾಗಿ ಬದುಕಿದವರು.
ವಿಪರ್ಯಾಸವೆಂದರೆ ಶ್ರೀನಿವಾಸರಾಯರು ಮತ್ತು ಅವರ ಪತ್ನಿ ಇಬ್ಬರೂ ಪ್ಲೇಗಿಗೆ ತುತ್ತಾಗಿ ಮರಣಹೊಂದಿದರು. ಅವರ ನಾಲ್ಕು ಜನ ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳ ಜವಾಬ್ದಾರಿ ಗರುಡರ ಕೊರಳಿಗೇ ಬಿತ್ತು. ಗಂಡುಮಕ್ಕಳನ್ನು ಕಂಪನಿಯ ಕೆಲಸಕ್ಕೆ ಸೇರಿಸಿ ಹೆಣ್ಣುಮಕ್ಕಳಿಗೆ ಮದುವೆ ಮಾಡಿದರು. ಸದಾಶಿವರಾಯರ ಸೋದರರು, ಚಿಕ್ಕಪ್ಪ ಕೂಡ ಜೊತೆಯಲ್ಲಿದ್ದರು. ಭೀಮಾಬಾಯಿ ಎಲ್ಲರಿಗೂ ಭೀಮಕ್ಕನಾದರು.
ಕಂಪನಿಯಲ್ಲಿ ಮುಂಜಾನೆಯೆ ಧ್ವನಿ, ಸಂಗೀತ, ವ್ಯಾಯಾಮಗಳ ತರಬೇತಿ ಇರುತ್ತಿತ್ತು. ನಂತರ ನಾಟಕದ ತಾಲೀಮು, ಹೊಸ ನಾಟಕದ ಸಿದ್ಧತೆ, ಮ್ಯಾನೇಜ್ಮೆಂಟ್ ಕೆಲಸ, ಬರವಣಿಗೆ ಇವುಗಳಲ್ಲೆ ಹೆಚ್ಚು ಸಮಯ ವ್ಯಯವಾಗುತ್ತಿದ್ದರಿಂದ ಸಂಸಾರದ ಪೂರ್ಣ ಜವಾಬ್ದಾರಿ ಭೀಮಕ್ಕನದೆ ಆಗಿತ್ತು. ಅಲ್ಲದೆ ಕಂಪನಿಯ ಬೋರ್ಡಿಂಗ್ ಮನೆಯನ್ನೂ ನೋಡಿಕೊಳ್ಳುತ್ತಿದ್ದರು. ನಟರ, ಕೆಲಸಗಾರರ ಸಂಸಾರ, ಅವರಿಗೆ ಬಟ್ಟೆ, ಬೇಕಾದ ಸಾಮಾನುಗಳನ್ನು ತಾವೇ ತರುತ್ತಿದ್ದರು. ಬೋರ್ಡಿಂಗ್ ಮನೆಗೆ ಬೇಕಾಗುವ ತರಕಾರಿ – ಕಿರಾಣಿ ಸಾಮಾನುಗಳನ್ನೂ ಅವರೇ ತರುತ್ತಿದ್ದರು. ‘ಯಜಮಾನಿ’ಯ ಜವಾಬ್ದಾರಿಗಳನ್ನೆಲ್ಲ ಸಮರ್ಥವಾಗಿ ನಿಭಾಯಿಸಿದರು. ಕಂಪನಿಯ ಕಷ್ಟದ ಸಮಯದಲ್ಲಿ ಹಣದ ಅವಶ್ಯಕತೆ ಹೆಚ್ಚಾದಾಗ ತಮ್ಮಲ್ಲಿದ್ದ ಎಲ್ಲ ಬಂಗಾರದ ಆಭರಣಗಳನ್ನು ತೆಗೆದು ಗಂಟುಕಟ್ಟಿ ಕೊಟ್ಟುಬಿಟ್ಟರಂತೆ!
ಕಂಪನಿ ನಿಂತ ಮೇಲೆಯೂ ಸಂಸಾರವನ್ನು ಮುನ್ನಡೆಸುವ ಜವಾಬ್ದಾರಿ ಅವರದ್ದೇ ಆಗಿತ್ತು. ಮನೆಯ ಕೆಲವು ಭಾಗವನ್ನು ಬಾಡಿಗೆಗೆ ಕೊಟ್ಟಿದ್ದರು. ಮುಳುಗುಂದದಲ್ಲಿ ಸ್ವಲ್ಪ ಹೊಲವಿತ್ತು. ಬಂಧುಗಳು, ಮಕ್ಕಳು ಎಲ್ಲರೂ ಕಂಪನಿಯಲ್ಲಿಯೇ ಇದ್ದರಿಂದ ಅದು ನಿಂತ ತಕ್ಷಣ ಎಲ್ಲರೂ ಒಮ್ಮೆಲೆ ನಿರುದ್ಯೋಗಿಗಳಾಗಿಬಿಟ್ಟರು. ಸರಿಸುಮಾರು ನಾಲ್ಕು ದಶಕಗಳಿಗೂ ಹೆಚ್ಚುಕಾಲ ತಮ್ಮ ವರ್ಚಸ್ಸಿನಿಂದಲೇ ಕಂಪನಿಯನ್ನು ನಡೆಸಿದ್ದ ಸದಾಶಿವರಾಯರು ಹಣ್ಣು ಹಣ್ಣಾಗಿದ್ದರು. ಕೊನೆಯ ಮಗಳು ಆರು ವರ್ಷದ ಯಶೋಧರಾ ಕಂಪನಿಯಲ್ಲಿ ನಟಿಸುತ್ತಿದ್ದಳಂತೆ. ಅವಳ ಅಕಾಲಿಕ ಮರಣ ಅವರನ್ನು ಕಂಗೆಡಿಸಿತು. ಅಲ್ಲದೆ ಕಂಪನಿಗಳಲ್ಲಿ ನಡೆವ ಹೀನ ವ್ಯವಹಾರ ಅವರಿಗೆ ಅಸಹ್ಯ ತರಿಸಿತ್ತು. ಜೊತೆಗೆ ಮುಪ್ಪು ಕೂಡ. ಭೀಮಕ್ಕ ಆ ಸಮಯದಲ್ಲಿ ಅವರನ್ನು ಕಾಳಜಿಯಿಂದ ಪೊರೆದರು.
ಮುಂದೆ ಸೊಸೆಯರು ಬಂದು ಅಡುಗೆ ಮನೆಯ ಕೆಲಸ ಭೀಮಕ್ಕನಿಗೆ ತಪ್ಪಿದರೂ ಅಲ್ಲಿಯ ಆಡಳಿತ – ಹಿಡಿತ ಎಲ್ಲವೂ ಅವರ ಕೈಯ್ಯಲ್ಲೇ ಇತ್ತು. ದೊಡ್ಡಕುಟುಂಬದ ಹೊಟ್ಟೆಹೊರೆಯುವುದು ದೊಡ್ಡ ಸಾಹಸದ ಕೆಲಸವಾಗಿತ್ತು. ಕಿರಾಣಿ ತರುವುದು, ಅವುಗಳನ್ನು ಅಡುಗೆಗೆ ದಿನವೂ ಸೊಸೆಯರಿಗೆ ತೆಗೆದುಕೊಡುವುದು, ಅಡುಗೆಯ ಪ್ರಮಾಣ ಎಲ್ಲವೂ ಅವರ ನಿರ್ದೇಶನದಂತೆಯೇ ನಡೆಯುತ್ತಿತ್ತು. ಯಾರು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎನ್ನುವುದು ಕೂಡ ಅವರ ಆಣತಿಯಂತೆಯೇ ನಡೆಯುತ್ತಿತ್ತು.
ಭೀಮಕ್ಕನಿಗೆ ನಾಲ್ಕು ಜನ ಸೊಸೆಯರು. ಹಿರಿಯ ಮಗ ದತ್ತಾತ್ರೇಯ ಗರುಡರ ಹೆಂಡತಿ ಗೌರಮ್ಮ, ನಂತರ ಶ್ರೀಪಾದ ರಾಯರ ಹೆಂಡತಿ ಕುಂಕುಮಾಬಾಯಿ, ಮೂರನೆಯ ಮಗ ವಲ್ಲಭರಾಯರ ಹೆಂಡತಿ ಗಂಗಾಬಾಯಿ, ಕೊನೆಯ ಮಗ ನರಹರಿರಾಯರ ಹೆಂಡತಿ ಉಮಾಬಾಯಿ. ಎಲ್ಲ ಸೊಸೆಯಂದಿರೂ ಅವರಿಗೆ ತಲೆಬಾಗಿಯೇ ನಡೆದವರು. ಆದರೆ ಅವರು ಮಾಡಬೇಕಾದ್ದು ಮನೆಕೆಲಸ ಮಾತ್ರ! ಉಳಿದ ಎಲ್ಲ ಜವಾಬ್ದಾರಿ ಭೀಮಕ್ಕನದೆ. ಮಡಿಮೈಲಿಗೆ, ದೇವರು – ಪೂಜೆ – ಪುನಸ್ಕಾರಗಳೊಂದರ ಬಗ್ಗೆಯೂ ಭೀಮಕ್ಕನಿಗೆ ನಂಬಿಕೆ ಇರಲಿಲ್ಲ. ಸಂಪ್ರದಾಯಸ್ಥ ಕುಟುಂಬದಿಂದ ಬಂದ ಸೊಸೆಯರು ಅದೆಲ್ಲವನ್ನೂ ಮಾಡುತ್ತಿದ್ದರು. ಹೋಮ, ಹವನ, ಪೂಜೆ, ಮಡಿ ಎಲ್ಲ ಉಳಿದ ಬ್ರಾಹ್ಮಣರ ಮನೆಗೆ ಹೋಲಿಸಿದರೆ ಗರುಡರ ಮನೆಯಲ್ಲಿ ಇಲ್ಲವೆಂದೇ ಹೇಳಬೇಕು. ‘ಅವ್ರ ಮನ್ಯಾಗ ಶ್ರಾದ್ಧ ಮತ್ತು ಮದ್ವಿ ಎರಡs ಮಾಡ್ತಾರ’ ಎಂದು ಮಂದಿ ಆಡಿಕೊಳ್ಳುವುದನ್ನು ಕೇಳಿದ್ದೇನೆ. ಆದರೆ ನಾಟಕದ ಶೋ ದಿನ ಮನೆಯಲ್ಲಿ ಮಡಿ ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡುತ್ತಿದ್ದರು. ಎಂದೂ ರಂಗವನ್ನೇರದ ಸೊಸೆಯರ ಈ ಮುಗ್ಧಭಕ್ತಿಯನ್ನು ನೆನೆದರೆ ನನ್ನ ಗಂಟಲು ಕಟ್ಟಿ ಕಣ್ಣು ತುಂಬುತ್ತದೆ. ನಾಲ್ಕೂ ಜನರು ನಾಟಕವೆಂದರೆ ಎಂದೂ ಕಡೆಗಣಿಸಿಲ್ಲ, ನಾಟಕದವರು ಯಾರೇ ಮನೆಗೆ ಬಂದರೂ ಊಟ ಉಪಚಾರ ಮಾಡಿಸದೆ ಕಳಿಸಿಲ್ಲ. ತಮ್ಮ ಜೀವಿತದ ಕೊನೆಯವರೆಗೂ ಇದನ್ನು ಪಾಲಿಸಿದರು.
ದೊಡ್ಡಮಗಳು ಸುಭದ್ರಾ(ಸುಬ್ಬಕ್ಕ), ಎರಡನೆಯವಳು ವತ್ಸಲಾ, ನಂತರ ಶಕುಂತಲಾಬಾಯಿ(ದೊಡ್ಡವ್ವಾ), ಕೊನೆಯವಳು ಅನಸೂಯಾ ಇವರಲ್ಲಿ ಸುಬ್ಬಕ್ಕನನ್ನು ಬಿಟ್ಟು ಎಲ್ಲರೂ ಪಾತ್ರ ಮಾಡುತ್ತಿದ್ದರು. ಸುಶ್ರಾವ್ಯವಾಗಿ ಹಾಡುತ್ತಿದ್ದರು. ಶಾಲೆಯನ್ನೂ ಕಲಿತಿದ್ದರು. ನನ್ನ ಅತ್ತಿಗೆಯರು- ನಾದಿಯರು ಕೂಡ ಹಾಡುತ್ತಾರೆ. ‘ನಿಮ್ಮವ್ವಾ, ಒಂದು ಮುಷ್ಟಿ ಉದಾರತೆಯನ್ನು ತನ್ನ ಸೊಸೆಯರಿಗೂ ತೋರಿಸ್ಬೇಕಿತ್ತು’ ಎಂದು ಇದೆಲ್ಲ ಕಥೆ ಕೇಳುತ್ತ ನನ್ನ ಮಾವನಿಗೆ ಅಂದರೆ ‘ಆಕಿನss…’ ಎಂದು ನಗುತ್ತಿದ್ದರು.
ಅನಕ್ಷರತೆ, ಬಾಲ್ಯವಿವಾಹ, ಬಡತನ, ಜಾತಿ – ಧರ್ಮದ ಸಮಸ್ಯೆ, ಸಾಮಾಜಿಕ ಅಸಮಾನತೆ, ಸ್ತ್ರೀ ಸ್ವಾತಂತ್ರ, ಸ್ವಾತಂತ್ರದ ಹೋರಾಟ, ಸ್ವದೇಶಿ ಆಂದೋಲನ, ಗಾಂಧಿತತ್ವ ಇವೆಲ್ಲ ಗರುಡರ ನಾಟಕದ ವಸ್ತುಗಳಾಗಿದ್ದವು. ಅವೆಲ್ಲವೂ ಯಶಸ್ವಿ ಪ್ರಯೋಗವಾದವು. ಅವರು ಮೊದಲು ತಿಲಕರ ಅನುಯಾಯಿಯಾಗಿದ್ದರೂ ನಂತರ ಗಾಂಧಿತತ್ವಕ್ಕೆ ಬದಲಾಯಿಸಿ ಕೊಂಡರು. ಆದರೆ ಇವು ಯಾವುದೂ ಮನೆಯೊಳಗೆ ಬರಲಿಲ್ಲವೆಂದು ನನ್ನ ಈ ಕಾಲಘಟ್ಟದ ಅನಿಸಿಕೆ. ಮನೆಯೊಳಗಿನ ವ್ಯವಹಾರಕ್ಕೆ ಅವರೆಂದೂ ತಲೆಹಾಕಲಿಲ್ಲ. ಅದೆಲ್ಲವೂ ಭೀಮಕ್ಕನದೆ ಆಗಿತ್ತು. ಆಕೆಗೆ ನಿರಂತರ ಸಂಸಾರ ಸಾಗಿಸುವ ಒತ್ತಡ.
ಭೀಮಕ್ಕ ಅಂಗಳದಲ್ಲಿ ಕೂತಿದ್ದಳೆಂದರೆ ರಸ್ತೆಯಲ್ಲಿ ಓಡಾಡುವ ಹೆಣ್ಣುಮಕ್ಕಳು ಕೂಡ ಆಕೆಯ ಮುಂದೆ ತಲೆಯ ಮೇಲೆ ಸೆರಗು ಎಳೆದುಕೊಂಡು ಹೋಗುತ್ತಿದ್ದರಂತೆ!
ನಾನು ಆ ಮನೆ ಪ್ರವೇಶಿಸಿದಾಗ ಆ ಮನೆಯ ಎಲ್ಲ ಹೆಣ್ಣುಮಕ್ಕಳು ಪ್ರೀತಿಯಿಂದಲೇ ಕಂಡರು. ನಾಟಕದವಳು ಎಂದು ಸಂಭ್ರಮಿಸಿದರು. ನಾಟಕ, ರಿಹರ್ಸಲ್, ರಂಗಶಿಬಿರ ಅಂತೆಲ್ಲ ಓಡಾಡುತ್ತ, ಗಂಡ – ಮಾವನೊಂದಿಗೆ ವಾದಿಸುತ್ತ ನನಗೆ ಹೇಗೆ ಬೇಕೊ ಹಾಗಿದ್ದರೆ ನನ್ನತ್ತೆ ಆಶ್ಚರ್ಯ ಮತ್ತು ಅಭಿಮಾನದಿಂದ ನೋಡುತ್ತಿದ್ದರು. ಊಟದ ಹೊತ್ತಲ್ಲಿ ನಾನಿಲ್ಲದಿದ್ದರೆ ‘ರಜನಿಗಂತ ತೆಗದಿಟ್ಟೇನಿ’ ನನಗಾಗಿ ಊಟ ತೆಗೆದಿಡುತ್ತಿದ್ದರು. ಕೊನೆಯಕಾಲದಲ್ಲಿ ಪಾರ್ಕಿನ್ಸನ್ ಆಗಿ ಬುದ್ಧಿಸ್ವಾಧೀನ ತಪ್ಪಿದರೂ ‘ಚಾ ಮಾಡ್ಲೀ…ಅಡಗೆ ಎಷ್ಟು ಅದs..’ ಎನ್ನುತ್ತಲೇ ಕಾಲವಾದರು.
(ನಾಳೆಯ ಕಥೆಗಾಗಿ ನಿರೀಕ್ಷಿಸಿ…)
ಇದನ್ನೂ ಓದಿ : Theatre Stories : ‘ಬ್ಹಾಳ ಒತ್ತಾಯಿಸಿದ್ರ ನಾನ ನಿಮಗ ಕೇಶಮುಂಡನ ಮಾಡ್ತೀನ್ರೀ ಅತ್ತಿ !’
Published On - 6:17 pm, Sat, 14 August 21