Theatre Stories : ‘ಬ್ಹಾಳ ಒತ್ತಾಯಿಸಿದ್ರ ನಾನ ನಿಮಗ ಕೇಶಮುಂಡನ ಮಾಡ್ತೀನ್ರೀ ಅತ್ತಿ !’

Women Empoverment : ‘ಗಂಡ ಬಿಟ್ಟನಂತರ ಹಣಕ್ಕಾಗಿ ಯಾರ ಬಳಿಯೂ ಹಣ ಕೇಳಲಿಲ್ಲ, ಭಾರತವನ್ನೆಲ್ಲ ಸುತ್ತಿದಳು, ಸಾಮಾನ್ಯರಿಗೆ ಸಾಧ್ಯವಾದಷ್ಟು ನೆರವಾದಳು, ಅನುಭಾವಿಕವಿಯಾದಳು. ಕೆಲವು ಹಳ್ಳಿಗಳಲ್ಲಿ ಆಕೆಯ ಸ್ಮರಣೆಯ ದಿನವನ್ನು ಇಂದಿಗೂ ಆಚರಿಸುತ್ತಾರೆ.’ ರಜನಿ ಗರುಡ

Theatre Stories : ‘ಬ್ಹಾಳ ಒತ್ತಾಯಿಸಿದ್ರ ನಾನ ನಿಮಗ ಕೇಶಮುಂಡನ ಮಾಡ್ತೀನ್ರೀ ಅತ್ತಿ !’
ರಂಗನಿರ್ದೇಶಕ ರಜನಿ ಗರುಡ ಮತ್ತು ‘ಉಗ್ರಕಲ್ಯಾಣ’ ನಾಟಕದಲ್ಲಿ ಮೌಲ್ವಿಯಾಗಿ ಶಕುಂತಲಾಬಾಯಿ ಗರುಡ (ದೊಡ್ಡವ್ವ)
Follow us
|

Updated on:Aug 13, 2021 | 9:09 PM

‘ಟಿವಿ9 ಕನ್ನಡ ಡಿಜಿಟಲ್ ; ಜಗನ್ನಾಟಕ ಮಹಾತ್ಮೆ’ (Kannada Theatre) ಹೊರಗೆ ಧೋ ಎಂದು ಮಳೆ ಸುರಿಯುತ್ತಿದೆ. ಕೊರೊನಾದಿಂದ ನಾಟಕ ಪ್ರದರ್ಶನಗಳಿಲ್ಲದೆ ರಂಗಕಲಾವಿದರ ಬದುಕಿಗೆ ತಾತ್ಕಾಲಿಕವಾಗಿ ಪರದೆ ಇಳಿಬಿದ್ದಂತಾಗಿ ಮನಸ್ಸು ಮ್ಲಾನವಾಗಿದೆ. ಆದರೂ ಶ್ರಾವಣ ನಿಂತಿದೆಯಾ, ನಾಳೆ ಭಾದ್ರಪದವೂ ಬರುತ್ತದೆ. ಎಷ್ಟಂತ ಮನಸ್ಸನ್ನು ಕಟ್ಟಿಹಾಕಿಕೊಳ್ಳುವುದು? ಬನ್ನಿ ಹಾಗಿದ್ದರೆ. ಈ ‘ಜಗನ್ನಾಟಕ ಮಹಾತ್ಮೆ’ಗೆ ಮೊದಲೇ ಟಿಕೆಟ್ ಬುಕ್ ಮಾಡಬೇಕಾದ ಅವಸರವಿಲ್ಲ. ಆಟೋ, ಕಾರು, ಬಸ್ಸು ಹಿಡಿದು ಓಡುವ ಜಂಜಾಟವಿಲ್ಲ. ಎಲ್ಲಿದ್ದೀರೋ ಅಲ್ಲೇ ಇದ್ದು ಓದುತ್ತಾ ಹೋದಂತೆ ಸಮಕಾಲೀನ ದೃಷ್ಟಿಕೋನದ ಹಿನ್ನೆಲೆಯಲ್ಲಿ ನಮ್ಮ ರಂಗಕಲಾವಿದರು ಹಂಚಿಕೊಳ್ಳುವ ಅನುಭವ ಕಥನಗಳು ನಿಮ್ಮೆದುರು ಅರಳುತ್ತ ಹೋಗುತ್ತವೆ.

*

ಧಾರವಾಡದಲ್ಲಿ ವಾಸಿಸುತ್ತಿರುವ ರಂಗಕಲಾವಿದೆ, ರಂಗನಿರ್ದೇಶಕಿ, ರಜನಿ ಗರುಡ ಅವರು ವಿಶಿಷ್ಟ ವ್ಯಕ್ತಿತ್ವದ ಕಲಾವಿದೆ ಶಕುಂತಲಾಬಾಯಿ ಗರುಡ ಅವರನ್ನು ಕಟ್ಟಿಕೊಟ್ಟಿದ್ದು ಅತ್ಯಂತ ಮನೋಜ್ಞವಾಗಿದೆ.

*

(ಭಾಗ 2)

ಅಧ್ಯಾತ್ಮ ಎಂತಲೊ, ಸಾಂಪ್ರದಾಯಿಕ ಆಚರಣೆ ಎಂತಲೊ ತಮಗಿದ್ದ ಸ್ವಲ್ಪ ಅವಕಾಶದಲ್ಲಿ ಚೌಕಟ್ಟನ್ನು ಸದ್ದಿಲ್ಲದೆ ಜಿಗಿದು ನಡೆಯುವ ಹೆಣ್ಣುಮಕ್ಕಳನ್ನು ಕಂಡಿದ್ದೇವೆ. ಅದು ಯಾರೂ ಬೆರಳುಮಾಡಿ ತೋರಿಸಿ ಆಡಿಕೊಳ್ಳಲು ಬಾರದಂತೆ ಮಾಡಿಕೊಂಡ ರಹದಾರಿಯೂ ಹೌದು. ಅಲ್ಲಿ ತಮ್ಮದೇ ಒಂದು ಆವರಣ ಕಟ್ಟಿಕೊಂಡವರೂ ಇತಿಹಾಸದಲ್ಲಿದ್ದಾರೆ. ಮೇಲ್ನೋಟಕ್ಕೆ ಇದು ಬಹಳ ಗುರುತರವಾದದ್ದಲ್ಲದಿದ್ದರೂ ಹೆಣ್ಣಿನ ನಡೆಯಲ್ಲಿ ಬಹಳ ಮಹತ್ವದ್ದು.

ರಂಗಭೂಮಿಯ ಆಚೆಈಚೆ ಹರಡಿಕೊಂಡಿರುವ ಹೆಣ್ಣುಮಕ್ಕಳನ್ನು ಗಮನಿಸಿದರೆ ಸಮಾಜದ ಮತ್ತು ತಮ್ಮದೇ ಕುಟುಂಬದ ಕಟ್ಟುಪಾಡುಗಳನ್ನು ಅಲ್ಲಾಡಿಸಿದ ಹೆಜ್ಜೆಗುರುತುಗಳನ್ನು ಕಾಣಬಹುದು.

ಗರುಡ ಸದಾಶಿವರಾಯರ ನಾಲ್ಕನೆಯ ಮಗಳು ಶಕುಂತಲಾಬಾಯಿಯ ಕುರಿತು. ಆಕೆ ನಟಿ, ಸಮಾಜಸೇವಕಿ, ಅಧ್ಯಾತ್ಮದ ಸಾಧಕಿ, ಕವಯಿತ್ರಿ, ಹಾಡುಗಾರ್ತಿ ಅಲ್ಲದೆ ಪ್ರವಚನ, ಚಿತ್ರಕಲೆ, ನರ್ಸಿಂಗ್ ಹೀಗೆ ಇನ್ನೂ ಹಲವು ಹವ್ಯಾಸಗಳ ಮೂಲಕ ಉತ್ತರಕರ್ನಾಟಕದ ಭಾಗದಲ್ಲಿ ಗುರುತಿಸಿಕೊಂಡಾಕೆ. ಸದೃಢವಾದ ಸುಂದರಿ ಆಕೆ.  ಗಟ್ಟಿಯಾದ ಧ್ವನಿಯಿತ್ತು. ಶಾಸ್ತ್ರೀಯವಾಗಿ ಸಂಗೀತ ಕಲಿಯದಿದ್ದರೂ, ಶೃತಿಪೆಟ್ಟಿಗೆ ಮತ್ತು ಚಿಟಿಕಿ ಬಾರಿಸುತ್ತ ಸುಶ್ರಾವ್ಯವಾಗಿ ಹಾಡಿದ ರೆಕಾರ್ಡ್ ನಮ್ಮ ಸಂಗ್ರಹದಲ್ಲಿದೆ.

kannada theatre garud

ಶಕುಂತಲಾಬಾಯಿ ಗಂಡ ಕೃಷ್ಣರಾವ್ ಕುಲಕರ್ಣಿಯವರೊಂದಿಗೆ. ಹಸ್ತಾಕ್ಷರದೊಳಗಿನ ಪದ್ಯ ಶಕುಂತಲಾಬಾಯಿ ರಚಿತ. 

ನಾನು ಅವರನ್ನು ನೋಡಿಲ್ಲ, ಅವರು ಉಪಯೋಗಿಸುತ್ತಿದ್ದ ಪಾತ್ರೆಗಳು, ಅವರ ಸೀರೆಗಳನ್ನೆಲ್ಲ ನನ್ನತ್ತೆ, ನೀನು ನಾಟಕದವಳು ನೀನೇ ಇದನ್ನೆಲ್ಲ ಇಟ್ಟುಕೊ ಎಂದು ನನಗೆ ಕೊಟ್ಟಿದ್ದಾರೆ. ಮನೆಯವರು ಮತ್ತು ಊರವರೆಲ್ಲ ‘ದೊಡ್ಡವ್ವ’ ಎಂದೇ ಆಕೆಯನ್ನು ಕರೆಯುತ್ತಿದ್ದರು.

ಹದಿನಾಲ್ಕನೆಯ ವಯಸ್ಸಿನಲ್ಲಿ ಗದಗದ ಕೃಷ್ಣರಾವ್ ಕುಲಕರ್ಣಿಯವರೊಂದಿಗೆ ದೊಡ್ಡವ್ವನ ವಿವಾಹವಾಯಿತು. ಕೃಷ್ಣರಾವ್ ಹೈದರಾಬಾದನಲ್ಲಿ ಸಿಂಡಿಕೇಟ್ ಬ್ಯಾಂಕಿನ ಮ್ಯಾನೇಜರ್ ಇದ್ದರು. ದಂಪತಿಗಳಿಗೆ ಹೆಣ್ಣುಮಗು ಹುಟ್ಟಿ ಕೆಲದಿನಗಳ ಬಳಿಕ ತೀರಿಕೊಂಡಿತು. ಅಲ್ಲಿಂದ ದೊಡ್ಡವ್ವ ಮಾನಸಿಕವಾಗಿ ಬಹಳ ಕುಗ್ಗಿದಳು. ಮೊದಲೇ ಹಟ, ಸಿಟ್ಟು, ನಿಷ್ಠುರ ಸ್ವಭಾವದಾಕೆಗೆ ವಿಕ್ಷಿಪ್ತ ಗುಣವೂ ಸೇರಿಕೊಂಡಿತು. ಗಂಡನೊಡನೆ ಬಾಳುವೆ ಮಾಡಲಾಗಲಿಲ್ಲ. ಅಷ್ಟರಲ್ಲಿ ಆತನಿಗೂ ಇನ್ನೊಬ್ಬಾಕೆಯೊಡನೆ ಸಂಬಂಧವಾಗಿತ್ತು. ದೊಡ್ಡವ್ವ ತಂದೆಗೆ ತಿಳಿಸಿದರು. ಅವರು ವಿಚ್ಛೇದನ ಕೊಡಲು ಹೇಳಿದರು. ಆದರೆ ಆಕೆ ಅದೇನನ್ನೂ ಮಾಡದೆ ತಮ್ಮ ಸಾಮಾನಿನೊಡನೆ ತವರಿಗೆ ಬಂದುಬಿಟ್ಟರು. ಸದಾಶಿವರಾಯರು ಓದು ಮತ್ತು ಬರೆವಣಿಗೆ ಮಾಡು, ಸಮಾಜಸೇವೆ ಮಾಡು ಎಂದರಂತೆ. ಅದರಂತೆ ಬದುಕಿನ ಕೊನೆಯವರೆಗೂ ಹಾಗೆಯೇ ಮಾಡಿದಳು.

ಗದುಗಿನ ಚಾಫೇಕರ್ ದವಾಖಾನೆಯಲ್ಲಿ ನರ್ಸ್ ಆಗಿ ಸೇರಿಕೊಂಡಳು. ಮಧುಕರಿ ಮಾಡುತ್ತಿದ್ದಳು. ಆಧ್ಯಾತ್ಮದ ಕಡೆಗೆ ಹೆಚ್ಚು ಆಸಕ್ತಿ ಬೆಳೆಯಿತು. ಕೀರ್ತನ, ಪ್ರವಚನ, ಭಕ್ತಿ ಹಾಡುಗಳನ್ನು ಬರೆಯುವುದು, ತೀರ್ಥಯಾತ್ರೆ ಮಾಡುವುದು, ರಾಮನಾಮ ಹೇಳುತ್ತ ಚಿತ್ರಪಟ ಮಾಡಿ ಪಟಕಥಾ ಕಾಲಕ್ಷೇಪ ಮಾಡುತ್ತ ತವರಿನ ಸಂಸಾರದಿಂದ ಹೊರಗೇ ಉಳಿದಳು.

ನಾಟಕವೆಂದರೆ ಇನ್ನಿಲ್ಲದ ಹುರುಪಿನಿಂದ ಬರುತ್ತಿದ್ದಳಂತೆ. ಆದ್ದರಿಂದ ನನ್ನ ಮಾವನನ್ನು ಮತ್ತು ಅವರ ಸಂಸಾರವನ್ನು ಕೊನೆಯವರೆಗೂ ಪ್ರೀತಿಯಿಂದ ಕಂಡಳು. ಸದಾಶಿವರಾಯರ ಕಂಪನಿಯಲ್ಲಿ ಆಕೆ ಅಭಿನಯಿಸಿಲ್ಲ ಆದರೆ ನನ್ನ ಮಾವ ಕಂಪನಿ ಮಾಡಿದಾಗ ತಾನೂ ಅದರ ಜವಾಬ್ದಾರಿ ಹೊತ್ತಳು. ಸದಾಶಿವರಾಯರ ನಾಟಕದ ವಸ್ತ್ರದ ಜವಾಬ್ದಾರಿ ಅವರ ಮೊದಲ ಮಗಳು ಸುಬ್ಬಕ್ಕನದಾಗಿತ್ತು. ಅವರೂ ದೊಡ್ಡವ್ವನೊಡನೆ ಕಂಪನಿಯಲ್ಲಿರತೊಡಗಿದರು.

ದೊಡ್ಡವ್ವ ಬಹಳ ಸಮಯ ಲಕ್ಷ್ಮೇಶ್ವರದ ಸೋಮೇಶ್ವರದ ಗುಡಿಯಲ್ಲಿರುತ್ತಿದ್ದಳು. ಅಲ್ಲಿಂದ ಕಳಸದ ಗೋವಿಂದ ಭಟ್ಟರ ಮನೆಗೆ, ಶರೀಫ್ ಸಾಹೇಬರ ಗದ್ದುಗೆಗೆ ಹೋಗಿಬರುತ್ತಿದ್ದಳು. ಸುತ್ತಮುತ್ತಲ ಹಳ್ಳಿಯ ಜನ ಆಕೆಯನ್ನು ಪ್ರವಚನಕ್ಕೆ, ಪಟಕಥಾಕ್ಕೆ, ಭಕ್ತಿಸಂಗೀತಕ್ಕೆ ಬಂದು ಕರೆದುಕೊಂಡು ಹೋಗುತ್ತಿದ್ದರಂತೆ. ಅಷ್ಟೇ ಅಲ್ಲದೆ ಆಸ್ತಿಯ ಜಗಳ, ಗಂಡಹೆಂಡತಿ ಜಗಳ, ನೆರೆಹೊರೆ ಜಗಳ, ವರಕನ್ಯಾ ವ್ಯವಹಾರ, ಯಾರದ್ದೋ ಪ್ರಸೂತಿ ಕೆಲಸ, ಯಾರಿಗಾದರೂ ಆರೋಗ್ಯ ತಪ್ಪಿದರೆ ಅವರ ಆರೈಕೆ ಹೀಗೆ ದೊಡ್ಡವ್ವ ಹಲವುಕಡೆ ಹಲವು ರೀತಿಯಿಂದ ಜನರೊಡನಾಡಿಯಾಗಿದ್ದಳು. ಅಣ್ಣ ತಮ್ಮಂದಿರಿಗೆ ಹಣದ ಅವಶ್ಯಕತೆ ಇದ್ದಾಗ ಅವರಿಗೂ ಕೊಡುತ್ತಿದ್ದಳು.

kannada theatre garud

ಪಾಣಿಗ್ರಹಣ ನಾಟಕದಲ್ಲಿ ಹುಲಿಮನೆ ಸೀತಾರಾಮಶಾಸ್ತ್ರಿಯವರೊಂದಿಗೆ ಶಕುಂತಲಾಬಾಯಿ

ಪಾದುಕಾಪಟ್ಟಾಭಿಷೇಕ ನಾಟಕದಲ್ಲಿ ಮಂಥರೆ , ಜಾಗೃತ ರಾಷ್ಟ್ರ ನಾಟಕದಲ್ಲಿ ಮಲ್ಲಮ್ಮ , ಹುಲಿಮನೆ ಸೀತಾರಾಮ ಶಾಸ್ತ್ರಿಗಳೊಡನೆ ಪಾಣಿಗ್ರಹಣ ನಾಟಕ, ಸಂತ ಚೌಕಾಮೇಳ ಹೀಗೆ ಕೆಲವೇ ನಾಟಕಗಳಲ್ಲಿ ಅಭಿನಯಿಸಿದ್ದರೂ ಅದನ್ನು ಮರೆಯಲಾಗದಂತೆ ಅಭಿನಯಿಸುತ್ತಿದ್ದಳು ಎಂದು ಮನೆಯಲ್ಲಿ ಹೇಳುವುದು ಕೇಳಿದ್ದೇನೆ. ಆದರೆ ಮನೆಯಲ್ಲಿ ನಾಟಕ ಶುರುವಾಯಿತೆಂದರೆ ಉತ್ಸಾಹದಿಂದ ಓಡಾಡಿ ಟಿಕೆಟ್ ಸೇಲ್ ಮಾಡಿ, ಡೊನೇಶನ್ ಕೂಡ ಸೇರಿಸಿ ಕೊಡುತ್ತಿದ್ದಳಂತೆ.

ಕೃಷ್ಣರಾವ್ ಅವರ ತಾಯಿ ಇರುವವರೆಗೂ ಮನೆಗೆ ಬಂದು ಹೋಗಲು ದೊಡ್ಡವ್ವನಿಗೆ ಹೇಳುತ್ತಿದ್ದರಂತೆ. ನನ್ನ ಮಗ ನಿನಗೆ ಅನ್ಯಾಯ ಮಾಡಿದ ಎಂದು ಹೇಳಿ ಮರುಗುತ್ತಿದ್ದರಂತೆ. ಕೃಷ್ಣರಾವ್ ಮತ್ತು ಶಕುಂತಲಾಬಾಯಿಯವರ  ಸಂಸಾರ ಎಂದೂ ಸರಿಹೋಗಲಿಲ್ಲ. ತಿರುಗಿ ಗದಗಕ್ಕೇ ಬಂದು ಬೇಗ ತೀರಿಕೊಂಡರು. ಮಧ್ಯ ವಯಸ್ಸು ದಾಟಿದ ದೊಡ್ಡವ್ವನಿಗೆ ಕೇಶಮುಂಡನ ಮಾಡಿಕೊಳ್ಳಲು ಬ್ರಾಹ್ಮಣ ಸಮುದಾಯದವರು ಒತ್ತಾಯಿಸಿದರು. ಅದಕ್ಕೆ ಆಕೆ “ನಾನೇ ನಿಮ್ಮ ಕೇಶಮುಂಡನ ಮಾಡ್ತೇನಿ” ಎಂದು ದೊಡ್ಡವ್ವ ಅಬ್ಬರಿಸಿದ್ದರಂತೆ. ಹುಯಿಲಗೋಳ ನಾರಾಯಣರಾಯರು ಕೂಡ ಬಂದು ಗರುಡರಿಗೆ ಅದರಲ್ಲೆಲ್ಲ ನಂಬಿಕೆ ಇರಲಿಲ್ಲ ಎಂದ ಮೇಲೆ ಒತ್ತಾಯವು ನಿಂತಿತು. ಸದಾಶಿವರಾಯರು ತೀರಿಕೊಂಡಾಗಲೂ ಅವರ ಪತ್ನಿ ಭೀಮಾಬಾಯಿಗೆ ಕೇಶಮುಂಡನದ ಒತ್ತಡವಿತ್ತು. ಆದರೆ ಅವರು ಯಾರೂ ಕೇಶಮುಂಡನ ಮಾಡಲು ಬಿಡಲಿಲ್ಲ, ಬಿಳಿಯ ಸೀರೆಯನ್ನು ತೊಡಲೂ ಇಲ್ಲ.

1961ರಲ್ಲಿ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗದುಗಿನಲ್ಲಿ ಜರುಗಿತ್ತು. ಅಲ್ಲಿ ಜಾಗೃತರಾಷ್ಟ್ರ ನಾಟಕ ನನ್ನ ಮಾವನವರಿಗೆ ಮಾಡಲು ಆಮಂತ್ರಣವಿತ್ತು. ಸಮ್ಮೇಳನದ ಸಭಾಕಾರ್ಯಕ್ರಮ ಮುಗಿಯದೆ ನಾಟಕಕ್ಕೆ ಬಹಳ ತಡವಾಯಿತು. ಬಣ್ಣ ಹಚ್ಚಿ ಬಹಳ ಹೊತ್ತು ಕಾದ ದೊಡ್ಡವ್ವ, ತಾಳ್ಮೆ ತಪ್ಪಿ ಕಾಸ್ಟ್ಯೂಮ್ ಕಳಚಿಟ್ಟು ‘ಕಲಾವಿದರೆಂದರೆ ಕಿಮ್ಮತ್ತಿಲ್ಲೇನ್ರಿ…’ ಎಂದು ಸಂಘಟಕರಿಗೆ ದಬಾಯಿಸತೊಡಗಿದಳಂತೆ. ‘ಆಕಿನ್ನಾ ಶಾಂತ ಮಾಡಿ ಅಂತೂ ನಾಟಕ ಮಾಡಿ ಮುಗ್ಸಿದ್ವಿ…ಅಯ್ಯಪ್ಪಾ’ ಎಂದು ನನ್ನ ಮಾವ ಉಸ್ಸಪ್ಪಾ ಎಂದಿದ್ದರು.

kannada theatre garud

ಶಕುಂತಲಾಬಾಯಿಯವರು ಚಿತ್ರಿಸಿದ ಕಥಾಪಟಗಳು

ದೊಡ್ಡವ್ವನ ನಿಷ್ಠುರ ಮತ್ತು ನೇರ ನಡೆ ನುಡಿ ಕೊನೆಯವರೆಗೂ ಇತ್ತು. ‘ನಾಳೆ ನಾನು ಇರಾಂಗಿಲ್ಲಾ. ಇಷ್ಟದಿನಾ ಭಾಳ ಜಗಳಾಡೇವಿ ಇಟ್ಕೋ ಇದನ್ನಾ’ ಎಂದು ಹೇಳಿ, ತಮ್ಮ ಕೊರಳಲ್ಲಿನ ಸ್ಫಟಿಕದ ಮಾಲೆಯನ್ನು ತಮ್ಮನಿಗೆ ತೆಗೆದುಕೊಟ್ಟು ಮಾರನೆಯ ದಿನ ಮಾತಿನಂತೆಯೇ ಪ್ರಾಣ ಬಿಟ್ಟಳು ದೊಡ್ಡವ್ವ. ಗಂಡ ಬಿಟ್ಟನಂತರ ಹಣಕ್ಕಾಗಿ ಯಾರೊಡನೆಯೂ ಹಣ ಕೇಳಲಿಲ್ಲ, ಭಾರತವನ್ನೆಲ್ಲ ಸುತ್ತಿದಳು, ಸಾಮಾನ್ಯರಿಗೆ ಸಾಧ್ಯವಾದಷ್ಟು ನೆರವಾದಳು, ಅನುಭಾವಿಕವಿಯಾದಳು. ಕೆಲವು ಹಳ್ಳಿಗಳಲ್ಲಿ ಆಕೆಯ ಸ್ಮರಣೆಯ ದಿನವನ್ನು ಇಂದಿಗೂ ಆಚರಿಸುತ್ತಾರೆ. ದೊಡ್ಡವ್ವನ ಕಥೆ ಕೇಳುತ್ತ ನಾನು ಇಷ್ಟು ಗಟ್ಟಿತನ ಎಲ್ಲಿಂದ ಬಂತು ಈಕೆಗೆ ಎಂದು ಯೋಚಿಸುವೆ. ಅನಕ್ಷರಸ್ಥ ಹೆಣ್ಣು ರಂಗಭೂಮಿಗೆ ಬಂದು ಅಕ್ಷರ ಕಲಿಯುತ್ತಾಳೆ, ಎಂತಹ ಸಂದರ್ಭದಲ್ಲಿಯೂ ತನ್ನ ತಾ ಸಂತೈಸಿಕೊಳ್ಳುತ್ತಾಳೆ, ಸಾಮಾಜಿಕ ಸ್ಥಾನಮಾನ ಗಳಿಸಿಕೊಳ್ಳುತ್ತಾಳೆ ಎಂದರೆ ಇದು ಹೆಣ್ಣಿನ ಗರಿಮೆ ಅಲ್ಲದೆ ಇನ್ನೇನು?

(ರಜನಿಯವರು ನಾಳೆಗೆ ಮತ್ತೆ ಯಾರ ಕಥೆ ಹೇಳಬಹುದು? ಕಾಯೋಣ.)

ಇದನ್ನೂ ಓದಿ : Theatre Stories : ‘ರಾತ್ರಿಯೆಲ್ಲ ನಾಟಕ ಮಾಡಿ ಹಗಲು ನಿದ್ರಿಸುವ ಗಂಡನ ಬಗೆಗೆ ಮಾತಾಡುವುದೇನಿರುತ್ತದೆ?’

Published On - 8:05 pm, Fri, 13 August 21

ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್