New Novel : ಅಚ್ಚಿಗೂ ಮೊದಲು : ವಾರದೊಪ್ಪತ್ತಿನಲ್ಲಿ ಓದುಗರ ಕೈಗೆ ವಿವೇಕ ಶಾನಭಾಗರ ‘ಸಕೀನಾಳ ಮುತ್ತು’

Vivek Shanbhag : ‘ಹೊಸತಲೆಮಾರಿನ ಒಲವು ನಿಲುವುಗಳ ಕುರಿತು ಮನೆಯಲ್ಲಿ ಚರ್ಚಿಸುವಾಗ ವಿಜಿಯ ಒಳನೋಟಗಳೇ ನನಗಿಂತ ಹೆಚ್ಚು ಹರಿತವಾಗಿರುತ್ತವೆಂದು ಒಪ್ಪಿಕೊಳ್ಳಲು ನನಗೆ ಯಾವ ಮುಜುಗರವೂ ಇಲ್ಲ. ಅವಳ ಉದಾಹರಣೆ ಮತ್ತು ವಾದಗಳನ್ನು ತಳ್ಳಿಹಾಕುವುದು ಎಂದಿಗೂ ಸುಲಭವಲ್ಲ.’

New Novel : ಅಚ್ಚಿಗೂ ಮೊದಲು : ವಾರದೊಪ್ಪತ್ತಿನಲ್ಲಿ ಓದುಗರ ಕೈಗೆ ವಿವೇಕ ಶಾನಭಾಗರ ‘ಸಕೀನಾಳ ಮುತ್ತು’
ಖ್ಯಾತ ಕಾದಂಬರಿಕಾರ ವಿವೇಕ ಶಾನಭಾಗ
Follow us
ಶ್ರೀದೇವಿ ಕಳಸದ
|

Updated on:Aug 20, 2021 | 11:55 AM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ಸಕೀನಾಳ ಮುತ್ತು (ಕಾದಂಬರಿ) ಲೇಖಕರು : ವಿವೇಕ ಶಾನಭಾಗ ಪುಟ : 144  ಬೆಲೆ : ರೂ. 150 ಮುಖಪುಟ ವಿನ್ಯಾಸ : ರವಿಕುಮಾರ ಕಾಶಿ ಪ್ರಕಾಶನ : ಅಕ್ಷರ ಪ್ರಕಾಶನ, ಹೆಗ್ಗೋಡು

*

ಕಾದಂಬರಿಯ ವಸ್ತುವಿಗನುಗುಣವಾಗಿ ಅದನ್ನು ನಿರೂಪಿಸುವಾಗ ಯಾವ ಪದರವು ಮಬ್ಬುಗೊಳ್ಳುತ್ತಿರಬೇಕು, ಯಾವ ಪದರವು ರಬ್ಬುಗೊಳ್ಳುತ್ತಿರಬೇಕು ಎಂಬ ಸೂಕ್ಷ್ಮತೆ ಇದ್ದಾಗ, ಓದುಗರಿಗೆ ಬೇಕಾದ ಪದರವು ತನ್ನಿಂತಾನೇ ಸೃಷ್ಟಿಯಾಗುತ್ತಾ ಹೋಗುತ್ತದೆ. ಇಂಥ ಸೂಕ್ಷ್ಮ ಕಲೆಗಾರಿಕೆಯನ್ನು ಬಲ್ಲ ಕೆಲವೇ ಬರಹಗಾರರಲ್ಲಿ ಹಿರಿಯ ಕಥೆಗಾರ ವಿವೇಕ ಶಾನಭಾಗ ಕೂಡ ಒಬ್ಬರು. ‘ಊರು ಭಂಗ’ದ ನಂತರ, ಅಂದರೆ ಸುಮಾರು ಆರು ವರ್ಷಗಳ ತರುವಾಯ ಅವರು ಬರೆದ ಕಾದಂಬರಿ ‘ಸಕೀನಾಳ ಮುತ್ತು’ ಇದೀಗ ಬಿಡುಗಡೆಗೆ ಸಿದ್ಧವಾಗಿದ್ದು, ಇನ್ನೇನು ಓದುಗರ ಕೈಸೇರಲಿದೆ. ಇದರ ಆಯ್ದ ಭಾಗ ನಿಮ್ಮ ಓದಿಗೆ.

* ನನ್ನ ಕಣ್ಣು ಬಾಗಿಲ ಪಕ್ಕದ ಗೋಡೆಯೊಳಗೆ ಹುದುಗಿಸಿದ್ದ ಕಪಾಟಿನೊಳಗಿನ ಪುಸ್ತಕಗಳತ್ತ ನಿರುದ್ದಿಶ್ಯವಾಗಿ ಹೊರಳಿತು. ಅಲ್ಲಿ ಲರ್ನ್ ಸಿ++ ಎಂಬುದರಿಂದ ಹಿಡಿದು ಬದುಕನ್ನು ಒಂದೇ ದಿನದಲ್ಲಿ ಹಾದಿಗೆ ತರುವುದು ಹೇಗೆ, ಕರಿಯರ್‌ನ ಏಣಿಯನ್ನು ಸ್ವಯಂಚಾಲಿತಗೊಳಿಸುವ ಕ್ರಮ, ಅನುಭವವನ್ನು ಬೇರೆಯವರ ಖರ್ಚಿನಲ್ಲಿ ಗಳಿಸೋದು ಮುಂತಾದ ಪುಸ್ತಕಗಳಿದ್ದವು. ನಡುವೆ ಜಾಗವಿದ್ದಲ್ಲೆಲ್ಲ ಏನೇನೋ ಸಣ್ಣಪುಟ್ಟ ವಸ್ತುಗಳು. ಅಲ್ಲೇ ಎದುರಿಗೆ ಎರಡು ಫೈಬರ್ ಕುರ್ಚಿಗಳು ಒಂದರ ಮೇಲೊಂದು ಕೂತಿದ್ದವು. ಅವುಗಳ ಮೇಲೆ ನಿತ್ಯ ಬೆಳಿಗ್ಗೆ ಹಾಲಿಗಾಗಿ ಮನೆಬಾಗಿಲಿಗೆ ತೂಗುಬಿಡುವ ಹಳೆಯ ಚೀಲ ಸೊಟ್ಟದಾಗಿ ಬಿದ್ದಿತ್ತು.

ಮಾತು ಮುಂದುವರಿಸದ ನನ್ನ ಚಿತ್ತ ಎತ್ತಲೋ ಹರಿದದ್ದನ್ನು ಗಮನಿಸಿ, ನನ್ನ ನಿರಾಸಕ್ತಿಯನ್ನು ಗ್ರಹಿಸಿ ‘ಬರಲಾ ಸಾರ್’ ಎನ್ನುತ್ತ ಆರ್‌ಕೆ ಎದ್ದ. ಎಮ್‌ಪಿಥ್ರೀ ಅವನನ್ನು ಹಿಂಬಾಲಿಸಿದ.

ಅನಗತ್ಯವಾಗಿ ಕಟುವಾದೆನೇನೋ ಅನಿಸಿ ಬಾಗಿಲು ಮುಚ್ಚುವಾಗ ಸ್ವಲ್ಪ ಮೃದುವಾಗಿ ‘ರೇಖಾ ಫೋನ್ ಮಾಡಿದರೆ ಅವಳಿಗೆ ಖಂಡಿತ ವಿಷಯ ತಿಳಿಸ್ತೀನಿ’ ಅಂದೆ.

‘ಥ್ಯಾಂಕ್ಸ್.’ ಅವರಿಬ್ಬರೂ ಲಿಫ್ಟ್‌ಗಾಗಿ ಕಾಯದೇ ಮೆಟ್ಟಲಿಳಿದು ಹೋದರು.

ಬಾಗಿಲು ಮುಚ್ಚಿ ಬಂದು ನಡೆದದ್ದನ್ನು ವರದಿ ಒಪ್ಪಿಸುವ ಮೊದಲೇ ಅವರಾಡಿದ ಮಾತುಗಳನ್ನು ಕೇಳಿಸಿಕೊಂಡಿದ್ದ ವಿಜಿ ಸಾರನ್ನು ತಳ ಹತ್ತಗೊಡದಂತೆ ಕಲಸುತ್ತ ಹೇಳಿದಳು. ‘ಅಷ್ಟೂ ಗೊತ್ತಾಗಲಿಲ್ಲವಾ? ಅವರೇನು ಇವಳನ್ನು ಕೇಳಿ ಪ್ರಾಜೆಕ್ಟ್ ಮಾಡ್ತಾರಾ? ಈ ಹುಡುಗರು ಅವಳ ಹಿಂದೆ ಬಿದ್ದಿದ್ದಾರಷ್ಟೇ. ಅವಳ ಫೋನ್ ಆಫ್ ಆಗಿದೆಯಂತ ಮಂಗಗಳು ಇಲ್ಲಿಯ ತನಕ ಹುಡುಕಿಕೊಂಡು ಬಂದಿವೆ. ವಯಸ್ಸಿನ ಹುಚ್ಚಾಟಗಳು ಇವೆಲ್ಲ.’

ಬಂದ ಹುಡುಗರಿಗೆ ಅಗತ್ಯಕ್ಕಿಂತ ಹೆಚ್ಚು ಮಾಹಿತಿ ಕೊಟ್ಟೆನೇನೋ ಅನಿಸಿ ಪೆಚ್ಚಾಯಿತು. ‘ಕೇಳಿದ್ದು ಬಿಟ್ಟು ಹೊಸ ಮಾಹಿತಿ ಕೊಡಬಾರದು’ ಎಂಬುದನ್ನು ಓದಿದ್ದು ಎಲ್ಲೆಂದು ನೆನಪು ಮಾಡಿಕೊಳ್ಳಲು ಹೆಣಗಾಡಿದೆ. ಸೌಟು ಆಡಿಸುತ್ತಿದ್ದ ವಿಜಿಯ ಮುಖದಲ್ಲಿ ಸಣ್ಣ ಮಂದಹಾಸವಿದ್ದ ಭಾಸವಾಯಿತು.

‘ಊರಿನ ವಿಳಾಸ ಮಾತ್ರ ಕೊಡಬೇಡ. ಯಾರದೇ ಫೋನ್ ನಂಬರನ್ನೂ ಕೊಡಬೇಡ. ಮಳ್ಳುಗಳು ಬೈಕ್ ಹತ್ತಿ ಹೋದರೂ ಹೋದವೇ’ ಎನ್ನುವಾಗ ಅವಳಲ್ಲಿ ಆತಂಕವಿಲ್ಲದ್ದರಿಂದ ನಿರಾಳನಾದೆ. ಹಾಗಿದ್ದೂ, ವಿಷಯವನ್ನು ಸಂಪೂರ್ಣ ಗ್ರಹಿಸಲು ವಿಫಲನಾಗಿದ್ದಕ್ಕೆ ಅಸಮಾಧಾನವಾಗಿತ್ತು. ಎತ್ತಿಟ್ಟ ಸಾಲುಗಳನ್ನು ವಿಜಿಗೆ ಓದಿ ಹೇಳಲು ಉತ್ಸಾಹ ಸಾಲದೇ, ಕಟ್ಟೆಯ ಅಂಚಿನಲ್ಲಿಟ್ಟ ಪುಸ್ತಕವನ್ನೆತ್ತಿಕೊಂಡು, ಆ ಹುಡುಗರು ಹೊರಟುಹೋಗುವುದನ್ನು ನೋಡಲೆಂದು ಬಾಲ್ಕನಿಗೆ ಬಂದೆ.

acchigoo modhalu sakeenala muttu vivek shanbhag ವಿವೇಕ ಶಾನಭಾಗ ಅವರ ಪ್ರಕಟಿತ ಕೃತಿಗಳು  

ಮೂರನೆಯ ಮಹಡಿಯ ನಮ್ಮ ಫ್ಲ್ಯಾಟಿನ ಪಡಸಾಲೆಯ ಒಂದು ಕಡೆ ಮುಖ್ಯದ್ವಾರವಿದ್ದರೆ ಅದರ ಎದುರು ತುದಿಯಲ್ಲಿ ಬಾಲ್ಕನಿಯಿತ್ತು. ಅಲ್ಲಿಂದ ಕೆಳಗೆ, ಬಲಗಡೆಗೆ ನೋಡಿದರೆ ಬಿಲ್ಡಿಂಗಿನ ಮುಖ್ಯ ಗೇಟು ಮತ್ತು ಅದರಾಚೆಯ ರಸ್ತೆಯೂ ಕಾಣುತ್ತಿತ್ತು. ಕೆಳಗಿಣುಕಿದಾಗ ಮಬ್ಬು ಬೆಳಕಿನಲ್ಲಿ ಸುಮಾರು ಹತ್ತು ಹನ್ನೆರಡು ಹುಡುಗರು ಗೇಟಿನಿಂದ ಹೊರಗೆ ಹೋಗುವುದು ಕಂಡಿತು. ಬಂದವರಿಬ್ಬರು ಆ ಗುಂಪಿನ ನಡುವಲ್ಲಿದ್ದಿರಬೇಕೆಂದು ಊಹಿಸಿದೆ. ಅಂದರೆ, ಇವರಿಬ್ಬರೇ ಮೇಲೆ ಬಂದವರು. ಕೆಳಗೆ ದೊಡ್ಡ ತಂಡವೇ ಇವರನ್ನು ಕಾದು ನಿಂತಿತ್ತು. ಅವರ ನಡಿಗೆಯಲ್ಲೇ ಇರುವ ಒಂದು ಬಗೆಯ ಧಾಡಸೀತನ ಮತ್ತು ಹರೆಯದ ಉಡಾಫೆಯಿಂದ ಕರಕರೆಯಾಯಿತು. ಇಂಥ ಹುಡುಗರ ಮೇಳವನ್ನು ಕಂಡರೆ ಅಸಹನೆಯ ಸಣ್ಣ ಉರಿ ಹೊತ್ತಿಕೊಳ್ಳುತ್ತಿತ್ತು. ಅಪ್ಪಅಮ್ಮಂದಿರ ದುಡ್ಡು ಪೋಲು ಮಾಡುವವರು, ಕಲಿಯುವುದನ್ನು ಬಿಟ್ಟು ಸಮಯ ಹಾಳು ಮಾಡುತ್ತ ಪೋಲಿ ಅಲೆಯುವವರು, ಕಾನೂನನ್ನು ಗಣಿಸದವರು, ಹಿರಿಯರ ಬಗ್ಗೆ ಗೌರವ ಇಲ್ಲದವರು, ಸಮಾಜದ ತೋಲವನ್ನು ನಾಶಮಾಡುವವರು ಹೀಗೆಲ್ಲ ಅನಿಸಿದರೂ ಯಾವುದಕ್ಕೂ ಖಚಿತವಾದ ಆಧಾರ ಸಿಗದೇ ಅಸ್ವಸ್ಥನಾಗುತ್ತಿದ್ದೆ. ಇದೇ ಎಂದು ಗುರುತಿಸಲಿಕ್ಕಾಗದ, ಆದರೆ ಅವರ ಕೂದಲಿನ ವಿನ್ಯಾಸದಲ್ಲೋ, ಓಡಾಡುವ ಧಾಟಿಯಲ್ಲೋ, ನಿಲ್ಲುವ ಭಂಗಿಯಲ್ಲೋ, ಮೋರೆಯ ಮೇಲಿನ ನಿರ್ಲಕ್ಷ್ಯದಲ್ಲೋ, ತೊಟ್ಟ ಶರ್ಟಿನ ವಿನ್ಯಾಸದಲ್ಲೋ ವ್ಯಕ್ತವಾಗುವ ಅವಿಧೇಯತೆ ಮತ್ತು ಬಂಡಾಯ ನನ್ನನ್ನು ಸಣ್ಣಗೆ ರೊಚ್ಚಿಗೆಬ್ಬಿಸುತ್ತಿತ್ತು. ಇಂಥ ಭಾವನೆಗಳನ್ನು ತಾರ್ಕಿಕವಾಗಿ ವಿವರಿಸಲಿಕ್ಕಾಗುತ್ತಿರಲಿಲ್ಲವಾದ್ದರಿಂದ ಅವುಗಳನ್ನು ನುಂಗಿಕೊಳ್ಳದೇ ಬೇರೆ ದಾರಿಯಿರಲಿಲ್ಲ.

ಗೇಟಿನಿಂದ ಹೊರಹೋಗುತ್ತಿರುವ ಗುಂಪಿನ ಕುರಿತು ವಿಜಿಗೆ ಹೇಳಲೋ ಬೇಡವೋ ಎಂದು ಕ್ಷಣ ಯೋಚಿಸಿ ‘ನೋಡಿದ್ಯಾ ವಿಜಿ ಇಲ್ಲಿ’ ಎಂದು ಬಾಲ್ಕನಿಯಿಂದಲೇ ಕರೆದೆ. ಅದೇ ಹೊತ್ತಿಗೆ ಅವಳು ಒಗ್ಗರಣೆಯಲ್ಲಿ ತೊಡಗಿದ್ದರಿಂದ ಅದನ್ನು ಮುಗಿಸಿ ಬರುವ ವೇಳೆಗೆ ಗುಂಪು ಕಣ್ಣಾಚೆ ಹೋಗಿತ್ತು.

‘ಅವರಿಬ್ಬರೇ ಅಲ್ಲ. ದೊಡ್ಡ ಗುಂಪೇ ಬಂದಿತ್ತು.’

‘ಹುಡುಗ್ರು ಬರೋದೇ ಹಾಗೆ. ಒಬ್ಬೊಬ್ರೇ ಬರಲ್ಲಾ. ಅದ್ಯಾಕೆ ಹೆದರ್‍ಕೋತೀಯಾ?’ ಮುಂದಿನ ಮಾತಿಗೂ ಕಾಯದೇ ಒಳಗೆ ಹೋದಳು.

‘ಹೆದರಿಲ್ಲ. ಅವಳ ಸ್ಕೂಲಿನ ಕಾಲದಿಂದಲೂ ಎಷ್ಟೊಂದು ಹುಡುಗರು ಮನೆಗೆ ಬಂದಿದಾರೆ. ಯಾರೂ ಹೀಗೆ ಏನೋ ಮುಚ್ಚಿಡೋರ ಥರಾ ಆಡಿಲ್ಲ ಅಲ್ವಾ? ಬಂದವರನ್ನ ಸರಿಯಾಗಿ ನೋಡಬೇಕಿತ್ತು ನೀನು.’

‘ಅಯ್ಯೋ ಸ್ಕೂಲಿನ ಹುಡುಗರೇ ಬೇರೆ, ಕಾಲೇಜಿನವರೇ ಬೇರೆ. ನಿನಗೆ ಗೊತ್ತಲ್ಲ, ಇದು ದೊಡ್ಡಿ. ನನ್ನ ಕಾಲೇಜಿನಲ್ಲೂ ಇಂಥ ಹುಡುಗರೇ ಇದ್ದಿದ್ದು. ಇಷ್ಟು ವರ್ಷವಾದರೂ ಅದೇ ಸ್ವಭಾವ. ವೇಷ ಬೇರೆ ಅಷ್ಟೇ.’

‘ಬಂದ ಹುಡುಗರು ಏನೋ ಹೊಂಚುಹಾಕ್ತಿದಾರೆ ಅನ್ನಿಸ್ತು. ನಮಗದು ಮೇಲ್ನೋಟಕ್ಕೆ ಕಾಣಿಸದೇ ಇರಬಹುದು. ನೋಡು, ಈಗ ಅವರಿಗೆ ನಮ್ಮ ಮನೆ ಯಾವುದೆಂದು ಗೊತ್ತಾಯಿತು. ಅವಳಿಲ್ಲವೆನ್ನೋದು ಖಾತ್ರಿಯಾಯಿತು. ನನ್ನ ಮುಖಪರಿಚಯವಾಯಿತು.’

ವಿಜಿ ಉತ್ತರಿಸದೇ ಮತ್ತೆ ಅಡಿಗೆ ಮನೆ ಸೇರಿಕೊಂಡಳು.

acchigoo modhalu sakeenala muttu vivek shanbhag

ವಿವೇಕ ಶಾನಭಾಗ ಅವರ ಸಂಪಾದಕತ್ವದಲ್ಲಿ ಏಳು ವರ್ಷಗಳ ಕಾಲ ಪ್ರಕಟವಾದ ‘ದೇಶ ಕಾಲ’ ತ್ರೈಮಾಸಿಕ ಪತ್ರಿಕೆ

ಬಂದವರ ಅತಿವಿನಯದಲ್ಲಿದ್ದ ಕೃತಕತೆ, ಮುಖ ಕೊಟ್ಟು ಮಾತನಾಡದ ಎಮ್‌ಪಿಥ್ರೀಯ ಹಿಂಜರಿಕೆ ನನ್ನಲ್ಲಿ ಸಂಶಯದ ಬೀಜ ನೆಟ್ಟಿದ್ದವು. ಕಾಣಿಸುತ್ತಿಲ್ಲವೆಂಬ ಮಾತ್ರಕ್ಕೆ ನಮ್ಮ ಬಗಲಲ್ಲೇ ಇರುವ ಖೂಳರು ಇಲ್ಲವೆಂದು ಭಾವಿಸಬಾರದಲ್ಲವೇ? ‘ಯಾರನ್ನೂ ನಂಬದಿರುವುದೇ ನಿನ್ನ ನಿಜ ಸ್ವಭಾವ’ ಎಂದೊಮ್ಮೆ ವಿಜಿ ಅಂದಿದ್ದನ್ನು ನಾನೊಪ್ಪುವುದಿಲ್ಲ. ತುಸು ಹೆಚ್ಚು ಎಚ್ಚರಿಕೆ ವಹಿಸುವುದರಿಂದ ನಷ್ಟವಿಲ್ಲವೆಂಬುದು ನನ್ನ ಅಂಬೋಣ.

ಹೊಸತಲೆಮಾರಿನ ಒಲವು ನಿಲುವುಗಳ ಕುರಿತು ಮನೆಯಲ್ಲಿ ಚರ್ಚಿಸುವಾಗ ವಿಜಿಯ ಒಳನೋಟಗಳೇ ನನಗಿಂತ ಹೆಚ್ಚು ಹರಿತವಾಗಿರುತ್ತವೆಂದು ಒಪ್ಪಿಕೊಳ್ಳಲು ನನಗೆ ಯಾವ ಮುಜುಗರವೂ ಇಲ್ಲ. ಅವಳ ಉದಾಹರಣೆ ಮತ್ತು ವಾದಗಳನ್ನು ತಳ್ಳಿಹಾಕುವುದು ಎಂದಿಗೂ ಸುಲಭವಲ್ಲ. ರೇಖಾ ಇದ್ದರಂತೂ ತಾಯಿ ಮಗಳದು ಒಂದೇ ಪಕ್ಷ. ಆಗೆಲ್ಲ ಸೋಲನ್ನು ಹಗುರವಾಗಿ, ಉದಾರತೆಯಿಂದ ಒಪ್ಪಿಕೊಳ್ಳುತ್ತೇನೆ. ಆದರೆ ಈಗ ಇದು ವಿರಾಮದ ಚರ್ಚೆಯಾಗಿರದೇ, ವಿಷಯ ಮನೆಬಾಗಿಲಿಗೆ ಬಂದಿದ್ದರಿಂದ, ಈ ವಾಸ್ತವವನ್ನು ಮನೆಯ ಗಂಡಸಾಗಿ, ನಾನೇ ಮುಂದಾಗಿ ನಿರ್ವಹಿಸುವುದು ಕರ್ತವ್ಯವೆಂದು ಒಳಗೊಳಗೇ ನಿರ್ಧರಿಸಿದೆ.

(ಈ ಕಾದಂಬರಿಯ ಖರೀದಿಗೆ ಸಂಪರ್ಕಿಸಿ : 8495024253)

*

ಪರಿಚಯ : ಎಂಜಿನಿಯರಿಂಗ್ ಪದವೀಧರರಾದ ವಿವೇಕ ಶಾನಭಾಗ ಅವರು ಕೊಲ್ಕತ್ತಾ, ಅಮೆರಿಕಾ, ಇಂಗ್ಲೆಂಡ್​ನಲ್ಲಿ ಹಲವು ವರ್ಷಗಳ ಕಾಲ ಉದ್ಯೋಗನಿಮಿತ್ತ ವಾಸವಾಗಿದ್ದರು. ಅಂಕುರ, ಲಂಗರು, ಹುಲಿಸವಾರಿ, ಸಕ್ಕರೆ ಗೊಂಬೆ, ಮತ್ತೊಬ್ಬನ ಸಂಸಾರ, ಇನ್ನೂ ಒಂದು, ಒಂದು ಬದಿ ಕಡಲು, ಬಹುಮುಖಿ, ಊರುಭಂಗ, ಘಾಚರ್ ಘೋಚರ್, ಇಲ್ಲಿರುವುದು ಸುಮ್ಮನೆ ಪ್ರಕಟಿತ ಕೃತಿಗಳು. ಆಲನಹಳ್ಳಿ ವಾಚಿಕೆ, ಸಿರಿಗನ್ನಡ (An Anthology of Contemporary Kannada Writings) ಸಂಪಾದಿತ ಕೃತಿಗಳು. ಡಾ. ಯು. ಆರ್. ಅನಂತಮೂರ್ತಿಯವರ ‘ಹಿಂದುತ್ವ ಮತ್ತು ಹಿಂದ್ ಸ್ವರಾಜ್’ ಕೃತಿಯ ಇಂಗ್ಲಿಷ್ ಆವೃತ್ತಿಯ ಸಹ-ಅನುವಾದಕರೂ ಆಗಿರುವ ಇವರು, ಏಳುವರ್ಷಗಳ ಕಾಲ ‘ದೇಶಕಾಲ’ ಸಾಹಿತ್ಯಿಕ ತ್ರೈಮಾಸಿಕವನ್ನು ಸಂಪಾದಿಸಿದ ರೀತಿ ಅನನ್ಯ.

ಇದನ್ನೂ ಓದಿ : New Play : ಅಚ್ಚಿಗೂ ಮೊದಲು ; ‘ಮನಸಲ್ಲಿರೋ ಮನೆ ಹುಡುಕಬೇಡಿ ವಿಳಾಸ ಹಿಡಿದು ಹುಡುಕಿ’

ಇದನ್ನೂ ಓದಿ : Yashwant Chittal: ವಿಲಂಬಿತ ಲಯ ತಂತ್ರಮಾಂತ್ರಿಕ ಯಶವಂತರ ‘ಚಿತ್ತಾಲತನ’

Published On - 12:13 pm, Sat, 14 August 21

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ